ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು, ಈತನುಂ ಎಮ್ಮಂದಿಗನುಂ ಎಮ್ಮ ನಂಟನುಂ  ಅಕ್ಕುಂ ಎಂದು ಮುಗುಳ್ನಗೆ ನಗುತ್ತುಂ ಬರ್ಪನ್‌ ಒಂದೆಡೆಯೊಳ್

ಎಂದು ತನ್ನೊಳಗೇ ಹಲುಬುತ್ತಿದ್ದವನನ್ನು ಕಂಡು ʼಓಹೋ! ಇವನೂ ನಮ್ಮ ಥರದವನೇ! ನಮ್ಮ ನೆಂಟನೇ ಸೈ!ʼ ಎಂದು ಮುಗುಳ್ನಗೆ ನಗುತ್ತಾ ಬರುತ್ತಿರುವಾಗ ಒಂದು ಕಡೆಯಲ್ಲಿ

ಚಂ|| ಒಲವಿನೊಳಾದ ಕಾಯ್ಪು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ

ದಲಳೞುತುಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ ಪೆ|

ರ್ಮೊಲೆ ಪೊಱಮುಯ್ವು ಬೆನ್ನಿನಿತುಮೊರ್ಮೆಯೆ ನಾಂಬಿನಮುಣ್ಮಿ ಪೊಣ್ಮಿ ಕ

ಣ್ಮಲರ್ಗಳಿನೆಚ್ಚು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್|| ೧೦೮ ||

ಒಲವಿನೊಳಾದ ಕಾಯ್ಪು ಮಿಗೆ, ಕಾದಲನಂ ಬಿಸುಟು ಅಂತೆ ಪೋಪ ಕಾದಲಳ್‌ ಅೞುತುಂ ತೆಱಂದಿರಿದು ನೋಡಿದ ನೋಟದೊಳ್‌ ಎಯ್ದೆ ತಳ್ತ ಪೆರ್ಮೊಲೆ, ಪೊಱಮುಯ್ವು, ಬೆನ್‌ ಇನಿತುಂ ಒರ್ಮೆಯೆ ನಾಂಬಿನಂ ಉಣ್ಮಿ ಪೊಣ್ಮಿ ಕಣ್ಮಲರ್ಗಳಿನ್‌ ಎಚ್ಚು ಪಾಯ್ದುವು ಅರಲಂಬುಗಳಂತೆ ವಿಲೋಚನಾಂಬುಗಳ್

ಪ್ರೀತಿಯ ನಡುವೆಯೇ ಹುಟ್ಟಿಕೊಂಡ ಜಗಳ ಮಿತಿಮೀರಲು, ನಲ್ಲನನ್ನು ಬಿಟ್ಟು ಹಾಗೇ ಎದ್ದು ನಡೆದ ನಲ್ಲೆಯು ಅಳುತ್ತಲೇ ಮತ್ತೆ ಮತ್ತೆ ತಿರುಗಿನೋಡಿದಳು. ಆಗ ಅವಳ ಕಣ್ಣಿನಿಂದ ಸುರಿದ ಕಣ್ಣೀರು ಅವಳ ಒತ್ತಾದ ಮೊಲೆಗಳು, ಹೆಗಲು, ಬೆನ್ನುಗಳನ್ನು ಒಮ್ಮೆಗೇ ನೆನೆಸಿತು; ಆ ಕಣ್ಣೀರ ಹನಿಗಳು ಅವಳ ಹೂಗಳಂಥ ಕಣ್ಣುಗಳಿಂದ ಚಿಮ್ಮಿ ಹೊಮ್ಮಿದ ಹೂಬಾಣಗಳಂತಿದ್ದವು.

 

ವ|| ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಯತಳದೊಳ್ ಪಲಕಾಲಮಗಲ್ದ ನಲ್ಲರಿರ್ವರುಮೊಂದೆಡೆಯೊಳ್ ಕೂಡಿ-

ಮತ್ತಂ ಒಂದೆಡೆಯೊಳ್‌ ಒಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲ ಅಲಂಕೃತ ವಿಚಿತ್ರ ಭಿತ್ತಿ ವಿರಾಜಿತ ರಮ್ಯಹರ್ಮ್ಯತಳದೊಳ್, ಪಲಕಾಲಂ ಅಗಲ್ದ ನಲ್ಲರ್‌ ಇರ್ವರುಂ ಒಂದೆಡೆಯೊಳ್ ಕೂಡಿ,

ಮತ್ತೊಂದು ಕಡೆಯಲ್ಲಿ ಕಾಳಾಗರುವೆಂಬ ಸುಗಂಧದ ಹೊಗೆಯಿಂದ ಕೊಳಕಾಗಿ, ವಿಚಿತ್ರ ಗೋಡೆಗಳಿದ್ದ ಸುಂದರವಾದ ಉಪ್ಪರಿಗೆಯ ತಳದಲ್ಲಿ, ಹಲವು ಕಾಲದಿಂದ ಅಗಲಿದ್ದ ಪ್ರೇಮಿಗಳಿಬ್ಬರು ಒಂದು ಕಡೆಯಲ್ಲಿ ಸೇರಿ

ಟಿಪ್ಪಣಿ: ಕವಿಯ ಈ ವರ್ಣನೆ ವಿಲಕ್ಷಣವಾಗಿದೆ. ʼಹೊಗೆ ಹಿಡಿದು ಕಪ್ಪಾಗಿರುವ ವಿಚಿತ್ರವಾದ ಗೋಡೆಗಳುʼ ಏನನ್ನು ಸೂಚಿಸುತ್ತವೆ? ಅದೊಂದು ಪಾಳು ಬಿದ್ದ ಮನೆಯೆಂದೆ? ಹಾಗಿದ್ದರೆ ಆ ಮನೆ ʼರಮ್ಯʼವಾಗಿರುವುದು ಹೇಗೆ? ಪ್ರೇಮಿಗಳಿಬ್ಬರು ಒಟ್ಟುಗೂಡುವುದು ಆ ʼರಮ್ಯಹರ್ಮ್ಯʼದ ತಳದಲ್ಲಿ ಎಂಬುದನ್ನೂ ಗಮನಿಸಬೇಕು. ಒಟ್ಟಿನಲ್ಲಿ ಆ ಸ್ಥಳ ಖಾಸಗಿ ಎಂದರೆ ಖಾಸಗಿಯಾಗಿತ್ತು, ಸಾರ್ವಜನಿಕವೆಂದರೆ ಸಾರ್ವಜನಿಕವಾಗಿತ್ತು ಎಂಬ ಸೂಚನೆ ಇಲ್ಲಿ ಇದ್ದಂತಿದೆ.

ಮ|| ಸಮಸಂದೞ್ಕಱಲಂಪನೀಯೆ ಶಯನಂ ಘರ್ಮಾಂಬುವಿಂ ನಾನೆ ಮು

ನ್ನಮೆ ನಾಣೊೞ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ|

ಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ ತಚ್ಛಯ್ಯೆಯೊಳ್

ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ|| ೧೦೯ ||

ಸಮಸಂದ ಅೞ್ಕಱ್‌ ಅಲಂಪನ್‌ ಈಯೆ, ಶಯನಂ ಘರ್ಮಾಂಬುವಿಂ ನಾನೆ, ಮುನ್ನಮೆ ನಾಣ್‌ ಒೞ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ, ವಿಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ, ತಚ್ಛಯ್ಯೆಯೊಳ್ ಸಮಹಸ್ತಂ ಪಿಡಿವಂತುಟು ಆಯ್ತು ಸುರತ ಪ್ರಾರಂಭ ಕೋಳಾಹಳಂ‌!

ಟಿಪ್ಪಣಿ: ಈ ಪದ್ಯ ಕಾಮಕ್ರಿಯೆಯ ಒಂದು ಗಡಿ ಮೀರಿದ ವರ್ಣನೆ. ಇದನ್ನು ಪಂಪ ಯಾಕೆ ಬರೆದಿರಬಹುದು? ತನ್ನ ಕೃತಿಗೆ ಒಂದು ದೃಷ್ಟಿಬೊಟ್ಟು ಇರಲಿ ಎಂದಿರಬಹುದೆ? ಅತ್ಯಂತ ಭವ್ಯವಾಗಿ ನಿರ್ಮಿಸಿದ ಎಷ್ಟೋ ದೇವಾಲಯಗಳಲ್ಲಿ, ಯಾವುದೋ ಒಂದು ಮೂಲೆಯಲ್ಲಿ ಅಸಹಜ ಕಾಮಕ್ರಿಯೆಯ ಶಿಲ್ಪವನ್ನೋ, ಅಂಥದೇ ಇನ್ನೇನಾದರೂ ಒಂದನ್ನೋ ಮಾಡಿಟ್ಟಿರುವ ಪದ್ಧತಿ ಕೆಲವೆಡೆ ಇದೆ. ಈ ಪದ್ಯಕ್ಕೆ ʼಪಂಪಭಾರತʼದಲ್ಲಿ ಅದೇ ಸ್ಥಾನ ಕೊಡಬೇಕಷ್ಟೆ. ಅಥವಾ ಇದು ಬೇರೆ ಯಾರಾದರೂ ಬರೆದು ಸೇರಿಸಿದ ಪದ್ಯವೆ?

ಇಲ್ಲಿ ಬರುವ ʼಸಮಹಸ್ತಂಬಿಡಿವಂತುಟಾಯ್ತುʼ ಎಂಬ ಮಾತಿನ ಅರ್ಥವೇನು? ಕವಿ ತನ್ನ ಕಾಲದಲ್ಲಿ ಪ್ರಚಾರದಲ್ಲಿದ್ದ ಯಾವುದೋ ಒಂದು ನೃತ್ಯಪ್ರಕಾರದ ಪ್ರದರ್ಶನದ ಒಂದು ಭಾಗವನ್ನು ಕುರಿತು ಇಲ್ಲಿ ಹೇಳುತ್ತಿರುವಂತಿದೆ. ಅಲ್ಲಿ ಇನ್ನೇನು ನೃತ್ಯ ಶುರುವಾಗಲಿದೆ ಎಂಬುದರ ಸೂಚನೆಯಾಗಿ (ಅತ್ಯಂತ ವೇಗದಲ್ಲಿ) ವಾದ್ಯಸಂಗೀತವನ್ನು ನುಡಿಸುವ ಪದ್ಧತಿ ಇದ್ದಿರಬಹುದು. ಇಂಥದೊಂದು ದೃಶ್ಯವನ್ನು ಒಟ್ಟು ನೃತ್ಯದ ಅಂತಿಮ ಹಂತದಲ್ಲಿ, ಎಂದರೆ ಇನ್ನೇನು ಬೆಳಗಾಗುತ್ತಿದೆ ಎನ್ನುವಾಗ ಪ್ರದರ್ಶಿಸುತ್ತಿದ್ದಿರಬಹುದು. ಪದ್ಯದ ಅರ್ಥವನ್ನು ಆಧಾರವಾಗಿ ಇಟ್ಟುಕೊಂಡರೆ, ನೃತ್ಯವೂ ಅಂಥದೇ ಲೈಂಗಿಕದೃಶ್ಯಗಳಿಂದ ಕೂಡಿದ್ದಾಗಿರಬಹುದು.

[ಸಮಹಸ್ತ: (ನರ್ತನದ ಲಯಕ್ಕನುಗುಣವಾಗಿ) ವಾದ್ಯವಾದನದ ಒಂದು ಪ್ರಕಾರ – ಕ.ಸಾ.ಪ. ಕನ್ನಡ ನಿಘಂಟು)

ವ|| ಅಂತನೇಕಪ್ರಕಾರ ಪುರಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ-

ಅಂತು ಅನೇಕಪ್ರಕಾರ ಪುರಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ

ಹಾಗೆ ತಿರುಗಾಟ ಮಾಡಿ ಊರ ಜನರ ಹಲವು ರೀತಿಯ ವಿಕಾರಗಳನ್ನು ಕಂಡಾಗ

ಚಂ|| ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾಱೆ ತ

ಣ್ಪಿಡಿದೆಲರೂದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಗಳಂ|

ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರ

ಲ್ಮಿಡಿದು ಗುಣಾರ್ಣವಂ ನೆರೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ|| ೧೧೦||

ಸೊಡರ್ಗುಡಿ ಒಯ್ಯನಾಗೆ, ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾಱೆ, ತಣ್ಪಿಡಿದ ಎಲರ್‌ ಊದೆ, ಗಾವರದ ಮೆಲ್ಲುಲಿ, ತುಂಬಿಯ ಗಾವರಂಗಳಂ ಗೆಡೆಗೊಳೆ, ಚಂದ್ರಿಕಾಪ್ರಭೆ ಮೊದಲ್‌ ಕಿಡೆ, ನಾಡೆ ವಿತರ್ಕದಿಂ ಬೆರಲ್‌ ಮಿಡಿದು ಗುಣಾರ್ಣವಂ ನೆರೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ

(ಎಣ್ಣೆ ಮುಗಿಯುತ್ತ ಬಂದು) ದೀಪದ ಕುಡಿಗಳು ಸಣ್ಣಗಾದವು; ಹೊಸ ಮಲ್ಲಿಗೆ ಮೆಲ್ಲಗೆ ತನ್ನ ಕಂಪನ್ನು ಪಸರಿಸತೊಡಗಿತು; ಬೀಸುವ ತಂಗಾಳಿಯ ಮೆದುವಾದ ಮರ್ಮರ ನಾದ ದುಂಬಿಗಳ ಝೇಂಕಾರದೊಂದಿಗೆ ಸೇರಿಕೊಂಡಿತು; ಬೆಳದಿಂಗಳ ಕಾಂತಿ ಮಂದವಾಯಿತು; (ಇದೆಲ್ಲವನ್ನೂ ಕಂಡು) ಗುಣಾರ್ಣವನು ಸಂಶಯದಿಂದೆಂಬಂತೆ (ʼಇಷ್ಟು ಬೇಗ ಬೆಳಗಾಯಿತೆ?!ʼ ಎಂಬ ಸಂಶಯದಿಂದ) ತನ್ನಷ್ಟಕ್ಕೆ ತಾನು ಬೆರಳು ಮಿಡಿದು, ಬೆಳಕು ಹರಿದುದನ್ನು ನಿಟ್ಟಿಸಿ ನೋಡಿದನು!

ವ|| ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳನಿರಲ್ವೇೞ್ದು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆವಂದು ಹಂಸ ಧವಳ ಶಯ್ಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮರೆದೊಱಗುವೈರಾವತದಂತೆ ಪವಡಿಸಿ ಕಿಱಿದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-

ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳನ್‌ ಇರಲ್‌ ಪೇೞ್ದು, ರಾಜಮಂದಿರಮಂ ಪೊಕ್ಕು, ತನ್ನ ಪವಡಿಸುವ ಮಾಡಕ್ಕೆ ಬಂದು, ಹಂಸ ಧವಳ ಶಯ್ಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮರೆದು ಒಱಗುವ ಐರಾವತದಂತೆ ಪವಡಿಸಿ ಕಿಱಿದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆ ಎೞ್ಚತ್ತನ್‌. ಅನ್ನೆಗಂ

ಆಗ ತನ್ನೊಡನೆ ಊರು ಸುತ್ತುವ ನಾಗರಕ, ವಿಟ, ಹಾಸ್ಯಗಾರ, ಜೊತೆಗಾರರನ್ನು ವಿರಮಿಸಲು ಹೇಳಿ ತಾನು ರಾಜಮಂದಿರವನ್ನು ಹೊಕ್ಕು, ತನ್ನ ಮಲಗುವ ಮನೆಗೆ ಬಂದನು. ಅಲ್ಲಿ ಹಂಸದಂತೆ ಬಿಳುಪಾದ ಹಾಸಿಗೆಯ ಮೇಲೆ, ಗಂಗಾನದಿಯ ವಿಶಾಲವಾದ ದಂಡೆಯ ಮರಳಿನಲ್ಲಿ ಹಾಯಾಗಿ ಮಲಗುವ ಐರಾವತದಂತೆ, ಮಲಗಿಕೊಂಡನು. ಸ್ವಲ್ಪ ಹೊತ್ತಿನಲ್ಲಿಯೇ ಅವನ ಕನಸಿನಲ್ಲಿ ಸುಭದ್ರೆ ಬಂದಳು! ತನ್ನ ಕನಸನ್ನು ನನಸೆಂದೇ ಬಗೆದನು. ಅಷ್ಟರಲ್ಲಿ ಮಂಗಳಪಾಠಕರ ದನಿ ಕೇಳಿಸಿತು. ಅವನು ಕೂಡಲೇ ಎಚ್ಚೆತ್ತು ಎದ್ದನು. ಆಗ

ಚಂ|| ಪುದಿದ ತಮಂ ಮದೀಯ ಕಿರಣಾಳಿಯನಾನದವೋಲೆ ನಿನ್ನ ನಾ

ವದಟರುಮಾನರೆನ್ನುದಯಮಭ್ಯುದಯಂ ನಿನಗೆಂದು ಕನ್ನೆಯಂ|

ಪದೆದೊಡಗೊಂಡು ಪೋಗಿರದಿರೆಂದು ಗುಣಾರ್ಣವ ಭೂಭುಜಂಗೆ ಕ

ಟ್ಟಿದಿರೊಳೆ ಬಟ್ಟೆದೋಱುವವೊಲಂದೊಗೆದಂ ಕಮಲೈಕಬಾಂಧವಂ|| ೧೧೧||

ʼಪುದಿದ ತಮಂ ಮದೀಯ ಕಿರಣಾಳಿಯನ್‌ ಆನದವೋಲೆ ನಿನ್ನನ್‌ ಆವ ಅದಟರುಂ ಆನರ್‌! ಎನ್ನ ಉದಯಂ ಅಭ್ಯುದಯಂ ನಿನಗೆʼ ಎಂದು, ʼಕನ್ನೆಯಂ ಪದೆದು ಒಡಗೊಂಡು ಪೋಗು! ಇರದಿರು!ʼ ಎಂದು, ಗುಣಾರ್ಣವ ಭೂಭುಜಂಗೆ ಕಟ್ಟಿದಿರೊಳೆ ಬಟ್ಟೆದೋಱುವವೊಲ್‌ ಅಂದು ಒಗೆದಂ ಕಮಲೈಕಬಾಂಧವಂ

ಕವಿದ ಕತ್ತಲೆಯು ಹೇಗೆ ನನ್ನ ಕಿರಣಗಳನ್ನು ಎದುರಿಸಲಾರದೋ ಹಾಗೆಯೇ ನಿನ್ನನ್ನು ಎಂಥಾ ವೀರರೂ ಎದುರಿಸಲಾರರು! ನನ್ನ ಉದಯವೇ ನಿನ್ನ ಏಳಿಗೆಯ ಸೂಚನೆ! ಕನ್ಯೆಯನ್ನು (ಎಂದರೆ ಸುಭದ್ರೆಯನ್ನು) ಪ್ರೀತಿಯಿಂದ ಜೊತೆಗೆ ಕರೆದುಕೊಂಡು ಹೋಗು! ತಡಮಾಡಬೇಡ! ಎಂದು ಅರ್ಜುನನಿಗೆ ಮುಂದಿನ ದಾರಿ ತೋರಿಸುವವನಂತೆ ಧೈರ್ಯ ಹೇಳಿ, ಪ್ರೋತ್ಸಾಹಿಸುವಂತೆ ಸೂರ್ಯನು ಬಾನಿನಲ್ಲಿ ಮೇಲೇರಿದನು.