ಪಂಪಭಾರತ ಆಶ್ವಾಸ ೪(೯೯ರಿಂದ೧೦೫)

 

ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು-

…… ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದ ಆಣ್ಮನಂ ಪಿಡಿದು

….. ಮತ್ತೊಬ್ಬಳು ಬೇಟಕಾತಿಯು, ತಾಯಿಯ ಕಣ್ಣು ತಪ್ಪಿಸಿ ತನ್ನ ಮೋಹದ ಹೆಣ್ಣಿನ ಮನೆಗೆ ಹೋಗುವ ಬೇಟಕಾರನನ್ನು ಅಡ್ಡಗಟ್ಟಿ ಹಿಡಿದು-

ಟಿಪ್ಪಣಿ: ಇಲ್ಲಿ ʼತಾಯ ಕಣ್ಣಂ ಬಂಚಿಸಿʼ ಎನ್ನುವಲ್ಲಿ ಈ ʼಬೇಟದಾಣ್ಮʼನ ಎಲ್ಲೆಂದರಲ್ಲಿ ತಿರುಗುವ ಚಾಳಿಯನ್ನು ಕವಿ ಸೂಚಿಸುತ್ತಿದ್ದಾನೆ. ಪರಿಸ್ಥಿತಿ ಇವನ ತಾಯಿ ಇವನ ಮೇಲೆ ಕಣ್ಣಿಟ್ಟು ಕಾಯಬೇಕಾದ ಹಂತವನ್ನು ಮುಟ್ಟಿದೆ. ಅವನು ಹೊರಟಿರುವುದು ತನ್ನ ʼಮೋಪಿನಾಕೆʼಯ ಮನೆಗೆ. ಆದರೆ ದಾರಿಯಲ್ಲಿ ಅವನಿಗೆ ಬೇರೊಬ್ಬಳು ಗಂಟುಬಿದ್ದು ತನ್ನ ಜತೆಗೆ ಎಳೆದುಕೊಂಡು ಹೋಗುತ್ತಾಳೆ!

ಉ|| ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್ವಿಡಿದಟ್ಟಿ ಕಣ್ಣ ನೀರ್

ತಪ್ಪುವು ನಿಚ್ಚಮಚ್ಚಿಗದೊಳೞ್ತು ಕರಂ ಬಿಸುಸುಯ್ಯೆ ಸುಯ್ದ ಸುಯ್|

ತಪ್ಪುದು ತಪ್ಪುದೆನ್ನ ತನು ಬೇಟದ ಕಾಟದೊಳಿಂತು ಕಂಡುಮಿ

ನ್ನಪ್ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ|| ೯೯||

ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್‌ ಪಿಡಿದು ಅಟ್ಟಿ, ಕಣ್ಣ ನೀರ್ ತಪ್ಪುವು ನಿಚ್ಚಂ ಅಚ್ಚಿಗದೊಳ್‌ ಅೞ್ತು, ಕರಂ ಬಿಸುಸುಯ್ಯೆ ಸುಯ್ದ ಸುಯ್ ತಪ್ಪುದು, ತಪ್ಪುದೆನ್ನ ತನು ಬೇಟದ ಕಾಟದೊಳ್‌, ಇಂತು ಕಂಡುಂ ಇನ್‌ ಅಪ್ಪೊಡಂ ಆಸೆವಾತನ್‌ ಎನಗೆ ಓಪನೆ ನೀಂ ದಯೆಗೆಯ್ಯಲ್‌ ಆಗದೇ?

ದೂತರ ಕೈಯಲ್ಲಿ ಅವರ ಕಾಲು ಹಿಡಿದು ಕಳಿಸಿಕೊಟ್ಟ ಸಂದೇಶ ನಿರರ್ಥಕವಾಗುತ್ತಿದೆ; ನಿತ್ಯವೂ ದುಃಖದಿಂದ ಸುರಿಸುವ ಕಣ್ಣೀರು ವ್ಯರ್ಥವಾಗುತ್ತಿದೆ; ಬಿಡುವ ನಿಟ್ಟುಸಿರು ದಂಡವಾಗುತ್ತಿದೆ; ನನ್ನ ಶರೀರ ಬೇಟದಾಸೆಯ ಕಾಟದಿಂದ ಕಡ್ಡಿಯಾಗಿ ಹೋಗಿದೆ. ಇದನ್ನೆಲ್ಲ ಕಂಡ ನೀನು ಇನ್ನಾದರೂ ನನಗೆ ಇಷ್ಟವಾಗುವ ಒಂದು ಮಾತನ್ನು ಕರುಣಿಸಲಾರೆಯಾ?

ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆಯೊಳೊರ್ವಳ್ ಕುಂಟಣಿಯುಪರೋಧಕ್ಕೆ ಪಿರಿದೀವ ಮುದುಪನನುೞಿಯಲಂಜಿ ತನ್ನ ಬೇಸಱಂ ತನ್ನ ಸಬ್ಬವದಾಕೆಗಿಂತೆಂದಳ್-

ಎಂದು ಕರುಣಂಬಡೆ ನುಡಿದು ಒಡಗೊಂಡು ಪೋದಳ್. ಮತ್ತಂ ಒಂದೆಡೆಯೊಳ್‌ ಒರ್ವಳ್ ಕುಂಟಣಿಯ ಉಪರೋಧಕ್ಕೆ ಪಿರಿದು ಈವ ಮುದುಪನನ್‌ ಉೞಿಯಲ್‌ ಅಂಜಿ, ತನ್ನ ಬೇಸಱಂ ತನ್ನ ಸಬ್ಬವದಾಕೆಗೆ ಇಂತೆಂದಳ್:

ಎಂದು ಕರುಣೆ ಹುಟ್ಟುವಂತೆ ಮಾತನಾಡಿ (ಅವನನ್ನು) ಜೊತೆಗೆ ಕರೆದುಕೊಂಡು ಹೋದಳು. ಮತ್ತೊಂದು ಕಡೆಯಲ್ಲಿ ಒಬ್ಬಳು, ಕುಂಟಣಿಯ ಒತ್ತಾಯಕ್ಕೆ ಸಿಕ್ಕು, ಧಾರಾಳ ಹಣ ಕೊಡುವ ಮುದುಕನನ್ನು ಬಿಡಲು ಹೆದರಿ, ತನ್ನ ಸಂಕಟವನ್ನು ತನ್ನ ಗೆಳತಿಯೊಂದಿಗೆ ಹೀಗೆ ಹೇಳಿಕೊಂಡಳು:

ಚಂ|| ಕೊರೆವೊಡೆ ಬೆಟ್ಟುಗಳ್ ಬಿರಿವುವುಣ್ಮುವ ಲಾಳೆಯ ಲೋಳೆಗಳ್ ಪೊನ

ಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದೆಂ|

ದಿರದೆರ್ದೆಗಪ್ಪುದತ್ತಳಗಮಾ ನೆರೆಪಂ ನೆರೆವಂದು ಪೊಂಗಳಂ

ಸುರಿವೊಡಮಾರೊ ಸೈರಿಸುವರಾತನ ಪಲ್ಲಿಲಿವಾಯ ನಾತಮಂ|| ೧೦೦||

ಕೊರೆವೊಡೆ ಬೆಟ್ಟುಗಳ್ ಬಿರಿವುವು! ಉಣ್ಮುವ ಲಾಳೆಯ ಲೋಳೆಗಳ್ ಪೊನಲ್‌ ಪರಿವುವು! ಕೆಮ್ಮಿ ಕುಮ್ಮಿದೊಡೆ ʼತೋಳೊಳೆ ಜೀವ ವಿಯೋಗಂ ಅಪ್ಪುದುʼ ಎಂದು ಇರದೆ ಎರ್ದೆಗೆ ಅಪ್ಪುದು ಅತ್ತಳಗಂ! ಆ ನೆರೆಪಂ ನೆರೆವಂದು ಪೊಂಗಳಂ ಸುರಿವೊಡಂ ಆರೊ ಸೈರಿಸುವರ್‌ ಆತನ ಪಲ್ಲಿಲಿವಾಯ ನಾತಮಂ!?

(ಆ ಮುದುಕನು)ಗೊರಕೆ ಹೊಡೆಯುವ ಸದ್ದಿಗೆ ಬೆಟ್ಟಗಳೇ ಅದುರಿ ಬಿರಿಯುತ್ತವೆ! (ಅವನ ಬಾಯಿಂದ) ಜೊಲ್ಲಿನ ಲೋಳೆಯ ಪ್ರವಾಹವೇ ಹರಿಯುತ್ತದೆ! ಕೆಮ್ಮಲು ಶುರುಮಾಡಿದನೆಂದರೆ ʼಎಲ್ಲಿ ನನ್ನ ತೋಳಲ್ಲೇ ಜೀವ ಬಿಟ್ಟುಬಿಡುತ್ತಾನೋʼ ಎಂದು ಆತಂಕವಾಗುತ್ತದೆ! (ಅಂಥ) ಆ ಮುದುಕ ಕೂಡಲು ಬಂದು ಚಿನ್ನದ ನಾಣ್ಯಗಳನ್ನೇ (ನನ್ನೆದುರು) ಸುರಿದರೂ, ಅಯ್ಯೋ, ಅವನ ಹಲ್ಲಿಲ್ಲದ ಬಾಯಿಯ ಆ ದುರ್ನಾತವನ್ನು ಯಾರು ತಾನೇ ಸಹಿಸಬಲ್ಲರು?

ವ|| ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಲನಲ್ಲಿಗೆ ದೂದುವೋಗಿ ಬಂದ ದೂದವಿಗೇಗೆಯ್ವ ತೆಱನುಮನಱಿಯದೆ ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು-

ಎಂದು ನಗಿಸುತ್ತಿರ್ದಳ್! ಮತ್ತಂ ಒಂದೆಡೆಯೊಳ್‌ ಒರ್ವಳ್ ತನ್ನ ನಲ್ಲನಲ್ಲಿಗೆ ದೂದುವೋಗಿ ಬಂದ ದೂದವಿಗೆ ಏಗೆಯ್ವ ತೆಱನುಮನ್‌ ಅಱಿಯದೆ, ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು

ಎಂದು ನಗಿಸುತ್ತಿದ್ದಳು! ಮತ್ತೊಂದು ಕಡೆಯಲ್ಲಿ ಒಬ್ಬಳು ತನ್ನ ನಲ್ಲನ ಕಡೆಯಿಂದ ಸುದ್ದಿ ತರಲೆಂದು  ಹೋಗಿ ಬಂದ ದೂತಿಗೆ ಏನು ಮಾಡಬೇಕೋ ಅದನ್ನು ಮರೆತು (ಎಂದರೆ ದೂತಿಗೆ ಸುದ್ದಿ ತಂದಿದ್ದಕ್ಕಾಗಿ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸದೆ) ಅವಳು ತಂದ ಸುದ್ದಿಯನ್ನೇ ಇಷ್ಟಪಟ್ಟು ಕೇಳುತ್ತಿರುವವಳನ್ನು ಕಂಡು

ಚಂ|| ಬಿರಯಿಸಿ ಬೇಟದೊಳ್ ಬಿರಿವ ನಲ್ಲರಗಲ್ದು ಕನಲ್ದೊನಲ್ದು ನ

ಲ್ಲರ ದೆಸೆಯಿಂದಮೞ್ತಿವರೆ ಕೋಗಿಲೆಯಕ್ಕೆಲರಕ್ಕೆ ತುಂಬಿಯ|

ಕ್ಕರಗಿಳಿಯಕ್ಕೆ ಬಂದೊಡಮೊಱಲ್ದೆರ್ದೆಯಾಱುವರೆಂದೊಡೋತ ದೂ

ತರೆ ತರೆ ಬಂದ ಸಬ್ಬವದ ಮಾತುಗಳಂ ಗುಡಿಗಟ್ಟಿ ಕೇಳರೇ ||೧೦೧||

ಬಿರಯಿಸಿ ಬೇಟದೊಳ್ ಬಿರಿವ ನಲ್ಲರ್‌ ಅಗಲ್ದು, ಕನಲ್ದು, ಒನಲ್ದು, ನಲ್ಲರ ದೆಸೆಯಿಂದಂ ಅೞ್ತಿವರೆ ಕೋಗಿಲೆಯಕ್ಕೆ ಎಲರಕ್ಕೆ ತುಂಬಿಯಕ್ಕೆ ಅರಗಿಳಿಯಕ್ಕೆ ಬಂದೊಡಂ ಒಱಲ್ದು ಎರ್ದೆಯಾಱುವರ್‌ ಎಂದೊಡೆ, ಓತ ದೂತರೆ ತರೆ ಬಂದ ಸಬ್ಬವದ ಮಾತುಗಳಂ ಗುಡಿಗಟ್ಟಿ ಕೇಳರೇ?

ಪ್ರೀತಿ ತುಂಬಿದ ನಲ್ಲರು ಅಗಲಿದ್ದರಿಂದ ವಿರಹಕ್ಕೊಳಗಾಗಿ ಕೋಪದಿಂದ ಕೆರಳುತ್ತಾರೆ. (ಕೊನೆಗೆ ನಲ್ಲರ ಸಂದೇಶಕ್ಕೆ ಕಾಯುತ್ತ) ಕೋಗಿಲೆಯೋ, ಮೆಲ್ಲನೆ ಬೀಸುವ ಗಾಳಿಯೋ, ತುಂಬಿಯೋ, ಅರಗಿಳಿಯೋ ಬಂದರೂ ಅವು ನಲ್ಲರ ಕಡೆಯಿಂದ  ಪ್ರೀತಿಯ ಮಾತುಗಳನ್ನು ತಂದಿವೆ ಎಂದು (ತಮಗೆ ತಾವೇ ಕಲ್ಪಿಸಿಕೊಂಡು)   ಸಮಾಧಾನಪಟ್ಟುಕೊಳ್ಳುತ್ತಾರೆ. ಹೀಗಿರುವಾಗ ನೆಚ್ಚಿನ ದೂತರೇ ತಂದ ಒಲುಮೆಯ ಸಂದೇಶ ಬಂದಾಗ ಅದನ್ನು ಕೇಳಿದ ನಲ್ಲೆಯರು (ಮೈಮರೆತು) ರೋಮಾಂಚನಗೊಳ್ಳರೇ?

ವ|| ಅಂತುಮಲ್ಲದೆಯುಂ-

ಅದೂ ಅಲ್ಲದೆ

ಚಂ|| ಮನದೊಳಲಂಪನಾಳ್ದಿನಿಯನಟ್ಟಿದ ದೂದರ ಸೀಯನಪ್ಪ ಮಾ

ತಿನ ರಸದೊಳ್ ಕೊನರ್ವುದು ತಳಿರ್ವುದು ಪೂವುದು ಕಾಯ್ವುದಂತು ಕಾ

ಯ್ತನಿತರೊಳಂತು ನಿಂದು ಮನದೊಳ್ ತೊದಳಿಲ್ಲದ ನಲ್ಮೆಯೆಂಬ ನಂ

ದನವನಮೋಪರೊಳ್ ನೆರೆದೊಡಂತು ರಸಂ ಬಿಡೆ ಪಣ್ತುದಾಗದೇ|| ೧೦೨||

ಮನದೊಳ್‌ ಅಲಂಪನ್‌ ಆಳ್ದು ಇನಿಯನ್‌ ಅಟ್ಟಿದ ದೂದರ ಸೀಯನಪ್ಪ ಮಾತಿನ ರಸದೊಳ್ ಕೊನರ್ವುದು, ತಳಿರ್ವುದು, ಪೂವುದು, ಕಾಯ್ವುದು ಅಂತು ಕಾಯ್ತು ಅನಿತರೊಳ್‌ ಅಂತು ನಿಂದು ಮನದೊಳ್ ತೊದಳಿಲ್ಲದ ನಲ್ಮೆಯೆಂಬ ನಂದನವನಂ ಓಪರೊಳ್ ನೆರೆದೊಡೆ ಅಂತು ರಸಂ ಬಿಡೆ ಪಣ್ತುದಾಗದೇ

ಮನಸ್ಸಿನಲ್ಲಿ ಸಂತೋಷ ತುಂಬಿಕೊಂಡ ಇನಿಯನು ಕಳಿಸಿಕೊಟ್ಟ ದೂತರ ಸಿಹಿ ಮಾತಿನ ರಸದಲ್ಲಿ (ರಸ ಹೀರಿ) ನಲ್ಲೆಯರ ಪ್ರೀತಿ ಎಂಬ ನಂದನವನವು ಮೊಳಕೆಯೊಡೆದು, ಚಿಗುರಿ, ಹೂಬಿಟ್ಟು, ಕಾಯಾಗಿ ಕಾಯುತ್ತ ನಿಲ್ಲುತ್ತದೆ. ಅಗಲಿದ ನಲ್ಲ ನಲ್ಲೆಯರು ಯಾವಾಗ ಒಂದಾಗುತ್ತಾರೋ ಆಗ ಆ ಕಾಯಿ ರಸ ಒಸರುವಂಥ ಹಣ್ಣಾಗುತ್ತದೆಯಲ್ಲವೆ?

ವ|| ಅಂತುಮಲ್ಲದೆಯುಂ-

ಅದೂ ಅಲ್ಲದೆ

ಚಂ|| ಅನುವಿಸೆ ಬೇಟಕಾಱನೊಲವಿರ್ಮಡಿಯಪ್ಪುದು ಬಯ್ಯೆ ಬೇಟಕಾ

ಱನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಿಸೆ ಬೇಟ ಬೇಟಕಾ|

ಱನ ರುಚಿ ಬಂಬಲುಂ ತುಱುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ

ಱನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ|| ೧೦೩ ||

ಅನುವಿಸೆ ಬೇಟಕಾಱನ, ಒಲವು ಇರ್ಮಡಿಯಪ್ಪುದು; ಬಯ್ಯೆ ಬೇಟಕಾಱನ, ಬಗೆ ನಿಲ್ಲದಿಕ್ಕೆಗೆ ಒಳಗಪ್ಪುದು; ನಿಟ್ಟಿಸೆ ಬೇಟಕಾಱನ, ಬೇಟ ರುಚಿ ಬಂಬಲುಂ ತುಱುಗಲುಂ ಕೊಳುತಿರ್ಪುದು; ನೂಂಕೆ ಬೇಟಕಾಱನ, ಮನವಟ್ಟಿ ಪತ್ತುವುದು, ಬೇಟವಿದೇಂ ವಿಪರೀತವೃತ್ತಿಯೋ?

ನಲ್ಲನನ್ನು ತಾತ್ಸಾರ ಮಾಡಿದರೆ ನನಗೆ ಅವನ ಮೇಲಿನ ಪ್ರೀತಿ ಇಮ್ಮಡಿಯಾಗುತ್ತದೆ! ಅವನನ್ನು ಬೈದರೆ ನನ್ನ ಮನಸ್ಸು ಒಳಗೊಳಗೇ ಕಳವಳಗೊಳ್ಳುತ್ತದೆ! ಅವನನ್ನು ದುರುಗುಟ್ಟಿ ನೋಡಿದರೆ ನನ್ನ ಪ್ರೀತಿಯ ಸವಿ ಸೊಂಪಾಗಿ ಬೆಳೆಯುತ್ತದೆ! ಅವನನ್ನು (ದೂರ ಹೋಗು ಎಂದು) ನೂಕಿದರೆ ನನ್ನ ಮನಸ್ಸು ಅವನನ್ನೇ ಹಿಂಬಾಲಿಸಿ ಅವನಿಗೆ ಅಂಟಿಕೊಳ್ಳುತ್ತದೆ! ಈ ಪ್ರೀತಿ ಎನ್ನುವುದು ನಿಜವಾಗಿ ಒಂದು ಹುಚ್ಚೇ ಅಲ್ಲವೆ? (ತಿರುಗುಬಾಣವೇ ಅಲ್ಲವೆ?)

ಟಿಪ್ಪಣಿ: ಇಲ್ಲಿ ಬರುವ ʼಅನುವಿಸಿʼ ಎಂಬ ಶಬ್ದವನ್ನು ಪಂಪನು ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಿಸಿರುವುದನ್ನು ಡಾ. ಪಿ.ವಿ.ನಾರಾಯಣ ಅವರು ಗುರುತಿಸಿ ಹೇಳಿದ್ದಾರೆ. ಆದರೆ ಆ ಯಾವ ಅರ್ಥಗಳೂ ಇಲ್ಲಿಯ ಸಂದರ್ಭಕ್ಕೆ ಹೊಂದುವುದಿಲ್ಲ. ಡಿ.ಎಲ್.‌ ನರಸಿಂಹಾಚಾರ್‌ ಅವರು ʼಒತ್ತಾಯಿಸುʼ ಎಂಬ ಅರ್ಥ ನೀಡಿದ್ದಾರೆ. ಆದರೆ ಆ ಅರ್ಥವೂ ಇಲ್ಲಿಗೆ ಸಮರ್ಪಕವಾಗಿ ಹೊಂದುವುದಿಲ್ಲ.

ಪದ್ಯದಲ್ಲಿ ಅನುವಿಸು, ಬಯ್ಯು, ನಿಟ್ಟಿಸು ಮತ್ತು ನೂಂಕು ಎಂಬ ನಾಲ್ಕು ಪದಗಳಿವೆ. ಈ ಪೈಕಿ ಬಯ್ಯು, ನಿಟ್ಟಿಸು (ದುರುಗಟ್ಟಿ ನೋಡು?) ಮತ್ತು ನೂಂಕು ಎಂಬ ಮೂರು ಶಬ್ದಗಳ ಅರ್ಥ ಮತ್ತು ಪ್ರಯೋಗಗಳನ್ನು ಆಧಾರವಾಗಿ ಇಟ್ಟುಕೊಂಡರೆ ʼಅನುವಿಸಿʼ ಪದಕ್ಕೆ ತಾತ್ಸಾರ ಮಾಡು ಅಥವಾ ತಿರಸ್ಕರಿಸು ಎಂಬ ಅರ್ಥವು ಹೊಂದುತ್ತದೆ. ಹಾಗಾಗಿ ಆ ಅರ್ಥವನ್ನು ಇಲ್ಲಿ ಇಟ್ಟುಕೊಂಡಿದೆ.

ಇನ್ನು ʼವಿಪರೀತ ವೃತ್ತಿʼ ಎಂದರೇನು? ತೀ.ನಂ. ಶ್ರೀಕಂಠಯ್ಯನವರ ʼಭಾರತೀಯ ಕಾವ್ಯಮೀಮಾಂಸೆʼ ಗ್ರಂಥದ ʼಶಬ್ದ-ಅರ್ಥʼ ಎಂಬ ಅಧ್ಯಾಯದಲ್ಲಿ (ಪು. ೧೯೮) ʼವಿಪರೀತ ಲಕ್ಷಣೆʼಯ ಅರ್ಥವನ್ನು ಹೀಗೆ ವಿವರಿಸಿದ್ದಾರೆ: “ಒಬ್ಬನು ಇನ್ನೊಬ್ಬನನ್ನು ಕುರಿತು “ತಾವು ದೊಡ್ಡವರು; ನನ್ನ ಹತ್ತಿರಕ್ಕೆ ಬರಬೇಡಿ” ಎಂದು ಹೇಳುವುದುಂಟು. ಇಲ್ಲಿ ವಾಕ್ಯದ ಅನ್ವಯವೇನೋ ಹೊಂದುತ್ತದೆ; ಆದರೆ ಸಂಬೋಧನೆಗೆ ವಿಷಯವಾಗಿರುವ ವ್ಯಕ್ತಿಯನ್ನು ದೊಡ್ಡವನೆಂದು ಕರೆದು ಗೌರವಿಸುವುದು ವಕ್ತೃವಿನ ತಾತ್ಪರ್ಯವಲ್ಲವೆಂದು ಥಟ್ಟನೆ ಗೊತ್ತಾಗುತ್ತದೆ. ಇಲ್ಲಿ “ದೊಡ್ಡವರು” ಎಂಬುದಕ್ಕೆ “ನೀಚ, ಅಯೋಗ್ಯ” ಎಂಬುದು ಲಕ್ಷ್ಯಾರ್ಥ. ವಾಚ್ಯಾರ್ಥಕ್ಕೆ ಪೂರ್ಣ ವಿರುದ್ಧವಾಗಿರುವ ಅರ್ಥ ಇದು; ಈ ವಿರೋಧ ಅಥವಾ ವೈಪರೀತ್ಯವೇ ಇಲ್ಲಿ ಇವೆರಡಕ್ಕೂ ಇರುವ ಸಂಬಂಧ. ಈ ಪ್ರಭೇದಕ್ಕೆ “ವಿಪರೀತ ಲಕ್ಷಣಾ” ಎಂದು ಹೆಸರು….”. ವಿಪರೀತ ಲಕ್ಷಣೆಯ ಈ ಅರ್ಥವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಪಂಪನು ʼವಿಪರೀತ ವೃತ್ತಿʼ ಎಂದು ಇಲ್ಲಿ ಬಳಸಿರುವಂತೆ ತೋರುತ್ತದೆ.

ವ|| ಇಂದುಮೀ ದೂದವರೆಂಬರ್ ಬೇಟಕಾಱರ ಬೇಟಮೆಂಬ ಲತೆಗಳಡರ್ಪಿರ್ಪಂತಿರ್ದರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಸೆ ಕಿಡುವುದಂತುಮಲ್ಲದೆಯುಂ-

ಇಂದುಂ ಈ ದೂದವರೆಂಬರ್ ಬೇಟಕಾಱರ ಬೇಟಮೆಂಬ ಲತೆಗಳ ಅಡರ್ಪು ಇರ್ಪಂತಿರ್ದರ್‌. ಎಂತಪ್ಪ ಬೇಟಂಗಳುಂ ಅವರ್ ಪೊಸಯಿಸೆ ಪೊಸತಪ್ಪುದು, ಕಿಡಿಸೆ ಕಿಡುವುದು; ಅಂತುಂ ಅಲ್ಲದೆಯುಂ-

ಇಂದಿನ ದಿನಗಳಲ್ಲಿ ಈ ದೂತರೆಂಬುವರು ಪ್ರೇಮಿಗಳ ಪ್ರೀತಿ ಎಂಬ ಬಳ್ಳಿಗಳಿಗೆ ಆಧಾರವಿದ್ದಂತಿದ್ದಾರೆ. (ಅಡರ್ಪು=ಅಡರು, ಅಡ್ರು, ಸಡ್ರು, ಬಳ್ಳಿ ಹಬ್ಬಲು ಕೊಡುವ ಆಧಾರ). ಎಂತಹ ಪ್ರೀತಿಗಳೂ (ಪ್ರೇಮ ಪ್ರಕರಣಗಳೂ) ಅವರು ನವೀಕರಿಸಿದರೆ ಸರಿಯಾಗುತ್ತವೆ! ಅವರು ಕೆಡಿಸಿದರೆ ಕೆಡುತ್ತವೆ! ಅದೂ ಅಲ್ಲದೆ

ಚಂ|| ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ವುದೆಂತುಮಾ

ವೆಡೆಯೊಳಮಾಸೆಗಾಣೆನೆನೆ ತೊಟ್ಟನೆ ಪೋಪುವು ನಲ್ಲರಿರ್ವರೀ|

ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ

ಬಡನೊಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆಯಿರ್ಪುದಾಗದೇ||೧೦೪||

ʼನುಡಿಗಳೊಳ್‌ ಆಸೆಯುಂಟುʼ ಎನಲೊಡಂ (ಜೀವಂ) ತಳೆದಂತಿರೆ ನಿಲ್ವುದು. ʼಎಂತುಂ ಆವ ಎಡೆಯೊಳಂ ಆಸೆಗಾಣೆನ್‌ʼ ಎನೆ ತೊಟ್ಟನೆ ಪೋಪುವು ನಲ್ಲರಿರ್ವರ ಈರ್‌ ಒಡಲೊಳಗೆ ಇರ್ಪ ಜೀವಂ; ಅದುಕಾರಣದಿಂದಮೆ ಪೋಪ ಬರ್ಪ ಒಡಂಬಡನ್‌ ಒಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆ ಇರ್ಪುದಾಗದೇ?

(ನಲ್ಲನ/ನಲ್ಲೆಯ) ʼಮಾತಿನಲ್ಲಿ ಆಸೆ ಉಂಟು!ʼ ಎಂದರೆ ಕೂಡಲೇ ಜೀವ ಬಂದವರಂತೆ ಎದ್ದು ನಿಲ್ಲುತ್ತಾರೆ; ʼಹೇಗೂ, ಯಾವ ಎಡೆಯಲ್ಲಿಯೂ ಆಸೆಯೇ ಕಾಣುತ್ತಿಲ್ಲ!ʼ ಎಂದರೆ ನಲ್ಲರಿಬ್ಬರ ಒಡಲೊಳಗಿನ ಜೀವ ಕೂಡಲೇ ಹಾರಿಹೋಗುತ್ತದೆ! ಆ ಕಾರಣದಿಂದಲೇ, ಹೋಗುವ-ಬರುವ ಒಪ್ಪಂದವನ್ನು ಒಳಗೊಂಡ ದೂತರುಗಳ ಕೈಯಲ್ಲಿ ಪ್ರೇಮಿಗಳು ತಮ್ಮ ಜೀವವನ್ನೇ ನ್ಯಾಸವಾಗಿ ಇಟ್ಟಿರುತ್ತಾರೆ ಎಂದಾಯಿತಲ್ಲವೇ?

ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯನಗಲ್ದು ಬಂದು ಪೆಱರಾರುಮಂ ಮೆಚ್ಚದಾಕೆಯಂ ನೆನೆದು-

ಎಂದು ನುಡಿಯುತ್ತುಂ ಬರೆವರೆ ಮತ್ತೊಂದು ಎಡೆಯೊಳ್‌ ಒರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯನ್‌ ಅಗಲ್ದು ಬಂದು ಪೆಱರ್‌ ಆರುಮಂ ಮೆಚ್ಚದೆ ಆಕೆಯಂ ನೆನೆದು

ಎಂದು ನುಡಿಯುತ್ತಾ ಬರುತ್ತಿರಲು ಮತ್ತೊಂದು ಕಡೆಯಲ್ಲಿ ಒಬ್ಬ ಸಿರಿವಂತನು ತನ್ನ ಹೃದಯೇಶ್ವರಿಯನ್ನು ಅಗಲಿ ಬಂದು, ಬೇರೆ ಯಾರನ್ನೂ ಮೆಚ್ಚದೆ, ಅವಳನ್ನೇ ನೆನೆದು

ಚಂ|| ಮಿಱುಗುವ ತಾರಹಾರಮುಮನಪ್ಪಿನ ಕಾಳಸೆಗಡ್ಡಮೆಂಬ ಬೇ

ಸಱಿನೊಳೆ ಕಟ್ಟಲೊಲ್ಲದನಿತೞ್ಕಱನಿೞ್ಕುಳಿಗೊಂಡಲಂಪಿನ|

ತ್ತೆಱಗಿದ ನಲ್ಲಳಳ್ಳೆರ್ದೆಯೊಳಕ್ಕಟ ಬೆಟ್ಟುಗಳುಂ ಬನಂಗಳುಂ

ತೊರೆಗಳುಮೀಗಳೊಡ್ಡೞಿಯದೊಡ್ಡಿಸೆ ಸೈರಿಸುವಂತುಟಾದುದೇ|| ೧೦೫ ||

ಮಿಱುಗುವ ತಾರಹಾರಮುಮನ್‌ ʼಅಪ್ಪಿನ ಕಾಳಸೆಗೆ ಅಡ್ಡಂʼ ಎಂಬ ಬೇಸಱಿನೊಳೆ ಕಟ್ಟಲೊಲ್ಲದೆ ಅನಿತು ಅೞ್ಕಱನ್‌ ಇೞ್ಕುಳಿಗೊಂಡು ಅಲಂಪಿನತ್ತ ಎಱಗಿದ ನಲ್ಲಳ ಅಳ್ಳೆರ್ದೆಯೊಳ್‌ ಅಕ್ಕಟ ಬೆಟ್ಟುಗಳುಂ ಬನಂಗಳುಂ ತೊರೆಗಳುಂ ಈಗಳ್‌ ಒಡ್ಡೞಿಯದೆ ಒಡ್ಡಿಸೆ ಸೈರಿಸುವಂತುಟಾದುದೇ‌

(ತನ್ನ ಕೊರಳಿನಲ್ಲಿ) ಶೋಭಿಸುವ ಮುತ್ತಿನ ಹಾರವು ʼಬಿಗಿಯಪ್ಪುಗೆಗೆ ಅಡ್ಡ ಕೊಡುತ್ತದೆʼ ಎಂಬ ಬೇಸರದಿಂದ ಅದನ್ನು ತೊಡಲು ಒಪ್ಪದೆ, ನನ್ನ ಪ್ರೀತಿಯನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಂಡು ಸುಖದ ಕಡೆಗೆ ಬಾಗುತ್ತಿದ್ದವಳು ಅವಳು; ಆದರೆ, ಅಯ್ಯೋ! ಅಂಥ ಆಕೆಯ ಪ್ರೀತಿಗೆ ಈಗ ರಾಶಿರಾಶಿಯಾಗಿ ಬೆಟ್ಟಗಳೂ, ಕಾಡುಗಳೂ, ತೊರೆಗಳೂ ಅಡ್ಡಬಂದಿವೆಯಲ್ಲ! ಮೃದು ಹೃದಯದ ಆಕೆ ಇದನ್ನೆಲ್ಲ ಸಹಿಸುವಂತಾಯಿತೇ?!

ಚಂ||ಮುನಿಸಿನೊಳಾದಮೇವಯಿಸಿ ಸೈರಿಸದಾದೞಲೊಳ್ ಕನಲ್ದು ಕಂ

ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಱದೆ ಮೇಲೆವಾಯ್ದು ಬ

ಯ್ದನುವಿಸಿ ಕಾಡಿ ನೋಡಿ ತಿಳಿದೞ್ಕಱನಿೞ್ಕುಳಿಗೊಂಡಲಂಪುಗಳ್

ಕನಸಿನೊಳಂ ಪಳಂಚಲೆವುವೆನ್ನೆರ್ದೆಯೊಳ್ ತರಳಾಯತೇಕ್ಷಣೇ|| ೧೦೬ ||

ಮುನಿಸಿನೊಳ್‌ ಆದಂ ಏವಯಿಸಿ

ಸೈರಿಸದೆ ಆದ ಅೞಲೊಳ್ ಕನಲ್ದು

ಕಂಗನೆ ಕನಲುತ್ತುಂ

ಉಮ್ಮಳಿಸಿ ಸೈರಿಸಲಾಱದೆ ಮೇಲೆವಾಯ್ದು ಬಯ್ದು ಅನುವಿಸಿ ಕಾಡಿ

ನೋಡಿ ತಿಳಿದು ಅೞ್ಕಱನ್‌ ಇೞ್ಕುಳಿಗೊಂಡ ಅಲಂಪುಗಳ್ ಕನಸಿನೊಳಂ ಪಳಂಚಲೆವುವು ಎನ್ನ ಎರ್ದೆಯೊಳ್ ತರಳಾಯತೇಕ್ಷಣೇ

(ಒಂದು ದಿನ)ಅಸಹನೆಯಿಂದ ನನಗೆ ತಡೆಯಲಾರದ ಸಿಟ್ಟು ಬಂತು; ಆ ಸಿಟ್ಟನ್ನು ತಾಳಿಕೊಳ್ಳಲು ಸಾಧ್ಯವಾಗದೆ ದುಃಖದಿಂದ ನೀನು ಕನಲಿದೆ; ನಾನು ಮತ್ತೂ ಕೋಪಿಸಿಕೊಂಡೆ; ನೀನು ದುಃಖ ತಾಳಲಾರದೆ  ನನ್ನ ಮೇಲೇರಿ ಬಂದು ನನ್ನನ್ನು ಬೈದೆ, ತಿರಸ್ಕರಿಸಿದೆ. ಆಗ ನಾನು ಮೆಲ್ಲನೆ ಸಿಟ್ಟು ಕಳೆದು, ಬುದ್ಧಿ ತಿಳಿದು ನಿನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ನಿನ್ನ ಪ್ರೀತಿಯನ್ನು ಸಂಪೂರ್ಣವಾಗಿ ಸೂರೆಗೊಂಡೆ! ಇದೆಲ್ಲವೂ ಈಗ ಬಿಡದ ನೆನಪಾಗಿ ಕನಸಿನಲ್ಲೂ ನನ್ನನ್ನು ಕಾಡುತ್ತಿವೆಯಲ್ಲಾ!

ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದಂದಿನ ಮುಳಿಸೊಸಗೆಗಳಂ ನೆನೆದು-‌

ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನೆ ಇರ್ದ ಅಂದಿನ ಮುಳಿಸು ಒಸಗೆಗಳಂ ನೆನೆದು-

ಎಂದು ತಡೆದುಕೊಳ್ಳಲಾರದೆ ತನ್ನ ಪ್ರೇಯಸಿಯೊಂದಿಗಿನ ಆ ದಿನಗಳ ಪ್ರೀತಿ, ಸಿಟ್ಟುಗಳನ್ನು ನೆನಪಿಸಿಕೊಂಡು

ಚಂ|| ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿರೆ ಲಲ್ಲೆಗೆಯ್ದು ಲ

ಲ್ಲೆಗೆ ಮರೆದಿರ್ದೊಡೞ್ಕಱಿನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ|

ಚ್ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದದೇಂ

ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ|| ೧೦೭||

ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳ್‌ ಆನ್‌ ಇರೆ, ಲಲ್ಲೆಗೆಯ್ದು, ಲಲ್ಲೆಗೆ ಮರೆದಿರ್ದೊಡೆ ಅೞ್ಕಱಿನೊಳ್‌ ಒಂದಿ, ಮೊಗಂ ಮೊಗದತ್ತ ಸಾರ್ಚಿ, ಬೆಚ್ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದು ಅದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದ ಒಂದು ಕದಂಬದಂಬುಲಂ!

(ಅವಳ) ಮನಸ್ಸನ್ನು ಗೆಲ್ಲಬೇಕೆಂದು ಅವಳನ್ನು ಕಾಡಿ, ಕಳ್ಳನಿದ್ದೆಯಲ್ಲಿ ನಾನಿದ್ದೆ; ಆಗ ಅವಳು ನನ್ನನ್ನು ಮುದ್ದಿಸಿದಳು; ನಾನು (ಬೇಕೆಂದೇ) ಎಚ್ಚರಗೊಳ್ಳಲಿಲ್ಲ! ಆಗ ಅವಳು ಪ್ರೀತಿಯಿಂದ ನನ್ನ ಕಡೆಗೆ ಸರಿದು, ಮುಖವನ್ನು ನನ್ನ ಮುಖದ ಹತ್ತಿರ ತಂದು ಒಮ್ಮೆ ಬೆಚ್ಚಗೆ ನಿಡುಸುಯ್ದಳು; ಆಹಾ! ಕಸ್ತೂರಿ, ಕರ್ಪೂರ, ಕದಂಬಗಳ ತಾಂಬೂಲದ ಗಮಗಮಿಸುವ ಆ ಕಂಪು ಆಗ ಅವಳ ಮುಖಕಮಲದಿಂದ ಹೇಗೆ ಹೊಮ್ಮಿ ಹರಡಿತಲ್ಲವೆ!

 

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Leave a Comment

Leave a Reply

Your email address will not be published. Required fields are marked *