ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ “ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ” ಎಂಬ ಸುದ್ದಿಗಳು ಪ್ರಕಟವಾದವು. “ವಂಶ” ಪತ್ರಿಕೆಯ ಮಿತ್ರರನ್ನು “ನಮ ಒರ ಪೋದು ತೂದು ಬರ್ಕನ?” (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.
ಹಿನ್ನೆಲೆ:
2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ “ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು” 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು.
ಅನುಷ್ಠಾನದ ದುರಂತ ಕತೆ
ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು.
2010 ರ ಸೆಪ್ಟೆಂಬರಿನಲ್ಲಿಯೋ ಏನೋ ಪತ್ರಿಕೆಗಳಲ್ಲಿ ಎಮ್ ಎಸ್ ಇ ಜಡ್ ನೇತ್ರಾವತಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಾಗಿ ಟೆಂಡರು ಕರೆದಿತ್ತು. ಟೆಂಡರು ಕರೆಯುವುದೆಂದರೆ ಪೂರ್ವಭಾವಿ ತಯಾರಿಗಳು ಮುಗಿದಿವೆ ಎಂದೇ ಅರ್ಥ. ಸರಕಾರ ವಿಧಿಸಿದ 19 ಷರತ್ತುಗಳಲ್ಲಿ ಮುಖ್ಯವಾಗಿ ಮೂರು ಷರತ್ತುಗಳನ್ನು ನೋಡೋಣ:
1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು
2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು)
3. ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು.
ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು
ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: “ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ”. ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: “ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ”. (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, “ನನ್ನ ದಾರಿ ನನಗೆ” ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: “ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?” “ಸಾಧ್ಯ” ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು.
ಆರಣ್ಯ ಇಲಾಖೆಗೆ ಕೊಟ್ಟ ದೂರಿನ ಪರಿಣಾಮ: ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ!
ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ “ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ” ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:”…. ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ….. ಇವರ ವಿರುದ್ಧ….. ತಕ್ಷೀರು ದಾಖಲಿಸಲಾಗಿದೆ”
ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು “ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ” ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು “ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ” ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?.
ಇನ್ನು “ಕಡಿಯಲಾಗಿದೆ” ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು “ಕಡಿಯಲಾಗಿದೆ” ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ?

ಇನ್ನು “ತಕ್ಷೀರಿ”ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. “ತಕ್ಷೀರಿ”ಗೆ ಅವರ ವಿವರಣೆ ಹೀಗೆ: “ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು “ದಂಡ ಹಾಕಿದ್ದು ಕಡಿಮೆಯಾಯಿತು” ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು”. ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ)
ಕಾಣದ ಕೈಯ ಕಾರುಭಾರು?
ಪತ್ರಿಕಾವರದಿ ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಂ ಎಸ್ ಇ ಜಡ್ ಕಂಪೆನಿ ಎಂದು ಸ್ಪಷ್ಟವಾಗಿಯೇ ಹೇಳಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು.

ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು.
ವೃಕ್ಷವನು ಕಡಿದವನು ಭಿಕ್ಷೆಯನು ಬೇಡುವನು
ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ
ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ
ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: “ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು”
ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ (“ಅಭಿಯಂತರ” ಎಂದು ಬರೆಯುವಾಗೆಲ್ಲ ನನಗೆ “ಬೆಂತರ” ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: “ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ” ಅಲ್ಲಿಂದ ಉತ್ತರ ಬಂತು: “… ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ”
ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! “ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ” ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು “ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ” ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ.
ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: “ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ” ಎಂದು.
ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: “… ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ”.
“ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ” ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ.
ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? “ಜಲ ಸಂಪನ್ಮೂಲ ಇಲಾಖೆ” ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು?
ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: “…….ತಾವು ಅಪೇಕ್ಷಿಸಿರುವ…. ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ”. ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು?
“ಸಾರ್ವಜನಿಕ ಸೇವಕ”ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ.
ಸೆರೆ ಬಿಟ್ಟಲ್ಲಿ ಉಳಿ ಇಳಿಸುವ ಚಾಣಕ್ಯ: ಎಂ ಎಸ್ ಇ ಜಡ್ ಕಂಪೆನಿ
ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು:
ಒಟ್ಟು ಅಗತ್ಯ: 45 ಎಂಜಿಡಿ;
ಪೂರೈಕೆ:
ಮಂಗಳೂರು ಕೊಳಚೆ ನೀರು ಶುದ್ಧೀಕರಣದಿಂದ 18 ಎಂಜಿಡಿ,
ಮಳೆನೀರು ಸಂಗ್ರಹದಿಂದ 12 ಎಂಜಿಡಿ
ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ.
ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು?
ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು – ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ – ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ “ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು – ಅಲ್ಲವೆ?
ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು!
“ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ” ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು?
ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು!
ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ “ನಾವು ಜವಾಬ್ದಾರರಲ್ಲ”). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ.
ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ.
ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ.

Facebook Comments Box

Related posts

ಪಂಪಭಾರತ ಆಶ್ವಾಸ ೪ (೮೭-೯೧)

 

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ...

ಪಂಪಭಾರತ ಆಶ್ವಾಸ ೪ ಪದ್ಯಗಳು ೯೨ರಿಂದ ೯೮

 

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ...

ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

 

 

ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ–

ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.

ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ

ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|

ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ

ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ ||

(ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ;

ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ;

ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್

ಅವ್ವಳಿಸಿರೆ,

ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ)

 

ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು.

ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ–

(ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ)

ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು–

ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ

ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|

ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ

ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪||

(ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ)

ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ  ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು!

ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ–

(ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ  ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ)

ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು–

ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ

ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|

ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್

ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫||

(ʼಅಲರಂಬು...

Latest posts

ಪಂಪಭಾರತ ಆಶ್ವಾಸ ೪ ಪದ್ಯಗಳು ೯೨ರಿಂದ ೯೮

 

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ...

ಪಂಪಭಾರತ ಆಶ್ವಾಸ ೪ (೮೭-೯೧)

 

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ...

ಪಂಪಭಾರತ ಆಶ್ವಾಸ ೪ ೪೩-೫೨)

 

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ...

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ...

18 comments

 • ಪಟ್ಟು ಬಿಡದೆ ಸೆಣಸುತ್ತಿರುವ ನಿಮ್ಮ ಸಾಹಸ ಮೆಚ್ಚುವಂಥದ್ದು. ಇತರರಿಗೆ ಮಾದರಿಯಾಗುವಂಥದ್ದು ಕೂಡ. ನಿಮ್ಮ ಈ ಸಾರ್ವಜನಿಕ ಹೋರಾಟಕ್ಕೆ ನಾವು ನೈತಿಕ ಬೆಂಬಲವನ್ನಷ್ಟೆ ನೀಡಲು ಸಾಧ್ಯ. ಅಲ್ಲಿನ ಸ್ಥಳೀಯ ಗೆಳೆಯರು ನಿಮಗೆ ಸಹಕಾರ ನೀಡಲಿ ಎಂದು ಆಶಿಸುತ್ತೇನೆ.

 • ಪ್ರೀತಿಯ ಸುಂದರರಾವ್,
  ನಮ್ಮ ಪ್ರೀತಿಯ ನೇತ್ರಾವತಿಯ ಮುಡಿಗೆ ಕೈಯಿಟ್ಟಿರುವವರ ಬೆನ್ನಿಗೆಬಿದ್ದು ನೀವು ನಡೆಸುತ್ತಿರುವ ಹೊರಾಟ ಯಶಸ್ವಿಯಾಗಲಿ.
  ನೇತ್ರಾವತಿ ಜನರ ಕುಡಿಯುವ ನೀರು. ಅದನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡುವುದು ಸಲ್ಲದು. ಅದಕ್ಕಾಗಿ ನಡೆದಿರುವ ಅರಣ್ಯನಾಶವೂ ನಿಲ್ಲಬೇಕು.
  ರಮಾ ನೇಸರರನ್ನು ಕೇಳಿದೆನೆಂದು ತಿಳಿಸಿ
  ಪ್ರೀತಿಯಿಂದ
  ಪಂಡಿತಾರಾಧ್ಯ

 • ಅನಾಮಧೇಯ

  ಪ್ರಿಯರೇ
  ‘ನೀರಿಗಿಳಿದ ಮೇಲೆ’ ನೀವು ಕಾಣುತ್ತಿರುವ ‘ಒಳ ಹರಿವು’ ಶಕ್ತಿಯುತವಾದ ‘ಚಕ್ರಸುಳಿಗಳನ್ನು’ ಎದುರಿಸಿ ದಿಟ್ಟವಾಗಿ ನಡೆದಿರುವುದಕ್ಕೆ ಕೃತಜ್ಞತೆಗಳು. ತೋರಿಕೆಗೆ ಕರಾವಳಿ ವಲಯವೆಲ್ಲಾ ನೇತ್ರಾವತಿ ನದಿ ತಿರುಗಿಸುವುದನ್ನು ವಿರೋಧಿಸುವವರೇ ಎಂದು ಕಾಣಬಹುದು. ಆದರೆ ವಾಸ್ತವದಲ್ಲಿ ‘ನಮ್ಮ ಪಾಲು’ ತಪ್ಪಿ ಹೋಗುತ್ತದೆಂಬ ಹಪಹಪಿಯಲ್ಲಿ ಬಹುತೇಕ ಮಂದಿ ನೇತ್ರಾವತಿಯನ್ನು ಇದ್ದಲ್ಲೇ ಮುಗಿಸಿಬಿಡುವ ತರಾತುರಿಯಲ್ಲಿದ್ದಂತಿದೆ. ಇಲ್ಲಿನ ಎಲ್ಲಾ ‘ಅಭಿವೃದ್ಧಿ ಕಾಮಗಾರಿಗಳು’ ಎಷ್ಟು ಭಯಾನಕವಾಗಿ ಕೆಲಸ ಮಾಡುತ್ತಿದೆ ಎನ್ನುವದನ್ನು ನೀವು ಬಹಳ ಸೂಕ್ಷ್ಮಗಳಲ್ಲಿ ಬಿಡಿಸಿ ತೋರಿದ್ದೀರಿ. ವಿಧಿ, ದೇವರ ಮೇಲೆ ಭಾರ ಹಾಕಿ ಕೂರುವ ಸಮಯವಿದಲ್ಲ. ಇಂದು ನಮ್ಮೆಲ್ಲ ದೇವರುಗಳು (ದೇವ ಮಾನವರೂ ಸೇರಿ) ಪ್ರಜಾಸತ್ತೆಯ ಅವಶೇಷಕ್ಕೆ ಜೀವ ತುಂಬಲು ಬೆಂಗಳೂರಿನಲ್ಲಿ ಒದ್ದಾಡುತ್ತಿರುವಾಗ ಪ್ರತಿ ಜಾಗೃತ ನಾಗರಿಕನೂ ಇದನ್ನು ಓದಿ ನಮ್ಮನ್ನು ನಾವೇ ಉದ್ಧರಿಸಿಕೊಳ್ಳಲು ಏನು ಮಾಡುವುದೆಂದು ಗಂಭೀರವಾಗಿ ಕಾರ್ಯಪ್ರವೃತ್ತನಾಗಬೇಕಾಗಿದೆ. ಇದನ್ನು ಓದಿದವರೆಲ್ಲ ಕನಿಷ್ಠ ಇದನ್ನು ತಮ್ಮ ಪರಿಚಿತರೆಲ್ಲರಿಗೂ ಒತ್ತಾಯದ ಮಾತುಗಳ ಬಲಕೊಟ್ಟು (ಯಾಂತ್ರಿಕವಾಗಿ ನೂಕುವುದಲ್ಲ) ಮರುಪ್ರಸಾರವಾದರೂ ಮಾಡಬೇಕೆಂದು ನಾನು ಆಶಿಸುತ್ತೇನೆ.
  ಇಂತು ವಿಶ್ವಾಸಿ
  ಅಶೋಕವರ್ಧನ

 • ನಮ್ಮ ನದಿ, ಕಾಡುಗಳಿಗೆ ಬಂದೊದಗುತ್ತಿರುವ ಸ್ಥಿತಿಯನ್ನು ಗಮನಿಸಿದರೆ ಸಂಕಟವಾಗುತ್ತದೆ. ನಿಮ್ಮ ಪ್ರಯತ್ನ ಶ್ಲಾಘನೀಯ. – ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರು

 • ಅನಾಮಧೇಯ

  Nammellara hridayada dhvaniyagiruva nimma yathnagalu saphalateyannu kandu, Nethravathiyannu namma palige olisi kodali endu hareisuthene. Namma Nethravathi, nannajji maneya pakka haridu samudra seruva adradondu kiru hole, mathu namma samudradalle nanna jeeva ide. Nethravathi tiruvu nammurina besageya neerina baravannu immadi mummadigolisuvudaralli samshayavilla. Nethravathi bathidanthe namma bavigalu besageyalli bathuthave. Hagiruvaga innu nadi tirugisidare mthe namma padenu? Sundararayarondige navu iddeve.
  Regards,
  Shyamala Madhava

 • ಅನಾಮಧೇಯ

  ಎಂಎಸ್ಇಜೆಡ್ ನ ಸಾಂಸ್ಥಿಕ ನೋಂದಣಿಯ ದಾಖಲಾತಿಯ ಪ್ರಕಾರ ಆಕಾಶದ ಕೆಳಗೆ ಏನೆಲ್ಲಾ ಚಟುವಟಿಕೆಗಳು ಸಾಧ್ಯವೋ ಅವನ್ನೆಲ್ಲಾ ವ್ಯವಹಾರದ ರೂಪದಲ್ಲಿ ಎಂ ಎಸ್ ಇ ಜೆಡ್ ಮಾಡಬಹುದು. ಅದರರ್ಥ ನೀರಿನ ವ್ಯಾಪಾರ ಕೂಡಾ ಮಾಡಬಹುದು! ಹೇಲು ತಿಂದು ಮತಿಗೆಟ್ಟ ಅಧಿಕಾರಿಗಳು ಕೊಟ್ಟ ಅನುಮತಿ ಸರಕಾರದ ಅಪ್ಪಣೆಯಾಗುತ್ತದೆ. ನಾನೂ, ನೀವೂ ಮಾತಾಡುವಂತಿಲ್ಲ! ಎಂಎಸ್ಇಜೆಡ್ಡಿನ ಬತ್ತಳಿಕೆಯಲ್ಲಿ ಈ ಜಿಲ್ಲೆಯ ಅರ್ಧಭಾಗವನ್ನು ಕಬಳಿಸಬಲ್ಲ ಹಲವು ಹಂತಗಳ ಯೋಜನಾ ವರದಿಗಳು ಹುದುಗಿವೆ. ಎರಡನೇ ಹಂತದ ಭೂಮಿ ಕೈಜಾರಿದ್ದನ್ನು ತಾತ್ಕಾಲಿಕ ಹಿನ್ನಡೆ ಎಂದಷ್ಟೇ ಅಂದುಕೊಳ್ಳುವ ಎಂಎಸ್ಇಜೆಡ್, ಮಹತ್ವಾಕಾಂಕ್ಷೆಯಿಂದ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಹಾಕುತ್ತಿದೆ. ಕೋಟಿಗಟ್ಟಲೆಯ ಯೋಜನೆ ಅಂದಾಗ ಎಂಜಲೂ ಕೋಟಿ, ಕೋಟಿಯಲ್ಲೇ ಇರುತ್ತದಲ್ಲಾ. ಬಿಡಬೇಡಿ ಕಳ್ಳರನ್ನು, ಅವರಿಗೆ ನಿದ್ದೆ ಬೀಳಬಾರದು.
  ನಟೇಶ್

 • ಅನಾಮಧೇಯ

  ನೇತ್ರಾವತಿ ನದಿ ನೀರಿನ ಬಗ್ಗೆ ಇಷ್ಟೊಂದು ವಿಷಯ ಸಂಗ್ರಹ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಸರಕಾರಿ ಅಧಿಕಾರಿ ಪ್ರಾಮಾಣಿಕವಾಗಿದ್ದಲ್ಲಿ ಕಂಪೆನಿಯು ಅಕ್ರಮವಾಗಿ ಇಷ್ಟೊಂದು ಮುಂದುವರಿಯಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಇದು ನಮಗೆ ಸಂಬಂಧಪಟ್ಟ ವಿಷಯವಲ್ಲವೆಂದು ಯಾರಾದರೂ ಭಾವಿಸಿದರೆ ಅದು ಅವರ ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನೂ ಅಲ್ಲ. ಪ್ರತಿಯೋರ್ವ ಎಚ್ಚೆತ್ತುಕೊಂಡು ಸೂಕ್ತವಾಗಿ ಪ್ರತಿಭಟಿಸಿದರೆ ನೇತ್ರಾವತಿ ಉಳಿದೀತು. ಅದಿಲ್ಲವಾದರೆ ಮುಂದೊಂದು ದಿನ್ ನೀರಿಗಾಗಿ ಹಪಹಪಿಸಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ ಸಂಶಯ ಬೇಡ.

  ಈ ವಿಷಯದ ಹೋರಾಟದಲ್ಲಿ ನಿಮ್ಮೊಂದಿಗೆ ಖಂಡಿತಾ ನಾನಿದ್ದೇನೆ.
  ಅಡ್ಡೂರು ನವೀನ್ ಆಚಾರ್

 • Harish Bhat, ecologist, Bangalore

  Baraha bahala uttamavaagiddu, naija sthithiyannu chitrisidderi. Odhi bahala khea untaaythu. Namma ' decession makers' yavathu parisarada bagge kaalajiyannu vyakta padisilla, yekendare, 'vote bank' allilla! Inthaha ghora kelasavannu nodiyu sambandhapatta adhikaarigalu summane kai katti kulithiddaarendare, melina 'pressure' yenthahaddu yendu thiliyuttade. Nimma horaatakke namma bembala vide.

 • ಅನಾಮಧೇಯ

  ಸುಂದರ್ ಅಂಕಲ್ ನಮಸ್ತೆ
  ಒಮ್ಮೆ ಭಯವಾಗುತ್ತೆ, ಇಲ್ಲಿ ಯಾವುದು ನಮ್ಮದು ಅಂತ. ನೆಲವನ್ನ ಯಾರೋ ಬಂದ, ಹೊಡೆದ ಹೋದ, ನೀರನ್ನೂ ಬಿಡುತ್ತಿಲ್ಲ. ಬದುಕುವುದು ಹೇಗೆ?
  ತಮ್ಮ ಪ್ರತೀ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ ಎಂದು ಒಂದು ವಾಕ್ಯವನ್ನು ಮಾತ್ರ ಹೇಳಬಲ್ಲೆ.
  -ಅರವಿಂದ

 • ಅನಾಮಧೇಯ

  ನಮಸ್ತೆ ಸುಂದರರಾಯರೇ,

  ನಿಮ್ಮ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ. ಇದನ್ನು ನಾನು ಕೆಲವು ಅಂತರ್ಜಾಲದ ಗುಂಪುಗಳಿಗೆ ಈಮೈಲ್ ಮುಖಾಂತರ ಹಾಗೂ ಫ಼ೇಸ್‍ಬುಕ್ ಇತ್ಯಾದಿಗಳಲ್ಲಿ ಹಾಕಿದ್ದೇನೆ.

  ಆದರೆ ಈ ವಿಷಯದಲ್ಲಿ ಜನಸಾಮಾನ್ಯರಾದ ನಾವೇನು ಮಾಡಬಹುದು ಎನ್ನುವುದನ್ನು ದಯವಿಟ್ಟು ತಿಳಿಸಿ. ಅದರಲ್ಲೂ ದೂರದ ಊರಿನಲ್ಲಿರುವವರು ಏನು ಮಾಡಬಹುದು?

 • ನಮಸ್ತೆ ಸುಂದರರಾಯರೇ,

  ನಿಮ್ಮ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ. ಇದನ್ನು ನಾನು ಕೆಲವು ಅಂತರ್ಜಾಲದ ಗುಂಪುಗಳಿಗೆ ಈಮೈಲ್ ಮುಖಾಂತರ ಹಾಗೂ ಫ಼ೇಸ್‍ಬುಕ್ ಇತ್ಯಾದಿಗಳಲ್ಲಿ ಹಾಕಿದ್ದೇನೆ.

  ಆದರೆ ಈ ವಿಷಯದಲ್ಲಿ ಜನಸಾಮಾನ್ಯರಾದ ನಾವೇನು ಮಾಡಬಹುದು ಎನ್ನುವುದನ್ನು ದಯವಿಟ್ಟು ತಿಳಿಸಿ. ಅದರಲ್ಲೂ ದೂರದ ಊರಿನಲ್ಲಿರುವವರು ಏನು ಮಾಡಬಹುದು?

 • ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

 • ಉಪಗ್ರಹದ ಚಿತ್ರಗಳು ಸಾಕಷ್ಟು ನಿಖರವಾಗಿರುತ್ತವೆಯಲ್ಲವೇ? ಈ ಜಾಗದ ಹಳೆಯ ಚಿತ್ರಗಳು ಸಿಕ್ಕಿದರೆ ಅಲ್ಲಿ ದೊಡ್ಡ ಮರಗಳು ಮೊದಲಿದ್ದದ್ದಕ್ಕೆ ಉತ್ತಮ ಪುರಾವೆ ಸಿಕ್ಕಬಹುದು ಎಂಬ ದೂರದಾಸೆ ನನಗೆ. ಯಾಕೆಂದರೆ ಭೂಮಿಯ ಸುತ್ತ ತಿರುಗುತ್ತಾ ಇಡೀ ಭೂಮಿಯ ಇಂಚು ಇಂಚಿನ ಚಿತ್ರಗಳನ್ನು ಸೆರೆ ಹಿಡಿಯುತ್ತಲೇ ಇರುವಂತಹ ಉಪಗ್ರಹಗಳು ಇವೆ ಎಂಬುದನ್ನು ಅನೇಕ ಕಡೆ ಓದಿದ್ದೇನೆ.

  wikimapia ಅಥವಾ Google Earth ನಲ್ಲಿ ದಯವಿಟ್ಟು ಒಮ್ಮೆ ಪರಿಶೀಲಿಸಿ ನೋಡಿ, ಅವರು ನಿತ್ಯವೂ ಚಿತ್ರಣವನ್ನು ಬದಲಿಸುವುದಿಲ್ಲ, ಎಷ್ಟೋ ತಿಂಗಳಿಗೆ ಒಮ್ಮೆ ಮಾಡುತ್ತಾರೆ ಅಷ್ಟೆ. ಅವರ ತಾಣದಲ್ಲಿ ಈ ಅತ್ಯಾಚಾರದ ಮೊದಲಿನ ಚಿತ್ರ ಈಗಲೂ ಇದ್ದರೂ ಇರಬಹುದು. ಇಲ್ಲದಿದ್ದರೆ ಅವರ ಮೂಲಕ ಸಂಪಾದಿಸಲು ಸಾಧ್ಯವಾಗಬಹುದೇನೋ (ನಿಖರವಾದ ಅಕ್ಷಾಂಶ-ರೇಖಾಂಶಗಳನ್ನು ಕೊಟ್ಟು ವಿನಂತಿಸಿದರೆ).

  ಒಂದು ಸಣ್ಣ ಸಮಸ್ಯೆಯೆಂದರೆ ಅವರ ತಾಣದಲ್ಲಿರುವ ಚಿತ್ರಗಳ ಸೂಕ್ಷ್ಮತೆ (resolution) ಕಡಿಮೆ, ಬಹುಷಃ ದೇಶದ ಭದ್ರತೆಯ ಕಾರ್‍ಅಣದಿಂದ ಅವರಿಗೆ ಕಾನೂನಿನ ನಿರ್ಬಂಧಗಳಿರಬಹುದು. ಹೀಗಾಗಿ ಇಸ್ರೋ ಮುಂತಾದ ಮೂಲಗಳಿಂದ ಪಡೆಯಲು ಸಾಧ್ಯವೇ ಎಂಬುದನ್ನು ಕೂಡ ನೋಡಬಹುದು. ಇಲ್ಲಿ ಮಾಹಿತಿ ಹಕ್ಕು ಉಪಯೋಗಕ್ಕೆ ಬರುವುದೋ ಎಂದು ಕೂಡ ಪರಿಶೀಲಿಸಬಹುದು.

  ಈ ಮಾಹಿತಿ/ಸೂಚನೆ ನಿಮ್ಮ ಸಹಾಯಕ್ಕೆ ಬಂದರೆ ಬಹಳ ಸಂತೊಷ.

 • ಎಚ್. ಸುಂದರ ರಾವ್.

  ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.
  ಪ್ರಿಯ ಕೃಷ್ಣ ಶಾಸ್ತ್ರಿಗಳೆ,
  ನಿಮ್ಮ ಪ್ರಶ್ನೆಗೆ ನಾಳೆ ಯಥಾಮತಿ ಉತ್ತರಿಸುತ್ತೇನೆ.

 • ನಮಸ್ತೆ ಸರ್,
  ನಿಮ್ಮ ಲೇಖನದ ಮಾಹಿತಿಗಳ ಬಗ್ಗೆ, ಅವುಗಳ ನಿಖರತೆಯ ಬಗ್ಗೆ ಎರಡು ಮಾತೇ ಇಲ್ಲ. ವಿವರವಾದ ಮಾಹಿತಿಗಾಗಿ ವಂದನೆಗಳು.
  ವಸಂತ್ ಕಜೆ.

 • ಎಚ್. ಸುಂದರ ರಾವ್

  ಪ್ರಿಯ ಶಾಸ್ತ್ರಿಗಳಿಗೆ ನಮಸ್ಕಾರ
  "ಜನಸಾಮಾನ್ಯರಾದ ನಾವೇನು ಮಾಡಬಹುದು?" ಎಂದು ಕೇಳಿದ್ದೀರಿ. ಈ ಸಮಸ್ಯೆಗೆ ಸಂಬಂಧಿಸಿ ಯಾರೇ ಆಗಲಿ ಹೀಗೆ ಮಾಡಬಹುದು:
  ೧. ಇದು ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಷಯ. ಹಾಗಾಗಿ, ಲೇಖನದ ಪ್ರಿಂಟ್ ತೆಗೆದು, ಅದನ್ನು ಜೊತೆಗಿಟ್ಟು ಆ ಇಲಾಖೆಯ ಸಚಿವರಿಗೆ ಒಂದು ಪತ್ರ ಬರೆಯಬಹುದು. ಪೈಪ್ ಲೈನ್ ಕಾಮಗಾರಿಯನ್ನು ನಿಲ್ಲಿಸಲು ಏನಾದರೂ ಸಮಸ್ಯೆ ಇದೆಯೆ ಎಂದು ಅವರನ್ನು ಕೇಳಬಹುದು. ವಿಳಾಸ ತುಂಬ ಸುಲಭ: ಜಲಸಂಪನ್ಮೂಲ ಸಚಿವರು, ವಿಧಾನಸೌಧ, ಕರ್ನಾಟಕ ಸರ್ಕಾರ, ಬೆಂಗಳೂರು
  ೨. ಜಲಸಂಪನ್ಮೂಲ ಇಲಾಖೆಗೆ ಸಚಿವರನ್ನು ಬಿಟ್ಟರೆ ನಂತರದ ಅಧಿಕಾರಿ ಅದರ ಪ್ರಿನ್ಸಿಪಾಲ್ ಸೆಕ್ರೆಟರಿ. ಅವರಿಗೂ ಇದೇ ರೀತಿಯ ಪತ್ರ ಬರೆಯಬಹುದು. ವಿಳಾಸ: ಪ್ರಿನ್ಸಿಪಾಲ್ ಸೆಕ್ರೆಟರಿ, ಜಲಸಂಪನ್ಮೂಲ ಇಲಾಖೆ, ವಿಕಾಸಸೌಧ, ಬೆಂಗಳೂರು
  ೩. ಮಂಗಳೂರಿನ ಅರಣ್ಯ ಇಲಾಖೆಗೆ ಪತ್ರ ಬರೆದು, ಅವರ ಅಭಿಪ್ರಾಯ ಕೇಳಬಹುದು. ಮರಗಳು ನಾಶವಾಗಿರುವುದು ಹೌದಾದರೆ, ಪುನಃ ನೆಡಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ವಿಚಾರಿಸಬಹುದು. ವಿಳಾಸ: ವಿಭಾಗ ಅರಣ್ಯ ಅಧಿಕಾರಿ, ಮಂಗಳೂರು ವಿಭಾಗ, ಮಂಗಳೂರು
  ೪. ಸಣ್ಣ ನೀರಾವರಿ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಪತ್ರ ಬರೆದು, ಸರಕಾರಿ ಆದೇಶದ ಕುರಿತಾಗಿ ಮೇಲಧಿಕಾರಿಗಳಲ್ಲಿ ಸ್ಪಷ್ಟೀಕರಣ ಕೇಳಲು ಅವರಿಗೇನಾದರೂ ಸಮಸ್ಯೆ ಇದೆಯೇ ಎಂದು ವಿಚಾರಿಸಬಹುದು. ವಿಳಾಸ: ಕಾರ್ಯಕಾರಿ ಎಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮಂಗಳೂರು.
  ಇದು ಅತ್ಯಂತ ಅನಾಕರ್ಷಕ ವಿಧಾನ ಎಂದು ನನಗೆ ಗೊತ್ತು. ಪತ್ರ ಬರೆಯುವುದು ಈಗ ಹಳೆಯ ವಿಧಾನ. ಸರಕಾರಿ ಇಲಾಖೆಗಳೊಂದಿಗೆ ಇ-ಮೈಲ್ ಗಳ ಮೂಲಕ ವ್ಯವಹಾರ ಮಾಡುವುದನ್ನು ನಾನಿನ್ನೂ ಪ್ರಯತ್ನಿಸಿಲ್ಲ. ಹೇಗೆ ಮಾಡುವುದೆಂದು ನಿಮಗೆ ಗೊತ್ತಿದ್ದರೆ ಹಾಗೂ ಮಾಡಬಹುದು.
  ಹೇಗೆ ಬರೆಯುವುದಿದ್ದರೂ ಒಂದೆರಡು ಸೂಚನೆಗಳನ್ನು ಗಮನಿಸಿ:
  ಮೇಲೆ ಹೇಳಿದ ಎಲ್ಲರಿಗೂ ನೀವು ಪತ್ರ ಬರೆಯಬೇಕೆಂದು ನಾನು ಹೇಳುತ್ತಿಲ್ಲ. ನಿಮಗೆ ಖುಷಿ ಕಂಡ ಯಾರಾದರೊಬ್ಬರಿಗೆ ಬರೆದರೂ ಸಾಕು.
  ನಿಮ್ಮ ಪತ್ರದಲ್ಲಿ ಎಲ್ಲಿಯೂ ಲೇಖಕನ ಪರವಾಗಿ ನಿಲ್ಲಬೇಡಿ. ನಾನು ಹೇಳುವುದರಲ್ಲಿ ತಪ್ಪಿದ್ದರೂ ಇರಬಹುದು, ದಾಖಲೆಗಳಿಲ್ಲದೆ ನಾನು ಬರೆದಿರಬಹುದು, ನಿಮಗದು ಗೊತ್ತಿಲ್ಲ. ಹಾಗಾಗಿ, "ಲೇಖನದಲ್ಲಿ ಹೀಗೆ ಹೇಳಿದೆ, ನಿಮ್ಮ ಅಭಿಪ್ರಾಯ ಏನು?" ಅಥವಾ "ಲೇಖನದಲ್ಲಿ ಹೀಗೆ ಹೇಳಿದೆ. ಇದು ನಿಜವೆ?" ಎಂಬಂಥ ಪ್ರಶ್ನೆಗಳನ್ನು ಕೇಳಿ. ಜವಾಬ್ದಾರಿಯನ್ನು ಲೇಖಕನ ಮೇಲೆ ಹಾಕಿ. ಆಗ ನೀವು ಸುರಕ್ಷಿತವಾಗಿರುತ್ತೀರಿ. ಅಧಿಕಾರಿಗಳನ್ನು ಅನಗತ್ಯವಾಗಿ ಬೈಯ್ಯಬೇಡಿ, ದೂರಬೇಡಿ. ಲೇವಡಿ ಮಾಡಬೇಡಿ, ಚುಚ್ಚಬೇಡಿ. ಎಲ್ಲ ಆಫೀಸುಗಳಲ್ಲಿಯೂ ಕೆಟ್ಟವರಿರುವಂತೆ ಒಳ್ಳೆಯವರೂ ಇರುತ್ತಾರೆ.
  ಪತ್ರ ಮುಗಿಸುವಾಗ "ಇನ್ನು ಹತ್ತು ದಿನದಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ" ಎಂದೋ "ಇನ್ನು ಹದಿನೈದು ದಿನದಲ್ಲಿ ನಿಮ್ಮ ಉತ್ತರ ನಿರೀಕ್ಷಿಸುತ್ತೇನೆ" ಎಂದೋ ನಿರ್ದಿಷ್ಟವಾಗಿ ಹೇಳಿ. ಉತ್ತರ ಬರದಿದ್ದರೆ. ಎರಡನೆಯ ಪತ್ರವನ್ನೋ ನೆನಪೋಲೆಯನ್ನೋ ಬರೆಯಲು ನಿಮಗೆ ಅನುಕೂಲವಾಗುತ್ತದೆ.
  ಯಾರಿಗೆ ಪತ್ರ ಬರೆಯುವುದಾದರೂ, ಲೇಖನದ ಪ್ರಿಂಟ್ ಔಟ್ ಕಳಿಸುವುದು ಅಗತ್ಯ.
  "ಈಗಿನ ಕಾಲದಲ್ಲಿ ಪತ್ರ ಬರೆಯುವುದರಿಂದೆಲ್ಲ ಏನಾಗುತ್ತದೆ" ಎಂದು ಹಿಂಜರಿಯಬೇಕಾಗಿಲ್ಲ. ಸಾರ್ವಜನಿಕ ವಿಷಯಗಳಲ್ಲಿ ಸರಕಾರದೊಂದಿಗೆ ಪತ್ರವ್ಯವಹಾರ ಒಮ್ಮೆ ನಿಮಗೆ ಅಭ್ಯಾಸವಾದರೆ ಅದರ ಮಹತ್ವವೂ ನಿಮಗೆ ತಂತಾನೆ ಅರ್ಥವಾಗುತ್ತದೆ.
  ಪತ್ರ ಬರೆಯುವುದು ಯಾರು ಬೇಕಾದರೂ ತಾನೊಬ್ಬನೇ ತಣ್ಣಗೆ ಮಾಡಬಹುದಾದ ಕೆಲಸ. ಧರಣಿ ಮಾಡುವುದು, ಘೇರಾವ್ ಮಾಡುವುದು, ಉಪವಾಸ ಸತ್ಯಾಗ್ರಹ ಮಾಡುವುದು, ಮೆರವಣಿಗೆ ಮಾಡುವುದು ಇಂಥದಕ್ಕೆಲ್ಲ ಜನರನ್ನು ಸಂಘಟಿಸುವ ಅಗತ್ಯ ಇದೆ. ಈ ಕೆಲಸ ಮಾಡಲು ಪ್ರಾರಂಭಿಸಿದರೆ ನಮ್ಮ ಮೂಲ ಉದ್ದೇಶದಿಂದ ನಾವು ದೂರ ಹೋಗುವ ಸಾಧ್ಯತೆಗಳೇ ಹೆಚ್ಚು. ಸಂಘಟನೆ ಎಂದರೆ ಭಿನ್ನಾಭಿಪ್ರಾಯ, ಕುರ್ಚಿಗಾಗಿ ಜಗಳ, ದೋಷಾರೋಪಣೆ, ಹಣಸಂಗ್ರಹ, ಹಣ ದುರುಪಯೋಗ ಇಂಥ ಸಾವಿರ ವಿಷಯಗಳಲ್ಲಿ ತಲೆ ಕೆಡಿಸಿಕೊಳ್ಳಬೇಕಾಗಬಹುದು. ಪೋಲೀಸ್ ಕೇಸ್ ಎದುರಿಸಬೇಕಾಗಲೂ ಬಹುದು. ಸಾಪೇಕ್ಷವಾಗಿ, ಸಮಯವೂ ಹೆಚ್ಚು ಬೇಕು. ಆದ್ದರಿಂದ ಅದನ್ನು ವೃತ್ತಿ ರಾಜಕಾರಣಿಗಳಿಗೆ ಬಿಡುವುದೇ ಒಳ್ಳೆಯದು.
  ಈ ಪ್ರಶ್ನೆ ಕೇಳಿ ನನ್ನ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳುವುದಕ್ಕೆ ಒಂದು ಅವಕಾಶ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.
  ಆ ಸ್ಥಳದಲ್ಲಿ ದೊಡ್ಡ ಮರಗಳು ಇದ್ದವೆ ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ಬರೆದಿದ್ದೀರಿ. ಆ ವಿಷಯದಲ್ಲಿ ನನ್ನ ದೃಷ್ಟಿಕೋನ ಏನು ಎನ್ನುವುದನ್ನು ನಾಳೆ ಬರೆಯುತ್ತೇನೆ..

 • ಎಚ್. ಸುಂದರ ರಾವ್

  ನಿನ್ನೆ ಬರೆದದ್ದರಲ್ಲಿ ಒಂದು ವಿಷಯ ಬಿಟ್ಟು ಹೋಯಿತು.
  ನೀವು ಈ ವಿಷಯಕ್ಕೆ ಅಂತರ್ಜಾಲದಲ್ಲಿಯೇ ಸಾಕಷ್ಟು ಪ್ರಚಾರ ಕೊಟ್ಟಿರುವುದಾಗಿ ಹೇಳಿದ್ದೀರಿ. ಅದೂ ಸಹ ಪ್ರಕರಣದಲ್ಲಿ ಭಾಗವಹಿಸಿದ ಹಾಗೆಯೇ. ಅಭಿನಂದನೆಗಳು.
  ಇನ್ನು ಗೂಗಲ್ ಇತ್ಯಾದಿ ಮ್ಯಾಪಿನ ಬಗ್ಗೆ. ಕುತೂಹಲಕ್ಕೆ ನಾನು ಗೂಗಲ್ ಅರ್ತ್ ನಲ್ಲಿ ನೋಡಿದ್ದೆ. ಅಲ್ಲಿ ದೊಡ್ಡ ದೊಡ್ಡ ಮರಗಳಿದ್ದವು ಎಂಬುದಕ್ಕೆ ಸಾಕ್ಷಿ ಏನೂ ಇಲ್ಲ. ಆದರೆ, ನಾನು ಬರೆಯುವಾಗ ಗೂಗಲ್ ಅರ್ತಿನಲ್ಲಿ ನೋಡಲು ಸಾಧ್ಯ ಎಂದು ನನಗೆ ಹೊಳೆದಿರಲಿಲ್ಲ. ಅದಿರಲಿ. ಅಲ್ಲಿ ಮೊದಲು ಯಾವ ರೀತಿಯ ಮರಗಳಿದ್ದವು ಎಂದು ಅರಣ್ಯ ಇಲಾಖೆ ನನಗೆ ಮಾಹಿತಿ ಕೊಡಬೇಕಾಗುತ್ತದೆ (ನಾನು ಅದನ್ನು ಕೇಳಿ ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟಿದ್ದೇನೆ.) ಆಗ ಇಲಾಖೆ, ಸರಕಾರಿ ಜಾಗದಲ್ಲಿ ಇರುವ ಮರಗಳನ್ನು ಯಾವ ರೀತಿಯಲ್ಲಿ ಗಣತಿ ಮಾಡಲಾಗುವುದು, ಅದಕ್ಕೆ ಯಾವ ಕ್ರಮವನ್ನು ಅನುಸರಿಸಲಾಗುವುದು ಇತ್ಯಾದಿ ವಿವರಗಳನ್ನು ಕೊಡುವ ಸಾಧ್ಯತೆ ಇದೆ. ಆ ಮಾಹಿತಿ ನಮಗೆ ಬೇರೆ ಕಡೆ ಪ್ರಯೋಜನವಾಗಲೂ ಬಹುದು. ಕಳೆದ ವರ್ಷ ಮರ ಇದ್ದದ್ದು ಈ ವರ್ಷ ಅದರ ಬುಡ ಮಾತ್ರ ಉಳಿದಿರುವುದನ್ನು ಹಲವು ಕಡೆ ನಾನು ಕಂಡಿದ್ದೇನೆ. ಈ ಮರಗಳು ಎಲ್ಲಿ ಹೋದವು ಎಂದು ತಿಳಿಯಲು ಅರಣ್ಯ ಇಲಾಖೆ ಕೊಡುವ ಮಾಹಿತಿ ಪ್ರಯೋಜನಕ್ಕೆ ಬಂದರೂ ಬರಬಹುದು.
  ಉದಾಹರಣೆಗೆ ಮಂಗಳೂರಿನ ಜಲಸಂಪನ್ಮೂಲ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಅವರು ಮಾಹಿತಿ ಕೇಳಿ ನಾನು ಕಳಿಸಿದ ಅರ್ಜಿಯನ್ನು ಹಾಸನದ ಜಲ ಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಕಳಿಸಿಕೊಟ್ಟಿದ್ದಾರೆ. ಆ ಪತ್ರದಲ್ಲಿ ಅವರು ಒಂದು ಮಾತು ಬರೆದಿದ್ದಾರೆ: "ನಿಮಗೆ ನೇತ್ರಾವತಿ ನದಿಯ ಉಸ್ತುವಾರಿ ಇರುವುದರಿಂದ" ಎಂದು. ಇದು ನನಗೆ ಹೊಸ ವಿಷಯ. ಪ್ರಾಸಂಗಿಕವಾಗಿ ನನಗೆ ಗೊತ್ತಾದದ್ದು. ಯಾರಿಗೆ ಗೊತ್ತು ನೇತ್ರಾವತಿ ನದಿಯ ಉಸ್ತುವಾರಿಗೆಂದೇ ಸರಕಾರ ಹಣ ಖರ್ಚು ಮಾಡುತ್ತಿರಬಹುದು! ಉಸ್ತುವಾರಿ ಎಂದರೆ ಅದರಲ್ಲಿ ಏನೇನು ಬರುತ್ತದೆ ಎಂದು ಕೇಳಲು ಈಗ ನನಗೆ ಸಾಧ್ಯವಿದೆಯಷ್ಟೆ.
  ಏನಿದ್ದರೂ, ಈ ವಿಷಯದ ಕುರಿತು ಆಳವಾಗಿ ಯೋಚಿಸಿದ್ದರಿಂದ ಈ ಪರಿಹಾರ ನಿಮಗೆ ಹೊಳೆದಿದೆ. ಅದು ನನಗೆ ಖಂಡಿತ ಸಂತೋಷದ ವಿಷಯ.

 • ನಮಸ್ತೆ,

  ಸಂಘಟಿತ ಪ್ರಯತ್ನಗಳಲ್ಲಿರುವ ತೊಡಕುಗಳನ್ನು ನೀವು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಹೀಗೆ ಪತ್ರ ಬರೆಯುವುದು ಎಷ್ಟು ಪರಿಣಾಮಕಾರಿ ಎಂದು ನನಗೆ ತಿಳಿದಿಲ್ಲ, ಆದರೆ ಬರೆಯಲು ಸ್ಫೂರ್ತಿಯನ್ನಂತೂ ಕೊಟ್ಟಿದ್ದೀರಿ. ಪತ್ರ ಬರೆಯುವಾಗ ನಾವು ಸೌಜನ್ಯ, ಮರ್ಯಾದೆಯ ಎಲ್ಲೆಗಳನ್ನು ಮೀರಬಾರದು ಎಂಬುದು ಖಂಡಿತಾ ಸತ್ಯ.

  ಗೂಗಲ್ ಅರ್ತ್‍ನಲ್ಲಿ ಏತಕ್ಕೆ ಪುರಾವೆ ದೊರೆಯಲಿಲ್ಲ? Image resolution ಕಡಿಮೆ ಇದ್ದಿದ್ದರಿಂದಲೋ? ಈ ನಿಟ್ಟಿನಲ್ಲಿ ಇತರ ಮಾರ್ಗಗಳ ಬಗ್ಗೆ ವಿಚಾರಿಸಲು ಸಾಧ್ಯವಾದರೆ ನೋಡಿ ಒಮ್ಮೆ. ನನಗೂ ಹೆಚ್ಚು ಗೊತ್ತಿಲ್ಲ, ಆದರೆ ಇದೊಂದು ಐಡಿಯಾ ಬಂತು – ಯಾಕಾಗಬಾರದು ಎಂದನಿಸಿತು? ತಂತ್ರಜ್ಞಾನದ ಬಳಕೆಯಿಂದ ನಮ್ಮ ಮಾಹಿತಿ ಸಂಗ್ರಹಣೆಯನ್ನು ಉತ್ತಮಗೊಳಿಸಲು ಸಾಧ್ಯವಾದರೆ ಒಳ್ಳೆಯದು ಎಂದನಿಸಿತು.

  ಏನಕ್ಕೂ ಇರಲಿ – ಈ ಜಾಗದ ನಿಖರವಾದ ಅಕ್ಷಾಂಶ ರೇಖಾಂಶಗಳು ಇದ್ದರೆ ಇಲ್ಲಿ ಪ್ರಕಟಿಸಿ, ಯಾರಾದರೂ ಸಹಾಯ ಮಾಡಿದರೆ?! In fact, wikimapiaದಲ್ಲಿ ನೀವು ಹೇಳುವ ಪ್ರದೇಶಕ್ಕೆ ಒಂದು ಗುರುತು ಮಾಡಿ ಅದರ ವಿವರಗಳನ್ನು ಹಾಕಿದರೆ ಇನ್ನೂ ಉತ್ತಮ.

  ಮತ್ತೊಂದು ವಿಷಯ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ e-governance ಇದೆ ಸ್ವಲ್ಪ ಮಟ್ಟಿಗೆ. ದೂರನ್ನು Online ಆಗಿ ಹಾಕಬಹುದು, ಉತ್ತರ ಪಡೆಯಬಹುದು ಇತ್ಯಾದಿ.
  http://www.mangalorecity.gov.in/sites/mangalorecity.gov.in/files/grievance-redressal.html
  ನಾನು ತಾಳ್ಮೆಯಿಂದ ಇದನ್ನು ಆಗೊಮ್ಮೆ ಈಗೊಮ್ಮೆ ಉಪಯೋಗಿಸುತ್ತಾ ಇದ್ದೇನೆ, ಇತರರನ್ನೂ ಹುರಿದುಂಬಿಸುತ್ತಿದ್ದೇನೆ, ಆದರೆ ಇಲ್ಲಿ ಹಾಕಿದ ಅನೇಕ ದೂರುಗಳಿಗೆ ಸರಿಯಾದ ಅಥವಾ ಬೇಗನೆ ಉತ್ತರ ದೊರೆಯುವುದಿಲ್ಲ. ಹಾಗೂ ಈ ನಿರ್ದಿಷ್ಟವಾದ ವಿಷಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವುದೂ ಇಲ್ಲ, ಅಲ್ಲವೇ? ಆದರೂ ಇರಲಿ ಎಂದು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ.

  ಇತಿ,
  ಕೃಷ್ಣ ಶಾಸ್ತ್ರಿ.

Leave a Comment

Leave a Reply

Your email address will not be published. Required fields are marked *