ಉಪನ್ಯಾಸಕ ವೇಷದ ಏಜೆಂಟರುಗಳು

ಬಳಕೆದಾರರ ವೇದಿಕೆಯ ಕೆಲಸವನ್ನು ನಾನು ಅಲ್ಪ ಸ್ವಲ್ಪ ಮಾಡುತ್ತೇನೆ. ಇತ್ತೀಚೆಗೆ ಗೃಹಿಣಿಯೊಬ್ಬರು ವೇದಿಕೆಗೆ ಬಂದರು. ಆಕೆ ಪರಿಚಯದವರೇ. ಇದಕ್ಕಿಂತ ಮೊದಲೂ ಒಂದು ಸಲ ಮುಕ್ತ ವಿಶ್ವವಿದ್ಯಾನಿಲಯದಿಂದ ಅಂಕಪಟ್ಟಿ ಬಂದಿಲ್ಲ ಎಂಬ ಸಮಸ್ಯೆಯ ಪರಿಹಾರಕ್ಕಾಗಿ ಬಂದಿದ್ದರು. ಇಂದೂ ಬರುವ ಮೊದಲೇ ಫೋನಿಸಿದ್ದರು. ಹಾಗಾಗಿ ಆಕೆ ಬರುತ್ತಿರುವುದು ಯಾಕೆಂದು ನನಗೆ ಸ್ವಲ್ಪ ಮಟ್ಟಿಗೆ ಅಂದಾಜಿತ್ತು.
ಆಕೆ ಎರಡು ಚಿಕ್ಕ ಮಕ್ಕಳ ತಾಯಿ. ಮೊದಲನೆಯ ಹೆಣ್ಣು ಮಗುವಿಗೆ ಈಗ ನಾಲ್ಕು ವರ್ಷ. ಎರಡನೆಯದು ತುಂಬಾ ಚಿಕ್ಕದು.ಆಕೆಯ ಪತಿ ನನಗೆ ಪರಿಚಯದವರೇ. ಅವರಿಗೆ ಪಿತ್ರಾರ್ಜಿತವಾಗಿ ಬಂದ ಜಮೀನು, ಮನೆ ಇದೆ. ಹಾಗೆಯೇ ಬಂದ ಪೌರೋಹಿತ್ಯದ ವೃತ್ತಿಯೂ ಇದೆ. ಅನುಕೂಲವೇ.
ಈ ಸಲ ಆಕೆ ಬಂದದ್ದು ಯಾವುದೇ ಸಮಸ್ಯೆಯ ಪರಿಹಾರಕ್ಕಲ್ಲ. ಬದಲಿಗೆ ಒಂದು ಸಲಹೆ ಕೇಳಲು. ಅವರ ಮನೆಗೆ ಮಂಗಳೂರಿನಿಂದ ಇಬ್ಬರು ಬಂದರಂತೆ. ಅವರು ಪುಸ್ತಕಗಳ ಏಜೆಂಟರು. ಮಕ್ಕಳಿಗಾಗಿ ಅತ್ಯುತ್ತಮ ಗುಣಮಟ್ಟದ ವಿಜ್ಞಾನದ ಪುಸ್ತಕಗಳನ್ನು ಅವರು ಮಾರುತ್ತಾರೆ. ಅವು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸುವ ಚಿತ್ರಗಳಿಗೆ ಪ್ರಾಧಾನ್ಯ. ಅತ್ಯುತ್ತಮ ಗುಣಮಟ್ಟದ ಕಾಗದವನ್ನು ಬಳಸಿರುವುದರಿಂದ ಎಷ್ಟು ವರ್ಷವಾದರೂ ಅವು ಹಾಳಾಗುವುದಿಲ್ಲ, ಅವುಗಳ ಬಣ್ಣ ಮಾಸುವುದಿಲ್ಲ. ಇದು ಸ್ಪರ್ಧೆಯ ಯುಗ. ಮಕ್ಕಳು ಈ ಸ್ಪರ್ಧೆಯಲ್ಲಿ ಗೆದ್ದು ಉಳಿದ ಮಕ್ಕಳನ್ನು ಹಿಂದೆ ಹಾಕಬೇಕಾದರೆ ಈ ಪುಸ್ತಕಗಳನ್ನು ಓದಲೇಬೇಕು. ನಾಲ್ಕರಿಂದ ಐದು ವರ್ಷದ ಮಕ್ಕಳಿಗೆ ಅತ್ಯಂತ ತೀವ್ರವಾದ ಗ್ರಹಣ ಶಕ್ತಿ ಇರುತ್ತದೆ. “ಈ ವಯಸ್ಸಿನಲ್ಲಿ ನಿಮ್ಮ ಮಗಳಿಗೆ ಅದನ್ನು ಕೊಡಿಸಿದರೆ ಅವಳು ಎಂಥ ಸ್ಪರ್ಧೆಯನ್ನೂ ಗೆಲ್ಲುತ್ತಾಳೆ. ನಾವು ಹಾಗೆ ಎಲ್ಲ ಕಡೆಯೂ ಹೋಗಿ ಈ ಪುಸ್ತಕಗಳನ್ನು ಮಾರುವುದಿಲ್ಲ. ಆಯ್ದ ಕೆಲವೇ ಜನರನ್ನು ಹುಡುಕಿ ಅವರಿಗೆ ಮಾತ್ರ ಕೊಡುತ್ತೇವೆ” ಎಂದು ಅವರು ಹೇಳಿದರಂತೆ. ಜೊತೆಗೆ ಬಣ್ಣಬಣ್ಣದ ಪುಸ್ತಕದ ಕೆಟಲಾಗನ್ನೂ ಕೊಟ್ಟರಂತೆ. ಆಕೆ ಅ ಕೆಟಲಾಗನ್ನೂ ಹಿಡಿದುಕೊಂಡು ಬಂದಿದ್ದರು. ಜೊತೆಗೆ ಪುಸ್ತಕಕ್ಕಾಗಿ ಕೊಟ್ಟ ಮುಂಗಡದ ರಶೀದಿಯನ್ನೂ ಸಹ! ಈಗ ಆಕೆಗೆ ಕೆಲವರು “ಪುಸ್ತಕದ ರೇಟು ತುಂಬಾ ಹೆಚ್ಚಾಯಿತು” ಎನ್ನುತ್ತಿದ್ದಾರಂತೆ. ಆಕೆಗೆ ಆನುಮಾನವಾಗಿದೆ: ತಾನು ಕೊಟ್ಟ ರೇಟು ಹೆಚ್ಚಾಯಿತೇ, ಆ ಏಜೆಂಟರು ತನ್ನನ್ನು ಮಂಗ ಮಾಡಿರಬಹುದೇ ಎಂದು. ಪುಸ್ತಕ ಇನ್ನು ಬರಬೇಕಷ್ಟೆ, ಬಂದಾಗಲಿಲ್ಲ.
“ಎಷ್ಟಂತೆ ಪುಸ್ತಕಕ್ಕೆ?” ನಾನು ಕೇಳಿದೆ.
“ನಿಜವಾಗಿ ಒಂದೂವರೆ ಲಕ್ಷ ಅಂತೆ. ಹೆಚ್ಚಾಯಿತು ಎಂದಿದ್ದಕ್ಕೆ ಎಂಬತ್ತೈದು ಸಾವಿರಕ್ಕೆ ಒಪ್ಪಿದರು”
ಎಂಬತ್ತೈದು ಸಾವಿರ! ನಾಲ್ಕು ವರ್ಷದ ಮಗು ಓದುವ ಪುಸ್ತಕಕ್ಕೆ? ಓ ದೇವರೇ! ಏನು ಮಾತಾಡುವುದೆಂದು ನನಗೆ ಹೊಳೆಯಬೇಕಾದರೆ ಸ್ವಲ್ಪ ಹೊತ್ತು ಹೋಯಿತು.
“ನಾನು ಪುಸ್ತಕಗಳನ್ನು ನೋಡಿಲ್ಲ. ನೋಡದೆ ಅದರ ರೇಟು ಹೆಚ್ಚಾಯಿತೋ ಇಲ್ಲವೋ ಎಂದು ಹೇಳುವುದು ನನಗೆ ಕಷ್ಟ. ನೀವು ಎಡ್ವಾನ್ಸ್ ಕೊಟ್ಟದ್ದಕ್ಕೆ ಮೋಸ ಆಗಲಿಕ್ಕಿಲ್ಲ. ಪುಸ್ತಕ ಕೊಟ್ಟಾರು. ಕೊಡದೆ ಇರಲಿಕ್ಕಿಲ್ಲ”
“ಅದಲ್ಲ ನಾನು ಕೇಳುವುದು, ಪುಸ್ತಕದಿಂದ ಅಷ್ಟು ಪ್ರಯೋಜನ ಆಗಬಹುದೋ…”
“ನಾನು ಹೇಗೆ ಹೇಳಲಿ?”
*********************************
ಸುಮಾರು ಒಂಬತ್ತು ವರ್ಷಗಳ ಮೊದಲು ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಉಪನ್ಯಾಸಕ ಶ್ರೀ ಎ.ಪಿ.ರಾಯರು ಈ ಪುಸ್ತಕಗಳ ವಕೀಲಿ ವಹಿಸಿ ನನ್ನಲ್ಲಿಗೆ ಬಂದಿದ್ದರು. ಅವರು ನನ್ನ ಹೆಂಡತಿ ರಮಾದೇವಿಯ ಹತ್ತಿರವೂ ಈ ಪುಸ್ತಕಗಳ ಬಗ್ಗೆ ಮಾತಾಡಿದ್ದರಂತೆ. ಅವಳು “ಅದರಲ್ಲಿರುವ ಎಲ್ಲ ಸಬ್ಜೆಕ್ಟುಗಳನ್ನೂ ಓದುವಷ್ಟು ಪುರುಸೊತ್ತು ನನ್ನ ಮಗನಿಗೆ ಇಲ್ಲ. ಯಾವುದಾದರೂ ಒಂದು ಸಬ್ಜೆಕ್ಟ್ ಓದುವುದಾದರೆ ಈ ಪುಸ್ತಕ ಸಾಕಾಗುವುದಿಲ್ಲ. ಆದ್ದರಿಂದ ಬೇಡ” ಎಂದಿದ್ದಳಂತೆ.
ನಾನು ಎ.ಪಿ.ರಾಯರಿಗೆ ಹೇಳಿದೆ: “ಮೈಸೂರು ವಿಶ್ವವಿದ್ಯಾನಿಲಯದವರು ನಾಲ್ಕಾಣೆ ಮಾಲೆಯಲ್ಲಿ ಬೇಕಾದಷ್ಟು ವಿಜ್ಞಾನದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳನ್ನು ಬರೆದವರು ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು. ನನ್ನ ಮಟ್ಟಿಗೆ ಆ ಪುಸ್ತಕಗಳು ಸಾಕು. ಈಗ ಇಂಟರ್ ನೆಟ್ ಬೇರೆ ಬಂದಿದೆ. ಏನು ಬೇಕಾದ್ದು ಅದರಲ್ಲಿ ಸಿಕ್ಕುವಾಗ ನನಗಂತೂ ಈ ಪುಸ್ತಕಗಳಿಂದ ಪ್ರಯೋಜನವಿಲ್ಲ. ನನಗೆ ಬೇಡ”.
ಈ ಪುಸ್ತಕ ಧಂಧೆಯ ಹಿಂದೆ ಏನಿದೆಯೋ, ಯಾರಿದ್ದಾರೋ ಒಂದೂ ನನಗೆ ತಿಳಿದಿಲ್ಲ. ಆದರೆ ತಮ್ಮ ಮಕ್ಕಳನ್ನು ಯಾವುದಾದರೊಂದು ಒಳದಾರಿಯ ಮೂಲಕ ಬೇರೆಯವರ ಮಕ್ಕಳಿಗಿಂತ ಬುದ್ಧಿವಂತರನ್ನಾಗಿಸುವ ಕೆಲವರ ಒಳ ಮನಸ್ಸಿನ ಆಸೆಯನ್ನು ಇದರ ಏಜೆಂಟರುಗಳು ನಗದು ಮಾಡಿಕೊಳ್ಳುವ ಚಾಲಾಕಿ ನನಗೆ ಆಶ್ಚರ್ಯ ಹುಟ್ಟಿಸಿದೆ. ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನ ಇನ್ನೂ ಹಲವು ಉಪನ್ಯಾಸಕರು ಈ ಪುಸ್ತಕದ ಏಜೆನ್ಸಿ ಹಿಡಿದಿದ್ದರೆಂದು ಕೇಳಿದ್ದೇನೆ. ಹೀಗೆ ಏಜೆನ್ಸಿ ಹಿಡಿದವರಲ್ಲಿ ಹೆಚ್ಚಿನವರು ಗಂಡ ಹೆಂಡತಿ ಇಬ್ಬರೂ ತಿಂಗಳ ಸಂಬಳ ಸಂಪಾದಿಸುವವರು. ಮಕ್ಕಳನ್ನು ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಿದವರು. ಎಷ್ಟು ಬಂದರೂ ದುಡ್ಡು ಕಹಿಯಾಗುವುದುಂಟೆ? ಇಂಥವರಿಗೆ ಹುದ್ದೆಯ ಕಿರೀಟ ಇರುವುದರಿಂದ ಟೊಪ್ಪಿ ಹಾಕುವ ಕೆಲಸವೂ ಸುಲಭವಾಗುತ್ತದೆ. ( ಉಪನ್ಯಾಸಕ ವೃತ್ತಿಯನ್ನು ತಮ್ಮ ಉಪವೃತ್ತಿಗೆ ಗುಜ್ಜು ಮಾಡಿಕೊಳ್ಳುವ ಇಂಥವರ ಬಗ್ಗೆ ಡಾ.ಬಿ.ಜಿ.ಎಲ್.ಸ್ವಾಮಿಯವರು ತಮ್ಮ “ಮೈಸೂರು ಡೈರಿ” ಪುಸ್ತಕದಲ್ಲಿ ಸೊಗಸಾಗಿ ಬರೆದಿದ್ದಾರೆ). ಪುಸ್ತಕ ಮಾರಿದವರಿಗೆ ಶೇ. ೪೦ರ ವರೆಗೂ ಕಮಿಷನ್ ಇದೆಯಂತೆ: ಪ್ರವಾಸ ಮುಂತಾದ ಬೋನಸ್ಸೂ ಇದೆಯಂತೆ. ಎಸ್.ವಿ.ಎಸ್. ಕಾಲೇಜಿನ ಉಪನ್ಯಾಸಕರೊಬ್ಬರು ಈ ಪ್ರವಾಸದ ಬೋನಸ್ಸನ್ನೂ ಗಿಟ್ಟಿಸಿಕೊಂಡಿದ್ದಾರಂತೆ! ಈ ಉಪನ್ಯಾಸಕ ನಾಮಕ ಖದೀಮ ಏಜೆಂಟರುಗಳು ಯಾರನ್ನಾದರೂ ಮಂಗ ಮಾಡಿ, ಆವರ ದುಡ್ಡು ನುಂಗಿ ಮಿಣ್ಣಗೆ ಮೀಸೆಯಡಿಯಲ್ಲಿಯೇ ನಗುತ್ತಿರುವ ಚಿತ್ರವನ್ನು ನನ್ನ ಮನಸ್ಸು ಯಾವಾಗಲೂ ಕಲ್ಪಿಸಿಕೊಂಡು ವ್ಯಗ್ರಗೊಳ್ಳುತ್ತದೆ. ದುಡ್ಡು ಕೊಟ್ಟು ಪುಸ್ತಕ ಕೊಂಡ ಬಕರಾಗಳನ್ನು ನೆನೆಸಿ ದುಃಖ ಉಕ್ಕಿ ಬರುತ್ತದೆ!
*******************
ಹೋಗಲಿ ಎಂದರೆ ಈ ಪುಸ್ತಕಗಳಿಂದ ಏನಾದರೂ ಪ್ರಯೋಜನವಿದೆಯೆ? ಒಂದನೇ ತರಗತಿಯ ಮಗುವಿಗೆ ಶಾಲೆಯಲ್ಲಿ ಆದರದ್ದೇ ಆದ ಬೇರೆ ಪುಸ್ತಕಗಳಿರುತ್ತವೆ. ಮನೆಗೆ ಬಂದರೆ ಗಂಟೆಗಟ್ಟಲೆ ಹೋಮ್ ವರ್ಕ್ ಇರುತ್ತದೆ. (ನಾನು ಇಂಗ್ಲಿಷ್ ಮೀಡಿಯಂ ಮಕ್ಕಳ ಬಗ್ಗೆ ಹೇಳುತ್ತಿದ್ದೇನೆ. ಈ ಪುಸ್ತಕ ಕೊಂಡುಕೊಳ್ಳುವ ವರ್ಗದ ಜನ ಎಂದಾದರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿಯಾರೆ? ಇಸ್ಸಿ!) ತಂದೆಯೋ ತಾಯಿಯೋ ಆ ಪುಸ್ತಕಗಳನ್ನು ಓದಿ, ಮಗುವಿಗೆ ಹೇಳಿಕೊಡಬೇಕು. ಇದು ಎಂದಾದರೂ ಸಾಧ್ಯವೆ? ಈ ನಡುವೆ ಅಷ್ಟು ದುಬಾರಿಯ ಪುಸ್ತಕ ಕೊಂಡ ಮೇಲೆ, ಅವುಗಳನ್ನು ಸುರಕ್ಷಿತವಾಗಿ ಇಡಬೇಡವೆ? ಆದಕ್ಕೊಂದು ಆಲ್ಮೇರವೋ ಎಂತದೋ ಸುಡುಗಾಡು. ಆಂತಿಮವಾಗಿ, ಕೊಂಡವರಿಗೆ ತಮ್ಮ ಮೂರ್ಖತನದ ಸ್ಮಾರಕವಾಗಿ ಈ ಪುಸ್ತಕಗಳು ಉಳಿದುಕೊಳ್ಳುತ್ತವೆ. ಅಷ್ಟರಮಟ್ಟಿಗೆ ಅವುಗಳನ್ನು ಕೊಂಡದ್ದು ಸಾರ್ಥಕವೇ ಸರಿ. ಈ ಯಾವ ವಿಷಯವೂ ಪುಸ್ತಕದ ಏಜೆಂಟರಿಗೆ ಗೊತ್ತಿಲ್ಲದ್ದಲ್ಲ. ಆದರೆ ಇಷ್ಟು ಸುಲಭದಲ್ಲಿ, ಇನ್ನೊಬ್ಬರಿಗೆ ಮೋಸ ಮಾಡಿದ ಸಂತೋಷವೂ, ದುಡ್ಡೂ ಮತ್ತೆಲ್ಲಿ ಸಿಗಲು ಸಾಧ್ಯ?
******************
ನಾನು ಆ ಗೃಹಿಣಿಗೆ ಹೇಳಿದೆ: “ನೀವು ಹಣ ಖರ್ಚು ಮಾಡಿ ನಿಮ್ಮ ಮಗಳನ್ನು ಬುದ್ಧಿವಂತೆಯಾಗಿಸುವ ಪ್ರಯತ್ನ ಮಾಡುತ್ತಿದ್ದೀರಿ. ಹಣವೂ ಉಳಿಯಬೇಕು, ಮಗಳು ಬುದ್ಧಿವಂತೆಯೂ ಆಗಬೇಕು, ಅಂಥದೊಂದು ಉಪಾಯ ಹೇಳುತ್ತೇನೆ. ನಾವು ಅದೇ ಉಪಾಯ ಮಾಡಿದ್ದೆವು. ನೀವೂ ಮಾಡುವುದಾದರೆ ಮಾಡಿ”
“ಏನು?”
“ನಿಮ್ಮ ಮಕ್ಕಳ ಪಿ.ಯು.ಸಿ. ಮುಗಿಯುವವರೆಗೂ ಮನೆಗೆ ಟಿವಿ ತರಬೇಡಿ. ಹಣವೂ ಉಳಿಯಿತು. ಮಕ್ಕಳಿಗೆ ಓದಲು ಸಮಯವೂ ಸಿಕ್ಕಿತು”
ಎಷ್ಟೇ ದಡ್ಡರಾದರೂ, ಇಂಥ ಅಪ್ರಾಯೋಗಿಕ ಸಲಹೆಯನ್ನು ಒಪ್ಪುವವರುಂಟೆ?
“ಟೀವಿ ದೊಡ್ಡವರಿಗೆ ಬೇಕಲ್ಲ” ಎಂದರು ಆಕೆ ನಿರಾಶೆಯಿಂದ.
***

ಪ್ರಿಯರೇ
ಈ ಪುಸ್ತಕ ವ್ಯಾಪಾರಿಗಳು ಯಾವ ಸಂಕೋಚವಿಲ್ಲದೆ ನನ್ನಂಗಡಿಗೂ ನುಗ್ಗುತ್ತಿರುತ್ತಾರೆ. ನಿಜವಾಗಿ ಹೇಳಬೇಕೆಂದರೆ ಹಾಗೆ ನುಗ್ಗುವವರು ತೀರಾ ಮುಗ್ಧರು, ನಿಜ ಜೀವನದಲ್ಲಿ ಸರಿಯಾದ ಪುಸ್ತಕದಂಗಡಿ ನೋದಿದ್ದಾಗಲೀ ಅದರ ಕುರಿತು ವಿಚಾರಮಾಡಿದ್ದಾಗಲೀ ಇರುವುದೇ ಇಲ್ಲ. ಅವರು ಅವರಿಗೆ ಸಿಕ್ಕ ತರಬೇತಿ ಬಲದಲ್ಲಿ ಎಷ್ಟೋ ಸಲ ನನಗೇ ಸವಾಲು ಹಾಕುವುದೂ ಇರುತ್ತದೆ “ಸಾರ್, ಇದನ್ನು ನಾವು ನಿಮಗೆ ೭೫% ರಿಯಾಯ್ತಿ ದರದಲ್ಲಿ ಕೊಡುತ್ತೇವೆ. ನೀವು ಎಷ್ಟಕ್ಕಾದರೂ ಮಾರಿಕೊಳ್ಳಬಹುದು. . . . . .” ಹೀಗೆ ಇವರು ಮಾರಿಕೊಂಡು ಬರುವ ಪುಸ್ತಕಗಳ ನಿಜ ನೆಲೆ, ಬೆಲೆ ಇವರಿಗೆ ದೇವರಾಣೆ ತಿಳಿದಿರುವುದಿಲ್ಲ. ಬಿಡು ಸಮಯದಲ್ಲಿ ಮನೆಪಾಠ ಹೇಳುವುದರಿಂದ ತೊಡಗಿ ಕುರಿ ನಡೆಸುವ, ಆಟೋ ರಿಕ್ಶಾ ಕೊಂಡು ಚಾಲಕರಿಗೆ ಬಾಡಿಗೆ ಮೇಲೆ ಕೊಡುವ ಹಲವು ಉಪಾಧ್ಯಾಯರುಗಳನ್ನು ನೋಡಿರುವ ನನಗೆ ‘ಪುಸ್ತಕ ವ್ಯಾಪಾರ’ ನಡೆಸುವವರ ಬಗ್ಗೆ ಏನೂ ಆಶ್ಚರ್ಯವಾಗಲಿಲ್ಲ. ಮತ್ತೆ ಈ ಪುಸ್ತಕಗಳ ಹಿನ್ನೆಲೆ ನನಗೆ ಇದುವರೆಗೆ ತಿಳಿದುಕೊಳ್ಳುವುದು ಆಗಲಿಲ್ಲ. ಇನ್ನು ನಿಮ್ಮ ಪರಿಚಿತರು ಡಬ್ಬಲ್ ಧಮಾಕಾ ಅನುಭವಿಸುತ್ತಾರೋ ಎಂಬ ಆತಂಕ ನನಗಿದ್ದೇ ಇದೆ.( ಪುಸ್ತಕದ ಬಗ್ಗೆ ಮರುಳಾದದ್ದಲ್ಲದೆ ಆ ವಿಚಾರದಲ್ಲಿ ಕೊಟ್ಟ ಮುಂಗಡವನ್ನೂ ಕಳೆದುಕೊಳ್ಳುತ್ತಾರೋಂತ) ಬೇರೇನು ಹೇಳಲಿ.
ಇಂತು ವಿಶ್ವಾಸಿಅಶೋಕವರ್ಧನ

ಟೊಪ್ಪಿ ಹಾಕು -ಒಂದು ವಿವರಣೆ
ಟೊಪ್ಪಿ ಹಾಕು ಎಂಬ ಪದಗುಚ್ಛವನ್ನು ನಾವೆಲ್ಲ ಯಾವಾಗಲೂ ಬಳಸುತ್ತೇವೆ. ಆದರೆ ಅದರ ಆರ್ಥದ ಹಿನ್ನೆಲೆ ಸ್ವಾರಸ್ಯವಾದುದು. ನನ್ನ ಆರ್ಥ ವಿವರಣೆ ತಪ್ಪಾದರೆ “ಪಂಡಿತ”ರು ಕ್ಷಮಿಸಬೇಕು.
ಸಣ್ಣವರಿದ್ದಾಗ ನಾವೆಲ್ಲ ಸ್ಕೂಲಿನಲ್ಲಿ ಟೊಪ್ಪಿ ಆಟ ಆಡುತ್ತಿದ್ದೆವು. ಆ ಕಾಲದ ಬಡತನಕ್ಕೆ ತಕ್ಕ ಆಟ ಆದು. ಬ್ಯಾಟು, ಬಾಲು, ಪ್ಯಾಡು ಹೀಗೆ ಯಾವ ದುಬಾರಿ ಸಲಕರಣೆಗಳೂ ಆ ಆಟಕ್ಕೆ ಬೇಕಾಗಿಲ್ಲ. ಆಡುವವರ ಪೈಕಿ ಯಾರಾದರೊಬ್ಬ ಹುಡುಗನ ಒಂದು ಟೊಪ್ಪಿ ಇದ್ದರಾಯಿತು! ಆಂದ ಹಾಗೆ ಆಗ ನಾವೆಲ್ಲ ಟೊಪ್ಪಿ ಹಾಕಿಕೊಂಡೇ ಸ್ಕೂಲಿಗೆ ಹೋಗುತ್ತಿದ್ದೆವು.[ನಾವು ಅಣ್ಣ ತಮ್ಮಂದಿರಿಗೆ ಟೊಪ್ಪಿ ಇನ್ನೂ ಒಂದು ಉಪಕಾರ ಮಾಡುತ್ತಿತ್ತು. ಆಗ ನಮಗೆ ಜುಟ್ಟು (ದ.ಕ.ದವರ ಶೆಂಡಿ) ಇತ್ತು. ಅದನ್ನು ಮುಚ್ಚಿಕೊಳ್ಳಲು ಟೊಪ್ಪಿ ಸಹಕಾರಿಯಾಗಿತ್ತು]. ೧೯೫೫-೧೯೬೦ರ ಕಾಲದ ಮಾತು ಇದು.
ಆಟಕ್ಕೆ ಇಂತಿಷ್ಟೇ ಜನ ಅನ್ನುವ ನಿಯಮವೂ ಇಲ್ಲ. ಒಂದೋ ಎರಡೋ ಹುಡುಗರು ಹೆಚ್ಚಿದ್ದರೂ ಆಯಿತು, ಕಡಿಮೆ ಇದ್ದರೂ ಆಯಿತು. ಇದ್ದಷ್ಟು ಹುಡುಗರು ದುಂಡಗೆ (ವೃತ್ತಾಕಾರದಲ್ಲಿ ಎಂದರ್ಥ; ಸಾಗರದ ಕೆಲವು ಕಡೆ ದುಂಡಗೆ ಎಂಬ ಪದಕ್ಕೆ ಬತ್ತಲೆ ಎಂಬರ್ಥವಿದೆ, ಅದಲ್ಲ!) ಕೂರಬೇಕು. ಯಾರಾದರೊಬ್ಬ ಹುಡುಗ ಒಂದು ಟೊಪ್ಪಿ ಕೈಯಲ್ಲಿ ಹಿಡಿದುಕೊಂಡು ವೃತ್ತದ ಸುತ್ತ ಓಡಲು ಶುರು ಮಾಡುತ್ತಾನೆ. ಅವನು ಟೊಪ್ಪಿ ಯಾರ ಹಿಂದೆ ಬೀಳಿಸುತ್ತಾನೆ ಎಂಬುದನ್ನು ಕೂತವರೆಲ್ಲ ಸರಿಯಾಗಿ ಗಮನಿಸುತ್ತಿರಬೇಕು. ಯಾಕೆಂದರೆ ಯಾರ ಹಿಂದೆ ಟೊಪ್ಪಿ ಬಿದ್ದಿರುತ್ತದೋ ಅವರಿಗೆ ಅವನು ಮತ್ತೊಂದು ಸುತ್ತು ಬರುವಾಗ ಟೊಪ್ಪಿಯಿಂದ ಸಮಾ ಬಾರಿಸುತ್ತಾನೆ! ಟೊಪ್ಪಿ ಯಾರ ಹಿಂದೆ ಬಿದ್ದಿರಬಹುದು ಎಂದು ಲೆಕ್ಕ ಹಾಕುವ ಭರದಲ್ಲಿ ಅದು ನಮ್ಮ ಹಿಂದೆಯೇ ಬಿದ್ದಿರುವುದು ಗೊತ್ತೇ ಅಗುವುದಿಲ್ಲ! ಅದು ಗೊತ್ತಾಗುವುದು ಟೊಪ್ಪಿಯ ರಪ ರಪ ಪೆಟ್ಟು ಬಿದ್ದಾಗಲೇ!
ಹೀಗೆ ಎದುರಾ ಎದುರಾ, ಗೊತ್ತು ಮಾಡಿಯೇ ಮೋಸ ಮಾಡುವುದಕ್ಕೆ “ಟೊಪ್ಪಿ ಹಾಕು” ಎಂಬ ಪದಗುಚ್ಛ ಸಾರ್ಥಕವಾಗಿ ಬಳಕೆಗೆ ಬಂದಿದೆ.

ಭಿನ್ನ ಮತ – ಪರಿಹಾರ
ಎಲ್ಲಿಂದ ಬಂತು ಈ ಭಿನ್ನಮತ ಭೂತ?
ಏನು ಕಾರಣವಿದಕೆ ಏನು ಪರಿಹಾರ?
ಕೇಳಲೆಡ್ಡಿಯು ಕವಡೆ ಹಾಕಿದನು ಭಟ್ಟ
ಸ್ತ್ರೀಮೂಲವೀ ದೋಷ, ಪರಿಹಾರ ಕಷ್ಟ!