ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

 

|| ಆಗಳ್ ದ್ರುಪದಂ ಬದ್ದವಣದ ಱೆಗಳಂ ಬಾಜಿಸಲ್ವೇೞ್ದು ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನೇಱಿಸಿ ಧೃಷ್ಟದ್ಯುಮ್ನ ಯುಧಾಮನ್ಯೂತ್ತಮೌಜಶ್ಶಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊೞಲ್ಗೊಡಗೊಂಡುವರ್ಪುದುಮಿತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳಾಲೋಚಿಸಿ ಪೇೞಿಮೇಗೆಯ್ವಮೆನೆ ಕರ್ಣನಿಂತೆಂದಂ

(ಆಗಳ್ ದ್ರುಪದಂ ಬದ್ದವಣದ ಱೆಗಳಂ ಬಾಜಿಸಲ್‌ ಪೇೞ್ದು, ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನ್‌ ಏಱಿಸಿ, ಧೃಷ್ಟದ್ಯುಮ್ನ ಯುಧಾಮನ್ಯು, ಉತ್ತಮೌಜ, ಶಿಖಂಡಿ, ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ, ಮುಂದಿಟ್ಟು ಪೊೞಲ್ಗೆ ಒಡಗೊಂಡುರ್ಪುದುಂ, ಇತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳ್‌ ಆಲೋಚಿಸಿ ʼಪೇೞಿಂ  ಏಗೆಯ್ವಂ?ʼ  ಎನೆ ಕರ್ಣನಿಂತೆಂದಂ-)

ಆಗ ದ್ರುಪದನು ಮಂಗಳವಾದ್ಯಗಳನ್ನು ಮೊಳಗಿಸಲು ಹೇಳಿ, ಅರ್ಜುನನನ್ನು ದ್ರೌಪದಿಯೊಡನೆ ಪಲ್ಲಕ್ಕಿಯಲ್ಲಿ ಕೂರಿಸಿ, ಧೃಷ್ಟದ್ಯುಮ್ನ ಯುಧಾಮನ್ಯು, ಉತ್ತಮೌಜ, ಶಿಖಂಡಿ, ಚೇಕಿತಾನರೆಂಬ ತನ್ನ ಕ್ಕಳು-ತಮ್ಮಂದಿರನ್ನೂ, ಎಲ್ಲ ಜನರನ್ನೂ ಸೇರಿಸಿಕೊಂಡು ಗುಂಪಾಗಿ ನಗರಕ್ಕೆ ಹಿಂದಿರುಗಿ ಬಂದನು.  ಇತ್ತ ದುರ್ಯೋಧನನು ಕರ್ಣ, ಶಲ್ಯ, ಶಕುನಿ, ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ʼಈಗ ಏನು ಮಾಡೋಣ? ಹೇಳಿʼ ಎನ್ನಲು ಕರ್ಣನು ಹೀಗೆ ಹೇಳಿದನು.

|| ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇವೋದರೆಂ

ಬಿನಮೇಂ ಪೋಪಮೆ ನಾಡ ಕೂಟಕುಳಿಗಳ್ಗೇದೋಸಮೇಂ ಬನ್ನಮೊಂ|

ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ

ನಿನಗಂ ದೋರ್ವಲದಿಂದಮೊಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ|| ೬೫||

(ಜನಮೆಲ್ಲಂ ನೆರೆದು ʼಅಕ್ಕ! ಅಣ್ಣರ್‌ ಇರ್‌ ಇಂದು ಏವಂದರ್‌ ಏವೋದರ್‌ ಎಂಬಿನಂ  ಏಂ ಪೋಪಮೆ? ನಾಡ ಕೂಟಕುಳಿಗಳ್ಗೆ ಏ ದೋಸಂ? ಏಂ ನ್ನಂ? ಒಂದನೆ ಕೇಳ್‌! ಆಂತರನ್ ಇಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ     ನಿನಗಂ ದೋರ್ವಲದಿಂದಂ  ಒಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ?ʼ)

ಜನರೆಲ್ಲ ಸೇರಿಕೊಂಡು ʼಅಯ್ಯೋ! ಈ ಅಣ್ಣಗಳು ಬಂದಿದ್ದೇಕೆ? ಈಗ ಹೋಗುವುದೇಕೆ?ʼ ಎಂದು ಆಡಿಕೊಳ್ಳಲು ಅವಕಾಶವಾಗುವಂತೆ ನಾವೀಗ ಹಿಂದೆ ಹೋಗಿಬಿಡುವುದೆ? ಗುಂಪಿನಲ್ಲಿದ್ದಾಗ ಜನ ಬಾಯಿಗೆ ಬಂದಹಾಗೆ ಮಾತಾಡುತ್ತಾರೆ! ಅವರಿಗೆ ದೋಷವೂ ಇಲ್ಲ, ನಷ್ಟವೂ ಇಲ್ಲ! ಅದಿರಲಿ! ನನ್ನ ಒಂದು ಮಾತು ಕೇಳು: ಯುದ್ಧಕ್ಕೆ ನಿಂತವರನ್ನು ನನ್ನ ತೋಳ್ಬಲದಿಂದ  ಹಿಮ್ಮೆಟ್ಟಿಸಿ,  ಗೆಲುವೆಂಬ ಹೆಣ್ಣನ್ನೂ, ದ್ರೌಪದಿ ಎಂಬ ಹೆಣ್ಣನ್ನೂ ತಂದು ಹಸೆಮಣೆಯಲ್ಲಿ ಕೂರಿಸಿ ನಿನಗೆ ಮದುವೆ ಮಾಡಿಸಲಾರೆನೆ  ನಾನು?

|| ಎನೆ ಶಲ್ಯನಿಂತೆಂದಂ

ಎನ್ನಲು ಶಲ್ಯನು ಹೀಗೆ ಹೇಳಿದನು.

ಚಂ|| ಕುಡುವೊಡೆ ನಿಸ್ತ್ರಪಂ ಕುಡುವುದೇಱಿಸಿದಂ ಬೆಸೆಕೋಲನೆಂದು ಪೇೞ್

ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್|

ತೊಡರ್ದ ಪರಾಭವಂ ದ್ರುಪದನಂ ತಱಿದೊಟ್ಟದೆ ಕೆಮ್ಮಗಾನಿದಂ

ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳ್ಗಳ ಕೊರ್ವದೇವುದೋ|| ೬೬||

ಕುಡುವೊಡೆ ನಿಸ್ತ್ರಪಂ ಕುಡುವುದು! ಏಱಿಸಿದಂ ಬೆಸೆಕೋಲನ್‌ ಎಂದು ಪೇೞ್ ಕುಡುವುದೆ ಕನ್ನೆಯಂ ದ್ವಿಜಕುಲಂಗೆ? ಇದು ವಿಶ್ವನರೇಂದ್ರ ವೃಂದದೊಳ್ ತೊಡರ್ದ ಪರಾಭವಂ! ದ್ರುಪದನಂ ತಱಿದು ಒಟ್ಟದೆ ಕೆಮ್ಮಗೆ ಆನ್‌ ಇದಂ ಕಡೆಗಣಿಸಿ ಇರ್ದೊಡೆ ಎನ್ನ ಕಡುಗೊರ್ವಿದ ತೋಳ್ಗಳ ಕೊರ್ವು ಅದು ಏವುದೋ? )

(ಕನ್ಯೆಯನ್ನು) ಕೊಡುವುದಾದರೆ ಸಂಕೋಚವಿಲ್ಲದೆ, ನಾಚಿಕೆಪಟ್ಟುಕೊಳ್ಳದೆ ಕೊಡಲಿ! ಯಾವುದೋ ಹತ್ತಿ ಎಕ್ಕುವ ಬಿಲ್ಲನ್ನು ಹೆದೆ ಏರಿಸಿದ ಎಂದು ಬ್ರಾಹ್ಮಣನಿಗೆ ಕನ್ಯೆಯನ್ನು  ಕೊಟ್ಟುಬಿಡುವುದೆ? ಇದು ವಿಶ್ವದ ಎಲ್ಲಾ ರಾಜರಿಗೂ ಆಗಿರುವ ಅವಮಾನ! ಆ ದ್ರುಪದನನ್ನು ಕಡಿದು ರಾಶಿ ಒಟ್ಟದೆ, ಸುಮ್ಮನೆ ನಾನಿದನ್ನು ಕಡೆಗಣಿಸಿಬಿಟ್ಟರೆ  ನನ್ನ ಈ ಕೊಬ್ಬಿದ ತೋಳುಗಳ ಕೊಬ್ಬಿನಿಂದ ಏನಾದಂತಾಯಿತು?

|| ಎಂದು ಕೆಳರ್ದು ನುಡಿದು ಸಯಂಬರಕೆ ನೆರೆದರಸುಮಕ್ಕಳೆಲ್ಲರನುತ್ಸಾಹಿಸಿ ನೋಡೆ ನೋಡೆ

ಎಂದು ಕೆರಳಿ ಮಾತಾಡಿ, ಸ್ವಯಂವರಕ್ಕೆ ಬಂದ ಅರಸುಮಕ್ಕಳೆಲ್ಲರನ್ನೂ ಉತ್ತೇಜಿಸಿ, ಅವರಲ್ಲಿ ಉತ್ಸಾಹ ಹುಟ್ಟಿಸಿ. ನೋಡುನೋಡುತ್ತಿರುವಂತೆಯೇ

|| ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ

ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕೆ ಕೈ|

ಮಿಕ್ಕಿರೆ ಬಂದುದೊಂದಣಿ ರಣಾನಕ ರಾವಮಳುಂಬಮಾದುದಾರ್

ಮಿಕ್ಕು ಬರ್ದುಂಕುವನ್ನರಿವರ್ಗೆಂಬಿನೆಗಂ ಮಸಗಿತ್ತು ರಾಜಕಂ|| ೬೭||

(ಪಕ್ಕರೆಯಿಕ್ಕಿ ಬಂದುವು ಹಯಂ, ಘಟೆ ಪಣ್ಣಿದುವು, ಆಯುಧಂಗಳಿಂ ತೆಕ್ಕನೆ ತೀವಿ ಬಂದುವು ರಥಂ, ಪುಲಿವಿಂಡುವೊಲ್‌ ಆಳುರ್ಕೆ ಕೈಮಿಕ್ಕಿರೆ ಬಂದುದು ಒಂದು ಅಣಿ, ರಣಾನಕ ರಾವಂ ಅಳುಂಬಮಾದುದು, ಆರ್ ಮಿಕ್ಕು ಬರ್ದುಂಕುವನ್ನರ್‌ ಇರ್ಗೆ ಎಂಬಿನೆಗಂ ಮಸಗಿತ್ತು ರಾಜಕಂ)

ಜೀನು ತೊಡಿಸಿದ ಕುದುರೆಗಳು ಬಂದವು; ಆನೆಗಳು ಸಜ್ಜಾದವು; ಆಯುಧಗಳನ್ನು ತುಂಬಿಕೊಂಡು ರಥಗಳು ಬಂದವು; ಹುಲಿಯ ಹಿಂಡಿನ ಹಾಗಿದ್ದ, ಅಮಿತಪ್ರತಾಪಿಗಳಾದ ಸೈನಿಕರ ಒಂದು ತಂಡ ಬಂದಿತು; ಯುದ್ಧ ಭೇರಿಗಳ ಸದ್ದು ತೀವ್ರಗೊಂಡಿತು; ʼಈ ಸೈನ್ಯದ ಎದುರಿಗೆ ನಿಂತು ಹೋರಾಡಿ ಬದುಕುವವರು ಉಂಟೆʼ ಎಂದು ರಾಜರ ಸಮೂಹವು ವಿಜೃಂಭಿಸಿತು.

|| ಅಂತು ನೆಲಂ ಮೂರಿವಿಟ್ಟಂತೆ ತಳರ್ದು

ಹಾಗೆ ನೆಲವೇ ಚಲಿಸಿದಂತೆ ಗುಂಪಾಗಿ ಚಲಿಸಿ

ಚಂ|| ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳೋಳಿವಟ್ಟ ಬೆ

ಳ್ನೊರೆಗಳ ಪಿಂಡನೆತ್ತಿಸಿದ ಬೆಳ್ಗೊಡೆಗಳ್ ಮಕರಂಗಳಂ ಭಯಂ|

ಕರ ಕರಿಗಳ್ ತೆಱಂಬೊಳೆವ ಮೀಂಗಳನುಳ್ಕುವ ಕೈದುಗಳ್ ನಿರಾ

ಕರಿಸಿರೆ ಮೇರೆದಪ್ಪಿ ಕವಿದತ್ತು ನರಾಧಿಪಸೈನ್ಯಸಾಗರಂ|| ೬೮||

(ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳ್‌, ಓಳಿವಟ್ಟ ಬೆಳ್ನೊರೆಗಳ ಪಿಂಡನ್‌ ಎತ್ತಿಸಿದ ಬೆಳ್ಗೊಡೆಗಳ್, ಮಕರಂಗಳಂ ಭಯಂಕರ ಕರಿಗಳ್, ತೆಱಂಬೊಳೆವ ಮೀಂಗಳನ್‌ ಉಳ್ಕುವ ಕೈದುಗಳ್ ನಿರಾಕರಿಸಿರೆ ಮೇರೆದಪ್ಪಿ ಕವಿದತ್ತು ನರಾಧಿಪಸೈನ್ಯಸಾಗರಂ)

(ಕಡಲಿನ) ತೆರೆಗಳ ಸಮೂಹವನ್ನು ಅಲುಗಾಡುವ ಬಾವುಟಗಳು; ಸಾಲಾಗಿ ಬರುವ ಬಿಳಿನೊರೆಗಳ ಹಿಂಡನ್ನು ಎತ್ತಿ ಹಿಡಿದ ಬಿಳಿಯ ಕೊಡೆಗಳು; ಮೊಸಳೆಗಳನ್ನು ಭಯಂಕರವಾದ ಆನೆಗಳು: ಬಗೆಬಗೆಯಾಗಿ ಹೊಳೆಯುವ ಮೀನುಗಳನ್ನು ಹೊಳೆಯುವ ಕತ್ತಿಗಳು ಕೀಳ್ಗಳೆಯುವಂತಿದ್ದವು. ಹೀಗೆ ಆ ರಾಜರ ಸೈನ್ಯಸಾಗರವು ಅಲ್ಲಿ ಮೇರೆ ಮೀರಿ ಕವಿದಿತ್ತು.

|| ಅಂತು ಕವಿದ ರಿಪುಬಳಜಳನಿಧಿ ಕಳಕಳರವಮಂ ಕೇಳ್ದು ಪೊೞಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂ

ಹಾಗೆ ಕವಿದ ಅರಿಸೈನ್ಯವೆಂಬ ಕಡಲಿನ ಕಳಕಳ ಶಬ್ದವನ್ನು ಕೇಳಿ, ನಗರದೊಳಗೆ ಹೋಗಲೊಲ್ಲದೆ ಅಲ್ಲಿಯೇ ನಿಂತ ಅರ್ಜುನನಿಗೆ ದ್ರುಪದನು ಹೀಗೆಂದನು:

|| ಧನುವಂ ನೀಂ ತೆಗೆದೆಚ್ಚು ಮೀನನಳವಂ ಕೆಯ್ಕೊಂಡುದರ್ಕಂ ಕರಂ

ನಿನಗೀ ಕನ್ನಿಕೆ ಸೋಲ್ತುದರ್ಕಮೆರ್ದೆಯೊಳ್ ಕೋಪಾಗ್ನಿ ಕೈಗಣ್ಮೆ ಬಂ|

ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದಿನ್ ಕಾವನಾ

ವನೊ ನೀನಲ್ಲದೆ ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ|| ೬೯||

(ಧನುವಂ ನೀಂ ತೆಗೆದು ಎಚ್ಚು ಮೀನ್‌ ಅಳವಂ ಕೆಯ್ಕೊಂಡುದರ್ಕಂ, ಕರಂ ನಿನಗೆ ಈ ಕನ್ನಿಕೆ ಸೋಲ್ತುದರ್ಕಂ ಎರ್ದೆಯೊಳ್ ಕೋಪಾಗ್ನಿ ಕೈಗಣ್ಮೆ ಬಂದು ಇನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದು. ಇನ್ ಕಾವನ್‌ ಆವನೊ ನೀನಲ್ಲದೆ? ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ)

ನೀನು ಬಿಲ್ಲನ್ನು ಎತ್ತಿ, ಹೆದೆ ಏರಿಸಿ, ಮೀನಿಗೆ ಬಾಣ ಹೊಡೆದು ಪರಾಕ್ರಮವನ್ನು ಮೆರೆದೆ; ಈ ಕನ್ನಿಕೆ ನಿನಗೆ ಸೋತಳು; ಇದನ್ನು ಕಂಡು ಈ ರಾಜಕುಲದವರೆಲ್ಲ ಕೋಪ ಹೆಚ್ಚಿ, ಕೆರಳಿ ಒಟ್ಟಾಗಿ ಎದ್ದು ನಿಂತಿದ್ದಾರೆ. ಇನ್ನು ನೀನಲ್ಲದೆ ನಮ್ಮನ್ನು ಉಳಿಸುವವರು ಯಾರು? ನನ್ನ ತಲೆಯನ್ನು ಈಗ ನೀನೇ ಉಳಿಸಬೇಕು!

ವ|| ಎಂಬುದುಮರಾತಿಕಾಳಾನಳನಿದರ್ಕೇನುಂ ಚಿಂತಿಸಲ್ವೇಡ ನೀಮೆನ್ನ ಕಾಳೆಗಮಂ ಪೆಱಗಿರ್ದು ನೋಡಿಮೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆಱೆದಿಸೆ

(ಎಂಬುದುಂ  ಅರಾತಿಕಾಳಾನಳನ್‌ ʼಇದರ್ಕೇನುಂ ಚಿಂತಿಸಲ್ವೇಡ, ನೀಂ ಎನ್ನ ಕಾಳೆಗಮಂ ಪೆಱಗಿರ್ದು ನೋಡಿಂʼ  ಎಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆಱೆದು ಇಸೆ)

ಎಂದಾಗ ಅರಾತಿ ಕಾಳಾನಳನು (ಅರ್ಜುನನು) ʼಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ; ನನ್ನ ಕಾಳಗವನ್ನು ಹೊರಗಿದ್ದು ನೋಡಿʼ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು (ತಮ್ಮನ್ನು) ಹೂತುಹಾಕಲೆಂದು ಮುನ್ನುಗ್ಗಿ ಬರುತ್ತಿದ್ದ ಶತ್ರುಸೈನ್ಯವನ್ನು ಎದುರಿಸಿ ಬಾಣವನ್ನು ಬಿಲ್ಲಿಗೆ ಹೂಡಿ, ಕಿವಿಯವರೆಗೆ ಎಳೆದು ಹೊಡೆಯಲು-

ಚಂ|| ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ಬಿಲ್ ತೆರಳ್ದು ದು

ರ್ಧರ ಹಯಮೞ್ಗಿ ಸಂದಣಿಸಿ ಸಂದಣಿ ಕೊೞ್ಗುದಿಗೊಂಡುದಗ್ರ ಭೀ|

ಕರ ಥಮೞ್ಗಿ ದಂತಿಘಟೆಗಳ್ ಪೆಱಗಿಟ್ಟೊಡೆ ಕಟ್ಟೆಗಟ್ಟಿದಂ

ತಿರೆ ತಳರ್ದತ್ತರಾತಿಬಲಮಾಂಪವರಾರ್ ಕದನತ್ರಿಣೇತ್ರನಂ|| ೭೦||

(ಸರಳ ಪೊದಳ್ದ ಬಲ್ಸರಿಯ ಕೋಳ್ಗೆ ಇರಲಾಱದೆ ಬಿಲ್ ತೆರಳ್ದು, ದುರ್ಧರ ಯಂ ಅೞ್ಗಿ, ಸಂದಣಿಸಿ ಸಂದಣಿ ಕೊೞ್ಗುದಿಗೊಂಡು, ಉದಗ್ರ ಭೀಕರ ಥಂ ಅೞ್ಗಿ, ದಂತಿಘಟೆಗಳ್ ಪೆಱಗಿಟ್ಟೊಡೆ ಕಟ್ಟೆಗಟ್ಟಿದಂತಿರೆ ತಳರ್ದತ್ತು ಅರಾತಿಬಲಂ, ಆಂಪವರ್‌ ಆರ್ ಕದನತ್ರಿಣೇತ್ರನಂ?)

ಆವರಿಸಿ ಬಂದ ಬಾಣಗಳ ಸುರಿಮಳೆಯನ್ನು ಎದುರಿಸಲಾರದೆ ಬಿಲ್ಲಾಳುಗಳು ಹಿಮ್ಮೆಟ್ಟಿದರು; ಬಲಿಷ್ಠವಾದ ಕುದುರೆಗಳು ನಾಶವಾದವು; ಕಾಲಾಳುಗಳ ಸೈನ್ಯ ಬಾಣದ ಪೆಟ್ಟಿಗೆ ಕಂಗೆಟ್ಟಿತು; ಉತ್ತಮವಾದ ರಥಗಳು ನಾಶಗೊಂಡವು; ಆನೆಗಳು ಹಿಂದೆ ಸರಿದವು; ಹೀಗೆ ಎಲ್ಲವನ್ನೂ ಒಂದು ಕಟ್ಟೆ ಕಟ್ಟಿ ಒಟ್ಟು ಮಾಡಿ ಜಾರಿಸಿದಂತೆ, ಶತ್ರುಬಲವು ಜಾರಿಹೋಯಿತು. (೬೭ನೇ ಪದ್ಯದ ನಂತರದ ಗದ್ಯದಲ್ಲಿ ಇದೇ ಸೈನ್ಯವು “ನೆಲಂ ಮೂರಿವಿಟ್ಟಂತೆ ತಳರ್ದುದು” ಎಂದು ಕವಿ ವರ್ಣಿಸಿರುವುದನ್ನು ಗಮನಿಸಬಹುದು).

|| ಆಗಳ್ ಕರ್ಣನಾರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಱಿದುಂ ಪೊೞ್ತು ಕಾದೆ

(ಆಗಳ್ ಕರ್ಣನ್‌ ಆರ್ಣವನಿನಾದದಿಂದ ಆರ್ದು, ಗುಣಾರ್ಣವನೊಳ್ ಬಂದು ತಾಗಿ, ಶಲ್ಯಂ ಭೀಮಸೇನನೊಳ್ ತಾಗಿ, ಕಿಱಿದುಂ ಪೊೞ್ತು ಕಾದೆ)

ಆಗ ಕರ್ಣನು ಕಡಲಿನ ಭೀಕರ ಶಬ್ದವನ್ನು ಹೋಲುವಂತೆ ಬೊಬ್ಬಿರಿಯುತ್ತಾ ಬಂದು ಅರ್ಜುನನನ್ನು ಎದುರಿಸಿದನು; ಭೀಮನು ಶಲ್ಯನನ್ನು ಎದುರಿಸಿದನು. ಸ್ವಲ್ಪ ಹೊತ್ತು ಕಾಳಗ ನಡೆದನಂತರ-

ಚಂ|| ಅರಿದು ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನೆಂದು ನೊಂದು ನಿ

ತ್ತರಿಸದೆ ಪಾರ್ವನೊಳ್ ಕಲಹಮಾಗದು ಚಿ ದೊರೆಯಲ್ತಿದೆಂದು ಭಾ|

ಸ್ಕರಸುತನೊಯ್ಯನೋಸರಿಸೆ ಮದ್ರಮಹೀಶನುಮಂ ಮರುತ್ಸುತಂ

ವಿರಥನೆ ಮಾಡಿ ತಳ್ತು ನೆಲಕಿಕ್ಕಿದನೊರ್ಮೆಯೆ ಮಲ್ಲಯುದ್ಧದೊಳ್|| ೭೧ ||

ಅರಿದು ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನ್‌ʼ ಎಂದು ನೊಂದು, ನಿತ್ತರಿಸದೆ, ʼಪಾರ್ವನೊಳ್ ಕಲಹಂ  ಆಗದು, ಚಿ ದೊರೆಯಲ್ತು ಇದುʼ ಎಂದು ಭಾಸ್ಕರಸುತನ್‌ ಒಯ್ಯನೆ ಓಸರಿಸೆ, ಮದ್ರಮಹೀಶನುಮಂ ಮರುತ್ಸುತಂ ವಿರಥನೆ ಮಾಡಿ, ತಳ್ತು ನೆಲಕೆ ಇಕ್ಕಿದನ್‌ ಒರ್ಮೆಯೆ ಮಲ್ಲಯುದ್ಧದೊಳ್)

ʼಈ ಬ್ರಾಹ್ಮಣನ ಬಿಲ್ವಿದ್ಯೆಯನ್ನು ಗೆಲ್ಲಲು ಸಾಧ್ಯವಿಲ್ಲʼ ಎಂದು. ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೆ, ʼಛೀ! ಹಾರುವನೊಂದಿಗೆ ಯುದ್ಧ ಸಲ್ಲದು; ಅದು ಸರಿಯಲ್ಲʼ ಎಂದು ಕರ್ಣನು ಮೆಲ್ಲನೆ ಅಲ್ಲಿಂದ ಜಾರಿದನು. ಭೀಮನು ಶಲ್ಯನನ್ನು ವಿರಥನನ್ನಾಗಿಸಿ ಮಲ್ಲಯುದ್ಧದಲ್ಲಿ  ಒಂದೇ ಪೆಟ್ಟಿಗೆ ಅವನನ್ನು ನೆಲಕ್ಕೆ ಉರುಳಿಸಿದನು.

|| ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗೆ ಸುಟ್ಟಿತೋಱಿ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುೞಿದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದಂ ಕಂಡು ಮನಂಗೆಟ್ಟು

(ಆಗಳ್‌ ಆ ಬಲದ ನಡುವೆ ಇರ್ದ ನಾರಾಯಣಂ ಬಲದೇವಂಗೆ ಸುಟ್ಟಿತೋಱಿ ʼಭೀಮಾರ್ಜುನರ್ಕಳ್‌ ಇರ್‌ ಅಮೋಘಂ ಅಪ್ಪರ್‌ʼ ಎಂದು ಅವರ ಸಾಹಸಕ್ಕೆ ಮೆಚ್ಚಿ, ಸಂತಸಂಬಟ್ಟಿರ್ದಾಗಳ್‌, ಉೞಿದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದಂ ಕಂಡು ಮನಂಗೆಟ್ಟು,)

ಆಗ, ಆ ಸೈನ್ಯದ ನಡುವೆ ಇದ್ದ ನಾರಾಯಣನು ಬಲದೇವನಿಗೆ ಬೆರಳಿನ ಸನ್ನೆಯ ಮೂಲಕ ʼಇವರು ಖಂಡಿತವಾಗಿಯೂ ಭೀಮಾರ್ಜುನರೇ ಆಗಿದ್ದಾರೆʼ ಎಂದು ತೋರಿಸಿ, ಅವರ ಸಾಹಸಕ್ಕೆ ಮೆಚ್ಚಿ ಸಂತೋಷಪಟ್ಟನು. ಆಗ, ಕರ್ಣ ಮತ್ತು ಶಲ್ಯರು ಯುದ್ಧಕ್ಕೆ ಮುಖ ತಿರುಗಿಸಿದ್ದರಿಂದ ಉಳಿದ ಅರಸುಮಕ್ಕಳೆಲ್ಲರೂ ಧೈರ್ಯಗೆಟ್ಟು

ಕಂ|| ಕರಮೊಸೆದಾ ದ್ರುಪದಜೆಯೊಳ್

ನೆರೆದೊಸಗೆಗೆ ತಮ್ಮ ಬೀರಮಂ ಬಿಂಕಮುಮಂ|

ತೆಱವುಂ ತೆಲ್ಲಂಟಿಯುಮೆಂ

ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್|| ೭೨||

(ಕರಂ ಒಸೆದು ಆ ದ್ರುಪದಜೆಯೊಳ್ ನೆರೆದ ಒಸಗೆಗೆ ತಮ್ಮ ಬೀರಮಂ ಬಿಂಕಮುಮಂ ತೆಱವುಂ ತೆಲ್ಲಂಟಿಯುಂ ಎಂದು ಅರಿಕೇಸರಿಗೆ ಆಳ್‌ ಈವವೋಲ್ ಬೆನ್ನಿತ್ತರ್)

ಅರ್ಜುನನು ದ್ರೌಪದಿಯನ್ನು ಗೆದ್ದು, ಸಂತೋಷದಿಂದ ಅವಳನ್ನು ಸೇರಿದ್ದಕ್ಕೆ ಸಂಭ್ರಮಗೊಂಡು, ಅವನಿಗೆ ತಮ್ಮ ಶೌರ್ಯ ಮತ್ತು ಹಮ್ಮುಗಳನ್ನು ಕಪ್ಪದ ರೂಪದಲ್ಲೂ, ತಪ್ಪುಗಾಣಿಕೆಯ ರೂಪದಲ್ಲೂ ನೀಡುವ ಹಾಗೆ ಆ ಅರಸು ಮಕ್ಕಳೆಲ್ಲರೂ ಅರ್ಜುನನಿಗೆ ಬೆನ್ನು ತೋರಿಸಿದರು.

|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱಿ ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂ

(ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱಿ, ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗೆ ಇಂತೆಂದಂ)

ಅಗ ಅರ್ಜುನನು ತನ್ನ ಬಿಲ್ಲ ಕೊಪ್ಪಿನ ಮೇಲೆ ಕೈಯನ್ನಿಟ್ಟು ನಿಂತು, ಮುಗಳ್ನಗೆ ನಗುತ್ತಾ ದ್ರೌಪದಿಗೆ ಹೀಗೆಂದನು:

ಕಂ|| ನಿನ್ನನುೞುಗಿಸಲುಮಾಜಿಯೊ

ಳೆನ್ನಂ ಬೆಂಕೊಂಡು ಕಾದಲುಂ ಬಂದೀಗಳ್|

ಬಿನ್ನನೆ ಮೊಗದಿಂ ಬೀರರ್

ಬೆನ್ನಿತ್ತುದನಿನಿಸು ನೋಡ ಸರಸಿರುಹಮುಖೀ|| ೭೩||

(ನಿನ್ನನ್‌ ಉೞುಗಿಸಲುಂ, ಆಜಿಯೊಳ್‌ ಎನ್ನಂ ಬೆಂಕೊಂಡು ಕಾದಲುಂ ಬಂದು, ಈಗಳ್ ಬಿನ್ನನೆ ಮೊಗದಿಂ ಬೀರರ್

ಬೆನ್ನಿತ್ತುದನ್‌ ಇನಿಸು ನೋಡ ಸರಸಿರುಹಮುಖೀ!)

ನನ್ನನ್ನು ಬೆನ್ನಟ್ಟಿ, ಯುದ್ದದಲ್ಲಿ ಗೆದ್ದು, ನಿನ್ನನ್ನು ಮೆಚ್ಚಿಸಲೆಂದು ಬಂದ ವೀರರೆಲ್ಲ ಮಾತಿಲ್ಲದೆ ಬೆನ್ನು ತೋರಿಸುತ್ತಿದ್ದಾರೆ! ಕಮಲಮುಖಯೆ, ಅದನ್ನು (ಅದರ ಚಂದವನ್ನು) ಕೊಂಚ ನೋಡು!

|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪ್ಪುದುಮಂ ತನ್ನಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲದಱಿದು ಮಹಾವಿಭೂತಿಯಿಂ ಪೊೞಲಂ ಪುಗಿಸಿ-

(ಎಂಬನ್ನೆಗಂ ದ್ರುಪದಂ, ಬಂದವರ್ ಪಾಂಡವರ್‌ ಅಪ್ಪುದುಮಂ, ತನ್ನಳಿಯಂ ವಿಕ್ರಮಾರ್ಜುನನ್‌ ಅಪ್ಪುದುಮಂ ತಪ್ಪಿಲ್ಲದೆ ಅಱಿದು ಮಹಾವಿಭೂತಿಯಿಂ ಪೊೞಲಂ ಪುಗಿಸಿ)

ಎನ್ನುತ್ತಿರುವಂತೆ ದ್ರುಪದನು, ಬಂದವರು ಪಾಂಡವರೆಂದೂ, (ಬಾಣ ಹೊಡೆದು ದ್ರೌಪದಿಯನ್ನು ಗೆದ್ದುಕೊಂಡು) ತನ್ನ ಅಳಿಯನಾದವನು ಅರ್ಜುನನೆಂದೂ ಸಂದೇಹವಿಲ್ಲದೆ ತಿಳಿದುಕೊಂಡು, ಮಹಾವೈಭವದಿಂದ ಅವರನ್ನು ಊರೊಳಗೆ ಹೊಗಿಸಿ

ಚಂ|| ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ್ ತಳ

ತ್ತಳಿಸಿ ವಿಚಿತ್ರಕೇತುತತಿಗಳ್ ಮಿಳಿರ್ದಾಡೆ ಪುರಾಂಗನಾಜನಂ|

ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ

ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ|| ೭೪||

(ಪೊೞಲೊಳಗೆ ಒಪ್ಪೆ ಕನ್ನಡಿಯ ಕಂಚಿನ ತೋರಣದ ಓಳಿಗಳ್ ತಳತ್ತಳಿಸೆ, ವಿಚಿತ್ರಕೇತುತತಿಗಳ್ ಮಿಳಿರ್ದು ಆಡೆ, ಪುರಾಂಗನಾಜನಂಗಳ ಜಯ ಜೀಯಮಾನ ವಂ, ಇಕ್ಕುವ ಸೇಸೆ ಮನೋನುರಾಗಮಂ ಬಳೆಯಿಸೆ, ಪೊಕ್ಕನ್‌ ಆ ದ್ರುಪದಮಂದಿರಮಂ ಪರಸೈನ್ಯಭೈರವಂ)

ಊರಿನ ಒಳಗೆ ಕನ್ನಡಿ ಮತ್ತು ಕಂಚಿನ ಎಲೆಗಳ ತೋರಣದ ಸಾಲುಗಳು ಪಳಪಳನೆ ಹೊಳೆಯುತ್ತ ಶೋಭಿಸುತ್ತಿದ್ದವು; ಬಗೆಬಗೆಯ ಬಾವುಟಗಳು ಗುಂಪುಗುಂಪಾಗಿ ಹಾರಾಡುತ್ತಿದ್ದವು; ಊರಿನ ಹೆಂಗಸರು ʼಜಯ, ಜೀಯಮಾನʼ ಎಂದು ಶುಭ ಹಾರೈಸುತ್ತ ಅಕ್ಷತೆಕಾಳನ್ನು ಹಾಕುತ್ತಿದ್ದರು. ಇದೆಲ್ಲದರಿಂದ ಸಂಪ್ರೀತನಾದ  ಆ ಪರಸೈನ್ಯಭೈರವನು ದ್ರುಪದನ ಮನೆಯನ್ನು ಹೊಕ್ಕನು.

(ಕಾಂಸ್ಯತೋರಣ: a chain of leaves carved or moulded in bronze hung across the top frame of the door (of a temple, room meant for meditation) as a decoration; a bronze festoon. ವಿ. ಕೃಷ್ಣ ಅವರ ಶಬ್ದಕೋಶ: ಅಲರ್ alar.ink)

(ಟಿಪ್ಪಣಿ: ಇಲ್ಲಿ ʼಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ್ ತಳತ್ತಳಿಸೆʼ ಎಂಬುದನ್ನು ಅರ್ಥ ಮಾಡುವುದು ಹೇಗೆ? ʼಪೊೞಲೊಳಗೊಪ್ಪೆʼ ಎನ್ನುವಲ್ಲಿ ಬರುವ ʼಒಪ್ಪೆʼ ಮತ್ತು ವಾಕ್ಯದ ಕೊನೆಯಲ್ಲಿ ಬರುವ ʼತಳತ್ತಳಿಸೆʼ ಎಂಬ ಎರಡು ಅಲಂಕಾರವಾಚಕಗಳನ್ನು ʼಕನ್ನಡಿಯ ಕಂಚಿನ ತೋರಣದೋಳಿʼಳಿಗೆ ಅನ್ವಯಿಸಿ ಅರ್ಥ ಮಾಡಲು ಬರುವುದಿಲ್ಲ. ʼಒಪ್ಪೆʼಯ ಬದಲಿಗೆ ʼಒಪ್ಪಿʼ ಎಂದಿದ್ದರೆ ಅಥವಾ ʼತಳತ್ತಳಿಸೆʼಯ ಬದಲಿಗೆ ʼತಳತ್ತಳಿಸಿʼ ಎಂದಿದ್ದರೆ ಮಾತ್ರ ವಾಕ್ಯದ ಅರ್ಥ ಸ್ಪಷ್ಟವಾಗುತ್ತದೆ. ಇಲ್ಲಿ ʼತಳತ್ತಳಿಸಿʼ ಎಂಬ ರೂಪವನ್ನು ಇಟ್ಟುಕೊಂಡಿದೆ).