(ಈ ಭಾಗದಲ್ಲಿ ಬರುವ ಅನೇಕ ಪದ್ಯಗಳನ್ನು ಅರ್ಥ ಮಾಡುವುದು ಕಷ್ಟ. ಕೆಲವು ಕಡೆ ವಿರುದ್ಧಾರ್ಥ ಬರುವಂಥ ಮಾತುಗಳೂ ಇವೆ. ಎಲ್. ಬಸವರಾಜು ಅವರು ೪ನೇ ಆಶ್ವಾಸದ ೬೩ನೇ ಪದ್ಯದ ನಂತರದ ಭಾಗವನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಇಲ್ಲಿಯೂ ಕೆಲವು ಪದ್ಯಗಳಿಗೂ, ಗದ್ಯಭಾಗಗಳಿಗೂ ಅರ್ಥ ಹೇಳಿಲ್ಲ ಎಂಬುದನ್ನು ವಾಚಕರು/ಕೇಳುಗರು ಗಮನಿಸಬೇಕಾಗಿ ಕೋರಿಕೆ.)
ವ|| ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಿಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ ಸುಯ್ದೊಡೆ-
ಎಂದು ತನ್ನ ಮನಮನ್ ಅಱಿದು, ಮುಟ್ಟಿ, ನುಡಿದ ಕೆಳದಿಯ ನುಡಿಗೆ ಪೆಱತು ಏನುಮನ್ ಎನಲ್ ಅಱಿಯದೆ, ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ, ನೀರೊಳ್ ಮುೞುಗಿದರಂತೆ ಉಮ್ಮನೆ ಬೆಮರುತ್ತುಂ, ಉಮ್ಮಳಿಕೆ ವಂದು ಬೆಚ್ಚನೆ ಸುಯ್ದೊಡೆ
ಎಂದು ತನ್ನ ಮನಸ್ಸನ್ನು ಅರ್ಥ ಮಾಡಿಕೊಂಡು, ಮುಟ್ಟಿ ನುಡಿದ ಗೆಳತಿಯ ಮಾತಿಗೆ ಬೇರೆ ಏನನ್ನೂ ಹೇಳಲು ತಿಳಿಯದೆ ನಾಚಿ, ತಲೆ ಬಗ್ಗಿಸಿ, ನೆಲವನ್ನು ಬರೆಯುತ್ತಾ, ನೀರಿನಲ್ಲಿ ಮುಳುಗಿದವರಂತೆ ಬೆವರುತ್ತಾ (ಎಂದರೆ ನೀರಿನಲ್ಲಿ ಮುಳುಗಿ ಎದ್ದವರ ಮೈಯಿಂದ ಹೇಗೆ ನೀರು ಇಳಿಯುತ್ತದೆಯೋ ಹಾಗೆ ಬೆವರಿಳಿಸುತ್ತಾ) ವ್ಯಥೆಪಟ್ಟು ಬಿಸಿಯುಸಿರು ಬಿಟ್ಟಾಗ
ಕಂ|| ಉಸಿರದಿರೆ ಮನದೊಳೆರ್ದೆಯಂ
ಪಸರಿಸುಗುಂ ಮಱುಕಮದಱಿನೆನಗಿಂತುಟೆ ಎಂ|
ದುಸಿರುಸಿರ್ದೊಡೆ ಬಗೆ ತೀರ್ಗುಂ
ಬಿಸಿದುಂ ಬೆಟ್ಟಿತ್ತುಮುಸಿರದೇಂ ತೀರ್ದಪುದೇ|| ೬೫ ||
(ಉಸಿರದಿರೆ ಮನದೊಳ್ ಎರ್ದೆಯಂ ಪಸರಿಸುಗುಂ ಮಱುಕಂ; ಅದಱಿನ್ ಎನಗೆ ಇಂತುಟೆ ಎಂದು ಉಸಿರ್; ಉಸಿರ್ದೊಡೆ ಬಗೆ ತೀರ್ಗುಂ; ಬಿಸಿದುಂ ಬೆಟ್ಟಿತ್ತುಂ ಉಸಿರದೆ ಏಂ ತೀರ್ದಪುದೇ?)
ʼಏನೂ ಹೇಳದೆ ಎಲ್ಲವನ್ನೂ ಮನಸ್ಸಿನಲ್ಲಿಯೇ ಇಟ್ಟುಕೊಂಡರೆ ದುಃಖವು ಎದೆಯಲ್ಲಿ ತುಂಬಿಕೊಳ್ಳುತ್ತದೆ. ಆದ್ದರಿಂದ ʼನನಗೆ ಹೀಗಾಗಿದೆʼ ಎಂದು ಹೇಳಿಕೋ. ಹೇಳಿಕೊಂಡರೆ ಇಷ್ಟವು ನೆರವೇರುತ್ತದೆ. ಹೇಳಿಕೊಳ್ಳದಿದ್ದರೆ ನಿನ್ನ ಈ ಕಠಿಣವಾದ ಬಿಸಿಯುಸಿರು ಹೋಗುತ್ತದೆಯೇ?
ಪೇೞೆಂಬುದುಮಾಂ ನಿನಗೆಡೆ
ವೇೞದೆ ಪೇೞಾರ್ಗೆ ಪೇೞ್ವೆನಿಂದಿನ ಬಂದಾ|
ಕಾೞಾದ ವಾೞ್ತೆಗೊಂಡೊಡೆ
ಪಾೞಾದುದು ಮನಮುಮೆರ್ದೆಯುಮೇನಂ ಪೇೞ್ವೆಂ|| ೬೬ ||
(ಪೇೞ್ ಎಂಬುದುಂ, ಆಂ ನಿನಗೆ ಎಡೆವೇೞದೆ ಪೇೞ್ ಆರ್ಗೆ ಪೇೞ್ವೆನ್? ಇಂದಿನ ಬಂದ ಆ ಕಾೞಾದ ವಾೞ್ತೆಗೊಂಡೊಡೆ ಪಾೞಾದುದು ಮನಮುಂ ಎರ್ದೆಯುಂ, ಏನಂ ಪೇೞ್ವೆಂ?)
ಹೇಳುʼ ಎಂದಾಗ, ‘ನಾನು ನಿನಗಲ್ಲದೆ ಮತ್ತಾರಿಗೆ ವಿಷಯವನ್ನು ಹೇಳಲಿ? ಇಂದು ಬಂದ ಆ ಕೆಟ್ಟ ಸುದ್ದಿಯನ್ನು ಕೇಳಿದ ಮೇಲೆ ನನ್ನ ಮನಸ್ಸು, ಹೃದಯಗಳು ಹಾಳಾಗಿ ಹೋಗಿವೆ, ಅದನ್ನು ಏನೆಂದು ಹೇಳಲಿ?’
ಭೋಂಕನೆ ಮನಮಂ ಕದಡಿ ಕ
ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ|
ದಂ ಕೆಳದಿ ಪಾಣ್ಬರಂಕುಸ
ನಂಕುಸದಾ ಪೊಳಪುಮವನ ಕಣ್ಗಳ ಬೆಳ್ಪುಂ|| ೬೭ ||
(ಭೋಂಕನೆ ಮನಮಂ ಕದಡಿ ಕಲಂಕಿದಪುದು, ಬಿಡದೆ ಮನಮನ್ ಒನಲಿಸಿದಪುದು ಆದಂ ಕೆಳದಿ, ಪಾಣ್ಬರಂಕುಸನ ಅಂಕುಸದ ಆ ಪೊಳಪುಂ ಅವನ ಕಣ್ಗಳ ಬೆಳ್ಪುಂ)
‘(ಕೇಳಿದ) ಕೂಡಲೇ ಆ ಸುದ್ದಿಯು ಮನಸ್ಸನ್ನುಆವರಿಸಿ ಕಲಕುತ್ತದೆ. ಗೆಳತೀ, ಆ ಪಾಣ್ಬರಂಕುಸನ (ಅರ್ಜುನನ) ಅಂಕುಶದ ಹೊಳಪೂ, ಅವನ ಕಣ್ಣುಗಳ ಬೆಳಕೂ ನನ್ನನ್ನು ಬಿಡದೆ ಕೆರಳಿಸುತ್ತವೆ’
ಚಂ|| ಮನಸಿಜನಂಬರಲ್ದ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ
ತನುಬಲದಿಂದಮೆನ್ನನಲೆದಪ್ಪುವವೆನ್ನನೆ ಪೆಟ್ಟುವೆರ್ಚಿ ಚಂ|
ದ್ರನ ಬಲದಿಂದಮೆನ್ನನಲೆದಪ್ಪುವದರ್ಕೆನಗೀಗಳೊಂದಿ ಚಂ
ದ್ರನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ಗುಮೇ ||೬೮||
(ಮನಸಿಜನ ಅಂಬು, ಅರಲ್ದ ಪೊಸ ಮಲ್ಲಿಗೆ, ತೆಂಕಣ ಗಾಳಿಯೆಂಬಿವು ಇಂತು ಅನುಬಲದಿಂದಂ ಎನ್ನನ್ ಅಲೆದಪ್ಪುವು; ಎನ್ನನೆ ಪೆಟ್ಟುವೆರ್ಚಿ ಚಂದ್ರನ ಬಲದಿಂದಂ ಎನ್ನನ್ ಅಲೆದಪ್ಪುವು; ಅದರ್ಕೆ ಎನಗೆ ಈಗಳ್ ಒಂದಿ ಚಂದ್ರನ ಬಲಂ ಒಳ್ಳಿತಾಗಿ ಸಲೆ ಇಲ್ಲದೊಡೆ, ಆವುದುಂ ಒಳ್ಳಿಕೆಯ್ಗುಮೇ?)
ಮದನನ ಬಾಣ, ಅರಳಿದ ಹೊಸ ಮಲ್ಲಿಗೆ, ತೆಂಕಣ ಗಾಳಿ ಇವೆಲ್ಲವೂ ಒಂದರೊಡನೊಂದು ಸೇರಿಕೊಂಡು ನನ್ನನ್ನು ಪೀಡಿಸುತ್ತವೆ. ಧಿಮಾಕಿನಿಂದ ಚಂದ್ರನೊಂದಿಗೆ (ಬೆಳುದಿಂಗಳಿನೊಂದಿಗೆ) ಸೇರಿಕೊಂಡು ನನ್ನನ್ನು ಪೀಡಿಸುತ್ತವೆ. ಆದ್ದರಿಂದ ಈಗ ಚಂದ್ರನ ಬಲವಲ್ಲದಿದ್ದರೆ ಮತ್ತೆ ಯಾವುದು ತಾನೇ ನನಗೆ ಒಳಿತು ಮಾಡೀತು?
(ಟಿಪ್ಪಣಿ: ಇಲ್ಲಿ ʼಚಂದ್ರನ ಬಲʼ ಎಂದರೆ ಒಂದು ಅರ್ಥ ಬೆಳುದಿಂಗಳು ಎಂದಾದರೆ ಮತ್ತೊಂದು ಅರ್ಥ ಜ್ಯೋತಿಷ್ಯದ ಚಂದ್ರಬಲ. ಮದುವೆ ಮಾಡುವಾಗ ವಧೂವರರ ಜಾತಕವನ್ನು ಪರಿಶೀಲಿಸುವ ಸಂಪ್ರದಾಯ ಕೆಲವೆಡೆಗಳಲ್ಲಿ ಇದೆಯಷ್ಟೆ? ಆಗ ʼಚಂದ್ರಬಲʼ ಉಂಟೆ ಇಲ್ಲವೆ ಎಂದು ನೋಡುವುದು ಪದ್ಧತಿ. ಅದು ಇರಬೇಕು, ಇದ್ದರೆ ಒಳಿತು ಎಂದು ನಂಬಿಕೆ. ಸುಭದ್ರೆ ಈ ಚಂದ್ರಬಲವನ್ನು ಪ್ರಸ್ತಾವಿಸುವ ಮೂಲಕ ಪರೋಕ್ಷವಾಗಿ ತನಗೆ ಅರ್ಜುನನನ್ನು ಮದುವೆಯಾಗುವ ಆಸೆ ಇದೆ ಎಂದು ಸೂಚಿಸುತ್ತಿದ್ದಾಳೆ. ಈ ಕೆಳಗಿನ ಶ್ಲೋಕವನ್ನು ನೋಡಿ:
ತದೇವ ಲಗ್ನಂ ಸುದಿನಂ ತದೇವ
ತಾರಾಬಲಂ ಚಂದ್ರಬಲಂ ತದೇವ
ವಿದ್ಯಾಬಲಂ ದೈವಬಲಂ ತದೇವ
ಲಕ್ಷ್ಮೀಪತೇಂಘ್ರೀ ಮನಸಾ ಸ್ಮರಾಮಿ
ಯಾವಾಗ ದೇವರ ನೆನೆಪು ಮಾಡಿಕೊಳ್ಳುತ್ತೇವೋ ಆಗಲೇ ಒಳ್ಳೆಯ ಮುಹೂರ್ತ; ಒಳ್ಳೆಯ ದಿನ; ತಾರಾಬಲ, ಚಂದ್ರಬಲಗಳೂ, ವಿದ್ಯಾಬಲ, ದೈವಬಲಗಳೂ ಆಗಲೇ (ಸಿದ್ಧಿಸುತ್ತವೆ).
ವ|| ಎಂದು ಮನದ ಮಱುಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಱಿಪಮುಮಂ ಮೆಯ್ಯ ಬಡತನಮುಮನಱಿಯೆ ತೋಱಿ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪೆಱತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಿಂತೆಂದಳ್-
(ಎಂದು ಮನದ ಮಱುಕಮುಮನ್, ಎರ್ದೆಯ ಕುದಿಪಮುಮಂ, ಬಗೆಯ ಕುಱಿಪಮುಮಂ, ಮೆಯ್ಯ ಬಡತನಮುಮನ್ ಅಱಿಯೆ ತೋಱಿ ನುಡಿದೊಡೆ, ʼರಾಜಹಂಸಿ ಮಾನಸ ಸರೋವರಮನ್ ಅಲ್ಲದೆ ಪೆಱತನ್ ಏಕೆ ಬಯಸುಗುಂ? ಕಳಹಂಸಗಮನೆ ಆ ಸುರತಮಕರಧ್ವಜನನ್ ಅಲ್ಲದೆ ಪೆಱತನ್ ಏಕೆ ಬಯಸುಗುಂʼ? ಎಂದು ಮನದೊಳೆ ಮಂತಣಂ ಇರ್ದು, ಬಗೆಯೊಳೆ ಗುಡಿಗಟ್ಟಿ, ಸಂತಸಂಬಟ್ಟು ಇಂತೆಂದಳ್)
ಎಂದು ಮನದ ಸಂಕಟವನ್ನೂ, ಎದೆಯ ಕುದಿತವನ್ನೂ, ಚಿತ್ತದ ಗುರಿಯನ್ನೂ, ಬಡವಾದ ಮೈಯನ್ನೂ (ತನ್ನ ಗೆಳತಿಗೆ) ಮನದಟ್ಟಾಗುವಂತೆ ತೋರಿಸಿ ನುಡಿಯಲು ʼರಾಜಹಂಸವು ಮಾನಸ ಸರೋವರವನ್ನಲ್ಲದೆ ಬೇರೆಯದನ್ನೇಕೆ ಬಯಸೀತು? ಹಂಸನಡೆಯ ಈ ವೈಯಾರಿ ಆ ಸುರತಮಕರಧ್ವಜನನ್ನಲ್ಲದೆ ಬೇರೆಯವರನ್ನೇಕೆ ಬಯಸಿಯಾಳು?ʼ ಎಂದು (ವಿದ್ಯಮಾನವನ್ನು) ಮನದಲ್ಲಿಯೇ ಕಡೆದು ನೋಡಿ, ಸಂಭ್ರಮಗೊಂಡು ಆಕೆಯು ಸಂತೋಷದಿಂದ ಹೀಗೆಂದಳು:
ಮ|| ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋರೆ ಕಾ
ಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡಮೀ
ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ
ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕ ನೀನ್ನಾಣ್ಚುವೈ|| ೬೯||
(ನನೆಯಂಬಂ ತೆಗೆದು ಎಚ್ಚನ್ ಅಂಗಜನ ತಪ್ಪು ಏನಾನುಮಂ ತೋರೆ, ಕಾಣ್ಬನಿತಂ ಮಾಡದೆ, ಪದ್ಮಜಂ ಮದನನಂ ಬೈದಂತುಟೇ? ಬೇಡಮೀ ಬಿನದಂ! ತಪ್ಪಲೆ ಕಲ್ಪಿತಂ? ಪರಿಯದೆ ಆತಂಗೆಂದು ನಿನ್ನೀ ಮನಂ? ನಿನಗಾತಂ ದೊರೆ! ನೆಟ್ಟನೆ ಆದಿ ಪುರುಷಂಗೆ ಏಕಕ್ಕ ನೀನ್ ನಾಣ್ಚುವೈ?}
ಹೂಬಾಣವನ್ನು ನಿನ್ನ ಮೇಲೆ ಬಿಟ್ಟ ಅಂಗಜನ ತಪ್ಪೇನಾದರೂ ಕಂಡರೆ, ಕಂಡಷ್ಟಕ್ಕೆ ಏನಾದರೂ ಮಾಡದೆ, ಬ್ರಹ್ಮನೇ ಆದ ಮದನನನ್ನು ಬೈಯಬಹುದೇ? ಈ ತಮಾಷೆ ಎಲ್ಲ ಬಿಟ್ಟುಬಿಡು! ನೀನು ಕಲ್ಪಿಸಿಕೊಂಡಿರುವುದು ತಪ್ಪಲ್ಲವೆ? ನಿನ್ನ ಮನಸ್ಸು ಅವನಿಗೆ ಸೋತಿಲ್ಲವೆ? ನಿನಗೆ ಆತನೇ ಸರಿಯಾದ ಜೋಡಿ! (ʼದೊರೆʼ ಎಂದಾಗ ʼಅನುರೂಪನಾದʼ ಎಂದೂ ಆಗಬಹುದು; ʼಯಜಮಾನʼ ಎಂದೂ ಆಗಬಹುದು).ಆದಿಪುರುಷನೇ ಆಗಿರುವ ಅವನ ವಿಷಯದಲ್ಲಿ ನೀನೇಕೆ ನಾಚುತ್ತಿದ್ದೀಯೆ?
(ಟಿಪ್ಪಣಿ: ʼಪದ್ಮಜಂ ಮದನನಂʼ- ಇದರ ಅರ್ಥಕ್ಕೆ ಮುಂದೆ ೭೫ನೇ ಪದ್ಯದಲ್ಲಿ ಕವಿ ʼಅಂಗಜನೆಂಬಜಂʼ ಎಂದು ಹೇಳಿರುವುದನ್ನು ಪರಿಶೀಲಿಸಬೇಕು. ಅಂಗಜ ಮತ್ತು ಅಜರು ಬೇರೆಬೇರೆಯಲ್ಲ, ಒಂದೇ ಎಂದು ಕವಿ ಅಲ್ಲಿ ಸ್ಪಷ್ಟವಾಗಿಯೇ ಹೇಳಿದ್ದಾನೆ. ಅದೇ ಅರ್ಥದಲ್ಲಿ ಇಲ್ಲಿಯೂ ಅದನ್ನು ಬಳಸಿರುವಂತೆ ತೋರುತ್ತದೆ.).
ವ|| ನೀನಿದರ್ಕೇನುಮಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವೆನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾರೆ ನುಡಿಯುತ್ತಿರ್ಪಿನಮಿತ್ತ ವಿಕ್ರಮಾರ್ಜುನನುಮೋಲಗಂ ಪರೆದಿಂಬೞಿಯಂ ತನ್ನ ಪವಡಿಸುವ ಮಾಡಕ್ಕೊಡನೊಡನೋಲಗಿಸುತ್ತುಂ ಬಂದ ಪಂಡಿತರ್ಕಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ ಕಣ್ಮುಚ್ಚದೆ ತನ್ನ ಜಸದಂತೆ ಪಸರಿಸಿದಚ್ಚವೆಳ್ದಿಂಗಳನಾಕೆಯ ಕಣ್ಗಳ ಬೆಳ್ಪಿನ ತಳರ್ಪೆನುತ್ತುಂ ಪೆಳ್ಪಳಿಸಿ ಚಂದ್ರನಂ ನೋಡಿ-
(ʼನೀನ್ ಇದರ್ಕೆ ಏನುಮಂ ಬಗೆಯಲ್ವೇಡ! ನಿನ್ನ ಬಗೆಯಂ ಬಗೆದಂತೆ ತೀರ್ಚುವೆನ್ʼ ಎಂದು ಅನೇಕ ಪ್ರಕಾರ ವಚನ ರಚನೆಗಳಿಂದ ಆಕೆಯ ಮನಮನ್ ಆರೆ ನುಡಿಯುತ್ತ ಇರ್ಪಿನಂ
ಇತ್ತ ವಿಕ್ರಮಾರ್ಜುನನುಂ ಓಲಗಂ ಪರೆದು, ಇನ್ ಬೞಿಯಂ ತನ್ನ ಪವಡಿಸುವ ಮಾಡಕ್ಕೆ ಒಡನೊಡನೆ ಓಲಗಿಸುತ್ತುಂ ಬಂದ ಪಂಡಿತರ್ಕಳುಮನ್ ಉಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ, ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ, ಕಣ್ಮುಚ್ಚದೆ. ತನ್ನ ಜಸದಂತೆ ಪಸರಿಸಿದ ಅಚ್ಚ ಬೆಳ್ದಿಂಗಳನ್ ಆಕೆಯ ಕಣ್ಗಳ ಬೆಳ್ಪಿನ ತಳರ್ಪು ಎನುತ್ತುಂ ಪೆಳ್ಪಳಿಸಿ ಚಂದ್ರನಂ ನೋಡಿ)
ʼಈ ಬಗ್ಗೆ ನಿನಗೆ ಯಾವ ಆತಂಕವೂ ಬೇಡ! ನಿನ್ನ ಇಷ್ಟದಂತೆಯೇ ನಿನ್ನ ಆಸೆಯನ್ನು ತೀರಿಸುತ್ತೇನೆʼ ಎಂದು ಹಲವು ಬಗೆಯಲ್ಲಿ ಅವಳಿಗೆ ಸಮಾಧಾನ ಮಾಡುತ್ತಿದ್ದಳು.
ಇತ್ತ ವಿಕ್ರಮಾರ್ಜುನನು ಓಲಗವನ್ನು ಮುಗಿಸಿದ ನಂತರ, ಮಲಗುವ ಮನೆಯವರೆಗೂ ತನ್ನನ್ನು ಓಲೈಸುತ್ತ ಬಂದ ಪಂಡಿತರುಗಳಿಗೆ ಕಾಣಿಕೆಗಳನ್ನು ಕೊಟ್ಟು ಅವರನ್ನು ನಿವಾರಿಸಿಕೊಂಡನು. ಸುಭದ್ರೆಯ ರೂಪು ಕಣ್ಣಿನ ಗೊಂಬೆಯಂತೆ ಅವನ ಕಣ್ಣಿನೊಳಗೆ ತಿರುಗುತ್ತಿತ್ತು! ಅವನು ಕಣ್ಣು ಮುಚ್ಚದೆ, ತನ್ನ ಯಶಸ್ಸಿನಂತೆ ಸುತ್ತಲೂ ಹರಡಿದ್ದ ಬೆಳದಿಂಗಳನ್ನು ಆಕೆಯ ಕಣ್ಬೆಳಕಿನ ವಿಸ್ತರಣೆ ಎಂದು ಭಾವಿಸಿ, ಬೆಚ್ಚಿ, ಚಂದ್ರನನ್ನು ನೋಡಿ
(ಟಿಪ್ಪಣಿ: ಇಲ್ಲಿ ʼಪವಡಿಸುವ ಮಾಡಕ್ಕೆ ಒಡನೊಡನೆ ಓಲಗಿಸುತ್ತಂ ಬಂದ ಪಂಡಿತರ್ಕಳುಮನ್ʼ – ಮಲಗುವ ಮನೆಯವರೆಗೂ ತನ್ನನ್ನು ಓಲೈಸುತ್ತ ಬಂದ ಪಂಡಿತರುಗಳನ್ನು – ಎನ್ನುವಾಗ ಅಂಥ ಪಂಡಿತ ಜನದ ಬಗ್ಗೆ ಪಂಪನಿಗಿರುವ ತಿರಸ್ಕಾರ ಎದ್ದು ಕಾಣುತ್ತದೆ. ಇಂಥವರನ್ನು ಪಂಪನು ತನ್ನ ಅನುಭವದಲ್ಲಿ ಸ್ವತಃ ಕಂಡಿರುವುದು ಸಾಧ್ಯ. ʼವಿಸರ್ಜಿಸಿʼ ಎನ್ನುವ ಪದವೂ ಆ ತಿರಸ್ಕಾರವನ್ನೇ ಸೂಚಿಸುವಂತಿದೆ.)
ಚಂ|| ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ
ನಯದೊಳೆ ನೋಡಿ ಮಾಡಿದನದಾವುದನೆಂದಱಿಯಲ್ಕೆ ನಾಡೆ ಸಂ|
ದೆಯಮದು ನೀಳ ನೀರಜ ವನಂಗಳ ಚೆಲ್ವುಗಳೆಂಬುವಾ ಲತಾಂ
ಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ|| ೭೦ ||
(ಪ್ರಿಯ ಸತಿಯ ಆನನ ಇಂದುವೊಳಂ, ಇಂದುವೊಳಂ, ಬಿದಿ ಮುನ್ನಂ ಆವುದಂ
ನಯದೊಳೆ ನೋಡಿ, ಮಾಡಿದನ್ ಅದು ಆವುದನ್ ಎಂದು ಅಱಿಯಲ್ಕೆ ನಾಡೆ ಸಂದೆಯಂ ಅದು. ನೀಳ ನೀರಜ ವನಂಗಳ ಚೆಲ್ವುಗಳ್ ಎಂಬುವು ಆ ಲತಾಂಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ!)
ಈ ಪದ್ಯದ ಮೊದಲಭಾಗವನ್ನು ಹೀಗೆ ಅರ್ಥ ಮಾಡಬಹುದು:
ಚೆಲುವಾದ ಹೆಣ್ಣಿನ ತಂಗದಿರನಂಥ ಮುಖ ಮತ್ತು (ಬಾನಿನಲ್ಲಿರುವ) ತಂಗದಿರನ ಮುಖ ಈ ಎರಡರ ಪೈಕಿ ವಿಧಿಯು ಯಾವುದನ್ನು ಮೊದಲು ನೋಡಿ, ಯಾವುದನ್ನು ಮಾಡಿದ ಎಂದು ನಿರ್ಣಯಿಸುವುದು ಅನುಮಾನಕ್ಕೆ ಎಡೆಕೊಡುವ ಸಂಗತಿಯೇ ಸರಿ…
ಎರಡನೆಯ ಭಾಗದ ಅರ್ಥ ಸ್ಪಷ್ಟವಿಲ್ಲ.
ವ|| ಅದಲ್ಲದೆಯುಂ-
ಅದೂ ಅಲ್ಲದೆ
ಉ|| ಆ ನವ ಮಾಳಿಕಾ ಕುಸುಮ ಕೋಮಳೆ ರಾಗ ರಸ ಪ್ರಪೂರ್ಣಂ ಚಂ
ದ್ರಾನನ ಲಕ್ಷ್ಮಿಯಿಂ ನಭದೊಳಿರ್ದಮೃತಾಂಶುವಿನುದ್ಘಕಾಂತಿ ಸಂ|
ತಾನಮನಾವಗಂ ತನಗೆ ಮಾಡಿದಳೆಂದೊಡೆ ತದ್ಗೃ ಹಾಂತರೋ
ದ್ಯಾನಸರಸ್ಸರೋಜರುಚಿಯೆಂಬುದಿದಾಕೆಯ ಕೆಯ್ಯದೆನ್ನಿರೇ|| ೭೧||
(ಆ ನವ ಮಾಳಿಕಾ ಕುಸುಮ ಕೋಮಳೆ, ರಾಗ ರಸ ಪ್ರಪೂರ್ಣಂ ಚಂದ್ರಾನನ ಲಕ್ಷ್ಮಿಯಿಂ ನಭದೊಳ್ ಇರ್ದ ಅಮೃತಾಂಶುವಿನ ಉದ್ಘಕಾಂತಿ ಸಂತಾನಮನ್ ಆವಗಂ ತನಗೆ ಮಾಡಿದಳ್ ಎಂದೊಡೆ ತತ್ ಗೃಹ ಅಂತರ ಉದ್ಯಾನ ಸರಸ್ಸರೋಜರುಚಿಯೆಂಬುದಿದು ಆಕೆಯ ಕೆಯ್ಯದೆನ್ನಿರೇ)
ಈ ಪದ್ಯದಲ್ಲಿ ʼಸರಸ್ಸರೋಜ ರುಚಿʼ ಎಂಬ ವರ್ಣನೆ ಬಂದಿದೆ. ಬೆಳುದಿಂಗಳ ರಾತ್ರಿಯಲ್ಲಿ ʼನೀಳ ನೀರಜ ವನಂಗಳುʼ ಕಾಣಿಸಬಹುದೇ ಹೊರತು ʼಸರಸ್ಸರೋಜ ರುಚಿʼಯಲ್ಲ. ಎದ್ದು ಕಾಣುವ ಈ ವಿರೋಧಾಭಾಸದಿಂದಾಗಿ, ಪದ್ಯ ಪಂಪನದಲ್ಲವೆಂದೇ ತೀರ್ಮಾನಿಸಬಹುದು.
ವ|| ಎಂದು ತನ್ನ ಮನಮುಮನೆರ್ದೆಯುಮನುರೆ ಸೆರೆವಿಡಿದಿರ್ದಪೂರ್ವ ರೂಪೆಯ ರೂಪಮಂ ಮನದೊಳೆ ಬಗೆದು ಭಾವಿಸಿ ಮತ್ತಮಿಂತೆಂದಂ-
(ಎಂದು ತನ್ನ ಮನಮುಮನ್ ಎರ್ದೆಯುಮನ್ ಉರೆ ಸೆರೆವಿಡಿದಿರ್ದ ಅಪೂರ್ವ ರೂಪೆಯ ರೂಪಮಂ ಮನದೊಳೆ ಬಗೆದು, ಭಾವಿಸಿ, ಮತ್ತಂ ಇಂತೆಂದಂ)
ಎಂದು ತನ್ನ ಮನಸ್ಸನ್ನೂ, ಹೃದಯವನ್ನೂ ಸೆರೆಹಿಡಿದಿದ್ದ ಮೊದಲಿಲ್ಲದ ಸುಂದರಿಯ ರೂಪವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ, ನಂತರ ಹೀಗೆಂದನು:
ಚಂ|| ಕುಸುರಿಯ ರೂಪನೆಯ್ದೆ ಪೊಗೞಲ್ಕಱಿಯೆಂ ನಡು ಪುರ್ವು ಬಾಸೆ ಕ
ಣ್ಗೊಸಗೆಯನುಂಟುಮಾೞ್ಪ ಜಘನಂ ಬೆಳರ್ವಾಯ್ ಮೊಲೆಗಳ್ ಕದಂಪುಗು|
ರ್ವಸಿಱನೆ ನೋಡೆ ಮೊಕ್ಕಳಮದಾರ್ ನಡೆ ನೋೞ್ಪೊಡಮಂತುಮಿಂತುಂ ಮೂ
ಱಸಿಯವು ಮೂಱು ದೊಡ್ಡಿದುವು ಮೂಱೆಡೆ ತೆಳ್ಳಿದುವಂಬುಜಾಕ್ಷಿಯಾ|| ೭೨||
(ಕುಸುರಿಯ ರೂಪನ್ ಎಯ್ದೆ ಪೊಗೞಲ್ಕೆ ಅಱಿಯೆಂ! ನಡು, ಪುರ್ವು, ಬಾಸೆ, ಕಣ್ಗೆ ಒಸಗೆಯನ್ ಉಂಟುಮಾೞ್ಪ ಜಘನಂ, ಬೆಳರ್ವಾಯ್, ಮೊಲೆಗಳ್, ಕದಂಪು ಉಗುರ್, ಬಸಿಱನೆ ನೋಡೆ ಮೊಕ್ಕಳಂ ಅದು ಆರ್ ನಡೆ ನೋೞ್ಪೊಡಂ ಅಂತುಂ ಇಂತುಂ ಮೂಱು ಅಸಿಯವು, ಮೂಱು ದೊಡ್ಡಿದುವು, ಮೂಱು ತೆಳ್ಳಿದುವು ಅಂಬುಜಾಕ್ಷಿಯಾ)
ಟಿಪ್ಪಣಿ: ಈ ಪದ್ಯ ಹೆಣ್ಣಿನ ಅಂಗಾಂಗಗಳ ಒಂದು ಪಟ್ಟಿಯೇ ಹೊರತು ಬೇರೇನೂ ಅಲ್ಲ. ಪಂಪನೇ ಇದನ್ನು ಬರೆದನೋ, ಬೇರೆ ಯಾರೋ ಕುಚೋದ್ಯಕ್ಕಾಗಿ ಇದನ್ನು ಬರೆದು ಇಲ್ಲಿ ಸೇರಿಸಿದರೋ ಎಂಬ ಅನುಮಾನವನ್ನು ಹುಟ್ಟಿಸುತ್ತದೆ.
ಕಂ|| ಮೃಗಶಿಶುನೇತ್ರೆಯ ನಡುವೆರ್ದೆ
ಯುಗುರ್ಗಳ್ ಕರಮಸಿದು ಕನಕ ಕಾಂಚೀ ನಿನದ|
ಪ್ರಗಣಿತಮಗಲ್ದ ನಲ್ಲಳ
ಜಗನಮಿದೆನ್ನೆರ್ದೆಯನೆಂತು ಪೊಕ್ಕಳಿಪುವುದೋ|| ೭೩||
(ಮೃಗಶಿಶುನೇತ್ರೆಯ ನಡು, ಎರ್ದೆ ಉಗುರ್ಗಳ್ ಕರಂ ಅಸಿದು; ಕನಕ ಕಾಂಚೀ ನಿನದ
ಪ್ರಗಣಿತಂ ಅಗಲ್ದ ನಲ್ಲಳ ಜಗನಂ ಇದು ಎನ್ನ ಎರ್ದೆಯನ್ ಎಂತು ಪೊಕ್ಜು ಅಳಿಪುವುದೋ?)
ಟಿಪ್ಪಣಿ: ʼಮೃಗಶಿಶುನೇತ್ರೆಯ ನಡು, ಎರ್ದೆ ಉಗುರ್ಗಳ್ ಕರಂ ಅಸಿದುʼ ಈ ಅರೆವಾಕ್ಯವು ತನ್ನಷ್ಟಕ್ಕೆ ತಾನೇ ಒಂದು ಹೇಳಿಕೆಯಷ್ಟೇ ಹೊರತು ಬೇರೆ ಯಾವ ಅರ್ಥವನ್ನೂ ಕೊಡುವುದಿಲ್ಲ, ಅಥವಾ ಪದ್ಯದ ಮುಂದಿನ ಭಾಗದೊಂದಿಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಾಗಿ ಈ ಪದ್ಯವನ್ನು ಪಂಪನು ಬರೆದನೆಂದು ನಂಬುವಂತಿಲ್ಲ.
ವ|| ಎಂದು ಸೈರಿಸದೆ-
ಮ|| ಮೊಲೆಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೊಂಕಾಗಿ ಕಣ್ಗೆಯ್ದೆ ನೀ
ಳ್ದಲರ್ಗಣ್ಗಳ್ ಚಪಳಂಗಳಾಗಿ ಜಘನಂ ಕಾಂಚೀ ಕಳಾಪ ಪ್ರಭೋ|
ಜ್ಜಲಮುದ್ವೃತ್ತಮುಮಾಗಿ ತಾಮಲೆಗೆ ಮಧ್ಯಸ್ಥಂಗಳಾಗಿರ್ದುವ
ಕ್ಕಲೆಯಲ್ ತಕ್ಕುದೆ ಕೆನ್ನಮಾ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ|| ೭೪ ||
(ಮೊಲೆಗಳ್ ಬಟ್ಟಿದುವಾಗಿ, ಕರ್ಗಿದ ಕುರುಳ್ ಕೊಂಕಾಗಿ, ಕಣ್ಗೆ ಎಯ್ದೆ ನೀಳ್ದ ಅಲರ್ಗಣ್ಗಳ್ ಚಪಳಂಗಳಾಗಿ, ಜಘನಂ ಕಾಂಚೀ ಕಳಾಪ ಪ್ರಭೋಜ್ಜಲಂ ಉದ್ವೃತ್ತಮುಂ ಆಗಿ, ತಾಮಲೆಗೆ ಮಧ್ಯಸ್ಥಂಗಳ್ ಆಗಿರ್ದುವಕ್ಕು, ಅಲೆಯಲ್ ತಕ್ಕುದೆ ಕೆನ್ನಂ ಆ ತ್ರಿವಳಿಗಳ್ಗೆ ಎನ್ನಂ ಸರೋಜಾಕ್ಷಿಯಾ)
ಟಿಪ್ಪಣಿ: ಇಲ್ಲಿ ಪುನಃ “ಜಘನಂ ಕಾಂಚೀ ಕಳಾಪ ಪ್ರಭೋಜ್ಜಲಂ” ಎಂಬ ವರ್ಣನೆ ಇದೆ. ಆದ್ದರಿಂದ ಇದೂ ಪಂಪನ ರಚನೆ ಎನ್ನುವಂತಿಲ್ಲ.
ವ|| ಎಂದು ಕಿಱಿದುಂ ಬೇಗಮಱಿಮರುಳಂತು ಪಲುಂಬಿ ಪಂಬಲಿಸಿ ಮತ್ತಮಾಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ್ ಮನಮನೊನಲಿಸೆಯುಮೆರ್ದೆಯಂ ಕನಲಿಸೆಯುಮನಂಗ ಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿ-
(ಎಂದು ಕಿಱಿದುಂ ಬೇಗಂ ಅಱಿಮರುಳಂತು ಪಲುಂಬಿ, ಪಂಬಲಿಸಿ ಮತ್ತಂ ಆಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ್ ಮನಮನ್ ಒನಲಿಸೆಯುಂ, ಎರ್ದೆಯಂ ಕನಲಿಸೆಯುಂ, ಅನಂಗ ಮತಂಗಜ ಕೋಳಾಹಳ ಆಕುಳೀಕೃತ ಅಂತರಂಗನಾಗಿ)
ಎಂದು ಸ್ವಲ್ಪ ಕಾಲ ಅರೆಮರುಳನ ಹಾಗೆ ಹಲುಬಿ, (ಸುಭದ್ರೆಗಾಗಿ) ಹಂಬಲಿಸಿ, ಆಕೆಯ ಹಾವ, ಭಾವ, ವಿಳಾಸ, ಚಂಚಲವಾದ ಕಣ್ಣೋಟ ಇವು ಮನವನ್ನು ಪೀಡಿಸಿ, ಎದೆಯ ಉರಿಯನ್ನು ಹೆಚ್ಚಿಸಲು, ಮನ್ಮಥನೆಂಬ ಮದ್ದಾನೆಯ ಕೋಲಾಹಲದಿಂದ ಮನನೊಂದು
ವ|| ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲೀ ಕನ್ನೆಯಂ ಮಾಡುವ
ಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಮಿಮ್ಮಾವು ಮ|
ಲ್ಲಿಗೆಯೆಂದಿಂತಿವನೞ್ಕಿಱಿಂದಮರ್ದಿನೊಳ್ ತಾನೞ್ತಿಯಿಂ ತೊಯ್ದು ಮೆ
ಲ್ಲಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ|| ೭೫||
(ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲ ಈ ಕನ್ನೆಯಂ! (ಈ ಕನ್ನೆಯಂ) ಮಾಡುವಲ್ಲಿಗೆ ಚಂದ್ರಂ, ಮಳಯಾನಿಳಂ, ಮಳಯಜಂ, ನೀರೇಜಂ, ಇಮ್ಮಾವು, ಮಲ್ಲಿಗೆಯೆಂದು ಇಂತು ಇವನ್ ಅೞ್ಕಱಿಂದ ಅಮರ್ದಿನೊಳ್ ತಾನ್ ಅೞ್ತಿಯಿಂ ತೊಯ್ದು ಮೆಲ್ಲಗೆ ಸಂದ ಅಂಗಜನೆಂಬ ಅಜಂ ಪಡೆದನ್ ಅಂತು ಆ ಕಾಂತಿಯಿಂ ಕಾಂತೆಯಂ)
ಈ ಕನ್ಯೆಯನ್ನು ಸೃಷ್ಟಿಸಿದವನು ಜಗತ್ತನ್ನೇ ಸೃಷ್ಟಿಸಿದ ಬ್ರಹ್ಮನಲ್ಲ! ಚಂದ್ರ, ತೆಂಕಣಗಾಳಿ, ಶ್ರೀಗಂಧ, ತಾವರೆ, ಸಿಹಿಮಾವು, ಮಲ್ಲಿಗೆ ಇವುಗಳನ್ನೆಲ್ಲ ಅಕ್ಕರೆಯಿಂದ ಅಮೃತದಲ್ಲಿ ತೋಯಿಸಿ ಅವೆಲ್ಲವುಗಳ ಒಟ್ಟು ಕಾಂತಿಯಿಂದ ಮನ್ಮಥನೆಂಬ ಬ್ರಹ್ಮನು ಈ ಕನ್ನೆಯನ್ನು ಸೃಷ್ಟಿಸಿದನು!
ವ|| ಅಂತಲ್ತಪ್ಪಂದಾ ಕಾಂತೆಯಂ ವಿಧಾತ್ರಂ ಮಾಡುವಂದು ಕೊಸಗಿನ ಕೇಸರಂಗಳನಮೃತರಸದೊಳಂ ಶೃಂಗಾರರಸದೊಳಂ ಭಾವಿಸಿ ರಸಸಿದ್ಧಮಪ್ಪ ಪೊನ್ನ ಲತೆಯ ಮೆಯ್ಯುಮಂ ನೀಲದ ತಲೆನವಿರುಮಂ ಪವಳದ ಬಾಯ್ದೆರೆಯುಮಂ ಮುತ್ತಿನ ಪಲ್ಲುಮಂ ರಾಜಾವರ್ತದ ಸೆಳ್ಳುಗುರುಮಂ ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮನದ್ರಿಜಾತೆಯ ಶೃಂಗಾರಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನಯ್ದಲರಂಬಿನ ಶಕ್ತಿಗಳುಮನೊಂದುಮಾಡಿ ಲೋಕಮೆಲ್ಲಂ ಮರುಳ್ಮಾಡಲೆಂದು ಪೆಣ್ಮಾಡಿದನಕ್ಕುಮೆಂದು ಮತ್ತಮಾಕೆಯ ನೋಡಿದ ನೋಟಮಂ ಭಾವಿಸಿ-
ಚಂ||ನೆರೆಗೊಳೆ ಗಾಡಿ ನೋೞ್ಪ ಬಗೆ ಬರ್ಪುದುಮಾನೆ ದಲಂದು ದಂತಿಯಂ
ನಿಱಿಸಿ ಮರಲ್ದು ನೋಡುವುದುಮೆನ್ನುಮನಾ ಸತಿ ಸೋಲದತ್ತ ಮ|
ತ್ತೆಱಗಿ ಬೞಲ್ದು ಜೋಲ್ದಳಿಪಿ ನೋಡಿದಳಿಂತೆಲೆ ಸತ್ತ ಪೊತ್ತ ಕ
ಣ್ಣಱಿಯದ ಬೆಳ್ಳನಲ್ಲೆನಱಿದೆಂ ಧವಳಾಕ್ಷಿಯ ನೋಟದಂದಮಂ || ೭೬||
(ನೆರೆಗೊಳೆ ಗಾಡಿ, ನೋೞ್ಪ ಬಗೆ ಬರ್ಪುದುಂ ಆನೆ ದಲ್ ಅಂದು ದಂತಿಯಂ ನಿಱಿಸಿ, ಮರಲ್ದು ನೋಡುವುದುಂ, ಎನ್ನುಮನ್ ಆ ಸತಿ ಸೋಲದೆ ಅತ್ತ ಮತ್ತೆ ಎಱಗಿ ಬೞಲ್ದು ಜೋಲ್ದು ಅಳಿಪಿ ನೋಡಿದಳ್! ಇಂತು ಎಲೆ ಸತ್ತ ಪೊತ್ತ ಕಣ್ಣಱಿಯದ ಬೆಳ್ಳನಲ್ಲೆನ್! ಅಱಿದೆಂ ಧವಳಾಕ್ಷಿಯ ನೋಟದ ಅಂದಮಂ)
(ಸುಭದ್ರೆಯ) ಚೆಲುವು ನನ್ನನ್ನು ಸೆಳೆಯಿತು, ಅವಳನ್ನು ಮತ್ತೊಮ್ಮೆ ನೋಡುವ ಆಸೆಯಾಯಿತು. ಆಗ ನಾನೇ ಆನೆಯನ್ನು ನಿಲ್ಲಿಸಿ ಅವಳ ಕಡೆಗೆ ಹಿಂತಿರುಗಿ ನೋಡಿದೆ! ಅವಳೂ ಸಹ ಪ್ರೀತಿ ತುಂಬಿಕೊಂಡು, ಆಯಾಸದಿಂದ ಬಳಲಿ ಓಲಾಡುತ್ತಲೇ, ಆಸೆಪಟ್ಟು ನನ್ನ ಕಡೆಗೆ ನೋಡಿದಳು! ಇಂಥ ಒಂದು ಹೆಣ್ಣಿನ ಕಣ್ಣೋಟದ ಅರ್ಥವನ್ನು ತಿಳಿಯದ ದಡ್ಡನಲ್ಲ ನಾನು! ಆಕೆಯ ನೋಟದ ಇಂಗಿತವು ಆ ಕೂಡಲೇ ನನಗೆ ತಿಳಿದುಹೋಯಿತು!
ಹರಿಣೀಪ್ಲುತ || ದಳಿತ ಕಮಲಚ್ಛಾಯಾಟೋಪಂ ಮನೋಜ ರಸ ಪ್ರಭಾ
ವಳಯ ನಿಳಯಂ ಪ್ರೋದ್ಯದ್ಭ್ರೂವಿಭ್ರಮಂ ಮುಕುಳೀಕೃತಂ||
ಲಳಿತ ಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂ
ದಳಿತಮಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ|| ೭೭ ||
ಚಂ||ಉಡಮೊಗಮೆಂಬ ತಾವರೆಯ ನೀಳ್ದೆಸೞೊಳ್ ಮಱಿದುಂಬಿ ಪಾಯ್ದೊಡಂ
ಬಡನೊಳಕೊಂಡು ಕಣ್ಮಲರ ಬೆಳ್ಪುಗಳಾಲಿಯ ಕೞ್ಪಿನೊಳ್ ಪೊದ|
ಳ್ದೊಡನೊಡನೋಡುವಟ್ಟೆನಗೆ ಸಂತಸಮಂ ಮಱುಕಕ್ಕೆ ಮಾಣ್ದೊಡೀ
ನಡೆಗಿಡೆ ಸತ್ವಮಂ ತಮಮುಮಂ ಕಡೆಗಣ್ಣೊಳೆ ಕಂಡೆನೋಪಳಾ|| ೭೮||
ಚಂ|| ಒದವಿದ ಬೇಟವಪ್ಪೊಡೆನಗತ್ತಳಗಂ ಬಗೆವೇೞ್ವೊಡೆನ್ನ ಮೇ
ಳದ ಕೆಳೆಯರ್ಕಳಿಲ್ಲವಳುಮಪ್ಪೊಡೆ ಜವ್ವನಮತ್ತೆ ನಾಣ ಕಾ|
ಪದು ಪಿರಿದೋತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನ
ಪ್ಪುದಱಿನದಿಂತರಣ್ಯರುದಿತಂ ವಲವೆನ್ನೊಲವಿಂದುವಕ್ತ್ರೆಯಾ|| ೭೯ ||
(ಒದವಿದ ಬೇಟವಪ್ಪೊಡೆ ಎನಗೆ ಅತ್ತಳಗಂ! ಬಗೆವೇೞ್ವೊಡೆ ಎನ್ನ ಮೇಳದ ಕೆಳೆಯರ್ಕಳ್ ಇಲ್ಲ! ಅವಳುಂ ಅಪ್ಪೊಡೆ ಜವ್ವನಮತ್ತೆ, ನಾಣ ಕಾಪದು ಪಿರಿದು! ಓತು ಮಾತು ಅಡಕಲ್ ಒಂದಿದ ದೂದವರ್ ಇಲ್ಲ ನೆಟ್ಟನೆ ಅಪ್ಪುದಱಿನ್ ಇದು ಇಂತು ಅರಣ್ಯರುದಿತಂ ವಲ ಎನ್ನೊಲವು ಇಂದುವಕ್ತ್ರೆಯಾ!)
ಮನಸ್ಸಿನಲ್ಲಿ ಉಂಟಾಗಿರುವ ಬಯಕೆಯನ್ನು (ನನಗೆ) ತಡೆದುಕೊಳ್ಳಲಾಗುತ್ತಿಲ್ಲ! ಹೇಳಿಕೊಳ್ಳೋಣವೆಂದರೆ ತಕ್ಕ ಸ್ನೇಹಿತರಿಲ್ಲ! ಅವಳೋ ಯೌವನದಿಂದ ಸೊಕ್ಕಿರುವ ತರುಣಿ, ನಾಚಿಕೆ ಅವಳಿಗೆ ಕಾವಲು ಕೂತಿದೆ! ಅಲ್ಲದೆ ಪ್ರೇಮಸಂದೇಶವನ್ನು ತರಬಲ್ಲ ದೂತರೂ ಇಲ್ಲ! ಹೀಗಿರುವಾಗ ನನಗೆ ಆ ಚೆಲುವೆಯ ಮೇಲೆ ಇರುವ ಪ್ರೀತಿ ಕೇವಲ ಕಾಡಳುವೇ ಸೈ!
ವ|| ಎಂದಿಂತು ನಲ್ಲಳಂ ನೆನೆದು ಕಣ್ಗಾಪನೆ ಕಾದು ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಱದೆ ಪೊೞಲಂ ತೊೞಲ್ದು ನೋೞ್ಪ ಬಗೆದಂದು ರಾಜಮಂದಿರದಿಂ ಪೊಱಮಟ್ಟು ಬರೆ ತನ್ನಂ ಕಾಣಲೊಡಮಱಿದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀಠಮರ್ದಕರ್ಕಳ್ವೆರಸು ಕಾಮದೇವನೋಲಗಕ್ಕೆ ಬರ್ಪಂತೆ ಸೂಳೆಗೇರಿಯೊಳಗನೆ ಬರ್ಪುದುಮಲ್ಲಿ-
(ಎಂದು ಇಂತು ನಲ್ಲಳಂ ನೆನೆದು, ಕಣ್ಗಾಪನೆ ಕಾದು, ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಱದೆ, ʼಪೊೞಲಂ ತೊೞಲ್ದು ನೋೞ್ಪʼ ಬಗೆದಂದು, ರಾಜಮಂದಿರದಿಂ ಪೊಱಮಟ್ಟು ಬರೆ, ತನ್ನಂ ಕಾಣಲೊಡಂ ಅಱಿದು, ನುಡಿಯಿಸಿ, ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀಠಮರ್ದಕರ್ಕಳ್ವೆರಸು ಕಾಮದೇವನ್ ಓಲಗಕ್ಕೆ ಬರ್ಪಂತೆ ಸೂಳೆಗೇರಿಯ ಒಳಗನೆ ಬರ್ಪುದುಂ, ಅಲ್ಲಿ)
ಹೀಗೆ ತನ್ನ ನಲ್ಲೆಯನ್ನು ನೆನೆಯುತ್ತಾ, ಅಲ್ಲೆಲ್ಲಾದರೂ ಅಕಸ್ಮಾತ್ತಾಗಿ ಕಾಣುತ್ತಾಳೋ ಎಂದು ಕಣ್ಣಾಡಿಸುತ್ತಾ, ಚಿಂತೆಯಿಂದ ಬಳಲಿ, ʼಊರೊಳಗಾದರೂ ಸುತ್ತು ಹಾಕಿ ಬರೋಣʼ ಎಂಬ ಆಲೋಚನೆಯಿಂದ ರಾಜಮಂದಿರವನ್ನು ಬಿಟ್ಟು ಹೊರಬಂದನು. ಆಗ ಅವನನ್ನು ಕಂಡು, ಕೂಡಲೇ ಗುರುತು ಹಿಡಿದು, ಮಾತಾಡಿಸಿ, ಮೆಚ್ಚಿದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರ ಜೊತೆ ಸೇರಿಕೊಂಡು ಕಾಮದೇವನ ಓಲಗಕ್ಕೆ ಬರುವಂತೆ ಸೂಳೆಗೇರಿಯ ಒಳಗೆ ಬಂದು-
(ಟಿಪ್ಪಣಿ: “ನಾಗರಿಕ-ಚತುರನಾದ ಪೌರ, ವಿಟ-ಸ್ತ್ರೀಲೋಲರನಾದ ರಾಜಕುಮಾರನ ಸ್ನೇಹಿತ; ವಿದೂಷಕ-ಹಾಸ್ಯಗಾರ, ಪೀಠಮರ್ದಕ-ಸ್ತ್ರೀಬೇಟೆಯಲ್ಲಿ ರಾಜನಿಗೆ ಸಹಾಯ ಮಾಡುವವನು-ಈ ನಾಲ್ವರೂ ರಾಜಕುಮಾರನ ಅಥವಾ ಕಥಾನಾಯಕನ ಸಹಚರಿಗಳು ಎಂದು ಸಂಸ್ಕೃತನಾಟಕಗಳಲ್ಲಿ ಚಿತ್ರಿತರಾಗಿದ್ದಾರೆ” –ಡಿ.ಎಲ್. ನರಸಿಂಹಾಚಾರ್, ʼಪಂಪಭಾರತ ದೀಪಿಕೆʼಯಲ್ಲಿ)