ಪಂಪಭಾರತ ಆಶ್ವಾಸ ೪ ಪದ್ಯಗಳು ೩೨ರಿಂದ ೪೨

ಖಪ್ಲು|| ಸಾರ ವಸ್ತುಗಳಿಂ ನೆರೆದಂಭೋರಾಶಿಯೆ ಕಾದಿಗೆ ಕಾವನುಂ

ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ|

ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ

ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨||

ಸಾರ ವಸ್ತುಗಳಿಂ ನೆರೆದ ಅಂಭೋರಾಶಿಯೆ ಕಾದಿಗೆ, ಕಾವನುಂ ಸೀರಪಾಣಿ, ವಿಳಾಸದಿನ್‌ ಆಳ್ದಂ ಚಕ್ರಧರಂ, ಬಗೆವಂಗೆ ಸಂಸಾರಸಾರಂ ಇದು ಎಂಬುದನ್‌ ಎಂದು ಎಯ್ತಂದನ್‌ ಅಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್‌ ದ್ವಾರವತೀಪುರಮಂ ನರಂ

ರಸವತ್ತಾದ ವಸ್ತುಗಳಿಂದ ತುಂಬಿದ ಕಡಲೇ ಅಗಳು; ಕಾಯುವವನು ನೇಗಿಲನ್ನು ಹಿಡಿದ ಬಲರಾಮ; ಸೊಗಸಾಗಿ ಆಳುವವನು ಚಕ್ರಪಾಣಿಯಾದ ಕೃಷ್ಣ ; ತಿಳಿದು ನೋಡುವವನಿಗೆ ಇಲ್ಲಿ ಸಂಸಾರಸಾರವೇ ಇದೆ ಎಂದುಕೊಳ್ಳುತ್ತಾ (ಅರ್ಜುನನು) ಅಲುಗದೆ ನಿಂತ ಬಂಗಾರದ ಬಾಗಿಲುಗಳಿಂದ ಸಿಂಗಾರಗೊಂಡ ಎತ್ತರವಾದ ಮನೆಗಳಿರುವ ದ್ವಾರಕೆಯನ್ನು ಮುಟ್ಟಿದ.

ವ|| ಅನ್ನೆಗಂ ತನ್ನ ಮಯ್ದುನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆಪಡೆಮಾತಂ ಮುಂದುವರಿದಱಿಪುವಂತೆ-

ಅನ್ನೆಗಂ ತನ್ನ ಮಯ್ದನನ್‌ ಅಪ್ಪ ಅಮೋಘಾಸ್ತ್ರ ಧನಂಜಯನ ಬರವಿನ ಸಂತಸದ ಒಸಗೆ ಪಡೆಮಾತಂ ಮುಂದುವರಿದು ಅಱಿಪುವಂತೆ-

ಅಷ್ಟರಲ್ಲಿ ತನ್ನ ಮೈದುನನಾದ, ಅಮೋಘ ಅಸ್ತ್ರಗಳನ್ನು ಬಲ್ಲ ಅರ್ಜುನನ ಬರವಿನ ಸಂತಸದ, ಸಂಭ್ರಮದ ಸುದ್ದಿಯನ್ನು ಮೊದಲೇ ತಿಳಿಸುವಂತೆ

ಮ||     ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ

ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ|

ಡಲುಮೞ್ಕರ್ತಮರ್ದಪ್ಪಲುಂ ಪಡೆವೆಯಿಂದೆಂಬಂತೆ ಕೆತ್ತಿತ್ತು ದಲ್

ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ|| ೩೩ ||

ಪಲವುಂ ಜನ್ಮದೊಳ್‌ ಆದ ನಿನ್ನ ಕೆಳೆಯಂ ಬಂದಪ್ಪನ್‌;  ಆತಂಗೆ ಬೆಂಬಲಂ ಇನ್‌ ನೀಂ,  ನಿನಗೆ ಆತನ್‌; ಆತನನ್‌, ಇಳಾವಿಖ್ಯಾತನಂ, ಕೂರ್ತು ನೋಡಲುಂ ಅೞ್ಕರ್ತು ಅಮರ್ದು ಅಪ್ಪಲುಂ ಪಡೆವೆಯಿಂದು ಎಂಬಂತೆ ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಂ ಆ ಬಲಿ ಬಲಪ್ರಧ್ವಂಸಿಗೆ ಅಂದು ಇಟ್ಟಳಂ

ʼನಿನ್ನ ಹಲವು ಜನ್ಮಗಳ ಗೆಳೆಯ ಬಂದಿದ್ದಾನೆ. ಇನ್ನು ಅವನಿಗೆ ನೀನು ಬೆಂಬಲ, ನಿನಗೆ ಅವನು ಬೆಂಬಲ. ಈ ಭೂಮಿಯಲ್ಲಿ ಪ್ರಸಿದ್ಧನಾದ ಆತನನ್ನು ಪ್ರೀತಿಯಿಂದ ನೋಡಲು, ಒಲಿದು ಬಿಗಿಯಾಗಿ ಅಪ್ಪಲು ಇಂದು ನೀನು ಪಡೆಯುತ್ತೀಯೆʼ ಎನ್ನುವಂತೆ ಆ ಬಲಿಹರನಿಗೆ ಬಲಗಣ್ಣು, ಬಲತೋಳುಗಳು ರಮಣೀಯವಾಗಿ ಅದುರಿದವು.

ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಱಿದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಣಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಱಿ ಮಯ್ದುನಂಗಿದಿರ್ವಂದು ತಮ್ಮಲಂಪಿನೞ್ಕಱಿನ ರೂಪನೆ ಕಾಣ್ಬಂತೆ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತೆಗೆದಪ್ಪಿ ನಿಬಿಡಾಲಿಂಗನಂಗೆಯ್ದಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯ್ಯುತ್ತುಮುತ್ತುಂಗ ಮತ್ತವಾರಣಂಗಳನೇಱಿ ಪೊೞಲಂ ಪುಗೆ-

ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನ್‌ ಉದಾತ್ತನಾರಾಯಣನ ಬರವನ್‌ ಅಱಿದು, ಬಲದೇವ ಸಾತ್ಯಕಿ ಕೃತವರ್ಮಾದಿಗಳ್‌ ಅಪ್ಪ ತನ್ನ ಒಡವುಟ್ಟಿದರುಂ,  ವೃಷ್ಣಿ, ಕಾಂಭೋಜಕುಳತಿಳಕರ್‌ ಅಪ್ಪ ಯಾದವರುಂ ಬೆರಸು, ಮದಕರಿ ಕರೇಣು ತುರಗಾದಿ ನಾನಾವಿಧ ವಾಹನಂಗಳನ್‌ ಏಱಿ, ಮಯ್ದುನಂಗೆ ಇದಿರ್ವಂದು ತಮ್ಮ ಅಲಂಪಿನ, ಅೞ್ಕಱಿನ ರೂಪನೆ ಕಾಣ್ಬಂತೆ ಕಂಡು, ದಿಕ್ಕರಿ ಕರ ಅನುಕಾರಿಗಳ್‌ ಅಪ್ಪ ಬಾಹುಗಳಿಂದಂ ಓರೊರ್ವರಂ ತೆಗೆದಪ್ಪಿ ನಿಬಿಡ ಆಲಿಂಗನಂಗೆಯ್ದು,  ಆನಂದಜಳ ಪರಿಪೂರ್ಣ ವಿಸ್ತೀರ್ಣ ವಿಲೋಚನಂಗಳಿಂದಂ ಮುಹುರ್ಮುಹುರ್‌ ಆಲೋಕನಂಗೆಯ್ಯುತ್ತುಂ, ಉತ್ತುಂಗ ಮತ್ತವಾರಣಂಗಳನ್‌ ಏಱಿ ಪೊೞಲಂ ಪುಗೆ-

ಹಾಗೆ ಅದುರಿದ ಬಲಗಣ್ಣು ಶುಭವನ್ನು ಸೂಚಿಸಿದ  ಕಾರಣದಿಂದ  ನಾರಾಯಣನು ಉದಾತ್ತ ನಾರಾಯಣನ ಬರವನ್ನು ತಿಳಿದುಕೊಂಡ. ಬಲದೇವ, ಸಾತ್ಯಕಿ, ಕೃತವರ್ಮರೇ ಮುಂತಾದ ತನ್ನ ಒಡಹುಟ್ಟಿದವರನ್ನೂ, ವೃಷ್ಣಿ, ಕಾಂಭೋಜ ಕುಲತಿಲಕರಾದ ಯಾದವರನ್ನೂ ಕೂಡಿಕೊಂಡ. ಅವರೆಲ್ಲರೂ ಮದಿಸಿದ ಗಂಡಾನೆ, ಹೆಣ್ಣಾನೆ, ಕುದುರೆಗಳೇ ಮುಂತಾದ ಹಲವು ವಿಧದ ವಾಹನಗಳನ್ನೇರಿ ಮೈದುನನನ್ನು ಎದುರುಗೊಂಡರು. ಕೃಷ್ಣನು  ಸಂತೋಷ, ಪ್ರೀತಿಗಳ ಪ್ರತಿರೂಪದಂತಿದ್ದ ಅರ್ಜುನನನ್ನು ಕಂಡ.  ಆನೆಯ ಸೊಂಡಿಲಿನಂತೆ ಉದ್ದವಾದ ತೋಳುಗಳಿಂದ ಕೃಷ್ಣಾರ್ಜುನರು ಪರಸ್ಪರರನ್ನು ಬಿಗಿಯಾಗಿ ಅಪ್ಪಿಕೊಂಡರು. ಅವರ ಕಣ್ಣುಗಳಲ್ಲಿ ಸಂತಸದ ಕಣ್ಣೀರು ತುಂಬಿಕೊಂಡಿತು. ಒಬ್ಬರನ್ನೊಬ್ಬರು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಂಡರು. ನಂತರ ಎತ್ತರವಾದ ಮದಿಸಿದ ಆನೆಗಳನ್ನೇರಿ ಊರು ಹೊಕ್ಕರು.

ಚಂ||    ಸುರ ನರ ಕಿನ್ನರೋರಗ ನಭಶ್ಚರ ಕಾಂತೆಯರೇವರೆಂದು ಮಾಂ

ಕರಿಸುವ ಕೆಯ್ತದಂದದ ಮುರಾರಿಯ ತಂಗೆಯನಪ್ಪುಕೆಯ್ದು ಚ|

ಚ್ಚರಮೊಳಪೊಯ್ದು ನೀಂ ನಿನಗೆ ಮಾಡುವುದೆಂದಮರೇಂದ್ರಪುತ್ರನಂ

ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್|| ೩೪||

ʼಸುರ ನರ ಕಿನ್ನರ ಉರಗ ನಭಶ್ಚರ ಕಾಂತೆಯರ್‌ ಏವರ್‌ ಎಂದು ಮಾಂಕರಿಸುವ ಕೆಯ್ತದ ಅಂದದ ಮುರಾರಿಯ ತಂಗೆಯನ್‌ ಅಪ್ಪುಕೆಯ್ದು, ಚಚ್ಚರಂ ಒಳಪೊಯ್ದು, ನೀಂ ನಿನಗೆ ಮಾಡುವುದುʼ ಎಂದು ಅಮರೇಂದ್ರಪುತ್ರನಂ ಕರೆವವೊಲ್‌ ಆದುವು ಆ ಪುರದ ವಾತ ವಿಧೂತವಿನೂತ ಕೇತುಗಳ್

ʼದೇವತೆಗಳು, ನರರು, ಕಿನ್ನರರು, ಉರಗ ಲೋಕದವರು, ಖೇಚರರು ಮೊದಲಾದ ಗುಂಪುಗಳಿಗೆ  ಸೇರಿದ ಹೆಣ್ಣುಗಳೆಲ್ಲ ಯಾವ ಲೆಕ್ಕ ಎಂಬಂತೆ ಅವರನ್ನು ಹೀಗಳೆಯುವ  ಮೈಮಾಟದ, ಚೆಲುವಿನ ಮುರಾರಿಯ ತಂಗಿಯಿಂದ ಹೌದೆನ್ನಿಸಿಕೋ. ಬೇಗನೆ ಅವಳನ್ನು ಒಳಗೆ ಹಾಕಿಕೊಂಡು ನಿನ್ನವಳಾಗಿ ಮಾಡಿಕೋʼ ಎಂದು ಆ ಪುರದಲ್ಲಿ ಗಾಳಿಗೆ ಅಲುಗುತ್ತಿದ್ದ, ಜನರ ಹೊಗಳಿಕೆಗೆ ಪಾತ್ರವಾಗಿದ್ದ ಬಾವುಟಗಳು ಇಂದ್ರನ ಮಗನನ್ನು ಕರೆಯುವಂತೆ ಇದ್ದವು.

ವ|| ಆಗಳ್ ಮೊೞಗುವ ಬದ್ಧವಣದ ಪಱೆಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು-

ಆಗಳ್ ಮೊೞಗುವ ಬದ್ಧವಣದ ಪಱೆಗಳುಂ, ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು-

ಆಗ, ಮೊಳಗುವ ಮಂಗಳವಾದ್ಯಗಳ  ಹಿನ್ನೆಲೆಯಲ್ಲಿ ಕೈಯಲ್ಲಿ ಹಿಡಿದ ಕೆಂಪು ಚಿನ್ನದ ತಟ್ಟೆಯ ತುಂಬಾ ತುಂಬಿದ ಬಿಡಿಮುತ್ತುಗಳ ಮಂತ್ರಾಕ್ಷತೆಯೊಂದಿಗೆ

ಚಂ||    ಒದವಿದ ನೂಲ ತೊಂಗಲುಲಿ ದೇಸೆಯನಾಂತು ವಿಳಾಸದಿಂದಿಱುಂ

ಕಿದ ನಿಱಿ ಗಂಡರಳ್ಳೆರ್ದೆಗಳಂ ತುೞಿವೋಜೆಯನುಂಟುಮಾಡುವಂ|

ದದೆ ನಿಡುಗಣ್ಗಳೊಳ್ನಡೆ ಮನೋಭವನೊಡ್ಡಣದಂತೆ ತಂಡ ತಂ

ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ|| ೩೫||

ಒದವಿದ ನೂಲ ತೊಂಗಲುಲಿ,  ದೇಸೆಯನ್‌ ಆಂತು ವಿಳಾಸದಿಂದ ಇಱುಂಕಿದ ನಿಱಿ, ಗಂಡರ ಅಳ್ಳೆರ್ದೆಗಳಂ ತುೞಿವೋಜೆಯನ್‌ ಉಂಟು ಮಾಡುವಂದದೆ ನಿಡುಗಣ್ಗಳೊಳ್‌ ನಡೆ, ಮನೋಭವನ ಒಡ್ಡಣದಂತೆ ತಂಡ ತಂಡದೆ ಪರಿತಂದು ಸೂಸಿದುದು ಸೇಸೆಯನ್‌ ಅಂದು ಪುರಾಂಗನಾಜನಂ

ಒಡ್ಯಾಣದ ಕುಚ್ಚುಗಳ ನಾದ, ಊರಿನ ಸಂಪ್ರದಾಯದಂತೆ ಸುಂದರವಾಗಿ ಸೊಂಟದ ಹಿಂಭಾಗದಲ್ಲಿ ಸಿಕ್ಕಿಸಿಕೊಂಡ  ಸೀರೆಯ ನೆರಿಗೆ, ಪುರುಷರ ಕೋಮಲ ಹೃದಯಗಳನ್ನು ತುಳಿಯುವಂಥ ನೀಳಗಣ್ಣುಗಳ ಸುಳಿನೋಟ ಇವುಗಳಿಂದ ಕೂಡಿದ ಪುರಾಂಗನೆಯರು ಮನ್ಮಥನ ಸೇನೆಯಂತೆ ತಂಡತಂಡವಾಗಿ ಹರಿದು ಬಂದು (ಅರ್ಜುನನ ಮೇಲೆ) ಮಂತ್ರಾಕ್ಷತೆಯನ್ನು ಚೆಲ್ಲಿದರು.

ಚಂ||    ಮಿಳಿರ್ವ ಕುರುಳ್ಗಳೊಳ್ ಪೊಳೆವ ಕಣ್ಗಳ ಬೆಳ್ಪು ಪಳಂಚಿ ಚಿನ್ನ ಪೂ

ಗಣೆಗೆಣೆಯಾಗೆ ಪುರ್ವುಮೆಮೆಗಳ್ ಬಿಡದಳ್ಳಿಱಿದಿಕ್ಷುಚಾಪದೊಳ್|

ಖಳ ಕುಸುಮಾಸ್ತ್ರನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಕಿ ನಿಳ್ಕಿ ಕೋ

ಮಳೆ ನಡೆ ನೋಡಿದಳ್ ಕರಿಯನೇಱಿದನಂ ಪಡೆಮೆಚ್ಚೆಗಂಡನಂ|| ೩೬||

ಮಿಳಿರ್ವ ಕುರುಳ್ಗಳೊಳ್ ಪೊಳೆವ ಕಣ್ಗಳ ಬೆಳ್ಪು ಪಳಂಚಿ ಚಿನ್ನ ಪೂಗಣೆಗೆ ಎಣೆಯಾಗೆ, ಪುರ್ವುಂ ಎಮೆಗಳ್ ಬಿಡದೆ ಅಳ್ಳಿಱಿದು ಇಕ್ಷುಚಾಪದೊಳ್ ಖಳ ಕುಸುಮಾಸ್ತ್ರನಿಟ್ಟ ಗೊಣೆಯಕ್ಕೆ ಎಣೆಯಾಗಿರೆ, ನಿಳ್ಕಿ ನಿಳ್ಕಿ ಕೋಮಳೆ ನಡೆ ನೋಡಿದಳ್ ಕರಿಯನ್‌ ಏಱಿದನಂ, ಪಡೆಮೆಚ್ಚೆಗಂಡನಂ

ಅಲುಗಾಡುವ ಗುಂಗುರುಕೂದಲುಗಳಿಗೆ ಕಣ್ಣುಗಳ ಕಾಂತಿ ತಾಗಿ ಅವು ಚಿನ್ನದ ಹೂಬಾಣಗಳಂತೆ ಕಂಡವು;   ಕಂಪಿಸುತ್ತಿದ್ದ  ಹುಬ್ಬು, ಕಣ್ಣೆವೆಗಳು  ದುಷ್ಟ ಮನ್ಮಥನು ಹೆದೆ ಬಗ್ಗಿಸಿ ಹಿಡಿದ ಬಿಲ್ಲಿನಂತೆ ಕಾಣುತ್ತಿತ್ತು;  ಅಂತಹ ಕೋಮಲ ಹೆಣ್ಣೊಬ್ಬಳು ಆನೆಯ ಮೇಲೇರಿದ ಪಡೆಮೆಚ್ಚೆಗಂಡನನ್ನು  ಕಾಲ್ಬೆರಳುಗಳ ಮೇಲೆ ನಿಂತು, ಮತ್ತೆ ಮತ್ತೆ ತಲೆ ಎತ್ತಿ  ನೋಡಿದಳು

ವ|| ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು-

ಮತ್ತೊರ್ವಳ್‌ ಅತಿ ಸಂಭ್ರಮ ತ್ವರಿತದಿಂ, ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ,  ನೋೞ್ಪ ದಂಡುಗಳೊಳ್‌ ಅಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು

ಒಡ್ಯಾಣ ತೊಟ್ಟ, ಕಾಂತಿಯುತವಾಗಿ, ಬಾಗಿ, ಚಿಗುರಿನಂತಿದ್ದ ತುಟಿಗಳ ಮತ್ತೊಬ್ಬಳು ಹೆಣ್ಣು, ಸಂಭ್ರಮದಿಂದ  ಸೊಕ್ಕಿದ ಆನೆಯಂತೆ ಓಡೋಡಿ ಬಂದು, ಅಲ್ಲಿ ಗುಂಪು ಸೇರಿ ನೋಡುತ್ತಿದ್ದವರ  ಹಿಂದೆ ಒತ್ತಿ ಅಂಟಿ ನಿಂತುಕೊಂಡು

ಉ||      ಕಾಯದೆ ಕಾಮನಾರ್ದಿಸೆ ತೊವಲ್ವಿಡಿವಂತೆಡಗಯ್ಯೊಳೊಪ್ಪೆ ತೋ

ರ್ಪಾಯೆಲೆ ನೋಟ ಬೇಟದ ಕೊನರ್ ತಲೆದೋರ್ಪವೊಲಾಗೆ ಬಾಯೊಳಿ

ರ್ದಾಯೆಲೆ ಕಣ್ಗೆವಂದೆಸೆಯೆ ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ

ಬಾಯೊಳೆ ತೋಱೆ ಮೆಯ್ಮರೆದು ನೋಡಿದಳ್ ಸಮರೈಕಮೇರುವಂ|| ೩೭||

ಕಾಯದೆ ಕಾಮನ್‌ ಆರ್ದು ಇಸೆ ತೊವಲ್‌ ಪಿಡಿವಂತೆ ಎಡಗಯ್ಯೊಳ್‌ ಒಪ್ಪೆ ತೋರ್ಪ ಆ ಎಲೆ ನೋಟ ಬೇಟದ ಕೊನರ್ ತಲೆದೋರ್ಪವೊಲ್‌ ಆಗೆ ಬಾಯೊಳ್‌ ಇರ್ದಾ ಎಲೆ ಕಣ್ಗೆವಂದು ಎಸೆಯೆ ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ ಬಾಯೊಳೆ ತೋಱೆ ಮೆಯ್ಮರೆದು ನೋಡಿದಳ್ ಸಮರೈಕಮೇರುವಂ

ಕಾಮನು ತಡಮಾಡದೆ ಗರ್ಜಿಸಿ ಬಾಣ ಬಿಟ್ಟ;  ಆ ಹೆಣ್ಣು ʼಅಯ್ಯೋ! ಶರಣಾದೆʼ ಎಂಬಂತೆ ತನ್ನ ಎಡಗೈಯಲ್ಲಿದ್ದ ವೀಳ್ಯದೆಲೆಯನ್ನು ಮುಂದೆ ಹಿಡಿದು ತೋರಿಸಿದಳು; ಅವಳ ಬಾಯಲ್ಲಿದ್ದ ಮತ್ತೊಂದು ಎಲೆ ಕಣ್ಬೇಟದ ಚಿಗುರು ತಲೆದೋರುವಂತೆ ಕಾಣಿಸಿತು. ಹೀಗೆ ಅವಳು ಕೈಯಲ್ಲಿದ್ದ ಎಲೆ ಕೈಯಲ್ಲೇ, ಬಾಯಲ್ಲಿದ್ದ ತಾಂಬೂಲ ಬಾಯಲ್ಲೇ ಆಗಿ, ಮೈಮರೆತು ಸಮರೈಕ ಮೇರುವಾದ ಅರ್ಜುನನನ್ನು ನೋಡಿದಳು.

ವ|| ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ ಬರ್ಪಲರಂಬು ಬರ್ಪಂತೆ ಬಂದು-

ಮತ್ತೊರ್ವಳ್  ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ ಬರ್ಪ ಅಲರಂಬು ಬರ್ಪಂತೆ ಬಂದು

ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಸಿಂಜಿನಿಯಿಂದ ಜೀವತಳೆದು ಬರುವ ಹೂಬಾಣದಂತೆ ಬಂದು

ಮ||     ಸ್ಮರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮೆಚ್ಚೆನಾನಾವ ಗಂ

ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕೆ ಗಂಧೇಭ ಕಂ|

ಧರ ಬಂಧ ಪ್ರವಿಭಾಸಿಯಪ್ಪರಿಗನಂ ಕಾಣುತ್ತೆ ಕಣ್ಸೋಲ್ತು ಕಾ

ಮರಸಂ ಭೋಂಕನೆ ಸೂಸೆ ತಾಳ್ದಲರಿದೆಂದಿರ್ಕಚ್ಚೆಯಂ ಕಟ್ಟಿದಳ್ || ೩೮ ||

ʼಸ್ಮರನಂ ರೂಪಿನೊಳ್‌, ಇಂದ್ರನಂ ವಿಭವದೊಳ್ ಪೋ ಮೆಚ್ಚೆನ್‌ ಆನ್‌ ಆವ ಗಂಡರುಮಂ, ಕಚ್ಚೆಯೊಳಿಟ್ಟು ಕಟ್ಟುವೆನ್‌ʼ ಎನುತ್ತಿರ್ಪಾಕೆ ಗಂಧೇಭ ಕಂಧರ ಬಂಧ ಪ್ರವಿಭಾಸಿ ಅಪ್ಪ ಅರಿಗನಂ ಕಾಣುತ್ತೆ ಕಣ್ಸೋಲ್ತು, ಕಾಮರಸಂ ಭೋಂಕನೆ ಸೂಸೆ ತಾಳಲ್‌ ಅರಿದೆಂದು ಇರ್ಕಚ್ಚೆಯಂ ಕಟ್ಟಿದಳ್!

ʼರೂಪದಲ್ಲಿ ಮದನನೇ ಇರಬಹುದು, ವೈಭವದಲ್ಲಿ ಇಂದ್ರನೇ ಆಗಿರಬಹುದು, ಹೋಗು,ಹೋಗು, ನಾನು ಯಾವ ಗಂಡಸನ್ನೂ ಮೆಚ್ಚುವುದಿಲ್ಲ. ಅಂಥವರನ್ನೆಲ್ಲ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಕೊಳ್ಳುತ್ತೇನೆ!ʼ ಎನ್ನುತ್ತಿದ್ದ ಹೆಣ್ಣೊಬ್ಬಳು ಸೊಕ್ಕಿದಾನೆಯ ಕೊರಳಪಟ್ಟಿಯ ಮೇಲೆ ವಿರಾಜಿಸುತ್ತಿದ್ದ ಅರಿಗನನ್ನು ಕಾಣುತ್ತಲೇ ಕಣ್ಣು ಸೋತು, ಥಟ್ಟನೆ  ಕಾಮರಸವು ಸೂಸಲು ʼಅಯ್ಯೋ ತಾಳಲಾರೆʼ ಎನ್ನುತ್ತ ಎರಡು ಕಚ್ಚೆಗಳನ್ನು ಕಟ್ಟಿಕೊಂಡಳು!

ವ|| ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೊಡ್ಡಿದ ಪುಲ್ಲೆಗಳಂತರಲಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲೊಳಗಣಿಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗೆ-

ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೆ ಒಡ್ಡಿದ ಪುಲ್ಲೆಗಳಂತೆ ಅರಲಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲ ಒಳಗಣಿಂ ಬಂದು ದಿವಿಜೇಂದ್ರ ವಿಳಾಸ ಉಪಹಾಸಿತಂ ಅಪ್ಪ ನಿಜಮಂದಿರಮಂ ಪುಗೆ

ಹಾಗೆ, ಅರಿಗನನ್ನು ನೋಡಿದ ಹೆಣ್ಣುಗಳೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಗುರಿಯಾದ ಹುಲ್ಲೆಗಳ ಹಾಗೆ ಹೂಬಾಣದ ಮೊನೆಗೆ ಸಿಕ್ಕಿಕೊಂಡರು. ಆಗ (ಅರ್ಜುನಾದಿಗಳು) ಊರೊಳಗಿಂದ ಬಂದು ದೇವತೆಗಳ ಮನೆಗಳನ್ನೂ ಅಪಹಾಸ್ಯ ಮಾಡುವಂತಿದ್ದ ದ್ವಾರಕೆಯ ಅರಮನೆಗೆ ಹೊಕ್ಕಾಗ

ಮ||     ಲತೆಗಳ್ ಜಂಗಮರೂಪದಿಂ ನೆರೆದುವೋ ದಿವ್ಯಾಪ್ಸರೋವೃಂದಮೀ

ಕ್ಷಿತಿಗೇನಿಂದ್ರನ ಶಾಪದಿಂದಿೞಿದುವೋ ಪೇೞೆಂಬ ಶಂಕಾಂತರಂ|

ಮತಿಗಂ ಪುಟ್ಟುವಿನಂ ಕರಂ ಪರಕೆಗಳ್ ತಳ್ಪೊಯ್ಯೆ ಸೇಸಿಕ್ಕಿತಿಂ

ದ್ರತನೂಜಂಗಿದಿರ್ವಂದು ಷೋಡಶ ಸಹಸ್ರಾಂತಃಪುರಂ ಕೃಷ್ಣನಾ|| ೩೯||

ಲತೆಗಳ್ ಜಂಗಮರೂಪದಿಂ ನೆರೆದುವೋ,  ದಿವ್ಯ ಅಪ್ಸರ ವೃಂದಂ ಈ  ಕ್ಷಿತಿಗೆ ಏನ್‌ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನಂ, ಕರಂ ಪರಕೆಗಳ್ ತಳ್ಪೊಯ್ಯೆ, ಸೇಸಿಕ್ಕಿತು ಇಂದ್ರತನೂಜಂಗೆ ಇದಿರ್ವಂದು ಷೋಡಶ ಸಹಸ್ರಾಂತಃಪುರಂ ಕೃಷ್ಣನಾ

ಬಳ್ಳಿಗಳು ಜೀವ ತಳೆದು ಬಂದುವೋ, ದೇವೇಂದ್ರನ ಶಾಪದಿಂದ ಅಪ್ಸರೆಯರು ಈ ಭೂಮಿಗೆ ಇಳಿದರೋ ಎಂಬ ಹಲವು ಅನುಮಾನಗಳು ಉಂಟಾಗುವಂತಿದ್ದ ಕೃಷ್ಣನ ಹದಿನಾರು ಸಾವಿರ  ಅಂತಃಪುರ ಸ್ತ್ರೀಯರು ಅರ್ಜುನನನ್ನು ಎದುರ್ಗೊಂಡು, ಒಟ್ಟಾಗಿ ಹರಸಿ, ಗದ್ದಲವೆಬ್ಬಿಸಿ, ಮಂತ್ರಾಕ್ಷತೆಯನ್ನು ಹಾಕಿದರು.

ವ|| ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕೆಮ್ಮುಗಿಲ ತೆರೆಯ ಪೊರೆಯೊಳ್ ನೆಗೆದು ಪೊಱಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚೌಪಳಿಗೆಯ ಬಾಗಿಲೊಳ್ ನಿಂದು-

ಆಗ ನಾರಾಯಣನ ತಂಗಿ ಸುಭದ್ರೆ ಎಂಬ ಕನ್ಯೆಯು  ಕೆಂಪು ಮೋಡಗಳ ತೆರೆಯ ಹಿಂದಿನಿಂದ ಹೊರಬರುವ ವಿದ್ಯಾಧರಿಯಂತೆ ತನ್ನ ಕೆಂಪುಚಿನ್ನದ ಕನ್ನೆಮಾಡದ ಮೇಲಿನ ಮಾಳಿಗೆಯ ತೊಟ್ಟಿಯ ಬಾಗಿಲಲ್ಲಿ ನಿಂತು

ಚಂ||    ಬಳಸಿದ ಗುಜ್ಜುಗಳ್ ನೆರೆದ ಮೇಳದ ಕನ್ನೆಯರೆತ್ತಮಿಕ್ಕೆ ಸಂ

ಚಳಿಸುವ ಚಾಮರಂ ಕನಕ ಪದ್ಮದ ಸೀಗುರಿ ತೊಟ್ಟ ಮಾಣಿಕಂ|

ಗಳ ಬೆಳಗಿಟ್ಟಳಂ ತನಗೊಡಂಬಡೆ ದೇಸೆ ವಿಳಾಸಮಂ ಪುದುಂ

ಗೊಳಿಸೆ ಮರಲ್ದು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ|| ೪೦ ||

ಬಳಸಿದ ಗುಜ್ಜುಗಳ್, ನೆರೆದ ಮೇಳದ ಕನ್ನೆಯರ್‌ ಎತ್ತಂ ಇಕ್ಕೆ ಸಂಚಳಿಸುವ ಚಾಮರಂ, ಕನಕ ಪದ್ಮದ ಸೀಗುರಿ, ತೊಟ್ಟ ಮಾಣಿಕಂಗಳ ಬೆಳಗು ಇಟ್ಟಳಂ ತನಗೆ ಒಡಂಬಡೆ, ದೇಸೆ ವಿಳಾಸಮಂ ಪುದುಂಗೊಳಿಸೆ, ಮರಲ್ದು ಕನ್ನೆ ನಡೆ ನೋಡಿ, ಗುಣಾರ್ಣವನ್‌ ಎಂಬನ್‌ ಈತನೇ?

ಸುತ್ತಲೂ ಇದ್ದ ಅಂತಃಪುರ ಸೇವಕರಾದ ಕುಬ್ಜರು, ಜೊತೆಗಿದ್ದ ಮೇಳದ ಕನ್ನೆಯರು ಎಲ್ಲ ಕಡೆಯೂ ಚಾಮರಗಳನ್ನು ಬೀಸುತ್ತಿದ್ದರು. ಹೊಂದಾವರೆಯ ಕೊಡೆ, ತೊಟ್ಟ ಮಾಣಿಕ್ಯಗಳ ಪ್ರಭೆ ಅವಳಿಗೆ ಸುಂದರವಾಗಿ ಒಪ್ಪುತ್ತಿತ್ತು. ಹೀಗೆ ವಿಳಾಸ, ಸೌಂದರ್ಯಗಳು ಸೇರಿಕೊಂಡಿರಲು, ಆ ಕನ್ಯೆಯು ಅರ್ಜುನನನ್ನು ಸರಿಯಾಗಿ ನೋಡಿ, ಉಬ್ಬಿಹೋಗಿ, ʼಗುಣಾರ್ಣವನೆಂದರೆ ಇವನೇ ಏನು?ʼ

ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಪತ್ತಿದ ಕಣ್ಣುಮನುೞ್ಗಿದ ಮನಮುಮಂ ಜೋಲ್ದ ನಾಣುಮಂ ನೇಲ್ದ ಸರಮುಮನಱಿದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗೞೆ-

ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡೆ, ಆಕೆಗಳ್‌ ಆಕೆಯ ಪತ್ತಿದ ಕಣ್ಣುಮನ್‌ ಉೞ್ಗಿದ ಮನಮುಮಂ, ಜೋಲ್ದ ನಾಣುಮಂ, ನೇಲ್ದ ಸರಮುಮನ್‌ ಅಱಿದು, ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದ ಅಗುಂತಿಗಳನ್‌ ಅಂತುಂ ಅಳವಲ್ಲದೆ ಪೊಗೞೆ,

ಎಂದು ತನ್ನ ಮೇಳದವರನ್ನು ವಿಚಾರಿಸಿದಳು. ಆಗ ಅವರುಗಳು ಅರ್ಜುನನ ಕಡೆಗೆ ನೆಟ್ಟ  ಅವಳ ದೃಷ್ಟಿಯನ್ನೂ, ಪ್ರೀತಿಯಲ್ಲಿ ಸೋತ ಮನಸ್ಸನ್ನೂ, ನೀಗಿಕೊಂಡ ನಾಚಿಕೆಯನ್ನೂ, ಕುಗ್ಗಿದ ದನಿಯನ್ನೂ ಗುರುತಿಸಿ, ಸಹಜ ಮನೋಜನ ಕುಲದ, ತ್ಯಾಗದ, ಶೌರ್ಯದ, ಭಾಗ್ಯದ, ಸೌಭಾಗ್ಯದ ಹೆಚ್ಚುಗಾರಿಕೆಗಳನ್ನು ಅಳತೆ ಮೀರಿ ಹೊಗಳಲು

ಚಂ||    ಒದವಿದ ತನ್ನ ಜವ್ವನದ ರೂಪಿನ ಮೆಯ್ಯೊಳೆ ತಪ್ಪುದಪ್ಪು ನೋ

ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ|

ವಿದ ದೊಣೆ ತೀವಿ ತನ್ನನಿಸೆ ಜಾಣನೆ ತಪ್ಪದೆ ತಪ್ಪುದಪ್ಪ ನೋ

ಡಿದುದದಱಿಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್|| ೪೧ ||

(ಟಿಪ್ಪಣಿ: ಈ ಪದ್ಯದ ಅರ್ಥ ಅಸ್ಪಷ್ಟವಾಗಿದೆ, ಪಾಠಾಂತರಗಳು ಅಜ್ಞಾತವಾಗಿವೆ ಎಂದು ಡಿ.ಎಲ್. ನರಸಿಂಹಾಚಾರ್‌ ಅವರು ಹೇಳಿದ್ದಾರೆ.  ಒಟ್ಟಿನಲ್ಲಿ ಅರ್ಜುನನನ್ನು ಕಂಡ ಸುಭದ್ರೆ ಅವನಿಗೆ ಮನಸೋತು ತನ್ನ ಮೈಮನಗಳ ಮೇಲಿನ ಹಿಡಿತವನ್ನೇ ಕಳೆದುಕೊಂಡಳು, ಗೊಂದಲಗೊಂಡಳು ಎಂಬುದು ಈ ಪದ್ಯದ ಸಾರಾಂಶ ಎಂದು ಇಟ್ಟುಕೊಳ್ಳಬಹುದು.)

ವ|| ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನುಮರಲ್ದ ತಾವರೆಯೆಸೞ್ಗಳೊಳ್ ಪುದಿದು ಪುದುಂಗೊಳಿಸಿದಂತಾನುಮನಂಗಾಮೃತವರ್ಷಮನೊದವಿಸಿದಂತಾನುಮೆರ್ದೆಯೊಳೆಡೆವಱಿಯದ ಪೊಳಪಿನೊಳ್ ತಳ್ಪೊಯ್ದು ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯೆ-

ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನುಂ,

ಅರಲ್ದ ತಾವರೆ ಎಸೞ್ಗಳೊಳ್ ಪುದಿದು ಪುದುಂಗೊಳಿಸಿದಂತಾನುಂ,

ಎರ್ದೆಯೊಳ್‌ ಅನಂಗಾಮೃತವರ್ಷಮನ್‌ ಒದವಿಸಿದಂತಾನುಂ,

ಎಡೆವಱಿಯದ  ಪೊಳಪಿನೊಳ್ ತಳ್ಪೊಯ್ದು

ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ

ತನ್ನ ಮನದೊಳ್‌ ಅಳ್ಳಾಟಮಂ ಪಡೆಯೆ

 

ಹಾಗೆ ಫಳಫಳ ಹೊಳೆಯುವ ರೇಷ್ಮೆಯ ಬಣ್ಣಬಣ್ಣದ ವಸ್ತ್ರದಲ್ಲಿ ದೊಡ್ಡದಾಗಿ ಕಾಣುವಂತೆ,

ಅರಳಿದ ತಾವರೆಯ ಎಸಳುಗಳಲ್ಲಿ ಸೇರಿ ಬೆರೆಸಿದಂತೆ,

ಎದೆಯಲ್ಲಿ ಅನಂಗನ ಅಮೃತರಸದ ಮಳೆಯನ್ನು ಉಂಟುಮಾಡಿದಂತೆ,

ಎಳೆಗಡಿಯದೆ  ಕಾಂತಿ ಸೂಸುವ

ತಾವರೆ ಎಸಳ ಕಣ್ಣಿನ ಸುಭದ್ರೆಯ ನೋಟವು

ತನ್ನ ಮನವನ್ನು ಅಲುಗಾಡಿಸಲು-

(ಟಿಪ್ಪಣಿ: ಮೇಲಿನದು ವಚನವು ಹೇಗಿದೆಯೋ ಹಾಗೆಯೇ ಮಾಡಿರುವ ಅನುವಾದ ಮಾತ್ರ. ಇಲ್ಲಿ ಮೊದಲಿನ ಎರಡು ಸಾಲುಗಳ ಅರ್ಥ ಸ್ಪಷ್ಟವಾಗುವುದಿಲ್ಲ.  ಮೂರನೆಯ ಸಾಲಿನ ಕೊನೆಯಲ್ಲಿರುವ ʼಎರ್ದೆಯೊಳ್‌ʼ ಎಂಬ ಶಬ್ದವನ್ನು ಸಾಲಿನ ಮೊದಲಿಗೆ ತಂದು ಅನ್ವಯಾನುಸಾರ ಅರ್ಥ ಮಾಡಿರುವುದು ಸರಿಯೋ ತಪ್ಪೋ ತಿಳಿಯುವಂತಿಲ್ಲ.  ಮೊದಲಿನ ಮೂರು ಸಾಲುಗಳಲ್ಲಿ ಕೊಟ್ಟ ಮೂರು ಚಿತ್ರಗಳ ಪೈಕಿ ಮೊದಲ ಎರಡು ಸಾಲುಗಳಲ್ಲಿ ಕವಿ ಏನನ್ನು ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುವುದು  ಕಷ್ಟ.)

ಮ||     ನನೆಯಂಬಂಬನೆ ಕರ್ಚಿ ಪಾಱಿದಪುದೋ ಶೃಂಗಾರ ವಾರಾಶಿ ಭೋಂ

ಕನೆ ಬೆಳ್ಳಂಗೆಡೆದತ್ತೊ ಕಾಮನೆಱೆ ಮೆಯ್ವೆರ್ಚಿತ್ತೊ ಪೇಳೀಕೆಗೆಂ|

ಬಿನೆಗಂ ಸೋಲಮನುಂಟುಮಾಡೆ ಹರಿಗಂ ಕರ್ಣಾಂತ ವಿಶ್ರಾಂತ ಲೋ

ಚನನಾಲೋಚನಗೋಚರಂಬರೆಗಮೊಲ್ದಾ ಕನ್ನೆಯಂ ನೋಡಿದಂ|| ೪೨||

ನನೆಯಂಬು ಅಂಬನೆ ಕರ್ಚಿ ಪಾಱಿದಪುದೋ, ಶೃಂಗಾರ ವಾರಾಶಿ ಭೋಂಕನೆ ಬೆಳ್ಳಂಗೆಡೆದತ್ತೊ, ಕಾಮನ ಎಱೆ ಮೆಯ್ವೆರ್ಚಿತ್ತೊ ಪೇಳ್‌ ಈಕೆಗೆ ಎಂಬಿನೆಗಂ ಸೋಲಮನ್‌ ಉಂಟುಮಾಡೆ, ಹರಿಗಂ, ಕರ್ಣಾಂತ ವಿಶ್ರಾಂತ ಲೋಚನನ್‌, ಆಲೋಚನಗೋಚರಂಬರೆಗಂ ಒಲ್ದು ಆ ಕನ್ನೆಯಂ ನೋಡಿದಂ

ಕಾಮಬಾಣಗಳು ಒಂದರ ಹಿಂದನ್ನು ಒಂದು ಕಚ್ಚಿ ಹಿಡಿದುಕೊಂಡು ಹಾರುತ್ತಿದೆಯೋ, ಶೃಂಗಾರದ ಕಡಲು ಒಮ್ಮೆಗೇ ನೆರೆಯಾಗಿ ನುಗ್ಗಿತೋ, ಈಕೆಯ ಮೇಲೆ ಕಾಮನ ಯಜಮಾನಿಕೆ ಹೆಚ್ಚಿತೋ ಹೇಳು ಎಂಬಂತೆ ಆಕೆಯಲ್ಲಿ ಮೋಹವು ಹುಟ್ಟಿ ಹರಿಯಿತು. ಆಗ, ಕಿವಿಯವರೆಗೂ ಕಣ್ಣಿದ್ದ  ಹರಿಗನು ಕಣ್ಣಿಗೆ ಕಾಣುವಷ್ಟು ಹೊತ್ತೂ, ಪ್ರೀತಿಯಿಂದ ಸುಭದ್ರೆಯನ್ನು ನೋಡಿದನು.