ಪಂಪಭಾರತ ಆಶ್ವಾಸ ೪ ಪದ್ಯಗಳು ೧ರಿಂದ ೯

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ ವಿಜಯ ಮಹಾಮೇರುವಿನೆ ಕಡೆದು ಪಡೆದ ಅಳವು, ಆರುಮನ್‌ ಇೞಿಸಿದುದು ಉದಾತ್ತನಾರಾಯಣನಾ)

ಲಕ್ಷ್ಮಿಯನ್ನು ಶತ್ರುಸೈನ್ಯವೆಂಬ ಕಡಲಿನಲ್ಲಿ ತನ್ನ ತೋಳುಗಳೆಂಬ ಮೇರುಪರ್ವತದಿಂದ ಕಡೆದು ಪಡೆದ ಉದಾತ್ತ ನಾರಾಯಣನ (ಅರ್ಜುನನ) ಪರಾಕ್ರಮವು ಯಾರ ಪರಾಕ್ರಮವನ್ನೂ ಕಡಿಮೆ ಮಾಡುವಂತಿತ್ತು.

(ಟಿಪ್ಪಣಿ: ಇಲ್ಲಿ ಒಂದನೇ ಆಶ್ವಾಸದ ಮೊದಲನೇ ಪದ್ಯವನ್ನು ನೆನಪಿಸಿಕೊಳ್ಳಬೇಕು. ಅದರಲ್ಲಿ ವಿಷ್ಣುವಿನ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ  ಸೂಚಿಸಿದಂತೆ ಈ ಪದ್ಯದಲ್ಲಿಯೂ ಕವಿ ಮಾಡಿದ್ದಾನೆ.  ಹಾಲಿನ ಕಡಲನ್ನು ಮಂದರಪರ್ವತವನ್ನು ಬಳಸಿ ಕಡೆದಾಗ ಸಿಕ್ಕಿದ ಲಕ್ಷ್ಮಿಯನ್ನು ವಿಷ್ಣುವು ಪಡೆದುಕೊಳ್ಳುತ್ತಾನೆ. ಅರ್ಜುನನೂ ಸಹ ವೈರಿಸೈನ್ಯವನ್ನು ಕಡೆದು ಸಂಪತ್ತಿನ ರೂಪದ ಲಕ್ಷ್ಮಿಯನ್ನು ಪಡೆಯುತ್ತಾನೆ, ಆದರೆ ಅದು ತನ್ನದೇ ಪರಾಕ್ರಮದಿಂದ. ಹೀಗಾಗಿ ಕವಿ ಅರ್ಜುನನನ್ನು ʼಉದಾತ್ತ ನಾರಾಯಣʼ ಎಂದು ಕರೆದು ಅವನು ʼನಾರಾಯಣʼನ ಪರಾಕ್ರಮವನ್ನೂ ಇಳಿಸಿದವನು ಎಂದು ಪರೋಕ್ಷವಾಗಿ ಸೂಚಿಸುತ್ತಿದ್ದಾನೆ.)

 

ವ|| ಅಂತು ದ್ರುಪದನ ಪೊೞಲೊಳ್ ಪಾಂಡವರ್ ಚಾಗಕ್ಕೆ ಬೂತುಂ ಭೋಗಕ್ಕೆ ಪೊೞ್ತುಂ ನೆಱೆಯದೆನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್-

(ಅಂತು ದ್ರುಪದನ ಪೊೞಲೊಳ್, ಪಾಂಡವರ್, ʼಚಾಗಕ್ಕೆ ಬೂತುಂ ಭೋಗಕ್ಕೆ ಪೊೞ್ತುಂ ನೆಱೆಯದುʼ ಎನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತ ಇರ್ಪನ್ನೆಗಂ ಇತ್ತಲ್)

ಹಾಗೆ ದ್ರುಪದನ ರಾಜ್ಯದಲ್ಲಿ ಪಾಂಡವರು ʼದಾನ ಪಡೆಯಲು ಬಡಪಾಯಿಗಳೂ, ಭೋಗಿಸಲು ಸಮಯವೂ ಸಾಲದುʼ ಎಂಬಂತೆ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದಾಗ-

[ಟಿಪ್ಪಣಿ:  ʼಚಾಗಕ್ಕೆ ಬೂತುಂ ಭೋಗಕ್ಕೆ ಪೊೞ್ತುಂ ನೆರೆಯದುʼ: (ಪಾಂಡವರು ಎಷ್ಟು ದಾನ ಕೊಟ್ಟಿದ್ದಾರೆಂದರೆ) ದಾನ ಪಡೆಯಲು ಇನ್ನು ಬಡವರೇ ಸಿಕ್ಕದಂಥ ಪರಿಸ್ಥಿತಿ! ಎಷ್ಟು ಹೊತ್ತು ಭೋಗಿಸಿದರೂ, ಭೋಗಿಸಿ ಮುಗಿಸಲು ಇನ್ನೂ ಸಮಯ ಬೇಕು ಎನ್ನುವಂಥ ಶ್ರೀಮಂತಿಕೆ!

ಇದೇ ಆಶ್ವಾಸದಲ್ಲಿ ಮುಂದೆ ಪಂಪನ ಪ್ರಸಿದ್ಧ ಪದ್ಯ ʼಚಾಗದ ಭೋಗದಕ್ಕರದ ಗೇಯದ…ʼವನ್ನು ಕಾಣುತ್ತೇವೆ. ಅಲ್ಲಿ ತ್ಯಾಗ, ಭೋಗಗಳನ್ನು ಮಾನವ ಬದುಕಿನ ಬಹು ದೊಡ್ಡ ಮೌಲ್ಯಗಳೆಂದು ಪಂಪ ಹೇಳುತ್ತಾನೆ. ಹಾಗೆಯೇ ಇಲ್ಲಿಯೂ ತ್ಯಾಗ(ದಾನ), ಭೋಗಗಳ ತುಟ್ಟ ತುದಿಯನ್ನು ಮುಟ್ಟಿರುವ ʼಮಾನಸʼರಾದ  ಪಾಂಡವರೇ ನಿಜವಾದ ʼಮಾನಸʼರೆಂದು ಅವನು ಸೂಚಿಸುತ್ತಿದ್ದಾನೆ.)

 

ಮ||     ಚರರಾಗೆಯ್ದಿದರೆಯ್ದಿ ಹಸ್ತಿನಪುರಕ್ಕಾ ಪಾಂಡವರ್ ತಮ್ಮುತ

ಯ್ವರುಮಿರ್ದರ್ ದ್ರುಪದಾಧಿರಾಜ ಪುರದೊಳ್ ಕೆಯ್ಕೊಂಡು ಪಾಂಚಾಳಿಯಂ|

ಧುರದೊಳ್ ಕರ್ಣನನಾಂತು ಗೆಲ್ದವನವಂ ಸಂದರ್ಜುನಂ ತಳ್ತು ಸಂ

ಗರದೊಳ್ ಶಲ್ಯನನಿಕ್ಕಿ ಗೆಲ್ದದಟನಾ ಭೀಮಂ ಗಡಂ ಕಾಣಿರೇ|| ೨||

(ಚರರ್‌ ಆಗ ಎಯ್ದಿದರ್‌ ಎಯ್ದಿ ಹಸ್ತಿನಪುರಕ್ಕೆ ʼಆ ಪಾಂಡವರ್ ತಮ್ಮುತಯ್ವರುಂ ಇರ್ದರ್ ದ್ರುಪದಾಧಿರಾಜ  ಪುರದೊಳ್ ಕೆಯ್ಕೊಂಡು ಪಾಂಚಾಳಿಯಂ, ಧುರದೊಳ್ ಕರ್ಣನನ್‌ ಆಂತು ಗೆಲ್ದವನ್‌ ಅವಂ ಸಂದ ಅರ್ಜುನಂ; ತಳ್ತು ಸಂಗರದೊಳ್ ಶಲ್ಯನನ್‌ ಇಕ್ಕಿ ಗೆಲ್ದ ಅದಟನ್‌ ಆ ಭೀಮಂ ಗಡಂ ಕಾಣಿರೇ)

ಆಗ ಸುದ್ದಿಯನ್ನು ತಿಳಿಯಲೆಂದು ಹೋಗಿದ್ದ ಬೇಹುಗಾರರು ಹಸ್ತಿನಾಪುರಕ್ಕೆ ಹಿಂತಿರುಗಿ ಬಂದು ʼಪಾಂಡವರು ತಾವು ಐದು ಮಂದಿಯೂ, ದ್ರೌಪದಿಯೊಂದಿಗೆ ದ್ರುಪದನ ರಾಜ್ಯದಲ್ಲಿ ಇದ್ದಾರೆ; (ಸ್ವಯಂವರದಲ್ಲಿ) ಕರ್ಣನನ್ನು ಸೋಲಿಸಿದವನು ಅರ್ಜುನನಂತೆ! ಶಲ್ಯನನ್ನು ನೆಲಕ್ಕೆ ಕೆಡವಿದವನು ಭೀಮನಂತೆ!ʼ ಎಂಬ ಸುದ್ದಿಯನ್ನು ತಂದರು.

ವ|| ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ್ ಕೇಳ್ದು ಬಿಲ್ಲುಂಬೆಱಗುಮಾಗಿ

ಈ ಮಾತನ್ನು ಕೇಳಿದ ಧೃತರಾಷ್ಟ್ರ, ದುರ್ಯೋಧನ ಮೊದಲಾದವರು  ಬೆರಗುಗೊಂಡು ಕಂಬಗಳಂತೆ ನಿಂತಲ್ಲೇ ನಿಂತುಬಿಟ್ಟರು.

 

ಕಂ||     ಕಾಯ್ವೞಲುಱೆ ಜತುಗೃಹದೊಳ

ಗಯ್ವರುಮಂ ಮಂತ್ರಬಲದೆ ಸುಟ್ಟೊಡಮವರಂ|

ದೆಯ್ವಬಲಮೊಂದೆ ಕಾದುದು

ದೆಯ್ವಮನಾರಯ್ಯ ಮೀಱಿ ಬಾೞಲ್ ನೆರೆವರ್|| ೩||

(ಕಾಯ್ವ  ಅೞಲ್‌ ಉಱೆ, ಜತುಗೃಹದೊಳಗೆ ಅಯ್ವರುಮಂ  ಮಂತ್ರಬಲದೆ ಸುಟ್ಟೊಡಂ ಅವರಂ ದೆಯ್ವಬಲಂ ಒಂದೆ ಕಾದುದು!  ದೆಯ್ವಮನ್‌ ಆರಯ್ಯ ಮೀಱಿ ಬಾೞಲ್ ನೆರೆವರ್?)

ನಾವು ಹಲವು ಜನ ಸೇರಿ, ಮಂತ್ರಾಲೋಚನೆ ಮಾಡಿ, ಅವರನ್ನು ಅರಗಿನ ಮನೆಯೊಳಗೆ ಸೇರಿಸಿ, ಉರಿಯುವ ಬೆಂಕಿಯಲ್ಲಿ  ಸುಟ್ಟರೂ ಸಹ ದೈವಬಲವು ಅವರನ್ನು ಉಳಿಸಿಬಿಟ್ಟಿದೆ! ದೈವವನ್ನು ಯಾರಪ್ಪ ಮೀರಿ ಬಾಳಬಲ್ಲವರು?

 

ಎಂಬುದುಂ  ಭೀಷ್ಮ ದ್ರೋಣಾದಿಗಳ್ ನಿಶ್ಚಿತಮಂತ್ರರಾಗಿ ವಿದುರನಂ ಕರೆದಾಳೋಚಿಸಿ ಪೃಥಾ ತನೂಜರಂ ನಿನ್ನ ಬಲ್ಲ ಮಾೞ್ಕೆಯಿಂ ನುಡಿದೊಡಂಗೊಂಡು ಬರ್ಪುದೆಂದು ಪೇೞ್ದಟ್ಟುವುದುಂ ಆತನ್‌ ಅಂತೆಗೆಯ್ವೆನೆಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ವಂದು ಪಾಂಡುಪುತ್ರರಂ ಕಂಡು-

(ಎಂಬುದುಂ  ಭೀಷ್ಮ ದ್ರೋಣಾದಿಗಳ್ ನಿಶ್ಚಿತಮಂತ್ರರಾಗಿ ವಿದುರನಂ ಕರೆದು ಆಳೋಚಿಸಿ, ʼಪೃಥಾ ತನೂಜರಂ ನಿನ್ನ ಬಲ್ಲ ಮಾೞ್ಕೆಯಿಂ ನುಡಿದು ಒಡಂಗೊಂಡು ಬರ್ಪುದುʼ ಎಂದು ಪೇೞ್ದು  ಅಟ್ಟುವುದುಂ ಆತನ್‌ ʼಅಂತೆಗೆಯ್ವೆನ್‌ʼ ಎಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ವಂದು ಪಾಂಡುಪುತ್ರರಂ ಕಂಡು)

ಎನ್ನಲು, ಭೀಷ್ಮ, ದ್ರೋಣ ಮೊದಲಾದವರು ಆಲೋಚಿಸಿ ಒಂದು ನಿರ್ಣಯಕ್ಕೆ ಬಂದು, ವಿದುರನನ್ನು ಕರೆದು ಅವನೊಂದಿಗೆ ಚರ್ಚಿಸಿ, ʼಕುಂತಿಯ ಮಕ್ಕಳನ್ನು ನಿನಗೆ ಸರಿಕಂಡ ರೀತಿಯಲ್ಲಿ ಮಾತನಾಡಿ(ಒಲಿಸಿ), ಕರೆದುಕೊಂಡು ಬಾʼ ಎಂದು ಹೇಳಿಕಳಿಸಿದರು. ಅವನು ʼಹಾಗೆಯೇ ಮಾಡುತ್ತೇನೆʼ ಎಂದು ರಥವನ್ನು ಹತ್ತಿ ಪಾಂಚಾಳರಾಜಪುರಕ್ಕೆ ಬಂದು, ಪಾಂಡವರನ್ನು ಕಂಡು-

 

ಚಂ||    ಅದು ಪಿರಿದುಂ ಪ್ರಮಾದಮದುವುಂ ಕುರುರಾಜನಿನಾಯ್ತು ಪೋಯ್ತು ಸಂ

ದುದು ಮರೆಯಲ್ಕೆ ವೇೞ್ಪುದದನಾಳ್ವುದು ತಪ್ಪದೆ ಪಾಂಡುರಾಜನಾ|

ಳ್ದುದನೆಳೆಯಂ ಮನಂ ಬಸದೆ ಬರ್ಪುದು ನೀಮೆನೆ ಪೋಪ ಕಜ್ಜಮಂ

ವಿದುರನೊಳಯ್ವರುಂ ಸಮೆದು ಪೇೞ್ವುದುಮಾ ದ್ರುಪದಂಗೆ ರಾಗದಿಂ|| ೪||

[ʼಅದು ಪಿರಿದುಂ ಪ್ರಮಾದಂ, ಅದುವುಂ ಕುರುರಾಜನಿನ್‌ ಆಯ್ತು ಪೋಯ್ತು, ಸಂದುದು ಮರೆಯಲ್ಕೆ ವೇೞ್ಪುದು, ಅದನ್‌ ಆಳ್ವುದು ತಪ್ಪದೆ ಪಾಂಡುರಾಜನ್‌ ಆಳ್ದುದನ್‌ ಎಳೆಯಂ, (ಎಳೆಯಂ ಅದನ್‌, ಪಾಂಡುರಾಜನ್‌ ಆಳ್ದುದನ್‌, ತಪ್ಪದೆ ಆಳ್ವುದು) ಮನಂ ಬಸದೆ ಬರ್ಪುದು ನೀಂʼ ಎನೆ, ಪೋಪ ಕಜ್ಜಮಂ ವಿದುರನೊಳ್‌ ಅಯ್ವರುಂ ಸಮೆದು, ಪೇೞ್ವುದುಂ ಆ ದ್ರುಪದಂಗೆ ರಾಗದಿಂ]

ಅದು (ಎಂದರೆ ಅರಗಿನಮನೆಯಲ್ಲಿ ಸುಡುವ ಸಂಚು ಮಾಡಿದ್ದು) ದೊಡ್ಡ ತಪ್ಪು; ಅದನ್ನು ಮಾಡಿದ್ದು ಆ ಕುರುರಾಜ; ಏನೋ ಆಯಿತು, ಹೋಯಿತು; ಆಗಿಹೋದದ್ದನ್ನು ಮರೆತುಬಿಡಬೇಕು! ಪಾಂಡುರಾಜನು ಆಳಿದ ಆ ಭೂಮಿಯನ್ನು ನೀವೇ ಮತ್ತೆ ತಪ್ಪದೆ ಆಳಬೇಕು. ಮನಸು ಒಡೆದುಕೊಳ್ಳದೆ ನೀವು ಮತ್ತೆ ಹಸ್ತಿನಾಪುರಕ್ಕೆ ಬನ್ನಿʼ ಎಂದು ತಿಳಿಹೇಳಲು, ಆ ಐವರು ಅಣ್ಣ ತಮ್ಮಂದಿರೂ ವಿದುರನೊಂದಿಗೆ ಸಮಾಲೋಚಿಸಿ, (ಹಸ್ತಿನಾಪುರಕ್ಕೆ) ಹೊರಡಲು ನಿರ್ಧರಿಸಿ, ವಿಷಯವನ್ನು ವಿಶ್ವಾಸದಿಂದ ದ್ರುಪದನಿಗೆ ತಿಳಿಸಿದರು.

ವ|| ಆತನ ಬೞಿವೞಿಗೊಟ್ಟ ಮದಕರಿ ಕರೇಣು ಜಾತ್ಯಶ್ವ ಶಶಿತಾರ ಹಾರ ವಸ್ತುಗಳಂ ಕೆಯ್ಕೊಂಡು ದ್ರುಪದಜೆಯನೊಡಗೊಂಡು ದ್ರುಪದನನಿರವೇೞ್ದು ಕತಿಪಯ ಪ್ರಯಾಣಂಗಳಿಂ ಮದಗಜಪುರಮನೆಯ್ದೆ ವಂದಾಗಳ್-

(ಆತನ ಬೞಿವೞಿಗೊಟ್ಟ ಮದಕರಿ, ಕರೇಣು, ಜಾತ್ಯಶ್ವ, ಶಶಿತಾರ ಹಾರ ವಸ್ತುಗಳಂ ಕೆಯ್ಕೊಂಡು, ದ್ರುಪದಜೆಯನ್‌ ಒಡಗೊಂಡು, ದ್ರುಪದನನ್‌ ಇರವೇೞ್ದು, ಕತಿಪಯ ಪ್ರಯಾಣಂಗಳಿಂ ಮದಗಜಪುರಮನ್‌ ಎಯ್ದೆ ವಂದಾಗಳ್)

ಅವನು ಬಳುವಳಿಯಾಗಿ ಕೊಟ್ಟ (ದ್ರೌಪದಿ ತೌರಿನಿಂದ ಗಂಡನ ಮನೆಗೆ ಹೊರಟಿದ್ದಾಳೆ. ಬಳುವಳಿ ಅವಳ ಲೆಕ್ಕದ್ದು) ಮದಕರಿಗಳು, ಹೆ‍ಣ್ಣಾನೆಗಳು, ಉತ್ತಮಜಾತಿಯ ಕುದುರೆಗಳು, ಚಂದ್ರಕಾಂತಿಯಿಂದ ಹೊಳೆಯುವ ಹಾರಗಳು ಮುಂತಾದವುಗಳನ್ನು ತೆಗೆದುಕೊಂಡು, ದ್ರೌಪದಿಯನ್ನು ಕರೆದುಕೊಂಡು, ಕಳಿಸಿಕೊಡಲು ಬಂದ ದ್ರುಪದನನ್ನು ಬೀಳ್ಕೊಟ್ಟು, ಕೆಲವು ದಿನಗಳ ಪ್ರಯಾಣ ಮಾಡಿ ಹಸ್ತಿನಾವತಿಯ ಹತ್ತಿರ ಬಂದಾಗ-

 

ಚಂ||    ಘನಪಥಮಂ ಪಳಂಚಲೆವ ಸೌಧಚಯಂಗಳಿನಾಡುತಿರ್ಪ ಕೇ

ತನತತಿಯಿಂ ಕರೀಂದ್ರ ಗಳಗರ್ಜನೆಯಿಂ ಪಟಹಪ್ರಣಾದಮಂ|

ಘನರವಮೆಂದೆ ನರ್ತಿಸುವ ಕೇಕಿಗಳಿಂ ಕಡುರಯ್ಯಮಪ್ಪ ಹ

ಸ್ತಿನಪುರಮಂ ಜಿತೇಂದ್ರಪುರಮಂ ಪರಮೇಶ್ವರರಾಗಳೆಯ್ದಿದರ್|| ೫||

(ಘನಪಥಮಂ ಪಳಂಚಲೆವ ಸೌಧಚಯಂಗಳಿನ್‌ ಆಡುತಿರ್ಪ ಕೇತನತತಿಯಿಂ, ಕರೀಂದ್ರ ಗಳಗರ್ಜನೆಯಿಂ, ಪಟಹಪ್ರಣಾದಮಂ ಘನರವಂ ಎಂದೆ ನರ್ತಿಸುವ ಕೇಕಿಗಳಿಂ, ಕಡುರಯ್ಯಂ ಅಪ್ಪ ಹಸ್ತಿನಪುರಮಂ, ಜಿತೇಂದ್ರಪುರಮಂ, ಪರಮೇಶ್ವರರ್‌ ಆಗಳ್‌ ಎಯ್ದಿದರ್)

ಆಕಾಶವನ್ನೇ ಮುಟ್ಟುವಷ್ಟು ಎತ್ತರದ ಮಾಳಿಗೆ ಮನೆಗಳಿಂದ  ಅಲ್ಲಾಡುತ್ತಿರುವ ಬಾವುಟಗಳ ಗುಂಪು; ಆನೆಗಳ ಕೊರಳಿಂದ ಹೊಮ್ಮುವ ಘೀಂಕಾರ; ತಮಟೆಗಳ ನಾದವನ್ನು ಗುಡುಗೆಂದೇ ಭಾವಿಸಿ ಕುಣಿಯುವ ನವಿಲುಗಳು ಇವೆಲ್ಲವುಗಳಿಂದ ಬಹುಸುಂದರವಾದ, ಇಂದ್ರನ ಅಮರಾವತಿಯನ್ನೂ ಮೀರಿಸುವ ಹಸ್ತಿನಾಪುರದ ಹತ್ತಿರಕ್ಕೆ ಶ್ರೇಷ್ಠ ಚಕ್ರವರ್ತಿಗಳಾದ  ಪಾಂಡವರು ಬಂದರು.

 

ವ|| ಆಗಳಾ ಪೊೞಲ ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ ಗುಡಿಯಂ ತೋರಣಂಗಳುಮಂ ತುಱುಗಲುಂ ಬಂಬಲುಮಾಗೆ ಕಟ್ಟಿಸಿ ಧೃತರಾಷ್ಟ್ರಂ ದುರ್ಯೋಧನ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳ್ವೆರಸಿದಿರ್ವಂದು ಯಥೋಚಿತ ಪ್ರತಿಪತ್ತಿಗಳಿಂದಯ್ವರುಮಂ ನಿಬಿಡಾಲಿಂಗನಂಗೆಯ್ದು ಮುಂದಿಟ್ಟೊಡಗೊಂಡು ವಂದು ಪೊೞಲಂ ಪುಗಿಸಿ ಮುನ್ನಮೆ ಸಮೆದ ಬೀಡುಗಳೊಳ್ ಬೀಡಂ ಬಿಡಿಸಿ ಸೂೞ್ಸೂೞೊಳೆ ಬಿರ್ದನಿಕ್ಕಿ ವಿವಿಧ ವಿನೋದಂಗಳಂ ತೋಱಿ ಕೆಲವು ದಿವಸಮಿರ್ದು ದ್ರೋಣ ಭೀಷ್ಮ ಕೃಪವಿದುರರ್ಕಳ್ತಮ್ಮೊಳಾಲೋಚಿಸಿ ಎನ್ನ ನಡಪಿದುದರ್ಕಂ ಕೂರ್ತುದರ್ಕಂ ಪಾಂಡುಪುತ್ರರ್ಗೆ ನೆಲನಂ ಪಚ್ಚುಕೊಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯ್ದುಮೊಡಂಬಡದಿರೆ ಭೀಷ್ಮರ್ ಮುನಿದು-

(ಆಗಳ್‌ ಆ ಪೊೞಲ ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ, ಗುಡಿಯಂ ತೋರಣಂಗಳುಮಂ, ತುಱುಗಲುಂ ಬಂಬಲುಂ ಆಗೆ ಕಟ್ಟಿಸಿ, ಧೃತರಾಷ್ಟ್ರಂ ದುರ್ಯೋಧನ. ಕರ್ಣ. ಶಲ್ಯ. ಶಕುನಿ. ನದೀತನೂಜ. ಭಾರದ್ವಾಜ. ಕೃಪಾದಿಗಳ್ವೆರಸು ಇದಿರ್ವಂದು, ಯಥೋಚಿತ ಪ್ರತಿಪತ್ತಿಗಳಿಂದ ಅಯ್ವರುಮಂ ನಿಬಿಡ ಆಲಿಂಗನಂಗೆಯ್ದು, ಮುಂದಿಟ್ಟು ಒಡಗೊಂಡು ವಂದು, ಪೊೞಲಂ ಪುಗಿಸಿ, ಮುನ್ನಮೆ ಸಮೆದ ಬೀಡುಗಳೊಳ್ ಬೀಡಂ ಬಿಡಿಸಿ, ಸೂೞ್ ಸೂೞೊಳೆ ಬಿರ್ದನ್‌ ಇಕ್ಕಿ, ವಿವಿಧ ವಿನೋದಂಗಳಂ ತೋಱಿ, ಕೆಲವು ದಿವಸಂ ಇರ್ದು, ದ್ರೋಣ ಭೀಷ್ಮ ಕೃಪವಿದುರರ್ಕಳ್‌ ತಮ್ಮೊಳ್‌ ಆಲೋಚಿಸಿ; ʼಎನ್ನ ನಡಪಿದುದರ್ಕಂ, ಕೂರ್ತುದರ್ಕಂ ಪಾಂಡುಪುತ್ರರ್ಗೆ ನೆಲನಂ ಪಚ್ಚುಕೊಟ್ಟು ಪಟ್ಟಮಂ ಕಟ್ಟುವೆನ್‌ʼ ಎನೆ, ದುರ್ಯೋಧನನ್‌ ಏಗೆಯ್ದುಂ ಒಡಂಬಡದಿರೆ ಭೀಷ್ಮರ್ ಮುನಿದು)

ಆಗ ಧೃತರಾಷ್ಟ್ರನು ಆ ನಗರದ ಎಲ್ಲ ಬೀದಿಗಳಲ್ಲಿಯೂ ಗಂಧೋದಕ, ಪಂಚಗವ್ಯಗಳನ್ನು ಚಿಮುಕಿಸಲು ವ್ಯವಸ್ಥೆ ಮಾಡಿ, ಬಾವುಟಗಳನ್ನೂ, ತೋರಣಗಳನ್ನೂ ಗೊಂಚಲು ಗೊಂಚಲಾಗಿ ಕಟ್ಟಿಸಿ, ದುರ್ಯೋಧನ. ಕರ್ಣ. ಶಲ್ಯ. ಶಕುನಿ. ಭೀಷ್ಮ. ದ್ರೋಣ. ಕೃಪಾದಿಗಳನ್ನು ಕೂಡಿಕೊಂಡು ಬಂದು ಪಾಂಡವರನ್ನು ಎದುರುಗೊಂಡನು. ಅವರಿಗೆ ಯಥೋಚಿತವಾದ ಕಾಣಿಕೆಗಳನ್ನು ಕೊಟ್ಟು, ಬಲವಾಗಿ ಆಲಂಗಿಸಿಕೊಂಡು, ಮುಂದಿದ್ದು ಅವರನ್ನು ಒಡಗೊಂಡು ಬಂದು, ನಗರವನ್ನು ಹೊಗಿಸಿದನು. ಮೊದಲೇ ಸಜ್ಜುಗೊಳಿಸಿದ್ದ ಮನೆಗಳನ್ನು ಅವರಿಗೆ ಇರಲು ತೋರಿಸಿಕೊಟ್ಟು, ಬೆನ್ನು ಬೆನ್ನಿಗೆ ಔತಣಕೂಟಗಳನ್ನು ಏರ್ಪಡಿಸಿದನು; ಹಲವು ಮನರಂಜನೆಗಳನ್ನು ತೋರಿಸಿದನು. ಹೀಗೆ  ಕೆಲವು ದಿವಸ ಇದ್ದು, ದ್ರೋಣ, ಭೀಷ್ಮ, ವಿದುರರುಗಳು ತಮ್ಮಲ್ಲಿ ಆಲೋಚಿಸಿಕೊಂಡು, (ಭೀಷ್ಮನು) ಹೀಗೆಂದನು: ʼಅವರನ್ನೆಲ್ಲ ನಾನೇ ಸಾಕಿದ್ದೇನೆ; ಪ್ರೀತಿಯಿಂದ ಕಂಡಿದ್ದೇನೆ. ಹಾಗಾಗಿ ಪಾಂಡವರಿಗೆ ನೆಲವನ್ನು ಪಾಲು ಮಾಡಿಕೊಟ್ಟು, ಪಟ್ಟವನ್ನು ಕಟ್ಟುತ್ತೇನೆʼ. ಆದರೆ ದುರ್ಯೋಧನನು ಮಾತ್ರ  ಏನು ಮಾಡಿದರೂ ಇದಕ್ಕೆ ಒಪ್ಪಲಿಲ್ಲ. ಆಗ ಭೀಷ್ಮರು ಸಿಟ್ಟುಗೊಂಡು-

 

ಚಂ||    ಒಡೆಯರದೇವರೆಂದು ನಿನಗಿತ್ತೊಡೆ ಪಟ್ಟಮನುರ್ಕಿದಪ್ಪೆ  ಪೇೞ್

ಪೊಡವಿಗಧೀಶರಂತವರ್ಗಳಯ್ವರುಮಂ ಕ್ರಮದಿಂದೆ ಪಟ್ಟಮಂ|

ತಡೆಯದೆ ಕಟ್ಟಿ ಭೂತಳಮನಾಳಿಸದಿರ್ದೊಡದರ್ಕೆ ಸೊರ್ಕಿ ನೀಂ

ನುಡಿಯದಿರಣ್ಣ ನಿನ್ನ ನುಡಿಗಾಂ ತಡೆದಿರ್ಪೆನೆ ಪೇೞ್ ಸುಯೋಧನಾ|| ೬||

(ʼಒಡೆಯರ್‌ ಅದು ಏವರು?ʼ ಎಂದು ನಿನಗೆ ಇತ್ತೊಡೆ ಪಟ್ಟಮನ್‌, ಉರ್ಕಿದಪ್ಪೆ!  ಪೊಡವಿಗೆ ಅಧೀಶರ್‌ ಅಂತು ಅವರ್ಗಳ್‌ ಅಯ್ವರುಮಂ ಕ್ರಮದಿಂದೆ ಪಟ್ಟಮಂ ತಡೆಯದೆ ಕಟ್ಟಿ, ಭೂತಳಮನ್‌ ಆಳಿಸದಿರ್ದೊಡೆ ಪೇೞ್! ಅದರ್ಕೆ ಸೊರ್ಕಿ ನೀಂ ನುಡಿಯದಿರಣ್ಣ! ನಿನ್ನ ನುಡಿಗೆ ಆಂ ತಡೆದಿರ್ಪೆನೆ? ಪೇೞ್ ಸುಯೋಧನಾ!)

(ಕುರುಡನೂ, ಮುದುಕನೂ ಆದ) ಧೃತರಾಷ್ಟ್ರನು ಏನು ತಾನೆ ಮಾಡಲು ಶಕ್ತ ಎಂದು ಆಲೋಚಿಸಿ, ಪಟ್ಟವನ್ನು ನಿನಗೆ ಕೊಟ್ಟದ್ದಕ್ಕೆ ಈಗ ಹೀಗೆ ಸೊಕ್ಕುತ್ತಿದ್ದೀಯಲ್ಲ! ಈ ಭೂಮಿಗೆ ಹಕ್ಕುದಾರರಾದ ಪಾಂಡವರಿಗೆ ಕ್ರಮದಿಂದ ಪಟ್ಟವನ್ನು ಕಟ್ಟಿಸಿ, ಅವರಿಂದ ಈ ಭೂಮಿಯನ್ನು ಆಳಿಸದಿದ್ದರೆ ಹೇಳು! ಆ ವಿಷಯದಲ್ಲಿ ನೀನು ಸೊಕ್ಕಿನಿಂದ ಮಾತಾಡಬೇಡ! ನಿನ್ನ ಮಾತನ್ನು ಕೇಳಿ ನಾನು ಸುಮ್ಮನುಳಿಯುತ್ತೇನೆಯೆ? ಸುಯೋಧನಾ ಹೇಳು!

(ಟಿಪ್ಪಣಿ: ಇಲ್ಲಿ ಬರುವ ʼಒಡೆಯರ್‌ʼ ಶಬ್ದಕ್ಕೆ ಡಿ. ಎಲ್.‌ ನರಸಿಂಹಾಚಾರ್‌ ಅವರೂ ಸೇರಿದಂತೆ ಹೆಚ್ಚಿನವರು ʼಪಾಂಡವರುʼ ಎಂದೇ ಅರ್ಥ ಮಾಡಿದ್ದಾರೆ. ಆದರೆ, ಹಸ್ತಿನಾಪುರದ ಆಡಳಿತವು ದುರ್ಯೋಧನನ ವಶಕ್ಕೆ ಬಂದಿದ್ದರೆ, ಅದು, ಪಾಂಡುವು ತೀರಿಕೊಂಡ ನಂತರ, ಕಾಲಕ್ರಮೇಣ ಆದ ಬೆಳವಣಿಗೆ.  ಅರಗಿನ ಮನೆಯ ಪ್ರಕರಣ ಮುಗಿದು, ಪಾಂಡವರು ನಾಪತ್ತೆಯಾದಮೇಲೆ, ರಾಜ್ಯವನ್ನು ಮುಂದೆ ನಡೆಸಿಕೊಂಡು ಹೋಗಬೇಕಾದ ಹೊಣೆ, ಸರದಿ ಮತ್ತು ಹಕ್ಕು ಎಲ್ಲವೂ ಕ್ರಮಪ್ರಕಾರ ಧೃತರಾಷ್ಟ್ರನದೇ. ಆದರೆ ಅವನಿಗೆ ವಯಸ್ಸಾಗಿದೆ, ಮೇಲಾಗಿ ಕುರುಡ. ಅದೇ ಕಾರಣಕ್ಕೆ ಭೀಷ್ಮರು ತತ್ಕಾಲಕ್ಕೆ ದುರ್ಯೋಧನನಿಗೆ ರಾಜ್ಯದ ಜವಾಬ್ಧಾರಿಯನ್ನು ವಹಿಸಿದ್ದಿರಬಹುದು, ಅದನ್ನೇ ಅವರು ಈಗ ಎತ್ತಿ ಆಡುತ್ತಿದ್ದಾರೆ.  ʼಒಡೆಯರುʼ ಎಂದರೆ ಪಾಂಡವರು ಎನ್ನುವುದಾದರೆ, ʼಅದು ಏವರು?ʼ ಅದೇನು ಮಾಡಬಲ್ಲರು? ಎಂಬ – ಇಲ್ಲ ಎನ್ನುವ ಉತ್ತರ ಬೇಡುವ – ಪ್ರಶ್ನೆಯೂ ಉಚಿತವಾಗುವುದಿಲ್ಲ. ಏಕೆಂದರೆ ಪಾಂಡವರು ದುರ್ಬಲರೇನೂ ಅಲ್ಲ. ಅದೂ ಅಲ್ಲದೆ ʼಒಡೆಯರುʼ ಎಂಬ ಗೌರವವಾಚಕವು ಭೀಷ್ಮರ ಬಾಯಲ್ಲಿ ಮೊಮ್ಮಕ್ಕಳಾದ ಪಾಂಡವರ ಬಗ್ಗೆ ಬರುವುದೂ ಸಹಜವಾಗಿ ಕಾಣುವುದಿಲ್ಲ.)

 

ಚಂ||    ಕ್ರಮಮಱಿದೆನ್ನ ಕೊಟ್ಟುದನೆ ಕೊಂಡು ಮನೋಮುದದಿಂದೆ ಬಾೞ್ವುದಂ

ತವರಿವರೆಲ್ಲರುಂ ಸಮನದಲ್ಲದೆ ಮಾರ್ಮಲೆದುರ್ಕಿ ಭೀಮನೊಳ್|

ಸಮರದೆ ಗರ್ವದಿಂ ಪೊಣರಲಾರ್ಪಿರೆ ಗಾವಿಲರಿನ್ನುಮೆಲ್ಲರಂ

ಯಮಸುತನುಂ ಸುರೇಂದ್ರಸುತನುಂ ಪೊಸದೀಗಳೆ ಮುಕ್ಕಿ ತೋಱರೇ|| ೭||

(ಕ್ರಮಂ ಅಱಿದು, ಎನ್ನ ಕೊಟ್ಟುದನೆ ಕೊಂಡು, ಮನೋಮುದದಿಂದೆ ಬಾೞ್ವುದು; ಅಂತು ಅವರ್‌ ಇವರ್‌ ಎಲ್ಲರುಂ ಸಮನ್;‌ ಅದಲ್ಲದೆ ಮಾರ್ಮಲೆದು, ಉರ್ಕಿ, ಭೀಮನೊಳ್ ಸಮರದೆ ಗರ್ವದಿಂ ಪೊಣರಲ್‌  ಆರ್ಪಿರೆ? ಗಾವಿಲರ್‌! ಇನ್ನುಮೆಲ್ಲರಂ ಯಮಸುತನುಂ ಸುರೇಂದ್ರಸುತನುಂ ಪೊಸದೀಗಳೆ ಮುಕ್ಕಿ ತೋಱರೇ?)

ಕ್ರಮವನ್ನು ತಿಳಿದು, ನಾನು ಕೊಟ್ಟದ್ದನ್ನು ತೆಗೆದುಕೊಂಡು, ಸಂತೋಷದಿಂದ ಬಾಳಬೇಕು; ನನಗೆ ಅವರು, ಇವರು, ಪಾಂಡವರು, ಕೌರವರು ಎಂಬ ಭೇದವಿಲ್ಲ, ಎಲ್ಲರೂ ಸಮಾನರೇ. ಹಾಗಲ್ಲದೆ ಸಡ್ಡುಹೊಡೆದು, ಸೊಕ್ಕಿನಿಂದ ಭೀಮನೊಂದಿಗೆ ಹೋರಾಡುವ ಆಲೋಚನೆ ಏನಾದರೂ ನಿಮಗುಂಟೆ? ದಡ್ಡರು ನೀವು! ಇನ್ನುಳಿದವರೆಲ್ಲರನ್ನೂ ಧರ್ಮರಾಜನೂ, ಅರ್ಜುನನೂ ಸೇರಿ ಹೊಸಕಿ ಮುಕ್ಕುವುದಿಲ್ಲವೆ?

ವ|| ಅದಲ್ಲದೆಯುಂ ಪಾಂಡುಪುತ್ರರಪ್ಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನೆನಗೆ ಬೆಸಕೆಯ್ವರೆನ್ನೆಂದುದಂ ಮೀಱುವರಲ್ಲರಾನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚುಕೊಡುವಾಗಳಡ್ಡಂ ಬರ್ಪ ಗಂಡರಂ ನೋೞ್ಪೆನೆಂದು ಭೀಷ್ಮರ್ ಬಗ್ಗಿಸಿದೊಡೆ ದುರ್ಯೋಧನನತಿ ಸಂಭ್ರಮಾಕುಳಿತನಾಗಿ ನೀಮೆಂದುದನೆಂದು ಬಾೞ್ವೆನೆಂದೊಡಪ್ಪುದೆಂದು-

(ʼಅದಲ್ಲದೆಯುಂ, ಪಾಂಡುಪುತ್ರರ್‌ ಅಪ್ಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನ್‌ ಎನಗೆ ಬೆಸಕೆಯ್ವರ್.‌ ಎನ್ನ ಎಂದುದಂ ಮೀಱುವರಲ್ಲ. ಆನ್‌ ಅವರ್ಗೆ ಪಟ್ಟಮಂ ಕಟ್ಟಿ, ನೆಲನಂ ಪಚ್ಚುಕೊಡುವಾಗಳ್‌ ಅಡ್ಡಂ ಬರ್ಪ ಗಂಡರಂ ನೋೞ್ಪೆನ್‌ʼ ಎಂದು ಭೀಷ್ಮರ್ ಬಗ್ಗಿಸಿದೊಡೆ,  ದುರ್ಯೋಧನನ್‌ ಅತಿ ಸಂಭ್ರಮ ಆಕುಳಿತನಾಗಿ,  ʼನೀಂ ಎಂದುದನೆ ಎಂದು ಬಾೞ್ವೆನ್‌ʼ  ಎಂದೊಡೆ ʼಅಪ್ಪುದುʼ ಎಂದು)

ʼಅದೂ ಅಲ್ಲದೆ ಪಾಂಡುಪುತ್ರರು (ತಮ್ಮ ತಂದೆ) ಪಾಂಡುರಾಜನ ಮಾತನ್ನಾದರೂ ಮೀರಿಯಾರು, ನನ್ನ ಮಾತನ್ನು ಮೀರುವವರಲ್ಲ! ನಾನು ಅವರಿಗೆ ಪಟ್ಟ ಕಟ್ಟಿ, ರಾಜ್ಯವನ್ನು ಪಾಲುಮಾಡಿ ಕೊಡುವಾಗ ಅಡ್ಡ ಬರುವ ಗಂಡರನ್ನು ನೋಡಿಕೊಳ್ಳುತ್ತೇನೆ!ʼ ಎಂದು ಭೀಷ್ಮರು ಗದರಿದಾಗ ದುರ್ಯೋಧನನು ತತ್ತರಿಸಿಹೋಗಿ, ʼಆಗಲಿ, ನೀವು ಹೇಳಿದಂತೆ ಕೇಳಿಕೊಂಡು ಬಾಳುತ್ತೇನೆʼ ಎಂದು ಒಪ್ಪಿಕೊಂಡನು, ಭೀಷ್ಮರೂ ʼಆಗಲಿʼ ಎಂದರು.

 

ಮ||     ಧರಣೀನಾರಿಗೆ ಪಾಂಡುವಿಂ ಬೞಿಯಮಿಲ್ಲಾರುಂ ಪೆಱರ್ ಗಂಡರಂ

ತಿರಲೇವಂಬಡೆದಿರ್ದೊಡೞ್ದು ಕಿಡುಗುಂ ಸಪ್ತಾಂಗಮೀ ರಾಜಕ|

ಕ್ಕರಸಂ ಧರ್ಮಜನಕ್ಕುಮೆಂದು ನಯದಿಂ ನಿಶ್ಚೈಸಿ ಕಲ್ಯಾಣ ಕಾ

ರ್ಯರತರ್ ಕಟ್ಟಿದರಾ ಯುಧಿಷ್ಠಿರನೃಪಂಗುತ್ಸಾಹದಿಂ ಪಟ್ಟಮಂ|| ೮||

(ʼಧರಣೀನಾರಿಗೆ ಪಾಂಡುವಿಂ ಬೞಿಯಂ ಇಲ್ಲ ಆರುಂ ಪೆಱರ್ ಗಂಡರ್‌, ಅಂತಿರಲ್‌ ಏವಂಬಡೆದು ಇರ್ದೊಡೆ, ಅೞ್ದು ಕಿಡುಗುಂ ಸಪ್ತಾಂಗಂ. ಈ ರಾಜಕಕ್ಕೆ ಅರಸಂ ಧರ್ಮಜನ್‌ ಅಕ್ಕುಂʼ ಎಂದು ನಯದಿಂ ನಿಶ್ಚೈಸಿ ಕಲ್ಯಾಣ ಕಾರ್ಯರತರ್ ಕಟ್ಟಿದರ್‌ ಆ ಯುಧಿಷ್ಠಿರನೃಪಂಗೆ ಉತ್ಸಾಹದಿಂ ಪಟ್ಟಮಂ)

ನೆಲವೆಣ್ಣಿಗೆ ಪಾಂಡುರಾಜನ ನಂತರ ಬೇರೆ ಒಡೆಯರು ಇಲ್ಲದಂತಾಗಿದೆ. ಹಾಗಿರುವಾಗ ನಾವೇ ಒಬ್ಬರ ಮೇಲೊಬ್ಬರು ಹೊಟ್ಟೆ ಉರಿದುಕೊಂಡಿದ್ದರೆ, ರಾಜ್ಯದ ಸಪ್ತಾಂಗಗಳು ಮುಳುಗಿ ನಾಶವಾಗುತ್ತವೆ. ಆದ್ದರಿಂದ ಈ ರಾಜ್ಯಕ್ಕೆ ಧರ್ಮರಾಜನು ದೊರೆಯಾಗಲಿʼ ಎಂದು ನಯದಿಂದ ನಿಶ್ಚಯಿಸಿ, ಒಳಿತನ್ನು ಬಯಸುವವರೆಲ್ಲ ಸೇರಿ, ಧರ್ಮರಾಜನಿಗೆ ಉತ್ಸಾಹದಿಂದ ಪಟ್ಟವನ್ನು ಕಟ್ಟಿದರು.

 

ವ|| ಕಟ್ಟಿ ಸೇತುಬಂಧಮಂತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ವುದೆಂದು ಧೃತರಾಷ್ಟ್ರಂ ಪೂರ್ವಸ್ಥಿತಿಯೊಳ್ ಪಚ್ಚುಕೊಟ್ಟು ದುರ್ಯೋಧನನಪ್ಪೊಡೆ ಪೊಲ್ಲಮಾನಸಂ ನೀಮುಂ ತಾಮುಮೊಂದೆಡೆಯೊಳಿರೆ ಕಿಸುರುಂ ಕಲಹಮುಮೆಂದುಂ ಕುಂದದದು ಕಾರಣದಿಂದಿಲ್ಲಿಗಱುವತ್ತು ಯೋಜನದೊಳಿಂದ್ರಪ್ರಸ್ಥಮೆಂಬುದು ಪೊೞಲಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿಮೆಂಬುದುಮಂತೆಗೆಯ್ವೆಮೆಂದು ಸಮಸ್ತ ಪರಿವಾರ ಪರಿವೃತರಾಗಿ-

(ಕಟ್ಟಿ, ಸೇತುಬಂಧಂ ಅಂತು ಆಗೆ, ʼಗಂಗಾನದಿಯ ತೆಂಕಣ ಪಡುವಣ ನೆಲನಂ ನೀಂ ಆಳ್ವುದು, ಮೂಡಣ ಬಡಗಣ ನೆಲನಂ ದುರ್ಯೋಧನನ್‌ ಆಳ್ವುದುʼ ಎಂದು ಧೃತರಾಷ್ಟ್ರಂ ಪೂರ್ವಸ್ಥಿತಿಯೊಳ್ ಪಚ್ಚುಕೊಟ್ಟು, ʼದುರ್ಯೋಧನನ್‌ ಅಪ್ಪೊಡೆ ಪೊಲ್ಲಮಾನಸಂ, ನೀಮುಂ ತಾಮುಂ ಒಂದೆಡೆಯೊಳಿರೆ ಕಿಸುರುಂ ಕಲಹಮುಂ ಎಂದುಂ ಕುಂದದು; ಅದು ಕಾರಣದಿಂದ, ಇಲ್ಲಿಗೆ ಅಱುವತ್ತು ಯೋಜನದೊಳ್‌ ಇಂದ್ರಪ್ರಸ್ಥಂ ಎಂಬುದು ಪೊೞಲ್‌, ಅಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿಂʼ ಎಂಬುದುಂ ʼಅಂತೆಗೆಯ್ವೆಂʼ ಎಂದು ಸಮಸ್ತ ಪರಿವಾರ ಪರಿವೃತರಾಗಿ)

ಪಟ್ಟವನ್ನು ಕಟ್ಟಿ, ಗಡಿಗಳನ್ನು ನಿರ್ಣಯಿಸಿ ಆದ ಮೇಲೆ, ʼಗಂಗಾನದಿಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿರುವ ನೆಲವನ್ನು ನೀವು ಆಳಿರಿ; ಪೂರ್ವದ ಮತ್ತು ಉತ್ತರದ ನೆಲವನ್ನು ದುರ್ಯೋಧನನು ಆಳಲಿʼ ಎಂದು ಧೃತರಾಷ್ಟ್ರನು ಹಿಂದೆ ಇದ್ದ ಹಾಗೆಯೇ ಪಾಲು ಮಾಡಿಕೊಟ್ಟು, ಪಾಂಡವರಿಗೆ ʼದುರ್ಯೋಧನನಾದರೋ ಕೆಟ್ಟ ಮನುಷ್ಯ; ನೀವೂ, ಅವನೂ ಒಂದೇ ಕಡೆ ಇದ್ದರೆ ಜಗಳವು ಎಂದಿಗೂ ತಪ್ಪುವುದಿಲ್ಲ; ಇಲ್ಲಿಗೆ ಅರವತ್ತು ಯೋಜನ ದೂರದಲ್ಲಿ ಇಂದ್ರಪ್ರಸ್ಥ ಎಂಬ  ಊರು ಇದೆ; ನೀವು ಅಲ್ಲಿಗೆ ಹೋಗಿ, ಇದ್ದು, ಅಲ್ಲಿ ಸುಖದಿಂದ ರಾಜ್ಯವನ್ನು ಆಳಿರಿʼ ಎಂದು ಹೇಳಿದನು. ಪಾಂಡವರು ಅದಕ್ಕೆ ಒಪ್ಪಿ, ʼಹಾಗೆಯೇ ಮಾಡುತ್ತೇವೆʼ ಎಂದು ತಮ್ಮ ಎಲ್ಲಾ ಪರಿವಾರವನ್ನು ಕಟ್ಟಿಕೊಂಡು-

[ಟಿಪ್ಪಣಿ:  ಡಿ.ಎಲ್.‌ ನರಸಿಂಹಾಚಾರ್‌ ಅವರು ಇಲ್ಲಿ ಬರುವ ʼಸೇತುಬಂಧʼ ಶಬ್ದಕ್ಕೆ ಅರ್ಥವನ್ನು ಕೊಟ್ಟಿಲ್ಲ. (ಅವರು ಅದನ್ನು ಬಿಟ್ಟಿರುವುದು ಅಸಂಭವ. ಮುದ್ರಣದ ಹಂತದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಪುಸ್ತಕದ ಹಸ್ತಪ್ರತಿ ದೊರೆತರೆ ಅದನ್ನು ನೋಡಬೇಕು). ʼಸೇತುʼ ಶಬ್ದಕ್ಕೆ ಬೇರೆ ಬೇರೆ ಅರ್ಥಗಳನ್ನು ಶಬ್ದಕೋಶಗಳಲ್ಲಿ ಕೊಡಲಾಗಿದೆ. ಸಂಸ್ಕೃತ ಶಬ್ದಕೋಶದಲ್ಲಿ  boundary, limit  ಎಂಬ ಅರ್ಥಗಳನ್ನೂ ಕೊಟ್ಟಿದ್ದಾರೆ. (https://www.sanskritdictionary.com/?q=setu#:~:text=a%20ridge%20of%20earth%2C%20mound,s%20bridge%20(See%20setubandha%2D) ಇಲ್ಲಿನ ಸಂದರ್ಭಕ್ಕೆ ಆ ಅರ್ಥವೇ ಹೆಚ್ಚು ಹೊಂದುತ್ತದೆ.]

 

ಮು||    ಒಡವರ್ಪುಗ್ರ ಮದೇಭ ವಾಜಿ ಗಣಿಕಾನರ್ಘ್ಯಾದಿ ರತ್ನಂಗಳೊಳ್

ತೊಡರ್ದೊಪ್ಪುತ್ತಿರೆ ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ|

ತೊಡವೆಂಬೊಂದುಮನಾ ಸುರಾಸುರರಿನಾ ಗೋವಿಂದನಿಂ ಮುನ್ನೆ ಕೋ

ಳ್ಪಡದಂಭೋನಿಧಿಯಂತೆ ಬಂದು ನೆಗೞ್ದಿಂದ್ರಪ್ರಸ್ಥಮಂ ಧರ್ಮಜಂ|| ೯||

(ಒಡವರ್ಪ ಉಗ್ರ ಮದೇಭ, ವಾಜಿ, ಗಣಿಕಾ, ಅನರ್ಘ್ಯಾದಿ ರತ್ನಂಗಳೊಳ್ ತೊಡರ್ದು ಒಪ್ಪುತ್ತಿರೆ ಲಕ್ಷ್ಮಿ; ಲಕ್ಷ್ಮಿ, ದಂತಿ, ತುರಗಂ, ಶ್ರೀ ದಿವ್ಯಕಾಂತಾಜನಂ ತೊಡವು ಎಂಬ ಒಂದುಮನ್‌ ಆ ಸುರಾಸುರರಿನ್‌, ಆ ಗೋವಿಂದನಿಂ ಮುನ್ನೆ ಕೋಳ್ಪಡದ ಅಂಭೋನಿಧಿಯಂತೆ ಬಂದು, ನೆಗೞ್ದ ಇಂದ್ರಪ್ರಸ್ಥಮಂ ಧರ್ಮಜಂ)

ಜೊತೆಗೆ ಬರುತ್ತಿರುವ ಉಗ್ರ ಮದ್ದಾನೆಗಳು, ಕುದುರೆಗಳು, ಗಣಿಕೆಯರು, ಅಮೂಲ್ಯವಾದ ರತ್ನಗಳು ಇವುಗಳಿಂದ ಪಾಂಡವರ ಸಂಪತ್ತು(ಲಕ್ಷ್ಮಿ) ಶೋಭಿಸುತ್ತಿತ್ತು; ಅವು (ಕಡಲಕಡೆತದ ಸಂದರ್ಭದಲ್ಲಿ ಹುಟ್ಟಿದ)   ಲಕ್ಷ್ಮಿ, ಆನೆಗಳು, ಕುದುರೆಗಳು, ದೇವಸ್ತ್ರೀಯರು ಇವು ಯಾವುವನ್ನೂ ಸಹ ಸುರಾಸುರರಾಗಲಿ, ವಿಷ್ಣುವಾಗಲಿ ಇಟ್ಟುಕೊಳ್ಳಲೇ ಇಲ್ಲವೇನೋ ಎಂಬಷ್ಟು ಉತ್ಕೃಷ್ಟವಾಗಿದ್ದವು! ಅಂತಹ ಶ್ರೀಮಂತಿಕೆಯಿಂದ ಕೂಡಿ ಧರ್ಮರಾಯನು ಪ್ರಖ್ಯಾತವಾದ ಇಂದ್ರಪ್ರಸ್ಥವನ್ನು-

 

ಮಟ್ಟ ರಗಳೆ||    ಎಯ್ದುವುದುಂ ತತ್ಪುರದುಪವನಂಗ

ಳವಿರಳ ಮಳಯಾನಿಳಕಂಪಿತಂಗ |

ಳವಿರಳ ಕುಸುಮಾವಳಿ ಕಂಪುವೇಱೆ

ಸೊಗಯಿಪ ಕಿಱು ಮಿಡಿಗಳೊಳೊಪ್ಪಿ ತೋಱೆ|

ಲವಣಾಬ್ಧಿಯೆ ಬಳಸಿದುದೆನಿಸುವಗೞ

ಬಳಸೆಸೆದಿರೆ ಕೋಂಟೆಯ ಚೆಲ್ವು ಪೊಗೞ |

ಲರಿದೆನಿಸಿರೆ ನೆಗೆದುದು ನಭಮನೆಯ್ದೆ

ಮಿಳಿರ್ವ ಪತಾಕಾವಳಿ ದಿವಮನೆಯ್ದೆ |

ಬಳಸಿದ ಕೆಂಬೊನ್ನ ಮದಿಲ್ಗಳೊಳಗೆ

ಮಣಿಮಯ ಭವನಾವಳಿ ತೊಳಗಿ ಬೆಳಗೆ |

ರಸರಸದ ಬಾವಿ ಮನೆಮನೆಗೆ ಬೇಱೆ

ಕಿಸುಗಲ್ಗಳ ರಜದ ಕಣಿವೆರಸು ತೋಱೆ |

ಸುರಕುಜದ ನೆಲದೊಳಂಗಣದೊಳೇನು

ಮಲಪಿಲ್ಲದೆ ಕಟ್ಟಿರೆ ಕಾಮಧೇನು |

ಪರದರ ಪಾರ್ವರ ಸೂಳೆಯರ ಮನೆಗಳವು

ಧನದನ ಮನೆಯುಮನೇೞಿಪ ಮನೆಗಳವು |

ಪೊಳಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ

ದಿವಿಜೇಂದ್ರವಿಳಾಸದೊಳಿಂತು ಕೂಡಿ |

ಪರಿತಂದಾಗಳ್‌ ಪಿರಿದೊಸಗೆವೆರಸಿ

ಪುರಕಾಂತೆಯರಾದರದಿಂದೆ ಪರಸಿ |

ಸೂಸುವ ಶೇಷಾಕ್ಷತಮಂ ಸಮಂತು

ಪಿರಿದುಂ ಮನ ಸಂತಸದಿಂದಮಾಂತು |

ಕರುಮಾಡಮನಾದರದಿಂದಮೇಱಿ

ಕೆಲದೊಳ್ಮಾಡಂಗಳನಱಿದು ತೋಱಿ |

ಮಣಿ ಕನಕ ರಜತ ವಸ್ತುಗಳನಿತ್ತು

ಬೇಡಿದ ನಾಡುಗಳನವಯವದಿತ್ತು |

ಕರಿತುರಗ ಬಲಂಗಳ್‌ ಪೆರ್ಚುವಂತು

ಮಲೆಯುಂ ಮಂಡಲಮುಂ ಬೆರ್ಚುವಂತು |

ಕೊಂಡಾಡುವ ನಾಲ್ವರುಮನುಜರೊಳಗೆ

ನೆಗೞ್ದರಿಗನ ತೇಜಮೆ ತೊಳಗಿ ಬೆಳಗೆ |

ನೆಲನಂ ಪ್ರತಿಪಾಲಿಸಿ ಧರ್ಮಸೂನು

ಸುಖಮಿರ್ದಂ ರಿಪುಬಳ ತಿಮಿರ ಭಾನು |

 

ನಾಲ್ಕು ಮಾತ್ರೆಗಳಾಗಿ ಬಿಡಿಸಿ ಬರೆದಾಗ:

ಎಯ್ದುವು-ದುಂ ತ-ತ್ಪುರದುಪ-ವನಂಗ

ಳವಿರಳ- ಮಳಯಾ-ನಿಳಕಂ-ಪಿತಂಗ |

ಳವಿರಳ- ಕುಸುಮಾ-ವಳಿ ಕಂ-ಪುವೇಱೆ

ಸೊಗಯಿಪ- ಕಿಱು ಮಿಡಿ-ಗಳೊಳೊ-ಪ್ಪಿ ತೋಱೆ|

ಲವಣಾ-ಬ್ಧಿಯೆ ಬಳ-ಸಿದುದೆನಿ-ಸುವಗೞ

ಬಳಸೆಸೆ-ದಿರೆ ಕೋಂ-ಟೆಯ ಚೆ-ಲ್ವು ಪೊಗೞ |

ಲರಿದೆನಿ-ಸಿರೆ ನೆಗೆ-ದುದು ನಭ-ಮನೆಯ್ದೆ

ಮಿಳಿರ್ವ ಪ-ತಾಕಾ-ವಳಿ ದಿವ-ಮನೆಯ್ದೆ |

ಬಳಸಿದ- ಕೆಂಬೊ-ನ್ನ ಮದಿಲ್‌-ಗಳೊಳಗೆ

ಮಣಿಮಯ- ಭವನಾ-ವಳಿ ತೊಳ-ಗಿ ಬೆಳಗೆ |

ರಸರಸ-ದ ಬಾವಿ- ಮನೆಮನೆ-ಗೆ ಬೇಱೆ

ಕಿಸುಗಲ್ಗ-ಳ ರಜದ- ಕಣಿವೆರ-ಸು ತೋಱೆ |

ಸುರಕುಜ-ದ ನೆಲದೊ-ಳಂಗಣ-ದೊಳೇನು

ಮಲಪಿ-ಲ್ಲದೆ ಕ-ಟ್ಟಿರೆ ಕಾ-ಮಧೇನು |

ಪರದರ- ಪಾರ್ವರ- ಸೂಳೆಯರ- ಮನೆಗಳವು

ಧನದನ- ಮನೆಯುಮ-ನೇೞಿಪ- ಮನೆಗಳವು |

ಪೊಳಲ ಬೆ-ಡಂಗಂ- ಮೆಚ್ಚಿ ಮೆ-ಚ್ಚಿ ನೋಡಿ

ದಿವಿಜೇಂ-ದ್ರವಿಳಾ-ಸದೊಳಿಂ-ತು ಕೂಡಿ |

ಪರಿತಂ-ದಾಗಳ್‌- ಪಿರಿದೊಸ-ಗೆವೆರಸಿ

ಪುರಕಾಂ-ತೆಯರಾ-ದರದಿಂ-ದೆ ಪರಸಿ |

ಸೂಸುವ- ಶೇಷಾ-ಕ್ಷತಮಂ- ಸಮಂತು

ಪಿರಿದುಂ- ಮನ ಸಂ-ತಸದಿಂ-ದಮಾಂತು |

ಕರುಮಾ-ಡಮನಾ-ದರದಿಂ-ದಮೇಱಿ

ಕೆಲದೊ-ಳ್ಮಾಡಂ-ಗಳನಱಿ-ದು ತೋಱಿ |

ಮಣಿ ಕನ-ಕ ರಜತ- ವಸ್ತುಗ-ಳನಿತ್ತು

ಬೇಡಿದ- ನಾಡುಗ-ಳನವಯ-ವದಿತ್ತು |

ಕರಿತುರ-ಗ ಬಲಂ-ಗಳ್‌ ಪೆ-ರ್ಚುವಂತು

ಮಲೆಯುಂ- ಮಂಡಲ-ಮುಂ ಬೆ-ರ್ಚುವಂತು |

ಕೊಂಡಾ-ಡುವ ನಾ-ಲ್ವರುಮನು-ಜರೊಳಗೆ

ನೆಗೞ್ದರಿ-ಗನ ತೇ-ಜಮೆ ತೊಳ-ಗಿ ಬೆಳಗೆ |

ನೆಲನಂ ಪ್ರತಿಪಾ-ಲಿಸಿ ಧ-ರ್ಮಸೂನು

ಸುಖಮಿ-ರ್ದಂ ರಿಪು-ಬಳ ತಿಮಿ-ರ ಭಾನು |

 

(ಎಯ್ದುವುದುಂ, ತತ್‌ ಪುರದ ಉಪವನಂಗಳ್‌ ಅವಿರಳ ಮಳಯಾನಿಳ ಕಂಪಿತಂಗಳ್‌, ಅವಿರಳ- ಕುಸುಮಾವಳಿ ಕಂಪುವೇಱೆ, ಸೊಗಯಿಪ ಕಿಱು ಮಿಡಿಗಳೊಳ್‌ ಒಪ್ಪಿ ತೋಱೆ, ಲವಣಾಬ್ಧಿಯೆ ಬಳಸಿದುದು ಎನಿಸುವ ಅಗೞ ಬಳಸಿ ಎಸೆದಿರೆ ಕೋಂಟೆಯ ಚೆಲ್ವು, ಪೊಗೞಲ್‌ ಅರಿದು ಎನಿಸಿರೆ ನೆಗೆದುದು ನಭಮನ್‌ ಎಯ್ದೆ, ಮಿಳಿರ್ವ ಪತಾಕಾವಳಿ ದಿವಮನ್‌ ಎಯ್ದೆ, ಬಳಸಿದ ಕೆಂಬೊನ್ನ ಮದಿಲ್‌ಗಳೊಳಗೆ ಮಣಿಮಯ ಭವನಾವಳಿ ತೊಳಗಿ ಬೆಳಗೆ, ರಸರಸದ ಬಾವಿ ಮನೆಮನೆಗೆ ಬೇಱೆ, ಕಿಸುಗಲ್ಗಳ ರಜದ ಕಣಿವೆರಸು ತೋಱೆ, ಸುರಕುಜದ ನೆಲದೊಳ್‌ ಅಂಗಣದೊಳ್‌ ಏನುಂ ಅಲಪು ಇಲ್ಲದೆ ಕಟ್ಟಿರೆ ಕಾಮಧೇನು, ಪರದರ ಪಾರ್ವರ ಸೂಳೆಯರ ಮನೆಗಳವು, ಧನದನ ಮನೆಯುಮನ್‌ ಏೞಿಪ ಮನೆಗಳವು, ಪೊಳಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ, ದಿವಿಜೇಂದ್ರ ವಿಳಾಸದೊಳ್‌ ಇಂತು ಕೂಡಿ, ಪರಿತಂದಾಗಳ್‌ ಪಿರಿದೊಸಗೆವೆರಸಿ, ಪುರಕಾಂತೆಯರ್‌ ಆದರದಿಂದೆ ಪರಸಿ, ಸೂಸುವ ಶೇಷಾಕ್ಷತಮಂ ಸಮಂತು, ಪಿರಿದುಂ ಮನ ಸಂತಸದಿಂದಂ ಅಂತು ಕರುಮಾಡಮನ್‌ ಆದರದಿಂದಂ ಏಱಿ, ಕೆಲದೊಳ್‌ ಮಾಡಂಗಳನ್‌ ಅಱಿದು ತೋಱಿ, ಮಣಿ ಕನಕ ರಜತ ವಸ್ತುಗಳನ್‌ ಇತ್ತು, ಬೇಡಿದ ನಾಡುಗಳನ್‌ ಅವಯವದೆ ಇತ್ತು, ಕರಿತುರಗ ಬಲಂಗಳ್‌ ಪೆರ್ಚುವಂತು, ಮಲೆಯುಂ ಮಂಡಲಮುಂ ಬೆರ್ಚುವಂತು, ಕೊಂಡಾಡುವ ನಾಲ್ವರು ಮನುಜರೊಳಗೆ, ನೆಗೞ್ದ ಅರಿಗನ ತೇಜಮೆ ತೊಳಗಿ ಬೆಳಗೆ, ನೆಲನಂ ಪ್ರತಿಪಾಲಿಸಿ ಧರ್ಮಸೂನು, ಸುಖಮಿರ್ದಂ ರಿಪುಬಳ ತಿಮಿರ ಭಾನು)

ಬಂದಾಗ, ಆ ಪುರದ ಹೋದೋಟಗಳು ಜೋರಾಗಿ ಬೀಸುತ್ತಿದ್ದ  ಮಲಯಾನಿಲದಿಂದ ಕಂಪಿಸಿದವು; ಆ ತೋಟಗಳಲ್ಲಿ ತುಂಬಿಕೊಂಡಿದ್ದ ಹೂವುಗಳಲ್ಲಿ ದಟ್ಟವಾಗಿ ಪರಿಮಳ ತುಂಬಿತ್ತು; ಮರಗಳು ಎಳೆಯ ಮಿಡಿಗಳಿಂದ ಅಲಂಕಾರಗೊಂಡಿದ್ದವು.

ನಗರವನ್ನು ಸುತ್ತುವರಿದ  ಕಂದಕವು ಉಪ್ಪಿನ ಕಡಲಿನಂತೆ ವಿಸ್ತಾರವಾಗಿತ್ತು. ಅಂತಹ ಭಾರೀ ಕಂದಕವನ್ನು ಊರಿನ ಕೋಟೆ ಸುತ್ತುವರಿದಿತ್ತು.  ಆ ಕೋಟೆಯ ಚೆಲುವನ್ನು ಎಷ್ಟು ಹೊಗಳಿದರೂ ಸಾಲದು;‌ ಅದರ ಎತ್ತರ ಆಕಾಶವನ್ನೇ ಮುಟ್ಟುವಂತಿತ್ತು. ಅಲ್ಲಿ ದೇವಲೋಕವನ್ನು ಮುಟ್ಟುವಂತೆ ಬಾವುಟಗಳು ಗುಂಪುಗುಂಪಾಗಿ ಹಾರಾಡುತ್ತಿದ್ದವು.

ಅಲ್ಲಿ ರತ್ನಖಚಿತವಾದ ಭವನಗಳಿದ್ದವು; ಆ ಭವನಗಳ ಸುತ್ತಲೂ ಇದ್ದ ಪಾಗಾರದ ಗೋಡೆಗಳಿಗೆ ತಾಮ್ರದ ತಗಡುಗಳನ್ನು ಹೊದಿಸಿದ್ದರು. (ಕೆಂಬೊನ್ನ ಮದಿಲ್=ತಾಮ್ರದ ತಗಡು ಹೊದಿಸಿದ ಗೋಡೆಗಳು?)

ಅಲ್ಲಿ ಒಂದೊಂದು ಮನೆಗೂ ಒಂದೊಂದು ಬಾವಿ ಇತ್ತು. ಆ ಒಂದೊಂದು ಬಾವಿಯಿಂದಲೂ ನೀರು ಹರಿಸಲು ಕೆಂಪು ಕಲ್ಲಿನಲ್ಲಿ ಕಟ್ಟಿದ ಕಾಲುವೆಗಳಿದ್ದವು. (ಕೆಂಪುಕಲ್ಲಿನ – laterite – ಪುಡಿಯನ್ನು ಬಳಸಿ ಕಟ್ಟಿದ?)

ದೇವಲೋಕದ ಮರದ ಕೆಳಗೆ (ಎಂದರೆ ದೇವಲೋಕದ ಮರದಷ್ಟು ಶ್ರೇಷ್ಠವಾದ ಮರದ ಕೆಳಗೆ), ಅಂಗಳದಲ್ಲಿ ಕಾಮಧೇನುವಿನಂತಹ ದನಗಳನ್ನು ಹೊರಗೆ ಅಲೆಯಲು ಬಿಡದೆ ಕಟ್ಟಿಹಾಕಿದ್ದರು.

ಅವು ವ್ಯಾಪಾರಿಗಳ, ಹಾರುವರ, ಸೂಳೆಯರ ಮನೆಗಳಾಗಿದ್ದವು; ಕುಬೇರನ ಮನೆಯನ್ನೂ ಅಪಹಾಸ್ಯ ಮಾಡುವಂತಿದ್ದವು.

(ಪಾಂಡವರು)ಊರಿನ ಚೆಂದವನ್ನು ಮತ್ತೆ ಮತ್ತೆ  ನೋಡುತ್ತಾ, ಮೆಚ್ಚುತ್ತಾ, ಇಂದ್ರನ ವೈಭವದಿಂದ ಬಂದಾಗ, ಊರಿನ ಹೆಂಗಳೆಯರು ಆದರದಿಂದ ಅವರನ್ನು ಹರಸಿ, ಧಾರಾಳವಾಗಿ ಎರಚಿದ ಅಕ್ಷತೆಕಾಳಿಗೆ ಸಂತೋಷದಿಂದ ತಲೆಯೊಡ್ಡಿ,

ರತ್ನ, ಬಂಗಾರ, ಬೆಳ್ಳಿಯ ವಸ್ತುಗಳನ್ನು ಕೊಟ್ಟು, ಬೇಡಿದ ಭೂಮಿಯನ್ನು ಧಾರಾಳವಾಗಿ ಕೊಟ್ಟು

(ಟಿಪ್ಪಣಿ: ಇಲ್ಲಿ” ಕರುಮಾಡಮನಾದರದಿಂದಮೇಱಿ ಕೆಲದೊಳ್ಮಾಡಂಗಳನಱಿದು ತೋಱಿ” ಎಂಬ ಚಿತ್ರವಿದೆ. ಇದರ ಅರ್ಥ ಸದ್ಯಕ್ಕೆ ನನಗೆ ತಿಳಿಯುತ್ತಿಲ್ಲ. ಮುಂದೆ ನೋಡೋಣ.)

ಆನೆ, ಕುದುರೆಗಳು ಹೆಚ್ಚುವಂತೆ (ಎಂದರೆ ಸೈನ್ಯವನ್ನು ಬಲಪಡಿಸಿ), ಅಧೀನರಾದ ಸಾಮಂತರು, ಪಾಳೆಯಗಾರರು ಹೆದರಿ ನಡೆದುಕೊಳ್ಳುವಂತೆ ಮಾಡಿ

(ಜನ ಸೇರಿದಲ್ಲಿ ಪಾಂಡವರನ್ನು ಕುರಿತು ಮಾತಾಡುವಾಗ) ಧರ್ಮರಾಯನ ನಾಲ್ವರು ತಮ್ಮಂದಿರನ್ನೂ ಹೊಗಳುತ್ತಿದ್ದರು. ಅವರ ಮಾತುಗಳಲ್ಲಿ ಯಾವಾಗಲೂ ಹೆಸರಾಂತ ಅರ್ಜುನನಿಗೆ ಹೆಚ್ಚು ಮಹತ್ವ ಇರುತ್ತಿತ್ತು.

ಹೀಗೆ ಶತ್ರುಗಳೆಂಬ ಕತ್ತಲೆಗೆ ಸೂರ್ಯನಂತಿದ್ದ ಧರ್ಮರಾಯನು ರಾಜ್ಯವನ್ನು ಪರಿಪಾಲಿಸುತ್ತ ಸುಖವಾಗಿದ್ದನು.

(ಟಿಪ್ಪಣಿ: ಮೇಲೆ, ʼಬಳಸಿದ ಕೆಂಬೊನ್ನʼ ಎಂಬ ಚರಣದಿಂದ ಪ್ರಾರಂಭಿಸಿ ʼಪರದರ ಪಾರ್ವರʼ ಎಂಬ ಚರಣದವರೆಗಿನ ಭಾಗವನ್ನು ಒಂದು ಘಟಕವಾಗಿ ಪರಿಗಣಿಸಬಹುದು. ಈ ಘಟಕದ ಮೊದಲಿನ ಮೂರು ಚರಣಗಳಲ್ಲಿ ಅಲ್ಲಿದ್ದ ಮನೆಗಳ ಮೂರು ಎದ್ದು ಕಾಣುವ ಚಿತ್ರಗಳನ್ನು ಕವಿ ಕೊಡುತ್ತಾನೆ. ಮೊದಲನೆಯದರಲ್ಲಿ ಪಾಗಾರಕ್ಕೆ ಕೆಂಪು ತಗಡು ಹೊದಿಸಿದ ಗೋಡೆಗಳು; ಎರಡನೆಯದರಲ್ಲಿ ಒಂದೊಂದು ಮನೆಗೆ ಒಂದೊಂದು ಬಾವಿ ಮತ್ತು ಮೂರನೆಯದರಲ್ಲಿ ಮರದ ನೆರಳಲ್ಲಿ ಕಟ್ಟಿದ ದನಗಳು. ನಾಲ್ಕನೆಯ ಚರಣದಲ್ಲಿ ಈ ಮನೆಗಳು ಕ್ರಮವಾಗಿ ಪರದರು, ಹಾರುವರು ಮತ್ತು ವೇಶ್ಯೆಯರಿಗೆ ಸೇರಿದ್ದು ಎನ್ನುತ್ತಾನೆ. ಪರದರ ಮನೆಗಳಿದ್ದಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತದೆ; ಹಾರುವರ ಮನೆಗಳಿದ್ದಲ್ಲಿ -ʼಬೇರೆʼ ಶಬ್ದದ ಮೂಲಕ- ಮಡಿಯ ಸೂಚನೆ ಇದೆ; ಮತ್ತು ಸೂಳೆಯರ ಮನೆಗಳಿದ್ದಲ್ಲಿ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿ ಕಾಣಿಸುತ್ತದೆ.)

 

 

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *