ಕಸ ವಿಲೇವಾರಿಯ ಕಗ್ಗಂಟು

“ಆಧುನಿಕ”ವೆಂದು ಕರೆಸಿಕೊಳ್ಳುವ ಯಾವುದೇ ದೊಡ್ಡ ಊರಿಗೆ ನೀವು ಹೋಗಿ, ಇಡೀ ಊರಿನ ಗಾಳಿಯಲ್ಲಿ ಒಂದು ವಿಶಿಷ್ಟ ದುರ್ನಾತ ಹಾಸುಹೊಕ್ಕಾಗಿ ತುಂಬಿ ತುಳುಕುತ್ತಿರುತ್ತದೆ. ಈ ದುರ್ನಾತದ ಕಾಯಿಲೆ ಇತ್ತೀಚೆಗೆ ನಮ್ಮ ಬಿ.ಸಿ.ರೋಡಿನಂಥ ಸಣ್ಣ ಊರುಗಳಿಗೂ ಹಬ್ಬುತ್ತಿದೆ. ಮೊನ್ನೆ ಮೊನ್ನೆ ತಮಿಳುನಾಡಿನ ತಿರುಚ್ಚಿಗೆ ಹೋಗುವ ಪ್ರಸಂಗ ಬಂದಿತ್ತು. ಊರು ಶುರುವಾದಕೂಡಲೇ, ಇಡೀ ಊರಿನ ಎಲ್ಲರ ಮನೆಗಳಲ್ಲೂ ಏಕಕಾಲದಲ್ಲಿ ಮೂಲಂಗಿ ಹುಳಿ ಮಾಡುತ್ತಿದ್ದಾರೇನೋ ಎಂಬಂಥ ಉಸಿರು ಕಟ್ಟಿಸುವ ದುರ್ನಾತ. ಆದರೆ ಆ ಊರೊಳಗಿನ ಯಾರಿಗೂ ಈ ನಾತದ ಅರಿವೇ ಇದ್ದಂತೆ ಕಾಣಲಿಲ್ಲ! ಕಾಲೇಜುಗಳ ಕೆಮಿಸ್ಟ್ರಿ ಲ್ಯಾಬಿನಲ್ಲಿ ದಿನನಿತ್ಯ ಹೈಡ್ರೋಜನ್ ಸಲ್ಫೈಡಿನ ಹೊಲಸು ವಾಸನೆ ತಿಂದೂ ತಿಂದೂ, ಮೂಗು ಆ ವಾಸನೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿರುತ್ತದೆ ಅದರೊಳಗೆ ಇರುವವರಿಗೆ. ಬಹುಶಃ ಇದೂ ಹಾಗೆಯೇ ಇರಬೇಕು. ಅಥವಾ ಆ ರೀತಿಯ ವಾಸನೆ ಇಲ್ಲದೆ ಹೋದರೆ ಅದು ತಮ್ಮ ಊರೇ ಅಲ್ಲ ಅನ್ನಿಸಿಬಿಡಬಹುದು ಅದು ಅಭ್ಯಾಸವಾದವರಿಗೆ.
ನಮ್ಮ ಬಿ.ಸಿ.ರೋಡಿನ ಕೈಕಂಬವು ದುರ್ನಾತದ ಕೇಂದ್ರವಾಗಿದೆ ಎಂದೂ, ಅದಕ್ಕೆ ಏನಾದರೂ ಮಾಡಬೇಕೆಂದೂ ನನ್ನ ಹೈಕಮಾಂಡ್ ರಮಾದೇವಿ. ಪುರಾತನ ಕಾಲದಿಂದಲೂ ನನಗೆ ಹೇಳುತ್ತಲೇ ಇದ್ದಳು. “ಏನಾದರೂ ಮಾಡಬೇಕು” ಎಂದರೆ ನಾನು ಮುನಿಸಿಪಾಲಿಟಿಗೆ ದೂರು ಕೊಡಬೇಕು ಎಂಬುದು ಅವಳ ಪರೋಕ್ಷ ಸೂಚನೆ. ನಾನು ಮಾತ್ರ,
“ನನಗೆ ಯಾವಾಗಲೂ ಶೀತ ಜಾಸ್ತಿ. ಹಾಗಾಗಿ ವಾಸನೆ ಬರುವುದು ಕಡಿಮೆ” ಎನ್ನುತ್ತಾ ಕಾಲಹರಣ ಮಾಡುತ್ತಲೇ ಇದ್ದೆ.
“ಮೂಗಿಗೆ ಶೀತ ಆದರೇನು? ಕೊಳಕಿನ ರಾಶಿ ಕಣ್ಣಿಗೆ ಕಾಣುವುದಿಲ್ಲವೇ?”
“ನಾನು ಸ್ಕೂಟರ್ ರೈಡ್ ಮಾಡುವಾಗ ಹಾಗೆಲ್ಲ ಆಚೆ ಈಚೆ ನೋಡುವುದಿಲ್ಲ, ರಸ್ತೆ ಮಾತ್ರ ನೋಡುವುದು!”
ಇತ್ತೀಚೆಗೆ ಒಂದು ದಿನ ಅವಳಿಗೆ, ವಾಕಿಂಗ್ ಹೋದಲ್ಲಿ, ಅದೇ ಕೈಕಂಬದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ. ಪ್ರತಿಭಾ ರೈ ಸಿಕ್ಕಿದ್ದರಂತೆ. ಈ ದುರ್ನಾತದ ಬಗ್ಗೆ ಅವರೂ ಸಾರ್ವಜನಿಕರ ಸಹಿ ಸಂಗ್ರಹಿಸಿ ಪುರಸಭೆಗೆ ದೂರು ಕೊಟ್ಟು ಹತಾಶರಾಗಿದ್ದರು. ಅವರ ಹತ್ತಿರವೂ ಈ ಬಗ್ಗೆ ವಿಚಾರ ವಿನಿಮಯವಾಯಿತು.
ಅಂತೂ ಯಾವುದೋ ಒಂದು ಸುಮುಹೂರ್ತದಲ್ಲಿ ನನ್ನ ಹೆಂಡತಿ ಒಂದು ದೂರನ್ನು ಕಂಪ್ಯೂಟರಿನಲ್ಲಿ ಟೈಪಿಸಿಯೇ ಬಿಟ್ಟಳು. ಅದಕ್ಕೆ ವಿಳಾಸ ಬರೆದು ಪೋಸ್ಟಿಸುವ ಕೆಲಸವನ್ನು ಯಥಾಪ್ರಕಾರ ನನಗೆ ಅಂಟಿಸಿದಳು. “ಆಗಲಿ ಒಂದು ಹೆಜ್ಜೆಯಾದರೂ ಮುಂದೆ ಹೋಯಿತಲ್ಲ” ಎನ್ನುವ ಸಮಾಧಾನದಿಂದ ನಾನು ಕಾಗದವನ್ನು ಪೋಸ್ಟಿಗೆ ಹಾಕಿದೆ. ಕಾಗದ ಹೋಗಿ ಇಪ್ಪತ್ತು ದಿನವಾದರೂ ಉತ್ತರ ಬರಲಿಲ್ಲ. ವಾಸನೆಯೂ ಕಡಿಮೆಯಾಗಲಿಲ್ಲ.
“ಈಗೇನು ಮಾಡುವುದು?” ಉತ್ತರ ಗೊತ್ತಿದ್ದ ಪ್ರಶ್ನೆ ಬಂತು.
“ಇನ್ನೊಂದು ಪತ್ರ ಬರಿ”. ಎರಡನೆಯ ಪತ್ರ ಹೋಯಿತು. ಆ ಪತ್ರಕ್ಕೂ ಅದೇ ಗತಿ! ಪುನಃ ಪ್ರಶ್ನೆ:
“ಈಗೇನು ಮಾಡುವುದು?”
“ಇನ್ನೂ ಒಂದು ಪತ್ರ ಬರಿ”. ಮತ್ತೊಂದು ಪತ್ರ ಹೋಯಿತು. ಉತ್ತರದ ಸುದ್ದಿ ಇಲ್ಲ.
“ಈಗೇನು ಮಾಡುವುದು?”
“ಮೂರಕ್ಕೆ ಮುಕ್ತಾಯ. ಈವರೆಗೆ ಬರೆದ ಎಲ್ಲಾ ಪತ್ರಗಳ ಕಾಪಿ ಇಟ್ಟು ಡಿಸಿಗೆ ದೂರು ಕೊಡು. ಹಾಗೆ ದೂರು ಕೊಟ್ಟದ್ದನ್ನು ಪುರಸಭೆಗೆ ತಿಳಿಸು”
ಅದೂ ಆಯಿತು. ಪತ್ರ ಹೋಗಿ ಒಂದೇ ವಾರದಲ್ಲಿ ರಿಜಿಸ್ಟರ್ ಅಂಚೆಯಲ್ಲಿ ಬಂಟ್ವಾಳ ಪುರಸಭೆಯ ಉತ್ತರ ಬಂತು: ಈ ಉತ್ತರ ಆಧುನಿಕ ಭಾರತದ ಕಸವಿಲೇವಾರಿಯ ಕಗ್ಗಂಟನ್ನು ಅತ್ಯಂತ ಸೊಗಸಾಗಿ ಮುಂದಿಟ್ಟಿದೆ ಎಂದು ನನಗನಿಸುತ್ತದೆ. ನೀವೂ ಒಂದು ಸಲ ಅದನ್ನು ಓದಿ ನೋಡಿ:
“ಉಲ್ಲೇಖದಲ್ಲಿ ನಮೂದಿಸಿದ ಪತ್ರದ ಪ್ರಕಾರ ಬಿ. ಮೂಡ ಗ್ರಾಮದ ಕೈಕಂಬ ಪೊಳಲಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಿಸುವ ತೊಟ್ಟಿ ಇರುತ್ತದೆ. ಸದ್ರಿ ತೊಟ್ಟಿಗೆ ಸತ್ತ ಬೆಕ್ಕು ಅಪರೂಪಕ್ಕೆ ಸಾರ್ವಜನಿಕರು ಹಾಕುತ್ತಾರೆ. ಅಲ್ಲದೇ ಹಸಿ ಕೋಳಿಯ ತ್ಯಾಜ್ಯ ವಸ್ತುವನ್ನು ಸಹಾ ಹಾಕುತ್ತಿದ್ದು, ತೊಟ್ಟಿಯಿಂದ ಕಸವನ್ನು ಮತ್ತು ತ್ಯಾಜ್ಯವನ್ನು ವಿಲೇ ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಿಂದ ಡೋರ್ ಟು ಡೋರ್ ಕಸ ಸಂಗ್ರಹಿಸಲು ಆರಂಭಿಸಿದ್ದು, ಆರಂಭಿಕ ಹಂತದಲ್ಲಿದ್ದು ಜನರಿಗೆ ಮನವರಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಯಾದಲ್ಲಿ ತಕ್ಷಣ ಶೀಘ್ರದಲ್ಲಿ ಅಲ್ಲಿಯ ತೊಟ್ಟಿಯನ್ನು ತೆಗೆದು ಹಾಕಲಾಗುವುದು.
ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಪುರಸಭೆಗೆ ನಿವೇಶನವನ್ನು ಸಜಿಪನಡು ಗ್ರಾಮದಲ್ಲಿ ಗುರುತಿಸಿ, ಸಂಬಂಧಪಟ್ಟ ಇಲಾಖೆಯವರಿಂದ ಎನ್.ಓ.ಸಿ. ಪಡೆದು ಸ್ವಾಧೀನಪಡಿಸಲಾಗಿದೆ. ಸದ್ರಿ ನಿವೇಶನಕ್ಕೆ ಆವರಣ ಗೋಡೆ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳ ತಕರಾರು ಇಲ್ಲದಿದ್ದಲ್ಲಿ ಆ ನಿವೇಶನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡಲಾಗುವುದು. ಈ ಹಿಂದೆ ಬಿ. ಮೂಡ ಗ್ರಾಮದಲ್ಲಿ ಗುರುತಿಸಿದ ಸ್ಥಳದಲ್ಲಿ ಕಸ ವಿಲೇ ಮಾಡಲು ಸಾರ್ವಜನಿಕರು ಅಡ್ಡಿಪಡಿಸಿರುತ್ತಾರೆ. ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ. ಘನತ್ಯಾಜ್ಯ ವಸ್ತುವಿಲೇವಾರಿ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗಿದೆ. ಘನತ್ಯಾಜ್ಯ ವಸ್ತು ಸುಡುವುದರಿಂದ ಬಿಸಾಡುವುದರಿಂದ ಆಗುವ ತೊಂದರೆ ಬಗ್ಗೆ ಸಹಾ ತಿಳುವಳಿಕೆ ನೀಡಲಾಗಿದೆ. ಈ ಬಗ್ಗೆ ತಮ್ಮ ವತಿಯಿಂದ ಸಹಾ ಜನರಿಗೆ ಅರಿವು ಮೂಡಿಸಿದಲ್ಲಿ ಪುರಸಭೆಗೆ ತುಂಬಾ ಸಹಾಯವಾಗುತ್ತದೆ. ಪುರಸಭೆ ನಿರ್ಮಲ ಪರಿಸರದ ಬಗ್ಗೆ ಕಾಳಜಿ ಹೊಂದಿದೆ ಎಂದು ಈ ಮೂಲಕ ತಿಳಿಸಲಾಗಿದೆ”
ಈ ಪತ್ರ ಎತ್ತಿರುವ ಬಹು ಮುಖ್ಯ ಸಮಸ್ಯೆ ತ್ಯಾಜ್ಯದ ವಿಲೇವಾರಿಗಾಗಿ ಸ್ಥಳ ಹುಡುಕಿಕೊಳ್ಳುವುದು. ನಮ್ಮ ಮನೆಯ ಎದುರಿಗೆ ಪುರಸಭೆ ಒಂದು ಕಸದ ತೊಟ್ಟಿ ತಂದಿಟ್ಟರೆ ನಾವು ತಕರಾರು ಮಾಡದೆ ಇರುತ್ತೇವೆಯೇ? ಮಾಡದೆ ಇರಲು ಸಾಧ್ಯವೆ? ನಮ್ಮ ಮನೆಗೆ ಸಮೀಪದ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ನಾವೆಲ್ಲ ಕಸವನ್ನು ಎಷ್ಟು ಬೇಕಾದರೂ ಉತ್ಪತ್ತಿ ಮಾಡಿ ರಾಶಿ ಹಾಕುತ್ತೇವೆ. (ಅತ್ರಿ ಬುಕ್ ಸೆಂಟರ್ ಬಿಟ್ಟರೆ) ಎಲ್ಲಾ ಅಂಗಡಿಯವರೂ ಪೈಪೋಟಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸಾಮಾನು ತುಂಬಿಸಿಕೊಡುತ್ತಾರೆ. ಈ ತೊಟ್ಟೆಗಳು ತಮ್ಮ ಕೆಲಸ ಮುಗಿದ ಕೂಡಲೇ ಊರು ತುಂಬ ಹಾರಾಡತೊಡಗುತ್ತವೆ ಹೀಗೆ ಇಡೀ ನಮ್ಮ ಭಾರತ ದೇಶವನ್ನು ಒಂದು ಪ್ಲಾಸ್ಟಿಕ್ ತಿಪ್ಪೆ ಮಾಡಿಟ್ಟುಕೊಂಡಿದ್ದೇವೆ ನಾವು. ಈ ಸಮಸ್ಯೆಯನ್ನು ಪರಿಹಾರ ಮಾಡುವವರು ಯಾರು? ಹೇಗೆ?
ಬಿ.ಮೂಡ ಗ್ರಾಮದಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯವಿಲೇವಾರಿ ಘಟಕಕ್ಕಾಗಿ ಸ್ಥಳದ ವ್ಯವಸ್ಥೆಗೆ ಮುಂದಾದಾಗ ಸಹಜವಾಗಿ ಸ್ಥಳೀಯ ನಾಗರಿಕರು ವಿರೋಧಿಸಿದರು. ಆಗ ಕೆಲವರು ಬಳಕೆದಾರರ ವೇದಿಕೆಯನ್ನೂ ಸಂಪರ್ಕಿಸಿದ್ದರು. ವೇದಿಕೆಯ ನಾವು ಶಾನುಭಾಗರ ಹತ್ತಿರ ಸಲಹೆ ಕೇಳಿದೆವು. ಶಾನುಭಾಗರು “ನಾವು ಯಾರನ್ನೂ ಬೆಂಬಲಿಸುವುದು ಸಾಧ್ಯವಿಲ್ಲ. ತಜ್ಞರಿಗೆ ಸಮಸ್ಯೆಯನ್ನು ಬಿಡುವುದೇ ಇದಕ್ಕೆ ಪರಿಹಾರ” ಎಂದಿದ್ದರು.
ಸಮಸ್ಯೆ ಹೀಗೆ ಬಿಡಿಸಲಾಗದ ಕಗ್ಗಂಟಾಗಿರುವುದನ್ನು ಈ ಅಧಿಕಾರಿ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಮುಲಾಜಿಲ್ಲದೆ “ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ” ಎಂದಿದ್ದಾರೆ. ಈಗ ಬಂಟ್ವಾಳದ ನಾಗರಿಕರ ಮುಂದೆ ಎರಡು ದಾರಿಗಳಿವೆ: ಒಂದೋ ಅವರು ತಮಗೂ ಹಂದಿಗಳಿಗೂ ವ್ಯತ್ಯಾಸವೇ ಇಲ್ಲದಂತೆ ಕಸದ ರಾಶಿಯ ನಡುವೆ, ಸತ್ತ ಬೆಕ್ಕು, ಹಸಿ ಕೋಳಿಯ ತ್ಯಾಜ್ಯದ ವಾಸನೆ ಇವುಗಳನ್ನು ಸಹಿಸಿಕೊಳ್ಳುತ್ತಾ ಬದುಕಬೇಕು; ಅಥವಾ ಕಾನೂನುಬಾಹಿರವಾಗಿ ಕಸ ಸಾಗಿಸುವುದನ್ನು ಒಪ್ಪಿಕೊಳ್ಳಬೇಕು. ಕಸ ಸಾಗಿಸುವ ಕಾನೂನುಬಾಹಿರ ಕಾರ್ಯವನ್ನು ಒಪ್ಪಿಕೊಂಡರೆ, ನಾಳೆ ಇದೇ ಅಧಿಕಾರಿ “ಲಂಚ ಕೊಡದೆ ಪುರಸಭೆಯಲ್ಲಿ ಕೆಲಸ ಮಾಡಿಕೊಡುವುದು ಸಾಧ್ಯವೇ ಇಲ್ಲ” ಎಂಬ ವಾದವನ್ನೂ ಇಷ್ಟೇ ತರ್ಕಬದ್ಧವಾಗಿ ನಿಮ್ಮೆದುರಿಗೆ ಮಂಡಿಸಿ, ಅದಕ್ಕೆ ಕಸ ಸಾಗಿಸುವ ಕಾನೂನುಬಾಹಿರ ಕಾರ್ಯದ ಉದಾಹರಣೆಯ ಬೆಂಬಲ ಕೊಟ್ಟು, ನ್ಯಾಯದ ಮಾತಾಡುವ ನಿಮ್ಮನ್ನು ಹಾಸ್ಯಾಸ್ಪದ ಮಾಡಿಬಿಡಬಹುದು. ಯಾವುದನ್ನು ಒಪ್ಪುವುದು? ಯಾವುದನ್ನು ಬಿಡುವುದು?
ನಾವಂತೂ ಜಿಲ್ಲಾಧಿಕಾರಿಗಳಿಗೆ ಬರೆದು ಈ ಸಮಸ್ಯೆಗೆ ಕಾನೂನಿನ ಮಿತಿಯಲ್ಲೇ ಒಂದು ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಲಿದ್ದೇವೆ. ಆದರೆ ಎಲ್ಲಾ ಊರುಗಳಲ್ಲೂ “ಕಸವನ್ನು ಹಾಕಲು ಜಾಗ ಎಲ್ಲಿ?” ಎಂಬ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುವುದು ಖಂಡಿತ.
ಕಸದ ತೊಟ್ಟಿಗೆ ಏನು ಹಾಕಬಹುದು, ಏನು ಹಾಕಬಾರದು ಎಂಬ ವಿವೇಚನೆಯೇ ಇಲ್ಲದೆ, ತಮಗೆ ಬೇಡದ್ದನ್ನೆಲ್ಲ ತಂದು ಹಾಕುವ ನಾಗರಿಕರ ಸಮಸ್ಯೆಯನ್ನೂ ಈ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಶಿಕ್ಷಣ ಹೆಚ್ಚಾದಂತೆ ಈ ಸಮಸ್ಯೆ ಕಡಿಮೆ ಆದೀತೆಂದು ಆಶಿಸಬಹುದು ಅಷ್ಟೇ.