ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ ಪೆಂಡಿರ್‌ ಅಗಲದೆ ತನ್ನೊಳ್ ಭಾವಿಸಿದ ಪೆಂಡಿರ್‌ ಎನಿಸಿದ ಸೌವಾಗ್ಯದ ಹರಿಗನ್‌ ಎಮ್ಮನ್‌ ಏನ್‌ ಒಲ್ದಪನೋ

ಸಂಪತ್ತು, ಶೌರ್ಯ, ಕೀರ್ತಿ, ನುಡಿ ಎಂಬ ಮಡದಿಯರನ್ನು ತನ್ನ ಸಹಜವಾದ ಮಡದಿಯರಾಗಿ ಪಡೆದ ಭಾಗ್ಯಶಾಲಿಯಾದ ಅರ್ಜುನನು ನಮ್ಮನ್ನೇನು (ನನ್ನನ್ನೇನು) ಒಲಿಯುತ್ತಾನೆಯೇ?

ಕಂ||ಎಂಬ ಬಗೆಯೊಳ್ ಸುಭದ್ರೆ ಪ

ಲುಂಬಿ ಮನಂಬಸದೆ ತನುವನಾಱಿಸಲಲರಿಂ|

ತುಂಬಿಗಳಿಂ ತಣ್ಣೆಲರಿಂ

ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್|| ೨||

ಎಂಬ ಬಗೆಯೊಳ್ ಸುಭದ್ರೆ ಪಲುಂಬಿ, ಮನಂಬಸದೆ ತನುವನ್‌ ಆಱಿಸಲ್‌ ಅಲರಿಂ, ತುಂಬಿಗಳಿಂ, ತಣ್ಣೆಲರಿಂ, ತುಂಬಿದ ತಿಳಿಗೊಳದಿನ್‌ ಎಸೆವ ಬನಮಂ ಪೊಕ್ಕಳ್

ಎಂದು ಯೋಚಿಸಿ ಹಲುಬುತ್ತಾ ಸುಭದ್ರೆ, ಆ ಆಲೋಚನೆಯನ್ನೇ ಬಿಟ್ಟು, ಮೈಯನ್ನು ತಂಪು ಮಾಡಿಕೊಳ್ಳಲೆಂದು ಹೂವುಗಳಿಂದ, ತುಂಬಿಗಳಿಂದ, ತಂಪು ನೆರಳಿನಿಂದ, ತಿಳಿಯಾದ ನೀರಿನಿಂದ ತುಂಬಿದ ಕೊಳದಿಂದ ಶೋಭಿಸುವ ಕಾಡನ್ನು ಹೊಕ್ಕಳು.

ಟಿಪ್ಪಣಿ: ಈ ಕಂದಪದ್ಯವನ್ನು ಬರೆಯುವಾಗ ಕವಿಗೆ ಅರ್ಜುನನು ಈಗಾಗಲೇ ಮದುವೆಯಾಗಿರುವ ದ್ರೌಪದಿಯ ಹಾಗೂ ನಾಗಕನ್ಯೆ ಕನಕಲತೆಯ ನೆನಪು ಬಂದಿರಬಹುದು. ಆದರೆ ಅದನ್ನು ಅವನು ಪ್ರಸ್ತಾವಿಸದೆ, ಸುಭದ್ರೆಯ ʼಹರಿಗನು ನನ್ನನ್ನು ಒಲಿದಾನೆಯೇ?ʼ ಎಂಬ ಪ್ರಶ್ನೆಗೆ ಬೇರೆಯೇ ಕಾರಣ ಮುಂದಿಡುತ್ತಾನೆ!

ಕಂ||ತಳತಳಿಸಿ ಪೊಳೆವ ಮಾವಿನ

ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ|

ಳ್ವಳ ಬಳೆದ ಬೇಟದುರುಳಿಯ

ಬಳಗಮಿದೆಂದೆಳೆಯಳೆಳಸಿ ತಳವೆಳಗಾದಳ್|| ೩ ||

ತಳತಳಿಸಿ ಪೊಳೆವ ಮಾವಿನ ತಳಿರ್ಗಳ, ಅಶೋಕೆಗಳ, ಮಿಸುಪ ಲತೆಗಳ, ನೆಲೆ; ಬಳ್ವಳ ಬಳೆದ ಬೇಟದ ಉರುಳಿಯ ಬಳಗಂ ಇದು ಎಂದು ಎಳೆಯಳ್‌ ಎಳಸಿ ತಳವೆಳಗಾದಳ್

(ಆ ಕಾಡನ್ನು ನೋಡಿ) ಫಳಫಳನೆ ಹೊಳೆಯುವ ಮಾವಿನ ತಳಿರುಗಳ, ಅಶೋಕ ಮರಗಳ(ಅಶೋಕ ಮರದ ತಳಿರುಗಳ?), ಮನಸೆಳೆಯುವ ಬಳ್ಳಿಗಳ ನೆಲೆ ಇದು; ಸೊಂಪಾಗಿ ಬೆಳೆದ, ಮೈದಳೆದ ಕಾಮದ ಕೂಟ ಇದು ಎಂದುಕೊಂಡು ಆ ಎಳೆಯ ಹೆಣ್ಣು ಸುಭದ್ರೆ ಕಳವಳಗೊಂಡಳು.

ಕಂ||ಕೊಳದ ತಡಿವಿಡಿದು ಬೆಳೆದೆಳ

ದಳಿರ್ಗಳಶೋಕೆಗಳ ಲತೆಯ ಮನೆಗಳೊಳೆ ತೆಱಂ|

ಬೊಳೆವಲರ ಬಸದೆ ಸುೞಿವಳಿ

ಗಳ ಬಳಗದ ದನಿಗೆ ಕಿನಿಸಿ ಕಿಂಕಿಱಿವೋದಳ್|| ೪ ||

ಕೊಳದ ತಡಿವಿಡಿದು ಬೆಳೆದ ಎಳೆ ತಳಿರ್ಗಳ ಅಶೋಕೆಗಳ, ಲತೆಯ ಮನೆಗಳೊಳೆ ತೆಱಂಬೊಳೆವ ಅಲರ ಬಸದೆ ಸುೞಿವ ಅಳಿಗಳ ಬಳಗದ ದನಿಗೆ ಕಿನಿಸಿ ಕಿಂಕಿಱಿವೋದಳ್

ಕೊಳದ ಅಂಚಿನ ಗುಂಟ ಬೆಳೆದ, ಎಳೆಯ ಚಿಗುರುಗಳನ್ನು ಹೊತ್ತ ಅಶೋಕ ಮರಗಳಲ್ಲಿ, (ಅಲ್ಲಿರುವ) ಬಳ್ಳಿಮನೆಗಳಲ್ಲಿ ಬೆಳೆದ ಹಲವು ಬಗೆಯ ಹೂಗಳ ಸುತ್ತ ಸುಳಿಯುತ್ತ ಹಾರಾಡುವ ಜೇನ್ನೊಣಗಳು ಉಂಟುಮಾಡುವ ಶಬ್ದವು  (ಸುಭದ್ರೆಗೆ) ಕಿರಿಕಿರಿಯನ್ನುಂಟುಮಾಡಿತು.

ಕಂ||ಸುರಯಿಯ ಬಿರಿಮುಗುಳ್ಗಳ ಪೊರೆ

ವೊರೆಯೊಳ್ ಪೊರೆವೊರಕನಲ್ಲದಲ್ಲುಗುವ ರಜಂ|

ಬೊರೆದು ಪರಕಲಿಸಿದಳಿಕುಳ

ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್|| ೫||

ಸುರಯಿಯ ಬಿರಿಮುಗುಳ್ಗಳ ಪೊರೆವೊರೆಯೊಳ್ ಪೊರೆವೊರಕನಲ್ಲದ, ಅಲ್ಲಿ ಉಗುವ ರಜಂಬೊರೆದು ಪರಕಲಿಸಿದ ಅಳಿಕುಳ ಪರಿಕರಮುಮನ್‌ ಅತನುಶಿಖಿಯ ಕಿಡಿಗಳೆ ಗೆತ್ತಳ್

ಸುರಗೆಯ ಬಿರಿಮೊಗ್ಗುಗಳ ಸುತ್ತಮುತ್ತಲೂ ಅದರ ಹಗುರವಾದ ಧೂಳು (ಗಾಳಿಯಲ್ಲಿ) ತುಂಬಿಕೊಂಡಿತ್ತು. ಅಲ್ಲಿ  ಆ ಧೂಳನ್ನು ಮೈಗೆಲ್ಲ ಅಂಟಿಸಿಕೊಂಡು ಹಾರಾಡುವ ದುಂಬಿಗಳನ್ನು ಸುಭದ್ರೆ ಕಾಮವೆಂಬ ಬೆಂಕಿಯ ಕಿಡಿಗಳೆಂದೇ ಭಾವಿಸಿದಳು

ವ|| ಅಂತು ನನೆಯ ಕೊನೆಯ ತಳಿರ ನಿಱಿದಳಿರ ಮುಗುಳ ಬಿರಿಮುಗುಳ ಮಿಡಿಯ ಕಿಱುಮಿಡಿಯ ಬಲ್ಮಿಡಿಗಳೊಳೆಱಗಿ ತುಱುಗಿದ ಬನಮಂ ಪೊಕ್ಕಲ್ಲಿಯುಂ ಮೆಯ್ಯನಾಱಿಸಲಾಱದೆ ಪೂತ ಚೂತ ಲತೆಗಳೊಳ್ ತಳ್ಪೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳ್ಗಳೊಳ್ ತುಱುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ-

ಅಂತು ನನೆಯ, ಕೊನೆಯ, ತಳಿರ, ನಿಱಿದಳಿರ, ಮುಗುಳ, ಬಿರಿಮುಗುಳ, ಮಿಡಿಯ, ಕಿಱುಮಿಡಿಯ, ಬಲ್ಮಿಡಿಗಳೊಳ್‌ ಎಱಗಿ ತುಱುಗಿದ ಬನಮಂ ಪೊಕ್ಕು, ಅಲ್ಲಿಯುಂ ಮೆಯ್ಯನ್‌ ಆಱಿಸಲಾಱದೆ ಪೂತ ಚೂತ ಲತೆಗಳೊಳ್ ತಳ್ಪೊಯ್ದ, ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ, ಬಿರಿ ಮುಗುಳ್ಗಳೊಳ್ ತುಱುಗಿದ, ಅದಿರ್ಮುತ್ತೆಯ ಸುತ್ತಿನೊಳ್‌ ಎಸೆದು ಉಪಾಶ್ರಯಂ ಪಡೆದ ಸಾಂದ್ರ ಚಂದ್ರಕಾಂತದ ಶಿಲೆಯನ್‌ ಒಳಗುಮಾಡಿ

ಹಾಗೆ ಹೂವು, ಎಳೆಯ ರೆಂಬೆ, ಚಿಗುರು, ನಿರಿನಿರಿ ಶಬ್ದ ಮಾಡುವ ಚಿಗುರು, ಮೊಗ್ಗು, ಬಿರಿಯಲಾದ ಮೊಗ್ಗು, ಮಿಡಿ, ಸಣ್ಣ ಮಿಡಿ, ದೊಡ್ಡ ಮಿಡಿ ಇದೆಲ್ಲದರ ಭಾರದಿಂದ ತುಂಬಿ ಕಿಕ್ಕಿರಿದ ಕಾಡನ್ನು ಹೊಕ್ಕಳು. ಆದರೆ ಅಲ್ಲಿಯೂ ಸಹ ತನ್ನ ಮೈಯನ್ನು ತಂಪು ಮಾಡಿಕೊಳ್ಳಲಾರದೆ, ಹೂಬಿಟ್ಟ ಮಾವಿನ ಬಳ್ಳಿಗಳಿಂದ ಕೂಡಿದ, ಹೊಸ ಮುತ್ತುಗಳಿಂದ ಅಲಂಕಾರಗೊಂಡ, ಬಿರಿ ಮೊಗ್ಗುಗಳಿಂದ ತುಂಬಿಕೊಂಡ, ಸುತ್ತಲೂ ಅದಿರ್ಮುತ್ತೆಯ ಹೂಗಳಿಂದ ಶೋಭಿಸುತ್ತಿದ್ದ ಅಚ್ಚ ಚಂದ್ರಕಾಂತ ಶಿಲೆಯನ್ನು ತನ್ನೊಳಗೆ ಇಟ್ಟುಕೊಂಡ-

(ಇಲ್ಲಿ ʼಚೂತಲತೆʼ ಎಂಬ ಶಬ್ದವಿದೆ. ಮಾವಿನಲ್ಲಿ ಬಳ್ಳಿಮಾವಿನ ಜಾತಿಯೂ ಇದೆಯಂತೆ! ಗೂಗಲ್‌ ನಲ್ಲಿ ಅಂಥ ಬಳ್ಳಿ ಮಾವಿನ ಕೆಲವು ವಿವರಗಳು ಇವೆ.)

ಮ|| ಇದಿರೊಳ್ ಕಟ್ಟಿದ ತೋರಣಂ ನಿಱಿದಳಿರ್ ಪೂಗೊಂಚಲಂದೆತ್ತಮೆ

ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ|

ನ್ಮದ ಭೃಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ

ಕ್ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾಧವೀಮಂಟಪಂ|| ೬||

ಇದಿರೊಳ್ ಕಟ್ಟಿದ ತೋರಣಂ ನಿಱಿದಳಿರ್; ಪೂಗೊಂಚಲ್‌ ಅಂದು ಎತ್ತಂ ಎತ್ತಿದ ಪೂಮಾಲೆ: ಪರಾಗ ರಾಗ ಮುದಿತ ಆಶಾ ಭಾಸಂ ಉದ್ಯತ್‌ ಮಧು ಉನ್ಮದ ಭೃಂಗಧ್ವನಿ ಮಂಗಳಧ್ವನಿ -ಎನಲ್,  ʼಸಾಲ್ವನ್ನೆಗಂ ತಾನೆ ತಕ್ಕುದು ಕಾಮಂಗೆ ವಿವಾಹಮಂಟಪಂʼ ಎನಲ್ಕೆ ಆ ಮಾಧವೀಮಂಟಪಂ

(ಅಲ್ಲೊಂದು ಮಾಧವೀ ಮಂಟಪವಿತ್ತು.) ಆ ಮಂಟಪಕ್ಕೆ ನಿರಿನಿರಿ ತಳಿರುಗಳೇ  ಎದುರಿಗೆ ಕಟ್ಟಿದ  ತೋರಣ; ಹೂಗೊಂಚಲುಗಳೇ ಸುತ್ತಲೂ ಎತ್ತಿಕಟ್ಟಿದ ಹೂಮಾಲೆ; ಹೂಗಳ ಧೂಳು ತುಂಬಿಕೊಂಡ ಆವರಣದಲ್ಲಿ ಹಾರಾಡುತ್ತಿರುವ, ಜೇನುಂಡು ಮದಿಸಿದ ಜೇನುಹುಳಗಳ ದನಿಯೇ ಮಂಗಳಧ್ವನಿ-ಎನ್ನುವಂತಿತ್ತು. ಹಾಗಾಗಿ ಆ ಮಂಟಪವು ʼಮದನನ ಮದುವೆಗೂ ಬೇಕಾದಷ್ಟಾಯಿತು!ʼ ಎನ್ನುವಂತೆ ಶೋಭಿಸುತ್ತಿತ್ತು.

ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಕಿ ವನದುರ್ಗಂಬುಗುವಂತೆ ಪೊಕ್ಕದರೊಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮೆದು ಚಂದನದೆಳದಳಿರ್ಗಳಂ ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ ಬಿಳಿಯ ತಾವರೆಯೆಳಗಾವಿನಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ ಕಪ್ಪುರವಳುಕಿನ ಲಂಬಣಮುಮಂ ತೊಟ್ಟು ಕುಳಿರ್ಕೋೞ್ಪ ಚಂದನರಸಮನೆರ್ದೆಯೊಳಂ ಮೆಯ್ಯೊಳಂ ತಳ್ಕಿಱಿದು ಕರಿಯ ಕರ್ಬಿನ ಕಾವಿನೆಳ ಮೈಂದವಾೞೆಯೆಲೆಯ ಬಿಜ್ಜಣಿಗೆಗಳಿಂ ಬೀಸಲ್ವೇೞ್ದು ತಣ್ಬುಗೆಯ್ಯೆ ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳನಿತುಮಂ ಗೆಲ್ದು-

ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂ ಪುಗುವಂತೆ ಪೊಕ್ಕು, ಅದರೊಳಗೆ ಕಪ್ಪುರವಳುಕಿನ ಜಗಲಿಯನ್‌ ಅಗಲಿತಾಗಿ ಸಮೆದು, ಚಂದನದ ಎಳ ತಳಿರ್ಗಳಂ ಪಾಸಿ, ಮಲ್ಲಿಗೆಯ ಅಲರ್ಗಳಂ ಪೂವಾಸಿ; ಮೃಣಾಳನಾಳದೊಳ್ ಸಮೆದ ಸರಿಗೆ ಕಂಕಣಂಗಳುಮಂ, ಯವ ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ, ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ, ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನ್‌, ಅದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ, ಬಿಳಿಯ ತಾವರೆ ಎಳಗಾವಿನ ಅಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ, ಕಪ್ಪುರವಳುಕಿನ ಲಂಬಣಮುಮಂ ತೊಟ್ಟು; ಕುಳಿರ್‌ ಕೋೞ್ಪ ಚಂದನರಸಮನ್‌ ಎರ್ದೆಯೊಳಂ ಮೆಯ್ಯೊಳಂ ತಳ್ಕಿಱಿದು, ಕರಿಯ ಕರ್ಬಿನ ಕಾವಿನ, ಎಳ ಮೈಂದವಾೞೆ ಎಲೆಯ ಬಿಜ್ಜಣಿಗೆಗಳಿಂ ಬೀಸಲ್‌ ಪೇೞ್ದು ತಣ್ಬುಗೆಯ್ಯೆ, ಮನದ, ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳ್‌ ಅನಿತುಮಂ ಗೆಲ್ದು

ಆ ಮಾಧವೀ ಲತಾಮಂಟಪವನ್ನು ಕಾಮನ ಕಾಟಕ್ಕೆ ಅಂಜಿ ಕಾಡಿನಕೋಟೆಯನ್ನು ಹೊಕ್ಕಂತೆ ಹೊಕ್ಕು ಅಲ್ಲಿ ನಿರ್ಮಿಸಿದ ಕರ್ಪೂರದ ಹಳುಕಿನ ಅಗಲವಾದ ಜಗಲಿಯ ಮೇಲೆ ಗಂಧದ ಎಳೆಯ ಚಿಗುರುಗಳನ್ನು ಹಾಸಿ, ಮಲ್ಲಿಗೆಯ ಹೂಗಳ ಹೂವಿನ ಹಾಸಿಗೆಯನ್ನು  ಮಾಡಿ, ಕಮಲದ ದಂಟಿನಿಂದ ಮಾಡಿದ ತೋಳ್ಬಳೆ ಗಳನ್ನು, ಗೋಧಿಯ ಮೊಳಕೆಗಳಿಂದ ಮಾಡಿದ ಉಡುದಾರವನ್ನು, ಅಚ್ಚಕರ್ಪೂರದಿಂದ ಮಾಡಿದ ಹಾರವನ್ನು, ಕಪ್ಪು ತಾವರೆಯ ದಂಟಿನಿಂದ ಮಾಡಿದ ನೂಪುರವನ್ನು, ಅದರ ಬಿರಿಮೊಗ್ಗುಗಳಿಂದ  ಮಾಡಿದ ಕರ್ಣಪೂರವನ್ನು, ಬಿಳಿಯ ತಾವರೆಯ ಎಳೆಯ ದಂಟುಗಳ ತೆಳುವಾದ ನೂಲಿನಲ್ಲಿ ಪೋಣಿಸಿದ ದುಂಡು(?)ಮಲ್ಲಿಗೆಯ ಬಿರಿಮೊಗ್ಗುಗಳ ಸರವನ್ನು, ಕಪ್ಪುರದ ಹಳುಕಿನ ಹಾರವನ್ನು ತೊಟ್ಟು, ತಂಪಾದ ಚಂದನರಸವನ್ನು ಎದೆಗೂ, ಮೈಗೂ ಬಳಿದುಕೊಂಡು, ಕಪ್ಪು ಕಬ್ಬಿನ  ಹಿಡಿಯ, ಎಳೆಯ ಮಹೇಂದ್ರ ಬಾಳೆ ಎಲೆಯ ಬೀಸಣಿಗೆಗಳಿಂದ ಗಾಳಿ ಬೀಸಲು ಹೇಳಿ ತಂಪು ಮಾಡಲು, ಮೈ, ಮನಸ್ಸುಗಳ ಬಿಸಿಯಲ್ಲಿ ಬಿಸಿಯ ನಿಟ್ಟುಸಿರು ಬಿಟ್ಟು, ತನ್ನ ಬಿಸಿಯಿಂದ (ತನ್ನನ್ನು ತಂಪು ಮಾಡುವ) ಎಲ್ಲ ಪ್ರಯತ್ನವನ್ನೂ ಸೋಲಿಸಿ (ಎಂದರೆ,  ತಂಪು ಮಾಡಲು ಎಷ್ಟೆಲ್ಲ ವಿಧಗಳಿಂದ ಪ್ರಯತ್ನ ಮಾಡಿದರೂ ಹಾಗೆ ಮಾಡಲು ಸಾಧ್ಯವಾಗದೆ)

ಟಿಪ್ಪಣಿ: ಇಲ್ಲಿ ʼವನದುರ್ಗʼ ಎಂಬ ಶಬ್ದವಿದೆ. ಅದನ್ನು ಸುಭದ್ರೆ ಕಾಮನ ಕಾಟಕ್ಕೆ ಅಂಜಿ ಹೊಗುತ್ತಾಳೆ. ಈ ವರ್ಣನೆ ಅಂದಿನ ಕಾಲದ ರಾಜರು ತಮ್ಮ ಸೋಲಿನ ಅಥವಾ ಆಪತ್ತಿನ ಕಾಲಕ್ಕೆ ಇರಲೆಂದು ಗುಟ್ಟಾಗಿ ಕಾಡಿನೊಳಗೊಂದು ಕೋಟೆಯನ್ನು ಕಟ್ಟಿಸಿಟ್ಟುಕೊಳ್ಳುವ  ಪದ್ಧತಿ ಇತ್ತು ಎಂಬುದನ್ನು ಸೂಚಿಸುತ್ತಿರಬಹುದು).

ಉ|| ಕೆಂದಳಿರ್ವಾಸು ಸೇಕದ ತೊವಲ್ಗೆಣೆಯಾಯ್ತು ಮೃಣಾಳ ನಾಳವೊಂ

ದೊಂದಡೆವೊತ್ತಿ ಪತ್ತಿದುವು ಸೂಸುವ ಶೀತಳವಾರಿ ಮೈಯ್ಯನೆ|

ಯ್ತಂದಿರದೆತ್ತ ಬತ್ತಿದುವು ತಚ್ಛಶಿಕಾಂತಶಿಳಾತಳಂ ಸಿಡಿ

ಲ್ದಂದೊಡೆದತ್ತಿದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ|| ೭ ||

ಕೆಂದಳಿರ್‌ ಪಾಸು ಸೇಕದ ತೊವಲ್ಗೆ ಎಣೆಯಾಯ್ತು, ಮೃಣಾಳ ನಾಳ ಒಂದೊಂದು ಅಡೆವೊತ್ತಿ ಪತ್ತಿದುವು, ಸೂಸುವ ಶೀತಳವಾರಿ ಮೈಯ್ಯನ್‌ ಎಯ್ತಂದು ಇರದೆ ಎತ್ತ ಬತ್ತಿದುವು, ತತ್‌ ಶಶಿಕಾಂತಶಿಳಾತಳಂ ಸಿಡಿಲ್ದು

ಅಂದು ಒಡೆದತ್ತು, ಇದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ!

ಕೆಂಪು (ಎಂದರೆ ಎಳೆಯ) ಚಿಗುರಿನ ಹಾಸು ಬಿಸಿಯಾದ ಚರ್ಮದ ಹಾಸಿಗೆಯಂತಾಗಿತ್ತು. ತಾವರೆಯ ಒಂದೊಂದು ನಾಳ(ತೊಟ್ಟು, ದಂಟು)ಗಳೂ  ಬೆಂದು ಮೈಗೆ ಅಂಟಿಕೊಂಡವು. ಚಿಮುಕಿಸಿದ ತಂಪು ನೀರು ಮೈಮೇಲೆ ಬಿದ್ದು, ಮೈಯ ಬಿಸಿಯನ್ನು ತಾಳಲಾರದೆ ಬತ್ತಿಹೋಯಿತು. ಅಲ್ಲಿದ್ದ ಚಂದ್ರಕಾಂತ ಶಿಲೆಯ ಹಾಸುಗಲ್ಲು (ಅವಳ ಮೈಬಿಸಿಯನ್ನು ತಡೆದುಕೊಳ್ಳಲಾಗದೆ ) ಒಡೆದು ಹೋಯಿತು. ಆ ಚಂದ್ರಮುಖಿಯ ಪ್ರೇಮದ ಬೆಂಕಿಯ ತೀಕ್ಷ್ಣತೆ ಅದೆಷ್ಟು ತೀವ್ರವಾಗಿತ್ತೋ!

ಚಂ|| ಅರಿಗನ ಬೇಟದೊಂದೆ ಪೊಸಬೇಟದ ಕೇಸುರಿಯಿಂದಮೆಯ್ದೆ ದ

ಳ್ಳುರಿ ನೆಗೆದಂದು ಕೆಂದಳಿರ ಪಾಸುಗಳಿಂ ಕುಳಿರ್ವಾಲಿನೀರ್ಗಳಿಂ|

ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತಿರೆ ನೋಡೆ ದಾಹಮೊ

ತ್ತರಿಸಿದುದೊಂದು ಪೊನ್ನ ಸಲಗಿರ್ಪವೊಲಿರ್ದುದು ಮೆಯ್ ಸುಭದ್ರೆಯಾ|| ೮ ||

ಅರಿಗನ ಬೇಟದ ಒಂದೆ ಪೊಸಬೇಟದ ಕೇಸುರಿಯಿಂದಂ ಎಯ್ದೆ ದಳ್ಳುರಿ ನೆಗೆದು, ಅಂದು, ಕೆಂದಳಿರ ಪಾಸುಗಳಿಂ ಕುಳಿರ್ವ ಆಲಿ ನೀರ್ಗಳಿಂ ತುರಿಪದೆ ಸೂಸುತುಂ, ಕೆಳದಿಯರ್ ನದಿಪುತ್ತಿರೆ ನೋಡೆ ದಾಹಂ ಒತ್ತರಿಸಿದುದು, ಒಂದು ಪೊನ್ನ ಸಲಗು ಇರ್ಪವೊಲ್‌ ಇರ್ದುದು ಮೆಯ್ ಸುಭದ್ರೆಯಾ

ಅರಿಗನ ಬೇಟದ – ಕೇವಲ ಒಂದು ಹೊಸ ಬೇಟದ – ಕೆಂಬಣ್ಣದ ಉರಿಯಿಂದ ಬೆಂಕಿಯ ಧಗೆ ಚಿಮ್ಮಿ,          (ಅವಳು ಮಲಗಿದ)ಚಿಗುರಿನ ಹಾಸುಗಳನ್ನು ಮತ್ತೆ ಮತ್ತೆ ಬದಲಿಸುತ್ತ(?),  ಆಲಿಕಲ್ಲಿನಷ್ಟು ತಂಪಾದ ನೀರನ್ನು ವೇಗವಾಗಿ ಸುರಿಯುತ್ತ ಅವಳ ಸಖಿಯರು ನಂದಿಸಲು ಪ್ರಯತ್ನಿಸುತ್ತಿದ್ದರೂ ಸಹ, (ಸುಭದ್ರೆಯ ಮೈಯ ಧಗೆ ಮತ್ತೂ ಮತ್ತೂ ಹೆಚ್ಚಿ) ಶರೀರವು ಒಂದು ಬಂಗಾರದ ಸಲಾಕೆಯ ಹಾಗೆ ಕಾಣಿಸುತ್ತಿತ್ತು.

ಚಂ||ಮದನ ದವಾನಲಾರ್ಚಿ ತನುವಂ ಸುಡೆ ತಳ್ತೆಮೆಯೊಳ್ ಪಳಂಚಿ ಬೀ

ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯ್ಲೊಳೆತ್ತಲುಂ|

ಕೆದಱಿ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೊಯ್ಯನೊಯ್ಯನೆ

ಯ್ದಿದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ನನಾಭಿಯಂ|| ೯ ||

ಮದನ ದವಾನಲ ಅರ್ಚಿ ತನುವಂ ಸುಡೆ, ತಳ್ತ ಎಮೆಯೊಳ್ ಪಳಂಚಿ, ಬೀಗಿದ ಬೆಳರ್ವಾಯೊಳ್‌ ಉಚ್ಚಳಿಸಿ, ತುಂಗ ಕುಚಂಗಳ ಪೊಯ್ಲೊಳ್‌ ಎತ್ತಲುಂ ಕೆದಱಿ,  ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದು, ಒಯ್ಯನೊಯ್ಯನೆ ಎಯ್ದಿದುವು ವಿಲೋಲನೇತ್ರ ಜಲಬಿಂದುಗಳ್‌ ಆಕೆಯ ನಿಮ್ನನಾಭಿಯಂ

ಕಾಮವೆಂಬ ಬೆಂಕಿಯ ಜ್ವಾಲೆ ದೇಹವನ್ನು ಸುಡುತ್ತಿರಲು, ಮುಚ್ಚಿದ ಕಣ್ಣೆವೆಗಳಲ್ಲಿ ಹೊಳೆದು, (ಅಲ್ಲಿಂದ ಕೆಳಗಿಳಿದು) ಬೀಗಿ ಬಿಳಿಚಿಕೊಂಡ ತುಟಿಗಳ ಮೂಲಕ ಚಿಮ್ಮಿ, ಉಬ್ಬಿದ ಮೊಲೆಗಳ ಹೊಯ್ದಾಟದಿಂದ ಅತ್ತಿತ್ತ ಹರಡಿ, ವಳಿತ್ರಯಗಳೆಂಬ ತಡೆಗಳಲ್ಲಿ ಸಿಕ್ಕಿಕೊಂಡು, ಮೆಲ್ಲಮೆಲ್ಲನೆ ಆಕೆಯ ಕಣ್ಣೀರ ಹನಿಗಳು ಆಳವಾದ ಹೊಕ್ಕಳನ್ನು ಹೊಕ್ಕವು.

ಚಂ||ನಗೆಮೊಗಮಂ ಪೊದಳ್ದಲರ್ದ ತಾವರೆಯೆಂಬ ವಿಮೋಹದಿಂ ಮೊಗಂ

ಬುಗಲೊಡಮಾ ತಳೋದರಿಯ ಸುಯ್ಗಳ ಬೆಂಕೆಯೊಳಿಚ್ಚೆಗೆಟ್ಟು ತೊ|

ಟ್ಟಗೆ ಕೊಳೆ ಮುಂದೆ ಬಿೞ್ದು ಮಗುೞ್ದು ಸತಿಯಿಕ್ಕಿದ ಕಣ್ಣ ನೀರ ಧಾ

ರೆಗಳೊಳೆ ನಾಂದೆಲರ್ಚಿ ಪೊದಳ್ದೊರ್ಮೆಯೆ ಪಾಱಿದುವುನ್ಮದಾಳಿಗಳ್|| ೧೦ ||

ನಗೆಮೊಗಮಂ ʼಪೊದಳ್ದು ಅಲರ್ದ ತಾವರೆʼಯೆಂಬ ವಿಮೋಹದಿಂ ಮೊಗಂಬುಗಲ್‌, ಒಡಂ ಆ ತಳೋದರಿಯ ಸುಯ್ಗಳ ಬೆಂಕೆಯೊಳ್‌ ಇಚ್ಚೆಗೆಟ್ಟು ತೊಟ್ಟಗೆ ಕೊಳೆ ಮುಂದೆ ಬಿೞ್ದು, ಮಗುೞ್ದು ಸತಿಯಿಕ್ಕಿದ ಕಣ್ಣ ನೀರ ಧಾರೆಗಳೊಳೆ ನಾಂದು ಎಲರ್ಚಿ ಪೊದಳ್ದು ಒರ್ಮೆಯೆ ಪಾಱಿದುವು ಉನ್ಮದ ಅಳಿಗಳ್

ತುಂಬಿ ಅರಳಿದ ತಾವರೆ ಎಂಬ ಭ್ರಾಂತಿಯಿಂದ ದುಂಬಿಗಳು (ಸುಭದ್ರೆಯ) ನಗುಮೊಗವನ್ನು  ಮುತ್ತಿಕೊಂಡಾಗ, ಆ ಸುಂದರಿಯ ನಿಟ್ಟುಸಿರುಗಳ ಬೆಂಕಿಯಿಂದಾಗಿ, ಭ್ರಮೆ ಕಳಚಿ ಕೂಡಲೇ ನೆಲಕ್ಕೆ ಬಿದ್ದ ಆ ದುಂಬಿಗಳು, ಮತ್ತೆ ಆ ಸುಭದ್ರೆ ಸುರಿಸಿದ ಕಣ್ಣೀರ ಧಾರೆಗೆಳಲ್ಲಿ ನೆನೆದು, ಚೇತರಿಸಿ ಎದ್ದು ಒಮ್ಮೆಲೆ ಹಾರಿಹೋದವು.