ಪಂಪಭಾರತ ಆಶ್ವಾಸ ೪(೪೩-೫೨)

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ

ಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ

ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್ ಕೀಲಿಸೆ ಕಾವನಂಬು, ಅವಱ ಬಿಣ್ಪಿನೊಳ್‌ ಒಯ್ಯನೆ ಜೋಲ್ದವೋಲೆ ತಾಂಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ

(ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಪೆಱತೊಂದು ಕಣ್‌ ಪೀಲಿವೊಲಾಗೆ ಬಂದು ಮನಂಬುಗೆ ಪತ್ತಿ ಚಿತ್ತದೊಳ್ ಕೀಲಿಸೆ ಕಾವನಂಬು, ಅವಱ ಬಿಣ್ಪಿನೊಳ್‌ ಒಯ್ಯನೆ ಜೋಲ್ದವೋಲೆ ತಾಂಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ)

ಸುಭದ್ರೆಯ ಕಣ್ಣುಗಳು ಅರ್ಜುನನನ್ನು ಪ್ರೇಮದಿಂದ ಹೀರಿಬಿಡುವ ಹಾಗೆ ಎವೆಯಿಕ್ಕದೆ ನೋಡಿದವು. ಪ್ರತಿಯಾಗಿ ಅರ್ಜುನನ ನೋಟವೆಂಬ ಕಾಮಬಾಣವು ನವಿಲುಗರಿಯಂತೆ ಬಂದು ಅವಳ ಮನಸ್ಸಿನಲ್ಲಿ ನೆಟ್ಟು ಅಂಟಿಕೊಂಡಿತು. ಅದರ ಭಾರಕ್ಕೆ (ಎಂದರೆ ನವಿಲುಗರಿಯ ಭಾರಕ್ಕೆ!) ಮೆಲ್ಲನೆ ಜೋಲಿ ಹೊಡೆಯುವಂತೆ ಆ ಬಾಲೆಯು ಪಕ್ಕದಲ್ಲಿದ್ದ ತಾಂಬೂಲವನ್ನು ಹಿಡಿದ ಸಖಿಯ ಮೇಲೆ ಹಗುರವಾಗಿ ಒರಗಿದಳು.

ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿೞಿದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರ.ಮ್ಯ ಹರ್ಮ್ಯದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಿಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮೆಸೆದಿರ್ದ  ಮಣಿಮಯಪೀಠದೊಳೊಡನೇಱಿ

ಕಿಱಿದು ಪೊೞ್ತು ಕುಳ್ಳಿರ್ದು ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ವನಿತೞ್ಕಱೊಳಪಗತ ಪಥ ಪರಿಶ್ರಮನಂ ಮಾಡಿ-

ಆಗಳ್‌ ಆ ನಾರಾಯಣನುಂ ಉದಾತ್ತನಾರಾಯಣನುಂ ಆನೆಯಿಂದಂ ಇೞಿದು, ನವ ಕಿಸಲಯ ವಂದನಮಾಳಾ ಅಳಂಕೃತಂ ಅಪ್ಪ ಸಪ್ತ ತಾಳ ಉತ್ತುಂಗ ರಮ್ಯ ಹರ್ಮ್ಯದ ಎರಡನೆಯ ಮೊಗಸಾಲೆಯೊಳ್‌ ಇಟ್ಟ ಪೊನ್ನ ಪಡಿಗಂಗಳೊಳಂ, ಇಕ್ಕಿದ ಪೞಿಯ ಸುಖಾಸನಂಗಳೊಳಂ, ಕಟ್ಟಿದ ಚಿನ್ನದ ಬೊಂದರಿಗೆಯೊಳಂ ಎಸೆದಿರ್ದ ಮಣಿಮಯಪೀಠದೊಳ್‌ ಒಡನೇಱಿ, ಕಿಱಿದು ಪೊೞ್ತು ಕುಳ್ಳಿರ್ದು, ಮಜ್ಜನ ಭೋಜನ ತಾಂಬೂಲ ಅನುಲೇಪನ ವಿಭೂಷಣ ಸುರಭಿ ಕುಸುಮದಾಮಾದಿಗಳಿಂ ಸಂತಸಂಬಡಿಸಿ, ದಾಮೋದರನ್‌ ಉದರದೊಳ್‌ ಇಟ್ಟುಕೊಳ್ವ ಅನಿತು ಅೞ್ಕಱೊಳ್‌ ಅಪಗತ ಪಥ ಪರಿಶ್ರಮನಂ ಮಾಡಿ-

ಆಗ ನಾರಾಯಣ ಹಾಗೂ ಉದಾತ್ತ ನಾರಾಯಣ ಇಬ್ಬರೂ ಆನೆಯಿಂದ ಇಳಿದರು. ಹೊಸ ಚಿಗುರಿನ ಮಾಲೆಗಳಿಂದ ಅಲಂಕೃತವಾದ  ಏಳು ತಾಳೆಮರ ಎತ್ತರದ, ರಮ್ಯವಾದ ಉಪ್ಪರಿಗೆಯ ಎರಡನೆಯ ಮೊಗಸಾಲೆಯಲ್ಲಿ ಇಟ್ಟ ಚಿನ್ನದ ಪೀಕುದಾನಿಗಳಿಂದಲೂ, ಬಟ್ಟೆಗಳನ್ನು ಹಾಸಿದ ಸುಖಾಸನಗಳಿಂದಲೂ, ಜೋಡಿಸಿದ ಮೆತ್ತೆಗಳಿಂದಲೂ ಶೋಭಿಸುತ್ತಿದ್ದ ಮಣಿಮಯವಾದ ಪೀಠದ ಮೇಲೆ ಒಟ್ಟಾಗಿ ಏರಿದರು. ಅಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದರು. ನಂತರ ದಾಮೋದರನು ಅರ್ಜುನನನ್ನು ಸ್ನಾನ, ಊಟ, ವೀಳ್ಯವೇ ಮುಂತಾದವುಗಳಿಂದ ಸಂತಸಪಡಿಸಿದನು; ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಕುವಷ್ಟು ಪ್ರೀತಿಯಿಂದ ಅರ್ಜುನನ ದಾರಿಸುಸ್ತನ್ನು ಕಳೆದನು.

ಕಂ|| ಈತಂ ಬಿರ್ದಿನನೀತಂ

ಭೂತಳಪತಿಯೆನಿಸಿದರಿಗನೊಡೆಯಂ ಹರಿ ತಾ|

ನೀತನೆ ಬಿರ್ದಿನನೆನೆ ವಿ

ಖ್ಯಾತಂಗೆ ನರಂಗೆ ಸೆಱಪುಗೆಯ್ದನನಂತಂ|| ೪೪ ||

ಈತಂ ಬಿರ್ದಿನನ್‌, ಈತಂ ಭೂತಳಪತಿಯೆನಿಸಿದ ಅರಿಗನ್‌; ಒಡೆಯಂ ಹರಿ ತಾನ್‌ ಈತನೆ ಬಿರ್ದಿನನೆನೆ ವಿಖ್ಯಾತಂಗೆ ನರಂಗೆ ಸೆಱಪುಗೆಯ್ದನ್‌ ಅನಂತಂ

ʼಇವನು ನನ್ನ ನೆಂಟ, ನೆಲದೊಡೆಯನೆನಿಸಿದ ಅರಿಗ. ನಾನು ಮನೆಯೊಡೆಯನಾದ ಹರಿ. ಇವನು ಅತಿಥಿಯಾಗಿ ನನ್ನ ಮನೆಗೆ ಔತಣಕ್ಕೆ ಬಂದಿದ್ದಾನೆʼ ಎನ್ನುವಂತೆ ಪ್ರಸಿದ್ಧನಾದ ಅರ್ಜುನನಿಗೆ ಅನಂತನು ಸತ್ಕಾರ ಮಾಡಿದನು.

ವ|| ಅಂತೆನಿತಾನುಮಂದದೊಳ್ ಸೆಱಪುಗೆಯ್ದು ವಿವಿಧ ವಿನೋದಂಗಳಂ ತೋಱಿ ಮುನ್ನೆ ಬದರಿಕಾಶ್ರಮದೊಳ್-

ಅಂತು ಎನಿತಾನುಂ ಅಂದದೊಳ್ ಸೆಱಪುಗೆಯ್ದು,  ವಿವಿಧ ವಿನೋದಂಗಳಂ ತೋಱಿ, ಮುನ್ನೆ ಬದರಿಕಾಶ್ರಮದೊಳ್-

ಹಾಗೆ ಎಷ್ಟೆಷ್ಟೋ ರೀತಿಯಿಂದ ಉಪಚಾರ ಮಾಡಿ, ವಿವಿಧ ವಿನೋದಗಳನ್ನು ತೋರಿಸಿ, ʼಹಿಂದೆ ಬದರಿಕಾಶ್ರಮದಲ್ಲಿʼ-

ಕಂ|| ಆಯತಿಯಿಂದಂ ನರ ನಾ

ರಾಯಣರೆನೆ ನೆಗೞ್ದೆವರಿಗ ನಾವಿರ್ವರುಮಿಂ|

ತೀ ಯುಗದೊಳೀಗಳಾಂ ನಾ

ರಾಯಣನೆಂ ನೀನುದಾತ್ತನಾರಾಯಣನೈ || ೪೫ ||

ಆಯತಿಯಿಂದಂ ನರ ನಾರಾಯಣರ್‌ ಎನೆ ನೆಗೞ್ದೆವು ಅರಿಗ ನಾವು ಇರ್ವರುಂ, ಇಂತು ಈ  ಯುಗದೊಳ್‌ ಈಗಳ್‌ ಆಂ ನಾರಾಯಣನೆಂ. ನೀನ್‌ ಉದಾತ್ತನಾರಾಯಣನೈ-

(ಹಿಂದೆ ನಾವು) ಒಬ್ಬರನ್ನೊಬ್ಬರು ಅವಲಂಬಿಸಿ, ನರ-ನಾರಾಯಣರೆಂದು ಹೆಸರುವಾಸಿಯಾಗಿದ್ದೆವು. ಇಂದು ಈ ಯುಗದಲ್ಲಿ ನಾನು ನಾರಾಯಣನಾಗಿದ್ದೇನೆ, ನೀನು ಉದಾತ್ತ ನಾರಾಯಣನಾಗಿದ್ದೀಯೆ-

ವ||ಅದಱಿಂ ನಿನಗಮೆನಗಮೇತಱೊಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್-

ಅದಱಿಂ ನಿನಗಂ ಎನಗಂ ಏತಱೊಳಂ ವಿಕಲ್ಪಮುಂ ವಿಚ್ಛಿನ್ನಮುಂ ಇಲ್ಲ ಎಂದು ನುಡಿಯುತಿರ್ಪ ಅನ್ನೆಗಂ ಇತ್ತಲ್

ʼಆದ್ದರಿಂದ ನಿನಗೂ ನನಗೂ ಯಾವುದರಲ್ಲಿಯೂ ಭೇದವಿಲ್ಲ, ಬೇರೆ ಇಲ್ಲʼ ಎಂದು ನುಡಿಯುತ್ತಿರುವಂತೆಯೇ ಇತ್ತ

ಚಂ||    ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ

ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು ಕಾಱುವಂ|

ತೆವೊಲಿರೆ ಕೆಂಪು ತತ್ಕಮಳ ಕಾನನ ಕಂಟಕ ಲಗ್ನಪಾದನಾ

ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ|| ೪೬||

ನವ ನಳಿನೀ ವನಂಗಳ ಪರಾಗರಜಂಗಳನ್‌ ಉಂಡು ಮುನ್ನಂ ಅಂತು ಅವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು ಕಾಱುವಂತೆವೊಲ್‌ ಇರೆ ಕೆಂಪು, ತತ್ಕಮಳ ಕಾನನ ಕಂಟಕ ಲಗ್ನ ಪಾದನ್‌ ಆದವೊಲ್‌ ಉಡುಗುತ್ತುಂ ಅತ್ಮ ಕರಮಂ ರವಿ ಪೊರ್ದಿದನ್‌ ಅಸ್ತಶೈಲಮಂ

ಸೂರ್ಯನು ಬೆಳಗಿನ ಹೊತ್ತು ತಾವರೆಯ ತೋಟದಲ್ಲಿ ಅರಳಿದ ಹೊಸ ತಾವರೆಗಳ ಪರಾಗವನ್ನು ಉಂಡು  ನಂತರ ಆಗಸದಲ್ಲಿ ತಿರುಗಾಡಿ ಸುಸ್ತಾಗಿ ಅದನ್ನು ಕಾರಿಕೊಂಡಂತೆ  ಸಂಜೆಯ ಆಗಸವು  ಕೆಂಪಾಗಿ ಕಾಣಿಸಿತು ಎಂಬಂತೆ ಆ ತಾವರೆಯ ವನದ ಮುಳ್ಳಿನಲ್ಲಿ ಅವನ ಕಿರಣಗಳು ಸಿಕ್ಕಿಕೊಂಡು ಕ್ರಮೇಣ ಉಡುಗಿಹೋದವು. ಹೀಗೆ ಸೂರ್ಯನು ಮುಳುಗುಬೆಟ್ಟದಲ್ಲಿ ಅಡಗಿಹೋದನು.

ವ|| ಆ ಪ್ರಸ್ತಾವದೊಳ್-

ಉ||      ಆ ಸರಸೀಜ ಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂ

ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೋಪೆವೆಂ|

ಬೀ ಸಮಕಟ್ಟಿನೊಳ್ ನೆಲಸಿದಂತೆಱಗಿರ್ದುವು ಷಟ್ಪದಂಗಳು

ತ್ಕೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್|| ೪೭||

ʼಆ ಸರಸೀಜ ಬಾಂಧವನ ಪಿಂಬಡಿನೊಳ್ ಕಡುವಿನ್ನವಾದುವು ಇಂತು ಈ ಸರಸೀರುಹಂಗಳ್‌; ಅವನ್‌ ಈ ಪದದೊಳ್ ಬಿಸುಟು ಎಂತು ಪೋಪೆವು?ʼ ಎಂಬ ಈ ಸಮಕಟ್ಟಿನೊಳ್ ನೆಲಸಿದಂತೆ ಎಱಗಿರ್ದುವು ಷಟ್ಪದಂಗಳ್‌ ಉತ್ಕೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್

ʼಆ ತಾವರೆನಂಟನು ಮುಳುಗಿದ ಮೇಲೆ ಈ ತಾವರೆಗಳು ತುಂಬಾ ದುಃಖದಲ್ಲಿವೆ. ಇವುಗಳನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುವುದು ಸರಿಯಲ್ಲʼ ಎಂದು ತೀರ್ಮಾನ ಮಾಡಿದಂತೆ ಜೇನು ಹುಳಗಳು, ಲೆಕ್ಕವಿಲ್ಲದಷ್ಟು ಕೇಸರಗಳು ಒತ್ತೊತ್ತಾಗಿ ಸೇರಿಕೊಂಡ ತಾವರೆಯ ಮೊಗ್ಗೆಂಬ ಗುಡಿಸಲಿನಲ್ಲಿ ಬಿದ್ದುಕೊಂಡಿದ್ದವು.

ಉ||      ಚಂಡಮರೀಚಿಗಸ್ತಮಯಮಿಲ್ಲದುದೊಂದೆಡೆ ನಿಮ್ಮ ಕೇಳ್ದುದುಂ

ಕಂಡುದುಮುಳ್ಳೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪೆವೆಂದು ಮೆ|

ಯ್ಗೊಂಡೊಲವಿಂದಗಲ್ಕೆಗಣಮಾಱದೆ ಪಕ್ಕಿಗಳೆಲ್ಲಮಂ ಮರು

ಳ್ಗೊಂಡವೊಲೂಳ್ದು ಕೂಡೆ ಬೆಸಗೊಂಡು ಬೞಲ್ದುವು ಜಕ್ಕವಕ್ಕಿಗಳ್|| ೪೮||

ʼಚಂಡಮರೀಚಿಗೆ ಅಸ್ತಮಯಂ ಇಲ್ಲದ ಒಂದು ಎಡೆ ನಿಮ್ಮ ಕೇಳ್ದುದುಂ, ಕಂಡುದುಂ ಉಳ್ಳೊಡೆ ಇನ್ ಬೆಸಸಿಂ; ಆಂ ಇರದೆ ಅಲ್ಲಿಗೆ ಪೋಪೆವುʼ ಎಂದು ಮೆಯ್ಗೊಂಡ ಒಲವಿಂದ ಅಗಲ್ಕೆಗೆ ಅಣಂ ಆಱದೆ ಪಕ್ಕಿಗಳೆಲ್ಲಮಂ ಮರುಳ್ಗೊಂಡವೊಲ್‌ ಊಳ್ದು ಕೂಡೆ ಬೆಸಗೊಂಡು ಬೞಲ್ದುವು ಜಕ್ಕವಕ್ಕಿಗಳ್

ʼಬೆಂಗದಿರನು ಮುಳುಗದ ಒಂದು ಸ್ಥಳವನ್ನು ನೀವು ಎಲ್ಲಾದರೂ ಕೇಳಿದ್ದರೆ, ಕಂಡಿದ್ದರೆ ನಮಗೆ ಹೇಳಿರಿ. ನಾವು ಕೂಡಲೇ ಅಲ್ಲಿಗೆ ಹೋಗುತ್ತೇವೆʼ ಎಂದು, ಪ್ರೀತಿಯೇ ಮೈತಳೆದು, ಅಗಲಲು ಸಾಧ್ಯವೇ ಇಲ್ಲದೆ, ಅಲ್ಲಿನ ಹಕ್ಕಿಗಳನ್ನು ಹುಚ್ಚರಂತೆ ಕೂಗಾಡುತ್ತ ಕೇಳಿ, ಜಕ್ಕವಕ್ಕಿಗಳು ಬಳಲಿದವು.

ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ್ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಲೆ ಸಂಧ್ಯಾರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬೞಿಯಂ ಕ್ರಮಕ್ರಮದೊಳ್-

ಅಂತು ಕಮಳವನಂಗಳ್‌ ಆದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ, ಜಕ್ಕವಕ್ಕಿಗಳ್ ಸುರತಮಕರಧ್ವಜನ, ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡು ಅಸುಂಗೊಂಡು ಅಗಲೆ, ಸಂಧ್ಯಾರಾಗಂ ಅವರ ಮನದ ಅನುರಾಗಮನ್‌ ಅನುಕರಿಸುವಂತುಟಾಗೆ ಬೞಿಯಂ ಕ್ರಮಕ್ರಮದೊಳ್

ಹಾಗೆ, ತಾವರೆತೋಟದ ತಾವರೆ ಹೂಗಳು ಸೂರ್ಯನಿಗೆ ಕೈಮುಗಿಯುವ ಹಾಗೆ ಮುಚ್ಚಿಕೊಂಡವು. ಜಕ್ಕವಕ್ಕಿಗಳು ಅರ್ಜುನ-ಸುಭದ್ರೆಯರ ಅಗಲಿಕೆಯ ಕಾವನ್ನು ತಾವೂ ಪಾಲ್ಗೊಂಡು ಒಂದನ್ನೊಂದು ಅಗಲಿದವು. ಆಗ ಸಂಜೆಗೆಂಪು ಅವರ (ಅರ್ಜುನ-ಸುಭದ್ರೆಯರ) ಮನದ ಅನುರಾಗವನ್ನು ಅನುಕರಿಸುವಂತೆ ಕಾಣಿಸಿತು. ನಂತರ ನಿಧಾನವಾಗಿ-

ಮ||      ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇ

ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ|

ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಳ್ಪೊಯ್ದು ಕೞ್ಪೇಱೆ ಸೂ

ಚಿಸಲಾರ್ಗಂ ವಶಮಾಗದಂತು ಕವಿದತ್ತುದ್ದಾಮ ಭೀಮಂ ತಮಂ|| ೪೯||

ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ, ಕಾಲಮೇಘಸಮೂಹಂ ದೆಸೆಯೆಲ್ಲಮಂ ಕವಿದುದೋ, ಗಂಧೇಭ ಚರ್ಮಂಗಳಂ ಪಸರಂಗೆಯ್ದನೊ ಶಂಭು ಎಂಬ ಬಗೆಯಿಂ, ತಳ್ಪೊಯ್ದು ಕೞ್ಪು ಏಱೆ ಸೂಚಿಸಲ್‌ ಆರ್ಗಂ ವಶಂ ಆಗದಂತು ಕವಿದತ್ತು ಉದ್ದಾಮ ಭೀಮಂ ತಮಂ

ರಾಕ್ಷಸನೊಬ್ಬ ಜಗತ್ತೆಲ್ಲವನ್ನೂ ಮಸಿಯಲ್ಲಿ ಹೂತುಬಿಟ್ಟನೋ, ದಿಕ್ಕುಗಳೆಲ್ಲವನ್ನೂ ಕರಿಯ ಮೋಡಗಳು ಆವರಿಸಿಬಿಟ್ಟವೋ, ಶಿವನು (ಜಗತ್ತಿನ ಮೇಲೆ) ಸೊಕ್ಕಾನೆಯ ಚರ್ಮವನ್ನು ಹೊದಿಸಿಬಿಟ್ಟನೋ ಎಂಬಂತೆ ಘನವಾಗಿ ಕಪ್ಪು ಆವರಿಸಿತು; ಯಾರಿಗೂ ಭೇದಿಸಲು ಸಾಧ್ಯವಾಗದಂಥ, ಹೆದರಿಕೆ ಹುಟ್ಟಿಸುವ ಕತ್ತಲು ಕವಿಯಿತು.

ವ|| ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನಲೆಯಲಾಱವಾದುವು ಕನಕ ಪ್ರಾಸಾದ ಪಂಙ್ಕ್ತಿ ಗಳ್ ಪೞಪೞನೆ ಬೆಳಗುವ ಸೊಡರ್ಗಳನಾದಿತ್ಯನ ನಂಟರೆಂದು ತಮೋರಾಜಕಂ ಮುಳಿದು ಸೆರೆಗೆಯ್ದ ಬೆಳಗಿನ ಸೆರೆಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳೆಱಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖಿಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾಹಂಸಕುಳಂಗಳ್ ತಳವೆಳಗಾದುವು ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಷಾಂತರಾಳ ವಿವಿಧ ಗೃಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ-

ಆಗಳ್‌ ಆ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆ ಎನಿತು ಬೆಳಗಿಯುಂ ಕೞ್ತಲೆಯನ್‌ ಅಲೆಯಲಾಱವಾದುವು; ಕನಕ ಪ್ರಾಸಾದ ಪಂಙ್ಕ್ತಿ ಗಳ ಪೞಪೞನೆ ಬೆಳಗುವ ಸೊಡರ್ಗಳನ್‌ ಆದಿತ್ಯನ ನಂಟರೆಂದು ತಮೋರಾಜಕಂ ಮುಳಿದು ಸೆರೆಗೆಯ್ದ ಬೆಳಗಿನ ಸೆರೆಯ ಮನೆಗಳನ್ನವಾದುವು; ಮದಗಜ ಗಂಡಸ್ಥಳಂಗಳೊಳ್‌ ಎಱಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖೀಭೂತಂಗಳಾದುವು; ತಂಡತಂಡದೆ ಓಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನ ಉಪವನ ದೀರ್ಘಿಕಾಹಂಸಕುಳಂಗಳ್ ತಳವೆಳಗಾದುವು; ರಾಜಹಂಸಪಾರಾವತಮಿಥುನಂಗಳ್‌ ಉತ್ತುಂಗಪ್ರಾಸಾದಶಿಖರ ಮಣಿಗವಾಕ್ಷ ಅಂತರಾಳ ವಿವಿಧ ಗೃಹಾಂತರಗತಂಗಳಾದುವು; ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಂ ಆದಂತೆ ಲೋಹಿತಾಂಗನ್‌ ಆಗೆ

ಆಗ ಆ ನಕ್ಷತ್ರಗಳ ಗುಂಪು ದೆಸೆವೆಣ್ಣುಗಳ ಕಿರೀಟದ ಮಾಣಿಕ್ಯಗಳಂತೆ ಎಷ್ಟು ಬೆಳಗಿದರೂ ಸಹ ಕತ್ತಲೆಯನ್ನು ಕಡಿಮೆ ಮಾಡಲಾರದೆ ಹೋದವು. ಹಾಗೆ ಸಾಲುಸಾಲಾದ ಬಂಗಾರದ ಮಹಲುಗಳಲ್ಲಿನ  ಸೊಡರುಗಳು ಪಳಪಳನೆ ಬೆಳಗುತ್ತಿದ್ದಾಗ, ಆ ಸೊಡರುಗಳನ್ನು, ಕತ್ತಲರಾಜನು ಸೂರ್ಯನ ನಂಟರು ಎಂದು ಭಾವಿಸಿ, ಕೋಪಗೊಂಡು, ಬಂಧಿಸಿಟ್ಟನು; ಆಗ ಆ ಬಂಗಾರದ ಮಹಲುಗಳು ಬೆಳಕಿನ ಸೆರೆಮನೆಗಳಂತಾದವು. ಮದಿಸಿದ ಆನೆಗಳ ಗಂಡಸ್ಥಳಗಳಿಗೆ ಎರಗಿ ಮೊರೆಯುವ ಜೇನು ಹುಳಗಳ ಗುಂಪು ಮುಖ ತಿರುಗಿಸಿ (ತಮ್ಮ ಗೂಡಿನ ಕಡೆಗೆ) ಹಾರಿಹೋದವು; ಗುಂಪುಗುಂಪಾಗಿ ಓಲಗಕ್ಕೆ ಹೋಗುವ, ಅಲ್ಲಿಂದ ಹೊರಡುವ ವೈಯಾರಿಸೂಳೆಯರ ಕಾಲ್ಗೆಜ್ಜೆಯ ಕಿಣಿಕಿಣಿ ನಾದದಿಂದ ಅರಮನೆಯ ಉದ್ಯಾನವನದ ಕೊಳದಲ್ಲಿದ್ದ ಹಂಸಗಳ ಗುಂಪು ಗೊಂದಲಗೊಂಡವು. ರಾಜಹಂಸಗಳ ಮತ್ತು ಪಾರಿವಾಳಗಳ ಜೋಡಿಗಳು ಎತ್ತರವಾದ ಭವನಗಳ ತುಟ್ಟತುದಿಯಲ್ಲಿದ್ದ ಗವಾಕ್ಷಿಗಳ ಒಳಗಿದ್ದ ತಮ್ಮ ಗೂಡುಗಳ  ಒಳಸೇರಿಕೊಂಡವು. ಹುಟ್ಟುಬೆಟ್ಟದ ತಪ್ಪಲಿನ ಗವಿಯ ಮುಸುಕು ತೊಟ್ಟ ಚಂದ್ರನು ಸಿಂಹವು ಸೀಳಿಹಾಕಿದ ಜಿಂಕೆಯ ರಕ್ತದ ರಾಶಿಯನ್ನ ಬಳಿದುಕೊಂಡಂತೆ ಕೆಂಪಾದನು. ಆಗ-

ಮ||      ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನಾತ್ಮಾಂಗದೊಳ್ ರೋಹಿಣೀ

ಚರಣಾಲಕ್ತಕ ರಾಗಮಚ್ಚಿಱಿದುದೋ ಮೇಣ್ ಕಾಮಿಗಳ್ಗೀವ ರಾ|

ಗರಸಂ ಪೊಣ್ಮಿದುದೋ ತಮೋಗಜದ ಕೋಡೇಱಿಂದಮೇಂ ನೊಂದುದೋ

ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ|| ೫೦ ||

ʼನೆರೆದೈ ಸಂಜೆಯೊಳ್‌?ʼ ಎಂದು ಕಾಯ್ದು ಒದೆದೊಡೆ ಏನ್‌ ಆತ್ಮಾಂಗದೊಳ್ ರೋಹಿಣೀಚರಣಾಲಕ್ತಕ ರಾಗಂ ಅಚ್ಚಿಱಿದುದೋ, ಮೇಣ್ ಕಾಮಿಗಳ್ಗೆ ಈವ ರಾಗರಸಂ ಪೊಣ್ಮಿದುದೋ, ತಮೋಗಜದ ಕೋಡ ಏಱಿಂದಂ ಏಂ ನೊಂದುದೋ ಹರಿಣಂ ತಾನ್‌ ಎನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ

“ಏನು ಸಂಜೆವೆಣ್ಣಿನ ಜೊತೆ ಕೂಡಿದೆಯಾ?” ಎಂದು ಕಾಯಿಸಿ ಒದೆದಾಗ, ತನ್ನ ಮೈಮೇಲೆ ರೋಹಿಣಿಯ (ಚಂದ್ರನ ಪತ್ನಿ) ಕಾಲುಗಳಿಗೆ ಬಳಿದ ಅರಗಿನ ಕೆಂಬಣ್ಣದ ಅಚ್ಚು ಬಿದ್ದಿತೋ;  ಕಾಮಿಗಳಿಗೆ ಕೊಡುವ ಕಾಮವರ್ಧನಕಾರಿಯಾದ ರಸವೇ ಹೊರಹೊಮ್ಮಿತೋ; ಕತ್ತಲಾನೆಯ ಕೋಡಿನ ಗಾಯದಿಂದ (ತನ್ನ ಮೈಮೇಲಿದ್ದ) ಜಿಂಕೆಗೇನಾದರೂ (ರಕ್ತ ಸುರಿಯುವಂಥ) ಗಾಯವಾಯಿತೋ ಎನ್ನುವ ಹಾಗೆ ಅಮೃತಕಿರಣನಾದ ಚಂದ್ರನ ಕೆಂಪುಕಾಂತಿಯು ಕಾಣಿಸಿತು.

ಮ||      ಮುನಿದೀಶಂ ತವೆ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಮಮಂ

ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮ|

ಜ್ಜನಕೆಂದೆತ್ತಿದ ಚಂದ್ರಕಾಂತ ಘಟದೊಳ್ ತಂದೞ್ತಿಯಿಂ ಪುಷ್ಪ ವಾ

ಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕಱ್ಪಿಂದುವಾ|| ೫೧||

ಮುನಿದು ಈಶಂ ತವೆ ಸುಟ್ಟು ಮುಂ, ಕರುಣದಿಂದ ಇತ್ತಂ ಪುನರ್ಜನ್ಮಮಂ ನಿನಗೆ ಎಂದು. ಆ ರತಿ. ಪಾಪಮುಂ ಪಡಣಮುಂ ಪೋಪಂತೆ. ಕಾಮಂಗೆ ಮಜ್ಜನಕೆಂದು ಎತ್ತಿದ ಚಂದ್ರಕಾಂತ ಘಟದೊಳ್ ತಂದು ಅೞ್ತಿಯಿಂ ಪುಷ್ಪ ವಾಸನೆಗೆಂದು ಇಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕಱ್ಪು ಇಂದುವಾ

ʼಶಿವನು ಮೊದಲು ಕೋಪದಿಂದ ನಿನ್ನನ್ನು ಸುಟ್ಟರೂ, ನಂತರ ಕರುಣೆ ತೋರಿಸಿ ನಿನಗೆ ಪುನರ್ಜನ್ಮವನ್ನು ಕೊಟ್ಟಿದ್ದಾನೆʼ ಎಂದು, ರತಿಯು ತನ್ನ ಗಂಡನಾದ ಮನ್ಮಥನ ಪಾಪ, ಬೀಳುಗಳು ಕಳೆಯುವಂತೆ ಮಜ್ಜನ ಮಾಡಿಸಲೆಂದು ಚಂದ್ರಕಾಂತ ಶಿಲೆಯ ಕೊಡಪಾನದಲ್ಲಿ ನೀರನ್ನು ತಂದಿಟ್ಟು, ಆ ನೀರು ಪರಿಮಳಿಸಲೆಂದು ಉದ್ದವಾದ ಕನ್ನೈದಿಲೆಯನ್ನು ಆ ಕೊಡಪಾನದಲ್ಲಿ ಹಾಕಿಟ್ಟಂತೆ ಉದಿಸಿದ ಚಂದ್ರನ ಕಪ್ಪು (ಕಲೆಯು?) ಕಾಣಿಸುತ್ತಿತ್ತು.

(ಟಿಪ್ಪಣಿ: ಇಲ್ಲಿ ಚಂದ್ರಕಾಂತ ಶಿಲೆಯ ಕೊಡಪಾನ ಅಥವಾ ಕಲಶವು ಚಂದ್ರನಾದರೆ ಅದರೊಳಗಿನ ಕನ್ನೈದಿಲೆ ಚಂದ್ರನ ಮೇಲಿನ ಕಪ್ಪುಕಲೆ. ಚಂದ್ರಕಾಂತ ಶಿಲೆಯ ಕೊಡಪಾನ ಎಂದಾಗ ಪಾರದರ್ಶಕ ಕೊಡಪಾನ ಎಂಬ ಸೂಚನೆ ಇರಬಹುದು.)

ಕಂ||     ಆವರಿಸಿತ್ತೊ ನಭೋಂತ

ರ್ಭೂವಿವರಮನಮರ್ದಿನೆಸಕಮೆನೆ ವಿರಹಿಗಳೋ|

ವೋವಿದು ಮದನನ ಸೋದನ

ದೀವಿಗೆಯೆನೆ ತೊಳಗಿ ಬೆಳಗಿದಂ ತುಹಿನಕರಂ||೫೨||

ಆವರಿಸಿತ್ತೊ ನಭ ಅಂತರ ಭೂವಿವರಮನ್‌ ಅಮರ್ದಿನ ಎಸಕಂ ಎನೆ, ವಿರಹಿಗಳ್‌ ಓ ಓ ಇದು ಮದನನ ಸೋದನ ದೀವಿಗೆಯೆನೆ ತೊಳಗಿ ಬೆಳಗಿದಂ ತುಹಿನಕರಂ

ಭೂಮಿ ಚಂದ್ರರ ನಡುವಿನ ಅಂತರವನ್ನು ಅಮೃತದಂತಹ ಬೆಳದಿಂಗಳ ಬೆಳಕು ಆವರಿಸಿಕೊಂಡಿತೋ ಎಂಬಂತೆ; ವಿರಹಿಗಳು ʼಕಾಪಾಡಿ, ಕಾಪಾಡಿ, ಇದು ವಿರಹಿಗಳನ್ನು ಹುಡುಕುತ್ತಿರುವ ಚಂದ್ರನ ಕೈಯ ದೀವಿಗೆʼ ಎಂದು ಕೂಗುವಂತೆ ಚಂದ್ರನು (ಆಕಾಶದಲ್ಲಿ) ಪ್ರಕಾಶಿಸಿದನು.