ಲಂಚದ ಕೋಟೆಗೊಂದು ಸಣ್ಣ ಪೆಟ್ಟು

ದೂರದ ದೆಹಲಿಯಲ್ಲಿರುವ ವೈಲಾಯ ದಂಪತಿಗಳು ನನ್ನ ಪತ್ನಿಯ ಹತ್ತಿರದ ಬಂಧುಗಳು. ಅವರ ಇಬ್ಬರು ಗಂಡು ಮಕ್ಕಳೂ ಅಮೆರಿಕಾದಲ್ಲಿದ್ದಾರೆ. ಹಾಗಾಗಿ ವೈಲಾಯ ದಂಪತಿಗಳು ಮತ್ತೆ ಮತ್ತೆ ಅಮೆರಿಕಕ್ಕೆ ಹೋಗಿ ಬರುತ್ತಿರುತ್ತಾರೆ.

ಇತ್ತೀಚಿಗೆ ಮುಂಬಯಿಯಲ್ಲಿ ಉಗ್ರರ ದಾಳಿ ನಡೆದ ನಂತರ ಅಂತರರಾಷ್ಟ್ರೀಯ ಪ್ರಯಾಣಿಕರ ದಾಖಲೆಗಳನ್ನು ತಪಾಸಣಾಧಿಕಾರಿಗಳು ತುಂಬಾ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದಾರಂತೆ. ವೈಲಾಯರ ಪತ್ನಿ ಬಿ.ಸಿ.ರೋಡಿನವರು. ಅವರ ಜನನ ದಾಖಲೆಯನ್ನು ಪಕ್ಕಾ ಮಾಡಿಕೊಳ್ಳುವ ಉದ್ದೇಶದಿಂದ ವೈಲಾಯರು ನಮಗೆ ಒಂದು ಪತ್ರ ಬರೆದು, “ತಾಲೂಕು ಆಫಿಸಿನಿಂದ ಈ ದಾಖಲೆಯನ್ನು ಪಡೆದು ಕಳಿಸಲು ಸಾಧ್ಯವೇ?’ ಎಂದು ಕೇಳಿದರು.

ದೃಢ ಪತ್ರಿಕೆ ಏನೋ ಸಿಕ್ಕಿತು

ನಾನು ಜನವರಿ ೦೯ರ ಯಾವುದೋ ಒಂದು ದಿನ ಬಂಟ್ವಾಳ ತಾಲೂಕು ಆಫೀಸಿಗೆ ಹೋಗಿ ಒಂದು ಅರ್ಜಿ ಸಲ್ಲಿಸಿದೆ. ಜೊತೆಗೆ ಅರ್ಜಿ ಶುಲ್ಕ ಹತ್ತು ರೂ. ಕಟ್ಟಿದೆ. ಯಾವುದೇ ತೊಂದರೆ ಇಲ್ಲದೆ ಒಂದು ವಾರದ ಒಳಗೆ ನನಗೆ ದಾಖಲೆ ಸಿಕ್ಕಿತು. ಆದರೆ ಅದರಲ್ಲಿ ಒಂದು ಸಮಸ್ಯೆ ಇತ್ತು. “ಮಗುವಿನ ಹೆಸರು” ಎಂಬ ಕಾಲಮ್ಮಿನ ಎದುರುಗಡೆ ‘ಹೆಣ್ಣು ಮಗು’ ಎಂದಿತ್ತು. (ಮಗು ಹುಟ್ಟಿದ ಕೂಡಲೇ ಪಟೇಲರಿಗೆ ಅಥವಾ ಶಾನುಭೋಗರಿಗೆ ತಿಳಿಸುತ್ತಿದ್ದರು . ಹುಟ್ಟಿದ ಕೂಡಲೇ ಹೆಸರಿಡುತ್ತಾರೆಯೇ? ಹಾಗಾಗಿ ಮಗು ಗಂಡೋ ಹೆಣ್ಣೋ ತಿಳಿಸುವುದು, ಹೆಸರು ಮತ್ತೆ ಕೊಡುತ್ತೇವೆ ಎನ್ನುವುದು, ಮತ್ತೆ ಕೊಡಲು ಮರೆತು ಹೋಗುವುದು ಹೀಗೆಲ್ಲ ಆಗಿ, ಒಟ್ಟಿನಲ್ಲಿ ದಾಖಲೆಯಲ್ಲಿ ಉಳಿಯುವುದು “ಹೆಣ್ಣು ಮಗು” ಎಂದೋ ‘ಗಂಡು ಮಗು ‘ ಎಂದೋ ಮಾತ್ರ. ಹೆಸರಿಲ್ಲ. ಹೆಸರಿಲ್ಲದ ದೃಢಪತ್ರಿಕೆಗೆ ಯಾವ ಬೆಲೆಯೂ ಇಲ್ಲ ಎಂಬುದು ಕೊಡುವವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.) ನನಗೆ ಮಗುವಿನ ಹೆಸರು ಇರುವ ದೃಢಪತ್ರಿಕೆ ಬೇಕಾಗಿತ್ತು. ಇದಲ್ಲದೇ ಮಗುವಿನ ತಂದೆಯ ಹೆಸರು ‘ವೆಂಕಪ್ಪಯ್ಯ’ ಎಂದಿರಬೇಕಾದದ್ದು ‘ವೆಂಕಪ್ಪ ಎಂದಾಗಿತ್ತು. ನಮೂದುಗಳು ಕನ್ನಡ ಭಾಷೆಯಲ್ಲಿದ್ದವು.ನನಗೆ ಅವು ಇಂಗ್ಲಿಷಿನಲ್ಲಿ ಬೇಕಾಗಿದ್ದವು. ಉಳಿದ ದಾಖಲೆಗಳೊಂದಿಗೆ ತಾಳೆಯಾಗಬೇಕಾದರೆ ಜನನ ಪ್ರಮಾಣಪತ್ರದಲ್ಲೂ ಈ ನಮೂದುಗಳು ನಿಖರವಾಗಿರಬೇಕಾಗಿತ್ತು.
ಹತ್ತಿರ ಹತ್ತಿರ ಬಾ!
ಬಂಟ್ವಾಳದ ತಾಲೂಕು ಕಛೇರಿಯಲ್ಲಿ ಈ ದೃಢಪತ್ರಿಕೆಯನ್ನು ಕೊಡಬೇಕಾದ ಅಧಿಕಾರಿ ಇರುವುದು ವಾರದಲ್ಲಿ ಎರಡು ದಿನ ಮಾತ್ರ. ಮಂಗಳವಾರ ಮತ್ತು ಶುಕ್ರವಾರ. ನಾನು ಶುಕ್ರವಾರ ಪುನಃ ಹೋಗಿ ಅಧಿಕಾರಿಯನ್ನು ಕಂಡು “ಹೀಗಾಯಿತಲ್ಲ, ಏನು ಮಾಡುವುದೀಗ?” ಎಂದೆ. “ಅದೆಲ್ಲ ಸರಿ ಮಾಡಿಕೊಡಬಹುದು. ಜನನ ದಾಖಲೆ ಯಾರದ್ದೋ ಅವರ ಅಣ್ಣನೋ, ತಮ್ಮನೋ ಒಂದು ಅರ್ಜಿ ಕೊಟ್ಟು, ನಂತರ ವಿಚಾರಣೆಗೆ ಬಂದಾಗ ಹೇಳಿಕೆ ಕೊಟ್ಟು ದೃಢೀಕರಿಸಬೇಕು. ನಾವು ಅರ್ಜಿಯನ್ನು ಗ್ರಾಮಲೆಕ್ಕಿಗರಿಗೆ ಕಳಿಸಿ ಅವರಿಂದ ವರದಿ ತರಿಸಿಕೊಂಡು, ದೃಢಪತ್ರಿಕೆ ಕೊಡುತ್ತೇವೆ. ಆದರೆ ನಿಮಗೆ ಬೇಗ ಬೇಕಾದರೆ……..” ಮಾತು ನಿಂತಿತು.
ನಾನು ಮುಖದಲ್ಲೊಂದು ಪ್ರಶ್ನೆ ಮೂಡಿಸಿಕೊಂಡು ಅವರ ಕಡೆ ನೋಡಿದೆ.
“ಬನ್ನಿ, ಇಲ್ಲಿ ಹತ್ತಿರ”
ಇಷ್ಟು ಹೊತ್ತೂ ನಾನು ಅವರ ಮೇಜಿನ ಎದುರಿಗೆ ನಿಂತಿದ್ದೆ. ಈಗ ಹತ್ತಿರ ಕರೆಯುತ್ತಿದ್ದಾರೆ! ಒಳ್ಳೆಯ ಅವಕಾಶ! ಬಲದ ಬದಿಯಿಂದ ಎರಡು ಮೇಜುಗಳ ಮಧ್ಯೆ ತೂರಿಕೊಂಡು ಸ್ವಲ್ಪ ಹತ್ತಿರ ಹೋದೆ. ಅವರಿಗೆ ಸಾಕಾಗಲಿಲ್ಲ.
“ಬನ್ನಿ, ಬನ್ನಿ, ಇನ್ನೂ ಹತ್ತಿರ ಬನ್ನಿ”
ನಾನು ಇನ್ನೂ ಸ್ವಲ್ಪ ಹತ್ತಿರ ಜರುಗಿದೆ.
“ನಿಮಗೆ ಅರ್ಜೆಂಟಿದ್ದರೆ ಮಾಡಿಕೊಡಬಹುದು. ನೀವು ಏನಾದರೂ ಸ್ವಲ್ಪ ಕೊಡಬೇಕಾಗುತ್ತದೆ”-ಸಣ್ಣ ದನಿ.
“ಎಷ್ಟು?” – ಅವರ ಶ್ರುತಿಯಲ್ಲೇ ಕೇಳಿದೆ.
“ಎಷ್ಟೆಂದು ಹೇಳಲಿ? ಎರಡು ಮೂರು ತಿದ್ದುಪಡಿ ಆಗಬೇಕಲ್ಲ……. ಒಂದು ಸಾವಿರ ಕೊಡಿ”
ಹತ್ತಿರ ಹೋಗಿದ್ದ ನನಗೆ ಬಿಸಿ ಜೋರು ತಾಗಿತು! ಸ್ವಲ್ಪ ದೂರ ಸರಿದೆ.
“ನೋಡೋಣ. ಅದು ನನ್ನದಲ್ಲ. ಪಾರ್ಟಿ ಡೆಲ್ಲಿಯಲ್ಲಿದ್ದಾರೆ. ನಾನು ಅವರಿಗೆ ಫೋನ್ ಮಾಡಿ ಮತ್ತೆ ಬರುತ್ತೇನೆ” ಎಂದು ಹೊರಡಲು ಅಣಿಯಾದೆ.
“ನಿಮಗೆ ಅರ್ಜೆಂಟಿದ್ದರೆ ಮಾತ್ರ. ಇಲ್ಲದಿದ್ದರೆ ಹಾಗೇ ಆಗುತ್ತದೆ” ಎಂಬ ಸಮಾಧಾನ ಬಂತು. ನಾನು ಏನೂ ಹೇಳದೆ ಹೊರಟು ಬಂದೆ.
ವಿಚಾರಣೆ ನಡೆಯಿತು
ನಾನು ಪುನಃ ಮಂಗಳವಾರ ತಾಲೂಕು ಆಫೀಸಿಗೆ ಹೋದೆ. ಈ ಸಲ ಸೀದ ತಹಸೀಲ್ದಾರರ ಛೇಂಬರಿಗೆ. ಅದೃಷ್ಟವಶಾತ್ ನನಗೆ ತಹಸೀಲ್ದಾರರ ಪರಿಚಯ ಮೊದಲೇ ಇತ್ತು. ನನ್ನ ಹಾಗೇ ಮಾತಾಡಲು ಬಂದ ಇನ್ನೊಬ್ಬರೂ ಅಲ್ಲಿದ್ದರು. “ಏನು?” ಎಂಬ ತಹಸೀಲ್ದಾರರ ಪ್ರಶ್ನೆಗೆ ಉತ್ತರ ಹೇಳಲು ನಾನು ಕೊಂಚ ಅನುಮಾನಿಸಿದೆ.”ಪರವಾಗಿಲ್ಲ ಹೇಳಿ” ಅಂದರು ಅವರು. ನಾನು ನಡೆದದ್ದನ್ನೆಲ್ಲ ಹೇಳಿ “ಈಗ ನಾನು ಏನು ಮಾಡಬೇಕು?” ಎಂದೆ. ಅವರು ಬೆಲ್ ಮಾಡಿ ಯಾರನ್ನೋ ಕರೆದು ಆ ಆಧಿಕಾರಿಯನ್ನು ಕರೆಸಿದರು. ಬಂದ ಅಧಿಕಾರಿಗೆ ನಾನು ಅಲ್ಲಿ ಕೂತಿದ್ದುದು ನೋಡಿ ಮುಖಭಾವ ಕೊಂಚ ಬದಲಾಯಿತು.
“ಏನ್ರಿ, ಏನು ಹೇಳಿದಿರಿ ಇವರಿಗೆ?” ತಹಸೀಲ್ದಾರರು ಜಬರಿಸಿ ಕೇಳಿದರು.
ಅಧಿಕಾರಿಯ ಮುಖ ಕಪ್ಪಾಯಿತು. ತಡವರಿಸಿದರು. ನಾನು ಅವರನ್ನೇ ಗಮನಿಸುತ್ತಿದ್ದೆ. ಯಾವ ಪೂರ್ವಸಿದ್ಧತೆಯೂಗಲಿ, ಅಗತ್ಯವಾಗಲಿ ಇಲ್ಲದಿದ್ದರೂ ಬಾಯಿ ತೆಗೆದರೆ ಸುಳ್ಳು ಬಿಟ್ಟು ಬೇರೆ ಏನನ್ನೂ ಹೇಳದ ಮಹಾಫಟಿಂಗರನ್ನು ನಾನು ನಮ್ಮ ಬಿ.ಸಿ.ರೋಡಿನಲ್ಲಿಯೇ ಕಂಡಿದ್ದೇನೆ. ಈ ಮನುಷ್ಯನೂ ಅದೇ ವರ್ಗಕ್ಕೆ ಸೇರಿದ್ದರೆ? “ನಾನು ಇವರ ಹತ್ತಿರ ಹಣ ಕೇಳಿದ್ದೇ ಸುಳ್ಳು” ಎಂದು ಸಾಧಿಸಿಬಿಟ್ಟರೆ? ಅವರು ಹಣ ಕೇಳಿದ್ದಕ್ಕೆ ನನ್ನ ಹತ್ತಿರ ಸಾಕ್ಷಿ ಏನೂ ಇರಲಿಲ್ಲವಲ್ಲ?
ಆದರೆ ಹಾಗೇನೂ ಆಗಲಿಲ್ಲ. ಈ ಆಧಿಕಾರಿ ಬಹುಶಃ ಕೊಡಗಿನ ಕಡೆಯವರು. ಮಿಲಿಟರಿಯವರ ಹಾಗೆ ಒಳ್ಳೇ ಜಬರ್ದಸ್ತಾಗಿದ್ದರು. ಮೀಸೆ ಜೋರಾಗಿ ಬಿಟ್ಟಿದ್ದರು. ಆದರೂ ಮುಖದಲ್ಲಿ ಬೆವರು ಹರಿಯುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಕರ್ಚೀಫಿನಿಂದ ಮುಖ, ಹಣೆ ಒರೆಸಿಕೊಳ್ಳಲು ಶುರು ಮಾಡಿದರು.
“ಏನ್ರಿ, ಏನು ಹೇಳಿದಿರಿ ಇವರಿಗೆ?” ಪುನಃ ತಹಸೀಲ್ದಾರರ ಜೋರು ದನಿ. ಅಧಿಕಾರಿ ತಡವರಿಸಿದರು. ಸ್ಪಷ್ಟ ಉತ್ತರ ಬರಲಿಲ್ಲ.
ತಹಸೀಲ್ದಾರ್: ನಿಮ್ಮ ಆಫೀಸರ್ ಮೊಬೈಲ್ ನಂಬರ್ ಕೊಡ್ರೀ
ಅಧಿಕಾರಿ: ಸರ್…. ಸರ್….
ತಹಸೀಲ್ದಾರ್: ಏನು ಹೇಳಿದಿರಿ ಇವರಿಗೆ?
ಅಧಿಕಾರಿ: ಹಣ ಕೇಳಿದ್ದು ಹೌದು…. ಆದರೆ ಅದು ಬೇಗ ಕೆಲಸ ಆಗಬೇಕಾದರೆ ಮಾತ್ರ.
ನಾನು ಕೂತಲ್ಲಿಯೇ ಒಮ್ಮೆ ಉಸಿರು ಬಿಟ್ಟೆ.
ತಹಸೀಲ್ದಾರ್: ಹೇಗ್ರೀ ಬೇಗ ಮಾಡಿಕೊಡುತ್ತೀರಿ? ಅದಕ್ಕೆ ಪ್ರೊಸೀಜರ್ ಇಲ್ಲವೇನ್ರಿ?
ಅಧಿಕಾರಿ: ಅಲ್ಲ ಸರ್, ಏನಾದ್ರೂ ಮಾತಾಡಿ….
ತಹಸೀಲ್ದಾರ್: ಆಯಿತು, ನಿಮ್ಮ ಆಫೀಸರ್ ಮೊಬೈಲ್ ನಂಬರ್ ಕೊಡಿ ಈಗ
ಸ್ವಲ್ಪ ಕೊಸರಾಡಿ ಅಂತೂ ಅಧಿಕಾರಿ ನಂಬರ್ ಕೊಟ್ಟರು.ತಹಸೀಲ್ದಾರರು ಮೇಲಧಿಕಾರಿಯೊಂದಿಗೆ ಮಾತಿಗೆ ತೊಡಗಿದರು.”ಏನು ಸ್ವಾಮಿ, ನಿಮ್ಮ ಆಫೀಸಿನಿಂದ್ ಇಂಥವರನ್ನೆಲ್ಲ ಕಳಿಸುತ್ತೀರಿ. ಇಲ್ಲಿ ಬಂದು ನಮ್ಮ ಮರ್ಯಾದೆ ತೆಗೆಯುತ್ತಾರೆ”
ವಿಷಯ ಕೇಳಿ ಆ ಕಡೆಯಿಂದ “ದೂರು ಕೊಟ್ಟವರೇ ಸುಳ್ಳು ಹೇಳುತ್ತಿರಬಹುದು” ಎಂಬ ಉತ್ತರ ಬಂತಂತೆ!
ಕೋಟೆಯ ರಕ್ಷಣೆಗೆ ಒಬ್ಬೊಬ್ಬರಾಗಿ ಹೊರಬಿದ್ದ ಸೈನಿಕರು
ಸೈನಿಕ-೧
“ಸುಂದರ ರಾಯರೆ, ನೀವು ಒಂದು ಕಂಪ್ಲೇಂಟ್ ಬರೆದು ಕೊಟ್ಟುಬಿಡಿ.ನಿಮ್ಮ ಕೆಲಸ ಆಗುವ ಹಾಗೆ ನಾನು ನೋಡುತ್ತೇನೆ” ಎಂದರು. ನಾನು “ಆಗಲಿ” ಎಂದು ಹೇಳಿ ದೂರು ಬರೆದು ತರಲು ಹೊರಟೆ. ಆಧಿಕಾರಿ “ಸರ್, ಬರವಣಿಗೆಯಲ್ಲಿ ದೂರು ಕೊಡುವುದು ಬೇಡ, ನಾನು ಅವರ ಕೆಲಸ ಮಾಡಿಕೊಡುತ್ತೇನೆ” ಎಂದು ಅಂಗಲಾಚತೊಡಗಿದರು. ಅವರ ಮಾತು ಮುಂದುವರಿದಿದ್ದ ಹಾಗೇ ನಾನು ಹೊರಗೆ ಬಂದೆ. ಸಮೀಪದ ವಂಶ ಕಂಪ್ಯೂಟರ್ಸಿನ ಯಾದವರು ನನ್ನ ಗೆಳೆಯ. ಅಲ್ಲಿಗೆ ಹೋಗಿ ಪೇಪರು, ಪೆನ್ನು ತೆಗೆದುಕೊಂಡು ಒಂದು ದೂರು ಬರೆದು ಸಿದ್ಧ ಮಾಡಿ ತಂದೆ. ಇಷ್ಟೊತ್ತಿಗಾಗಲೇ ಅರ್ಧ ಗಂಟೆ ಕಳೆದಿರಬಹುದು. ನಾನು ತಹಸೀಲ್ದಾರರಿಗೆ ದೂರು ನೀಡಿ ಹೊರಗೆ ಬರುವಾಗ ಅಧಿಕಾರಿ ತನ್ನೊಬ್ಬ ಸ್ನೇಹಿತರೊಂದಿಗೆ ಅಲ್ಲಿಯೇ ಕಾಯುತ್ತಿದ್ದರು. ಅವರ ಸ್ನೇಹಿತರು ಅದೇ ಕಛೇರಿಯಲ್ಲಿ ಚುನಾವಣೆ ವಿಭಾಗದಲ್ಲಿ ಕೆಲಸ ಮಾಡುವವರು. ನನಗೆ ಪರಿಚಿತರೇ. ಅವರು ನನಗೆ “ನಿಮಗೆ ನನ್ನ ಗುರುತು ಇಲ್ಲವೇ? ನೀವು ಸಮಸ್ಯೆ ನನಗೆ ಹೇಳಿದ್ದರೆ ನಿಮ್ಮ ಕೆಲಸ ನಾನು ಮಾಡಿಸಿಕೊಡುತ್ತಿದ್ದೆನಲ್ಲ” ಎಂದು ನನ್ನ ದೂರಿಗೆ ಆಕ್ಷೇಪಣೆ ತೆಗೆದರು.
ನಾನು ಅಧಿಕಾರಿಯನ್ನು ಉದ್ದೇಶಿಸಿ “ಸ್ವಾಮಿ, ನಮ್ಮ ನಮ್ಮ ಮಕ್ಕಳೇ ಉಗ್ರಗಾಮಿಗಳ ಗುಂಡಿಗೆ ಬಲಿಯಾಗುವವರೆಗೂ ನಮಗೆ ಬುದ್ಧಿ ಬರುವುದಿಲ್ಲವೆ? ಇದೆಂಥ ಕೆಲಸ ಮಾಡುತ್ತಿದ್ದೀರಿ ನೀವು?” ಎಂದು ದೊಡ್ಡ ದೊಡ್ದ ಮಾತಾಡತೊಡಗಿದೆ. ಅವರಿಬ್ಬರೂ ನನ್ನ ಮಾತನ್ನು ಕೊಂಚವಾದರೂ ಕಿವಿಯ ಮೇಲೆ ಹಾಕಿಕೊಳ್ಳುವ ಮನಃಸ್ಠಿತಿಯಲ್ಲಿರಲಿಲ್ಲ. ಉಗ್ರಗಾಮಿ, ಕೊಲೆ, ಮಕ್ಕಳು ಮುಂತಾದುವೆಲ್ಲ ಅವರ ಪಾಲಿಗೆ ಸಂಪೂರ್ಣ ಅರ್ಥಹೀನ ಶಬ್ದಗಳಾಗಿದ್ದವು. ನಾನು ಕೊಟ್ಟಿದ್ದ ದೂರನ್ನು ಹೇಗಾದರೂ ಹಿಂದೆ ಪಡೆಯುವಂತೆ ಮಾಡುವುದನ್ನು ಬಿಟ್ಟು ಬೇರೇನೂ ಆವರ ತಲೆಗೆ ಹೋಗುವಂತಿರಲಿಲ್ಲ. “ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ, ನೀವು ದೂರು ಹಿಂದೆ ತೆಗೆದುಕೊಳ್ಳಿ” ಎಂದು ಅಧಿಕಾರಿ ಮತ್ತೆ ಮತ್ತೆ ನನ್ನನ್ನು ಪೀಡಿಸತೊಡಗಿದರು. ನಾನೆಂದೆ: “ನಾನು ದೂರು ಕೊಟ್ಟಾಗಿದೆ. ಇನ್ನು ಅದನ್ನು ಹಿಂದೆ ಪಡೆಯುವ ಮಾತು ಇಲ್ಲ”
ಇಬ್ಬರೂ ನನಗೆ ಗಟ್ಟಿಯಾಗಿ ಅಂಟಿಕೊಂಡರು. ಕೊನೆಗೆ ನಾನು ಹೇಳಿದೆ:
“ನಾನು ದೂರು ಹಿಂದೆ ಪಡೆಯುವುದು ಸಾಧ್ಯವಿಲ್ಲ. ಬೇಕಾದರೆ ನಿಮ್ಮ ಜೊತೆ ತಹಸೀಲ್ದಾರರ ಹತ್ತಿರ ಬರುತ್ತೇನೆ. ನೀವೇ ಏನಾದರೂ ಮಾತಾಡಿಕೊಳ್ಳಿ”
“ಅಷ್ಟಾದರೂ ಮಾಡಿ” ಎಂದರು ಅಧಿಕಾರಿ. ನಾನು ಅವರ ಜೊತೆ ತಹಸೀಲ್ದಾರರ ಛೇಂಬರಿಗೆ ಹೋದೆ. ಅಧಿಕಾರಿ ಲಿಖಿತ ದೂರು ಬೇಡವೆಂದೂ, ಇನ್ನು ತಾನು ಇಂಥ ಕೆಲಸ ಮಾಡುವುದಿಲ್ಲವೆಂದೂ, ನನ್ನ ಕೆಲಸವನ್ನು ಮಾಡಿ ಕೊಡುವೆನೆಂದೂ ನಾನಾ ಬಗೆಯಾಗಿ ತಹಸೀಲ್ದಾರರ ಎದುರು ಗೋಗರೆದರು. “ಅದೆಲ್ಲ ಮತ್ತೆ ನೋಡೋಣ” ಎಂದು ತಹಸೀಲ್ದಾರರು ಪ್ರಕರಣ ಮುಗಿಸಿದರು. ಅಧಿಕಾರಿ ಅಲ್ಲಿಂದ ಹೊರಗೆ ಹೋದನಂತರ, ನಾನು ತಹಸೀಲ್ದಾರರ ಹತ್ತಿರ “ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುವುದಿಲ್ಲ” ಎಂದು ಹೇಳಿ ಬಂದೆ.
“ತಹಸೀಲ್ದಾರರಿಗೆ ಪವರ್ಸ್ ಇಲ್ಲ!”-ಸೈನಿಕ-೨
ಅದೇ ದಿನ ಸಂಜೆ ಸುಮಾರು ಏಳರ ಹೊತ್ತಿಗೆ ಎಂದಿನಂತೆ ನನ್ನ ಪ್ರೆಸ್ಸಿನಲ್ಲಿ ಕೂತಿದ್ದೆ. ನನಗೆ ಚೆನ್ನಾಗಿ ಪರಿಚಯವಿರುವ ವಿಲೇಜ್ ಎಕೌಂಟೆಂಟ್ ಒಬ್ಬರು ಪ್ರೆಸ್ಸಿನ ಎದುರು ಬೈಕ್ ನಿಲ್ಲಿಸಿ ಒಳಗೆ ಬಂದರು. ಇವರು ನನ್ನ ನೆರೆಕರೆಯವರೇ. ನನಗೆ ತುಂಬ ವಿಶ್ವಾಸದವರೂ ಹೌದು. ಬಂದವರು.
“ಬೋಪಯ್ಯರು ಸಿಕ್ಕಿದ್ದರು. ಎಲ್ಲ ಹೇಳಿದರು. ಅವರು ತುಂಬ ಒಳ್ಳೆಯ ಜನ” ಎಂದರು.
ನಾನು: ಹೂಂ
ವಿ.ಎ.: ನಮಗೆ ಅದು ಇದು ಅಂತ ಏನೇನೋ ಅಂಕಿ ಅಂಶದ ಕೆಲಸ ಮಾಡಲಿಕ್ಕೆ ಇರುತ್ತದಲ್ಲ. ಕೆಲವೊಮ್ಮೆ ನಮಗೆ ಅದು ತಿಳಿಯುವುದೇ ಇಲ್ಲ. ನಾವು ಅವರಿಗೇ ಅದನ್ನು ಕೊಟ್ಟು ಬಿಡುವುದು, ಎಲ್ಲ ಸರಿ ಮಾಡಿಕೊಡುತ್ತಾರೆ.
ನಾನು: ಹೂಂ
ವಿ.ಎ.: ಅವರು ನಿಜವಾಗಿ ಈ ಆಫೀಸಿನವರಲ್ಲ. ಮಂಗಳೂರಿನಿಂದ ಇಲ್ಲಿಗೆ ಬರುವುದು. ವಾರಕ್ಕೆ ಎರಡು ದಿನ ಮಾತ್ರ.
ನಾನು: ಹೂಂ
ವಿ.ಎ.:ನಿಜವಾಗಿ ನೋಡಿದರೆ ತಹಸೀಲ್ದಾರರಿಗೆ ಅವರಿಗೆ ನೋಟೀಸ್ ಕೊಡುವ ಪವರ್ಸ್ ಇಲ್ಲ. ಆದರೆ ಇವರು ಕೊಡುತ್ತಾರೆ.
ನಾನು: ಹೂಂ
ವಿ.ಎ.: ಅವರಿಗೆ ಅಂತ ಅಲ್ಲ. ದಿನಕ್ಕೆ ಇಬ್ಬರಿಗೆ ಆಫೀಸಿನಲ್ಲಿ ಷೋಕಾಸ್ ನೋಟೀಸ್ ಕೊಡುತ್ತಾರೆ. ಅದನ್ನು ಯಾರೂ ಕೇರ್ ಮಾಡುವುದೇ ಇಲ್ಲ.
ನಾನು: ಹೂಂ
ವಿ.ಎ.:ಕೆಲವರು ನೋಟೀಸಿಗೆ ಉತ್ತರ ಕೊಡುವುದೂ ಇಲ್ಲ
ನಾನು: ಹೂಂ
ವಿ.ಎ.: ಭಾರೀ ಸೆಕೆ ಉಂಟು, ಮಳೆ ಬಂದೀತೋ ಅಂತ…
ಮಾತು ಮುಗಿಸಿ ಅವರು ಹೊರಟು ಹೋದರು. ನಾನು ನನ್ನ ಹತ್ತಿರದ ಸ್ನೇಹಿತರಲ್ಲಿ ಈ ವಿಷಯ ಪ್ರಸ್ತಾವಿಸಿ ಸುಮ್ಮನಾದೆ.
ಪಾಪ! ತಪ್ಪು ನಿಮ್ಮದಲ್ಲ, ತಹಸೀಲ್ದಾರರದು!-ಸೈನಿಕ ೩
ಮತ್ತೆರಡು ದಿನ ಕಳೆದ ಮೇಲೆ ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಮತ್ತೊಬ್ಬರು ಸಿಕ್ಕಿದರು. “ನಿಮ್ಮ ಪ್ರೆಸ್ಸಿಗೆ ಎರಡೆರಡು ಸಲ ಬಂದೆ. ನೀವು ಸಿಕ್ಕಲೇ ಇಲ್ಲ” -ಪೀಠಿಕೆ. ಇವರು ರೆವಿನ್ಯೂ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ನಿವೃತ್ತರಾದ ಮೇಲೂ ಆಫೀಸನ್ನು ಪೂರ್ತಿ ಬಿಡಲು ಮನಸ್ಸಿಲ್ಲದವರು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಜೀವನಚರಿತ್ರೆಯನ್ನೂ ಪ್ರಕಟಿಸಿದ್ದಾರೆ.ಆವರು ಪ್ರೆಸ್ಸಿಗೆ ಬಂದುಹೋದ ಸುದ್ದಿ ನನಗೆ ಸಿಕ್ಕಿತ್ತು ಸಮ್ಮೇಳನ ಇದ್ದುದರಿಂದ ಆ ವಿಷಯ ಏನಾದರೂ ಮಾತಾಡಲು ಬಂದಿರಬಹುದು ಎಂದುಕೊಂಡಿದ್ದೆ.
“ನೀವು ಒಂದು ಕಂಪ್ಲೇಂಟ್ ಕೊಟ್ಟಿರಂತೆ. ನನಗೆ ವಿಷಯ ಗೊತ್ತಾಯಿತು. -ಸುಂದರರಾಯರು ನನಗೆ ಗೊತ್ತು. ಅವರು ಹಾಗೆಲ್ಲ ಮಾಡುವವರಲ್ಲ.-ಏನು ಮಾಡುವುದಿದ್ದರೂ ನನ್ನನ್ನು ಏನು ಸಾರ್, ಏನು ಮಾಡುವುದು ಈಗ ಎಂದು ಕೇಳದೆ – ನಾನು ವಿಚಾರಿಸುತ್ತೇನೆ ಎಂದು ಹೇಳಿದೆ”
ನಾನು ಮಾತು ಮುಂದುವರಿಸುವ ಆಸಕ್ತಿ ತೋರಿಸಲಿಲ್ಲ.
“ತಹಸೀಲ್ದಾರರೇ ಹೇಳಿದ್ದಂತಲ್ಲ ಕಂಪ್ಲೇಂಟ್ ಕೊಡಲಿಕ್ಕೆ. ಅವರು ಹೇಳಿದ ಮೇಲೆ ನೀವು ಏನು ಮಾಡಲು ಸಾಧ್ಯ?” ಎಂದು ನನ್ನ ಬಗ್ಗೆ ಅನುಕಂಪ ಸೂಚಿಸಿದರು. ನನಗೆ ಮಾತಿನಲ್ಲಿ ಆಸಕ್ತಿ ಇರಲಿಲ್ಲ. “ಮತ್ತೆ ಸಿಗುತ್ತೇನೆ” ಎಂದು ಹೇಳಿ ಅವರಿಂದ ತಪ್ಪಿಸಿಕೊಂಡೆ.
*******
ನಿಧಾನವಾಗಿ ಆಲೋಚನೆ ಮಾಡಿದಾಗ, ಇವರೆಲ್ಲ ಸೇರಿ ತಹಸೀಲ್ದಾರರನ್ನು ಬಲಿಪಶು ಮಾಡುವ ಸಂಚು ಮಾಡುತ್ತಿರಬಹುದು ಎಂದು ಅನುಮಾನವಾಯಿತು. ರಾತ್ರಿ ಸಾಹಿತಿಶ್ರೇಷ್ಠರಿಗೆ ಫೋನಿಸಿದೆ: “ಸ್ವಾಮೀ, ತಹಸೀಲ್ದಾರರು ಹೇಳಿದರು ಎನ್ನುವ ಕಾರಣಕ್ಕೆ ನಾನು ದೂರು ಕೊಟ್ಟದ್ದಲ್ಲ. ನನಗೆ ಬೇಕಾಗಿಯೇ, ನಾನೇ ಬುದ್ಧಿಪೂರ್ವಕ ಕೊಟ್ಟ ದೂರು ಅದು. ಅದರ ಜವಾಬ್ದಾರಿ ಪೂರ್ತಿ ನನ್ನದು.” ಆ ಕಡೆಯಿಂದ ಏನೂ ಉತ್ತರ ಬರಲಿಲ್ಲ.
ಇಷ್ಟು ನಡೆದು ಸುಮಾರು ಮೂರು ವಾರ ಕಳೆದ ಮೇಲೆ, ನನ್ನ ಅರ್ಜಿಯ ವಿಚಾರಣೆ ನಡೆದು, ನನಗೆ ಬೇಕಾದ ರೀತಿಯಲ್ಲಿ ದೃಢಪತ್ರಿಕೆ ಸಿಕ್ಕಿತು.
ತಹಸೀಲ್ದಾರರು ಆ ಅಧಿಕಾರಿಯ ಮೇಲೆ ಏನಾದರೂ ಕ್ರಮ ಕೈಗೊಂಡರೋ ಎಂದು ವಿಚಾರಿಸಲು ನಾನು ಹೋಗಲಿಲ್ಲ.

ಈ ಎರಡು ಪ್ರತಿಕ್ರಿಯೆಗಳು ಮೇಲ್ ಮೂಲಕ ಬಂದವು:

ಅಶೋಕವರ್ಧನ– Athree Book CenterPH: +91-824-2425161 Blog: athree.wordpress.com

ಪ್ರಿಯ ರಾಯರೇ

೧ ಮುದ್ರಾರಾಕ್ಷಸ: ಏಳನೇ ಸಾಲಿನಲ್ಲಿ ಅನಾವಶ್ಯಕ ಹುಟ್ಟಿದ ಹುಟ್ಟಿದ ಸೇರಿಕೊಂಡಿದೆ.೨ ‘ನಮಗೆ ಪತ್ರ ಬರೆದರು’ ಎಂದಿದ್ದೀರಿ. ಈ ನಾವು ಯಾರೆಂದು ನಿಮ್ಮ ವ್ಯಕ್ತಿಪರಿಚಯ ಪುಟ ನೋಡಿದರೆ ಏನೂ ಸಿಕ್ಕುವುದಿಲ್ಲ. ಆತ್ಮಾಶ್ಲಾಘನೆಯಾಗಬೇಕಿಲ್ಲ, ಆದರೆ ಹೆಚ್ಚು ವಿವರಗಳೊಡನೆ ಸ್ವಪರಿಚಯ ಬೇಕೇ ಬೇಕು. ಅಪರಿಚಿತ ಬ್ಲಾಗ್ ಓದುಗರಿಗೆ ಆಗ ನಿಮ್ಮ ಮಾತುಗಳ ಆಳ ಹರಹು ಅರ್ಥವಾಗುತ್ತದೆ.೩ ‘ಕೂಡಲೇ ಕಟ್ಟಿದೆ’ ಎಂದಿದ್ದೀರಿ. ಏನು, ಎಷ್ಟು, ಅಗತ್ಯದ್ದೋ ಅಲ್ಲವೋ ಇತ್ಯಾದಿ ಪ್ರಶ್ನೆಗಳಿಗವಕಾಶವಿಲ್ಲದಂತೆ ವಿವರವಾಗಿ ಬರೆಯಬೇಕಿತ್ತೋಂತ.೪ ಅನುಭವ, ನಿಮ್ಮ ನಿರ್ವಹಣೆ (ನಮಗೆ ಗೊತ್ತಿದ್ದದ್ದೇ) ತುಂಬಾ ಚೆನ್ನಾಗಿದೆ. ಇಂಥವನ್ನು ಇನ್ನಷ್ಟು ಮತ್ತಷ್ಟು ಸಾರ್ವಜನಿಕ ಶಿಕ್ಷಣ ಕ್ರಮದಲ್ಲಿ ಹಂಚಿಕೊಳ್ಳಲು ಬ್ಲಾಗ್ ತೆರೆದದ್ದಕ್ಕೆ ಅಭಿನಂದನೆಗಳು. ಒಂದೇ (ಬಳಕೆದಾರ ಜಾಗೃತಿ) ವಿಷಯದ ಮೇಲೇ ಒಮ್ಮೆಗೇ ಬರೆಯಬೇಡಿ. ನಿಮ್ಮ ವೈವಿಧ್ಯಮಯ ಆಸಕ್ತಿಗಳಿಂದ ಒಂದೊಂದನ್ನೇ ಕೊಡುತ್ತಾ ಬನ್ನಿ – ಕಾದಿರುತ್ತೇನೆ/ವೆ.

ಡಾ.ರಾಮಕೃಷ್ಣ ವೈಲಾಯ, ದ್ವಾರಕ,ನವದೆಹಲಿ. ಮೇ -ಎರಡು,೨೦೦೯.

ಸರಕಾರಿ ಕೆಲಸ ಎಂದರೆ ದಿಲ್ಲಿಯಲ್ಲೂ ಒಂದೇ, ಹಳ್ಳಿಯಲ್ಲೂ ಒಂದೇ.ಕೆಲಸ ವಾಗ ಬೇಕಾದರೆ ಒಂದು ಅರ್ಜಿ ಬೇಕು.ಅರ್ಜಿ ಮುಂದೆ ಸಾಗಲು ಪೇಪರ್ ವೈಟ್ ಬೇಕು.ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ.ಹೀಗಾಗಿ ಅದೊಂದು ವಿಧಿ,ನಿಯಮ ಎಂಬಂತಾಗಿದೆ.ಆದರೆ ಸುಂದರ ರಾಯರಂತಹ ಧೈರ್ಯವಾದಿ ಸತ್ಯವಾದಿ ಹಾಗು ಸ್ಥಿರವಾದಿ ಗಳು ಈ ವಿಧಿ/ ನಿಯಮಕ್ಕೆ ಅಪವಾದ ದಂತಿದ್ದಾರೆ.ಅಂತಹ ಸ್ವಲ್ಪ ಮಂದಿ ಇರುವುದರಿಂದಲೇ ಸರಕಾರಿ /ಸಾರ್ವಜನಿಕ ಕೆಲಸ ಸ್ವಲ್ಪ ಮಟ್ಟಿಗಾದರೂ ಅಡೆ-ತಡೆ ಇಲ್ಲದೆ ಸಾಗುತ್ತಿದೆ. ನಮಗೆ ನ್ಯೂ ದಿಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಿಂದ ನಮ್ಮ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೆಚ್ಚೇನು ಕಷ್ಟ ವಾಗಲಿಲ್ಲ.’ಏನಾದರು ಸ್ವಲ್ಪ ಕೊಡಬೇಕಾಗುತ್ತದೆ ‘ ಎಂಬ ಪ್ರಶ್ನೆ ಬರಲಿಲ್ಲ.ಅನಂತರವೂ ದಿಲ್ಲಿ ಯಲ್ಲಿ ಜನಿಸಿ ಬೇರೆ ಊರು ಗಳಲ್ಲಿ ವಾಸಿಸುತ್ತಿರುವ ನಮ್ಮ ಬಂಧುಗಳ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲೂ ಕಷ್ಟ ವಾಗಲಿಲ್ಲ. ಇದು ೧೦-೧೫ ವರ್ಷಗಳ ಹಿಂದಿನ ಮಾತು. ಸಂಬಂಧ ಪಟ್ಟ ಆಫೀಸಿಗೆ ಮಾತ್ರ ೨-೩ ಸಲ ಹೋಗಿ ಬರಬೇಕಾಯಿತು, ಅಷ್ಟೆ.ಆದರೆ ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ.ಅಂತೂ ನಮ್ಮ ಪರಿಚಿತರು ಹೇಳುವಂತೆ ದಿಲ್ಲಿಯಲ್ಲಿ ಕೇಂದ್ರ ಸರಕಾರದಲ್ಲಿ ಕೆಲಸ ಹೆಚ್ಚು ಸಲೀಸಾಗಿ ಸಾಗುತ್ತದಂತೆ. ಆದರೆ ಜನ-ಸಾಮಾನ್ಯನ ಅನಿಸಿಕೆ ಮಾತ್ರ ದಿಲ್ಲಿಯಲ್ಲೂ ಹಳ್ಳಿಯಲ್ಲೂ ಒಂದೇ!-‘ ಪೇಪರ್ ವೈಟ್ ‘ಇಲ್ಲದೆ ಅರ್ಜಿ ಮುಂದೆ ಹೋಗುವುದಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾದರೆ ಸುಂದರ ರಾಯರಂತಹ ಜನ-ಜಾಗೃತಿ ಬೆಳೆಸುವವರು ಬೇಕು.ಬಳಕೆದಾರರಿಗೆ ಅವರ ಹಕ್ಕು-ಬಾಧ್ಯತೆ ಗಳ ಮನವರಿಕೆ ಮಾಡಿ ಅವರಿಗೆ ಸುಲಭವಾಗಿ ನ್ಯಾಯ ದೊರಕುವಂತೆ ಹೋರಾಡುವವರು ಬೇಕು. ಲಂಚ,ಮರೆ,ಮೋಸ,ಭ್ರಷ್ಟಾಚಾರ ಇಲ್ಲದೆ ಧಕ್ಷತೆ ಯಿಂದ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಂತೆ ವತ್ತಾಯ ಹೇರಬೇಕು. ಎಲ್ಲಕ್ಕಿಂತ ಮುಖ್ಯವಾದ ವಿಷಯ ವೆಂದರೆ ಸಂಬಂಧಿತ ಮೇಲಧಿಕಾರಿಗಳು ಮತ್ತು ನಿರೀಕ್ಷಕ ಅಧಿಕಾರಿಗಳು ಹೊರಗಿನ ಯಾವ ಒತ್ತಡ ವನ್ನೂ ನಿರೀಕ್ಷಿಸದೆ ತಮ್ಮ-ತಮ್ಮ ಅಧಿಕಾರಿ ವಲಯದಲ್ಲಿ ಯಾವ ಕುಂದು -ಕೊರತೆ ಯಿಲ್ಲದೆ ಕೆಲಸ ನಡೆಸುವ ಜವಾಬ್ದಾರಿ ಹೊರಬೇಕು.