ವ|| ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯಾಗ್ರದೊಳೆ ಸಿರಿಯೋಲಗಂಗೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು-
(ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದ ಎರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯ ಅಗ್ರದೊಳೆ ಸಿರಿ ಓಲಗಂ ಕೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು)
ಹಾಗೆ ಸೊಗಯಿಸುವ ಅಚ್ಚ ಬೆಳದಿಂಗಳಿನಲ್ಲಿ, ಸುಣ್ಣ ಬಳಿದು ಬಿಳಿಯಾಗಿಸಿದ ಎತ್ತರವಾದ ಉಪ್ಪರಿಗೆಯ ಎರಡನೇ ಹಂತದ ಹಜಾರದ ಎದುರಿನ ಸೊಗಸಾದ ಉಪ್ಪರಿಗೆಯಲ್ಲಿ ವೈಭವದ ಓಲಗ ಕೊಟ್ಟು, ಅರ್ಜುನನೊಂದಿಗೆ ಪಟ್ಟಾಂಗ ಹೊಡೆಯುತ್ತ
ಕಂ|| ಆಗಳನಂತನನಂತಫ
ಣಾಗಣಮಣಿ ಕಿರಣಮೆಸೆಯೆ ದುಗ್ಧಾರ್ಣವದೊಳ್|
ರಾಗದಿನಿರ್ಪಂತಿರ್ದಂ
ಭೋಗಿ ತೞತ್ತೞಿಸಿ ಬೆಳಗೆ ಕೆಯ್ದೀವಿಗೆಗಳ್|| ೫೩||
(ಆಗಳ್ ಅನಂತನ್ ಅನಂತಫಣಾಗಣಮಣಿ ಕಿರಣಂ ಎಸೆಯೆ ದುಗ್ಧ ಅರ್ಣವದೊಳ್ ರಾಗದಿನ್ ಇರ್ಪಂತೆ ಇರ್ದಂ ಭೋಗಿ ತೞತ್ತೞಿಸಿ ಬೆಳಗೆ ಕೆಯ್ ದೀವಿಗೆಗಳ್)
ಆಗ, (ಅಲ್ಲಿ) ಅನಂತನು, ಹಾಲಿನ ಕಡಲಿನಲ್ಲಿ, ಲೆಕ್ಕವಿಲ್ಲದ ತನ್ನ ಹೆಡೆಗಳ ಗುಂಪಿನ ಮಣಿಗಳ ಕಿರಣಗಳನ್ನು ಹೊಮ್ಮಿಸುತ್ತಾ ಮುದದಿಂದ ಇರುವಂತೆ, ಭೋಗಿಯಾದ ಅರ್ಜುನನು ಬೆಳಗುವ ಪಂಜುಗಳ ನಡುವೆ ಥಳಥಳನೆ ಹೊಳೆಯುತ್ತಿದ್ದನು.
(ಟಿಪ್ಪಣಿ: ಇಲ್ಲಿ ಕವಿ ಅರ್ಜುನನನ್ನು ʼಭೋಗಿʼ ಎಂದಿದ್ದಾನೆ. ಈ ಶಬ್ದಕ್ಕೆ ಅನೇಕ ಅರ್ಥಗಳಿವೆ. ʼಸುಖವನ್ನು ಅನುಭವಿಸುವವನುʼ ಎಂಬುದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಅರ್ಥ. ʼಕಾಮಿʼ, ʼಹಾವುʼ ಎಂಬ ಅರ್ಥಗಳನ್ನೂ ಶಬ್ದಕೋಶದಲ್ಲಿ ಕೊಡಲಾಗಿದೆ.)
ವ|| ಆಗಳ್
ಕಂ|| ಅತ್ತ ಸುಭದ್ರೆಯುಮೊಡಲುರಿ
ಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋ|
ಡುತ್ತಿರೆ ಸುಸಾಳಭಂಜಿಕೆ
ಗೆತ್ತುದು ಕೆಳದಿಯರ ತಂಡಮಾಕೆಯ ರೂಪಂ|| ೫೪||
(ಅತ್ತ ಸುಭದ್ರೆಯುಂ ಒಡಲು ಉರಿಯುತ್ತಿರೆ, ಮರವಟ್ಟು ವಿಜಯನ್ ಇರ್ದತ್ತಲೆ ನೋಡುತ್ತಿರೆ, ಸುಸಾಳಭಂಜಿಕೆಗೆತ್ತುದು ಕೆಳದಿಯರ ತಂಡಂ ಆಕೆಯ ರೂಪಂ)
ಅತ್ತ ಸುಭದ್ರೆಯ ಮೈ ಸುಡುತ್ತಿತ್ತು! ಮೈ ಮರಗಟ್ಟಿದಂತೆ ಅವಳು ನಿಂತಲ್ಲೇ ನಿಂತು ಅರ್ಜುನನನ್ನೇ ನೋಡುತ್ತಿದ್ದಳು. ಅವಳು ನಿಂತ ಭಂಗಿಯನ್ನು ಕಂಡ ಅವಳ ಗೆಳತಿಯರ ಗುಂಪು ʼಅಲ್ಲೊಂದು ಗೊಂಬೆ ನಿಂತಿದೆʼ ಎಂದು ತಿಳಿಯುವಂತಾಯಿತು!
ಕನ್ನೆತನಂಗೆಯ್ಯಲ್ ಬಗೆ
ಗುನ್ನಾಣ್ ಮಿಗೆ ಮನಮುಮಿೞ್ದುವರಿಯಲ್ ಬಗೆಗುಂ|
ಕನ್ನಡಿಕುಂ ತನ್ನಳಿಪಂ
ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್|| ೫೫||
(ಕನ್ನೆತನಂಗೆಯ್ಯಲ್ ಬಗೆಗುಂ ನಾಣ್, ಮಿಗೆ ಮನಮುಂ ಇೞ್ದುವರಿಯಲ್ ಬಗೆಗುಂ, ಕನ್ನಡಿಕುಂ ತನ್ನ ಅಳಿಪಂ ತನ್ನಲೆ ತಾನ್, ಇಂತು ಕನ್ನೆ ತಳವೆಳಗಾದಳ್)
ನಾಚಿಕೆ ಸುಭದ್ರೆಗೆ ʼನಿನ್ನ ಕನ್ನೆತನವನ್ನು ಉಳಿಸಿಕೋʼ ಎಂದು ಹೇಳುತ್ತಿತ್ತು! ಆದರೆ ಅವಳ ಮನಸ್ಸು ಅವಳನ್ನು ಅರ್ಜುನನೆಡೆಗೆ ಎಳೆಯುತ್ತಿತ್ತು! ಅವಳೊಳಗಿನ ಲಂಪಟತನಕ್ಕೆ ಕನ್ನಡಿ ಹಿಡಿಯುತ್ತಿತ್ತು! ಇದರಿಂದಾಗಿ ಆ ಕನ್ಯೆ ಸುಭದ್ರೆ ತನ್ನೊಳಗೆ ತಾನೇ ಗೊಂದಲಕ್ಕೆ ಒಳಗಾದಳು.
ನುಡಿಯಿಸಿ ಕೇಳ್ಗುಂ ಹರಿಗನ
ಪಡೆಮಾತನೆ ಮಾತು ತಪ್ಪೊಡಂ ಮತ್ತಮದಂ|
ನುಡಿಯಿಸುಗುಂ ಮೊದಲಿಂದಾ
ನುಡಿ ಪಱಿಪಡೆ ಮುಳಿದು ನೋಡುಗುಂ ಕೆಳದಿಯರಂ|| ೫೬||
ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ, ಮಾತು ತಪ್ಪೊಡಂ ಮತ್ತಂ ಅದಂ ನುಡಿಯಿಸುಗುಂ ಮೊದಲಿಂದಂ, ಆ ನುಡಿ ಪಱಿಪಡೆ ಮುಳಿದು ನೋಡುಗುಂ ಕೆಳದಿಯರಂ!
ಗೆಳತಿಯರ ಬಾಯಲ್ಲಿ ಅರ್ಜುನನ ಸುದ್ದಿಯನ್ನು ಹೇಳಿಸಿಕೊಂಡು ಕೇಳುತ್ತಾಳೆ; ಅವರು ಹೇಳುತ್ತಿರುವಾಗ ತಪ್ಪಿದರೆ ಪುನಃ ಮೊದಲಿಂದ ಅದನ್ನೇ ಹೇಳಿಸಿ ಕೇಳುತ್ತಾಳೆ; ಹೇಳುವ ಗೆಳತಿಯರು ಮತ್ತೆ ತಪ್ಪಿದರೆ ಅವರ ಕಡೆ ಸಿಟ್ಟಿನಿಂದ ನೋಡುತ್ತಾಳೆ!
ಅಱಿಮರುಳಂತುಟೆ ಸೊರ್ಕಿನ
ತೆಱನಂತುಟೆ ಮನಮೊಱಲ್ವುದೆರ್ದೆಯುರಿವುದು ಮೆ|
ಯ್ಯೆಱಗುವುದು ಪದೆವುದಾನಿದ
ನಱಿಯೆನಿದೇಕೆಂದು ಕನ್ನೆ ತಳವೆಳಗಾದಳ್|| ೫೭||
ಅಱಿಮರುಳ್ ಅಂತುಟೆ? ಸೊರ್ಕಿನ ತೆಱನ್ ಅಂತುಟೆ? ಮನಮೊಱಲ್ವುದು! ಎರ್ದೆ ಉರಿವುದು! ಮೆಯ್ ಎಱಗುವುದು! ಪದೆವುದು! ಆನ್ ಇದನ್ ಅಱಿಯೆನ್! ಇದೇಕೆಂದು ಕನ್ನೆ ತಳವೆಳಗಾದಳ್
ಹುಚ್ಚು ಎಂದರೆ ಹಾಗಿರುತ್ತದೆಯೆ? ಮದವೇರಿದರೆ ಹಾಗಾಗುತ್ತದೆಯೆ? ಮನಸ್ಸು ಚೀರುತ್ತಿದೆ, ಎದೆ ಉರಿಯುತ್ತಿದೆ, ಮೈ ಮಾಲುತ್ತಿದೆ, ಬಯಸುತ್ತಿದೆ! ನನಗೇನೂ ತಿಳಿಯುತ್ತಿಲ್ಲವಲ್ಲ! ಏಕೆ ನನಗೆ ಹೀಗಾಗುತ್ತಿದೆ? ಎಂದು ಸುಭದ್ರೆ ಪೇಚಾಡಿದಳು.
ಉ|| ಆನೆಯನೇಱಿ ಸೌಷ್ಠವದೆ ಬರ್ಪರಿಕೇಸರಿಯೊಂದು ಗಾಡಿಯು
ದ್ದಾನಿ ತಗುಳ್ದು ಕಣ್ಣೊಳೆ ತೊೞಲ್ದೆರ್ದೆಯೊಳ್ ತಡಮಾಡೆ ಬೇಟದು |
ದ್ದಾನಿಯನಾನೆ ಮನ್ಮಥ ಮಹೀಭುಜನೋವದೆ ತೋಱಿಕೊಟ್ಟುದೊಂ
ದಾನೆಯೆ ತನ್ನನಾನೆಗೊಲೆಗೊಂದಪುದೆಂದು ಲತಾಂಗಿ ಬೆರ್ಚಿದಳ್|| ೫೮ ||
ಆನೆಯನ್ ಏಱಿ ಸೌಷ್ಠವದೆ ಬರ್ಪ ಅರಿಕೇಸರಿಯ ಒಂದು ಗಾಡಿಯ ಉದ್ದಾನಿ ತಗುಳ್ದು, ಕಣ್ಣೊಳೆ ತೊೞಲ್ದು, ಎರ್ದೆಯೊಳ್ ತಡಮಾಡೆ, ಬೇಟದುದ್ದಾನಿಯನ್ ಆನೆ, ಮನ್ಮಥ ಮಹೀಭುಜನ್ ಓವದೆ ತೋಱಿಕೊಟ್ಟುದೊಂದು ಆನೆಯೆ ತನ್ನನ್ ಆನೆಗೊಲೆಗೊಂದಪುದು ಎಂದು ಲತಾಂಗಿ ಬೆರ್ಚಿದಳ್
ಆನೆಯನ್ನು ಏರಿ ಗತ್ತಿನಿಂದ ಬರುವ ಅರಿಕೇಸರಿಯ ತುಂಬುಚೆಲುವಿನ ರೂಪು ನನ್ನ ಮನವನ್ನು ಬಲವಾಗಿ ಹಿಡಿದಿದೆ; ಮತ್ತೆ ಮತ್ತೆ ಅದು ಕಣ್ಣೆದುರು ಸುಳಿಯುತ್ತದೆ; ಎದೆಯಲ್ಲಿ ಆಡುತ್ತದೆ; ಕೂಟದ ಬಯಕೆಯನ್ನು ಹೆಚ್ಚಿಸುತ್ತದೆ; ಮನ್ಮಥರಾಜನು ಕರುಣೆ ಇಲ್ಲದೆ ನನ್ನ ಮೇಲೆ (ಅರ್ಜುನನ ಚೆಲುವೆಂಬ) ಆ ಆನೆಯನ್ನು ಛೂ ಬಿಟ್ಟಿದ್ದಾನೆ. ಅದು ನನ್ನನ್ನು ಈಗ ಕೊಂದೇ ಬಿಡುತ್ತದೆ ಎಂದು ಸುಭದ್ರೆ ಹೆದರಿಹೋದಳು.
ಮ|| ಮನಮಾರಾಧಿತ ಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾ
ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ|
ದನ ಕರ್ಪೂರ ಮೃಣಾಳನಾಳಮೆ ಪೊದಳ್ದಿಧ್ಮಂಗಳಿಂತಾಗೆ ತಾ
ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್|| ೫೯||
ಮನಂ ಆರಾಧಿತ ಹೋಮಭೂಮಿ, ಪಶುಗಳ್ ಕಾಮಾತುರರ್, ಬಂದ ಮಾವು ಅನಿತುಂ ಸ್ಥಾಪಿತ ಯೂಪಕೋಟಿ, ಬಳವತ್ ಕಾಮಾಗ್ನಿ ಹೋಮಾಗ್ನಿ, ಚಂದನ ಕರ್ಪೂರ ಮೃಣಾಳನಾಳಮೆ ಪೊದಳ್ದ ಇಧ್ಮಂಗಳ್ ಇಂತಾಗೆ ತಾನ್ ಇನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್
ನನ್ನ ಮನಸ್ಸೇ ಪೂಜೆಗೊಳ್ಳುವ ಹೋಮಭೂಮಿ, ಕಾಮಾತುರವೇ ಬಲಿಗೆ ಸಿದ್ಧವಾದ ಪ್ರಾಣಿಗಳು, ಚಿಗುರು, ಹೂ, ಕಾಯಿಗಳಿಂದ ಶೋಭಿಸುವ ಮಾವಿನ ಮರಗಳೇ ಬಲಿಗಂಬಗಳು. ನನ್ನೊಳಗಿನ ಕಾಮದ ಬೆಂಕಿಯೇ ಹೋಮದ ಬೆಂಕಿ, ಚಂದನ, ಕರ್ಪೂರ, ತಾವರೆಯ ದಂಟುಗಳೇ ಹರಡಿಟ್ಟ ಸೌದೆಗಳು ಹೀಗೆ ಇಡಿಯ ನಾನೇ ಒಂದು ಕಾಮನ ಯಜ್ಞವಾಗಿಬಿಟ್ಟಿದ್ದೇನೆ ಎಂದು ಸುಭದ್ರೆಯು ಆ ಬೆಳದಿಂಗಳಿನಲ್ಲಿ ಕಳವಳಿಸಿದಳು.
ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ ಸ್ವೇದ ವೈವರ್ಣ್ಯ ಸಂತಾಪಾನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಱುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-
ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ, ಮನೋವೈಕಲ್ಯ, ರೋಮಾಂಚಕ, ಸ್ತಂಭಕ, ಕಂಪ, ಸ್ವೇದ, ವೈವರ್ಣ್ಯ, ಸಂತಾಪ, ಅನಾಹಾರ, ವ್ಯಾಮೋಹ, ಗದ್ಗದ, ಅಶ್ರುಮೋಕ್ಷ, ಮೂರ್ಛಾದಿ ನಾನಾ ವಿಕಾರಂಗಳನ್ ಒಡನೊಡನೆ ತೋಱುವುದುಂ ಆಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-
ಹಾಗೆ ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂದ ನಿಂತಲ್ಲಿಯೇ ನಿಂತ ದಿವ್ಯಗ್ರಹದಂತೆ, ಕಾಮಗ್ರಹವು ಹಿಡಿದುಕೊಂಡದ್ದರಿಂದ ನಿಂತಲ್ಲೇ ನಿಂತು ಮರುಳು, ರೋಮಾಂಚನ, ನಡುಗುವುದು, ಬೆವರುವುದು ಹೀಗೆ ಹಲವು ಬಗೆಯ ವಿಕಾರಗಳನ್ನು ತೋರುತ್ತಿದ್ದಾಗ, ಆಕೆಯ ದಾದಿಯ ಮಗಳಾದ ಚೂತಲತಿಕೆ ಎಂಬುವಳು ಕಂಡು-
ಚಂ|| ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು
ಣ್ಮಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ|
ದಿದ ಲತಿಕಾಂಗಮೊಂದಿದ ವಿಕಾರಮದೀಕೆಯೊಳೀಗಳಾದುದಿಂ
ತಿದು ಕುಸುಮಾಸ್ತ್ರನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ|| ೬೦||
ಪದೆವ ಎರ್ದೆ ಬತ್ತೆ, ಕೆತ್ತುವ ಅಧರಂ, ದೆಸೆಗೆಟ್ಟ ಅಲರ್ಗಣ್ಣ ನೋಟಂ ಉಣ್ಮಿದ ಬೆಮರ್, ಓಳಿವಟ್ಟ ನಿಡುಸುಯ್, ತೊದಳಿಂಗೆ ಎಡೆಗೊಂಡ ಮಾತು, ಕುಂದಿದ ಲತಿಕಾಂಗಂ, ಒಂದಿದ ವಿಕಾರಂ ಅದು ಈಕೆಯೊಳ್ ಈಗಳ್ ಆದುದು ಇಂತಿದು ಕುಸುಮಾಸ್ತ್ರನೆಂಬ ಅದಟನ್ ಇಕ್ಕಿದ ಸೊರ್ಕಿನ ಗೊಡ್ಡಂ ಆಗದೇ
ಬಯಸಿ ಒಣಗಿದ ಮನ, ಅದುರುವ ತುಟಿಗಳು, ನೆಲೆ ಇಲ್ಲದೆ ಅತ್ತಿತ್ತ ಅಲೆಯುವ ಅರಳಿದ ಕಣ್ಣುಗಳು, ಸುರಿಯುವ ಬೆವರು, ಬೆನ್ನು ಬೆನ್ನಿಗೆ ಬಿಡುವ ನಿಟ್ಟುಸಿರು, ತೊದಲುಮಾತು, ಕುಂದಿ ಹೋದ ಮೈ, ಉಂಟಾದ ವಿಕಾರ ಇವೆಲ್ಲ ಈಕೆಯಲ್ಲಿ ಈಗ ಕಾಣಿಸುತ್ತಿವೆ. ಇವೆಲ್ಲವೂ ದುಷ್ಟನಾದ ಆ ಮನ್ಮಥನ ಸೊಕ್ಕಿನ ಚೇಷ್ಟೆಗಳೇ ಅಲ್ಲವೆ?
ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳ್ –
ಎಂದು ತನ್ನೊಳೆ ಬಗೆದು ಮತ್ತಂ ಇಂತೆಂದಳ್
ಎಂದು ತನ್ನೊಳಗೇ ಆಲೋಚಿಸಿಕೊಂಡು, ಮತ್ತೆ ಹೀಗೆಂದಳು:
ಚಂ|| ಕೞಿಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್
ಗೞಿಯಿಸೆ ಕೆಂಪು ಕಣ್ಗಳ ಮೊದಲ್ಗಳೊಳೊಯ್ಯನೆ ತೋಱೆ ಬಾಡಿ ಪಾ|
ಡೞಿದು ಬೞಲ್ದು ಜೋಲ್ದಿರವು ಮೆಯ್ಯೊಳೆ ಮೆಯ್ವಿಡಿದೆನ್ನ ಕಣ್ಗಳೊಳ್
ಸುೞಿದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ|| ೬೧||
ಕೞಿಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್, ಗೞಿಯಿಸೆ ಕೆಂಪು ಕಣ್ಗಳ ಮೊದಲ್ಗಳೊಳ್, ಒಯ್ಯನೆ ತೋಱೆ ಬಾಡಿ ಪಾಡೞಿದು ಬೞಲ್ದು ಜೋಲ್ದಿರವು, ಮೆಯ್ಯೊಳೆ ಮೆಯ್ವಿಡಿದು ಎನ್ನ ಕಣ್ಗಳೊಳ್ ಸುೞಿದುವು, ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ
ಸಂಪಗೆಯ ಅಜ್ಜಿ ಹೂವಿನಂತೆ (ಹಳೆಯ ಹೂ) ಮೈ ಬಣ್ಣ ಬಿಳಿಚಿಕೊಂಡಿದೆ; ಕಣ್ಣ ಕೊನೆಗಳಲ್ಲಿ ಕೆಂಪು ಕಾಣಿಸಿಕೊಂಡಿದೆ; ಬಾಡಿ, ಹೊಳಪು ಕಳೆದುಕೊಂಡು, ಬಳಲಿ ಜೋಲಿದ ದೇಹದಲ್ಲಿ ಇವೆಲ್ಲವೂ ಮೈತಳೆದು ನನ್ನ ಕಣ್ಣಿಗೆ ಕಾಣುತ್ತಿವೆ; ಕನ್ನೆಯ ಮೊದಲಪ್ರೇಮದ ಲಕ್ಷಣಗಳಿಗೆ ಕನ್ನಡಿ ಹಿಡಿದಿವೆ.
ವ|| ಅದಱಿನೀಕೆಯ ಬಗೆಯನಱಿಯಲ್ವೇೞ್ಕುಮೆಂದು ಮೆಲ್ಲಮೆಲ್ಲನೆ ಕೆಲಕ್ಕೆ ವಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್-
(ಅದಱಿನ್ ಈಕೆಯ ಬಗೆಯನ್ ಅಱಿಯಲ್ ವೇೞ್ಕುಂ ಎಂದು, ಮೆಲ್ಲಮೆಲ್ಲನೆ ಕೆಲಕ್ಕೆ ವಂದು ಕುಂಚದ, ಅಡಪದ, ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದು, ಏಕಾಂತದೊಳ್ ಕನ್ನೆಯನ್ ಇಂತೆಂದಳ್)
ʼಆದ್ದರಿಂದ ಇವಳ ಮನವನ್ನು ತಿಳಿಯಬೇಕುʼ ಎಂದು ಮೆಲ್ಲಮೆಲ್ಲನೆ ಹತ್ತಿರ ಬಂದು, ಕುಂಚದ, ಅಡಪದ, ಡವಕೆಯ ದಾಸಿಯರೆಲ್ಲರನ್ನೂ ಕಣ್ಸನ್ನೆಯಿಂದ ಹೊರಕ್ಕೆ ಕಳುಹಿಸಿ, ಏಕಾಂತದಲ್ಲಿ ಕನ್ಯೆಗೆ ಹೀಗೆ ಹೇಳಿದಳು:
ಚಂ|| ಮೃಗಮದ ಪತ್ರರೇಖೆಗಳನೇಕೆಗೆ ತಾಳ್ದಿರದಾದುವೀ ಕದಂ
ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ|
ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ
ಬಗೆಯೊಳಲಕ್ತಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ೬೨ ||
(ಮೃಗಮದ ಪತ್ರರೇಖೆಗಳನ್ ಏಕೆಗೆ ತಾಳ್ದು ಇರದಾದುವು ಈ ಕದಂಪುಗಳ್? ಉರಂ ಏಕೆ ಹಾರ, ಮಣಿಮಂಜರಿ ಇಲ್ಲದೆ ಬಿನ್ನಗೆ ಇರ್ದುದು? ಈ ಜಗನಂ ಇದೇಕೆ ಹೇಮರಶನಾಧ್ವನಿ ಇಲ್ಲದೆ ಮೂಗುವಟ್ಟುದು? (ಏಕೆ)ಈ ಬಗೆಯೊಳ್ ಅಲಕ್ತಕ ದ್ರವದೊಳ್ ಒಂದದೆ ನಿಂದುವು ಪಾದಪಂಕಜಂ?)
(ಏನೇ ಹುಡುಗೀ ಇದು ನಿನ್ನ ಕತೆ?) ಕೆನ್ನೆಯ ಮೇಲೆ ಕತ್ತುರಿಯಲ್ಲಿ ಬರೆದ ಚಿತ್ರಗಳಿಲ್ಲ! ಎದೆಯ ಮೇಲೆ ಹಾರವಿಲ್ಲ, ಮಣಿಗೊಂಚಲುಗಳಿಲ್ಲ! ಚಿನ್ನದ ಒಡ್ಯಾಣದ ಕಿಣಿಕಿಣಿ ಮಾಡುವ ಸೊಂಟ ಸೊಲ್ಲೆತ್ತುತ್ತಿಲ್ಲ! ಹೆಜ್ಜೆತಾವರೆಗಳಿಗೆ ಅರಗಿನ ರಸದ ಬಣ್ಣ ಬಳಿದಿಲ್ಲ!
ಮ|| ನಗೆಗಣ್ ಸೋರ್ವ ಕದುಷ್ಣ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ
ಕೆಗಳಿಂ ನಾಡೆ ಬೆಡಂಗುಗೆಟ್ಟಿರವಿದಿಂತೇಕಾರಣಂ ಮಜ್ಜನಂ|
ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳ್ಕಿದೇಂ ಕಾಮನಂ
ಬುಗಳತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ|| ೬೩ ||
ನಗೆಗಣ್ ಸೋರ್ವ ಕದುಷ್ಣ ವಾರಿಚಯದಿಂ, ಬಿಂಬಾಧರಂ ಸುಯ್ಯ ಬೆಂಕೆಗಳಿಂ, ನಾಡೆ ಬೆಡಂಗುಗೆಟ್ಟ ಇರವು ಇದು ಇಂತು ಏ ಕಾರಣಂ? ಮಜ್ಜನಂಬುಗದೆ, ಆರೋಗಿಸಲ್ ಒಲ್ಲದೆ ಇರ್ಪ ಇರವು ಇದು ಏಂ? ನಾಣ ಅಳ್ಕು ಇದು ಏಂ? ಕಾಮನಂಬುಗಳ್ ಅತ್ತಿತ್ತ ಎಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ!?
ಯಾವಾಗಲೂ ನಗುತ್ತಿರುವ ಕಣ್ಣುಗಳು ಸುರಿಯುವ ಉಗುರುಬೆಚ್ಚಗಿನ ಕಣ್ಣೀರಿನಿಂದ, ಕೆಂದುಟಿಗಳು ಬಿಸಿಯುಸಿರ ಬೆಂಕಿಯಿಂದ ಬಾಡಿ ಹೋಗಿವೆಯಲ್ಲ? ಏನಿದರ ಕಾರಣ? ಮೀಯದೆ, ಊಟವೊಲ್ಲದೆ ಏಕೆ ಹೀಗಿದ್ದೀಯೆ? ನಾಚಿಕೆ ಕಾಣಿಸುತ್ತಿಲ್ಲವಲ್ಲ? ಅತ್ತಿತ್ತ ಅಲೆಯುವಾಗ ಕಾಮನ ಬಾಣಗಳು ನಿನ್ನನ್ನು ಸೋಂಕಿಲ್ಲ ತಾನೆ!?
ವ|| ಎಂದು ಮುನ್ನಮೆ ಮುಟ್ಟಿ ನುಡಿಯದೆ ಪೊಱಪೊಱಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್-
ಎಂದು ಮುನ್ನಮೆ ಮುಟ್ಟಿ ನುಡಿಯದೆ, ಪೊಱಪೊಱಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ, ಮತ್ತಂ ಇಂತೆಂದಳ್
ಎಂದು ಒಮ್ಮೆಲೆ ನೇರವಾಗಿ ಹೇಳದೆ, ಸುತ್ತಿಬಳಸಿ ಹೇಳಿ, ಹುಡುಗಿಯ ಶಂಕೆಯನ್ನು ಹೋಗಲಾಡಿಸಿ, ನಂತರ ಹೀಗೆಂದಳು:
ಮ|| ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ
ತ್ಕನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ್ದ ಮಾ|
ವಿನ ಪೋೞಂದದ ಕಣ್ಗೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ
ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ ||೬೨||
ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ, ಕನತ್ಕನಕ ಅಂಭೋಜನಿಭ ಆನನಕ್ಕೆ ಪಿರಿದುಂ ದೀನತ್ವಮಂ, ನೀಳ್ದ ಮಾವಿನ ಪೋೞಂದದ ಕಣ್ಗೆ ಬಾಷ್ಪಜಲಮಂ, ಚಿತ್ತಕ್ಕೆ ಸಂತಾಪಮಂ ನಿನಗಂ ಮಾಡಿದನ್ ಆವನ್ ಆತನೆ ವಲಂ ಗಂಧೇಭ ವಿದ್ಯಾಧರಂ
ಮೋಡಗಪ್ಪಿನ ಮುಂಗುರುಳಿನವಳು ನೀನು. ನಿನ್ನ ಬಾಗೆ ಹೂವಿನಂಥ ಈ ಮೈಬಣ್ಣ ಮಾಸಿಹೋಗುವಂತೆ, ಹೊಳೆವ ಈ ಹೊಂದಾವರೆಯಂಥ ಮುಖ ಬಾಡಿಹೋಗುವಂತೆ, ಉದ್ದಕ್ಕೆ ಕೊಯ್ದ ಮಾವಿನ ಹೋಳಿನಂಥ ಈ ಕಣ್ಣುಗಳಲ್ಲಿ ನೀರು ತುಂಬುವಂತೆ, ನಿನ್ನ ಮನಸ್ಸಿಗೆ ತಾಪ ಉಂಟಾಗುವಂತೆ ಮಾಡಿದವನು ಆ ಗಂಧೇಭ ವಿದ್ಯಾಧರನಾದ ಅರ್ಜುನನೇ ತಾನೆ?