ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ– ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು. ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ| ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ || (ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ; ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ; ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್ ಅವ್ವಳಿಸಿರೆ, ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ) ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು. ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ– (ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ) ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು– ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ| ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪|| (ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ) ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು! ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ– (ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ) ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು– ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ| ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫|| [ʼಅಲರಂಬು (ಇದು) ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತುʼ ಎಂಬಂತೆ, ನೆಯ್ದಿಲ ಕಾವಂ ತಿರುಪುತ್ತುಂ ಒಂದನ್. ಅನಿಬರ್ ತಮ್ಮಂದಿರುಂ ತನ್ನ ಎರೞ್ಕೆಲದೊಳ್ ಬಂದಿರೆ, ನೋಡಿ ಸೋಲ್ತು ನಿನಗೆ, ಆ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ, ನೀನಾತನಂ ನೋಡುಗೇ] (ʼಅಲರಂಬು ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತು ಇದುʼ -ಇಲ್ಲಿ ಅನ್ವಯಾನುಸಾರ ಅರ್ಥ ಮಾಡುವಲ್ಲಿ ಕೊಂಚ ಕ್ಲಿಷ್ಟತೆ ಇದೆ. ಕೊನೆಯ … Read more