ಸುಮಾರು ಒಂದು ತಿಂಗಳ ಹಿಂದೆ ಡಾ ರವೀಂದ್ರನಾಥ ಶಾನುಭಾಗರಿಂದ ಒಂದು ಮೈಲ್ ಬಂತು: ಅದು ಎಂಡೋ ಸಲ್ಫಾನ್ ಬಹಿಷ್ಕರಿಸುವ ವಿಷಯದಲ್ಲಿ. ನಾನು ಉತ್ತರಿಸಿದೆ: “ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ಅಪಾಯ ಬಂದರೂ ಜನ ಎದ್ದು ಪ್ರತಿಭಟಿಸುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಆದರೂ, ನಾವು ಮಾಡಬೇಕಾದ್ದನ್ನು ಮಾಡಲೇಬೇಕು. ಖಂಡಿತ ಮಾಡೋಣ” ಕಳೆದ ತಿಂಗಳಿನಲ್ಲಿ ಕರ್ನಾಟಕ ಸರಕಾರ ಎಂಡೋಸಲ್ಫಾನನ್ನು ಎರಡು ತಿಂಗಳ ಮಟ್ಟಿಗೆ ನಿಷೇಧಿಸಿತು.. ಹೀಗೆ ಮಾಡಲು ಮೂಲ ಕಾರಣ ಬೆಳ್ತಂಗಡಿಯ ವಿಶ್ವನಾಥ ಗೌಡ ಮತ್ತು ಪುತ್ತೂರಿನ ಸಂಜೀವ ಎಂಬ ಸಾಮಾಜಿಕ ಕಾರ್ಯಕರ್ತರ ಸತತ ಪ್ರಯತ್ನ. ( ವಿಶ್ವನಾಥ ಗೌಡರು ಸ್ವತಃ ಎಂಡೋಸಲ್ಫಾನಿನ ಬಲಿ. ಅವರಿಗೆ ಒಂದು ಕಣ್ಣಿನಲ್ಲಿ ಶೇ. ೧೦ ದೃಷ್ಟಿ ಇದೆ. ಮತ್ತೊಂದರಲ್ಲಿ ದೃಷ್ಟಿ ಇಲ್ಲ.) ಅವರು ಹೇಗಾದರೂ ಮಾಡಿ, ಶೋಭಾ ಕರಂದ್ಲಾಜೆಯವರನ್ನು, ಕೊಕ್ಕಡ, ಶಿಶಿಲಗಳಿಗೆ ಸ್ವತಃ ಬಂದು ಸಮಸ್ಯೆಯನ್ನು ಪರಿಶೀಲಿಸುವಂತೆ ಮನ ಒಲಿಸಿದರು. ಶೋಭಾ ಕರಂದ್ಲಾಜೆಯವರು ಬಂದು ನೋಡಿದಾಗ ಅವರಿಗೆ ದುರಂತದ ಸಂಪೂರ್ಣ ಅರಿವಾಯಿತು. ಮುಂದೆ ಕೆಲವೇ ದಿನದಲ್ಲಿ ಎಂಡೋ ಸಲ್ಫಾನ್ ಕರ್ನಾಟಕದಲ್ಲಿ ಎರಡು ತಿಂಗಳ ಮಟ್ಟಿಗೆ ನಿಷೇಧ ಆಯಿತು. ಈಗ ಸರಕಾರದ ಈ ಆಜ್ನೆಯನ್ನು ಪ್ರಶ್ನಿಸಿ ಎಂಡೋಸಲ್ಫಾನ್ ತಯಾರಿಸುವ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ, ನಿಷೇಧಿಸಿದ್ದಕ್ಕೆ ಸರಿಯಾದ ಆಧಾರವನ್ನು ಕೋರ್ಟಿಗೆ ಕೊಟ್ಟು ಎಂಡೋಸಲ್ಫಾನ್ ಖಾಯಮ್ಮಾಗಿ ನಿಷೇಧವಾಗುವಂತೆ ನೋಡಿಕೊಳ್ಳುವ ಹೊಣೆ ಕರ್ನಾಟಕ ಸರಕಾರದ ಮೇಲೆ ಇದೆ. ಎಂಡೋಸಲ್ಫಾನಿನಿಂದ ಪೀಡಿತರಾದವರು ಎಷ್ಟು ಜನ ನಮ್ಮ ನಡುವೆ ಇದ್ದಾರೆಂಬುದರ ಲೆಕ್ಕ ಕೋರ್ಟಿಗೆ ಕೊಡಬೇಕು. ಅವರೆಲ್ಲ ಹೀಗಾಗಲು ಕಾರಣ ಎಂಡೋಸಲ್ಫಾನೇ ಎಂಬುದನ್ನು ವೈಜ್ನಾನಿಕವಾಗಿ ಕೋರ್ಟಿನ ಎದುರು ಸಾಬೀತು ಮಾಡಬೇಕು.ಈ ಹೊಣೆಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರೂ ಸರಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ. ಶಾಸಕರುಗಳು ಪಕ್ಷಭೇದ ಮರೆತು, ಸರಕಾರಕ್ಕೆ ಬೆಂಬಲ ನೀಡಬೇಕಾಗಿದೆ.
ಏನಿದು ಎಂಡೋ ಸಲ್ಫಾನ್?
ಸಾಮಾನ್ಯವಾಗಿ ಜನರ ಅಭಿಪ್ರಾಯವೆಂದರೆ ಅದೊಂದು ಕೀಟಗಳನ್ನು ನಾಶಪಡಿಸುವ ಔಷಧಿ. ಯಾವುದೇ ಕೀಟನಾಶಕ ಕೀಟಗಳನ್ನು ಮಾತ್ರ ನಾಶ ಮಾಡಲು ಶಕ್ತವಾಗಿರಬೇಕು ಹೊರತು ಅದನ್ನು ಸೇವಿಸಿದ ಇತರ ದೊಡ್ಡ ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿರಬಾರದು. ಆದರೆ ಎಂಡೋ ಸಲ್ಫಾನನ್ನು ಸತತವಾಗಿ ಸೇವಿಸಿದರೆ, ಅದು ಮನುಷ್ಯರ ಮೇಲೂ, ಪ್ರಾಣಿಗಳ ಮೇಲೂ ಅತ್ಯಂತ ಘೋರ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದು ಈಗ ವೈಜ್ನಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಸುಮಾರು 1960ರ ಸುಮಾರಿಗೆ ಉತ್ಪಾದಿಸಲು ಪ್ರಾರಂಭಿಸಿದ ಅಮೆರಿಕಾ ಸೇರಿ ಜಗತ್ತಿನ 73 ದೇಶಗಳು ಅದರ ತಯಾರಿಕೆ ಹಾಗೂ ಬಳಕೆಯನ್ನು ಬಹಿಷ್ಕರಿಸಿವೆ. ಆದರೆ ಭಾರತದಲ್ಲಿ ಅದರ ತಯಾರಿಕೆ ಹಾಗೂ ಬಳಕೆ ಎರಡನ್ನೂ ಇಲ್ಲಿಯವರೆಗೂ ನಿಷೇಧಿಸಲಾಗಿಲ್ಲ. ಈಗಲೂ ನಮ್ಮ ರೈತರು ಅತ್ಯಂತ ವ್ಯಾಪಕವಾಗಿ ಎಂಡೋಸಲ್ಫಾನನ್ನು ಬಳಸುತ್ತಿದ್ದಾರೆ.
ಎಂಡೋ ಸಲ್ಫಾನ್ ಮತ್ತು ಬಂಟ್ವಾಳ ತಾಲೂಕು
ಕೇರಳದಲ್ಲಿ ಮಾತ್ರ ಎಂಡೋಸಲ್ಫಾನ್ ಬಳಸುತ್ತಾರೆಂದೂ, ಕರ್ನಾಟಕದಲ್ಲಿ ಅದು ಇಲ್ಲವೆಂದೂ ನಾನು ನನ್ನಷ್ಟಕ್ಕೆ ಭಾವಿಸಿಕೊಂಡಿದ್ದೆ. ವಿಶ್ವನಾಥ ಗೌಡರೂ, ಸಂಜೀವರೂ ಸೇರಿ ಕರ್ನಾಟಕದ ಪುತ್ತೂರು, ಬೆಳ್ತಂಗಡಿಗಳಲ್ಲಿ ಎಂಡೋಸಲ್ಫಾನನ್ನು ಗೇರು ತೋಟಗಳಿಗೆ ಧಾರಾಳವಾಗಿ ಸಿಂಪಡಿಸಲಾಗಿದೆ, ಅದರ ಪರಿಣಾಮವಾಗಿಯೇ ಸಾವಿರಾರು ಜನರು ಘೋರವಾದ ಕಾಹಿಲೆಗಳಿಂದ ನರಳುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಬಯಲಿಗೆಳೆದರು. ಆಗ ನಾನು ಅದು ಬಂಟ್ವಾಳ ತಾಲೂಕಿನಲ್ಲಿ ಇಲ್ಲವೆಂದು ನಿಶ್ಚಿಂತೆಯಿಂದಿದ್ದೆ! ಆದರೆ ಸಂಜೀವರು ಮಾಹಿತಿ ಹಕ್ಕಿನ ಮೂಲಕ ಗೇರು ಅಭಿವೃದ್ಧಿ ನಿಗಮದಿಂದ ಪಡೆದ ಮಾಹಿತಿಗಳು ಬೇರೆಯೇ ಸತ್ಯವನ್ನು ಹೇಳುತ್ತಿದ್ದವು: ಬಂಟ್ವಾಳ ತಾಲೂಕಿನ ಅಳಿಕೆ, ವಿಟ್ಲ ಮುಡ್ನೂರು ಹಾಗೂ ಕೇಪು ಗ್ರಾಮಗಳಲ್ಲೂ ಗೇರು ಅಭಿವೃದ್ಧಿ ನಿಗಮದವರು ಎಂಡೋಸಲ್ಫಾನ್ ಸಿಂಪಡಿಸಿದ್ದ ವಿಷಯವನ್ನು ಅಧಿಕೃತ ದಾಖಲೆಗಳ ಮೂಲಕವೇ ಸಂಜೀವರು ನನ್ನೆದುರಿಗೆ ಒಡ್ಡಿದರು. ಈ ವಿಷಯ ತಿಳಿದಾಗ ನಾನು ಕೂತಲ್ಲಿಂದ ಏಳದೆ ವಿಧಿಯೇ ಇರಲಿಲ್ಲ. ಎದ್ದೆ. ಕಣ್ಣು ಬಿಟ್ಟು ಕೊಂಚ ಅತ್ತ ಇತ್ತ ಹುಡುಕಾಡಿದೆ. ನನಗೆ ಕಂಡ ಸತ್ಯ ಘೋರವಾಗಿತ್ತು. ವಿಶ್ವನಾಥ ಗೌಡರು, ಸಂಜೀವರು ಮತ್ತು ಶಾನುಭಾಗರು ನನ್ನ ದಿವ್ಯ ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸಿದ ಹೊರತು ಏಳಲು, ಕಣ್ಣು ಬಿಡಲು ಸಿದ್ಧನಾಗದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು.
ಎಂಡೋಸಲ್ಫಾನ್ ಪೀಡಿತರಿಗಾಗಿ ಶೋಧ
ಕೇಪು, ವಿಟ್ಲಮುಡ್ನೂರು, ಅಳಿಕೆ ಈ ಗ್ರಾಮಗಳಲ್ಲಿ ನನ್ನ ಗುರುತಿನವರು ಯಾರು ಎಂದು ನೆನಪು ಮಾಡಿಕೊಂಡೆ. ತಕ್ಷಣಕ್ಕೆ ಯಾರೂ ನೆನಪಾಗಲಿಲ್ಲ. ಕೊನೆಗೆ ಅನಂತಾಡಿ ಗೋವಿಂದ ಭಟ್ಟರಿಗೆ ಮೇಲ್ ಕಳಿಸಿದೆ. ಅವರು ಕೇಪುವಿನ ನಾರಾಯಣ ಮೂರ್ತಿಯವರ ನಂಬರ್ ಕೊಟ್ಟರು. ನಾರಾಯಣ ಮೂರ್ತಿ ತಮ್ಮ ಸುತ್ತಮುತ್ತ ಅಂಥವರು ಯಾರನ್ನೂ ಕಂಡು ಗೊತ್ತಿಲ್ಲವೆಂದೂ, ವಿ.ಕೆ. ಶರ್ಮರನ್ನು ವಿಚಾರಿಸಿದರೆ ಏನಾದರೂ ಮಾಹಿತಿ ದೊರೆಯಬಹುದೆಂದೂ ಹೇಳಿದರು. ವಿ.ಕೆ. ಶರ್ಮರಿಗೆ ಫೋನ್ ಮಾಡಿದೆ. ಅವರು ಈ ಮುಂಚೆ ಮುಳಿಯದ (ಮುಚ್ಚಿರಪದವು) ಶಾಲೆಯಲ್ಲಿ ಅಧ್ಯಾಪಕರಾಗಿದ್ದವರು. ಅವರೂ ಸಹ ಅಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದೂ, ಆದರೆ ಎಂಟು ಹತ್ತು ವರ್ಷಗಳ ಕೆಳಗೆ ನಡೆಯಲು ಕೂಡದ ಒಬ್ಬ ಹುಡುಗ ಶಾಲೆಗೆ ಬರುತ್ತಿದ್ದನೆಂದೂ, ಈಚೆಗೆ ಅವನ ಸಮಾಚಾರ ಗೊತ್ತಿಲ್ಲವೆಂದೂ, ವಿಚಾರಿಸಿ ಹೇಳುವುದಾಗಿಯೂ ತಿಳಿಸಿದರು. ಮಾರನೆಯ ದಿನ ವಿಚಾರಿಸಿದಾಗ ಅಂಥ ಒಬ್ಬ ಹುಡುಗ ಇರುವುದು ಹೌದೆಂದೂ, ಬಂದರೆ ಅವನ ಮನೆಗೆ ಕರೆದುಕೊಂಡು ಹೋಗುವುದಾಗಿಯೂ ಶರ್ಮರು ಹೇಳಿದರು. ಮರುದಿನ ಕೃಷ್ಣ ಗಟ್ಟಿಯವರೂ, ನಾನೂ ಮುಳಿಯಕ್ಕೆ ಹೋದೆವು. ಶಾಲೆಗೆ ಅಂದಾಜು ೩೦೦ ಮೀ. ದೂರದಲ್ಲಿ ಸುಮಾಲಿನಿಯವರ ಮನೆ. ನಾವು ಅಲ್ಲಿಗೆ ಹೋದೆವು. ಚಾವಡಿಯಲ್ಲೇ ಒಂದು ಕುರ್ಚಿಯಲ್ಲಿ ಕೂತಿದ್ದ ಅವರ ಮಗ ಆಕಾಶ್. ಆಕಾಶನನ್ನು ನೋಡಿದರೆ ಅವನು ಆಂಗ್ರಿ ಯಂಗ್ ಮ್ಯಾನ್ ನ ಹಾಗೆ ಕಾಣುತ್ತಾನೆ. ಹಾಗೆ ಇರಲು ಅವನಿಗೆ ಎಲ್ಲ ಕಾರಣವೂ ಇದೆ. ಯಾರೋ ಮಾಡಿದ ತಪ್ಪಿಗಾಗಿ ಆಕಾಶ್ ಇಂದು ಕೂತಲ್ಲೇ ಬದುಕು ಕಳೆಯಬೇಕಾಗಿದೆ. ಜನರ ಅನುಕಂಪವನ್ನು ಸಹಿಸಿಕೊಳ್ಳಬೇಕಾಗಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ರೋಷನ್ ಫೆರಾವೋನ ಮನೆ ಇದೆ. ರೋಷನ್ ಗೆ ಈಗ ಅಂದಾಜು ಹದಿನಾರು ವರ್ಷ. ನಾವು ಹೋದಾಗ ಅವನು ಮನೆಯಲ್ಲಿರಲಿಲ್ಲ, ಶಾಲೆಗೆ ಹೋಗಿದ್ದ. ಆದರೆ ಶಾಲೆಯಲ್ಲಿ ಅವನು ಅವನ ತಮ್ಮನಿಗಿಂತ ಹಿಂದೆ ಬಿದ್ದಿದ್ದಾನೆ. ಕ್ಯಾನ್ಸರ್ ಅವನ ವಿದ್ಯಾಭ್ಯಾಸದ ಎರಡು ವರ್ಷಗಳನ್ನೇ ತಿಂದು ಹಾಕಿದೆ. ಅವನ ಮನೆಯಲ್ಲಿರುವುದು ತಂದೆ ಮಾತ್ರ. ರೋಷನ್ ನ ಚಿಕಿತ್ಸೆಗಾಗಿ ಅವನ ತಂದೆ ತಾಯಿ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವನ ಚಿಕಿತ್ಸೆಯ ಖರ್ಚು ತೂಗಿಸಲೆಂದೇ ಅವನ ತಾಯಿ ಗಲ್ಫಿಗೆ ಹೋಗಿ ದುಡಿಯುತ್ತಿದ್ದಾರೆ. ಆಕಾಶನ ತಾಯಿ ಸುಮಾಲಿನಿ ನಮಗೆ ಮೂಡಾಯಿಬೆಟ್ಟಿನ ದೇವಕಿಯವರ ಮಗನೂ ಮಲಗಿದಲ್ಲೇ ಎಂಬ ಸುಳಿವು ನೀಡಿದರು. ಆದರೆ ಆ ದಿನ ನಮಗೆ ಅಲ್ಲಿಗೆ ಹೋಗುವುದು ಸಾಧ್ಯವಾಗಲಿಲ್ಲ. ಈ ನಡುವೆ ನಾನು ಮಾಣಿಮೂಲೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ಅವರದೂ ಅದೇ ಮಾತು: “ಈ ಸುತ್ತಿನಲ್ಲೆಲ್ಲೂ ಅಂಥವರು ಕಾಣಲಿಲ್ಲ”.ನಾನೆಂದೆ: “ಅಂಥವರು ಸುಲಭದಲ್ಲಿ ಕಾಣಲು ಸಿಗುವುದಿಲ್ಲ. ಏಕೆಂದರೆ ಅವರು ಯಾರಿಗೂ ಕಾಣದ ಹಾಗೆ ಮನೆಯಲ್ಲೇ ಇರುತ್ತಾರೆ”. ಗೋವಿಂದ ಭಟ್ಟರಿಗೆ ರವೀಂದ್ರನಾಥ ಶಾನುಭಾಗರ ಪರಿಚಯ ಚೆನ್ನಾಗಿತ್ತು. ಅವರು ಆಸಕ್ತಿ ವಹಿಸಿದರು. ಹೀಗೆ ಅಳಿಕೆಯ ಪಂಚಾಯತ್ ಅಧ್ಯಕ್ಷ ಕಾನ ಈಶ್ವರ ಭಟ್ಟರು, ಗೋವಿಂದ ಭಟ್ಟರು, ಕೃಷ್ಣ ಗಟ್ಟಿ ಮತ್ತು ನಾನು ಒಂದು ದಿನ ಅಳಿಕೆಯಲ್ಲಿ ಸಮೀಕ್ಷೆ ಶುರು ಮಾಡಿದೆವು. ಅಡ್ಯನಡ್ಕ ದಾಟಿ ಕೇರಳದ ಕಡೆಗೆ ಮುಂದೆ ಹೋದರೆ ಅಳಿಕೆಗೆ ತಿರುಗುವ ರಸ್ತೆ ಸಿಗುತ್ತದೆ. ಇದು ಪಡಿಬಾಗಿಲು. ಇಲ್ಲಿ ರಸ್ತೆಯ ಎಡಕ್ಕೆ ಕೆಳಗಿಳಿದು ಹೋದರೆ ಆನಂದ ಆಚಾರರ ಮನೆ ಇದೆ. ಅವರ ಮಗ ಉಮೇಶ ಫಕ್ಕನೆ ನೋಡಲು ಎಲ್ಲರ ಹಾಗೇ ಕಾಣುತ್ತಾನೆ. ಆದರೆ ಅವನು ಎಲ್ಲರಂತಿಲ್ಲ. ಅವನಿಗೀಗ ಹನ್ನೆರಡು ವರ್ಷ. ಅವನು ನನ್ನನ್ನು ನೋಡಿದ್ದು ಅಂದೇ ಮೊದಲು. ಆದರೂ ನಾನು ಕೂತಲ್ಲಿಗೆ ಬಂದು ನನ್ನ ಕಿಸೆಗೇ ಕೈ ಹಾಕಿದ. ಶಾಲೆಗೆ ಹೋಗುತ್ತಾನಾದರೂ. ಓದುವುದು ಅವನಿಗೆ ತುಂಬ ಕಷ್ಟವಾಗುತ್ತದೆ ಎನ್ನುತ್ತಾರೆ ಅವನ ತಾಯಿ.. ನಾವು ಮೂಡಾಯಿಬೆಟ್ಟಿನ ದೇವಕಿಯವರ ಮನೆಗೆ ಹೋದೆವು. ದೇವಕಿ ಈ ಮೊದಲು ತಾಲೂಕು ಪಂಚಾಯತ್ ಸದಸ್ಯರಾಗಿದ್ದವರಂತೆ.ತುಂಬ ಚುರುಕಿನವರು. ನಾವು ಹೋದಾಗ ಬತ್ತ ಹೊತ್ತು ತರುವ ಕೆಲಸದಲ್ಲಿದ್ದರು. ಅವರ ಮಗ ರಾಜೇಂದ್ರ ಪ್ರಸಾದ ಚಾವಡಿಯಲ್ಲಿ ಒಂದು ಮಂಚದ ಮೇಲೆ ಮಲಗಿದ್ದ. ಅವನಿಗೀಗ ಸುಮಾರು ೩೦ ವರ್ಷ.”ಇವನು ಹುಟ್ಟಿದಾಗಿಂದಲೂ ಹೀಗೇ ಮಲಗಿದ್ದಾನೆ. ಟಿವಿ ನೋಡಿ ಎಲ್ಲಾ ಭಾಷೆ ಕಲಿತಿದ್ದಾನೆ. ಇತ್ತೀಚೆಗೆ ಅವನನ್ನು ಎತ್ತಿ ಆಚೆ ಈಚೆ ಮಾಡುವುದು ನಮಗೆ ತುಂಬ ಕಷ್ಟವಾಗುತ್ತಿದೆ” ಎಂದರು ದೇವಕಿ. ಅವರ ಮಾತಿನಲ್ಲಿ ಕಷ್ಟ, ದುಃಖಗಳ ಛಾಯೆ ಇರಲಿಲ್ಲ. ದುಃಖ ಪಡುವ ಶಕ್ತಿ ಅವರಲ್ಲಿ ಉಳಿದ ಹಾಗೆ ಕಾಣಲಿಲ್ಲ.ಆದರೆ ದೇವಕಿ, ಅಂಥ ಮಗನನ್ನು ಮನೆಯಲ್ಲಿಟ್ಟುಕೊಂಡೇ ಸಮಾಜದಲ್ಲಿ ತೊಡಗಿಕೊಂಡವರು. ಇಂಥದೇ ಸಮಸ್ಯೆ ಇರುವವರ ಒಂದು ಪಟ್ಟಿಯೇ ಅವರ ಹತ್ತಿರ ಇತ್ತು! ಅದುವರೆಗೂ ಕಣ್ಣಿಗೆ ಮರೆಯಾಗಿದ್ದ ಎಂಡೋಸಲ್ಫಾನ್ ದುರಂತ ಸ್ವಲ್ಪ ಸ್ವಲ್ಪವಾಗಿ ತನ್ನ ಘೋರಸ್ವರೂಪವನ್ನು ನಮ್ಮೆದುರು ಬಿಚ್ಚತೊಡಗಿತು. ದೇವಕಿಯವರು ಕೊಟ್ಟ ಪಟ್ಟಿಯ ಆಧಾರದ ಮೇಲೆ ನಾವು ಹುಡುಕುತ್ತ ಹೋದೆವು.ನಾಲ್ಕು ವರ್ಷದ ಯಶವಂತನಿಗೆ ತಲೆ ತುಂಬ ದೊಡ್ಡದಾಗಿದೆ. ನೀರು ತುಂಬಿದೆ ಎನ್ನುತ್ತಾರಂತೆ ವೈದ್ಯರು…. ಮೂವತ್ತೆರಡರ ಹರಿಪ್ರಸಾದ ಶೆಟ್ಟಿ ಆಚೆ ಈಚೆ ತೆವಳಿಯೇ ಚಲಿಸಬೇಕು…. ಇಪ್ಪತ್ತೆರಡರ ಅಬ್ದುಲ್ ನಝೀರ್ ಮತ್ತು ಇಪ್ಪತ್ನಾಲ್ಕರ ಅವನ ಅಕ್ಕ ಜೋಹರಾ ಇಬ್ಬರಿಗೂ ಬುದ್ಧಿ ಮಾಂದ್ಯ……ಇನ್ನೂ ಆರು ವರ್ಷದ ಮುಹ್ಸೀನ್ ಬಾತಿಶ್ ಗೆ ಬುದ್ಧಿ ಮಂದ…. ೨೬ ವರ್ಷದ ಮಹಮ್ಮದ್ ಆಶ್ರಫ್ ಸಹ ಆಚೆ ಈಚೆ ತೆವಳಿಕೊಂಡೇ ಹೋಗಬೇಕು…. ರಾಮಣ್ಣಗೌಡರ ಪತ್ನಿ ಕುಸುಮಾಗೆ ಕ್ಯಾನ್ಸರ್…. ಮರುದಿನ ಮತ್ತೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ನಿಮಗೆ ಬಿಲ್ಲಂಪದವು ನಾರಾಯಣ ಭಟ್ಟರನ್ನು ಜೊತೆ ಮಾಡಿಕೊಡುತ್ತೇನೆ ಅಂದರು ಅವರು. ಹೀಗೆ ನಾರಾಯಣ ಭಟ್ಟರೂ ನಾನೂ ಮತ್ತೊಂದು ದಿನ ಕುದ್ದುಪದವಿನ ಸುತ್ತಮುತ್ತ ತಿರುಗಿದೆವು: ನಾರಾಯಣ ಭಟ್ಟರು ಸ್ಥಳೀಕರು. ನಾವು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಎಲ್ಲ ಅಲ್ಲೇ ಇದ್ದಾರೆ. ಇನ್ನೂ ೫೨ರ, ಒಳ್ಳೆಯ ದೇಹ ಸೌಷ್ಟವ ಇರುವ ಬಾಲಕೃಷ್ಣ ಶೆಟ್ಟರು ಕಣ್ಣು ಕಳೆದುಕೊಂಡಿದ್ದಾರೆ… ಅವರ ತಮ್ಮ ನಲವತ್ತರ ಆಸುಪಾಸಿನ ಸತೀಶ ಶೆಟ್ಟರಿಗೆ ಒಂದು ಕೈ, ಒಂದು ಕಾಲು ಬಲಹೀನವಾಗಿದೆ…(ಬಿಲ್ಲಂಪದವು ನಾರಾಯಣ ಭಟ್ಟರ ಮನೆಯಲ್ಲಿ ಹಿಂದಿನಿಂದಲೂ ಒಂದು ನೋವಿನ ಎಣ್ಣೆ ಉಚಿತವಾಗಿ ಕೊಡುವ ಸಂಪ್ರದಾಯ ಇದೆಯಂತೆ. ಆ ಎಣ್ಣೆ ಹಚ್ಚಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ ಎಂದರು ಸತೀಶ ಶೆಟ್ಟರು. “ಬಲೆ, ಇತ್ತೆ ರೆಡಿ ಉಂಡು, ಕೊರ್ಕ” ಎಂದರು ನಾರಾಯಣ ಭಟ್ಟರು.) ರೈಹಾನಳಿಗೆ ನಡೆಯುವುದೇ ಕಷ್ಟ….. ಸುಲೈಮಾನ್ ರಿಗೆ ಶ್ವಾಸಕೋಶದ ಸಮಸ್ಯೆ…..ಕ್ವಾಟರ್ಸಿನ ಅಡ್ರುರವರ ಮಗಳು ಬೇಬಿಗೆ ನಡೆಯಲು ಆಗುವುದಿಲ್ಲ…. ಎಲ್ಲಕ್ಕಿಂತ ನನಗೆ ಕಷ್ಟವಾದದ್ದು ಅಬೂಬಕ್ಕರ್ ರ ಮನೆಯಲ್ಲಿ. ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ ಮೂರು ಮಕ್ಕಳಿದ್ದಾರೆ ಇಂಥವರು. ಹಿರಿಯವಳಿಗೆ ಸುಮಾರು ಇಪ್ಪತ್ತು. ಎರಡನೆಯವಳು ಸುಮಾರು ಹದಿನಾರು. ಮೂರನೆಯವ ಸುಮಾರು ಹತ್ತು. ಬುದ್ದಿಮಾಂದ್ಯರು. “ಒಂದು, ಎರಡು ಎಲ್ಲಿ ಮಾಡಬೇಕು ಅಂತ ಅವರಿಗೆ ತಿಳುವಳಿಕೆ ಇಲ್ಲ” ಎಂದರು ಆ ಮಕ್ಕಳ ತಾಯಿ. ದೇವರೇ…… ಪತಿ ಪತ್ನಿ ಡಾಕ್ಟರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿ, ಅದೇನೋ ಅಮೆರಿಕದವರೆಗೂ ಹೋಯಿತಂತೆ, ಅಂತೂ ಈಗ ಅವರಿಗೆ ಮತ್ತೆ ಎರಡು ಮಕ್ಕಳಾಗಿವೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಬಂಟ್ವಾಳ ತಾಲೂಕಿನ ಇನ್ನೂ ಹಲವು ಭಾಗಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಆಗಿದೆ ಎಂದು ಹಲವರು ಹೇಳುವುದು ಕೇಳಿದ್ದೇನೆ. ಮುಖ್ಯವಾಗಿ ವೀರಕಂಬ ಮತ್ತು ಅಜ್ಜಿಬೆಟ್ಟು ಗ್ರಾಮಗಳಲ್ಲಿ ಸಿಂಪಡಣೆ ಆಗಿದೆ ಎಂದು ಹೇಳುತ್ತಾರೆ. ಸಿಂಪಡಣೆ ಆಗಿರುವುದು ಹೌದಾದರೆ, ಅಲ್ಲಿಯೂ ಇಂತಹ ಪ್ರಕರಣಗಳಿರುವ ಸಾಧ್ಯತೆ ಇದೆ. ಇರಲಿ. ಇದನ್ನಿನ್ನು ಮುಂದುವರಿಸುವುದಿಲ್ಲ. ಅನಾರೋಗ್ಯದ ಎಲ್ಲ ಪ್ರಕರಣಗಳನ್ನೂ ಎಂಡೋಸಲ್ಫಾನ್ ತಲೆಗೇ ಕಟ್ಟಿ, “ಸತ್ತ ಎಲ್ಲ ಹುಲಿಗಳನ್ನೂ ಉಲ್ಲಾಸ ಕಾರಂತರ ಖಾತೆಗೆ ಹಾಕುವುದು” ನನ್ನ ಉದ್ದೇಶವಲ್ಲ. ಮುಂದೊಂದು ದಿನ ಈ ಎಲ್ಲರನ್ನೂ ವೈದ್ಯರು ಪರೀಕ್ಷೆ ಮಾಡಬೇಕು. ಅವರ ಕಾಹಿಲೆಗೆ ಕಾರಣವನ್ನೂ ವೈದ್ಯರೇ ಹೇಳಬೇಕು. ಹಾಗೆ ವೈದ್ಯರು ಹೇಳಿದರೆ ಮಾತ್ರ ನ್ಯಾಯಾಲಯ ಒಪ್ಪುತ್ತದೆ ಹೊರತು ಅನ್ಯಥಾ ಅಲ್ಲ. ನನಗೆ ಕಾಣುವಂತೆ ಎಂಡೋಸಲ್ಫಾನಿನ ಬಹು ದೊಡ್ಡ ಅಪಾಯವೆಂದರೆ ಅದು ಮನುಷ್ಯರ ವಂಶವಾಹಿಯನ್ನು ವಿರೂಪಗೊಳಿಸುವುದು. ಮಕ್ಕಳು ಅಂಗವಿಕಲರಾಗುವುದು, ಬುದ್ಧಿಮಾಂದ್ಯತೆ ಮುಂತಾದ್ದಕ್ಕೆ ವಂಶವಾಹಿ ವಿರೂಪಗೊಳ್ಳುವುದೇ ಕಾರಣ. ನಾಗಾಸಾಕಿ, ಹಿರೋಶಿಮಾಗಳಲ್ಲಿ ಅಣುಬಾಂಬು ಬಿದ್ದಾಗ, ಚೆರ್ನೋಬಿಲ್ ಅಣುದುರಂತ ಸಂಭವಿಸಿದಾಗ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ವಂಶವಾಹಿಗಳು ವಿರೂಪಗೊಂಡಿದ್ದರೆ, ಮಕ್ಕಳಾಗದಂತೆ ಎಚ್ಚರಿಕೆ ವಹಿಸಲು ಅವರಿಗೆ ಸೂಚಿಸಲಾಯಿತಂತೆ. ಅದೇ ರೀತಿಯ ಎಚ್ಚರಿಕೆಯನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಬೇಕು; ಜನರ ವಂಶವಾಹಿಯನ್ನು ಉಚಿತವಾಗಿ ಪರೀಕ್ಷೆಗೊಳಪಡಿಸಿ, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹುಟ್ಟದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ಡಾ. ರವೀಂದ್ರನಾಥ ಶಾನುಭಾಗರ ಅಭಿಪ್ರಾಯ. ಕರ್ನಾಟಕ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಅಖಿಲ ಭಾರತದ ಮಟ್ಟದಲ್ಲೂ ಎಂಡೋಸಲ್ಫಾನನ್ನು ನಿಷೇಧಿಸಬೇಕೆಂಬ ದೊಡ್ಡ ಆಂದೋಲನವೇ ನಡೆಯುತ್ತಿದೆ. ಈ ಆಂದೋಲನವನ್ನು ಬೆಂಬಲಿಸಬೇಕೆನ್ನುವವರು ಕೇಂದ್ರ ಪರಿಸರ ಮಂತ್ರಿ ಜಯರಾಮ ರಮೇಶ್ ಅವರಿಗೆ Sri Jayaram Ramesh, Minister of Environment and Forest, Paryavaran Bhavan, CGO Complex, Lodhi Road, New Delhi – 110003 ಈ ವಿಳಾಸಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪತ್ರ ಬರೆಯಬಹುದು ಅಥವಾ http://www.petitiononline.com/endoban/petition.html ಎಂಬ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.