ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31

ಚಂ||    ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ
ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ|
ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ
ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧||

(ಇದು ಮಳಯಾಚಳಂ, ಮಳಯಜಂ ಮಳಯಾನಿಳನ್‌ ಎಂದು ಪೆಂಪುವೆತ್ತುದು ಸಿರಿಕಂಡಮುಂ, ಪದೆದು ತೀಡುವ ಗಾಳಿಯುಂ; ಇಲ್ಲಿ ಪುಟ್ಟಿ ಪೋಗದು ಪೊಸ ಸುಗ್ಗಿ; ಮೂಗುವಡದು ಇಲ್ಲಿಯ ಕೋಗಿಲೆ; ಬಂದಮಾವು ಬೀಯದು; ಕುಸುಮಾಸ್ತ್ರನ ಆಜ್ಞೆ ತವದು ಎಲ್ಲಿಯುಂ ಇಲ್ಲಿಯ ನಂದನಂಗಳೊಳ್)

ಇದು ಮಳಯ ಪರ್ವತ. ಪ್ರಖ್ಯಾತವಾದ ಶ್ರೀಗಂಧಕ್ಕೆ ʼಮಳಯಜʼ ಎಂಬ ಹೆಸರು ಬಂದಿರುವುದು ಈ ಪರ್ವತದಿಂದಲೇ; ಇಲ್ಲಿ ಹುಟ್ಟಿ ತೀಡುವ ಗಾಳಿ ʼಮಳಯಾನಿಳʼ ಎಂಬ ಹೆಸರಾಗಿದೆ.  ಇಲ್ಲಿ ಹೊಸಸುಗ್ಗಿ ಶುರುವಾಗುತ್ತದೆ ಆದರೆ ಮುಗಿಯುವುದಿಲ್ಲ; ಇಲ್ಲಿಯ ಕೋಗಿಲೆ ಎಂದೂ ಮೂಕವಾಗಿರುವುದಿಲ್ಲ; ಚಿಗುರು, ಹೂ, ಕಾಯಿ, ಹಣ್ಣುಗಳಿಂದ ಕೂಡಿದ ಮಾವಿನಮರ ಸದಾಕಾಲವೂ ಹಾಗೆಯೇ ಇರುತ್ತದೆ; ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಅಪ್ಪಣೆ ಯಾವಾಗಲೂ ಜಾರಿಯಲ್ಲಿರುತ್ತದೆ!

ಮ||     ಇದಱಭ್ರಂಕಷ ಕೂಟ ಕೋಟಿಗಳೊಳಿರ್ದಂಭೋಜ ಷಂಡಂಗಳಂ

ಪುದಿದುಷ್ಣಾಂಶುವಿನೂರ್ಧ್ವಗಾಂಶುನಿವಹಂ ಮೆಯ್ಯಿಟ್ಟಲರ್ಚುತ್ತುಮಿ|
ರ್ಪುದು ಮಾದ್ಯದ್ಗಜ ಗಂಡ ಭಿತ್ತಿ ಕರ್ಷಣಪ್ರೋದ್ಬೇದದಿಂ ಸಾರ್ದು ಬಂ
ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್|| ೨೨||

(ಇದಱ ಅಭ್ರಂಕಷ ಕೂಟ ಕೋಟಿಗಳೊಳ್‌ ಇರ್ದ ಅಂಭೋಜ ಷಂಡಂಗಳಂ ಪುದಿದು ಉಷ್ಣಾಂಶುವಿನ ಊರ್ಧ್ವಗಾಂಶುನಿವಹಂ ಮೆಯ್ಯಿಟ್ಟು ಅಲರ್ಚುತ್ತುಂ ಇರ್ಪುದು; ಮಾದ್ಯದ್ಗಜ ಗಂಡ ಭಿತ್ತಿ ಕರ್ಷಣ ಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದು ಇಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್)

ಇದರ ಅನೇಕ ಶಿಖರಗಳು ಮುಗಿಲು ಮುಟ್ಟುವಂತಿವೆ. ಸೂರ್ಯನ, ಬೆಚ್ಚಗಿನ ಕಿರಣಗಳು ಮೇಲಕ್ಕೆ ಏರಿ ಹೋಗಿ  ಆ ಶಿಖರಗಳಲ್ಲಿರುವ ಗುಂಪು ಗುಂಪಾದ ತಾವರೆಗಳಲ್ಲಿ ತಂಗಿ ಅವುಗಳನ್ನು ಅರಳಿಸುತ್ತವೆ. ಮದವೇರಿದ ಆನೆಗಳ ಗೋಡೆಯಂಥ ಗಂಡಸ್ಥಳಗಳ ತಿಕ್ಕಾಟದಿಂದ ಮುರಿದು ಹೋಗಿ ಅವುಗಳಿಂದ ಸುರಿದ ಗಂಧದ ಮರಗಳ ರಸವು ಈ ಪರ್ವತಗಳಿಂದ ಇಳಿದು ಬಂದು ಇಳಿಜಾರಿನಲ್ಲಿರುವ ಕೆಂಪು ಚಿನ್ನವನ್ನು ಸೇರಿಕೊಳ್ಳುತ್ತದೆ.

(ಟಿಪ್ಪಣಿ: ಇಲ್ಲಿ ಬರುವ ʼಮೇಲಕ್ಕೆ ಹೋಗುವ ಸೂರ್ಯನ ಕಿರಣಗಳುʼ ಎಂಬ ಮಾತಿನ ಅರ್ಥವೇನು? ಸೂರ್ಯನ ಕಿರಣಗಳು ಮೇಲಿನಿಂದ ಕೆಳಗಿಳಿದು ಭೂಮಿಯ ಕಡೆಗೆ ಬರುವುದು ಸಹಜ. ಆದರೆ ಇಲ್ಲಿ ಅದು ಉಲ್ಟಾ ಆಗಿದೆ! ಕವಿಯ ಕಲ್ಪನೆಯ ಪ್ರಕಾರ ಮಲಯ ಪರ್ವತದ ಶಿಖರಗಳು ಮುಗಿಲನ್ನು ಮುಟ್ಟುವಂತಿದ್ದವು. ಎಂದರೆ, ಸೂರ್ಯನಿಗಿಂತಲೂ ಎತ್ತರದಲ್ಲಿದ್ದವು! ಹಾಗಾಗಿಯೇ ಸೂರ್ಯನ ಕಿರಣಗಳು ಮೇಲೆ ಹೋಗಿ ತಾವರೆಗಳನ್ನು ಅರಳಿಸಬೇಕಾಗಿ ಬಂದಿದೆ!

ಒಟ್ಟಿನಲ್ಲಿ ಇಲ್ಲಿ ಬರುವ ವರ್ಣನೆಗಳು ಕೇವಲ ಜಾಣತನದ ಕವಿಕಲ್ಪನೆಗಳೇ ಹೊರತು ವಾಸ್ತವವೆನಿಸುವುದಿಲ್ಲ. ಇದನ್ನು ʼಉತ್ಪ್ರೇಕ್ಷಾಲಂಕಾರʼ ಎಂದು ಭಾವಿಸಿ ಓದಿಕೊಳ್ಳಬೇಕು ಅಷ್ಟೆ.)

ಮ||ಸ್ರ||ನೆಗೞ್ದೀ  ಕರ್ಪೂರ ಕಾಳಾಗರು ಮಳಯ ಮಹೀಜಂಗಳೇಳಾ ಲತಾಳೀ|

ಸ್ಧಗಿತಂಗಳ್ ಕಣ್ಗೆವಂದಿರ್ದುವನಿವನೆ ವಲಂ ಕೊಂಬುಗೊಂಡಂಗಜಂ ಮೆ|
ಲ್ಲಗೆ ಪಾರ್ದಾರ್ದಾಗಳುಂ ಕಿನ್ನರ ಯುವತಿ ಮೃಗೀವ್ರಾತಮಂ ತನ್ನ ನಲ್ಲಂ
ಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಱಿಂ ರಮ್ಯಮಿಂತೀ ನಗೇಂದ್ರಂ|| ೨೩||‌

(ನೆಗೞ್ದ ಈ  ಕರ್ಪೂರ ಕಾಳಾಗರು ಮಳಯ ಮಹೀಜಂಗಳ್‌, ಏಳಾ ಲತಾಳೀಸ್ಧಗಿತಂಗಳ್, ಕಣ್ಗೆವಂದಿರ್ದುವನ್‌ ಇವನೆ ವಲಂ ಕೊಂಬುಗೊಂಡು ಅಂಗಜಂ ಮೆಲ್ಲಗೆ ಪಾರ್ದು, ಆರ್ದು   ಆಗಳುಂ ಕಿನ್ನರಯುವತಿ ಮೃಗೀವ್ರಾತಮಂ ತನ್ನ ನಲ್ಲಂಬುಗಳಿಂದ ಎಚ್ಚು ಎಚ್ಚು ಮೆಚ್ಚಂ ಸಲಿಸುವನ್‌. ಅದಱಿಂ ರಮ್ಯಂ ಇಂತು ಈ  ನಗೇಂದ್ರಂ)

ಏಲಕ್ಕಿಯ ಬಳ್ಳಿಗಳು ಮುತ್ತಿಕೊಂಡು ಸುಂದರವಾಗಿ ಕಾಣುವ ಪ್ರಸಿದ್ಧವಾದ ಕರ್ಪೂರ, ಕಾಳಾಗರು, ಶ್ರೀಗಂಧದ ಮರಗಳು ಇಲ್ಲಿ ಬೆಳೆದಿವೆ. ಮದನನು ಆ ಜಾಗವನ್ನೇ ತನ್ನ ಸಂಕೇತಸ್ಥಳವನ್ನಾಗಿಸಿಕೊಂಡು, ಮೆಲ್ಲಗೆ ಕಿನ್ನರ ಯುವತಿಮೃಗಗಳನ್ನು ನೋಡಿ, ಗೆಲುವಿನ ನಗೆಯೊಂದಿಗೆ ಅವುಗಳ ಮೇಲೆ ತನ್ನ ಹೂಬಾಣಗಳನ್ನು ನಿರಂತರವಾಗಿ ಪ್ರಯೋಗಿಸುವ ಮೂಲಕ ತನ್ನ ಮೆಚ್ಚುಗೆಯನ್ನು ಸೂಸುತ್ತಾನೆ: ಅಂತಹ ದೃಶ್ಯಗಳಿಂದ ಕೂಡಿ ಈ ಬೆಟ್ಟಗಳ ರಾಜನು ರಮ್ಯವಾಗಿ ಕಾಣಿಸುತ್ತಾನೆ.

‌ ಮ||    ಇದಿರೊಳ್ ನಿಂದೊಡೆ ವಜ್ರಿ ಸೈರಿಸನಿರಲ್ವೇಡೆಮ್ಮೊಳೊಳ್ವೊಕ್ಕು ನಿ
ಲ್ವುದು ನೀನೆಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವಂ|
ದಿದಱಿಂ ಪೋದ ತಪೋಪಳಂ (?) ಗಗನಮಂ ಮಾರ್ಪೊಯ್ಯೆ ಕಣ್ಗೊಪ್ಪಿ ತೋ
ರ್ಪುದಿದುತ್ಪ್ರೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ|| ೨೪||

(ʼಇದಿರೊಳ್ ನಿಂದೊಡೆ ವಜ್ರಿ ಸೈರಿಸನ್‌! ಇರಲ್ವೇಡ!  ಎಮ್ಮೊಳ್‌ ಒಳಪೊಕ್ಕು ನಿಲ್ವುದು ನೀನ್‌ʼ ಎಂದು ಕಡಂಗಿ ಕಾಲ್ವಿಡಿವವೋಲ್ ತನ್ನ ಊರ್ಮಿಗಳ್ ಬಂದುವಂದಿದಱಿಂ ಪೋದ ತಪೋಪಳಂ  ಗಗನಮಂ ಮಾರ್ಪೊಯ್ಯೆ ಕಣ್ಗೊಪ್ಪಿ ತೋರ್ಪುದು ಇದು ಉತ್ಪ್ರೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ)

(ನೀನು) ಎದುರಿಗೆ ನಿಂತರೆ ಇಂದ್ರನು ಸಹಿಸುವುದಿಲ್ಲ! ನಮ್ಮೊಳಗೆ ಹೊಕ್ಕು ನಿಲ್ಲು! ಎಂದು ಕಾಳಜಿಯಿಂದ ಕಾಲು ಹಿಡಿಯುವಂತೆ ಕಡಲಿನ ಅಲೆಗಳು ಒಂದರ ಹಿಂದೊಂದು ಬಂದು ದಡಕ್ಕೆ (ಮಳಯಪರ್ವತದ ಬುಡಕ್ಕೆ) ಬಡಿಯುತ್ತಿದ್ದವು. ಹಾಗೆ ಬಡಿಯುವ ರಭಸಕ್ಕೆ ಅವುಗಳಿಂದ ಚಿಮ್ಮಿದ ನೀರಹನಿಗಳು ಆಕಾಶವನ್ನೇ ಮುಟ್ಟಿದಂತೆ ಕಾಣುತ್ತಿದ್ದವು. ಹೀಗೆ, ತೇಲುತ್ತಿರುವ ಅಸಂಖ್ಯ ಶಂಖಗಳಿಂದ  ಬಿಳಿಯ ಬಣ್ಣ ತಾಳಿದ ಗಂಭೀರವಾದ ಕಡಲು ಬಹು ಚೆಲುವಾಗಿ ಕಾಣಿಸುತ್ತಿತ್ತು.

(ಟಿಪ್ಪಣಿ:‌ ಇಲ್ಲಿರುವ  ʼಬಂದುವಂದಿದಱಿಂ ಪೋದ ತಪೋಪಳಂʼ ಎಂಬ ಭಾಗವು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ.  ಈ ಭಾಗದಲ್ಲಿ ಏನಾದರೂ ಪಾಠದೋಷ ಇರುವುದು ಸಾಧ್ಯ ಎಂದು ಡಿ.ಎಲ್.‌ ನರಸಿಂಹಾಚಾರ್‌  ಅವರು ಹೇಳಿದ್ದಾರೆ.)

ಚಂ||    ಚಳದನಿಳಾಹತ ಕ್ಷುಭಿತ ಭಂಗುರ ತುಂಗ ತರಂಗ ಮಾಳಿಕಾ
ವಳನ ಸಮುಚ್ಚಳನ್ಮಣಿಗಣಾತ್ತ ಮರೀಚಿ ಲತಾ ಪ್ರತಾನ ಸಂ|
ವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ ಬಾಡವಾನಳಾ

ವಿಳ ಜಳಮಂ ಮನಂ ಬಯಸಿ ನೋಡಿದನರ್ಣವಮಂ ಗುಣಾರ್ಣವಂ|| ೨೫||

(ಚಳತ್‌ ಅನಿಳ ಆಹತ ಕ್ಷುಭಿತ ಭಂಗುರ ತುಂಗ ತರಂಗ ಮಾಳಿಕಾ ವಳನ, ಸಮುಚ್ಚಳನ್‌ ಮಣಿಗಣ ಆತ್ತ  ಮರೀಚಿ ಲತಾ ಪ್ರತಾನ ಸಂವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ, ಬಾಡಬ ಅನಳ ಆವಿಳ ಜಳಮಂ, ಮನಂ ಬಯಸಿ ನೋಡಿದನ್‌ ಅರ್ಣವಮಂ, ಗುಣಾರ್ಣವಂ)

ಬೀಸುತ್ತಿರುವ ಗಾಳಿಯ ಹೊಡೆತಕ್ಕೆ ಕದಡಿಹೋಗಿ, ನಿಂತಲ್ಲಿ ನಿಲ್ಲಲಾರದೆ (ಆ ಕಡಲಿನ) ಅಲೆಗಳು ಹೊರಳುತ್ತಿವೆ; (ಹಾಗೆ ಹೊರಳುವಾಗ) ಅವುಗಳಿಂದ ರತ್ನರಾಶಿ ಮೇಲಕ್ಕೆ ಚಿಮ್ಮುತ್ತಿದೆ. ಆ ರತ್ನ ರಾಶಿಗಳಿಂದ ಚಿಮ್ಮಿದ ಕಿರಣಗಳೆಂಬ ಬಳ್ಳಿಗಳು ಅಲ್ಲಿರುವ  ಹವಳದ ಮರಗಳನ್ನು ಬಳಸಿ ಹಿಡಿದು ಕಡಲಗಿಚ್ಚಿನಿಂದಾಗಿ ಬಗ್ಗಡವಾಗಿ ಕಾಣುತ್ತಿರುವ ಕಡಲನೀರನ್ನು ಅಲಂಕರಿಸಿವೆ. ಅಂತಹ  ಸುಂದರವಾದ ಕಡಲನ್ನು ಅರ್ಜುನನು ಇಷ್ಟಪಟ್ಟು ನೋಡಿದನು.

ವ|| ಅಂತು ನೋಡುತ್ತುಂ ಬಂದು ಮುಂದೊಂದೆಡೆಯೊಳದಭ್ರಾಭ್ರವಿಭ್ರಮಭ್ರಾಜಿತೋತ್ತುಂಗ ಶೈಲಮಂ  ಕಂಡು-

(ಅಂತು ನೋಡುತ್ತುಂ ಬಂದು ಮುಂದೆ ಒಂದು ಎಡೆಯೊಳ್‌ ಅದಭ್ರ  ಅಭ್ರ ವಿಭ್ರಮ ಭ್ರಾಜಿತ ಉತ್ತುಂಗ ಶೈಲಮಂ  ಕಂಡು)

ಹಾಗೆ ನೋಡುತ್ತ ಬಂದು ಮುಂದೆ ಒಂದು ಕಡೆಯಲ್ಲಿ ಹೇರಳವಾದ ಮೋಡಗಳ ವಿಲಾಸದಿಂದ ಹೊಳೆಯುತ್ತಿರುವ ಎತ್ತರವಾದ ಪರ್ವತವನ್ನು ಕಂಡು-

ಮ||     ವಿನತಾಪುತ್ರನ ವಜ್ರತುಂಡಹತಿಗಂ ಮೆಯ್ಯಾಂತು ಕಂಡಂಗಳು
ಳ್ಳಿನಮಂಗಂಗಳನೊಡ್ಡಿಯೊಡ್ಡಿ ತನುವಂ ಕೊಟ್ಟಂತು ಜೀಮೂತವಾ|
ಹನನೆಂಬಂಕದ ಚಾಗಿ ನಿಚ್ಚಟಿಕೆಯಿಂದೀ ಶೈಳದೊಳ್ ಶಂಖಚೂ
ಡನನಾನಂದದೆ ಕಾದ ಪೆಂಪೆಸೆಯೆ ನಾಗಾನಂದಮಂ ಮಾಡಿದಂ|| ೨೬||

(ವಿನತಾಪುತ್ರನ ವಜ್ರತುಂಡಹತಿಗಂ ಮೆಯ್ಯಾಂತು, ಕಂಡಂಗಳ್‌ ಉಳ್ಳಿನಂ ಅಂಗಂಗಳನ್‌  ಒಡ್ಡಿಯೊಡ್ಡಿ ತನುವಂ ಕೊಟ್ಟು, ಅಂತು ಜೀಮೂತವಾಹನನ್‌ ಎಂಬ ಅಂಕದ ಚಾಗಿ, ನಿಚ್ಚಟಿಕೆಯಿಂದ ಈ ಶೈಳದೊಳ್ ಶಂಖಚೂಡನನ್‌ ಆನಂದದೆ ಕಾದ ಪೆಂಪು ಎಸೆಯೆ ನಾಗಾನಂದಮಂ ಮಾಡಿದಂ)

ವಿನತೆಯ ಮಗನಾದ ಗರುಡನು ತನ್ನ ವಜ್ರದಂತಹ ಕೊಕ್ಕಿನಿಂದ ಕುಕ್ಕುತ್ತಿದ್ದರೂ ಸಹ ಅದನ್ನು ಸಹಿಸಿಕೊಂಡು, ಮಾಂಸಖಂಡಗಳಿರುವ ಹಾಗೆಯೇ ತನ್ನ ಅಂಗಗಳನ್ನು ಒಡ್ಡಿ, ಶರೀರವನ್ನೇ ಕೊಟ್ಟವನು ಜೀಮೂತವಾಹನನೆಂಬ ಪ್ರಸಿದ್ಧನಾದ ತ್ಯಾಗಿ. ಅವನು ತನ್ನ ಗಟ್ಟಿ ಮನಸ್ಸಿನಿಂದ ಈ ಪರ್ವತದಲ್ಲಿ, ಶಂಖಚೂಡನನ್ನು ಸಂತೋಷದಿಂದ ಕಾಯ್ದು, ತನ್ನ ಹಿರಿಮೆಯಿಂದ ನಾಗಗಳಿಗೆ ಆನಂದವನ್ನು ಉಂಟುಮಾಡಿದನು.

(ಟಿಪ್ಪಣಿ: ಹರ್ಷ ಕವಿಯು ಸಂಸ್ಕೃತದಲ್ಲಿ ರಚಿಸಿರುವ ʼನಾಗಾನಂದʼ ನಾಟಕದಲ್ಲಿ ಜೀಮೂತವಾಹನನ ಕಥೆ ಇದೆ.)

ವ||ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪೆಂಪಂ

ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ ತರಣಿ ಸಲಿಲ

ತುಹಿನಕರ ಯಜಮಾನ ಮೂರ್ತಿಯಂ ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು

(ಎಂದು ಅಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ, ಬೀರದ ಪೆಂಪಂ ಮೆಚ್ಚುತ್ತುಂ ಬಂದು, ಗೋಕರ್ಣನಾಥನಂ, ಗೌರೀನಾಥನನ್‌ ಅವನಿ, ಪವನ, ಗಗನ, ದಹನ, ತರಣಿ, ಸಲಿಲ, ತುಹಿನಕರ, ಯಜಮಾನ ಮೂರ್ತಿಯಂ, ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು)

ಎಂದು ಅಭಿನವ ಜೀಮೂತವಾಹನನೇ ಆದ ಅರ್ಜುನನು ಜೀಮೂತವಾಹನನ ಪರೋಪಕಾರದ, ಶೌರ್ಯದ ಹಿರಿಮೆಯನ್ನು ಮೆಚ್ಚುತ್ತಾ ಬಂದು, ಗೋಕರ್ಣನಾಥನನ್ನು, ಪಾರ್ವತೀಪತಿಯನ್ನು, ನೆಲ, ಗಾಳಿ, ಆಗಸ, ಬೆಂಕಿ, ಸೂರ್ಯ, ನೀರು, ಚಂದ್ರ, ಯಜಮಾನರೆಂಬ ಎಂಟು ಮೂರ್ತಿಗಳನ್ನುಳ್ಳ ಶಿವನನ್ನು, ಮೂರು ಲೋಕಗಳೂ ಕೀರ್ತಿಸಿದ ಒಬ್ಬನೇ ಒಬ್ಬನಾದ ಶಿವನನ್ನು ಕಂಡು ಕೈಗಳನ್ನು ಮುಗಿದು

ಪೃಥ್ವಿ|| ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ವಳಯಯಾ ಭುವಾ ಸಗಿರಿ ಸಾಗರ ದ್ವೀಪಯಾ|
ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ|| ೨೭||

ಯಾರ ಪ್ರಚಂಡ ತಾಂಡವ ನೃತ್ಯದಿಂದ ಭೂಮಿಯು ಅಲ್ಲೋಲ ಕಲ್ಲೋಲವಾಯಿತೋ, ಗಿರಿಪರ್ವತಗಳಿಂದ, ಸಾಗರ, ದ್ವೀಪಗಳಿಂದ ಕೂಡಿದ ಭೂಮಿಯು ಕುಂಬಾರನ ಚಕ್ರದಂತೆ ಗರಗರನೆ ಸುತ್ತಿತೋ ಆ ಜಗದ್ಗುರುವಾದ ಗಿರಿಜಾ ಪತಿಯು ನಮ್ಮನ್ನು ಕಾಪಾಡಲಿ

(ಟಿಪ್ಪಣಿ: ಇದು ಆರ್.‌ ಎಲ್.‌ ಅನಂತರಾಮಯ್ಯ ಅವರು ಬರೆದಿರುವ ʼಪಂಪಭಾರತದ ಕಥಾಲೋಕʼ ಪುಸ್ತಕದಲ್ಲಿ ಈ ಪದ್ಯಕ್ಕೆ ಕೊಟ್ಟಿರುವ ಅರ್ಥ )

ವ|| ಎಂದು ಬಾಳೇಂದುಮೌಳಿಯಂ ಸ್ತುತಿಸಿ-

ಎಂದು ಚಂದ್ರಶೇಖರ (ಶಿವ)ನನ್ನು ಸ್ತುತಿಸಿ

ಚಂ||    ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮||

(ಸೊಗಯಿಸಿ ಬಂದ ಮಾಮರನೆ, ತಳ್ತ ಎಲೆವಳ್ಳಿಯೆ, ಪೂತ ಜಾತಿ ಸಂಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಡುವ ತುಂಬಿಯೆ, ನಲ್ಲರ ಒಳ್‌ ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ, ನೋೞ್ಪೊಡೆ ಆವ ಬೆಟ್ಟುಗಳೊಳಂ, ಆವ ನಂದನವನಂಗಳೊಳಂ ಬನವಾಸಿ ದೇಶದೊಳ್)

ಬನವಾಸಿ ದೇಶದ ಯಾವ ಗುಡ್ಡಗಳಲ್ಲಿ, ಯಾವ ಉದ್ಯಾನವನಗಳಲ್ಲಿ ನೋಡಿದರೂ ಹಣ್ಣು ತುಂಬಿಕೊಂಡ ಮಾವಿನ ಮರಗಳು, ಸೊಂಪಾಗಿ  ಬೆಳೆದ ವೀಳ್ಯದೆಲೆಯ ಬಳ್ಳಿಗಳು, ಹೂ ಬಿಟ್ಟ ಜಾತಿ ಸಂಪಗೆ ಮರಗಳು, ಕುಕಿಲಿಡುವ ಕೋಗಿಲೆಗಳು, ಹಾಡುವ ಜೇನ್ನೊಣಗಳು ತುಂಬಿಕೊಂಡಿವೆ. ಪರಸ್ಪರರ  ನಗು ಮುಖಗಳನ್ನು ತಾಕುತ್ತ ಕೂಡುವ ನಲ್ಲ-ನಲ್ಲೆಯರು ಆ ನಾಡಿನ ಎಲ್ಲೆಡೆಯೂ  ಕಾಣಿಸುತ್ತಾರೆ.

ಉ||      ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯||

(ಚಾಗದ, ಭೋಗದ, ಅಕ್ಕರದ, ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರ್‌! ಅಂತು ಅವರಾಗಿ ಪುಟ್ಟಲ್‌ ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ, ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್, ವನವಾಸಿ ದೇಶದೊಳ್)

ತ್ಯಾಗದ, ಭೋಗದ, ವಿದ್ಯೆಯ, ಸಂಗೀತದ ಗೋಷ್ಠಿಗಳ ಸಂತೋಷದ ಸವಿರುಚಿಗೆ ಆಗರವಾದ ಮಾನವರೇ ನಿಜವಾದ ಮಾನವರು! ಅಂಥವರಾಗಿ ಹುಟ್ಟಲು ಎಷ್ಟು ಪ್ರಯತ್ನಪಟ್ಟರೆ ತಾನೆ ಸಾಧ್ಯವೆ?….  ಸಾಧ್ಯವಿಲ್ಲದಿದ್ದರೇನಂತೆ? ಒಂದು ಮರಿದುಂಬಿಯೋ,  ಒಂದು ಕೋಗಿಲೆಯೋ ಆಗಿಯಾದರೂ ಪರವಾಗಿಲ್ಲ,  ಒಟ್ಟಿನಲ್ಲಿ ವನವಾಸಿ ಎಂಬ ನಂದನದಲ್ಲಿ ಹುಟ್ಟಬೇಕು!

(ಟಿಪ್ಪಣಿ: ಈ ಬಗ್ಗೆ “ಕಣಜ”ದ ʼಪಂಪʼ ಎಂಬ ಲೇಖನದ ಮಾತುಗಳು ಹೀಗಿವೆ: (ಈ ಲೇಖನವನ್ನು ಬರೆದವರು ಯಾರೆಂಬುದನ್ನು ಅಲ್ಲಿ ಉಲ್ಲೇಖಿಸಿಲ್ಲ. ತಿಳಿದವರು ದಯವಿಟ್ಟು ನನಗೂ ತಿಳಿಸಬೇಕಾಗಿ ವಿನಂತಿ –ಎಚ್.‌ ಸುಂದರ ರಾವ್)

“ಮನುಷ್ಯ ಎಂದರೆ ಯಾರು? ಏನೇನಿದ್ದರೆ ಒಬ್ಬನನ್ನು ಮನುಷ್ಯ ಎಂದು ಕರೆಯಬಹುದು? ಪಂಪ ಹೇಳುತ್ತಾನೆ- ಮನುಷ್ಯರೆನಿಸಿಕೊಳ್ಳಬೇಕಾದರೆ ಈ ಐದು ಲಕ್ಷಣಗಳಿರಬೇಕು; “ಚಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಿಸರೆ ಮಾನಿಸರ್.” ಇದು ಮಾನವತೆಯ ಪಂಚಸೂತ್ರ.

ಮೊದಲನೆಯದು “ಚಾಗ” ಎಂದರೆ ತ್ಯಾಗ. ಮನುಷ್ಯ ಮನುಷ್ಯನೆನ್ನಿಸಿಕೊಳ್ಳಬೇಕಾದರೆ ಇರಬೇಕಾದ ಮೊದಲ ಗುಣ ತ್ಯಾಗ ಮಾಡುವ ಬುದ್ಧಿ. ತಾನು ಪಡುವ ಸುಖದಲ್ಲಿ ಒಂದಷ್ಟನ್ನು ಇನ್ನೊಬ್ಬರಿಗಾಗಿ ತ್ಯಾಗ ಮಾಡಬೇಕು. ಎರಡನೆಯದು “ಭೋಗ”. ಈ ಲೋಕದ ಸುಖ-ಸಂತೋಷಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳದೆ ಅನುಭವಿಸಬೇಕು, ಭೋಗಿಸಬೇಕು. ಈ ಜಗತ್ತು ನಶ್ವರ, ಇದು ಕ್ಷಣಿಕ, ಎಲ್ಲಕ್ಕಿಂತ ಪರಮಾರ್ಥವೊಂದೇ ದೊಡ್ಡದು ಎಂಬ ಭಾವನೆಗಳನ್ನು ತುಂಬಿಕೊಂಡು, ಕಣ್ಣೆದುರಿಗೆ ಕಾಣುವ ಇಹಲೋಕದ ಸುಖವನ್ನು ತಿರಸ್ಕರಿಸಬಾರದು. ಮೂರನೆಯದು “ಅಕ್ಕರ” ಎಂದರೆ ಅಕ್ಷರಜ್ಞಾನ, ವಿದ್ಯೆ; ಸಾಹಿತ್ಯ-ಶಾಸ್ತ್ರಾದಿಗಳ ಅಭ್ಯಾಸ. ಮನುಷ್ಯ “ಅಕ್ಕರಿಗ” ನಾಗದಿದ್ದರೆ, ವಿದ್ಯಾವಂತನಾಗದಿದ್ದರೆ ಅವನ ಬದುಕು ಅಪೂರ್ಣ. ನಾಲ್ಕನೆಯದು “ಗೇಯ”ದ ಆಸಕ್ತಿ. ಗೇಯ ಎಂದರೆ ಸಂಗೀತ. ಸಂಗೀತದ ಬಗ್ಗೆ ರುಚಿ ಇರಬೇಕು. ಒಳ್ಳೆಯದಾಗಿ ಹಾಡಲು ತನಗೆ ಬಂದರೆ ಸಂತೋಷ; ಬರದಿದ್ದರೆ ಹೋಗಲಿ, ಒಳ್ಳೆಯ ಸಂಗೀತವನ್ನು ಕೇಳಿ ಆನಂದಿಸುವ ಮನಸ್ಸಾದರೂ ಬೇಕು. ಐದನೆಯದು “ಗೊಟ್ಟಿಯ ಅಲಂಪು” ಜೊತೆಗೂಡಿ ಬದುಕುವುದರಿಂದ ದೊರೆಯುವ ಸಂತೋಷ. ಮನುಷ್ಯ ಒಂಟಿಯಾಗಿ, ಹೇಗೋ ಮೂಲೆಯಲ್ಲಿ ಮುದುರಿ ಕೂಡಬಾರದು. ಹತ್ತು ಜನರೊಂದಿಗೆ ಸ್ನೇಹ-ವಿಶ್ವಾಸದಿಂದ “ಗೋಷ್ಠಿ”ಯಾಗಿ, ಮೇಳವಾಗಿ, ಗುಂಪಾಗಿ ಬದುಕುವುದರಲ್ಲಿರುವ ಸುಖ ಏನೆಂಬುದನ್ನು ತಿಳಿಯಬೇಕು. ಹೀಗೆ ಈ ಐದು ಲಕ್ಷಣಗಳಿರುವ ಮನುಷ್ಯನೇ ನಿಜವಾದ ಮನುಷ್ಯ”.

ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಪಂಪನೇ ಹೇಳಿಕೊಂಡಿರುವ ಮಾತುಗಳು, ಅರ್ಜುನನ ಅರ್ಥಾತ್‌ ಅರಿಕೇಸರಿಯ ಬಾಯಲ್ಲಿ ಹೇಳಿಸಿರುವ ಅವನ ಈ ಪದ್ಯ ಮತ್ತು ಅದರ ಮೇಲ್ಕಂಡ ವಿವರಣೆಯ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದರೆ ಕವಿಯು ತನ್ನ  ವೈಯಕ್ತಿಕ ಬದುಕಿನಲ್ಲಿ ಜೈನ ಧರ್ಮದ ನಿಯಮಗಳಿಗೆ ಬದ್ಧನಾಗಿ ಬದುಕಿದಂತೆ ಕಾಣುವುದಿಲ್ಲ. ಏಕೆಂದರೆ “ಈ ಲೋಕದ ಸುಖ-ಸಂತೋಷಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳದೆ ಅನುಭವಿಸಬೇಕು, ಭೋಗಿಸಬೇಕು. ಈ ಜಗತ್ತು ನಶ್ವರ, ಇದು ಕ್ಷಣಿಕ, ಎಲ್ಲಕ್ಕಿಂತ ಪರಮಾರ್ಥವೊಂದೇ ದೊಡ್ಡದು ಎಂಬ ಭಾವನೆಗಳನ್ನು ತುಂಬಿಕೊಂಡು, ಕಣ್ಣೆದುರಿಗೆ ಕಾಣುವ ಇಹಲೋಕದ ಸುಖವನ್ನು ತಿರಸ್ಕರಿಸಬಾರದು” ಎಂಬ ಪಂಪನ ನಿಲುವನ್ನು ಆ  ಧರ್ಮವು ಒಪ್ಪಲಾರದು;  ಚಾರ್ವಾಕವಾದವು ಈ ನಿಲುವನ್ನು ಒಪ್ಪಬಹುದು. ಆದರೆ ಪಂಪನ ನಿಲುವು ಹೀಗಿತ್ತು ಎಂದ ಹೇಳಿದ್ದರಿಂದ ಅವನಿಗೆ ಜೈನ ಧರ್ಮದ ಬಗ್ಗೆ ಅಗೌರವ ಇತ್ತೆಂದು ಹೇಳಿದಂತೆ ಆಗುವುದಿಲ್ಲ. ಆ ಧರ್ಮದ ಬಗ್ಗೆ ಗೌರವ ಇಟ್ಟುಕೊಂಡೇ ಅವನು ಬದುಕಿನ ಬಗ್ಗೆ ತನ್ನದೇ ಆದ ʼಬೇರೆ ಮತಿ, ಬೇರೆ ಮತʼವನ್ನು ಕಂಡುಕೊಂಡಿರುವುದು ಸಾಧ್ಯ. ಅದೂ ಅಲ್ಲದೆ  ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ’  ಎಂಬ ಅರಿವು ಆ ಮಹಾಕವಿಗೆ ಇದ್ದಿರಲೇಬೇಕಷ್ಟೆ?

ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಕುರಿತು ಚರ್ಚಿಸಬೇಕು. ಕವಿಯು ತನ್ನ ಕಾವ್ಯ, ನಾಟಕ, ಕಾದಂಬರಿ ಮುಂತಾದ ಕೃತಿಗಳ ಪಾತ್ರಗಳ ಬಾಯಲ್ಲಿ ಹೇಳಿಸಿದ ಮಾತನ್ನು ಕವಿಯ ಮಾತು ಎಂದೇ ಪರಿಗಣಿಸಲು ಸಾಧ್ಯವೆ? ಇದಕ್ಕೆ ಸಂಬಂಧಿಸಿದಂತೆ ಜಿ. ಎಚ್.‌ ನಾಯಕರು ತಮ್ಮ ʼಪಂಪನ ಅಭಿವ್ಯಕ್ತಿʼ ಎಂಬ ಲೇಖನದಲ್ಲಿ (ಜಿ.ಎಸ್.‌ ಶಿವರುದ್ರಪ್ಪ ಅವರು ಸಂಪಾದಿಸಿರುವ ಪುಸ್ತಕ ʼಪಂಪ ಒಂದು ಅಧ್ಯಯನʼ ನೋಡಿ) ಹೀಗೆ ಹೇಳುತ್ತಾರೆ: “ಹೀಗೆ ಇರುವುದರಿಂದ ಬದುಕಿನ ಬಗೆಗೆ ಮೂಲಭೂತವಾಗಿ ಆತನ ಕಾವ್ಯಗಳ ಮೂಲಕ ಪ್ರಕಟವಾಗುವ ಪಂಪನ ಧೋರಣೆ ಏನು ಎನ್ನುವುದೇ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ನಮ್ಮ ವಿಮರ್ಶಕರಂತೂ ಅದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅಲ್ಲಿ, ಇಲ್ಲಿ ಯಾವ ಯಾವುದೋ ಪಾತ್ರ, ಯಾವ ಯಾವುದೋ ಸಂದರ್ಭ-ಸನ್ನಿವೇಶಗಳಲ್ಲಿ ಆಡಿದ ಮಾತುಗಳನ್ನು ಅವುಗಳ ಸಂದರ್ಭದಿಂದ ಬೇರ್ಪಡಿಸಿ ಜಾಣತನದಿಂದ ತಮಗೆ ಬೇಕಾದಂತೆ ಆಯ್ದುಕೊಂಡು ಪೋಣಿಸಿ ನೋಡುವ ಸರಳ ಮಾರ್ಗವನ್ನು ಇಂಥ ವ್ಯಾಖ್ಯಾನಗಳಲ್ಲಿ ಕಾಣಬಹುದಾಗಿದೆ. ಹೀಗೆ ಅವರು ಗುರುತಿಸಿ ಹೇಳಿರುವ ಮಾತುಗಳಿಗೆ ವಿರುದ್ಧವಾದ ಧೋರಣೆಯ ಮಾತುಗಳನ್ನು ಪಂಪನ ಕಾವ್ಯಗಳಿಂದಲೇ ಉದ್ಧರಿಸುವುದು ಸಾಧ್ಯವಾಗುತ್ತದೆ ಎಂಬ ಅಂಶವನ್ನು  ವಿಮರ್ಶಕರೆಲ್ಲ ಏಕೆ ಮರೆಯುತ್ತಾರೆ ಎಂಬುದೇ ಸ್ವಾರಸ್ಯದ ಸಂಗತಿಯಾಗಿದೆ”.

ಈ ಆಕ್ಷೇಪಣೆಯು ಖಂಡಿತವಾಗಿ ನ್ಯಾಯಯುತವಾದದ್ದು ಈ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ, ಮೇಲಿನ ಪದ್ಯವೂ ಸಹ ಅರ್ಜುನನ ಬಾಯಲ್ಲಿ ಬಂದದ್ದೇ ಹೊರತು ಪಂಪಕವಿಯ ಬಾಯಲ್ಲಿ ಅಲ್ಲ! ಆದರೆ ಓದುಗ ತನ್ನ ವಿವೇಚನೆಯನ್ನು ಬಳಸಿದರೆ, ಈ ಮಾತುಗಳು ಖಂಡಿತವಾಗಿ ಅರ್ಜುನನದಾಗಲಿ, ಅರಿಕೇಸರಿಯದಾಗಲಿ ಅಲ್ಲ, ಅದು ಪಂಪನದೇ ಎಂದು ಅರ್ಥವಾಗುತ್ತದೆ. ಅದಕ್ಕೆ ಹೆಚ್ಚಿನ ವಿವರಣೆ ಏನೂ ಬೇಕಾಗುವುದಿಲ್ಲ.

ಚಂ|| ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ ||

ದಕ್ಷಿಣದ ಗಾಳಿ ಸೋಕಿದರೆ, ಒಳ್ಳೆಯ ಮಾತುಗಳನ್ನು ಕೇಳಿದರೆ, ಇಂಪಾದ ಸಂಗೀತವು ಕಿವಿಗೆ ಬಿದ್ದರೆ, ಅರಳಿದ ಮಲ್ಲಿಗೆಯನ್ನು ಕಂಡರೆ,  ಗಾಢವಾದ ಸುಖನಿದ್ದೆ ಬಿದ್ದರೆ, (ಇಷ್ಟಾಂಗನಾಸುರತ ಸುಖ ದೊರೆತರೆ)  ವಸಂತೋತ್ಸವ ನಡೆದರೆ…. ಏನು ಹೇಳಲಿ? ಯಾರೇ ಅಂಕುಶವಿಟ್ಟರೂ, ನನ್ನ ಮನಸು ಬನವಾಸಿ ದೇಶವನ್ನು ನೆನೆಯುತ್ತದೆ.

(ಟಿಪ್ಪಣಿ: ಈ ಪದ್ಯದ ʼಆರಂಕುಸವಿಟ್ಟೊಡಂʼ ಎಂಬ ಮಾತಿನ ಅರ್ಥದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಡಾ. ಶ್ರೀಪಾದ ಭಟ್‌ ಎಂಬ ವಿದ್ವಾಂಸರು ಇದು “ಆರಂಕುರವಿಟ್ಟೊಡಂ” ಎಂದು ಇರಬೇಕೆಂದು ಸಾಕಷ್ಟು  ದೀರ್ಘವಾದ ತಮ್ಮ ಲೇಖನದಲ್ಲಿ  ಪ್ರತಿಪಾದಿಸಿದ್ದಾರೆ:

https://nilume.net/2017/03/07/%E0%B2%86%E0%B2%B0%E0%B3%8D-

ಮುಖ್ಯವಾಗಿ ʼಆರಂಕುಸವಿಟ್ಟೊಡಂʼ ಎಂಬ ಮೂಲಪಾಠದ ಬಗ್ಗೆ ಬೆಳ್ಳಾವೆ ವೆಂಕಟನಾರಣಪ್ಪ, ಮುಳಿಯ ತಿಮ್ಮಪ್ಪಯ್ಯ, ಡಿ.ಎಲ್.‌ ನರಸಿಂಹಾಚಾರ್‌ರಂಥ ಪ್ರಮುಖ ವಿದ್ವಾಂಸರು ಯಾವ ತಕರಾರನ್ನೂ ಎತ್ತಿಲ್ಲ. ಡಾ. ಎಂ.ಎಂ. ಕಲಬುರ್ಗಿಯವರು ಭಿನ್ನವಾದ ಒಂದು ಅರ್ಥವನ್ನು ಹೇಳಿದ್ದಾರೆ. ಅಲ್ಲಿ ಅವರು ʼಅಂಕುಸʼ ಶಬ್ದಕ್ಕೆ ಪಾಠಾಂತರಗಳಿಲ್ಲ ಎಂಬುದನ್ನು ಎತ್ತಿ ಹೇಳಿದ್ದಾರೆ.       (https://www.youtube.com/watch?v=AwGfpwLdRJc&t=925s)

ʼಯಾರಾದರೂ ನೆನಪಿಗೆ ಅಂಕುಶವಿಡುವ ಪ್ರಮೇಯ ಯಾಕೆ ಬರುತ್ತಿತ್ತು?ʼ ಎನ್ನುವುದು ಡಾ. ಶ್ರೀಪಾದ ಭಟ್ಟರ ಮುಖ್ಯ ಪ್ರಶ್ನೆ.

ಡಾ. ಎನ್. ಎಸ್.‌ ತಾರಾನಾಥರು ಈ ಪದ್ಯದಲ್ಲಿ ಇಂದ್ರಿಯಾನುಭವಗಳಿಗೆ ಸಂಬಂಧಿಸಿದ ಚಿತ್ರಗಳಿವೆ ಎಂದಿದ್ದಾರಷ್ಟೆ. ಪಂಪನ ಎಲ್ಲ ನೆನಪುಗಳೂ ಇಂದ್ರಿಯಗಳಿಗೆ ಸುಖ ಕೊಡುವ ನೆನಪುಗಳೇ ಆಗಿವೆ. ಈ ಎಲ್ಲ ನೆನಪುಗಳೂ ಪಂಪನ ರಸಿಕತೆಯನ್ನು ಎತ್ತಿ ತೋರಿಸುತ್ತಿವೆ. ಅದರಲ್ಲಿಯೂ ʼಆದ ಕೆಂದಲಂಪಂಗೆಡೆಗೊಂಡೊಡಂʼ  – ಪ್ರಿಯಳಾದ ಹೆಣ್ಣಿನೊಂದಿಗಿನ ಸಂಭೋಗ ಸುಖದ ನೆನಪು – ಎಂದು ಆತನು ಹೇಳಿರುವುದಂತೂ ಆ ಕಾಲದ ಮಡಿವಂತರ ಹುಬ್ಬೇರಿಸುವಂತೆ ಮಾಡಿದ್ದರೆ ಆಶ್ಚರ್ಯವಿಲ್ಲ. ಇದರೊಂದಿಗೆ ʼಮಧು ಮಹೋತ್ಸವಮಾದೊಡಂʼ ಎಂದು ಪಂಪ ಹೇಳಿರುವುದನ್ನೂ ಗಮನಿಸಬೇಕು. ಇದನ್ನು ಸಾಮಾನ್ಯವಾಗಿ ʼವಸಂತೋತ್ಸವʼ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ʼಮಧುʼ ಶಬ್ದಕ್ಕೆ ಸುರೆ ಎಂಬ ಅರ್ಥವೂ ಇದೆ.   ಹೀಗೆ ಇಂದ್ರಿಯ ಸುಖವನ್ನು ವೈಭವೀಕರಿಸುವ  ಪಂಪ ತನ್ನ ಸುತ್ತಲಿನ ಸಂಪ್ರದಾಯಸ್ತ ಜೈನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು.

ಅದಕ್ಕಿಂತ ಮುಖ್ಯವಾಗಿ, ಯಾವ್ಯಾವುದೋ ದೇಶದ ಸೂಳೆಯರ ಸುಂದರ ಮೊಲೆಗಳ ಕೆಳಗೆ ನೇತಾಡುವ ಹಾರವೆಂದೋ, ಅವರ ಸೊಂಟಪಟ್ಟಿಯ ಮಣಿ ಎಂದೋ ತನ್ನನ್ನು ತಾನು ಬಣ್ಣಿಸಿಕೊಳ್ಳುವ,  ಮತ್ತು ಬಹುಶಃ ನಿಜಜೀವನದಲ್ಲೂ ಹಾಗೆಯೇ ಇದ್ದ ಪಂಪ, ಜೈನ ಸಂಪ್ರದಾಯಸ್ಥರಿಗೆ  ಮಾತ್ರವಲ್ಲ, ತನ್ನ ಮನೆಮಂದಿಗೂ  ಇರಿಸುಮುರಿಸು ಮಾಡಿದ್ದರೆ ಆಶ್ಚರ್ಯವೇನಿಲ್ಲ.

ಪಂಪನ ಈ ನಡತೆ, ರೀತಿನೀತಿಗಳು ಅವನ ಮನೆಯೊಳಗೆ ಯಾವ ರೀತಿಯ ವಾತಾವರಣವನ್ನು ಸೃಷ್ಟಿಸಿರಬಹುದು? ಆತನ ಹೆಂಡತಿ ಅವನ ಈ ವರ್ತನೆಯನ್ನು ಹೇಗೆ ತೆಗೆದುಕೊಂಡಿರಬಹುದು? ಅವನ ತಾಯಿಯ ಪ್ರತಿಕ್ರಿಯೆ ಏನಾಗಿರಬಹುದು? ಪಂಪನ ತಾಯಿ ತಾನು ಸ್ವತಃ  ಅವನಿಗೆ ಬುದ್ಧಿ ಹೇಳುವುದಲ್ಲದೆ, ಹಾಗೆ ಮಾಡುವಂತೆ ಪಂಪನ ಗುರುಗಳಲ್ಲಿಯೂ ಕೇಳಿಕೊಂಡಿದ್ದಳೆಂದು ಊಹಿಸಿದರೆ ತಪ್ಪಾದೀತೆ? ಹಾಗಲ್ಲದಿದ್ದರೂ ಪಂಪನ ಗುರುಗಳು ತಾವೇ ಮುಂದಾಗಿ ನಿಂತು ಅವನಿಗೆ ಬುದ್ಧಿ ಹೇಳುವ ಕೆಲಸ ಮಾಡಿರಲಾರರೆ?  ಕಟ್ಟಾ ಜೈನನಾದ ಪಂಪನ ತಂದೆಯಂತೂ ಮಗನೊಂದಿಗೆ ಮಾತನ್ನೇ ಬಿಟ್ಟಿರಲಾರನೆ? ಪಂಪನ ನಿಜ ಅರ್ಥದ ಸ್ನೇಹಿತರು ಈ ಬಗ್ಗೆ ಅವನಲ್ಲಿ ಆಕ್ಷೇಪ ಎತ್ತಿರಲಾರರೆ?

ಈ ಹಿನ್ನೆಲೆಯಲ್ಲಿ, ಹೆಂಡತಿಯ ಮೌನಯುದ್ಧ, ತಾಯಿ ಮತ್ತು ಗುರುವಿನ  ಬುದ್ಧಿವಾದಗಳು, ತಂದೆಯ ಸಿಟ್ಟು, ಮಿತ್ರರ ಹಿತನುಡಿಗಳೆಂಬ ಅಂಕುಶಗಳನ್ನೇ ನೆನಪಿಸಿಕೊಂಡು  ಇಲ್ಲಿ ʼಆರಂಕುಸಮಿಟ್ಟೊಡಂʼ ಎಂದು ಪಂಪ ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. (ಇಲ್ಲಿನ ʼಆರ್‌ʼ ಪದವು ಯಾರು ಎಂಬ ಅರ್ಥವನ್ನು ಮಾತ್ರ ಸೂಚಿಸದೆ, ʼಯಾರು ಬೇಕಾದರೂ ಆಗಲಿʼ ಎಂಬ ಅರ್ಥವನ್ನೂ ಸೂಚಿಸುತ್ತದೆ ಎಂಬುದನ್ನು ಗಮನಿಸಬೇಕು.)

ಮ||     ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲೊಂದಿಂಪುಂ ತಗುಳ್ದೊಂದು ಗೇ
ಯಮುಮಾದಕ್ಕರಗೊಟ್ಟಿಯುಂ ಚದುರರೊಳ್ವಾತುಂ ಕುಳಿರ್ ಕೋೞ್ಪ ಜೊಂ|
ಪಮುಮೇವೇೞ್ವುದನುಳ್ಳ ಮೆಯ್ಸುಕಮುಮಿಂತೆನ್ನಂ ಕರಂ ನೋಡಿ ನಾ
ಡೆ ಮನಂಗೊಂಡಿರೆ ತೆಂಕನಾಡ ಮಱೆಯಲ್ಕಿನ್ನೇಂ ಮನಂ ಬರ್ಕುಮೇ|| ೩೧||

ಅಮರ್ದಂ ಮುಕ್ಕುಳಿಪ ಅಂತುಟು ಅಪ್ಪ ಸುಸಿಲ ಒಂದು ಇಂಪುಂ, ತಗುಳ್ದ ಒಂದು ಗೇಯಮುಂ, ಆದ ಅಕ್ಕರ ಗೊಟ್ಟಿಯುಂ, ಚದುರರ ಒಳ್ವಾತುಂ, ಕುಳಿರ್‌ ಕೋೞ್ಪ ಜೊಂಪಮುಂ, ಏ ವೇೞ್ವುದನ್‌ ಉಳ್ಳ ಮೆಯ್ಸುಕಮುಂ, ಇಂತು ಎನ್ನಂ ಕರಂ ನೋಡಿ ನಾಡೆ ಮನಂಗೊಂಡಿರೆ, ತೆಂಕನಾಡ ಮಱೆಯಲ್ಕೆ ಇನ್‌ ಏಂ ಮನಂ ಬರ್ಕುಮೇ?

ಅಮೃತವನ್ನೂ ಉಗಿಯುವಂತೆ ಮಾಡುವ ಸುರತದ ಒಂದು ಸವಿರುಚಿ, ಅದನ್ನು ಹಿಂಬಾಲಿಸಿ ಬರುವ ಸಂಗೀತ, ವಿದ್ವಜ್ಜನರ ಕೂಟ, ಚತುರರ ಒಳ್ಳೆಯ ಮಾತುಗಳು, ತಂಪಾದ ಬಳ್ಳಿಮಾಡಗಳು  ಹೀಗೆ ಮೈಸುಖಕ್ಕೆ ಕೇಳಿದ್ದನ್ನು ಕೊಟ್ಟು, ನನ್ನನ್ನು ಚೆನ್ನಾಗಿ ನೋಡಿಕೊಂಡು, ನನ್ನ ಮನಸ್ಸನ್ನು ಸೂರೆಗೊಂಡಿರುವ ತೆಂಕನಾಡನ್ನು ಮರೆಯಲು ಎಂದಾದರೂ ಮನಸ್ಸು ಬಂದೀತೇ?

ವ|| ಎಂದರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾ ನಾಡನೊಂದೆ ಬಿಲ್ಲೊಳುಂಡಿಗೆ ಸಾಧ್ಯಂ ಮಾಡಿ ಪಶ್ಚಿಮ ದಿಗ್ವಿಭಾಗಾಭಿಮುಖನಾಗಿ ಬಂದು-

ಎಂದು ಅರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಂ ಆ ನಾಡನ್‌ ಒಂದೆ ಬಿಲ್ಲೊಳ್ ಉಂಡಿಗೆ ಸಾಧ್ಯಂ ಮಾಡಿ, ಪಶ್ಚಿಮ ದಿಗ್ವಿಭಾಗ ಅಭಿಮುಖನಾಗಿ ಬಂದು-

ಎಂದು ಅರ್ಜುನನು ತೆಂಕನಾಡನ್ನು ತಿಳಿದು ಮೆಚ್ಚುತ್ತಾ, ಒಂದೇ ಬಾಣದ ಹೊಡೆತದಿಂದ ಆ ನಾಡಿನಲ್ಲಿ ತನ್ನ ಮುದ್ರೆ ಚಲಾವಣೆಯಾಗುವಂತೆ ಮಾಡಿ, ಪಶ್ಚಿಮ ದಿಕ್ಕಿನ ಕಡೆಗೆ ಬಂದು-