ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, ಈ ವಿಧೇಯಕದ ವಿವರಗಳಿರಲಿ, ಇದು ಪಾಸಾಗಿರುವ ವಿಷಯ ಗೊತ್ತಿರುವುದು ಸಹ ಅನುಮಾನ. ಇನ್ನು ಜನಸಾಮಾನ್ಯರ ಪಾಡೇನು?
ಸುಮಾರು ಹತ್ತು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಗಣಿ ಮತ್ತು ಭೂವಿಜ್ನಾನ ಇಲಾಖೆಯ ಜಾಲತಾಣಕ್ಕೆ ಹೋದಾಗ “ಅಂತರ್ಜಲ ವಿಧೇಯಕ ೨೦೦೯ರ ಕುರಿತಂತೆ ಸಾರ್ವಜನಿಕರು ಮೇ ೨೦೧೦ರ ಅಂತ್ಯದ ವರೆಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ” ಎಂಬ ವಾಕ್ಯ ಓಡುತ್ತಿರುವುದು ಕಂಡೆ. ಕುತೂಹಲಕ್ಕೆ ವಿಧೇಯಕವನ್ನು ಓದಿದೆ.
ಬ್ರಿಟಿಷರನ್ನು ಬಿಡಲೊಲ್ಲರು ಅವರ ಮಾನಸಪುತ್ರರು
ಹೊಸ ವಿಧೇಯಕವೆಂದರೆ ಹೊಸ ಕಾನೂನೇ. ನಮ್ಮ ಹೆಚ್ಚಿನ ಕಾನೂನುಗಳು ಬ್ರಿಟಿಷರ ಕಾಲದವು. ಸಹಜವಾಗಿ ಅವು ಆಳುವ ಅಧಿಕಾರಿಗಳ ಪರವಾಗಿ ಇವೆ. ಇಂದು ಪ್ರಜಾಪ್ರಭುತ್ವ ಬಂದಿದೆ. ಆಳರಸರು ಹೋಗಿದ್ದಾರೆ, ಇಂದಿನ ಸರಕಾರಿ ಅಧಿಕಾರಿಗಳು “ಸಾರ್ವಜನಿಕ ಸೇವಕರು” ಎಂದು ಕರೆಸಿಕೊಳ್ಳುತ್ತಿದ್ದಾರೆ. ಎಂದ ಮೇಲೆ ಇಂದು ನಾವು ರೂಪಿಸುವ ಕಾನೂನುಗಳು ಅಧಿಕಾರಿಗಳ ಅನುಕೂಲಕ್ಕಿಂತ ಹೆಚ್ಚಾಗಿ ಪ್ರಜೆಗಳ ಅನುಕೂಲಕ್ಕಾಗಿ ಇರಬೇಕು. ದುರದೃಷ್ಟವಶಾತ್, ಸಾರ್ವಜನಿಕ ಸೇವಕರೆನ್ನಿಸಿಕೊಳ್ಳುವ ಸರಕಾರಿ ಅಧಿಕಾರಿಗಳೇ ನಮ್ಮ ಹೊಸ ಕಾನೂನುಗಳನ್ನು ರೂಪಿಸುತ್ತಾರೆ. ಸಹಜವಾಗಿ ಅದು ಅವರ ಪರವಾಗಿ ಇರುತ್ತದೆ. (ಮಾಹಿತಿ ಹಕ್ಕು ೨೦೦೫ ಇದಕ್ಕೊಂದು ಅಪವಾದ. ಆದರೆ ಅದನ್ನು ಸಾಧ್ಯವಿದ್ದಷ್ಟೂ ತಮಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳಲು ಬಾಬೂಜಿಗಳು ಪ್ರಯತ್ನಿಸುತ್ತಲೇ ಇದ್ದಾರೆ). ನಂತರ ಅದನ್ನು ಚರ್ಚೆಗಾಗಿ ವಿಧಾನಮಂಡಲದಲ್ಲಿ ಇಟ್ಟರೂ, ಯಾವ್ಯಾವುದೋ ಹಗರಣಗಳಲ್ಲಿ ಮುಳುಗಿಹೋದ ನಮ್ಮ ಶಾಸಕರಿಗೆ, ಈ ಕಾನೂನುಗಳನ್ನು ವಿವರವಾಗಿ ಓದಿ, ಚರ್ಚೆ ಮಾಡಿ, ಅಗತ್ಯವಿದ್ದಲ್ಲಿ ಜನಪರವಾದ ಬದಲಾವಣೆಗಳನ್ನು ಸೂಚಿಸುವ ವ್ಯವಧಾನವಾದರೂ ಎಲ್ಲಿಂದ? ಅಸಲಿಗೆ ನಮ್ಮ ಶಾಸಕರಿಗಾದರೂ ನಿಜವಾದ ಜನಪರ ನಿಲುವುಗಳು ಇವೆಯೇ? ಇಂಥ ಕೆಲಸಕ್ಕಾಗಿಯೇ ಸಂಬಳ ಪಡೆಯುವ ಈ ಶಾಸಕರುಗಳು ತಮ್ಮ ಕರ್ತವ್ಯ ನಿರ್ವಹಿಸದೆ ಜನವಂಚನೆ ಮಾಡುತ್ತ ಕಾಲ ಕಳೆಯುತ್ತಿರುವುದು ಅಧಿಕಾರಿ ವರ್ಗಕ್ಕೆ ಬಯಸದೆ ಬಂದ ಭಾಗ್ಯವಾಗಿದೆ. ಇನ್ನು ಜನಸಾಮಾನ್ಯರನ್ನು ಬಿಡಿ, ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರೂ ಇಂಥದ್ದರಲ್ಲೆಲ್ಲ ಆಸಕ್ತಿ ವಹಿಸುವುದನ್ನು ನಮ್ಮ ಸಂದರ್ಭದಲ್ಲಿ ಊಹಿಸುವುದೂ ಸಾಧ್ಯವಿಲ್ಲ.
ಕೊಟ್ಟ ಕುದುರೆಯನೇರಲರಿಯದೆ…
ಏನೇ ಇದ್ದರೂ, ಸರಕಾರ ವಿಧೇಯಕಗಳನ್ನು ಜಾರಿಗೆ ಕೊಡುವಾಗ, ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಶಾಸ್ತ್ರವನ್ನಂತೂ ಮಾದಿಯೇ ಮಾಡುತ್ತದೆ. ಎಷ್ಟು ಕಡಿಮೆ ಜನ ತಮ್ಮ ಅಭಿಪ್ರಾಯ ಕೊಡುತ್ತಾರೋ, ಅಧಿಕಾರಿಗಳಿಗೆ ಅಷ್ಟು ತಲೆನೋವು ಕಡಿಮೆ. ಹಾಗಾಗಿ ಅವರು ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಕುತೂಹಲಕ್ಕಾಗಿ “ಈ ವಿಧೇಯಕದ ಬಗ್ಗೆ ಎಷ್ಟು ಸಾರ್ವಜನಿಕರು ಮತ್ತು ಎಷ್ಟು ಸಂಘಸಂಸ್ಠೆಗಳು ತಮ್ಮ ಅಭಿಪ್ರಾಯವನ್ನು ನೀಡಿವೆ?” ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದೆ. “೧೧ ಸಾರ್ವಜನಿಕರು ಮತ್ತು ಮೂರು ಸಂಘ ಸಂಸ್ಥೆಗಳು ಅಭಿಪ್ರಾಯ ನೀಡಿವೆ” ಎಂಬ ಉತ್ತರ ಬಂತು. ಸಾಕೆ? ಐದು ಕೋಟಿಗೆ ಹನ್ನೊಂದು!
ಲೋಕಪಾಲ ಮಸೂದೆ ಸಾಲದು, ಜನಲೋಕಪಾಲ ಮಸೂದೆ ಬೇಕು ಎಂದು ಅಣ್ಣಾ ಹಜಾರೆಯವರು ಉಪವಾಸ ಕೂತಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭ್ರಷ್ಟಾಚಾರದ ಕುರಿತು ಜನ ರೋಸಿಹೋಗಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದು ಟಿವಿಗಳೂ, ಪತ್ರಿಕೆಗಳೂ ಎಷ್ಟು ಸಾಧ್ಯವೋ ಅಷ್ಟು ತಾರಸ್ಥಾಯಿಯಲ್ಲಿ ಬೊಬ್ಬೆ ಹೊಡೆದವು. ಆದರೆ, ಯಾವುದೇ ವಿಧೇಯಕ ತರುವ ಮೊದಲು, ಅದರಲ್ಲಿ ಬದಲಾವಣೆಗಳನ್ನು ಮಾಡಲು ಸರಕಾರ ಈಗಾಗಲೇ ಕೊಡುತ್ತಿರುವ ಅವಕಾಶವನ್ನು ನಾವು ಉಪಯೋಗಿಸುತ್ತಿದ್ದೇವೆಯೇ? ಜನಸಾಮಾನ್ಯರನ್ನು ಬಿಡಿ, ಹಜಾರೆಯವರನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಿಂಚಿದ ನಮ್ಮ ವಿವಿಧರಂಗದ ನಾಯಕಮಣಿಗಳು ಪ್ರಜಾಪ್ರಭುತ್ವವನ್ನು ಅನುಸಂಧಾನ ಮಾಡಿದ ಉದಾಹರಣೆಗಳು ಎಷ್ಟಿವೆ? ಎಷ್ಟು ಮಂದಿ ಬುದ್ಧಿಜೀವಿಗಳು ಸರಕಾರದ ಆಗುಹೋಗುಗಳ ಕುರಿತು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸುತ್ತಾರೆ? ಎಷ್ಟು ಜನ ಲೇಖಕರು ಸಾರ್ವಜನಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತಾರೆ? ಎಷ್ಟು ಮಂದಿ ವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಕುರಿತು ತಿಳುವಳಿಕೆ ಇದೆ? ಎಷ್ಟು ಜನ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸುತ್ತಿದ್ದಾರೆ? ಎಷ್ಟು ಊರುಗಳಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಜನ ಸೇರಿ ಚರ್ಚಿಸುವ ಸಂಪ್ರದಾಯವಿದೆ?
ಶಿವರಾಮ ಕಾರಂತರು ಒಂದು ಕಡೆ ಹೇಳಿರುವುದು ನೆನಪಾಗುತ್ತದೆ: “ನಮ್ಮನ್ನು ದೇವರೇ ಹುಟ್ಟಿಸಿದ್ದಾನೆ ಎನ್ನುವುದಾದರೆ, ಸಾಕಷ್ಟು ಬುದ್ದಿಯನ್ನು ಕೊಟ್ಟೇ ಹುಟ್ಟಿಸಿದ್ದಾನೆ ಎಂದು ತಿಳಿಯಬೇಕು. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದೆ ಇನ್ನೂ ಕೊಡು ಮತ್ತೂ ಕೊಡು ಎನ್ನುವುದರಲ್ಲಿ ಏನರ್ಥವಿದೆ?”
ಸುಲಭದಲ್ಲಿ ಸಿಕ್ಕಿದ ಮಾಹಿತಿ
ಇರಲಿ. ಕಾನೂನಿನ ಬಡಿಗೆ ತೋರಿಸಿ ಭ್ರಷ್ಟಾಚಾರವನ್ನು ಊರ ಹೊರಗೆ ಓಡಿಸಿಬಿಡಬಹುದೆಂದು ನಾನು ನಂಬುವುದಿಲ್ಲ. ಆದರೂ ಜನಲೋಕಪಾಲ ಮಸೂದೆ ಬಂದರೆ ನನಗೆ ಖಂಡಿತವಾಗಿಯೂ ಸಂತೋಷವಿದೆ. ಇತ್ತ ವಿಧೇಯಕದ ಕರಡನ್ನು ಓದಿದ ಮೇಲೆ, ಉಳಿದಿದ್ದ ಹತ್ತೋ ಹದಿನೈದೋ ದಿವಸದ ಅವಧಿಯಲ್ಲಿ ನನಗೆ ಕಂಡ ಹಲವು ಬದಲಾವಣೆಗಳನ್ನು ಸೂಚಿಸಿ, ಒಂದು ಪತ್ರವನ್ನು ಜೊತೆಗಿಟ್ಟು ಕಳಿಸಿಕೊಟ್ಟೆ. ತಲುಪಿದ್ದಕ್ಕೆ ಉತ್ತರವೇನೂ ಬರಲಿಲ್ಲ. ನಾನೂ ಅಲ್ಲಿಗೇ ಮರೆತಿದ್ದೆ.
ಮೊನ್ನೆ ಟಿವಿಯಲ್ಲಿ ಸಣ್ಣದೊಂದು ಸುದ್ದಿ ತೇಲಿ ಬಂತು: ಅಂತರ್ಜಲ ವಿಧೇಯಕ ಮಂಡನೆಯಾಗಿದೆ. ಇಲಾಖೆಗೆ ಬರೆದಾಗ ಮಾರ್ಚ್ ತಿಂಗಳಿನಲ್ಲಿಯೇ ಮಂಡನೆಯಾಗಿದೆ ಎಂದು ಖಚಿತವಾಯಿತು. ಅದರ ಪ್ರತಿ ಬೇಕು ಎಂದು ಕೇಳಿದ್ದಕ್ಕೆ ವಿಧಾನಸೌಧಕ್ಕೆ ಬರೆಯುವಂತೆ ಸಲಹೆ ಸಿಕ್ಕಿತು! ಶಾಸಕರ ಮೂಲಕ ಪಡೆಯುವುದು ಸುಲಭವಾಗಬಹುದು ಎನಿಸಿದ್ದರಿಂದ ಅವರ ಕಚೇರಿಗೆ ಹೋದೆ. ಅವರ ಪಿಎ ಚಂದ್ರಶೇಖರ ಪಾತೂರು ಇದ್ದರು. “ಗೆಜೆಟ್ಟಿನಲ್ಲಿ ಬಂದಿರಬಹುದು. ಗೆಜೆಟ್ ಶಾಸಕರ ಮನೆಗೆ ಬಂದಿರುತ್ತದೆ. ನಾನು ನೋಡಿ ಹೇಳುತ್ತೇನೆ ನಿಮಗೆ” ಎಂದರು. ನಾನು ಮನೆಗೆ ಬಂದವನು ಇಂಟರ್ ನೆಟ್ ನಲ್ಲಿ ಹುಡುಕಿದೆ. ಸುಲಭದಲ್ಲಿ ಸಿಕ್ಕಿತು.
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ನಿಜದ ನಾಗರ ಕಂಡರೆ ಕೊಲ್ಲೆಂಬರಯ್ಯಾ…!
ಪುಣ್ಯಾತ್ಮ ಬಸವಣ್ಣ ಎಂಥ ಮಾತು ಆಡಿಬಿಟ್ಟಿದ್ದಾರೆ ನೋಡಿ! ಸ್ವಲ್ಪ ವಿಷಯಾಂತರವೆನಿಸಿದರೂ ಒಂದು ಮಾತು ಇಲ್ಲಿ ಹೇಳಲೇಬೇಕು. ಈಗ ನಮ್ಮ ಶಾಸಕ ರಮಾನಾಥ ರೈಗಳು ತುಂಬಾ ಬಿಜಿ. ನಾಡಿದ್ದು ೨೩ಕ್ಕೆ ಅವರಲ್ಲಿ ನಾಗಮಂಡಲೋತ್ಸವ. ಭಾರೀ ಗೌಜಿ. ಊರ ತುಂಬ ಅದರದ್ದೇ ದೊಡ್ಡ ದೊಡ್ಡ ಬ್ಯಾನರುಗಳು. ಕರ್ನಾಟಕದ ವಿಷಯ ನಾನು ಹೇಳಲಾರೆ, ಆದರೆ ದ.ಕ. ಜಿಲ್ಲೆಯಲ್ಲಂತೂ ಜೆಸಿಬಿಗಳು, ಹಗಲು ರಾತ್ರೆಯ ವ್ಯತ್ಯಾಸವಿಲ್ಲದೆ ಸರ್ಪಯಜ್ನಕ್ಕೆ ತೊಡಗಿವೆ. ಮೊಟ್ಟೆ, ಮರಿ, ಬೆಳೆದ ಸರ್ಪ, ಮುದಿಸರ್ಪ, ನಾಗರ, ಕೇರೆ, ಕಂದೊಡಿ, ಪೆರ್ಮರಿ ಯಾವ ವ್ಯತ್ಯಾಸವನ್ನೂ ನೋಡದೆ ಜೆಸಿಬಿಗಳು ಆಧುನಿಕ ಖಾಂಡವವನ ದಹನವನ್ನೇ ನಡೆಸಿವೆ. ಈ ಅಸಹಾಯಕ ಪ್ರಾಣಿಗಳನ್ನು ರಕ್ಷಿಸಲು ಇರುವ ವನ್ಯಜೀವಿ ಕಾನೂನು, ಜೆಸಿಬಿಗಳ ಚಕ್ರದಡಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ. ಆ ಕಾನೂನನ್ನು ಜಾರಿಗೆ ಕೊಡಬೇಕಾದ ಅರಣ್ಯ ಇಲಾಖೆಯವರು ನಿದ್ರೆಯನ್ನು ನಟಿಸುತ್ತಿದ್ದಾರೆ. ನಮ್ಮ ಶಾಸಕರು ಈ ಕಾನೂನಿಗೆ ಮರುಜೀವ ಕೊಟ್ಟು ಸರ್ಪಜಾತಿ ಉಳಿಯುವಂತೆ ಮಾಡಿದರೆ ಅವರು ನಾಗಮಂಡಲ ಮಾಡಿಸಿದ್ದರ ಫಲ ಪೂರ್ತಿಯಾಗಿ ಪ್ರಾಪ್ತಿ ಆದೀತು. ಅಲ್ಲದಿದ್ದರೆ, ಕಲ್ಲನಾಗರ ಕಂಡರೆ…..
ಸ್ವೀಕೃತವಾದ ಒಂದೇ ಒಂದು ಸಲಹೆ
ವಿಧೇಯಕದಲ್ಲಿ ಬಳಸಿದ ಕನ್ನಡ ಭಾಷೆಯ ಬಗೆಗೆ ನನಗೆ ಏನೂ ಸಮಾಧಾನವಿರಲಿಲ್ಲ. ಅದು ತುಂಬ ಕೆಟ್ಟದಾಗಿತ್ತು. ತಪ್ಪುಗಳೂ ಅಸಂಖ್ಯವಾಗಿದ್ದವು.. ನನ್ನ ಪತ್ರದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದೆ. ಬೇರೆ ಅನೇಕರೂ ಇದನ್ನು ಹೇಳಿರಬಹುದು. ಒಟ್ಟಿನಲ್ಲಿ ಮೊದಲಿನ ಕನ್ನಡದ ಕರಡು ಈಗ ನಾಪತ್ತೆಯಾಗಿತ್ತು. ಅದರ ಸ್ಥಳದಲ್ಲಿ ಬೇರೆಯೇ ಆದ ಕರಡು ತಯಾರಿಸಿ ಮಂಡಿಸಲಾಗಿತ್ತು. ನನ್ನ ಅಭಿಪ್ರಾಯಕ್ಕೂ ಕೊಂಚ ಬೆಲೆ ಬಂತೆಂದು ಬೆನ್ನು ತಟ್ಟಿಕೊಂಡೆ. ಏನಿದ್ದರೂ ಕರಡು ಮೊದಲು ತಯಾರಾಗುವುದು ಇಂಗ್ಲಿಷಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು. ಮೂಲವನ್ನೇ ಕನ್ನಡದಲ್ಲಿ ತಯಾರಿಸಿ, ನಂತರ ಅದನ್ನು ಇಂಗ್ಲಿಷಿಗೆ ಅನುವಾದ ಮಾದುವಷ್ಟು ಸ್ವಂತಿಕೆ, ಆತ್ಮವಿಶ್ವಾಸಗಳು ನಮಗೆ ಇನ್ನೂ ಸಾಧಿಸಿಲ್ಲ. ಅದರೆ, ಈ ಹೊಸ ಅನುವಾದ ಮೊದಲಿನದ್ದಕ್ಕಿಂತ ಖಂಡಿತ ಚೆನ್ನಾಗಿದೆ.ವಾಕ್ಯಗಳು ಸುಸಂಗತವಾಗಿವೆ, ಅರ್ಥ ಹೆಚ್ಚು ನಿರ್ದಿಷ್ಟವಾಗಿದೆ.
ಗೋರ್ಕಲ್ಲ ಮೇಲೆ ಸುರಿದ ಮಳೆ?
ಈ ಸಲಹೆ ಬಿಟ್ಟರೆ ನಾನು ಕೊಟ್ಟ ಒಂದೇ ಒಂದು ಸಲಹೆಯೂ ಸ್ವೀಕಾರಗೊಂಡಿಲ್ಲ. ಸಲಹೆ ಬಿಡಿ, ಇಂಗ್ಲಿಷಿನ public servant ಎಂಬ ಪದವನ್ನು ಮೊದಲಿನ ಕರಡಿನಲ್ಲಿ “ಸರಕಾರಿ ನೌಕರರು” ಎಂದು ಅನುವಾದಿಸಲಾಗಿತ್ತು. ನಾನು ಅದನ್ನು “ಸಾರ್ವಜನಿಕ ಸೇವಕರು” ಎಂದು ಬದಲಿಸಲು ಸೂಚಿಸಿದೆ. ಹೊಸ ಕರಡಿನಲ್ಲಿ ಅದನ್ನು “ಸಾರ್ವಜನಿಕ ನೌಕರರು” ಎಂದು ಅನುವಾದಿಸಲಾಗಿದೆ! ಇಂಥ ಅನುವಾದದ ಹಿಂದೆ ತಮ್ಮನ್ನು ತಾವು ಸೇವಕರು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಮನೋಭಾವ ಕೆಲಸ ಮಾಡುತ್ತಿದೆ ಅನ್ನಿಸುವುದಿಲ್ಲವೆ?
“ಲೋಕಪಾಲ್ ಬೇಡ, ಜನಲೋಕಪಾಲ್ ಬೇಕು” ಎನ್ನುವಾಗ ಅದರ ಹಿಂದಿರುವುದು ವಿಧೇಯಕ ಜನರ ಕೈಗೆ ಅಧಿಕಾರವನ್ನು ಕೊಡುವಂತಿರಬೇಕು ಎನ್ನುವ ಕಾಳಜಿ ತಾನೆ? ಸುಮ್ಮನೆ ಮಾದರಿಗಾಗಿ ವಿಧೇಯಕದ ಒಂದು ಸಣ್ಣ ಭಾಗ ಏನು ಹೇಳುತ್ತದೆ ಎಂಬುದನ್ನೂ, ನಾನು ಸೂಚಿಸಿದ ಬದಲಾವಣೆ ಏನು ಎಂಬುದನ್ನೂ ನೋಡಿ:
ವಿಧೇಯಕದಲ್ಲಿ ಇರುವುದು:
(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಯಾವುದೇ ಯಂತ್ರೋಪಕರಣವನ್ನು ಅಥವಾ ಸಾಧನವನ್ನು ವಶಪಡಿಸಿಕೊಂಡರೆ, ಅದು ಆದಷ್ಟು ಬೇಗನೆ ಈ ಅಪರಾಧದ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿಯುಳ್ಳ ಮ್ಯಾಜಿಸ್ಟ್ರೇಟರಿಗೆ ಹಾಗೆ ವಶಪಡಿಸಿಕೊಂಡದ್ದಕ್ಕೆ ಮಾಹಿತಿ ನೀಡತಕ್ಕದ್ದು ಮತ್ತು ಅದರ ಅಭಿರಕ್ಷೆಗಾಗಿ ಅವರ ಅದೇಶವನ್ನು ಪಡೆಯತಕ್ಕದ್ದು
ನಾನು ಸೂಚಿಸಿದ್ದು:
(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಮೇರೆಗೆ ಯಂತ್ರೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅಪರಾಧದ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡತಕ್ಕದ್ದು ಮತ್ತು ಸ್ವಾಧೀನ ಪ್ರಕ್ರಿಯೆಗೆ ಅವರ ಆಜ್ನೆಯನ್ನು ಪಡೆಯತಕ್ಕದ್ದು. ಸ್ವಾಧೀನಪಡಿಸಿಕೊಂಡ ಯಂತ್ರಗಳ ವಿವರವಾದ ಪಟ್ಟಿಯನ್ನು ತಯಾರಿಸಿ ಅದರಲ್ಲಿ ಸ್ಥಳದ ಮಾಲಕ ಅಥವಾ ಹಾಜರಿರುವ ಇತರ ವ್ಯಕ್ತಿ ಹಾಗೂ ನೆರೆಹೊರೆಯ ಕನಿಷ್ಟ ಮೂವರು ಗೃಹಸ್ಥರ ಸಹಿ ಪಡೆದು, ಅದರ ಒಂದು ಪ್ರತಿಯನ್ನು ಸ್ಥಳದ ಮಾಲಕ ಅಥವಾ ಹಾಜರಿರುವ ವ್ಯಕ್ತಿಗೆ ನೀಡತಕ್ಕದ್ದು.
ಈಗ ವಿಧೇಯಕದಲ್ಲಿ ಇರುವುದನ್ನು ಗಮನಿಸಿ: “ಆದಷ್ಟು ಬೇಗನೆ” ಎಂದರೆ ಏನು? ವ್ಯಾವಹಾರಿಕವಾಗಿ, ಅದು, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಮ್ಯಾಜಿಸ್ಟ್ರೇಟರ ಹತ್ತಿರ ಹೋದರೆ ಸಾಕು ಎಂದು ಹೇಳುತ್ತಿದೆ ತಾನೆ? “ಸೇವಕ”ರಾದ ಅವರು ಮಾಡಬೇಕಾದ ಕೆಲಸಕ್ಕೆ ಒಂದು ಅವಧಿಯನ್ನು ಯಾಕೆ ನಿರ್ದಿಷ್ಟ ಪಡಿಸಬಾರದು?
ತಾವು ಯಾವ ಯಾವ ಯಂತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂಬುದರ ಪಟ್ಟಿ ತಯಾರಿಸಿ ಅದರ ಪ್ರತಿಯನ್ನು ಸ್ಥಳದ ಮಾಲಕನಿಗೆ ಕೊಡಲು ಅಧಿಕಾರಿಗಳಿಗೆ ಅಡ್ಡಿ ಏನು? ಅಷ್ಟು ಕೆಲಸ ಮಾಡುವುದು, ಎಂದರೆ ಯಂತ್ರೋಪಕರಣಗಳು ಯಾವುವು ಎಂದು ಪರಿಶೀಲಿಸಿ ಅವುಗಳನ್ನು ಬರೆದು ಪಟ್ಟಿ ಮಾಡುವ ಕೆಲಸವನ್ನು ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಅಲ್ಲವೆ? ಅಂಥದೊಂದು ಪಟ್ಟಿ ಇಲ್ಲದಿದ್ದರೆ, ಅಧಿಕಾರಿಗಳು ವಶಪಡಿಸಿಕೊಂಡ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಯಾಕೆ ಅವಕಾಶ ಇರಬೇಕು? ಮುಂದೊಂದು ದಿನ ಯಂತ್ರೋಪಕರಣಗಳನ್ನು ಹಿಂದಿರುಗಿಸತಕ್ಕದ್ದು ಎಂದು ನ್ಯಾಯಾಲಯದಲ್ಲಿ ಆಜ್ನೆಯಾದರೆ, ಅಧಿಕಾರಿಗಳು ಯಾವ ಆಧಾರದಲ್ಲಿ ಯಂತ್ರೋಪಕರಣಗಳನ್ನು ಹಿಂತಿರುಗಿಸುತ್ತಾರೆ? ಐದೋ ಹತ್ತೋ ವರ್ಷದ ಹಿಂದೆ ಏನೇನು ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಿಂದಿರುಗಿಸುತ್ತಾರೆಯೆ?
“ಹಾಗೇನಿಲ್ಲ. ಕ್ರಮಪ್ರಕಾರ ಒಂದು ಪಟ್ಟಿ ಮಾಡಲೇ ಬೇಕು. ಮಾಡಿಯೇ ಮಾಡುತ್ತೇವೆ” ಎಂಬುದು ಇದಕ್ಕೆ ಅಧಿಕಾರಿಗಳು ಕೊಡುವ ಉತ್ತರ ಎಂದು ಊಹಿಸುತ್ತೇನೆ. ಹಾಗಾದರೆ ಅದನ್ನು ವಿಧೇಯಕದಲ್ಲಿ ಸೇರಿಸಿಬಿಡಿ! ಅದಕ್ಕೇನು ಸಮಸ್ಯೆ?
ಇನ್ನೊಂದು ಉದಾಹರಣೆ:
ವಿಧೇಯಕದಲ್ಲಿ ಇರುವುದು:
(೪) (೨)ನೇ ಉಪ-ಪ್ರಕರಣದಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ನಂತರ ಪ್ರಾಧಿಕಾರವು ಅರ್ಜಿದಾರನಲ್ಲಿ ಅಂತರ್ಜಲವನ್ನು ತೆಗೆಯಲು ಬೇಕಾದ ಸಾಧನಗಳಿವೆ ಮತ್ತು ಬಾವಿಯನ್ನು ಕೊರೆಯುವ ಅಥವಾ ತೋಡುವ ಕಾರ್ಯಕ್ಕೆ ಬೇಕಾದ ಜ್ನಾನವಿದೆ ಎಂದು ತನಗೆ ಮನದಟ್ಟಾದರೆ, ನಿಯಮಿಸಲಾದಂಥ ಷರತ್ತಿಗೊಳಪಟ್ಟು, ಅಂಥ ಅವಧಿಗೆ ಅಂಥ ನಮೂನೆಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು
ನಾನು ಸೂಚಿಸಿದ ಬದಲಾವಣೆ:
ಮೇಲಿನ ಪ್ಯಾರಾಕ್ಕೆ ಈ ಮುಂದಿನಂತೆ ಸೇರ್ಪಡೆ:
ಅರ್ಜಿದಾರನು ಅರ್ಜಿ ಸಲ್ಲಿಸಿದ ಮೂವತ್ತು ದಿನಗಳ ಒಳಗೆ ಪ್ರಾಧಿಕಾರವು ಆತನಿಗೆ ದೃಡಪತ್ರಿಕೆಯನ್ನು ನೀಡತಕ್ಕದ್ದು ಅಥವಾ ಸಕಾರಣವಾಗಿ ನಿರಾಕರಿಸತಕ್ಕದ್ದು. ಈ ಅವಧಿಯೊಳಗೆ ದೃಢಪತ್ರಿಕೆಯನ್ನು ನೀಡದಿದ್ದರೆ ಅಥವಾ ಸಕಾರಣವಾಗಿ ನಿರಾಕರಿಸದಿದ್ದರೆ, ನಂತರ ಹದಿನೈದು ದಿನಗಳ ಒಳಗೆ ಪ್ರಾಧಿಕಾರವು ದೃಡಪತ್ರಿಕೆಯನ್ನು ಅರ್ಜಿದಾರನಿಗೆ, ಮೂವತ್ತು ದಿನಗಳ ಒಳಗೆ ನೀಡದೆ ಇರಲು ಕಾರಣಗಳೊಂದಿಗೆ, ಉಚಿತವಾಗಿ ನೀಡತಕ್ಕದ್ದು. ಪ್ರಾಧಿಕಾರಕ್ಕೆ ಬರಬೇಕಾದ ಶುಲ್ಕವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ಪ್ರಾಧಿಕಾರವು ವಸೂಲು ಮಾಡತಕ್ಕದ್ದು.
ಇಂತಹ ಹಲವು ಬದಲಾವಣೆಗಳನ್ನು ನಾನು ಸೂಚಿಸಿದ್ದೆ. ನನ್ನ ಒಂದೇ ಒಂದು ಸಲಹೆ ಸಹ ಸ್ವೀಕೃತವಾಗಿಲ್ಲ.
ಇನ್ನು, ಈ ವಿಧೇಯಕದ ಕರಡನ್ನು ತಯಾರಿಸಿದವರು ಯಾರು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಲು ಯಾವ ಕ್ರಮವನ್ನು ಅನುಸರಿಸಲಾಗುವುದು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿಸಬೇಕೆಂದಿದೆ. ನೋಡೋಣ.