ಜಾಗೆದು ಗುರ್ತೇ ಸಿಕ್ತಿಲ್ಲೆ – ಭಾಗ-೨

ಹಿಂದಿನ ಲೇಖನದಲ್ಲಿ ಮಾಹಿತಿ ಬಂದ ಕೂಡಲೇ ತಿಳಿಸುವುದಾಗಿ ಬರೆದಿದ್ದೆ. ದಿನಾಂಕ ೧೭-೩-೨೦೧೦ರಂದು ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನನಗೆ ಮಾಹಿತಿ ನೀಡಿದ್ದಾರೆ.
ನಾನು ಕೇಳಿದ ಮಾಹಿತಿ ೧: ಗುಡ್ಡವನ್ನು ಸಮತಟ್ಟು ಮಾಡುವಾಗ ಅಲ್ಲಿದ್ದ ಹಲವಾರು ಮರಗಳು ನಾಶವಾಗಿರುವ ಸಾಧ್ಯತೆ ಇದೆ. ಹೀಗೆ ಮರಗಳನ್ನು ನಾಶ ಮಾಡಲು ನಿಮ್ಮ ಇಲಾಖೆ ಅನುಮತಿ ನೀಡಿದೆಯೆ?
ಉತ್ತರ:ಸದ್ರಿ ಸ್ಥಳದಲ್ಲಿರುವ ಮರಮಟ್ಟುಗಳನ್ನು ಕಡಿಯಲು ಇಲಾಖಾವತಿಯಿಂದ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ.
ನಾನು ಕೇಳಿದ ಮಾಹಿತಿ ೨: ನೀಡಿದ್ದರೆ ಅನುಮತಿಯ ಯಥಾಪ್ರತಿಯನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
ಉತ್ತರ: ಅನುಮತಿ ನೀಡದೇ ಇರುವುದರಿಂದ ಯಥಾಪ್ರತಿ ಇರುವುದಿಲ್ಲ.
ಈ ಮಾಹಿತಿಯಲ್ಲದೆ ಸ.ಅ.ಸಂರಕ್ಷಣಾಧಿಕಾರಿಯವರು ಪ್ರಕರಣಕ್ಕೆ ಸಂಬಂಧಿಸಿ ಉಪಯುಕ್ತವಾದ ಇತರ ಕೆಲವು ಮಾಹಿತಿಗಳನ್ನೂ ನೀಡಿದ್ದಾರೆ:
೧. ಸದ್ರಿ ಸ್ಥಳದಲ್ಲಿರುವ ಅಕೇಶಿಯಾ ಜಾತಿಯ ಗಿಡಗಳನ್ನು ಕಡಿಯುವರೇ ಅವಕಾಶ ಕೋರಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಲಿಖಿತ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಯಥಾಪ್ರತಿ ಲಗತ್ತಿಸಿದೆ.
೨.ಸದ್ರಿ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳದ ಹಾಗೂ ಸ್ಥಳದಲ್ಲಿರುವ ಮರಮಟ್ಟುಗಳ ಒಡೆತನ ದೃಢಪತ್ರ ಹಾಗೂ ಸ್ಥಳದ ಮೋಜಣಿ ನಕಾಶೆಯನ್ನು ಸಲ್ಲಿಸಿದಲ್ಲಿ ಅರ್ಜಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅರ್ಜಿ ಬರಕೊಂಡ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರು ಪತ್ರ ಸಂ………………………ರಂತೆ ತಿಳಿಸಿರುತ್ತಾರೆ. ಹಾಗೂ ನಂತರ ಇಲಾಖಾ ಅನುಮತಿ ಪಡೆದು ಮರಗಳನ್ನು ಕಡಿಯುವರೇ ಪತ್ರದಲ್ಲಿ ತಿಳಿಸಲಾಗಿದೆ.ಪತ್ರದ ಪ್ರತಿ ಲಗತ್ತಿಸಲಾಗಿದೆ.ಆದರೆ ಸದ್ರಿಯವರು ಯಾವುದೇ ದಾಖಲಾತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ಸಲ್ಲಿಸಿರುವುದಿಲ್ಲ.
**************
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಸಲ್ಲಿಸಿರುವ ಲಿಖಿತ ಅರ್ಜಿ (ಅರ್ಜಿ ಶ್ರೀ ಮಠದ ಲೆಟರ್ ಹೆಡ್ ನಲ್ಲಿದೆ):
ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳಾದ ವಲಯ ಅರಣ್ಯಾಧಿಕಾರಿಗಳಿಗೆ ಸಪ್ರೇಮ ನಾರಾಯಣ ಸ್ಮರಣೆಗಳು.
ವಿಷಯ: ವನದುರ್ಗಾದ ಎದುರು ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳನ್ನು (ಅರ್ಜಿಯಲ್ಲಿ ಒಟ್ಟು ಮೂರು ಕಡೆ “ಮರ” ಎಂದು ಬರೆದಿರುವುದನ್ನು ಹೊಡೆದು “ಗಿಡ” ಎಂದು ತಿದ್ದಲಾಗಿದೆ – ಎಚ್. ಸುಂದರರಾವ್). ಕಡಿಯಲು ಅವಕಾಶ ನೀಡುವ ಕುರಿತು.
ಆತ್ಮೀಯರೇ, April 9-10-11 2010ರ ದಿನಗಳಲ್ಲಿ ವಿಶ್ವಜ್ಯೋತಿಷ್ಯ ಸಮ್ಮೇಳನ ವನದುರ್ಗಾದ ಎದುರಿರುವ ಗುಡ್ಡದಲ್ಲಿ ನಡೆಯಲಿದೆ. ರಾಷ್ಟ್ರದ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಭದ್ರತೆಯ ದೃಷ್ಟಿಯಿಂದ ಗಿಡಗಳನ್ನು ತೆಗೆಯಬೇಕೆಂದು ಸರ್ಕಾರದ ಉನ್ನತಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ಅಕೇಶಿಯಾ ಗಿಡ ಪರಿಸರಕ್ಕೂ ಮಾರಕವಾಗಿದೆ. ಈ ಎಲ್ಲ ಕಾರಣಗಳಿಂದ ಆ ಅಕೇಶಿಯಾ ಗಿಡಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕಾಗಿ ಅಪೇಕ್ಷಿಸುತ್ತೇವೆ.
ನಿರಂತರ ಅಭಿಮಾನವಿರಲಿ
ಇತಿ ನಾರಾಯಣ ಸ್ಮರಣಪೂರ್ವಕ
(ಸಹಿ)
**************
ಇಲ್ಲಿ ಗಮನಿಸಬೇಕಾದ್ದು: ಸ್ವಾಮೀಜಿಯವರು ಅರ್ಜಿ ಸಲ್ಲಿಸಿರುವುದು ೭-೨-೨೦೧೦ರಂದು.
ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಯವರು ಉತ್ತರಿಸಿರುವುದು ತಾ. ೧೫-೨-೨೦೧೦ರಂದು
ಸುಬ್ರಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನಕ್ಕಾಗಿ ಗುಡ್ದ ಅಗೆದು ಸಮತಟ್ಟು ಮಾಡುತ್ತಿರುವ ಫೋಟೋಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗಿರುವುದು ೧೬-೨-೨೦೧೦ರಂದು.
**************
ಈ ದಾಖಲೆಗಳನ್ನು ನಾನು ದ,ಕ.ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಕಳಿಸಿಕೊಟ್ಟು ಹೀಗೆ ಪತ್ರ ಬರೆದಿದ್ದೇನೆ:
“….. ಈ ಪ್ರಕರಣವನ್ನು ಗಮನಿಸಿದಾಗ ಮರಗಳ ಸಂರಕ್ಷಣೆಗಾಗಿ ಇರುವ ಕಾನೂನು ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಒಂದು ಆತಂಕಕಾರಿ ಬೆಳವಣಿಗೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೀಗೆ ಮರಗಳನ್ನು ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿದಿನವೂ ಸಾವಿರಾರು ಮರಗಳು ಬೇರು ಸಮೇತ ನೆಲಕ್ಕುರುಳುತ್ತಿವೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡುವುದು ಅಗತ್ಯ.
ಇನ್ನು ಮುಂದೆ ಮರಗಳ ಸಂರಕ್ಷಣೆಯ ಕಾನೂನನ್ನು ಯಾರೂ ಉಲ್ಲಂಘಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ನಿಮ್ಮನ್ನು ಕೋರುತ್ತೇನೆ.
ಇನ್ನು ಹತ್ತು ದಿನಗಳ ಒಳಗೆ ನೀವು ಕೈಗೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿ ಕೋರುತ್ತೇನೆ…”
ಪತ್ರ ಅವರಿಗೆ ತಲುಪಿದೆ. ಉತ್ತರ ಬಂದನಂತರ ಮತ್ತೆ ಬರೆಯುತ್ತೇನೆ……..