ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು-

ಎಂಬನ್ನೆಗಂ, ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳ್‌ ಆದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು, ಸಂತಸಂಬಟ್ಟು, ಚಕ್ರಿ ಚಕ್ರಿಕಾವರ್ತಿ ಅಪ್ಪುದಱಿಂದ, ಆ ವನಾಂತರಾಳಕ್ಕೆ ಒರ್ವನೆ ಬಂದು, ಮಾಧವೀಮಂಟಪಮಂ ಪೊಕ್ಕು, ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು-

ಎನ್ನುವಷ್ಟರಲ್ಲಿ, ಅರ್ಜುನ-ಸುಭದ್ರೆಯರ ವಿರಹದ ಕುರಿತಂತೆ ಕಿವಿಯಿಂದ ಕಿವಿಗೆ ಹರಡಿದ ಸುದ್ದಿಯನ್ನು ಕಪಟಿಯಾದ ಕೃಷ್ಣನು ಕೇಳಿ, ಸಂತೋಷಪಟ್ಟು, ಆ ಉದ್ಯಾನವನಕ್ಕೆ ಒಬ್ಬನೇ ಬಂದು, ಮಾಧವೀ ಮಂಟಪವನ್ನು ಹೊಕ್ಕು, ಅವರಿಬ್ಬರ ನಾಚಿಕೆ, ಹೆದರಿಕೆಗಳನ್ನು ದೂರಮಾಡಿ, ಹೀಗೆಂದನು:

ಮ|| ಕುಡಲಿರ್ಪಂ ಬಲದೇವನೆನ್ನನುಜೆಯಂ ದುರ್ಯೋಧನಂಗಾನೊಡಂ

ಬಡೆನೀವೞ್ತಿಯದಾಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇ|

ರ್ಪಡಿಸಲ್ ಕೂಡಿದನಿರ್ಪುದಲ್ತು ನಯಮಿನ್ನೀ ಪೊೞ್ತೆ ಪೊೞ್ತಾಗೆ ನೀ

ನೊಡಗೊಂಡುಯ್ವುದು ಕನ್ನೆಯಂ ತಡೆಯದಿರ್ ವಿದ್ವಿಷ್ಟವಿದ್ರಾವಣಾ|| ೨೦||

ಕುಡಲಿರ್ಪಂ ಬಲದೇವನ್‌ ಎನ್ನ ಅನುಜೆಯಂ ದುರ್ಯೋಧನಂಗೆ. ಆನ್‌ ಒಡಂಬಡೆನ್‌, ಈವ ಅೞ್ತಿಯದು ಆಗಳುಂ ನಿನಗೆ ದಲ್! ಪದ್ಮಾಸನಂ ತಾನೆ ನೇರ್ಪಡಿಸಲ್ ಕೂಡಿದನ್‌, ಇರ್ಪುದಲ್ತು ನಯಂ ಇನ್‌, ಈ ಪೊೞ್ತೆ ಪೊೞ್ತಾಗೆ, ನೀನ್‌ ಒಡಗೊಂಡು ಉಯ್ವುದು ಕನ್ನೆಯಂ, ತಡೆಯದಿರ್ ವಿದ್ವಿಷ್ಟವಿದ್ರಾವಣಾ!

ನನ್ನ ತಂಗಿಯನ್ನು ದುರ್ಯೋಧನನಿಗೆ ಕೊಡುವುದು ಬಲರಾಮನ ಆಸೆ. ಆದರೆ ನನಗೆ ಅದು ಇಷ್ಟವಿಲ್ಲ. ಅವಳನ್ನು ನಿನಗೆ ಕೊಡಬೇಕೆಂದೇ ನನ್ನ ಇಷ್ಟ. (ನಿಜವಾಗಿ) ವಿಧಿಯೇ  ಹಾಗೆ ನಿಶ್ಚಯಿಸಿದೆ!(ಆದ್ದರಿಂದ) ನೀವು ಇನ್ನು ಇಲ್ಲಿ ಇರುವುದು ಸರಿಯಲ್ಲ. ಈ ಹೊತ್ತೇ ಒಳ್ಳೆಯ ಹೊತ್ತು! ನೀನು ಹುಡುಗಿಯನ್ನು ನಿನ್ನ ಜೊತೆಗೆ ಒಯ್ದುಬಿಡು! ಅರ್ಜುನಾ! ತಡಮಾಡಬೇಡ!

ಟಿಪ್ಪಣಿ: ಇಲ್ಲಿ ʼಈ ಹೊತ್ತೇ ಒಳ್ಳೆಯ ಹೊತ್ತು!ʼ ಎನ್ನುವಾಗʼ ʼಸುಭದ್ರೆಯನ್ನು ಓಡಿಸಿಕೊಂಡು ಹೋಗಲು ನೀನು ಒಳ್ಳೆಯ ಮುಹೂರ್ತ ಇತ್ಯಾದಿಗಳನ್ನು ಕಾಯಬೇಕಾಗಿಲ್ಲʼ ಎಂಬ ಧ್ವನಿ ಇದೆ. ಕೃಷ್ಣನು ʼಚಕ್ರಿಕಾವರ್ತಿʼ ಎಂದು ಮೊದಲೇ ಕವಿಯು ಕರೆದಿರುವುದನ್ನು ಗಮನಿಸಬೇಕು. ಆ ಶಬ್ದಕ್ಕೆ ʼಕಪಟಿʼ ಹಾಗೂ ʼಚಕ್ರದ ಹಾಗೆ ಸುತ್ತುವವನುʼ ಎಂಬ ಎರಡು ಅರ್ಥಗಳಿವೆ.  ಮುಂದೆ ಅರ್ಜುನ ಸುಭದ್ರೆಯರ ಮದುವೆಯನ್ನು ಹಿರಿಯರೇ ಮುಂದೆ ನಿಂತು ಮಾಡಿಸಿದಾಗ ಶಾಸ್ತ್ರದ ಪ್ರಕಾರ ಮುಹೂರ್ತ ಇತ್ಯಾದಿಗಳನ್ನು ನೋಡಿಯೇ ಮಾಡಿಸುತ್ತಾರೆ! (ಪದ್ಯ ೨೫).

ವ|| ಅಂತು ಪೋಗೆವೋಗೆ ಬಲದೇವನನುಮತದೊಳ್ ಪೆಱಗಂ ತಗುಳ್ವ ಯಾದವಬಲಮುಂಟಪ್ಪೊಡದನಂಬುಗಾಣಿಸಲ್ ನೀನೆ ಸಾಲ್ವೆಯುೞಿದುದಂ ಮಾಣಿಸಲಾನೆ ಸಾಲ್ವೆನಿದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಮಾ ರಥಮಂ ಮನೋರಥಂಬೆರಸೇಱಿ ಚೂತಲತಿಕೆವೆರಸು ಸುಭದ್ರೆಯನ್‌ ಏಱಲ್ವೇೞ್ದು, ಉದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು, ಬೀೞ್ಕೊಂಡು ಇಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನ್‌. ಅನ್ನೆಗಂ ಇತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿ ಉಯ್ದನ್‌ ಎಂಬುದಂ ಕೇಳ್ದು-

ʼಅಂತು ಪೋಗೆವೋಗೆ ಬಲದೇವನ ಅನುಮತದೊಳ್ ಪೆಱಗಂ ತಗುಳ್ವ ಯಾದವಬಲಂ ಉಂಟಪ್ಪೊಡೆ ಅದನ್‌ ಅಂಬುಗಾಣಿಸಲ್ ನೀನೆ ಸಾಲ್ವೆ! ಉೞಿದುದಂ ಮಾಣಿಸಲ್‌ ಆನೆ ಸಾಲ್ವೆನ್‌! ಇದುವೆ ಮುಹೂರ್ತಂ ಆಗೆ ನಡೆವುದುʼ ಎಂದು ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನ್‌, ಎಸಗಲ್ ದಾರುಕನೆಂಬ ಸಾರಥಿಯನ್‌ ಈವುದುಂ, ಆ ರಥಮಂ ಮನೋರಥಂಬೆರಸು ಏಱಿ, ಚೂತಲತಿಕೆವೆರಸು ಸುಭದ್ರೆಯನ್‌ ಏಱಲ್‌ ಪೇೞ್ದು, ಉದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು, ಬೀೞ್ಕೊಂಡು ಇಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನ್‌. ಅನ್ನೆಗಂ ಇತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿ ಉಯ್ದನ್‌ ಎಂಬುದಂ ಕೇಳ್ದು-

ʼಹಾಗೆ (ನೀವು) ಹೋಗುತ್ತಿರುವಾಗ, ಬಲದೇವನ ಒಪ್ಪಿಗೆಯಿಂದ ಯಾದವ ಬಲವೇನಾದರೂ (ನಿಮ್ಮನ್ನು) ಬೆನ್ನಟ್ಟಿ ಬಂದರೆ, ಅದಕ್ಕೆ ಬಾಣದ ರುಚಿ ತೋರಿಸಲು ನೀನೊಬ್ಬನೇ ಸಾಕು! ಉಳಿದಿದ್ದನ್ನು ನೋಡಿಕೊಳ್ಳಲು  ನಾನಿದ್ದೇನೆ! ಇದೇ ಒಳ್ಳೆಯ ಮುಹೂರ್ತ. ಇನ್ನು ನೀವು ಹೊರಡಿʼ ಎಂದು ಶೈಬ್ಯ. ಬಳಾಹಕ. ಮೇಘವರ್ಣ. ಸುಗ್ರೀವ ಎಂಬ ನಾಲ್ಕು ಕುದುರೆಗಳನ್ನು ಹೂಡಿದ ದಿವ್ಯ ರಥವನ್ನೂ, ಅದನ್ನು ಓಡಿಸಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು. (ಅರ್ಜುನನು) ಆ ರಥವನ್ನು ಇಷ್ಟಪಟ್ಟು ಹತ್ತಿ, ಚೂತಲತಿಕೆಯೊಂದಿಗೆ ರಥವನ್ನು ಹತ್ತುವಂತೆ ಸುಭದ್ರೆಗೆ ಹೇಳಿ, ನಾರಾಯಣನ ಹರಕೆಗಳನ್ನು ಪಡೆದುಕೊಂಡು, ಅವನಿಂದ ಬೀಳ್ಕೊಂಡು, ಇಂದ್ರಪ್ರಸ್ಥದ ದಾರಿಯಲ್ಲಿ ಪ್ರಯಾಣ ಮಾಡಿದನು. ಇತ್ತ ಬಲದೇವನು, ಸುಭದ್ರೆಯನ್ನು ಅರ್ಜುನನು ಒಯ್ದನೆಂಬ ಸುದ್ದಿ ಕೇಳಿ,

ಟಿಪ್ಪಣಿ: ಇಲ್ಲಿ ಕವಿ ʼ ಸುಭದ್ರೆಯಂ ಸಾಮಂತಚೂಡಾಮಣಿ ಉಯ್ದನ್‌ʼ ಎನ್ನುತ್ತಾನೆ. ʼಅರ್ಜುನ ಸುಭದ್ರೆಯನ್ನು ಹಾರಿಸಿಕೊಂಡು ಹೋದʼ ಎಂತಲೋ ʼಓಡಿಸಿಕೊಂಡು ಹೋದʼ ಎಂತಲೋ ಹೇಳುವುದು ಅವನು ಮಾಡಿದ ಕೆಲಸಕ್ಕೆ ನಿಜವಾಗಿ ಒಪ್ಪುವ ಶಬ್ದ. ಕವಿ ʼಸಾಮಂತ ಚೂಡಾಮಣಿʼಯಾದ ತನ್ನ ಆಶ್ರಯದಾತನನ್ನು ನೆನಪಿಟ್ಟುಕೊಂಡು ʼಉಯ್ದನ್‌ʼ ಎಂದು ಬಳಸಿರುವುದು ಸ್ಪಷ್ಟ.

ಮಹಾಭಾರತದ ಕೃಷ್ಣ ತಂತ್ರಗಳಿಗೆ ಹೆಸರಾದವನು. ಇಲ್ಲಿ ಕಾಣುವ ಪಂಪನ ಕೃಷ್ಣ ತನ್ನ ಇಚ್ಛೆಯನ್ನು ಈಡೇರಿಸಲು ʼಮುಹೂರ್ತʼವನ್ನು ಕಡೆಗಣಿಸಲು, ತನ್ನದೇ ಕಡೆಯ ʼಯಾದವಸೈನ್ಯʼದ ವೀರರನ್ನೇ ಬಲಿ ಕೊಡಲು ತಯಾರಾಗಿದ್ದಾನೆ! ಇಲ್ಲಿ ಕವಿ, ಕೃಷ್ಣನ ʼತಂತ್ರʼದ ಸ್ವರೂಪವನ್ನು ವ್ಯಂಗ್ಯ ಮಾಡುತ್ತಿದ್ದಾನೆ ಎನಿಸುತ್ತದೆ.

ಮ|| ಉಱದೆನ್ನಂ ಕುಡಲಿರ್ದ ಕೂಸನೊಡಗೊಂಡುಯ್ವಾತನಂ ತಾಗಿ ತ

ಳ್ತಿಱಿಯಲ್ ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರಂತಪ್ಪ ಪೊ|

ಚ್ಚಱ ಸಾಮಂತರೆ ಪೋಗಿಮೆಂದು ಪಲರಂ ಪೇೞ್ದಾಗಳೆಯ್ತಂದರಂ

ತೊರೆ ಕೊಳ್ವಂತಿರೆ ಕೊಂಡುವಂದರಿಗನೆಚ್ಚುಗ್ರೇಷುಧಾರಾಜಳಂ|| ೨೧ ||

ʼಉಱದೆ ಎನ್ನಂ, ಕುಡಲ್‌ ಇರ್ದ ಕೂಸನ್‌ ಒಡಗೊಂಡು ಉಯ್ವಾತನಂ ತಾಗಿ. ತಳ್ತು ಇಱಿಯಲ್, ಕೋಡಗಗಟ್ಟುಗಟ್ಟಿ ತರಲ್‌ ಇನ್‌ ಆರ್‌ ಆರ್ಪರ್‌ ಅಂತಪ್ಪ ಪೊಚ್ಚಱ ಸಾಮಂತರೆ ಪೋಗಿಂʼ ಎಂದು ಪಲರಂ ಪೇೞ್ದಾಗಳ್‌, ಎಯ್ತಂದರಂ ತೊರೆ ಕೊಳ್ವಂತಿರೆ ಕೊಂಡುವು ಅಂದು ಅರಿಗನ್‌ ಎಚ್ಚ ಉಗ್ರ ಇಷು ಧಾರಾಜಳಂ

ʼನನ್ನನ್ನು ಲೆಕ್ಕಕ್ಕಿಡದೆ, (ಮದುವೆ ಮಾಡಿ) ಕೊಡಬೇಕಾಗಿದ್ದ ಹೆಣ್ಣನ್ನು ಒಯ್ಯುವವನನ್ನು ಎದುರಿಸಿ, ಇರಿದು ಕೊಲ್ಲಲು ಅಥವಾ ಮಂಗನನ್ನು ಕಟ್ಟುವಂತೆ ಕಟ್ಟಿ ಎಳೆದು ತರಲು ಯಾರು ಸಮರ್ಥರೋ ಅಂತಹ ವೀರ ಸಾಮಂತರೇ ಹೋಗಿʼ ಎಂದು ಹಲವರಿಗೆ ಹೇಳಿದಾಗ, ಆ ಮಾತನ್ನು ಕೇಳಿ ಯುದ್ಧಕ್ಕೆ ಹೋದವರನ್ನು ಅರ್ಜುನನು ಬಿಟ್ಟ ಬಾಣಗಳ ಮಳೆಯಿಂದಾದ ನದಿಯು ನುಂಗಿಹಾಕಿತು.

ವ|| ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು ಯಾದವಬಲ ಜಳನಿಧಿವೆರಸು ವಿಳಯಕಾಲ ಜಳನಿಧಿಯಂತೆ ತೆರಳಲ್ ಬಗೆದ ಬಲದೇವನಂ ವಾಸುದೇವನಿಂತೆಂದಂ-

ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು, ಯಾದವಬಲ ಜಳನಿಧಿವೆರಸು ವಿಳಯಕಾಲ ಜಳನಿಧಿಯಂತೆ ತೆರಳಲ್ ಬಗೆದ ಬಲದೇವನಂ ವಾಸುದೇವನ್‌ ಇಂತೆಂದಂ

ಆಗ ತಾನು ಕಳಿಸಿದ ಸಾಮಂತರಾಜರ ಸಾವಿನ ಸುದ್ದಿಯನ್ನು ಕೇಳಿ, ಯಾದವಬಲವೆಂಬ ಕಡಲಿನೊಂದಿಗೆ, ಪ್ರಳಯಕಾಲದ ಸಮುದ್ರವೇ ಹೊರಟಂತೆ ಹೊರಟುನಿಂತ ಬಲದೇವನನ್ನು ಕುರಿತು ವಾಸುದೇವನು ಹೀಗೆಂದನು:

ಮ|| ಕುಲಮಂ ಪೇೞ್ವೊಡೆ ಸೋಮವಂಶತಿಲಕಂ ಬಿಲ್ಲಾಳ್ತನಂಬೇೞ್ವೊಡು

ಜ್ವಲ ತೀವ್ರಾಸ್ತ್ರನಿಘಾತಪಾತಿತ ರಿಪುವ್ಯೂಹಂ ಬಲಂಬೇೞೆ ದೋ|

ರ್ವಲದೊಳ್ ಕೇಳ್ ನಿನಗಂ ಬಲಸ್ಥನೊಡೆಯಂ ಕೂಸಿಂಗೆ ಕೊಂಡುಯ್ವುದೇ

ಚಲಮೇದೋಷಮದರ್ಕೆ ನೀನ್ ಮುಳಿವುದೇ ನೀನ್ ಪೇೞ್ವೊಡಾನ್ ಸಾಲೆನೇ|| ೨೨||

ಕುಲಮಂ ಪೇೞ್ವೊಡೆ ಸೋಮವಂಶತಿಲಕಂ, ಬಿಲ್ಲಾಳ್ತನಂ ಪೇೞ್ವೊಡೆ ಉಜ್ವಲ ತೀವ್ರಾಸ್ತ್ರನಿಘಾತಪಾತಿತ ರಿಪುವ್ಯೂಹಂ, ಬಲಂ ಪೇೞೆ ದೋರ್ವಲದೊಳ್ ಕೇಳ್ ನಿನಗಂ ಬಲಸ್ಥನ್‌, ಒಡೆಯಂ ಕೂಸಿಂಗೆ! ಕೊಂಡುಯ್ವುದು! ಏ ಚಲಂ? ಏ ದೋಷಂ? ಅದರ್ಕೆ ನೀನ್ ಮುಳಿವುದೇ? ನೀನ್ ಪೇೞ್ವೊಡೆ ಆನ್ ಸಾಲೆನೇ?

ಕುಲದ ಬಗ್ಗೆ ಹೇಳುವುದಾದರೆ (ಅವನು) ಚಂದ್ರವಂಶದ ಹಣೆಬೊಟ್ಟು. ಬಿಲ್ವಿದ್ಯೆಯ ಮಾತಾದರೆ ಅರಿಗಳನ್ನು  ತನ್ನ ತೀವ್ರವಾದ ಅಸ್ತ್ರಗಳಿಂದ ಹೊಡೆದುರುಳಿಸಬಲ್ಲವನು. ತೋಳ್ಬಲದ ಮಾತಾದರೆ, ಕೇಳು, ನಿನಗಿಂತಲೂ ಬಲವಂತ! ಕನ್ಯೆಗೆ (ತಂಗಿ ಸುಭದ್ರೆಗೆ) ಅವನೇ (ತಕ್ಕ) ಪತಿ! ಇದರಲ್ಲಿ (ನಿನಗೆ) ಚಲ ಯಾಕೆ? ದೋಷವೇನು? ಇಷ್ಟು ಸಣ್ಣ ವಿಷಯಕ್ಕೆ ನೀನು ಸಿಟ್ಟಾಗಬೇಕೇ? ನೀನು ಯುದ್ಧಕ್ಕೆ ಹೊರಡಬೇಕೇ? (ನೀನು) ಹೇಳಿದರೆ ನಾನು ಹೋಗುವುದಿಲ್ಲವೆ? ಅದು ಸಾಲದೆ?

ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಾಶೋಕಾನೋಕಹನಂದನವನಪ್ರಸ್ಧಮನಿಂದ್ರ ಪ್ರಸ್ಥಮನೆಯ್ದೆವಂದು ಮುನ್ನಮೆ ತನ್ನ ಬರವನಱಿದು ಪೊೞಲೊಳಷ್ಟಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ, ಭೀಮಸೇನಾದಿಗಳ ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವರಂ ಪರಸಿ ಪುನಃಪುನರಾಲಿಂಗನಂಗೆಯ್ದು ಮುಹುರ್ಮುಹುರಾಳೋಕನಂಗೆಯ್ಯುತ್ತುಂ ಬಂದು ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ-

ಎಂದು ಬಲದೇವನ ಮನದೊಳ್‌ ಆದ ಮುಳಿಸು ಎಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನ್‌. ಇತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದ ಅನೇಕ ಸಹಕಾರ ಅಶೋಕ ಆನೋಕಹ ನಂದನವನಪ್ರಸ್ಧಮನ್‌ ಇಂದ್ರ ಪ್ರಸ್ಥಮನ್‌ ಎಯ್ದೆವಂದು, ಮುನ್ನಮೆ ತನ್ನ ಬರವನ್‌ ಅಱಿದು ಪೊೞಲೊಳ್‌ ಅಷ್ಟಶೋಭೆಯಂ ಮಾಡಿ ತನಗೆ ಇದಿರ್ವಂದ ಕೊಂತಿಯ, ಧರ್ಮಪುತ್ರ ಭೀಮಸೇನಾದಿಗಳ, ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದ ಅರ್ಚಿಸಿ ತದೀಯ ಆಶೀರ್ವಚನಂಗಳನ್‌ ಆಂತು, ತನಗೆ ಪೊಡಮಟ್ಟ ನಕುಲ ಸಹದೇವರಂ ಪರಸಿ ಪುನಃಪುನರ್‌ ಆಲಿಂಗನಂಗೆಯ್ದು,  ಮುಹುರ್ಮುಹುರ್‌ ಆಳೋಕನಂಗೆಯ್ಯುತ್ತುಂ ಬಂದು, ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ

ಎಂದು ಬಲದೇವನ ಮನಸ್ಸಿನಲ್ಲಿ ಉಂಟಾದ ಸಿಟ್ಟೆಂಬ ಬೆಂಕಿಯನ್ನು ತನ್ನ ಸಿಹಿಯಾದ ಮೆದುಮಾತುಗಳೆಂಬ ನೀರನ್ನು ಚಿಮುಕಿಸಿ ನಂದಿಸಿದನು. ಇತ್ತ ಅರ್ಜುನನು (ಪ್ರಯಾಣ ಮಾಡುತ್ತ) ಕೆಲವೇ ದಿನಗಳಲ್ಲಿ, ಅನೇಕ ಮಾವು, ಅಶೋಕ ಮುಂತಾದ ಮರಗಳಿಂದ ಕೂಡಿ ನಂದನವನದಂತೆ ಕಾಣುವ ಇಂದ್ರಪ್ರಸ್ಥ ನಗರದ ಹತ್ತಿರ ಬಂದನು. ಅಲ್ಲಿ ಮೊದಲೇ ತಾನು ಬರುವುದನ್ನು ತಿಳಿದು ಊರಿನಲ್ಲಿ ಅಷ್ಟಶೋಭೆಯನ್ನು ಮಾಡಿ, ತನ್ನನ್ನು ಎದುರ್ಗೊಳ್ಳಲು ಬಂದ ಕುಂತಿಯ, ಧರ್ಮಪುತ್ರ-ಭೀಮಸೇನರ ಅಡಿದಾವರೆಗಳನ್ನು ತನ್ನ ಕೈದಾವರೆಗಳಿಂದ ಪೂಜಿಸಿ ಅವರ ಆಶೀರ್ವಾದಗಳನ್ನು ಪಡೆದನು; ತನಗೆ ನಮಿಸಿದ ನಕುಲ ಸಹದೇವರನ್ನು ಹರಸಿ, ಮತ್ತೆಮತ್ತೆ ಆಲಂಗಿಸಿ, ಮತ್ತೆಮತ್ತೆ ಅವರನ್ನು ಕಣ್ತುಂಬ ನೋಡುತ್ತಾ ಬಂದು, ದೇವೇಂದ್ರನ ವೈಭವದಿಂದ ಊರೊಳಗೆ ಹೊಕ್ಕನು.

ಟಿಪ್ಪಣಿ: ಇಲ್ಲಿ, ಸುಭದ್ರೆಯ ಸಮೇತನಾಗಿ ಬಂದ ಅರ್ಜುನನನ್ನು – ಪಂಪನ ಪ್ರಕಾರ ದ್ರೌಪದಿಯ ಏಕೈಕ ಪತಿಯನ್ನು – ಎದುರುಗೊಳ್ಳಲು ಬಾಕಿ ಎಲ್ಲರೂ ಬಂದಿದ್ದಾರೆ, ಆದರೆ ಮಡದಿ ದ್ರೌಪದಿಯೇ ನಾಪತ್ತೆಯಾಗಿದ್ದಾಳೆ! ಕವಿ ಅವಳ ಸುದ್ದಿಯನ್ನೇ ತೆಗೆಯದೆ ಮುಂದೆ ದಾಟಿಬಿಟ್ಟಿದ್ದಾನೆ!

ಕಂ|| ಪರಸುವ ಪುರಜನದೊದವಿದ

ಪರಕೆಗಳಂಬುಧಿನಿನಾದಮಂ ಮಿಗೆ ತಮ್ಮ|

ಯ್ವರುಮೊಡನೆ ಮೆರೆದು ಪರಮಾ

ನುರಾಗದಿಂ ಬಂದು ಪೊಕ್ಕರಂದರಮನೆಯಂ|| ೨೩ ||

ಪರಸುವ ಪುರಜನದ ಒದವಿದ ಪರಕೆಗಳ್ ಅಂಬುಧಿನಿನಾದಮಂ ಮಿಗೆ‌, ತಮ್ಮಯ್ವರುಂ ಒಡನೆ ಮೆರೆದು, ಪರಮ ಅನುರಾಗದಿಂ ಬಂದು ಪೊಕ್ಕರ್‌ ಅಂದು ಅರಮನೆಯಂ

ಹರಸುವ ಊರಜನರ ಧಾರಾಳವಾದ ಹರಕೆಗಳ ಸದ್ದು ಕಡಲಿನ ಸದ್ದನ್ನು ಮೀರಿಸುತ್ತಿರಲು, ತಾವು ಐವರೂ ಸಹ ಒಟ್ಟಾಗಿ ಮೆರೆದು ತುಂಬುಪ್ರೀತಿಯಿಂದ ಬಂದು ಅರಮನೆಯನ್ನು ಹೊಕ್ಕರು.

ವ|| ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನನಗಲ್ದ ಪನ್ನೆರಡು ಮಾಸದೊಳಾದ ದಿಗ್ವಿಜಯಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮಮಿತ್ರತ್ವಮುಮನಱಿದು ಸಂತಸಂಬಟ್ಟು ತಮ್ಮನಿಬರುಮೇಕಸ್ಥರಾಗಿ-

ಅಂತು ರಾಜಮಂದಿರಮಂ ಪೊಕ್ಕು, ಧರ್ಮಪುತ್ರನನ್‌ ಅಗಲ್ದ ಪನ್ನೆರಡು ಮಾಸದೊಳ್‌ ಆದ ದಿಗ್ವಿಜಯಪ್ರಪಂಚಮುಮಂ, ಸುಭದ್ರಾಹರಣಮುಮಂ, ಪುರುಷೋತ್ತಮನ ಪರಮಮಿತ್ರತ್ವಮುಮನ್‌ ಅಱಿದು ಸಂತಸಂಬಟ್ಟು, ತಮ್ಮನಿಬರುಂ ಏಕಸ್ಥರಾಗಿ

ಹಾಗೆ ರಾಜಮಂದಿರವನ್ನು ಹೊಕ್ಕು, ಧರ್ಮರಾಜನನ್ನು ಅಗಲಿದ ನಂತರದ ಹನ್ನೆರಡು ತಿಂಗಳುಗಳಲ್ಲಿ ಆದ ದಿಗ್ವಿಜಯಗಳನ್ನೂ, ಸುಭದ್ರೆಯನ್ನು ಕರೆತಂದ ಸಂದರ್ಭವನ್ನೂ, ಕೃಷ್ಣನ ಕಡುಗೆಳೆತನವನ್ನೂ ತಿಳಿದು, ಸಂತೋಷಪಟ್ಟು, ತಾವು ಐವರೂ ಒಟ್ಟಾಗಿ

ಮ|| ಎರೆದಿಂತಟ್ಟಲೇವೇೞ್ಪ ಕನ್ನೆ ಬೞಿಯಂ ಬಂದಳ್ ಮರುಳ್ದಂಬುಜೋ

ದರನಿಂತಟ್ಟಿದನಿಂತು ನೋಂತರೊಳರೇ ಸೈಪಿಂಗೆ ನಾಮಿನ್ನಿಳಾ|

ಧರನುಂ ಯಾದವ ವಂಶಜರ್ವೆರಸು ಬರ್ಪಂತಟ್ಟಿ ಮಾೞ್ಪಂ ಮನೋ

ಹರಮಪ್ಪಂತು ವಿವಾಹಮಂಗಳಮನೆಂದಂದಟ್ಟಿದರ್ ದೂತರಂ|| ೨೪ ||

ಎರೆದು ಇಂತು ಅಟ್ಟಲೇವೇೞ್ಪ ಕನ್ನೆ ಬೞಿಯಂ ಬಂದಳ್ ಮರುಳ್ದು! ಅಂಬುಜೋ

ದರನ್‌ ಇಂತು ಅಟ್ಟಿದನ್‌, ಇಂತು ನೋಂತರ್‌ ಒಳರೇ ಸೈಪಿಂಗೆ? ನಾಂ ಇನ್ನು ಇಳಾಧರನುಂ ಯಾದವ ವಂಶಜರ್ವೆರಸು ಬರ್ಪಂತೆ ಅಟ್ಟಿ ಮಾೞ್ಪಂ ಮನೋಹರಂ ಅಪ್ಪಂತು ವಿವಾಹಮಂಗಳಮನ್‌ ಎಂದು ಅಂದು ಅಟ್ಟಿದರ್ ದೂತರಂ

ʼ(ಇಂಥ ಕನ್ಯೆಯು ಸಿಗಬೇಕಾದರೆ) ನಾವೇ ಬೇಡಿಕೊಂಡು ಹೋಗಬೇಕು! ಹಾಗಿರುವಾಗ ಇವಳು (ಅರ್ಜುನನಿಗೆ) ಮರುಳಾಗಿ ತಾನಾಗಿಯೇ ಬಂದಿದ್ದಾಳೆ! ಕೃಷ್ಣನು ಇವಳನ್ನು ಕಳಿಸಿಕೊಟ್ಟಿದ್ದಾನೆ! ಯಾವ್ಯಾವ ವ್ರತಗಳನ್ನು ಮಾಡಿದವರಿಗೂ ಇಂಥ ಭಾಗ್ಯ ಸಿಗುವುದುಂಟೆ? ಹಾಗಾಗಿ ನಾವು ಬಲರಾಮನಿಗೆ ಯಾದವ ವಂಶಜರೊಂದಿಗೆ (ಇಂದ್ರಪ್ರಸ್ಥಕ್ಕೆ) ಬರುವಂತೆ ಹೇಳಿಕಳಿಸಿ, ವೈಭವದಿಂದ ಮದುವೆಯ ಕಾರ್ಯವನ್ನು ನಡೆಸೋಣʼ ಎಂದು ದೂತರನ್ನು ಕಳಿಸಿಕೊಟ್ಟರು.

ವ|| ಅಟ್ಟಿದೊಡವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜ್ಜಮನೊಡಂಬಡಿಸಿ ಯಾದವರ್ವೆರಸು ಮುಂದಿಟ್ಟೊಡಗೊಂಡು ಬರೆ ಬರವನಱಿದು ಪಾಂಡವರಯ್ವರುಮಿದಿರ್ವೋಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊೞಲ್ಗೊಡಗೊಂಡು ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ-

ಅಟ್ಟಿದೊಡೆ, ಅವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು, ತಮ್ಮ ಬಂದ ಕಜ್ಜಮನ್‌ ಒಡಂಬಡಿಸಿ, ಯಾದವರ್ವೆರಸು ಮುಂದಿಟ್ಟು ಒಡಗೊಂಡು ಬರೆ, ಬರವನ್‌ ಅಱಿದು ಪಾಂಡವರ್‌ ಅಯ್ವರುಂ ಇದಿರ್ವೋಗಿ, ಯಥೋಚಿತ ಪ್ರತಿಪತ್ತಿಗಳಿಂ ಕಂಡು, ಪೊೞಲ್ಗೆ

ಒಡಗೊಂಡು ಬಂದು ಶುಭದಿನ, ನಕ್ಷತ್ರ, ಯೋಗ, ಕರಣಂಗಳಂ ನಿಟ್ಟಿಸಿ,

ಹಾಗೆ ದೂತರನ್ನು ಕಳಿಸಿಕೊಟ್ಟಾಗ, ಅವರು ಹೋಗಿ ಬಲರಾಮನನ್ನೂ, ಕೃಷ್ಣನನ್ನೂ ಕಂಡು, ತಾವು ಬಂದ ಕಾರ್ಯಕ್ಕೆ ಒಪ್ಪಿಸಿ, ಯಾದವರೊಂದಿಗೆ (ಇಂದ್ರಪ್ರಸ್ಥಕ್ಕೆ) ಬಂದರು. ಅವರು ಬರುತ್ತಿರುವುದನ್ನು ತಿಳಿದು, ಐವರು ಪಾಂಡವರೂ ಅವರನ್ನು ಎದುರ್ಗೊಂಡು, ಯಥೋಚಿತ ಮರ್ಯಾದೆಯನ್ನು ಸಲ್ಲಿಸಿ, ಅವರೊಂದಿಗೆ ಊರೊಳಗೆ ಬಂದು, ಒಳ್ಳೆಯ ದಿನ, ನಕ್ಷತ್ರ, ಯೋಗ, ಕರಣಗಳನ್ನು ನೋಡಿ.

ಮ|| ಪಸುರ್ವಂದರ್ ಪಸೆ ವೇದಪಾರಗರವಂ ಕಣ್ಬೇಟದುದ್ದಾನಿಯಂ

ಪಸರಂ ಗೆಯ್ದವೊಲಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ|

ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ

ಗಿಸಿ ಕೆಯ್ನೀರೆಱೆದಂ ಗುಣಾರ್ಣವ ಮಹೀಪಾಲಂಗಮಾ ಕನ್ನೆಯಂ|| ೨೫||

ಪಸುರ್ವಂದರ್, ಪಸೆ, ವೇದಪಾರಗರವಂ, ಕಣ್ಬೇಟದ ಉದ್ದಾನಿಯಂ ಪಸರಂ ಗೆಯ್ದವೊಲ್‌ ಅಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ ಪ್ರಸರಂ, ಮಂಗಳ ತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್‌ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ

ಹಸಿರು ಚಪ್ಪರ, ಹಸೆ, ವೇದ ತಿಳಿದವರ ಮಂತ್ರಗಳು, ಕಣ್ಣಿಗೆ ಮೆಚ್ಚಿಗೆಯಾಗುವಂತೆ ತಮ್ಮ ಸಿರಿವಂತಿಕೆಯನ್ನು ಪ್ರದರ್ಶಿಸುವ ದೊಡ್ಡ ದೊಡ್ಡ ಸಾಮಂತರು ಹಾಗೂ ಅವರ ರಾಣಿಯರ ಗುಂಪುಗಳು, ಮಂಗಳವಾದ್ಯಗಳ ದನಿ ಇವುಗಳೆಲ್ಲವೂ ಸೊಗಸುತ್ತಿರಲು ಕೃಷ್ಣನು ಪ್ರೀತಿಯಿಂದ ಕನ್ಯೆಯನ್ನು ಅರ್ಜುನನಿಗೆ ಧಾರೆ ಎರೆದು ಕೊಟ್ಟನು.

ಟಿಪ್ಪಣಿ: ಕ್ರಮಪ್ರಕಾರ ಇಲ್ಲಿ ಸುಭದ್ರೆಯನ್ನು ಧಾರೆ ಎರೆದು ಕೊಡಬೇಕಾದವನು ಬಲರಾಮ. ಆದರೆ ʼಚಕ್ರಿ ರಾಗಿಸಿ ಕೈನೀರೆಱೆದಂʼ ಎನ್ನುತ್ತಾನೆ ಕವಿ. ಮುಂದೆಯೂ ತಂಗಿಗೆ ಬಳುವಳಿ ಕೊಡುವವನು ಕೃಷ್ಣನೇ ಹೊರತು ಬಲರಾಮನಲ್ಲ. ಎಂದರೆ ಬಲರಾಮನ ಅಸಮಾಧಾನ ಇನ್ನೂ ಉಳಿದಿದೆ ಎಂದು ಕವಿ ಸೂಚಿಸುತ್ತಿದ್ದಾನೆ.

ವ|| ಅಂತವರಿರ್ವರ ಬೇಟಮೆಂಬ ಲತೆಯ ಬೆಳಸಿಂಗೆ ಪೊಯ್ನೀರೆಱೆವಂತೆ ಕೆಯ್ನೀರೆಱೆದು ಬಿಯಮಂ ಮೆಱೆದು-

ಅಂತು ಅವರ್‌ ಇರ್ವರ ಬೇಟಂ ಎಂಬ ಲತೆಯ ಬೆಳಸಿಂಗೆ ಪೊಯ್ನೀರ್‌ ಎಱೆವಂತೆ ಕೆಯ್ನೀರ್‌ ಎಱೆದು, ಬಿಯಮಂ ಮೆಱೆದು,

ಹಾಗೆ ಅವರಿಬ್ಬರ ಪ್ರೀತಿ ಎಂಬ ಬಳ್ಳಿ ಚೆನ್ನಾಗಿ ಬೆಳೆಯಲೆಂದು ನೀರನ್ನು ಎರೆಯುವಂತೆ ಕೈನೀರನ್ನು ಎರೆದು, ಧಾರಾಳವಾಗಿ ಖರ್ಚು ಮಾಡಿ

ಪಿರಿಯಕ್ಕರಂ|| ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನೋರೊಂದೆ ಮಸುಳಿಸೆ ಪಾಲ್ಗಡಲೊಳ್

ಪುಟ್ಟಿದಾನೆಯನಾನೆಗಳ್ ಗೆಲೆವರೆ ಕುದುರೆಗಳ್ ಕುದುರೆಯಂ ಕೀೞ್ಮಾಡೆ|

ತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್ ಗಣಿದಮಂ ಬಗೆಯದಿಂತು

ಕೊಟ್ಟಂ ತಂಗೆಗೆ ಬೞಿವೞಿಯೆಂದಿಂತು ಸರ್ವಸ್ವಮೆಲ್ಲಮಂ ಪುರುಷೋತ್ತಮಂ|| ೨೬ ||

ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನ್‌ ಓರೊಂದೆ ಮಸುಳಿಸೆ, ಪಾಲ್ಗಡಲೊಳ್

ಪುಟ್ಟಿದ ಆನೆಯನ್‌ ಆನೆಗಳ್ ಗೆಲೆವರೆ, ಕುದುರೆಗಳ್ ಕುದುರೆಯಂ ಕೀೞ್ಮಾಡೆ, ತೊಟ್ಟ ಮದನನ ಪೂಗಣೆಗೆ ಎಣೆಯಾಗೆ ಗಣಿಕೆಯರ್, ಗಣಿದಮಂ ಬಗೆಯದೆ ಇಂತು ಕೊಟ್ಟಂ ತಂಗೆಗೆ ಬೞಿವೞಿಯೆಂದು ಇಂತು ಸರ್ವಸ್ವಂ ಎಲ್ಲಮಂ ಪುರುಷೋತ್ತಮಂ

(ಸುಭದ್ರೆಯು ಕೃಷ್ಣನು ಬಳುವಳಿಯಾಗಿ ಕೊಟ್ಟ ಆಭರಣಗಳನ್ನು ಧರಿಸಿದ್ದಳು). ತೊಟ್ಟ ಆಭರಣಗಳು ವಿಷ್ಣುವಿನ ಎದೆಯಲ್ಲಿರುವ ʼಕೌಸ್ತುಭರತ್ನʼವನ್ನೂ ಮೀರಿಸುವಂತಿದ್ದವು; ಆನೆಗಳು ಹಾಲ್ಗಡಲಲ್ಲಿ ಹುಟ್ಟಿದ ಐರಾವತಕ್ಕಿಂತ, ಕುದುರೆಗಳು (ಇಂದ್ರನ ಕುದುರೆಯಾದ) ಉಚ್ಚೈಶ್ರವಕ್ಕಿಂತ ಶ್ರೇಷ್ಠವಾಗಿದ್ದವು; ಗಣಿಕೆಯರು ಮನ್ಮಥನ ಹೂಬಾಣಗಳಂತಿದ್ದರು; ಹೀಗೆ ಕೃಷ್ಣನು ಲೆಕ್ಕವೇ ಇಲ್ಲದಷ್ಟು ವಸ್ತುಗಳನ್ನು ತಂಗಿಗೆ ಬಳುವಳಿಯಾಗಿ ಕೊಟ್ಟನು.

ಟಿಪ್ಪಣಿ: ಇಲ್ಲಿ ಕವಿ ʼಗಣಿಕೆʼಯರನ್ನು ರತ್ನ, ಆನೆ, ಕುದುರೆಗಳ ಪಟ್ಟಿಗೇ ಸೇರಿಸಿಬಿಟ್ಟಿದ್ದಾನೆ! ಪಂಪನ ಕಾಲದ ರಾಜರ ಮದುವೆಗಳಲ್ಲಿ ಹೀಗೆ ಗಣಿಕೆಯರನ್ನು ಬಳುವಳಿಯಾಗಿ ಕೊಡುತ್ತಿದ್ದರೆಂಬ ಸೂಚನೆ ಇಲ್ಲಿ ಇದೆ. ಇದು ಅಂದಿನ ಕಾಲದ ಸಮಾಜದಲ್ಲಿ ಮಹಿಳೆಯರಿಗೆ ಯಾವ ರೀತಿಯ ಗೌರವ ದೊರೆಯುತ್ತಿತ್ತು ಎಂಬುದನ್ನು ಸೂಚಿಸುತ್ತಿದೆ.

ವ|| ಅಂತು ಬೞಿವೞಿಗೊಟ್ಟಿಂಬೞಿಯಂ ಧರ್ಮಪುತ್ರಂ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕೞಿಪಿದನಾ ವಿವಾಹೋತ್ಸವಾನಂತರದೊಳ್-

ಅಂತು ಬೞಿವೞಿಗೊಟ್ಟು ಇನ್ ಬೞಿಯಂ, ಧರ್ಮಪುತ್ರಂ ಬಲದೇವನನ್‌ ಎನಿತಾನುಂ ಉಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ, ದ್ವಾರಾವತಿಗೆ ಕೞಿಪಿದನ್‌. ಆ ವಿವಾಹೋತ್ಸವ ಅನಂತರದೊಳ್

ಹಾಗೆ ಬಳುವಳಿಯನ್ನು ಕೊಟ್ಟಾದ ಮೇಲೆ, ಧರ್ಮಪುತ್ರನು ಬಲದೇವನಿಗೆ ಎಷ್ಟೆಷ್ಟೋ ಕಾಣಿಕೆಗಳನ್ನು ಕೊಟ್ಟು ಸಂತಸಪಡಿಸಿ ದ್ವಾರಾವತಿಗೆ ಕಳಿಸಿದನು. ಆ ಮದುವೆಯ ನಂತರ

ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದೞಲಂ ಕಿಡೆ ಸೋಂಕೆ ಸೋಂಕುಗಳ್

ಕಳೆದುವು ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್|

ಕಳೆದುವು ನಾಣುಮಂ ಕಿಱಿದು ಜಾಣುಮನೞ್ಕಱನೀವ ಚುಂಬನಂ

ಕಳೆದುವು ಗರ್ವಮಂ ಕಳೆದುವಂತವರಿರ್ವರ ಮನ್ಮಥದ್ರವಂ|| ೨೭ ||

ತಳಿರ್ಗಳ ಪಾಸಿನೊಳ್ ಪೊರಳುತಿರ್ದ ಅೞಲಂ ಕಿಡೆ ಸೋಂಕೆ ಸೋಂಕುಗಳ್ ಕಳೆದುವು; ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್ ಕಳೆದುವು; ನಾಣುಮಂ ಕಿಱಿದು  ಜಾಣುಮನ್‌ ಅೞ್ಕಱನ್‌ ಈವ ಚುಂಬನಂ ಕಳೆದುವು; ಗರ್ವಮಂ ಕಳೆದುವು ಅಂತು ಅವರಿರ್ವರ ಮನ್ಮಥದ್ರವಂ.

(ಸುಭದ್ರೆಯು) ಚಿಗುರಿನ ಹಾಸಿನಲ್ಲಿ ಹೊರಳಾಡುತ್ತ ಅರ್ಜುನನಿಗಾಗಿ ಹಂಬಲಿಸುತ್ತಿದ್ದಾಗ ಉಂಟಾದ ತಾಪವು ಅರ್ಜುನನು ಅವಳ ಮೈದಡವಿದಾಗ ಕಳೆದುಹೋಯಿತು. (ಅವಳ) ಹದವಾದ  ಮೈಬಿಸಿ, ಉಸಿರಿನ ಬಿಸಿಗಳು ಅರ್ಜುನನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡಾಗ ಕಳೆದುಹೋದವು. ಅವಳ ನಾಚಿಕೆ, ಮುಗ್ಧತೆಗಳನ್ನು ಅರ್ಜುನನು ಪ್ರೀತಿಯಿಂದ ನೀಡಿದ ಮುತ್ತುಗಳು ಕಳೆದವು. (ಪರಸ್ಪರ ಮಿಲನದಿಂದಾದ) ಮನ್ಮಥದ್ರವವು ಇಬ್ಬರ ದೇಹದ ಉಷ್ಣತೆಗಳನ್ನೂ ಕಳೆಯಿತು.

‌ಮಾಲಿನಿ|| ಅಭಿನವಮದಲೇಖಾಲಾಲಿತಂ ವಿಭ್ರಮಭ್ರೂ

ರಭಸಗತಿವಿಳಾಸಂ ದೀಪ್ತಕಂದರ್ಪದರ್ಪ

ಕ್ಷುಭಿತಗಳನಿನಾದಂ ಪ್ರಸ್ಫುರದ್ಘರ್ಮವಾರಿ

ಪ್ರಭವಮೆಸೆದುದಂತಾ ಕಾಂತೆಗಾ ಕಾಂತಸಂಗಂ|| ೨೮||

ಅಭಿನವ ಮದಲೇಖಾ ಲಾಲಿತಂ, ವಿಭ್ರಮ ಭ್ರೂ ರಭಸಗತಿ ವಿಳಾಸಂ, ದೀಪ್ತ ಕಂದರ್ಪ ದರ್ಪ

ಕ್ಷುಭಿತ ಗಳ ನಿನಾದಂ, ಪ್ರಸ್ಫುರತ್‌  ಘರ್ಮ ವಾರಿ ಪ್ರಭವಂ ಎಸೆದುದು ಅಂತು ಆ ಕಾಂತೆಗೆ ಆ  ಕಾಂತಸಂಗಂ

ಸುಭದ್ರೆಯ ಕೆನ್ನೆಯ ಮೇಲೆ ಹೊಸ ಮದಲೇಖೆ ಕಾಣಿಸುತ್ತಿದೆ; ಅವಳ ಸುಂದರ ಹುಬ್ಬುಗಳು ವೇಗವಾಗಿ ಚಲಿಸುತ್ತಿವೆ; ಮದನನ ದರ್ಪದಿಂದಾಗಿ ಅವಳ ಗಂಟಲಿನಿಂದ ವಿಲಕ್ಷಣವಾದ ಸದ್ದುಗಳು ಹೊರಡುತ್ತಿವೆ; ಅವಳ ಮೈಯಿಂದ ಬೆವರು ಧಾರಾಳವಾಗಿ ಇಳಿಯುತ್ತಿದೆ – ಕಾಂತನ ಸಂಗವು ಅವಳಲ್ಲಿ ಈ ಎಲ್ಲ ಲಕ್ಷಣಗಳನ್ನು ಉಂಟುಮಾಡಿದೆ!

ಟಿಪ್ಪಣಿ: ಮೇಲಿನ ಎರಡು ಪದ್ಯಗಳು ಅರ್ಜುನ-ಸುಭದ್ರೆಯರ ಕೂಡುವಿಕೆಯನ್ನು ಬಣ್ಣಿಸುತ್ತಿವೆ. ಅರ್ಜುನ (ಎಂದರೆ ತನ್ನ ಆಶ್ರಯದಾತನಾದ ಅರಿಕೇಸರಿ) ಎಲ್ಲ ಅವಕಾಶಗಳಿದ್ದಾಗಲೂ, ವಿಧಿಪೂರ್ವಕವಾಗಿ ಮದುವೆಯಾಗುವ ಮೊದಲೇ ಸುಭದ್ರೆಯನ್ನು ಕೂಡುವ, ಆ ಮೂಲಕ ಧಾರ್ಮಿಕ ಕಟ್ಟಪಾಡುಗಳನ್ನು ಮೀರುವ ಕೆಲಸಕ್ಕೆ ಕೈಹಾಕಲಿಲ್ಲ ಎನ್ನುವ ಅಂಶವನ್ನು  ಕವಿ ಇಲ್ಲಿ ಎತ್ತಿ ತೋರಿಸುತ್ತಿದ್ದಾನೆ.

ವ|| ಅಂತು ಕಾಮದೇವನುಂ ರತಿಯುಂ ವಸಿಷ್ಠನುಮರುಂಧತಿಯುಮೀಶ್ವರನುಂ ಪಾರ್ವತಿಯುಮೆನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯೆ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋರೆ-

ಅಂತು ಕಾಮದೇವನುಂ ರತಿಯುಂ, ವಸಿಷ್ಠನುಂ ಅರುಂಧತಿಯುಂ, ಈಶ್ವರನುಂ ಪಾರ್ವತಿಯುಂ ಎನಿಸಿ, ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯೆ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋರೆ

ಹಾಗೆ (ಅವರಿಬ್ಬರೂ) ರತಿ-ಮನ್ಮಥರಂತೆ, ವಸಿಷ್ಠ – ಅರುಂಧತಿಯರಂತೆ ಈಶ್ವರ – ಪಾರ್ವತಿಯರಂತೆ ಇದ್ದು, ರೂಪ, ಸತ್ವ, ರತಿ ಇವೆಲ್ಲದರಲ್ಲೂ  ಸಮಾನರಾಗಿ, ಸುಖವಾಗಿದ್ದರು. ಆಗ ಸುಭದ್ರೆಯಲ್ಲಿ ಬಸುರಿಯ ಲಕ್ಷಣಗಳು ಕಾಣಿಸಿಕೊಳ್ಳಲು-

ಕಂ|| ಒಟ್ಟಜೆಯಿಂ ಭಾರತದೊಳ್

ಕಟ್ಟಾಳ್ಗಳನಿಱಿದು ತವಿಸಲಾ ಜೆಟ್ಟಿಗರಂ|

ಪುಟ್ಟಿದನೆಂಬವೊಲದಟಂ

ಪುಟ್ಟಿದನಭಿಮನ್ಯು ಕಲಿತನಂ ಪುಟ್ಟುವವೋಲ್|| ೨೯ ||

ಒಟ್ಟಜೆಯಿಂ ಭಾರತದೊಳ್ ಕಟ್ಟಾಳ್ಗಳನ್‌ ಇಱಿದು ತವಿಸಲ್‌ ಆ ಜೆಟ್ಟಿಗರಂ ಪುಟ್ಟಿದನ್‌ ಎಂಬವೊಲ್‌ ಅದಟಂ ಪುಟ್ಟಿದನ್‌ ಅಭಿಮನ್ಯು ಕಲಿತನಂ ಪುಟ್ಟುವವೋಲ್

(ಮುಂದೆ ನಡೆಯಲಿರುವ) ಮಹಾಭಾರತ ಯುದ್ಧದಲ್ಲಿ ದೊಡ್ಡ ದೊಡ್ಡ ವೀರರನ್ನು ಇರಿದು ಕೊಲ್ಲಲೆಂದೇ ಹುಟ್ಟಿದವನಂತೆ, ಕಲಿತನವೇ ಹುಟ್ಟಿದಂತೆ, ಪರಾಕ್ರಮಿಯಾದ ಅಭಿಮನ್ಯುವು ಹುಟ್ಟಿದನು.

Facebook Comments Box

Related posts

ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

 

 

ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ–

ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.

ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ

ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|

ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ

ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ ||

(ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ;

ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ;

ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್

ಅವ್ವಳಿಸಿರೆ,

ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ)

 

ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು.

ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ–

(ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ)

ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು–

ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ

ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|

ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ

ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪||

(ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ)

ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ  ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು!

ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ–

(ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ  ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ)

ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು–

ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ

ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|

ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್

ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫||

(ʼಅಲರಂಬು...

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ...

ಪಂಪಭಾರತ ಆಶ್ವಾಸ ೪ ೪೩-೫೨)

 

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ...

Latest posts

ಪಂಪಭಾರತ ಆಶ್ವಾಸ ೪ ಪದ್ಯಗಳು ೯೨ರಿಂದ ೯೮

 

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ...

ಪಂಪಭಾರತ ಆಶ್ವಾಸ ೪ (೮೭-೯೧)

 

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ...

ಪಂಪಭಾರತ ಆಶ್ವಾಸ ೪ ೪೩-೫೨)

 

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ...

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ...

Leave a Comment

Leave a Reply

Your email address will not be published. Required fields are marked *