ಪಂಪಭಾರತ ಆಶ್ವಾಸ ೩ ಪದ್ಯಗಳು ೭೫ರಿಂದ ೮೫

 

ವ||ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದಱ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿಹುತ ಹುತವಹಸಮಕ್ಷದೊಳ್ ಕೆಯ್ನೀರೆರೆದು ಪಾಣಿಗ್ರಹಂಗೆಯ್ಸೆ-

(ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ, ರಾಜಾವರ್ತದ ಕಂಬದೊಳಂ, ಪವಳದ ಜಂತೆಯೊಳಂ, ಪದ್ಮರಾಗದ ಬೋದಿಗೆಯೊಳಂ, ಇಂದ್ರನೀಲದ ಭದ್ರದೊಳಂ, ಕರ್ಕೇತನದ ಜಾಳರಿಗೆಯೊಳಂ, ಪಳುಕಿನ ಚಿತ್ರಭಿತ್ತಿಯೊಳಂ, ಚಂದ್ರಕಾಂತದ ಚಂದ್ರಶಾಲೆಯೊಳಂ ಒಪ್ಪುವ ವಿವಾಹಗೇಹಮಂ ಸಮೆಯಿಸಿ, ಅದಱ ನಡುವಣ ಆರ್ದ್ರಮೃತ್ತಿಕಾವಿರಚಿತಂ ಅಪ್ಪ ಚತುರಾಂತರದೊಳ್, ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪಸೆಯೊಳ್, ಗುಣಾರ್ಣವನನ್‌ ಆ ದ್ರುಪದಜೆಯನ್‌ ಒಡನೆ ಕುಳ್ಳಿರಿಸಿ, ಹಿತ ಪುರೋಹಿತ ಪ್ರಾಜ್ಯ ಆಜ್ಯಾಹುತಿ ಹುತ ಹುತವಹಸಮಕ್ಷದೊಳ್ ಕೆಯ್ನೀರೆರೆದು, ಪಾಣಿಗ್ರಹಂಗೆಯ್ಸೆ)

ಆಗ ದ್ರುಪದನು ಪಚ್ಚೆಮಣಿಯ ನೆಲಗಟ್ಟಿನ ಮೇಲೆ ಎಳೆಯ ಇಂದ್ರನೀಲವೆಂಬ ರತ್ನದ ಕಂಬಗಳನ್ನು ನಿಲ್ಲಿಸಿ (ಆ ಕಂಬಗಳ ಮೇಲೆ) ಹವಳದ ಜಂತೆಗಳನ್ನು ಹಾಕಿಸಿ, ಅದರೆ ಮೇಲೆ ಕೆಂಪುರತ್ನದ ಬೋದಿಗೆಗಳನ್ನು ಕೂರಿಸಿ ಇಂದ್ರನೀಲದ ಉಪ್ಪರಿಗೆಯನ್ನು ನಿರ್ಮಿಸಿದನು; ಆ ಉಪ್ಪರಿಗೆಯಲ್ಲಿ ಬಂಗಾರದ ಜಾಲರಿಗಳನ್ನು ಹಾಕಿಸಿದನು; ಗೋಡೆಗಳ ಮೇಲೆ ಹರಳುಗಳನ್ನು ಕೂರಿಸಿ ಚಿತ್ರಗಳನ್ನು ಮಾಡಿಸಿದನು. ಚಂದ್ರಕಾಂತ ಶಿಲೆಯ ಮೇಲ್ಮಹಡಿಯನ್ನು ಮಾಡಿಸಿ ಅಲ್ಲಿ ವಿವಾಹವಿಧಿಗಳು ನಡೆಯುವಂತೆ ಏರ್ಪಾಟು ಮಾಡಿದನು. ಅದಕ್ಕಾಗಿ ಒದ್ದೆಮಣ್ಣಿನಿಂದ ಹಸೆಯ ಜಗಲಿಯನ್ನು ಮಾಡಿಸಿ, ಅದರ ಮೇಲೆ ಕೆಂಪುಛಾಯೆಯ ಚಿನ್ನದ ಪಟ್ಟೆಮಣೆಯನ್ನು ಇಟ್ಟು, ಅದರ ಮೇಲೆ ರೇಷ್ಮೆಯ ಹೊದಿಕೆ ಹೊದಿಸಿ ಹಸೆಯನ್ನು ನಿರ್ಮಿಸಿದನು. ಆ ಹಸೆಯ ಮೇಲೆ ಅರ್ಜುನನನ್ನು ದ್ರೌಪದಿಯೊಂದಿಗೆ ಕುಳ್ಳಿರಿಸಿ ಪುರೋಹಿತರು ಹೇಳಿದಂತೆ ಅಗ್ನಿಸಾಕ್ಷಿಯಾಗಿ ದಾನದ ನೀರನ್ನು ಎರೆದು ವಧೂವರರ ಕೈಕೈ ಹಿಡಿಸಿದಾಗ

(ಟಿಪ್ಪಣಿ: ಇಲ್ಲಿ ಕವಿ ತಾನು ಕಂಡ ತನ್ನ ಕಾಲದ ರಾಜರ ಶ್ರೀಮಂತಿಕೆಯನ್ನು ವರ್ಣಿಸುತ್ತಿರುವಂತಿದೆ.)

ಚಂ|| ಇಡಿದಿರೆ ಮಂಜಿನೊಳ್ ತುಱುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್

ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ|

ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಪಲ್ಲವಂ

ಬಿಡಿದು ಬೆಡಂಗನಾಳ್ದುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ|| ೭೫||

(ಇಡಿದಿರೆ ಮಂಜಿನೊಳ್ ತುಱುಗಿ ತೆಂಕಣಗಾಳಿಯೊಳ್‌ ಆದ ಸೋಂಕಿನೊಳ್ ನಡುಗುವ ಅಶೋಕವಲ್ಲರಿಯ ಪಲ್ಲವದೊಳ್, ನವಚೂತಪಲ್ಲವಂ ತೊಡರ್ದವೊಲ್‌ ಆಗೆ, ಘರ್ಮಜಲದಿಂ ನಡುಪ ಆಕೆಯ ಪಾಣಿಪಲ್ಲವಂ     ಪಿಡಿದು, ಬೆಡಂಗನ್‌ ಆಳ್ದುದು ಗುಣಾರ್ಣವನ ಒಪ್ಪುವ ಪಾಣಿಪಲ್ಲವಂ)

ಅಶೋಕವಲ್ಲರಿಯ ಚಿಗುರಿನ ಮೇಲೆ ಮಂಜು ದಟ್ಟವಾಗಿ ತುಂಬಿಕೊಂಡಿದೆ; ಆ ಚಿಗುರನ್ನು ತೆಂಕಣಗಾಳಿ ಸೋಂಕಿ ನಡುಗಿಸುತ್ತಿದೆ; ಅಂಥ ಚಿಗುರನ್ನು ಮಾವಿನ ಹೊಸ ಚಿಗುರು ಸೇರಿಕೊಂಡರೆ ಹೇಗೋ ಹಾಗೆ. ಬೆವರಿ ನಡುಗುತ್ತಿರುವ ದ್ರೌಪದಿಯ ಚಿಗುರಂಗೈಯನ್ನು ಹಿಡಿದ ಗುಣಾರ್ಣವನ ಚೆಲುವಾದ ಅಂಗೈ ಬೆಡಗಿನಿಂದ ಶೋಭಿಸಿತು.

(ಟಿಪ್ಪಣಿ: ದ್ರೌಪದಿಯ ಚಿಗುರಂಗೈ ತುಂಬಾ ತಣ್ಣಗಿತ್ತು, ಹಾಗಿದ್ದೂ ಅದು ಬೆವರಿತ್ತು ಎಂದು ಇಲ್ಲಿ ಕವಿ ಹೇಳುತ್ತಿರುವುದು ಅವಳ ಮಾನಸಿಕ ತುಮಲದ ಸೂಚನೆಯಾಗಿದೆ. (ಪಂಪಕವಿಯ ಈ ಕಲ್ಪನೆಯೇ ಮುಂದೆ ರನ್ನನ ಗದಾಯುದ್ಧದಲ್ಲಿ ಬರುವ “ನೀರೊಳಗಿರ್ದುಂ ಬೆಮರ್ತನುರಗಪತಾಕಂ” ಎಂಬ ಪ್ರಸಿದ್ಧ ವರ್ಣನೆಯ ಮೂಲವಾಗಿರಬಹುದು). ಆದರೆ ಇಬ್ಬರ ಅಂಗೈಗಳೂ ಸೇರಿದ್ದನ್ನು ವರ್ಣಿಸುವಾಗ, ಕೇವಲ ಅರ್ಜುನನ (ಅರಿಗನ)  ಅಂಗೈಯ ಸೊಗಸನ್ನು ಎತ್ತಿ ಹೇಳಿರುವುದು ಕವಿಯ ಪಕ್ಷಪಾತ ದೃಷ್ಟಿಯನ್ನು ತೋರಿಸುತ್ತದೆ).

ವ|| ಅಂತೊರ್ವರೊರ್ವರ ಕಿಱುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು ಕನಕಗಿರಿಯಂ ಬಲಗೊಳ್ವ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞ್  ಬಲವಂದು ನಿಂದಿಂ ಬೞಿಯಮಾಕೆ ಪುರೋಹಿತನ ಪೇೞ್ದೋಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು-

 

(ಅಂತು ಒರ್ವರ್‌ ಒರ್ವರ ಕಿಱುಕುಣಿಕೆಗಳಂ ಪಿಡಿದು, ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು, ಕನಕಗಿರಿಯಂ ಬಲಗೊಳ್ವ ಪತಂಗ ದಂಪತಿಯಂತೆ ಆ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞ್  ಬಲವಂದು ನಿಂದಿಂ(ನಿಂದು+ಇಂ ಅಥವಾ ನಿಂದ+ಇಂ) ಬೞಿಯಂ,  ಆಕೆ ಪುರೋಹಿತನ ಪೇೞ್ದ  ಓಜೆಯೊಳ್ ಲಾಜೆಯನ್‌ ಅಗ್ನಿಕುಂಡದೊಳ್ ಸುರಿದು-)

ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದುಕೊಂಡು, ರತಿ-ಮನ್ಮಥರು ಬರುವಂತೆ ಹೋಮದ ಅಗ್ನಿಕುಂಡದ ಹತ್ತಿರ ಬಂದು, ಮೇರುಪರ್ವತವನ್ನು ಪ್ರದಕ್ಷಿಣೆ ಬರುವ ಪತಂಗ ದಂಪತಿಗಳಂತೆ ಅಗ್ನಿಯನ್ನು ಮೂರು ಬಾರಿ ಸುತ್ತುಬಂದು ನಿಂತ ನಂತರ, ದ್ರೌಪದಿಯು ಪುರೋಹಿತನು ತಿಳಿಸಿದ ಕ್ರಮದಲ್ಲಿ ಅರಳನ್ನು ಅಗ್ನಿಕುಂಡಕ್ಕೆ ಸುರಿದು-

(ಟಿಪ್ಪಣಿ: “ಪತಂಗದಂಪತಿ ಎಂದರೆ ಸೂರ್ಯ-ಚಂದ್ರ, ಹಗಲು ರಾತ್ರಿಗಳು; ಸೂರ್ಯ – ದೇವಿ ಮತ್ತು ಸೋಮರಾಜ – ಚಂದ್ರ ಇವರ ಪಾಣಿಗ್ರಹಣ ವೇದಪ್ರಸಿದ್ಧವಾದದ್ದು” –ಎಂದು ಶತಾವಧಾನಿ ಡಾ. ಆರ್.‌ ಗಣೇಶ್‌ ಅವರು ೨೦೧೩ರಲ್ಲಿ ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಪಂಪಭಾರತದ ಕುರಿತು ನೀಡಿದ ಹನ್ನೊಂದು ಉಪನ್ಯಾಸಗಳ ಪೈಕಿ ಮೂರನೇ ಉಪನ್ಯಾಸದ ೩೮ರಿಂದ ೪೦ನೇ ನಿಮಿಷದ ಅವಧಿಯಲ್ಲಿ ಹೇಳಿದ್ದಾರೆ. )

 

ಚಂ|| ಅದಱ ಪೊದಳ್ದು ನೀಳ್ದ ಪೊಗೆಯಂ ಲುಳಿತಾಳಕೆ ತನ್ನ ವಕ್ತ್ರ ಪ

ದ್ಮದಿನೊಸೆದಾಂತೊಡಾಕೆಯ ಕಪೋಲದೊಳಾ ನವ ಧೂಮಲೇಖೆ ಚೆ|

ಲ್ವಿದಿರ್ಗೊಳೆ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ

ಸದೆ ತೆಗೆದಂತೆ ಕಣ್ಗೆಸೆದು ತೋಱಿದುದಾ ಕದನತ್ರಿಣೇತ್ರನಾ|| ೭೬||

(ಅದಱ ಪೊದಳ್ದು ನೀಳ್ದ ಪೊಗೆಯಂ ಲುಳಿತಾಳಕೆ ತನ್ನ ವಕ್ತ್ರ ಪದ್ಮದಿನ್‌ ಒಸೆದು ಆಂತೊಡೆ, ಅಕೆಯ ಕಪೋಲದೊಳ್‌ ಆ ನವ ಧೂಮಲೇಖೆ  ಚೆಲ್ವು ಇದಿರ್ಗೊಳೆ  ಗಾಡಿವೆತ್ತು ಅಡರ್ದು, ಕತ್ತುರಿಯೊಳ್ ಮದವಟ್ಟೆಯಂ ವಿಳಾಸದೆ ತೆಗೆದಂತೆ ಕಣ್ಗೆಸೆದು ತೋಱಿದುದು ಆ ಕದನತ್ರಿಣೇತ್ರನಾ)

(ಅಗ್ನಿಕುಂಡದಿಂದ) ಹೊಮ್ಮಿ ಉದ್ದಕ್ಕೆ ವ್ಯಾಪಿಸಿದ ಆ ಅರಳಿನ ಹೊಗೆಯನ್ನು ಗುಂಗುರುಕೂದಲಿನ ದ್ರೌಪದಿಯು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿದಳು. ಆ ಹೊಸಹೊಗೆಯು ಆಕೆಯ ಕೆನ್ನೆಯ ಚೆಲುವನ್ನು ಎದುರ್ಗೊಂಡು, ಅಲ್ಲಿ ಸುಂದರವಾಗಿ ಹಬ್ಬಿ, ಕಸ್ತೂರಿಯಿಂದ ಮದವಟ್ಟೆಯನ್ನು ಸುಂದರವಾಗಿ ಬರೆದಂತೆ ಅರ್ಜುನನಿಗೆ ಕಾಣಿಸಿಕೊಂಡಿತು. (ಮದ+ಪಟ್ಟೆ – ಕಾಮದ ಸೊಕ್ಕನ್ನು ತೋರಿಸುವ ಪಟ್ಟೆಯಾಕಾರದ ಗೆರೆ – ಪಂಪಭಾರತ ದೀಪಿಕೆ)

(ಟಿಪ್ಪಣಿ: ಈ ಪದ್ಯದಲ್ಲಿ ಬಂದಿರುವ ʼಚೆಲ್ವುʼ ಶಬ್ದದ ಬಗ್ಗೆ: ಬಿ.ಎಲ್.‌ ರೈಸ್‌ ಅವರ ಪ್ರಕಟಿಸಿರುವ ಪಂಪಭಾರತದಲ್ಲೂ, ೧೯೩೧ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಪ್ರಕಟಿಸಿರುವ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಸಂಪಾದಿಸಿದ ʼಪಂಪಭಾರತʼದಲ್ಲೂ ಈ ಜಾಗದಲ್ಲಿ ʼಬೆಳ್ಪುʼ ಎಂಬ ಶಬ್ದವಿದೆ. ʼಪಂಪಭಾರತ ದೀಪಿಕೆʼಯಲ್ಲಿ ಈ ಜಾಗದಲ್ಲಿ ʼಚೆಲ್ವುʼ ಶಬ್ದ ಕಾಣಿಸಿಕೊಂಡಿದೆ.; ಈ ಪಾಠವು (ʼಬೆಳ್ಪಿʼನ ಬದಲಿಗೆ ʼಚೆಲ್ವುʼ ಎಂಬ ಪಾಠ) ಎಲ್ಲಿಂದ ಬಂತು, ಯಾರು ಸೇರಿಸಿದರು ಎಂದು ತಿಳಿಯುವಂತಿಲ್ಲ. ಪ್ರೊ. ವೆಂಕಟಾಚಲ ಶಾಸ್ತ್ರಿಯವರೂ ʼಚೆಲ್ವುʼ ಎಂಬುದನ್ನೇ ಒಪ್ಪಿಕೊಂಡಿದ್ದಾರೆ. ಡಾ. ಎಲ್.‌ ಬಸವರಾಜು ಅವರು ʼಪಂಪನ ಸಮಸ್ತ ಭಾರತ ಕಥಾಮೃತʼದಲ್ಲಿ ʼಬಿಳಿಪುʼ ಎಂದು ಬಳಸಿದ್ದಾರೆ.

ಯಾವ ಪಾಠಾಂತರವೂ ಇಲ್ಲದಿರುವಾಗ, ಇರುವ ಪಾಠವು ಅರ್ಥದ ದೃಷ್ಟಿಯಿಂದ ಸಾಧುವಾಗಿಯೇ ಇರುವಂತೆ ಮೇಲುನೋಟಕ್ಕೆ ಕಾಣಿಸುತ್ತಿರುವಾಗ,  ʼಬೆಳ್ಪುʼ ಎಂಬುದಕ್ಕೆ ʼಚೆಲ್ವುʼ ಎಂಬ ಬೇರೆ ಪಾಠವನ್ನು ಸೂಚಿಸಲು  ಏನು ಕಾರಣವಿರಬಹುದು? ಯಾರು  ಸೂಚಿಸಿರಬಹುದು?)

 

ವ|| ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಮೋದುವ ಋಚೆಗಳುಂ ಪರಸುವ ಪರಕೆಗಳುಮೆಸೆಯೆ ಪಸೆಯೊಳಿರ್ದು-

(ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಂ, ಓದುವ ಋಚೆಗಳುಂ, ಪರಸುವ ಪರಕೆಗಳುಂ  ಎಸೆಯೆ,  ಪಸೆಯೊಳ್‌ ಇರ್ದು)

ಹಾಗೆ ಇಂಪಾಗಿ ಹಾಡುವ ಮಂಗಳಧ್ವನಿಗಳೂ, ಓದುವ ವೇದಮಂತ್ರಗಳೂ, ಹರಸುವ ಹರಕೆಗಳೂ ಶೋಭಿಸುತ್ತಿರುವಂತೆ, ಹಸೆಯ ಮೇಲಿದ್ದು-

ಚಂ|| ಪರಿ[ಚೆ]ಯನಂಟು ಚೇಲೆಗಳನೊಯ್ಯನೆ ನೀವುವ ಚಿನ್ನಪೂವನೋ

ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ|

ತಿರಿಪುವ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ

ಬೆರಸಿದ ನಾಣುಮಂ ಕ್ರಮದೆ ಪಿಂಗಿಸು ಬೇಸಱದಿರ್ ಗುಣಾರ್ಣವಾ|| ೭೭||

(ಪರಿಚೆಯನಂಟು  ಚೇಲೆಗಳನ್‌ ಒಯ್ಯನೆ ನೀವುವ, ಚಿನ್ನಪೂವನ್‌ ಓಸರಿಸುವ, ಹಾರಮಂ ಪಿಡಿದು ನೋಡುವ, ಕಟ್ಟಿದ ನೂಲ ತೊಂಗಲಂ ತಿರಿಪುವ ಕೆಯ್ತದ ಒಂದು ನೆವದಿಂ ಲಲಿತಾಂಗಿಯ ಶಂಕೆಯಂ, ಭಯಂ ಬೆರಸಿದ ನಾಣುಮಂ ಕ್ರಮದೆ ಪಿಂಗಿಸು, ಬೇಸಱದಿರ್ ಗುಣಾರ್ಣವಾ)

ಅವಳು ಉಟ್ಟ-ತೊಟ್ಟ ಪರಿಮಳ ತುಂಬಿದ ಉಡುಪುಗಳನ್ನು ನೇವರಿಸು; ತಲೆಯ ಮುಂಭಾಗದಲ್ಲಿ ಧರಿಸಿದ ಚಿನ್ನದ ಹೂವನ್ನು ಪರಿಶೀಲಿಸು; ತೊಟ್ಟ ಹಾರವನ್ನು ಹಿಡಿದು ನೋಡು; ಕಟ್ಟಿದ ನೂಲಿನ ಗೊಂಚಲನ್ನು ಅತ್ತಿತ್ತ ತಿರುಗಿಸಿ, ತಿರುಪಿ ನೋಡು; ಹೀಗೆ – ವಸ್ತ್ರಾಭರಣಗಳನ್ನು ಮೆಚ್ಚುವ ನೆವದಿಂದ – ಆ ಮೆದು ಹೆಣ್ಣಿನ ಅನುಮಾನವನ್ನು, ಭಯ ಬೆರೆತ ನಾಚಿಕೆಯನ್ನು ಕ್ರಮವಾಗಿ ಹಿಂಗಿಸು, ಬೇಸರ ಮಾಡಿಕೊಳ್ಳಬೇಡ!ʼ

(ಟಿಪ್ಪಣಿ: ಈ ಪದ್ಯದ ಶುರುವಿನಲ್ಲಿ ಬರುವ ʼಪರಿಜೆಯನಂಟುʼ ಎನ್ನುವುದರ ಮುಂದೆ ಡಿ. ಎಲ್.‌ ನರಸಿಂಹಾಚಾರ್‌ ಅವರು ಪ್ರಶ್ನೆಯ ಗುರುತು ಹಾಕಿದ್ದಾರೆ. ಜೊತೆಗೆ ʼಪರಿಜೆʼ ಶಬ್ದದ ಅರ್ಥವೇನಿರಬಹುದೆಂಬುದನ್ನು ಚರ್ಚಿಸಿ, “ಪರಿಚೆ ಎಂದು ಸರಿಯಾದ ಪಾಠವಿರಬಹುದು” ಎಂದಿದ್ದಾರೆ. ಆದರೆ ʼಎರಡು ಶಬ್ದಗಳಿಗೂ ಅರ್ಥ ಗೊತ್ತಾಗುವಂತಿಲ್ಲʼ  ಎಂದೇ ಹೇಳಿದ್ದಾರೆ.

ಡಾ. ಎಲ್.‌ ಬಸವರಾಜು ಅವರು ʼಪಂಪನ ಸಮಸ್ತಭಾರತ ಕಥಾಮೃತʼದಲ್ಲಿ ʼಪರಿಜೆಯನಂಟುʼ ಎನ್ನುವುದಕ್ಕೆ “(ಕಸ್ತೂರಿಯ) ಅಂಟಿನಿಂದ ಚಿತ್ತಾರ ಬರೆದ(?)” ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ʼಪಂಪಸಂಪುಟʼದಲ್ಲಿ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ʼಪರಿ[ಚೆ]ಯನಂ[ಟಿ]ʼ ಎಂದು ಪಾಠವನ್ನು ಪರಿಷ್ಕರಿಸಿದ್ದಾರೆ; ಅದರಲ್ಲಿ  ʼಪರಿಚೆʼ ಶಬ್ದಕ್ಕೆ ʼಒಂದು ಬಗೆಯ ಸುಗಂಧದ್ರವ್ಯʼ ಎಂದು ಅರ್ಥ ಕೊಡಲಾಗಿದೆ.

ಡಾ. ಪಿ.ವಿ. ನಾರಾಯಣರು ʼಪಂಪನ ನುಡಿಗಣಿʼಯಲ್ಲಿ ʼಪರಿಚೆʼ ಶಬ್ದಕ್ಕೆ ʼಹಣೆಯ ಬಟ್ಟುʼ ಎಂಬ ಅರ್ಥ ಕೊಟ್ಟಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ʼಪಂಪಭಾರತʼದಲ್ಲಿ ʼಪರಿಜೆಯನಂಟು[ವ]ʼ ಎಂಬ ಪಾಠವನ್ನು ಪ್ರೊ. ಶಿವರಾಮಯ್ಯನವರು ಸೂಚಿಸಿದ್ದಾರೆ. ಆದರೆ ಹೀಗೆ ಮಾಡಿದಾಗ ಛಂದಸ್ಸು ತಪ್ಪುತ್ತದೆ. ಆದ್ದರಿಂದ ಇದು ಸ್ವೀಕಾರಾರ್ಹವಲ್ಲ.

ಈ ಪದ್ಯದಲ್ಲಿ ನಂತರ ಬರುವ ʼಚಿನ್ನಪೂʼ, ʼಹಾರʼ, ʼನೂಲತೊಂಗಲುʼ ಈ ಮೂರೂ ಅಂಶಗಳು ದ್ರೌಪದಿಯ ಅಲಂಕಾರಗಳನ್ನು ಹೇಳುತ್ತಿವೆ. ಅಲ್ಲಿ ಅಂಗಾಂಗಗಳ ಪ್ರಸ್ತಾಪವಿಲ್ಲ. ಹೀಗಿರುವಾಗ ಮೊದಲನೆಯ ಅಂಶದಲ್ಲೂ ಕವಿ ಅವಳ ಅಲಂಕಾರಕ್ಕೆ ಸಂಬಂಧಿಸಿದ್ದನ್ನೇ ಹೇಳಿರುವುದು ಹೆಚ್ಚು ಸಂಭವನೀಯ.

ಇದಲ್ಲದೆ ʼದಂಡುರುಂಬೆʼಯರು ಹೇಳುವ ʼಲಲಿತಾಂಗಿಯ ಶಂಕೆಯಂ ಭಯಂ ಬೆರಸಿದ ನಾಣುಮಂ ಕ್ರಮದೆ ಪಿಂಗಿಸುʼ ಎನ್ನುವ ಮಾತಿನಲ್ಲಿರುವ ʼಕ್ರಮದೆʼ ಶಬ್ದವನ್ನೂ ಗಮನಿಸಬೇಕು. ʼಕ್ರಮʼದಲ್ಲಿ ಮೊದಲು ಅಲಂಕಾರ, ಮತ್ತಿನದು ಮತ್ತೆ ತಾನೆ?

ಈ ಹಿನ್ನೆಲೆಯಲ್ಲಿ ಇಲ್ಲಿ ʼಪರಿ[ಚೆ]ಯನಂಟು ಚೇಲೆʼಗಳನೊಯ್ಯನೆ….ʼ ಎಂಬ ಪಾಠವನ್ನು ಇಟ್ಟುಕೊಂಡಿದೆ.

ʼಪರಿಚೆʼ ಶಬ್ದಕ್ಕೆ ಸುಗಂಧದ್ರವ್ಯ ಎಂಬ ಅರ್ಥವನ್ನು ಒಪ್ಪಿಕೊಂಡರೆ, ಅರ್ಥಸ್ಪಷ್ಟತೆಯ ದೃಷ್ಟಿಯಿಂದ ʼಪರಿಚೆಯ[ನಾಂ]ತʼ ಎಂಬ ಪಾಠವನ್ನು ಇಟ್ಟುಕೊಳ್ಳಬಹುದು.)

 

ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ್ ಬುದ್ಧಿವೇೞೆ-

ಎಂದು ಹತ್ತಿರದಲ್ಲಿದ್ದ ಗಂಡುಬೀರಿಯರು ಬುದ್ಧಿ ಹೇಳಲು

 

ಉ|| ಕಾಂತೆ ಪೊದಳ್ದ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ

ತ್ಕಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗೆ ಸ|

ಯ್ತಂತಿರು ನಾಣ್ಚದೆಂದಣುಗೆಯರ್ ಪಿಡಿದೞ್ಕಱೊಳೆತ್ತಿ ಬುದ್ಧಿವೇ

ೞ್ದಂತೆ ಕದಂಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್|| ೭೮ ||

(ಕಾಂತೆ ಪೊದಳ್ದ ನಾಣ ಭರದಿಂ ಅಧರೀಕೃತ ಚಂದ್ರಬಿಂಬ ಸತ್ಕಾಂತಿಯನ್‌ ಆನನಾಂಬುಜಮನ್‌ ಒಯ್ಯನೆ ಬಾಗಿರೆ, ʼಕಾದಲಂಗೆ ಸಯ್ತಂತಿರು ನಾಣ್ಚದೆʼ ಎಂದು ಅಣುಗೆಯರ್ ಪಿಡಿದು, ಅೞ್ಕಱೊಳ್‌ ಎತ್ತಿ ಬುದ್ಧಿವೇೞ್ದಂತೆ ಕದಂಪಿನೊಳ್ ಪೊಳೆದುವು ಆಕೆಯ ಹಾರ ಮರೀಚಿ ಮಾಲೆಗಳ್)

(ʼದಂಡುಱುಂಬೆʼಯರು ಆಡಿದ ಆ ಮಾತುಗಳನ್ನು ಕೇಳಿದ) ಆ ಹೆಣ್ಣು (ದ್ರೌಪದಿ) ತೀವ್ರವಾದ ನಾಚಿಕೆಯಿಂದ, ಚಂದ್ರಬಿಂಬದ ಕಾಂತಿಯನ್ನೂ ಮೀರಿಸುವಂತಿದ್ದ ತನ್ನ ಮುಖಕಮಲವನ್ನು ಮೆಲ್ಲನೆ ಬಾಗಿಸಿದ್ದಳು. ಆಗ ʼನಿನ್ನ ಕಾದಲನಿಗೆ ಒಪ್ಪುವಂತಿರು; ನಾಚಬೇಡʼ ಎಂದು ಗೆಳತಿಯರು ಅವಳಿಗೆ ಪ್ರೀತಿಯಿಂದ ಬುದ್ಧಿ ಹೇಳಿ ಅವಳ ಗಲ್ಲವನ್ನು ಮೇಲೆತ್ತಿದ ಹಾಗೆ, ಅವಳು ಧರಿಸಿದ್ದ ಹಾರಗಳ ಕಾಂತಿ  ಅವಳ ಕೆನ್ನೆಗಳಲ್ಲಿ ಬೆಳಗಿತು.

(ಟಿಪ್ಪಣಿ: ಈ ಪದ್ಯವು ಇದರ ಹಿಂದಿನ ಪದ್ಯದ ಮುಂದುವರಿಕೆ: ದಂಡುರುಂಬೆಯರು ಬುದ್ಧಿವಾದವನ್ನು ಅರ್ಜುನನಿಗೆ ಹೇಳಿದ್ದಾದರೂ, ಅದನ್ನು ಕೇಳಿ ನಾಚಿಕೆಯಿಂದ ತಲೆ ತಗ್ಗಿಸಿದವಳು ದ್ರೌಪದಿ! ʼಅವಳು ತುಂಬಾ ನಾಚಿಕೊಂಡಳುʼ ಎಂಬುದಕ್ಕೆ ವಿವರಣೆಯಾಗಿ ʼ ಕದಂಪಿನೊಳ್ ಪೊಳೆದುವು ಆಕೆಯ ಹಾರ ಮರೀಚಿ ಮಾಲೆಗಳ್ʼ ಎನ್ನುತ್ತಾನೆ ಕವಿ. ಕುತ್ತಿಗೆಯಲ್ಲಿ ಧರಿಸಿದ ಹಾರ ಅವಳ ಕೆನ್ನೆಯಲ್ಲಿ ಹೊಳೆದು ಕಾಣಿಸಬೇಕಾದರೆ, ಪಾಪ, ಆ ಮದುಮಗಳು  ಎಷ್ಟರಮಟ್ಟಿಗೆ ತನ್ನ ತಲೆಯನ್ನು ಬಗ್ಗಿಸಿರಬೇಡ?)

 

ವ|| ಅಂತೊಪ್ಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆೞ್ದು ನಿಂದಿರ್ದು-

ಅಂತಹ ಸಂಭ್ರಮದ ವಿವಾಹದ ಮಂಗಳ ಉತ್ಸವದಲ್ಲಿ ಸ್ವಸ್ತಿವಾಚಕರು ಎದ್ದು ನಿಂತು-

ಶಾ|| ಇಂದ್ರಾನೋಕಹಮೊಪ್ಪುವಿಂದ್ರ ತುರಂಗಂ ಸಂದಿಂದ್ರಗೇಹಂ ಪೊದ

ಳ್ದಿಂದ್ರಾನೇಕಪಮೊಪ್ಪುವಿಂದ್ರನಖಿಳೇಂದ್ರೈಶ್ಚರ್ಯಮಿಂದ್ರಾಣಿ ಸಂ|

ದಿಂದ್ರಾನರ್ಘ್ಯ ವಿಭೂಷಣಂಗಳರಿ ಭೂಪಾಳಾವಳೀ ದುಸ್ತಮ

ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೭೯||

ಇಂದ್ರನ ಮರವಾದ ಕಲ್ಪವೃಕ್ಷ, ಸೊಗಸಾದ ಇಂದ್ರನ ಕುದುರೆ, ಪ್ರಸಿದ್ಧವಾದ ಇಂದ್ರನ ಅರಮನೆ, ಇಂದ್ರನ ಭಾರೀ ಆನೆ, ಇಂದ್ರನ ಎಲ್ಲ ಸಂಪತ್ತು, ಇಂದ್ರನ ಹೆಂಡತಿ, ಇಂದ್ರನ ಅಮೂಲ್ಯವಾದ ಅಲಂಕಾರಗಳು, ಜಯಲಕ್ಷ್ಮಿ ಈ ಎಲ್ಲವನ್ನೂ, ಶತ್ರುರಾಜರ ಸಮೂಹವೆಂಬ ಕತ್ತಲೆಗೆ ಚಂದ್ರನಂತಿರುವ ಅರ್ಜುನನಿಗೆ ಕೊಡಲಿ.

(ಟಿಪ್ಪಣಿ: ಇಂದ್ರನ ಆಸ್ತಿಯ ಪಟ್ಟಿಯಲ್ಲಿ ಅವನ ಹೆಂಡತಿಯನ್ನೂ ಸೇರಿಸಲಾಗಿದೆ!)

 

ವ|| ಎಂದು ಮಂಗಳವೃತ್ತಂಗಳನೋದೆ ಕಿಱಿದುಂ ಬೇಗಮಿರ್ದೆತ್ತಿದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬೞಿಯಂ ಯಕ್ಷಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿಮಿರ್ದು ತಂಬುಲಮಂ ಕೊಂಡು-

(ಎಂದು ಮಂಗಳವೃತ್ತಂಗಳನ್‌ ಓದೆ, ಕಿಱಿದುಂ ಬೇಗಂ ಇರ್ದು, ಎತ್ತಿದ ಬೋನದೊಳ್ ಕಲ್ಯಾಣಾಮೃತ ಆಹಾರಮನ್‌ ಆರೋಗಿಸಿ, ಬೞಿಯಂ ಯಕ್ಷಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿಮಿರ್ದು, ತಂಬುಲಮಂ ಕೊಂಡು-)

ಎಂದು ಮಂಗಳವೃತ್ತಗಳನ್ನು ಓದಲು, ಸ್ವಲ್ಪ ಹೊತ್ತು ಇದ್ದು ನಂತರ, ಬಡಿಸಿದ ಊಟದಲ್ಲಿ ಅಮೃತಸಮಾನವಾದ ಆಹಾರವನ್ನು ಸೇವಿಸಿ, ಬಳಿಕ ಕೈಗೆ ಸುವಾಸನಾದ್ರವ್ಯಗಳನ್ನ ಬಳಿದುಕೊಂಡು, ತಾಂಬೂಲವನ್ನು ತೆಗೆದುಕೊಂಡು-

 

ಕಂ|| ಕವಿ ಗಮಕಿ ವಾದಿ ವಾಗ್ಮಿ

ಪ್ರವರರ ಪಂಡಿತರ ನೆಗೞ್ದ ಮಾತಱಿವರ ಸ|

ಬ್ಬವದವರೊಡನಂತೊಸೆದ

ನ್ನವಾಸದೋಲಗದೊಳಿರ್ದನಾಗಳ್ ಹರಿಗಂ|| ೮೦||

(ಕವಿ, ಗಮಕಿ, ವಾದಿ, ವಾಗ್ಮಿ ಪ್ರವರರ, ಪಂಡಿತರ, ನೆಗೞ್ದ ಮಾತಱಿವರ, ಸಬ್ಬವದವರ ಒಡನೆ ಅಂತು ಒಸೆದ   ಅನ್ನವಾಸದ ಓಲಗದೊಳ್‌ ಇರ್ದನ್‌ ಆಗಳ್ ಹರಿಗಂ)

ಕವಿಗಳ, ಕಾವ್ಯವನ್ನು ಸುಶ್ರಾವ್ಯವಾಗಿ ಓದುವವರ, ವಾದ ಚತುರರ, ಜಾಣ ಮಾತುಗಾರರ, ಪಂಡಿತರ, ಮಾತು ಬಲ್ಲವರ, ಹಾಸ್ಯಗಾರರ ಜೊತೆಗೆ ಅರ್ಜುನನು ಭೋಜನಶಾಲೆಯ ಓಲಗದಲ್ಲಿ ಇದ್ದನು.

ವ|| ಆ ಪ್ರಸ್ತಾವದೊಳ್-

ಆ ಸಮಯದಲ್ಲಿ

ಉ|| ಬೇಸರೆ ಲೋಕಮಂ ತಗುಳ್ದು ಸುಟ್ಟೞಲಿಂದೆ ಖರಾಂಶು ನಾರಕಾ

ವಾಸದೊಳಾೞ್ವವೋಲಪರ  ವಾರ್ಧಿಯೊಳಾೞ್ವುದುಮಿತ್ತ ವಂದ ಸಂ|

ಧ್ಯಾ ಸಮಯಾತ್ತರಕ್ತರುಚಿ ಪಿಂಗೆ ಬೞಿಕ್ಕುದಯಾದ್ರಿಯೊಳ್ ಪದಂ

ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ|| ೮೧||

(ಬೇಸರೆ ಲೋಕಮಂ ತಗುಳ್ದು ಸುಟ್ಟ ಅೞಲಿಂದೆ, ಖರಾಂಶು, ನಾರಕಾವಾಸದೊಳ್‌ ಆೞ್ವವೋಲ್‌ ಅಪರ  ವಾರ್ಧಿಯೊಳ್‌ ಆೞ್ವುದುಂ, ಇತ್ತ ವಂದ ಸಂಧ್ಯಾ ಸಮಯಾತ್ತರಕ್ತರುಚಿ ಪಿಂಗೆ, ಬೞಿಕ್ಕ ಉದಯಾದ್ರಿಯೊಳ್  ಪದಂಗಾಸಿದ ಪೊನ್ನ ಪುಂಜಿಯವೊಲ್‌ ಇರ್ದುದು ಕಣ್ಗೆ ಹಿಮಾಂಶುಮಂಡಲಂ)

ಲೋಕವನ್ನು ಬಿಡದೆ ಸುಟ್ಟುಹಾಕಿದ ತನ್ನ ಕಾರ್ಯಕ್ಕೆ ತಾನೇ ಬೇಸರಗೊಂಡು ನರಕವಾಸದಲ್ಲಿ ಮುಳುಗಿದಂತೆ ಪಡುಗಡಲಿನಲ್ಲಿ ಸೂರ್ಯನು ಮುಳುಗಿದನು. ಸಂಜೆಯ ಹೊತ್ತಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಕಾಣಿಸುವ ಕೆಂಪುಕಾಂತಿಯೂ ಸಹ ಕ್ರಮೇಣ ಅಡಗಿತು. ಆ ನಂತರ ಪೂರ್ವ ದಿಕ್ಕಿನಲ್ಲಿ ಬಂಗಾರದ ಉಂಡೆಯಂತಿದ್ದ ಚಂದ್ರಬಿಂಬವು ಕಾಣಿಸಿಕೊಂಡಿತು.

(ಟಿಪ್ಪಣಿ: ಇಲ್ಲಿನ  ʼಪದಂಗಾಸಿದ ಪೊನ್ನ ಪುಂಜಿಯವೊಲಿರ್ದುದುʼ ಎಂಬುದನ್ನು ಅರ್ಥ ಮಾಡುವುದು ಕಷ್ಟ. ಡಿ.ಎಲ್.ನರಸಿಂಹಾಚಾರ್‌ ಅವರು ʼಪದಂಗಾಸಿದʼ ಎಂಬುದಕ್ಕೆ ʼಪದಂಗಾಸಿನʼ ಎಂಬ ಪಾಠಾಂತರವನ್ನು ಸೂಚಿಸಿದ್ದಾರೆ. ಜೊತೆಗೆ “ಪೞಂಗಾಸು ಎಂಬುದು ಒಂದು ನಾಣ್ಯ; ಅದು ಚೊಕ್ಕ ಚಿನ್ನದಿಂದ ಆದ ಹಳೆಯ ಕಾಲದ ನಾಣ್ಯ. ʼಪುಂಜಿʼ ಎಂಬುದು ʼಘಂಟೆʼ ಎಂಬುದರ ಅಪಪಾಠ” ಎಂದು ಹೇಳಿದ್ದಾರೆ. ʼಪುಂಜಿʼ ಎಂದರೆ ʼರಾಶಿʼ ಎಂಬ ಅರ್ಥವೂ ಇದೆ. ಡಾ. ಪಿ.ವಿ. ನಾರಾಯಣರು ʼಪಂಪನ ನುಡಿಗಣಿʼಯಲ್ಲಿ ʼಪುಂಜಿʼ ಶಬ್ದಕ್ಕೆ ʼಉಂಡೆʼ ಎಂಬ ಅರ್ಥ ಕೊಟ್ಟಿದ್ದಾರೆ.  ವಿ.ಕೃಷ್ಣ ಅವರು alar.inkನಲ್ಲಿ  ʼanything that is spherical; a ballʼ ಎಂಬ ಅರ್ಥ ಕೊಟ್ಟಿದ್ದಾರೆ. ʼಚಂದ್ರನು ಬಂಗಾರದ ಗಂಟೆಯಂತೆ ಕಾಣಿಸಿದನುʼ ಎನ್ನುವುದಕ್ಕಿಂತ ʼಚಂದ್ರನು ಬಂಗಾರದ ಉಂಡೆಯಂತೆ ಕಾಣಿಸಿದನುʼ ಎಂಬುದು ಹೆಚ್ಚು ಒಪ್ಪುತ್ತದೆ ಎಂಬ ಕಾರಣಕ್ಕೆ ಇಲ್ಲಿʼಪುಂಜಿʼಗೆ ʼಉಂಡೆʼ ಎಂಬ ಅರ್ಥವನ್ನು ಇಟ್ಟುಕೊಂಡಿದೆ.)

ವ|| ಆಗಳ್ ದ್ರುಪದಂ ನಿಜಾಂತಃಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿಱಿದುಂ ಬೇಗಮಿರ್ದೋಲಗಮುಮಂ ಪರೆಯಲ್ವೇೞ್ದು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇರೆಬೇರೆ ಮಾಡಂಗಳಂ ಬೀಡುವೇೞ್ದು ಗುಣಾರ್ಣವನಂ ಸೆಜ್ಜೆಗೆ ಬಿಜಯಂಗೆಯ್ಯಿಮೆನೆ ಕಾಮಂ ಕಳನೇಱುವಂತೆ ಸೆಜ್ಜೆಯನೇಱಿ ಸೆಡೆದಿರ್ದ ನಲ್ಲಳಂ ನೋಡಿ-

 

(ಆಗಳ್ ದ್ರುಪದಂ ನಿಜಾಂತಃಪುರಪರಿವಾರಂಬೆರಸು ಉದಾರಮಹೇಶ್ವರನಲ್ಲಿಗೆ ಓಲಗಕ್ಕೆ ವಂದು ನೃತ್ಯ, ವಾದ್ಯ, ಗೀತ, ಆತೋದ್ಯಂಗಳೊಳ್ ಕಿಱಿದುಂ ಬೇಗಮಿರ್ದು ಓಲಗಮುಮಂ ಪರೆಯಲ್ವೇೞ್ದು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇರೆಬೇರೆ ಮಾಡಂಗಳಂ ಬೀಡುವೇೞ್ದು, ಗುಣಾರ್ಣವನಂ ʼಸೆಜ್ಜೆಗೆ ಬಿಜಯಂಗೆಯ್ಯಿಂʼ ಎನೆ, ಕಾಮಂ ಕಳನೇಱುವಂತೆ ಸೆಜ್ಜೆಯನೇಱಿ, ಸೆಡೆದಿರ್ದ ನಲ್ಲಳಂ ನೋಡಿ)

ಆಗ ದ್ರುಪದನು ತನ್ನ ಅಂತಃಪುರದ ಪರಿವಾರದೊಂದಿಗೆ ಅರ್ಜುನನಲ್ಲಿಗೆ ಓಲಗಕ್ಕೆ ಬಂದು ನೃತ್ಯ, ವಾದ್ಯ, ಗೀತ, ತಾಳವಾದ್ಯಗಳನ್ನು ಸ್ವಲ್ಪ ಹೊತ್ತು ನೋಡಿ, ಕೇಳಿ ಓಲಗವನ್ನು ಬರಖಾಸ್ತುಗೊಳಿಸಿ ಕುಂತಿಗೂ, ಮತ್ತಿನ ನಾಲ್ವರಿಗೂ ಬೇರೆ ಬೇರೆ ಬಿಡಾರಗಳನ್ನು ವ್ಯವಸ್ಥೆ ಮಾಡಿ, ಅರ್ಜುನನನ್ನು ʼಸೆಜ್ಜೆಗೆ ದಯಮಾಡಿಸಿʼ ಎನ್ನಲು ಅರ್ಜುನನು ಕಾಮದೇವನೇ ರಂಗಕ್ಕೇರುವಂತೆ ಸೆಜ್ಜೆಯನ್ನು ಏರಿ, ನಾಚಿಕೆಯಿಂದ ಮುದುಡಿ ಕುಳಿತಿದ್ದ ನಲ್ಲೆಯನ್ನು ಕಂಡು-

 

ಉ|| ನೋಟದೊಳೞ್ಕಱಂಬಡೆದು ಮೆಲ್ನುಡಿಯೊಳ್ ಬಗೆವೊಕ್ಕು ಜಾಣೊಳ

ಳ್ಳಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ವೊಣರ್ಚಿ ಬಾ|

ಯ್ಗೂಟದೊಳೞ್ಕಱಂ ಪಡೆದು ಕೂಟದೊಳುಣ್ಮಿದ ಬೆಚ್ಚ ತೞ್ಕೆಯೊಳ್

ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ|| ೮೨||

(ನೋಟದೊಳ್‌ ಅೞ್ಕಱಂ ಪಡೆದು, ಮೆಲ್ನುಡಿಯೊಳ್ ಬಗೆವೊಕ್ಕು, ಜಾಣೊಳ್‌ ಅಳ್ಳಾಟಮನ್‌ ಎಲ್ಲಮಂ ಕಿಡಿಸಿ, ಸೋಂಕಿನೊಳ್‌ ಒಯ್ಯನೆ ಮೆಯ್ವೊಣರ್ಚಿ, ಬಾಯ್ಗೂಟದೊಳ್‌ ಅೞ್ಕಱಂ ಪಡೆದು, ಕೂಟದೊಳ್‌ ಉಣ್ಮಿದ ಬೆಚ್ಚ ತೞ್ಕೆಯೊಳ್ ಕೂಟ ಸುಖಂಗಳಂ ಪಡೆದನ್‌ ಏಂ ಚದುರಂ ಗಳ ಬದ್ದೆದಲ್ಲೞಂ!)

(ದ್ರೌಪದಿಯನ್ನು) ನೋಡುವ ನೋಟದಿಂದಲೇ ಅವಳ ಪ್ರೀತಿಯನ್ನು ಗಳಿಸಿ, ನಯವಾದ ಮಾತುಗಳಿಂದ ಅವಳ ಮನಸ್ಸನ್ನು ಹೊಕ್ಕು, ಜಾಣತನದಿಂದ ಅವಳ ಆತಂಕವನ್ನು ದೂರಮಾಡಿ, ಮೆಲ್ಲನೆ ಮೈಗೆ ಮೈ ತಾಗಿಸಿ, ಬಾಯಿಗೆ ಬಾಯಿ ಸೇರಿಸಿ ಮುತ್ತು ಪಡೆದು, ಸೇರುವಿಕೆಯಿಂದಾದ ಬಿಸಿ ಅಪ್ಪುಗೆಯಲ್ಲಿ ಕೂಡುವ ಸುಖವನ್ನು ಪಡೆದನು. ಎಂತಹ ಚತುರ ಈ ಅರ್ಜುನ!

ಉ||ಬೇಡಿಸುವಪ್ಪುಗಳ್ಗೊರೆವ ಲಲ್ಲೆಯ ಮೆಲ್ನುಡಿಗಳ್ಗೆ ಕೂಡೆ ನಾ

ಣೂಡಿದ ಕೆಂದುಗಳ್ಗೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್|

ನಾಡೆ ಪೊದಳ್ದು ನೀಳ್ದವರ ಸುಯ್ಗಳ ಗಾಳಿಯೊಳೊಯ್ಯನೊಯ್ಯನ

ಳ್ಳಾಡುವುದಾಯ್ತು ತತ್ಸುರತಮಂದಿರದುಜ್ಜ್ವಳದೀಪಿಕಾಂಕುರಂ|| ೮೩||

(ಬೇಡಿಸುವ ಅಪ್ಪುಗಳ್ಗೆ, ಒರೆವ ಲಲ್ಲೆಯ ಮೆಲ್ನುಡಿಗಳ್ಗೆ, ಕೂಡೆ ನಾಣ್‌ ಊಡಿದ ಕೆಂದುಗಳ್ಗೆ ಬಗೆಗೊಂಡು ಇನಿಸಂ ತಲೆದೂಗುವಂತೆವೋಲ್, ನಾಡೆ ಪೊದಳ್ದು ನೀಳ್ದ ಅವರ ಸುಯ್ಗಳ ಗಾಳಿಯೊಳ್‌ ಒಯ್ಯನೊಯ್ಯನೆ      ಅಳ್ಳಾಡುವುದು ಆಯ್ತು ತತ್‌ ಸುರತಮಂದಿರದ ಉಜ್ಜ್ವಳ ದೀಪಿಕಾ ಅಂಕುರಂ)

ಬಯಸುವ ಅಪ್ಪುಗೆಗಳಿಗೆ, ಪಿಸುಗುಡುವ ಲಲ್ಲೆವಾತುಗಳಿಗೆ, ಜೊತೆಗೂಡಿ ಮಲಗಿದ್ದರಿಂದ ಉಂಟಾದ ನಾಚಿಕೆಗೆ ಮನಮೆಚ್ಚಿ ತಲೆದೂಗುವ ಹಾಗೆ, ನೀಳವಾದ ಅವರ ಉಸಿರುಗಳ ಗಾಳಿ ತಾಗಿ ಆ ಮಲಗುವ ಕೋಣೆಯ ಹೊಳೆಯುವ ದೀಪದ ಕುಡಿಗಳು ಅಲುಗಾಡಿದವು.

ವ|| ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ-

(ಅಂತು ಆ ಯಿರುಳ ನಾಲ್ಕು ಜಾವಮುಂ, ಕಾಮನ ಜಾಗರದಂತೆ, ಅವರ್ಗೆ ಕೆಂದಿನೊಳೆ ಬೆಳಗಾಗೆ)

ಹಾಗೆ ಆ ಇರುಳಿನ ನಾಲ್ಕು ಜಾವಗಳಲ್ಲಿಯೂ ಕಾಮನ ಜಾಗರಣೆಯಂತೆ ಅವರಿಗೆ ಸುರತಕ್ರೀಡೆಯಲ್ಲಿ ತೊಡಗಿಕೊಂಡೇ ಬೆಳಗಾಗಲು)

ಚಂ|| ನಿನಗಿನಿಸಪ್ಪೊಡಂ ಮನದೊಳೋವದ ಕೞ್ತಲೆಯೆಂಬ ಪಾಪ ಕ

ರ್ಮನ ಮಱಿಗಳ್ ಕರಂ ಪಲವುಮಂ ಸೆರೆಗೆಯ್ದೆವಿವೆಂದು ತಮ್ಮ ನ|

ಣ್ಪಿನೊಳವನೊಪ್ಪಿಪಂತೆ ಮುಗುಳೊಳ್ ಮಱಸುಂದಿದ ತುಂಬಿ ಪಾಱೆ ಕೋ

ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗೆದಂ ದಿವಾಕರಂ|| ೮೪||

(ನಿನಗೆ ಇನಿಸು ಅಪ್ಪೊಡಂ ಮನದೊಳ್‌ ಓವದ ಕೞ್ತಲೆಯೆಂಬ ಪಾಪ ಕರ್ಮನ ಮಱಿಗಳ್ ಕರಂ ಪಲವುಮಂ ಸೆರೆಗೆಯ್ದೆವು ಇವೆಂದು ತಮ್ಮ ನಣ್ಪಿನೊಳ್‌ ಅವನ್‌ ಒಪ್ಪಿಪಂತೆ, ಮುಗುಳೊಳ್ ಮಱಸುಂದಿದ ತುಂಬಿ ಪಾಱೆ ಕೋಕನದ ಕುಲಂಗಳ್‌ ಉಳ್ಳಲರ್ದುವು ಎಂಬಿನಂ  ಅಂದು ಒಗೆದಂ ದಿವಾಕರಂ)

ʼನಿನಗೆ ಕತ್ತಲೆ ಎಂಬ ಪಾಪಕರ್ಮಿಯನ್ನು ಕಂಡರೆ ಸ್ವಲ್ಪವೂ ಇಷ್ಟವಿಲ್ಲ;  (ಹಾಗಾಗಿ) ಆ ಕತ್ತಲೆಯ ಹಲವು ಮರಿಗಳನ್ನು ನಾವು ಸೆರೆ ಹಿಡಿದಿಟ್ಟಿದ್ದೆವು; ಇಗೋ, ಅವು ಇಲ್ಲಿವೆʼ ಎಂದು ತಮ್ಮ ಸ್ನೇಹಿತನಾದ ಸೂರ್ಯನ ಕೈಗೆ ಅವುಗಳನ್ನು ಒಪ್ಪಿಸುವಂತೆ ತಾವರೆಗಳು ಚೆನ್ನಾಗಿ ಅರಳಿದವು; ಆಗ ಹಿಂದಿನ ರಾತ್ರಿ ತಾವರೆಮೊಗ್ಗುಗಳ ಒಳಗೆ ಸಿಕ್ಕಿಬಿದ್ದಿದ್ದ ಆ  ತುಂಬಿಗಳು ಹಾರಿಹೋದವು.

ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗೆ-

ಹಾಗೆ ಸೂರ್ಯೋದಯವಾದಾಗ, ಪ್ರಚಂಡ ಮಾರ್ತಾಂಡನೆಂಬ ಬಿರುದು ಪಡೆದ ಅರ್ಜುನನೂ ಎದ್ದನು.

ಮ|| ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ

ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಃಕಣಂ ದ್ರೌಪದೀ|

ಕುಚಕುಂಭಾರ್ಪಿತ ಕುಂಕುಮದ್ರವ ವಿಲಿಪ್ತೋರಸ್ಥಳಂ ದಾಂಟೆ ಕೀ

ರ್ತಿ ಚತುರ್ವಾರ್ಧಿಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ|| ೮೫ ||

 

(ಕಚ ಭಾರ ಆಳಸಗಾಮಿನೀ ಪರಿವೃತಂ, ಗಂಗಾತರಂಗ ಉಪಮಾನ ಚಳತ್‌ ಚಾಮರ ವಾತ ಪೀತ ನಿಜ ಘರ್ಮ ಅಂಭಃಕಣಂ, ದ್ರೌಪದೀ ಕುಚ ಕುಂಭ ಅರ್ಪಿತ ಕುಂಕುಮದ್ರವ ವಿಲಿಪ್ತ ಉರಸ್ಥಳಂ, ದಾಂಟೆ ಕೀರ್ತಿ ಚತುರ್ವಾರ್ಧಿಯನ್‌, ಇರ್ದನ್‌ ಅಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ)

ಕೂದಲಿನ ಭಾರದಿಂದಾಗಿ ಮೆಲ್ಲನೆ ನಡೆಯುವ ಹೆಣ್ಣುಗಳು ಅವನನ್ನು ಸುತ್ತುವರಿದಿದ್ದಾರೆ; ಗಂಗೆಯ ಅಲೆಗಳಂತೆ ತಂಪಾಗಿ ಬೀಸುವ ಚಾಮರಗಳಿಂದ ಅವನ ದೇಹ ಬೆವರಿದೆ; ಅವನ ಎದೆಗೆ ದ್ರೌಪದಿಯ ಮಡಕೆಯಂಥ ಮೊಲೆಗಳ ಕುಂಕುಮದ್ರವವು ಅಂಟಿಕೊಂಡಿದೆ; ಅವನ ಕೀರ್ತಿ ನಾಲ್ಕು ಸಾಗರಗಳನ್ನೂ ದಾಟಿದೆ; ಹೀಗೆ ಅರ್ಜುನನು ಅಂದು ಸುಖದಿಂದ ಇದ್ದನು.

(ಟಿಪ್ಪಣಿ: ಮೊಲೆಯನ್ನು ಮಡಕೆಗೆ ಹೋಲಿಸುವ ಒಂದು ವಿಚಿತ್ರ ಪದ್ಧತಿ ನಮ್ಮ ಕಾವ್ಯ ಪರಂಪರೆಯಲ್ಲಿಯೇ ಇದ್ದಂತಿದೆ. ಯಾವ ರಸಿಕಕವಿಪುಣ್ಯಾತ್ಮನು ಇಂಥದೊಂದು ಹೋಲಿಕೆಯನ್ನು ಕಂಡುಕೊಂಡನೋ ಅವನಿಗೊಂದು ನಮಸ್ಕಾರ!)

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ರೌಪದೀಕಲ್ಯಾಣವರ್ಣನಂ ತೃತೀಯಾಶ್ವಾಸಂ

 

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *