ಪಂಪಭಾರತ ಆಶ್ವಾಸ ೪ ಪದ್ಯಗಳು ೧೧-೨೦

 

 

ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು-

 

(ಅಂತು ಅಜಾತಶತ್ರು, ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ, ವಿಶ್ವ ವಿಶ್ವಂಭರ ಆಧಾರಂ ಅಪ್ಪ ಅರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪ ಅನ್ನೆಗಂ, ವಿಕ್ರಾಂತತುಂಗನ್‌ ಒಂದು ಎಡೆಯೊಳ್‌ ಇರ್ಪ ಇರವಿಂಗೆ ಉಮ್ಮಳಿಸಿ, ದಿಗಂಗನಾ ಮುಖ ಅವಲೋಕನಂಗೆಯ್ಯಲ್ ಬಗೆದು)

 

ಹಾಗೆ, ಶತ್ರುಗಳೇ ಇಲ್ಲದ ಧರ್ಮರಾಯನು, ಶತ್ರುಗಳ ಪಾಲಿಗೆ, ಸರ್ಪದ ಬಾಯಲ್ಲಿರುವ ಭಯಂಕರ ವಿಷದ ಹಲ್ಲುಗಳಂತಹ ಕತ್ತಿಯನ್ನು ಕೈಯಲ್ಲಿ ಹಿಡಿದವನೂ, ಸಮಸ್ತ ಭೂಮಿಗೆ ಆಧಾರವಾದವನೂ ಆದ ಅರಿಕೇಸರಿಯ(ಅರ್ಜುನನ) ತೋಳಿನ ಬಲದ ಆಧಾರದಲ್ಲಿ ರಾಜ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ಹೀಗಿರುವಾಗ ಅರ್ಜುನನು ಒಂದೇ ಕಡೆಯಲ್ಲಿ ಇರುವುದಕ್ಕೆ ಖೇದಗೊಂಡು, ದಿಕ್ಕೆಂಬ ಹೆಣ್ಣಿನ ಮುಖವನ್ನು ನೋಡಲು ನಿಶ್ಚಯಿಸಿ-

(ಟಿಪ್ಪಣಿ: ರಾಜನು ತಾನು ಸಭ್ಯ, ಏನೂ ಗೊತ್ತಿಲ್ಲದವ ಎಂಬ ಮುಖವಾಡ ತೊಡುವುದು; ಆಡಳಿತಕ್ಕೆ ಅನಿವಾರ್ಯವಾದ ಕ್ರೂರ, ಭ್ರಷ್ಟ ಕೆಲಸಗಳನ್ನು ತನ್ನ ತಮ್ಮ, ಭಾವ ಅಥವಾ ಅಂಥ ಹತ್ತಿರದ ಬೇರೆ ನೆಂಟರಿಂದ ಮಾಡಿಸುವುದು ಇದು  ಆಡಳಿತದ ಒಂದು ತಂತ್ರವಾಗಿ – ಇಂದಿನಂತೆ – ಪಂಪನ ಕಾಲದಲ್ಲೂ ಇದ್ದಿರಬೇಕು. ಹಾಗಾಗಿ ಕವಿ ಅಂಥದೇ ಚಿತ್ರವನ್ನು ಇಲ್ಲಿ ಕೊಡುತ್ತಿದ್ದಾನೆ.)

 

ಸ್ರ||       ಸೆಣಸುಳ್ಳುದ್ವೃತ್ತರಂ ತಳ್ತಿಱಿಯದೆ ಚತುರಂಭೋಧಿ ಪರ್ಯಂತಮಂ ಧಾ

ರಿಣಿಯಂ ತಾಂ ಪೋಗಿ ಬಾಯ್ಕೇಳಿಸದೆ ಮುನಿಜನಕ್ಕಿಷ್ಟಿ ವಿಘ್ನಂಗಳಂ ದಾ|

ರುಣ ದೈತ್ಯರ್ ಮಾಡೆ ನೀಡಿಲ್ಲದೆ ಸಲೆ ಚಲದಾಟಂದು ಕೊಂದಿಕ್ಕದೊರ್ವಂ

ಗುಣಮುಂಟೆಂದುಂಡು ಪಟ್ಟಿರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್|| ೧೧ ||

 

(ಸೆಣಸುಳ್ಳ ಉದ್ವೃತ್ತರಂ ತಳ್ತು ಇಱಿಯದೆ,  ಚತುರಂಭೋಧಿ ಪರ್ಯಂತಮಂ ಧಾರಿಣಿಯಂ ತಾಂ ಪೋಗಿ ಬಾಯ್ಕೇಳಿಸದೆ, ಮುನಿಜನಕ್ಕೆ ಇಷ್ಟಿ ವಿಘ್ನಂಗಳಂ ದಾರುಣ ದೈತ್ಯರ್ ಮಾಡೆ ನೀಡಿಲ್ಲದೆ ಚಲದೆ ಆಟಂದು ಕೊಂದಿಕ್ಕದೆ, ಒರ್ವಂ ʼಗುಣಮುಂಟುʼ ಎಂದು ಉಂಡು ಪಟ್ಟಿರ್ಪನನ್‌, ಅಣಮೆ ನಿರುದ್ಯೋಗಿಯಂ ಭೂಪನೆಂಬರ್)

 

ಅಸೂಯೆಪಡುವ ದುಷ್ಟರನ್ನು ಅಡ್ಡಗಟ್ಟಿ ಹೊಡೆಯದೆ, ನಾಲ್ಕು ಕಡಲುಗಳವರೆಗೆ ಹರಡಿಕೊಂಡಿರುವ ನೆಲದ ರಾಜರನ್ನು ತಾನೇ ಮುಂದಾಗಿ ಹೋಗಿ ಹೇಳಿದ್ದು ಕೇಳುವ ಹಾಗೆ ಮಾಡದೆ, ಋಷಿ ಮುನಿಗಳ ಯಾಗಯಜ್ಞಗಳಿಗೆ ಅಡ್ಡಿ ಮಾಡುವ ಕ್ರೂರ ರಾಕ್ಷಸರನ್ನು ತಡಮಾಡದೆ, ಹಟಕಟ್ಟಿ ಮೇಲೆ ಬಿದ್ದು ಕೊಂದು ಹಾಕದೆ. ʼಎಲ್ಲವೂ ಚೆನ್ನಾಗಿದೆʼ ಎಂದು ಭಾವಿಸಿಕೊಂಡು ಸುಮ್ಮನೆ ಉಂಡು ಮಲಗುವ ನಿರುದ್ಯೋಗಿಯನ್ನು ಯಾರಾದರೂ ರಾಜನೆನ್ನುತ್ತಾರೆಯೆ?

(ಟಿಪ್ಪಣಿ: ಅರ್ಜುನನ ಈ ಮಾತು ನೇರವಾಗಿ ಧರ್ಮರಾಯನನ್ನೇ ಕುರಿತು ಮಾಡಿದ ಟೀಕೆಯಂತಿದೆ. ಧರ್ಮರಾಯನ ʼಎಲ್ಲವೂ ಚೆನ್ನಾಗಿದೆʼ ಎಂದು ಉಂಡು ಮಲಗುವʼ ಆಡಳಿತ ಶೈಲಿಯ ಕುರಿತಾದ ಅಸಮಾಧಾನದಿಂದಾಗಿಯೇ ಅವನು ʼದಿಗಂಗನಾ ಮುಖದರ್ಶನʼಕ್ಕೆ ಹೊರಟಂತಿದೆ!)

 

ವ|| ಎಂದು ವಿಜಿಗೀಷುವೃತ್ತೋದ್ಯುಕ್ತನಾಗಲ್ ಬಗೆದು-

 

(ಎಂದು ವಿಜಿಗೀಷು ವೃತ್ತೋದ್ಯುಕ್ತನ್‌ ಆಗಲ್ ಬಗೆದು)

 

ಎಂದು ಯುದ್ಧದಲ್ಲಿ ಗೆಲ್ಲುವ ಉದ್ದೇಶವನ್ನು ಹೊಂದಿ

 

ಚಂ||    ಅಱಿಪಿದೊಡೆನ್ನ ಪೋಗನಿನಿಯಳ್ಗೆ ಮನಂ ಮಱುಕಕ್ಕೆ ನೀಳ್ದ ಕ

ಣ್ಣೊಱೆದುಗುವಶ್ರುವಾರಿಗೆ ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು ಕಾ|

ಲ್ಗೆಱಗಿರೆ ಪೋಗು ಕೆಟ್ಟಪುದು ಮೋಹಮಯಂ ನಿಗಳಂ ಕಳತ್ರಮೆಂ

ದಱಿಪದೆ ನಟ್ಟಿರುಳ್ ಮರೆದು ಸಾರ್ಚಿದ ನಲ್ಲಳ ತಳ್ತ ತೋಳ್ಗಳಂ|| ೧೨||

 

(ʼಅಱಿಪಿದೊಡೆ ಎನ್ನ ಪೋಗನ್‌ ಇನಿಯಳ್ಗೆ, ಮನಂ ಮಱುಕಕ್ಕೆ, ನೀಳ್ದ ಕಣ್‌ ಒಱೆದು ಉಗುವ ಅಶ್ರುವಾರಿಗೆ, ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು, ಕಾಲ್ಗೆ ಎಱಗಿರೆ ಪೋಗು ಕೆಟ್ಟಪುದು; ಮೋಹಮಯಂ ನಿಗಳಂ ಕಳತ್ರಂʼ ಎಂದು, ಅಱಿಪದೆ ನಟ್ಟಿರುಳ್ ಮರೆದು ಸಾರ್ಚಿದ ನಲ್ಲಳ ತಳ್ತ ತೋಳ್ಗಳಂ)

 

ʼನಾನು ಹೊರಟಿರುವುದನ್ನು ನಲ್ಲೆಗೆ ಹೇಳಿದರೆ ಅವಳ ಮನಸ್ಸು ದುಃಖಕ್ಕೊಳಗಾಗುತ್ತದೆ; ನೀಳವಾದ ಅವಳ ಕಣ್ಣುಗಳು ನೀರು ಸುರಿಸತೊಡಗುತ್ತವೆ; ಅವಳ ತೊದಲು ಮಾತುಗಳು ಅರ್ಥವಿಲ್ಲದ ಲಲ್ಲೆಯಾಗುತ್ತದೆ. ಇಂಥ ಸ್ಥಿತಿಯಲ್ಲಿ ಅವಳು ನನ್ನ ಕಾಲಿಗೆ ಬಿದ್ದರೆ ನಾನು ಹೊರಟ ಕೆಲಸ ಕೆಡುತ್ತದೆ.  ಹೆಂಡತಿ ಎಂದರೆ ಮೋಹದ ಸೆರೆಯೇ ಸೈʼ ಎಂದು ಆಲೋಚಿಸಿ ಅರ್ಜುನನು ದ್ರೌಪದಿಗೆ ತಿಳಿಸದೆ, ನಟ್ಟಿರುಳಿನಲ್ಲಿ ತನ್ನನ್ನು ಅಪ್ಪಿ ಹಿಡಿದು ಮಲಗಿದ ನಲ್ಲೆಯ ತೋಳುಗಳನ್ನು –

(ಟಿಪ್ಪಣಿ: ಈ ಪದ್ಯದಲ್ಲಿ ಕವಿ ಅರ್ಜುನನನ್ನು ವ್ಯಂಗ್ಯ ಮಾಡುತ್ತಿದ್ದಾನೆ. ಅರ್ಜುನನು ಆಡುವ ʼಮೋಹಮಯಂ ನಿಗಳಂ ಕಳತ್ರಂʼ ಎಂಬ ಮಾತೂ ಅವನ ನಡತೆಯೂ ಪರಸ್ಪರ ಸಂಪೂರ್ಣ ವಿರುದ್ಧವಾಗಿವೆ. ʼಹೆಂಡತಿ ಎಂದರೆ ಮೋಹದ ಸೆರೆʼ ಎಂದು ಬಾಯಲ್ಲಿ ಹೇಳುತ್ತಲೇ ಅವನು – ಮುಂದೆ – ಮತ್ತೂ ಇಬ್ಬರು ಹೆಂಡಿರನ್ನು ಕಟ್ಟಿಕೊಳ್ಳುತ್ತಾನೆ!)

 

ವ|| ಮೆಲ್ಲಮೆಲ್ಲನೆ ಪತ್ತುವಿಡಿಸಿ ತನ್ನ ತೊಟ್ಟ ದಿವ್ಯಾಭರಣಂಗಳೆಲ್ಲಮಂ ಕಳೆದು ದಿವ್ಯಶರಗಳಂ ಬಿಗಿದುಕೊಂಡು ದಿವ್ಯಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣ ಚರಣನಾಗಿ ನಿಜನಿವಾಸದಿಂ ಪೊಱಮಟ್ಟು ಖಾಂಡವಪ್ರಸ್ಥದಿಂದುತ್ತರಾಭಿಮುಖನಾಗಿ ಕಾಮ್ಯಕವನದೊಳಗನೆ ನೀಲಪರ್ವತದ ಮೇಗನೆ ಪೋಗಿ-

 

(ಮೆಲ್ಲಮೆಲ್ಲನೆ ಪತ್ತುವಿಡಿಸಿ, ತನ್ನ ತೊಟ್ಟ ದಿವ್ಯಾಭರಣಂಗಳ್‌ ಎಲ್ಲಮಂ ಕಳೆದು, ದಿವ್ಯಶರಗಳಂ ಬಿಗಿದುಕೊಂಡು, ದಿವ್ಯಚಾಪಮಂ ಪಿಡಿದು, ಪ್ರಥಮ ಚಳಿತ ದಕ್ಷಿಣ ಚರಣನಾಗಿ, ನಿಜನಿವಾಸದಿಂ ಪೊಱಮಟ್ಟು, ಖಾಂಡವಪ್ರಸ್ಥದಿಂದ ಉತ್ತರಾಭಿಮುಖನಾಗಿ ಕಾಮ್ಯಕವನದ ಒಳಗನೆ,  ನೀಲಪರ್ವತದ ಮೇಗನೆ ಪೋಗಿ)

 

ಮೆಲ್ಲಮೆಲ್ಲನೆ ಬಿಡಿಸಿಟ್ಟು, ತಾನು ತೊಟ್ಟ ದಿವ್ಯವಾದ ಆಭರಣಗಳೆಲ್ಲವನ್ನೂ ಕಳಚಿಟ್ಟು, ದಿವ್ಯವಾದ ಬತ್ತಳಿಕೆಗಳನ್ನು ಬಿಗಿದುಕೊಂಡನು. ದಿವ್ಯವಾದ ಬಿಲ್ಲನ್ನು ಹಿಡಿದುಕೊಂಡನು. ಮೊದಲು ಬಲಗಾಲನ್ನು ಮುಂದಿಟ್ಟು ತನ್ನ ಮನೆಯಿಂದ ಹೊರಗೆ ಹೊರಟು, ಖಾಂಡವವನದಿಂದ ಉತ್ತರದ ಕಡೆಗೆ ಕಾಮ್ಯಕವನದ ಒಳಹೊಕ್ಕು ನೀಲಪರ್ವತದ ಮೇಲೆ ಹೋಗಿ

ಚಂ||    ಸಗರರ ಮೇಲೆ ಗಂಗೆಯನನಾಕುಲದಿಂ ತರಲಾ ಭಗೀರಥಂ

ನೆಗೞೆತಪೋನಿಯೋಗದೊಳವಂಗಮರಾಪಗೆ ಮೆಚ್ಚಿ ಪಾಯ್ವುದುಂ|

ಗಗನದಿನಂಧಕ ದ್ವಿಷ ಜಟಾಟವಿಯೊಳ್ ಬೞಿಕಾದ ಶೈಲದೊಳ್

ಸೊಗಯಿಸೆ ಪಾಯ್ದುದಿಂತಿದುವೆ ಬಂಧುರ ಕೂಟ ಕುಳಂ ಹಿಮಾಚಳಂ|| ೧೩||

 

(ಸಗರರ ಮೇಲೆ ಗಂಗೆಯನ್‌ ಅನಾಕುಲದಿಂ ತರಲ್‌ ಆ ಭಗೀರಥಂ ನೆಗೞೆ ತಪೋನಿಯೋಗದೊಳ್‌, ಅವಂಗೆ ಅಮರಾಪಗೆ ಮೆಚ್ಚಿ ಪಾಯ್ವುದುಂ ಗಗನದಿನ್‌, ಅಂಧಕ ದ್ವಿಷ ಜಟಾ ಅಟವಿಯೊಳ್ ಬೞಿಕ ಆದ ಶೈಲದೊಳ್ ಸೊಗಯಿಸೆ ಪಾಯ್ದುದು, ಇಂತು ಇದುವೆ ಬಂಧುರ ಕೂಟ ಕುಳಂ ಹಿಮಾಚಳಂ)

ತನ್ನ ಪೂರ್ವಜರಾದ ಸಗರರಿಗೆ ಸದ್ಗತಿಯನ್ನು ಕಾಣಿಸಬೇಕೆಂಬ ಉದ್ದೇಶದಿಂದ ಭಗೀರಥನು ಗಂಗೆಯನ್ನು ಕುರಿತು ತಪಸ್ಸು ಮಾಡಿದನು. ತಪಸ್ಸಿಗೆ ಒಲಿದ ಗಂಗೆಯು ಆಗಸದಿಂದ ಭೂಮಿಗೆ ಇಳಿಯಲು ಸಿದ್ಧಳಾದಳು. ಆಗ ಅಂಧಕಾಸುರನನ್ನು ಸಂಹರಿಸಿದ ಶಿವನು ತನ್ನ ಜಟೆಯನ್ನು ಬಿಚ್ಚಿ ಗಂಗೆಯನ್ನು ಅದರ ಮೂಲಕ ಹರಿಯುವಂತೆ ಮಾಡಿದನು. ಗಂಗೆಯು ಶಿವನ ಜಟೆಯ ಮೂಲಕ ಭೂಮಿಗೆ ಇಳಿದು ನಂತರ ಹಲವು ಪರ್ವತಶಿಖರಗಳಲ್ಲಿ ಹರಿದು ಭೂಮಿಗೆ ಬಂದಳು.  ಇದುವೇ ಆ ಹಿಮಾಲಯ ಪರ್ವತ.

 

ಮ|| ಸ್ರ|| ವಿಲಸತ್ಕಲ್ಲೋಲ ನಾದಂ ನೆಗೞ್ದಿರೆ ನಿಜ ಕೂಟಾಗ್ರದೊಳ್ ಪಾಯ್ವ ಗಂಗಾ

ಜಲದಿಂ ಮೂರ್ಧಾಭಿಷೇಕೋನ್ನತಿ ನಿಲೆ ಚಮರೀ ಲೋಲ ಲಾಂಗೂಲಮಾಲಾ|            ವಲಿ ವಿಕ್ಷೇಪಂಗಳಿಂ ತಚ್ಚಮರರುಹ ಮಹಾಶೋಭೆ ಕೈಗಣ್ಮೆ ವಿಶ್ವಾ

ಚಲ ಚಕ್ರೇಶತ್ವಮುಂ ತಾಳ್ದಿದುದಖಿಳ ಧರಾರಮ್ಯಹೈಮಾಚಳೇಂದ್ರಂ|| ೧೪||

 

(ವಿಲಸತ್‌ ಕಲ್ಲೋಲ ನಾದಂ ನೆಗೞ್ದಿರೆ ನಿಜ ಕೂಟಾಗ್ರದೊಳ್ ಪಾಯ್ವ ಗಂಗಾಜಲದಿಂ ಮೂರ್ಧಾಭಿಷೇಕೋನ್ನತಿ ನಿಲೆ, ಚಮರೀ ಲೋಲ ಲಾಂಗೂಲಮಾಲಾವಲಿ ವಿಕ್ಷೇಪಂಗಳಿಂ ತತ್‌ ಚಮರರುಹ ಮಹಾಶೋಭೆ ಕೈಗಣ್ಮೆ, ವಿಶ್ವಾಚಲ ಚಕ್ರೇಶತ್ವಮಂ ತಾಳ್ದಿದುದು ಅಖಿಳ ಧರಾರಮ್ಯ ಹೈಮಾಚಳೇಂದ್ರಂ)

 

(ಗಂಗೆಯ) ಶುದ್ಧವಾದ ನೀರು ಪರ್ವತಶಿಖರಗಳ ತಲೆಯ ಮೇಲೆ ಬಿದ್ದ ಸದ್ದು ಜೋರಾಗಿ ಕೇಳುತ್ತಿತ್ತು; ಆ ನೀರು ಪರ್ವತಶಿಖರಗಳ ತಲೆಯ ಮೇಲೆ ಅಭಿಷೇಕ ಮಾಡಿದಂತೆ ಕಾಣುತ್ತಿತ್ತು. ಆ ಪರ್ವತಗಳಲ್ಲಿದ್ದ ಚಮರೀ ಮೃಗಗಳ ಬಾಲಗಳ ಅಲುಗಾಟ ಬಹು ಸುಂದರ ನೋಟವನ್ನು ಉಂಟುಮಾಡಿತ್ತು. ಹೀಗೆ ವಿಶ್ವದಲ್ಲಿಯೇ ಸುಂದರವಾದ ಆ ಹಿಮಾಲಯವು ವಿಶ್ವದ ಎಲ್ಲ ಪರ್ವತಗಳಿಗೂ ಚಕ್ರವರ್ತಿಯ ರೂಪ ತಳೆದಿತ್ತು.

(ಟಿಪ್ಪಣಿ: ಈ ಪದ್ಯದಲ್ಲಿ ಬರುವ ʼವಿಲಸತ್‌ ಕಲ್ಲೋಲ ನಾದಂʼ, ʼಮೂರ್ಧಾಭಿಷೇಕʼ  ಎಂಬ ಪದಗಳು ನೇರವಾಗಿ ಪಟ್ಟಾಭಿಷೇಕದ ಸೂಚನೆಯನ್ನು ನೀಡಿದರೆ, ಚಮರೀಮೃಗದ ಬಾಲಗಳ ಅಲುಗಾಟವು ʼಚಾಮರʼವನ್ನು ನೆನಪಿಸುವ ಮೂಲಕ ಪರೋಕ್ಷವಾಗಿ ಪಟ್ಟಾಭಿಷೇಕವನ್ನು ನೆನಪಿಸುತ್ತದೆ. ಪ್ರಕೃತಿಯೇ ಹಿಮಾಲಯವೆಂಬ ಪರ್ವತಗಳ ಚಕ್ರವರ್ತಿಗೆ ಹೀಗೆ ನಿತ್ಯವೂ ಪಟ್ಟಾಭಿಷೇಕ ಮಾಡುತ್ತಿದೆ ಎಂಬ ಚಿತ್ರವನ್ನು ಕವಿ ಇಲ್ಲಿ ಕೊಡುತ್ತಿದ್ದಾನೆ.)

ವ|| ಎಂದು ಮೆಚ್ಚಿ-

ಕಂ||     ಚಾರು ವಿವಿಧಾಗ್ನಿಕಾರ್ಯ

ಪ್ರಾರಂಭ ಮಹಾದ್ವಿಜನ್ಮ ಘೋಷದಿನಂಹೋ|

ದೂರಮುಮವನಿತಳಾಳಂ

ಕಾರಂ ಸಂಸಾರ ಸಾರ ಗಂಗಾದ್ವಾರಂ|| ೧೫||

 

(ಚಾರು ವಿವಿಧ ಅಗ್ನಿಕಾರ್ಯಪ್ರಾರಂಭ ಮಹಾದ್ವಿಜನ್ಮ ಘೋಷದಿನ್‌, ಅಂಹೋದೂರಮುಂ ಅವನಿತಳ ಅಳಂಕಾರಂ, ಸಂಸಾರ ಸಾರ ಗಂಗಾದ್ವಾರಂ)

 

ವಿವಿಧವಾದ ಅಗ್ನಿಕಾರ್ಯಗಳನ್ನು ಶುರು ಮಾಡುತ್ತಿರುವ ಮಹಾಬ್ರಾಹ್ಮಣರ ಘೋಷಗಳಿಂದ, ಪಾಪದೂರವೂ, ಭೂಮಿಗೆ ಅಲಂಕಾರವೂ, ಸಂಸಾರಸಾರವೂ ಆದ ಗಂಗಾದ್ವಾರದಂತೆ

 

ವ|| ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳ್ಗುಪದ್ರವಂಗೆಯ್ವ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಮುಚ್ಚಾಟಿಸಿ ಕೆಲವು ದಿವಸಮಿರ್ದಲ್ಲಿ ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತೆಯೆಂಬ ನಾಗಕನ್ನೆ ಕಣ್ಬೇಟಂಗೊಂಡು ತನ್ನ ಲೋಕಕ್ಕೊಡಗೊಂಡು ಪೋಗಲ್-

(ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳ್ಗೆ ಉಪದ್ರವಂಗೆಯ್ವ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಂ ಉಚ್ಚಾಟಿಸಿ, ಕೆಲವು ದಿವಸಂ ಇರ್ದು, ಅಲ್ಲಿ ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತೆಯೆಂಬ ನಾಗಕನ್ನೆ ಕಣ್ಬೇಟಂಗೊಂಡು, ತನ್ನ ಲೋಕಕ್ಕೆ ಒಡಗೊಂಡು ಪೋಗಲ್)

ಎಂಬಂತೆ ಸೊಗಯಿಸುವ ಗಂಗಾದ್ವಾರದಲ್ಲಿ ಮುನಿಜನರ ಯಾಗಗಳಿಗೆ ಅಡ್ಡಿ ಮಾಡುವ ರಾಕ್ಷಸಕೋಟಿಯನ್ನು ತನ್ನ ಹರಿತವಾದ ಬಾಣಗಳಿಂದ ದೂರ ಓಡಿಸಿ, ಕೆಲವು ದಿವಸ ಅಲ್ಲಿಯೇ ಇದ್ದನು. ಆಗ ಅಲ್ಲಿ ಆ ʼಪಡೆ ಮೆಚ್ಚೆ ಗಂಡʼನ ಚೆಲುವನ್ನು ಫಣೀಂದ್ರನ ಮಗಳಾದ ಮದನಲತೆ ಎಂಬ ನಾಗಕನ್ನೆಯು ಕಂಡು ಕಣ್ಣೋಟದ ಮೂಲಕವೇ ಪ್ರೀತಿಸಿ ತನ್ನ ಲೋಕಕ್ಕೆ ಒಡಗೊಂಡು ಹೋದಾಗ)

 

 

 

 

 

 

ಉ||      ಆಗಳುಮಿಂದು ಸೂರ್ಯರಣಮಿಲ್ಲದೆ ಕೞ್ತಲೆಯೆಂಬುದಿಲ್ಲ ತ

ದ್ಭೋಗಿ ಫಣಾಮಣಿ ದ್ಯುತಿಯೆ ಕೞ್ತಲೆಯಂ ತಲೆದೋಱಲೀಯದಾ|

ನಾಗರ ನಾಗಕನ್ನೆಯರ ರೂಪುಗಳಿಟ್ಟಳಮಾಗೆ ಭೋಗಿಗಳ್

ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯ ಭೋಗನಾಯಕರ್|| ೧೬||

(ಆಗಳುಂ ಇಂದು ಸೂರ್ಯರ್‌ ಅಣಂ ಇಲ್ಲದೆ ಕೞ್ತಲೆಯೆಂಬುದಿಲ್ಲ; ತದ್ಭೋಗಿ ಫಣಾಮಣಿ ದ್ಯುತಿಯೆ ಕೞ್ತಲೆಯಂ ತಲೆದೋಱಲ್‌ ಈಯದೆ ಆ ನಾಗರಮ ನಾಗಕನ್ನೆಯರ ರೂಪುಗಳ್‌ ಇಟ್ಟಳಂ ಆಗೆ, ಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳ್‌ ಅಲ್ಲಿಯ ಭೋಗನಾಯಕರ್)

 

ಆ ಲೋಕದಲ್ಲಿ ಚಂದ್ರ, ಸೂರ್ಯರ ಬೆಳಕು ಸ್ವಲ್ಪವಾದರೂ ಇಲ್ಲ; ಆದರೆ ಕತ್ತಲೆಯೂ ಇಲ್ಲ! ಅಲ್ಲಿರುವ ಹಾವುಗಳ ಹಣೆಯಲ್ಲಿರುವ ಬೆಳಕೀಯುವ ರತ್ನಗಳೇ ಅಲ್ಲಿ ಕತ್ತಲೆ ತಲೆದೋರಲು ಬಿಡುವುದಿಲ್ಲ. ಅಂಥ ಬೆಳಕಿನಲ್ಲಿ ಅಲ್ಲಿರುವ ನಾಗ, ನಾಗಿಣಿಯರ ರೂಪವು ಬಹಳ ಚೆಲುವಾಗಿ ಕಾಣುತ್ತದೆ. ʼಹಾವುಗಳು ಭೋಗಜೀವಿಗಳುʼ ಎನ್ನುವುದು ಅಲ್ಲಿ ಪ್ರಚಲಿತವಾದ ಮಾತು. ಹಾಗೆ ಹೇಳುವವರು ಸಹ ನಾಗಗಳೇ; ನಾಗಗಳು ಮಾತ್ರವಲ್ಲ ಅಲ್ಲಿನ ಮಂಡಲಾಧಿಪತಿಗಳೂ ಸಹ ಸುಖಭೋಗಿಗಳೇ.

(ಟಿಪ್ಪಣಿ: ʼಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳ್‌ ಅಲ್ಲಿಯ ಭೋಗನಾಯಕರ್ʼ ಎಂಬುದನ್ನು ಅರ್ಥ ಮಾಡುವುದು ಕಷ್ಟ. ಆದರೆ ಈ ಮಾತುಗಳಲ್ಲಿ ಭೋಗದ ವೈಭವೀಕರಣ ಇದೆ ಹೊರತು ಖಂಡನೆಯಲ್ಲ.)

 

ವ|| ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಱುತ್ತುಂ ತನ್ನ ಕೆೞಗಣ ನಾಗವಿಮಾನಕ್ಕೆ ವಂದು ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ ರಸರಸಾಯನಂಗಳನೂಡುವಂತೆ ದಿವ್ಯಾಹಾರಂಗಳನೂಡಿ-

 

(ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಱುತ್ತುಂ, ತನ್ನ ಕೆೞಗಣ ನಾಗವಿಮಾನಕ್ಕೆ ವಂದು, ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ, ರಸರಸಾಯನಂಗಳನ್ ಊಡುವಂತೆ ದಿವ್ಯಾಹಾರಂಗಳನ್‌ ಊಡಿ)

 

ಎಂದು ನಾಗಕನ್ನೆಯು ನಾಗಲೋಕದ ಸೊಗಸುಗಳನ್ನು ತೋರಿಸುತ್ತಾ, ತನ್ನ ಕೆಳಗಿನ ನಾಗವಿಮಾನಕ್ಕೆ ಬಂದು, ನಾಗಕನ್ನೆಯರೂ ತಾನೂ ಸೇರಿ, ಅರ್ಜುನನ ಮನಸ್ಸಿಗೆ ಸಂತೋಷವಾಗುವಂತೆ ಮಜ್ಜನ ಮಾಡಿಸಿ, ರುಚಿರುಚಿಯಾದ ರಸಾಯನಗಳನ್ನು ಉಣಿಸುವಂತೆ ದಿವ್ಯ ಆಹಾರಗಳನ್ನು ನೀಡಿ-

ಉ||      ನಾಗವಿಭೂಷಣಪ್ರತತಿ ನಾಗರಖಂಡಮಪೂರ್ವಮಪ್ಪ ಪು

ನ್ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮೆಂ|

ದಾಗಡೆ ನಾಗಲೋಕ ವಿಭವಂಗಳೊಳಾೞಿಸಿ ನಾಗಶಯ್ಯೆಯೊಳ್

ನಾಗಿಣಿ ನಾಗಬಂಧದೊಳೆ ತಳ್ತು ಗುಣಾರ್ಣವನಂ ಮರುಳ್ಚಿದಳ್|| ೧೭||

 

ನಾಗವಿಭೂಷಣಪ್ರತತಿ, ನಾಗರಖಂಡಂ, ಅಪೂರ್ವಂ ಅಪ್ಪ ಪುನ್ನಾಗದ ಬಾಸಿಗಂ, ಬಗೆದ ಬಣ್ಣದ ಪುಟ್ಟಿಗೆ, ನಾಗಜಾಲಂ ಎಂದು, ಆಗಡೆ ನಾಗಲೋಕ ವಿಭವಂಗಳೊಳ್‌ ಆೞಿಸಿ, ನಾಗಶಯ್ಯೆಯೊಳ್ ನಾಗಿಣಿ ನಾಗಬಂಧದೊಳೆ ತಳ್ತು, ಗುಣಾರ್ಣವನಂ ಮರುಳ್ಚಿದಳ್

 

ನಾಗಗಳು ಬಳಸುವ ಆಭರಣಗಳ ರಾಶಿ, ನಾಗಗಳು ವಾಸಿಸುವ ಪ್ರದೇಶ, ಅಪರೂಪವಾದ ಪುನ್ನಾಗದ ಬಾಸಿಗ, ಬೇಕಾದ ಬಣ್ಣದ ಬಟ್ಟೆಗಳು, ತಾಂಬೂಲ (ವೀಳ್ಯದ ಎಲೆ) ಎಂದು ಅರ್ಜುನನನ್ನು ನಾಗಲೋಕದ ವೈಭವಗಳಲ್ಲಿ ಮುಳುಗಿಸಿ, ಆ ನಾಗಿಣಿಯು ನಾಗಶಯ್ಯೆಯಲ್ಲಿ ನಾಗಬಂಧದಲ್ಲಿ ಕೂಡಿ, ಅರ್ಜುನನನ್ನು ಮರುಳು ಮಾಡಿದಳು.

 

ವ|| ಅಂತಾಕೆಯ ಮುದ್ದುವೆರಸಿದ ತೊದಳ್ನುಡಿಗಂ ಪೂಮಾಲೆವೆರಸಿದ ಬೞಲ್ಮುಡಿಗಮಲಂಪುವೆರಸಿದ ನೋಟಕ್ಕಮಿಂಬುವೆರಸಿದ ಕೂಟಕ್ಕಂ ಪುರುಡುವೆರಸಿದ ಕೊಂಕಿಂಗಂ ಕದ್ದವಣಿವೆರಸಿದ ಸೋಂಕಿಂಗಂ ಗಾಡಿವೆರಸಿದ ಹಾವಕ್ಕಂ ನಾಣ್ವೆರಸಿದ ಭಾವಕ್ಕಮೊಲ್ದುಮೊಱಲ್ದುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂತನೆಂತಂತೆ-

 

(ಅಂತು ಆಕೆಯ ಮುದ್ದುವೆರಸಿದ ತೊದಳ್ನುಡಿಗಂ, ಪೂಮಾಲೆವೆರಸಿದ ಬೞಲ್ಮುಡಿಗಂ; ಅಲಂಪುವೆರಸಿದ ನೋಟಕ್ಕಂ, ಇಂಬುವೆರಸಿದ ಕೂಟಕ್ಕಂ; ಪುರುಡುವೆರಸಿದ ಕೊಂಕಿಂಗಂ, ಕದ್ದವಣಿವೆರಸಿದ ಸೋಂಕಿಂಗಂ; ಗಾಡಿವೆರಸಿದ ಹಾವಕ್ಕಂ, ನಾಣ್ವೆರಸಿದ ಭಾವಕ್ಕಂ ಒಲ್ದುಂ ಒಱಲ್ದುಂ ಇರೆಯಿರೆ ದೇವೇಂದ್ರಂಗಂ ಇಂದ್ರಾಣಿಗಂ ಜಯಂತನೆಂತು ಅಂತೆ)

 

ಹಾಗೆ ಆಕೆಯ ಮುದ್ದುಮುದ್ದಾದ ತೊದಲು ಮಾತುಗಳಿಗೂ, ಹೂಮಾಲೆ ತೊಟ್ಟ ತುರುಬಿಗೂ, ಪ್ರೀತಿ ತುಂಬಿದ ನೋಟಕ್ಕೂ, ಸವಿಯಾದ ಕೂಟಕ್ಕೂ, ಕೆಣಕುವ ಕೊಂಕುಮಾತಿಗೂ, ಬರಸೆಳೆದಾಗಿನ ಸ್ಪರ್ಶಕ್ಕೂ, ಚೆಲುವಿನ ಪ್ರೀತಿಯಾಟಕ್ಕೂ, ನಾಚುವ ಭಾವಕ್ಕೂ ಪ್ರೀತಿಯಿಂದ ಮನಸೋತು ಕಾಲ ಕಳೆಯುತ್ತಿರಲು, ದೇವೇಂದ್ರನಿಗೂ ಇಂದ್ರಾಣಿಗೂ ಜಯಂತನು ಹೇಗೋ ಹಾಗೆ

 

ಕಂ||     ಅಂತಾ ಫಣಿಕಾಂತೆಗಮರಿ

ಕಾಂತಾಳಿಕ ಫಳಕ ತಿಳಕ ಹರನೆನಿಪರಿಗಂ||

ಗಂ ತನಯನಧಿಕ ತೇಜೋ

ವಂತನಿಳಾವಂತನಿಂದುಮಂಡಳಕಾಂತಂ|| ೧೮||

 

(ಅಂತು ಆ  ಫಣಿಕಾಂತೆಗಂ ಅರಿಕಾಂತಾಳಿಕ ಫಳಕ ತಿಳಕ ಹರನ್‌ ಎನಿಪ ಅರಿಗಂಗಂ ತನಯನ್‌, ಅಧಿಕ ತೇಜೋವಂತನ್‌, ಇಳಾವಂತನ್‌, ಇಂದುಮಂಡಳಕಾಂತಂ)

 

ಹಾಗೆ ಆ ಹಾವುಹೆಣ್ಣಿಗೂ, ಶತ್ರುಗಳ ಮಡದಿಯರ ಹಣೆಯ ತಿಲಕವನ್ನು ಅಳಿಸುವವನೆನಿಸಿಕೊಂಡ ಅರಿಗನಿಗೂ ತೇಜಸ್ವಿಯಾದ, ಚಂದ್ರಕಾಂತಿಯಂತಹ ಮೈಕಾಂತಿಯಿಂದ ಕೂಡಿದ-

(ಟಿಪ್ಪಣಿ: ಈ ಪದ್ಯದಲ್ಲಿ ಬರುವ ಅರಿಕೇಸರಿಯ ವಿಶೇಷಣವು ಪಂಪನ ಕಾಲದ ಓದುಗರಿಗೆ ಸಹಜವಾಗಿ ಕಂಡಿರಬಹುದು. ಆದರೆ ಇಂದು ಅದು ತುಂಬಾ ಕ್ರೂರವಾದ ಮಾತು; ಅದರಲ್ಲಿಯೂ ಮಗು ಹುಟ್ಟಿದ ಸಂಭ್ರಮದ ಹೊತ್ತಿಗೆ ಈ ವಿಶೇಷಣವನ್ನು ಕವಿ ಬಳಸಿರುವುದು ತೀರ ಅನುಚಿತ.)

 

ವ|| ಅಂತು ಪುಟ್ಟುವುದುಮಾತನ ಬಾಲಕ್ರೀಡೆಯುಮಾಕೆಯ ಸುರತಕ್ರೀಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗಯಿಸೆ ಕೆಲವು ದಿವಸಮಿರ್ದಲ್ಲಿಂ ಪೊಱಮಟ್ಟು ಬಂದು ಹಿಮವದ್ಗಿರೀಂದ್ರ ತಟ ನಿಕಟವರ್ತಿಗಳಪ್ಪಗಸ್ತ್ಯವಟಮುಂ ವಸಿಷ್ಠಪರ್ವತಂಗಳೆಂಬ ತೀರ್ಥಂಗಳೊಳೋಲಾಡುತ್ತುಮಾ ದಿಶಾಭಾಗಮನಾತ್ಮೀಯ ಶಾಸನಾಯತ್ತಂ ಮಾಡುತ್ತುಂ ಬಂದಿಂದುಬಿಂಬವಿಗಳದಮೃತಬಿಂದು ದುರ್ದಿನಾರ್ದ್ರ ಚಂದನಾನ್ವಿತಮುಮಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಮೈರಾವತ ಕರಲೂನ ಸಲ್ಲಕೀ ಶಬಳಮುಮಪ್ಪುದಯಗಿರಿಯಿಂ ಸೊಗಯಿಸುವ ಮೂಡಣ ದೆಸೆಗೆ ವಂದು ನಂದೆಯಪರನಂದೆಯಶ್ವಿನಿ ಮಹಾನಂದೆಯೆಂಬ ತೀರ್ಥಜಲಂಗಳೊಳೋಲಾಡುತ್ತುಮುದ್ವೃತ್ತ ರಿಪುನೃಪತಿಗಳನೇಸಾಡುತ್ತುಮಲ್ಲಿಂ ತಳರ್ದು ಚಪಳ ಕಪಿಬಳ ವಿಲುಪ್ತ ವಿಗಳಿತ ಲತಾಭವನಮುಮಧಿಕ ಬಳ ನಳ ಕರತಳಗಳಿತ ಕುಳಶೈಳ ಸಹಸ್ರ ಸಂತಾನ ಕಳಿತ ಸೇತುಬಂಧುರಮುಮಪ್ಪ ದಕ್ಷಿಣ ಸಮುದ್ರದ ತಡಿವಿಡಿದು ಬಂದು ರಾಮಚಂದ್ರಂ ವಿಹರಿಸಿದೆಡೆಗಳಂ ನೋಡಿ-

 

(ಅಂತು ಪುಟ್ಟುವುದುಂ, ಆತನ ಬಾಲಕ್ರೀಡೆಯುಂ ಆಕೆಯ ಸುರತಕ್ರೀಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗಯಿಸೆ, ಕೆಲವು ದಿವಸಂ ಇರ್ದು, ಅಲ್ಲಿಂ ಪೊಱಮಟ್ಟು ಬಂದು, ಹಿಮವದ್ಗಿರೀಂದ್ರ ತಟ ನಿಕಟವರ್ತಿಗಳ್‌ ಅಪ್ಪ ಅಗಸ್ತ್ಯವಟಮುಂ, ವಸಿಷ್ಠಪರ್ವತಂಗಳ್‌ ಎಂಬ ತೀರ್ಥಂಗಳೊಳ್‌ ಓಲಾಡುತ್ತುಂ, ಆ ದಿಶಾಭಾಗಮನ್ ಆತ್ಮೀಯ ಶಾಸನಾಯತ್ತಂ ಮಾಡುತ್ತುಂ ಬಂದು, ಇಂದುಬಿಂಬವಿಗಳದಮೃತಬಿಂದು

ದುರ್ದಿನ ಆರ್ದ್ರ ಚಂದನ ಅನ್ವಿತಮುಂ, ಅಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಂ. ಐರಾವತ ಕರಲೂನ ಸಲ್ಲಕೀ ಶಬಳಮುಂ ಅಪ್ಪ ಉದಯಗಿರಿಯಿಂ ಸೊಗಯಿಸುವ ಮೂಡಣ ದೆಸೆಗೆ ವಂದು, ನಂದೆ ಅಪರನಂದೆ ಅಶ್ವಿನಿ ಮಹಾನಂದೆಯೆಂಬ ತೀರ್ಥಜಲಂಗಳೊಳ್‌ ಓಲಾಡುತ್ತುಂ, ಉದ್ವೃತ್ತ ರಿಪುನೃಪತಿಗಳನ್‌ ಏಸಾಡುತ್ತುಂ, ಅಲ್ಲಿಂ ತಳರ್ದು ಚಪಳ ಕಪಿಬಳ ವಿಲುಪ್ತ ವಿಗಳಿತ ಲತಾಭವನಮುಂ, ಅಧಿಕ ಬಳ ನಳ ಕರತಳಗಳಿತ ಕುಳಶೈಳ ಸಹಸ್ರ ಸಂತಾನ ಕಳಿತ ಸೇತುಬಂಧುರಮುಂ ಅಪ್ಪ ದಕ್ಷಿಣ ಸಮುದ್ರದ ತಡಿವಿಡಿದು ಬಂದು, ರಾಮಚಂದ್ರಂ ವಿಹರಿಸಿದ ಎಡೆಗಳಂ ನೋಡಿ)

 

ಹಾಗೆ ಹುಟ್ಟಿದ ಮೇಲೆ, ಮಗುವಿನ ಮಕ್ಕಳಾಟವೂ, ಆಕೆಯ ಕೂಡುವಿಕೆಯೂ ತನಗೆ ನೋಡಲೂ ಕೂಡಲೂ ತುಂಬಾ ಸೊಗಸುತ್ತಿತ್ತು. ಅರ್ಜುನನು ಅಲ್ಲಿ ಕೆಲವು ದಿವಸ ಇದ್ದು ಅಲ್ಲಿಂದ ಹೊರಟು ಬಂದು ಹಿಮಾಲಯ ಪರ್ವತದ ಬುಡಕ್ಕೆ ಹತ್ತಿರದಲ್ಲಿರುವ ಅಗಸ್ತ್ಯವಟ ಮತ್ತು ವಸಿಷ್ಠ ಪರ್ವತಗಳೆಂಬ ತೀರ್ಥಗಳಲ್ಲಿ ಮೀಯುತ್ತಲೂ, ಆ ಪ್ರದೇಶವನ್ನು ತನ್ನ ಅಧಿಕಾರಕ್ಕೆ ಒಳಪಡಿಸುತ್ತಲೂ ಬಂದು, ಕೇವಲ ಮೋಡಗಳೇ ತುಂಬಿಕೊಂಡ ದಿನದಂದು ಚಂದ್ರಬಿಂಬದಿಂದ ಜಾರಿಬಿದ್ದ ಅಮೃತಬಿಂದುಗಳಿಂದ ಒದ್ದೆಯಾದ ಗಂಧದ ಮರಗಳಿಂದ, ಸೂರ್ಯನ ರಥಕ್ಕೆ ಕಟ್ಟಿದ ಕುದುರೆಯ ಗೊರಸುಗಳು ತುಳಿದು ತುಂಡಾದ ಲವಂಗದ ಚಿಗುರು ಹಾಗೂ ಐರಾವತದ ಸೊಂಡಿಲಿನಿಂದ ಮುರಿದುಹೋದ ಬಣ್ಣ ಬಣ್ಣದ ಸಲ್ಲಕೀ ಮರಗಳಿಂದ ಕೂಡಿದ ಮೂಡಣ ದಿಕ್ಕಿಗೆ ಬಂದು, ನಂದೆ ಅಪರನಂದೆ ಅಶ್ವಿನಿ ಮಹಾನಂದೆಯರೆಂಬ ತೀರ್ಥಜಲಗಳಲ್ಲಿ ಮಿಂದು, ಹೇಳಿದ ಮಾತು ಕೇಳದ ಶತ್ರುರಾಜರ ಮೇಲೆ ಬಾಣಪ್ರಯೋಗ ಮಾಡಿ, ಅಲ್ಲಿಂದ ಹೊರಟು ಚಪಲಬುದ್ಧಿಯ ಮಂಗಗಳಿಂದ ಹಾಳಾಗಿ ಬಿದ್ದಿರುವ ಲತಾಭವನಗಳಿಂದಲೂ, ಬಲಶಾಲಿಯಾದ ನಳನ ಅಂಗೈಯಿಂದ ಜಾರಿದ ಸಾವಿರಾರು ಕುಲಪರ್ವತಗಳ ಗುಂಪಿನಿಂದಲೂ ಉಂಟಾದ ಸೇತುವೆಯಿಂದ ಸುಂದರವಾಗಿರುವ ದಕ್ಷಿಣಸಮುದ್ರದ ತಡಿಯಲ್ಲಿಯೇ ಬಂದು, ರಾಮಚಂದ್ರನು ವಿಹರಿಸಿದ ಎಡೆಗಳನ್ನು ನೋಡಿ

 

ಉ||      ಅಂದಿದು ಸೀತೆಯೊಳ್ ನೆರೆದು ನಿಂದೆಡೆ ತತ್ಖರದೂಷಣರ್ಕಳಂ

ಕೊಂದೆಡೆ ಪೋಗಿ ಪೊಮ್ಮರೆಯನೆಚ್ಚೆಡೆ ತಪ್ಪದಿದಪ್ಪುದೆಂದು ಕಾ|

ಯ್ಪಿಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು ರಾಮನಾ

ದಂದಿನ ಸಾಹಸಂ ಮನದೊಳಾವರಿಸಿತ್ತಕಳಂಕರಾಮನಾ|| ೧೯||

(ಅಂದು ಇದು ಸೀತೆಯೊಳ್ ನೆರೆದು ನಿಂದ ಎಡೆ, ತತ್‌ ಖರದೂಷಣರ್ಕಳಂ ಕೊಂದ ಎಡೆ, ಪೋಗಿ ಪೊಮ್ಮರೆಯಂ ಎಚ್ಚ ಎಡೆ ತಪ್ಪದೆ ಇದು ಅಪ್ಪುದೆಂದು, ಕಾಯ್ಪಿಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು ರಾಮನಾದಂದಿನ ಸಾಹಸಂ ಮನದೊಳ್‌ ಆವರಿಸಿತ್ತು ಅಕಳಂಕರಾಮನಾ)

ಆ ಕಾಲದಲ್ಲಿ ಇದು ಸೀತೆಯೊಂದಿಗೆ ನಿಂತ ಜಾಗ, ಆ ಖರದೂಷಣರನ್ನು ಕೊಂದ ಜಾಗ, ಅಟ್ಟಿಸಿಕೊಂಡು ಹೋಗಿ ಚಿನ್ನದ ಜಿಂಕೆಗೆ ಬಾಣ ಬಿಟ್ಟ ಜಾಗ; ಅನುಮಾನವಿಲ್ಲದೆ ಇವೆಲ್ಲ ಅವೇ ಜಾಗಗಳು; ಹೀಗೆ,  ದೇವತೆಗಳಿಗೆ ಕಂಟಕನಾಗಿದ್ದ ಆ ರಾವಣನನ್ನು ಕೊಲ್ಲಲೆಂದು ತಾನು ರಾಮನಾಗಿದ್ದ ಕಾಲದ ಸಾಹಸಗಳು ಆ ಅಕಳಂಕರಾಮನ ಮನಸ್ಸನ್ನು ಆವರಿಸಿಕೊಂಡವು.

 

ವ|| ಅಂತು ರಾಮ ಜನ್ಮೋತ್ತತ್ತಿಯೊಳಾದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದಗಸ್ತ್ಯತೀರ್ಥಮಂ ಕಂಡು-

 

(ಅಂತು ರಾಮ ಜನ್ಮೋತ್ತತ್ತಿಯೊಳ್‌ ಆದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದು ಅಗಸ್ತ್ಯತೀರ್ಥಮಂ ಕಂಡು)

 

ಹಾಗೆ, ರಾಮ ಜನ್ಮದಲ್ಲಿದ್ದಾಗಿನ ಕಾಲದ ತನ್ನ ಸಾಹಸಗಳನ್ನು ನೆನೆಯುತ್ತಾ ಬಂದು ಅಗಸ್ತ್ಯತೀರ್ಥವನ್ನು ಕಂಡು,

 

ಮ||     ಬಳೆಯಲ್ಕಣ್ಮಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮು

ಕ್ಕುಳಿಸಲ್ಕಂಬುಧಿ ಸಾಲ್ದುದಿಲ್ಲ ಜಗಮಂ ತಿಂದಿರ್ದ ವಾತಾಪಿ ಪೊ|

ಕ್ಕಳುರ್ವಾತ್ಮೋದರ ವಹ್ನಿಯಿಂ ಪೊಱಮಡಲ್ ತಾನಾರ್ತನಿಲ್ಲೞ್ದುದಿ

ಲ್ಲೆಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗಗಸ್ತ್ಯಂಬರಂ|| ೨೦||

 

(ಬಳೆಯಲ್ಕೆ ಅಣ್ಮಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದ, ಒರ್ಮೆ ಮುಕ್ಕುಳಿಸಲ್ಕೆ ಅಂಬುಧಿ ಸಾಲ್ದುದಿಲ್ಲ, ಜಗಮಂ ತಿಂದಿರ್ದ ವಾತಾಪಿ ಪೊಕ್ಕು ಅಳುರ್ವ ಆತ್ಮೋದರ ವಹ್ನಿಯಿಂ ಪೊಱಮಡಲ್ ತಾನ್‌ ಆರ್ತನಿಲ್ಲ, ಅೞ್ದುದಿಲ್ಲ ಇಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗೆ ಅಗಸ್ತ್ಯಂಬರಂ?)

 

ತನ್ನ ಆಜ್ಞೆಯಿಂದಾಗಿ ವಿಂಧ್ಯಗಿರಿಯೂ ಸಹ ಬೆಳೆಯುವ ಧೈರ್ಯ ಮಾಡಲಿಲ್ಲ; ಒಂದು ಸಲ ಬಾಯಿ ಮುಕ್ಕಳಿಸಲು ಕಡಲು ಸಾಲಲಿಲ್ಲ; ಜಗತ್ತನ್ನೇ ತಿಂದಿದ್ದ ವಾತಾಪಿ ತನ್ನ ಹೊಟ್ಟೆಯನ್ನು ಹೊಕ್ಕು ಅಲ್ಲಿದ್ದ ಬೆಂಕಿಯಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ; ಭೂಮಿ ಭಾರದಿಂದ ಮುಳುಗದೆ ಉತ್ತರದ ಕಡೆಗೆ ತೇಲಿತು; ಎಂದಮೇಲೆ ಇಂತಹ ಅಗಸ್ತ್ಯನ ಮಹಿಮೆ ಯಾರಿಗೆ ತಾನೆ ಇದೆ?

 

ವ|| ಎಂದಗಸ್ತ್ಯತೀರ್ಥ ಸೌಭದ್ರ ಪೌಳೋಮ ಕಾಂಭೋಜ ಭಾರದ್ವಾಜಮೆಂಬಯ್ದು ತೀರ್ಥಂಗಳೊಳ್‌ ವರ್ಧಮಾನನೆಂಬ ಋಷಿಯ ಶಾಪದೊಳುಗ್ರಗ್ರಾಹಸ್ವರೂಪದೊಳಿರ್ದಚ್ಚರಸೆಯರುಮಂ ವಿಶಾಪೆಯರ್‌ ಮಾಡಿ ಮಳಯಪರ್ವತಮನೆಯ್ದೆವಂದು-

 

(ಎಂದು ಅಗಸ್ತ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜಮೆಂಬ ಅಯ್ದು ತೀರ್ಥಂಗಳೊಳ್‌ ವರ್ಧಮಾನನೆಂಬ ಋಷಿಯ ಶಾಪದೊಳ್‌ ಉಗ್ರಗ್ರಾಹಸ್ವರೂಪದೊಳಿರ್ದ ಅಚ್ಚರಸೆಯರುಮಂ ವಿಶಾಪೆಯರ್‌ ಮಾಡಿ, ಮಳಯಪರ್ವತಮನ್‌ ಎಯ್ದೆವಂದು)

ಎಂದು ಅಗಸ್ತ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜಗಳೆಂಬ ಐದು ತೀರ್ಥಗಳಲ್ಲಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರ ಮೊಸಳೆಗಳ ರೂಪದಲ್ಲಿದ್ದ ಅಪ್ಸರೆಯರನ್ನು ಶಾಪದಿಂದ ಬಿಡುಗಡೆಗೊಳಿಸಿ, ಮಳಯಪರ್ವತದ ಹತ್ತಿರ ಬಂದು-

 

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *