ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. “ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?” ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ “ನಿಮ್ಮ ಕಾನೂನು ನಿಮಗಿರಲಿ……” ಲೇಖನದಲ್ಲಿ “ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ” ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!
೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!
೨೦೦೭ರ ಸರ್ಕಾರಿ ಆಜ್ಞೆಯಲ್ಲಿ “೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.
೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. “ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ” ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ “ತಗ್ಗು ಪ್ರದೇಶ”ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!
೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.
ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ “ಮಳೆ ನೀರು ಸಂಗ್ರಹಿಸುತ್ತೇವೆ” ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.
ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: “ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?”
ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ”
ದಿವಾಕರ್: ಓ ಹಾಗಿತ್ತ?
ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.
ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.
ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ
ದಿವಾಕರ್: ನಿಮ್ಮ ಬ್ಲಾಗ್ ಯಾವುದು”
ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ
ದಿವಾಕರ್: ಸರಿ ಸರಿ ನೋಡುತ್ತೇನೆ
ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: “ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ
ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ
ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ….
ನಾನು: ಸರಿ ಹಾಗಾದರೆ.
ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.
ನಾನು : ಥ್ಯಾಂಕ್ಸ್!
ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.