ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ ಆ ಪೆಂಡವಾಸಗೇರಿಯೊಳಗೆ ಸೌಭಾಗ್ಯದ, ಭೋಗದ, ಚಾಗದ ರೂಪುಗಳ್ ಮಾನಸರೂಪು ಆದಂತೆ

ಎಂಬುದನ್ನು ಕೇಳುತ್ತಾ ಬರುತ್ತಿರಲು, ಆ ಹೆಣ್ಣುಗಳ ಕೇರಿಯಲ್ಲಿ ಶ್ರೀಮಂತಿಕೆ, ಭೋಗ, ದಾನಗಳೇ ಮೈವೆತ್ತಂತಿದ್ದ

ಉ|| ಸೀಗುರಿ ಕಾಪಿನಾಳ್ಕುಣಿದು ಮೆಟ್ಟುವ ವೇಸರಿಗೞ್ತೆ ಬೀರಮಂ

ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊೞ್ಗಿನಿಂದೆ ಮೆ

ಯ್ಯೋಗಮಳುಂಬಮಪ್ಪ ಬಿಯಮಾರೆರ್ದೆಗಂ ಬರೆ ಬರ್ಪ ಪಾಂಗಗು

ರ್ವಾಗಿರೆ ಚೆಲ್ವನಾಯ್ತರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ|| ೮೭||

(ಡಿ.ಎಲ್.‌ನರಸಿಂಹಾಚಾರ್‌ ಅವರು‌ ಸೂಚಿಸಿರುವ ಪಾಠಾಂತರಗಳು)

ಸೀಗುರಿ, ಕಾಪಿನಾಳ್‌, ಕುಣಿದು ಮೆಟ್ಟುವ ವೇಸರಿಗೞ್ತೆ, ಬೀರಮಂ ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರ ಒಳ್ಗಿನಿಂದೆ, ಮೆಯ್ಯೋಗಂ ಅಳುಂಬಮಪ್ಪ ಬಿಯಂ ಆರ ಎರ್ದೆಗಂ ಬರೆ, ಬರ್ಪ ಪಾಂಗು ಅಗುರ್ವಾಗಿರೆ, ಚೆಲ್ವನಾಯ್ತು ಅರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ

ಕೊಡೆ (ಎಂದರೆ ಕೊಡೆ ಹಿಡಿದ ಆಳುಗಳು), ಕಾವಲಿನ ಆಳುಗಳು, ನಡೆಯುವಾಗ ಕುಣಿಯುವಂತೆ ಕಾಣುವ ಹೇಸರಗತ್ತೆಗಳು, (ಅರಬೊಜಂಗರ)ಸಾಹಸದ, ದಾನದ ವೈಭವವನ್ನು ಹೊಗಳುತ್ತ ಜೊತೆಯಲ್ಲಿ ಗುಂಪುಗೂಡಿ ಬರುವವರು, ಮಾಡಿದ ಖರ್ಚು ಕಣ್ಣಿಗೆ ಹೊಡೆಯುವಂಥ ವಿಶೇಷವಾದ ದೇಹಾಲಂಕಾರ ಇವು ಎಲ್ಲರಿಗೂ ನಿಚ್ಚಳವಾಗಿ ಕಾಣಿಸುತ್ತಿದ್ದವು. ಹೀಗೆ ಬರುತ್ತಿದ್ದ ಅರಬೊಜಂಗರ ರೀತಿ ಇಂದ್ರನ ವೈಭವವನ್ನೂ ಮೀರಿಸುವಂತಿದ್ದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತಿತ್ತು.

[ಟಿಪ್ಪಣಿ: ಇಲ್ಲಿ ಡಿ. ಎಲ್‌. ನರಸಿಂಹಾಚಾರ್‌ ಅವರು ʼಮೆಯ್ಯೋಗʼ ಎಂಬ ಪಾಠವನ್ನಿಟ್ಟುಕೊಂಡು ಅದಕ್ಕೆ ʼದೇಹಾಲಂಕರಣʼ ಎಂಬ ಅರ್ಥ ಕೊಟ್ಟಿದ್ದಾರೆ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು (ಹಂಪಿ ಕನ್ನಡ ವಿವಿಯ ಪ್ರಕಟಣೆ) ʼಮೆಯ್ವೋಗʼ ಎಂದು ಇಟ್ಟುಕೊಂಡು ಅದಕ್ಕೆ ʼಮೈ ಭೋಗʼ ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಪಿ.ವಿ. ನಾರಾಯಣ ಅವರು ʼಪಂಪನ ನುಡಿಗಣಿʼಯಲ್ಲಿ ʼಮೈಭೋಗʼ ಎಂಬ ಶಬ್ದಕ್ಕೆ ʼದೇಹದ ಸುಖʼ ಎಂಬ ಅರ್ಥ ಕೊಟ್ಟಿದ್ದಾರೆ.)

ವ|| ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳ ಬೊಜಂಗರುಮಂ ಸುಣ್ಣದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನೊತ್ತೆವಿಡಿಸಲಟ್ಟುವ ಚಿಕ್ಕ ಪೋರ್ಕುಳಿ ಬೊಜಂಗರುಮಂ ಕತ್ತುರಿ ಬಿಯಮಂ ಮೆರೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೊೞಲ ಬೊಜಂಗರ ಬಿಯದಳವಿಗೆ ಮನದೊಳ್ ಮೆಚ್ಚುತ್ತುಂ ಬರ್ಪನೊಂದೆಡೆಯೊಳ್‌ ಕಳ್ಳೊಳಮಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರುಮೊಳ್ವೆಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು ಮೂನೂಱಱುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆರೆದು ತಲೆಯೊಳ್ ತಳಿದು ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟಿಟ್ಟು ಕಿಱಿಯರ್ ಪಿರಿಯರಱಿದು ಪೊಡವಟ್ಟು ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆಱೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಿಕಿಱಿದನೆರೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು-

ಮತ್ತಂ ಅಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳ ಬೊಜಂಗರುಮಂ, ಸುಣ್ಣದೆಲೆಯನ್‌ ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನ್‌ ಒತ್ತೆವಿಡಿಸಲ್‌ ಅಟ್ಟುವ ಚಿಕ್ಕ ಪೋರ್ಕುಳಿ ಬೊಜಂಗರುಮಂ, ಕತ್ತುರಿ ಬಿಯಮಂ ಮೆರೆದು, ಕತ್ತುರಿಯೊಳ್ ಪೂೞ್ದು, ಕತ್ತುರಿಮಿಗದಂತೆ ಇರ್ಪ ಕತ್ತುರಿ ಬೊಜಂಗರುಮಂ ನೋಡಿ, ಪೊೞಲ ಬೊಜಂಗರ ಬಿಯದ ಅಳವಿಗೆ ಮನದೊಳ್ ಮೆಚ್ಚುತ್ತುಂ ಬರ್ಪನ್‌, ಒಂದೆಡೆಯೊಳ್‌ ಕಳ್ಳೊಳಂ ಅಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರುಂ ಒಳ್ವೆಂಡಿರ್‌ ಒಂದೆಡೆಯೊಳ್‌ ಇರ್ದು, ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬಳೆದು, ದಳಂಬಡೆದು, ಮೂನೂಱಱುವತ್ತು ಜಾತಿಯ ಕಳ್ಗಳಂ ಮುಂದಿಟ್ಟು, ಮಧುಮಂತ್ರದಿಂ ಮಧುದೇವತೆಗಳನ್‌ ಅರ್ಚಿಸಿ, ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ, ಗಿಳಿಯ ಕೋಗಿಲೆಯ ಕೊಂಚೆಯ ಅಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ, ಮಧುಮಂತ್ರಂಗಳಿಂ ಮಂತ್ರಿಸಿ, ನೆಲದೊಳ್‌ ಎರೆದು, ತಲೆಯೊಳ್ ತಳಿದು, ಕಳ್ಳೊಳ್ ಬೊಟ್ಟನ್‌ ಇಟ್ಟುಕೊಂಡು, ಕೆಲದರ್ಗೆಲ್ಲಂ ಬೊಟ್ಟಿಟ್ಟು, ಕಿಱಿಯರ್ ಪಿರಿಯರ್‌ ಅಱಿದು ಪೊಡವಟ್ಟು, ಧರ್ಮ- ಗಳ್‌ ಕುಡಿವರ್ಗೆಲ್ಲಂ ಮೀಸಲು ಕಳ್ಳನ್‌ ಎಱೆದು, ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಿಕಿಱಿದನ್‌ ಎರೆದು, ಕುಡಿಬಿದಿರ ಕುಡಿಯ, ಮಾವಿನ ಮಿಡಿಯ, ಮಾರುದಿನ, ಮೆಣಸುಗಡಲೆಯ ಪುಡಿಯೊಳ್‌ ಅಡಸಿದ ಅಲ್ಲದಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು-

ಮತ್ತು ಅಲ್ಲಿ ಕೋಟಿ ಹೊನ್ನಿಗೆ ಗಂಟೆ ಬಾರಿಸುವ ʼಕಿರುಕುಳ ಬೊಜಂಗʼರನ್ನೂ, ತಾಂಬೂಲವನ್ನು ಒತ್ತೆ ಇಟ್ಟು ಮದದಾನೆ, ಮಾಣಿಕ್ಯಗಳನ್ನು ಬಿಡಿಸಿಕೊಂಡು ಬರಲು ಜನ ಕಳಿಸುವ ʼಚಿಕ್ಕ ಪೋರ್ಕುಳಿ ಬೊಜಂಗʼರನ್ನೂ, ಕಸ್ತೂರಿಗಾಗಿ ತಾನು ಖರ್ಚು ಮಾಡಿರುವುದು ಊರಿಗೆಲ್ಲ ಗೊತ್ತಾಗುವಂತೆ ಅದರಲ್ಲೇ ಮುಳುಗಿಹೋಗಿ (ಎಂದರೆ ಮೈಗೆಲ್ಲ ಅದನ್ನು ಬಳಿದುಕೊಂಡು) ಕಸ್ತೂರಿ ಮೃಗದಂತೆಯೇ ಇರುವ ʼಕತ್ತುರಿ ಬೊಜಂಗʼರನ್ನೂ ನೋಡಿ ಊರಿನ ಬೊಜಂಗರ ಖರ್ಚು ಮಾಡುವ ತಾಖತ್ತನ್ನು ಮೆಚ್ಚುತ್ತಾ ಬರುತ್ತಿರಲು ಊರಿನ ಒಳಗೆ ಒಂದು ಕಡೆ ಕಳ್ಳಿನಲ್ಲೂ, ಅಮೃತದಲ್ಲೂ ಹುಟ್ಟಿದ ಹೆಣ್ಣುಗಳಂತೆ ಸೊಗಸಾಗಿರುವ ಹಲವು ಸುಂದರ ಹೆಣ್ಣುಗಳು ಒಂದು ಸ್ಥಳದಲ್ಲಿ ಸೇರಿದ್ದರು. ಕಾಮದೇವನೆಂಬ ವೀರ್ಯಪುಷ್ಟಿಯ ಔಷಧ ತಯಾರಕನು ತಯಾರಿಸಿದ ಔಷಧದಿಂದ  ಪುಷ್ಕಳವಾಗಿ ಬೆಳೆದಿದ್ದ ಅವರು, ಮುನ್ನೂರ ಅರವತ್ತು ಜಾತಿಯ ಕಳ್ಳುಗಳನ್ನು ಮುಂದಿಟ್ಟುಕೊಂಡರು; ಮಧುಮಂತ್ರದಿಂದ ಮಧುದೇವತೆಗಳನ್ನು ಪೂಜಿಸಿದರು; ಬಂಗಾರ, ಬೆಳ್ಳಿ, ಪದ್ಮರಾಗ, ಪಚ್ಚೆಗಳಿಂದ ಮಾಡಿದ ಕೋಗಿಲೆ, ಹಂಸ ಮುಂತಾದ ಹಕ್ಕಿಗಳ ಆಕಾರದ ಪಾತ್ರೆಗಳಲ್ಲಿ ಮಧುವನ್ನು ತುಂಬಿಸಿದರು; ಮಧುಮಂತ್ರಗಳಿಂದ ಮಂತ್ರಿಸಿ, ಆ ಕಳ್ಳನ್ನು ನೆಲಕ್ಕೆರೆದರು;  ತಲೆಗೆ ಚಿಮುಕಿಸಿಕೊಂಡರು; ಹಣೆಗೆ ಕಳ್ಳಿನ ತಿಲಕವಿಟ್ಟುಕೊಂಡು, ಅಕ್ಕಪಕ್ಕದವರಿಗೂ ತಿಲಕವಿಟ್ಟರು; ಕಿರಿಯರೋ ಹಿರಿಯರೋ ಎಂಬುದನ್ನು ನೋಡಿಕೊಂಡು (ಹಿರಿಯರಾದರೆ ಅವರಿಗೆ) ನಮಸ್ಕರಿಸಿದರು; ಧರ್ಮದ ಕಳ್ಳು ಕುಡಿಯುವವರೆಲ್ಲರಿಗೂ ಅವರಿಗೆ ಮೀಸಲಾದ ಕಳ್ಳನ್ನು ಎರೆದರು; ತಾವು ಚಿನ್ನ, ಬೆಳ್ಳಿಯ ಪಾತ್ರೆಗಳಲ್ಲಿ ಸ್ವಲ್ಪಸ್ವಲ್ಪವೇ ಹಾಕಿಕೊಂಡು, ಕಳಲೆಯ, ಮಾವಿನಮಿಡಿಯ, ಬಿಲ್ವಪತ್ರೆ ಕಾಯಿಯ, ಮೆಣಸುಗಡಲೆಯ ಪುಡಿಯನ್ನು ಸೇರಿಸಿದ ಶುಂಠಿಯ ಚಾಕಣವನ್ನು ಸವಿಯುತ್ತ

[ಟಿಪ್ಪಣಿ: ೧. ʼಕೋಟಿ ಪೊಂಗೆ ಘಂಟೆಯಲುಗುವʼ – ಇದಕ್ಕೆ ಮುಳಿಯ ತಿಮ್ಮಪ್ಪಯ್ಯನವರ ವಿವರಣೆ (ನಾಡೋಜ ಪಂಪ) ಹೀಗೆ: “ಆ ಒಳ್ವೆಂಡಿರ ಗೃಹದ್ವಾರದಲ್ಲಿ ಒಂದು ಘಂಟೆಯನ್ನು ಕಟ್ಟುವುದು ಆಗಿನ ಪದ್ಧತಿಯಂತೆ. ಪ್ರಥಮ ಪ್ರವೇಶಾವಸರದವನು ಆ ಘಂಟೆಯನ್ನಲುಗಿಸಿ, ತನ್ನ ಆಗಮನವನ್ನು ಸೂಚಿಸಬೇಕಾಗಿತ್ತಂತೆ. ಘಂಟೆಯನ್ನಲುಗಿಸಿದವನು, ʼಒತ್ತೆʼಯಾಗಿ ಅಥವಾ ಒಸಗೆಯಾಗಿ“ಕೋಟಿ(ಅತ್ಯಧಿಕ) ʼಪೊನ್ನʼನ್ನು ಆ ʼಒಳ್ವೆಂಡಿತಿʼಗೆ ಕೊಡಬೇಕೆಂಬ ನಿಯಮವು  ಆ ವಾಟದ ದೇಸಿಯಾಗಿ ಇದ್ದಿರಬೇಕು”.

೨.ಇಲ್ಲಿ ಕವಿ ಒಟ್ಟು ನಾಲ್ಕು ಬಗೆಯ ʼಬೊಜಂಗʼರನ್ನು ಹೇಳಿದ್ದಾನೆ: ʼಅರಬೊಜಂಗʼ, ʼಕಿಱುಕುಳ ಬೊಜಂಗʼ, ʼಚಿಕ್ಕ ಪೋರ್ಕುಳಿ ಬೊಜಂಗʼ ಮತ್ತು ʼಕತ್ತುರಿ ಬೊಜಂಗʼ. ಈ ಪೈಕಿ ಮೊದಲನೆಯ ʼಅರಬೊಜಂಗʼದ ಅರ್ಥ ಸ್ಪಷ್ಟವಾಗಿಯೇ ಇದೆ.  ಆದರೆ ಉಳಿದ ಮೂರು ಶಬ್ದಗಳ ನಿಜವಾದ ಅರ್ಥವನ್ನು ನಿರ್ಣಯಿಸುವುದು ಕಷ್ಟ. ಏಕೆಂದರೆ ಅವೆಲ್ಲ ಕವಿ ಕಂಡ ಅಂದಿನ ಕಾಲದ ಸಮಾಜದ ವೇಶ್ಯಾವಾಟಿಕೆಗಳ ರಾತ್ರಿ ಬದುಕಿನ ನೈಜ ನೋಟಗಳ ತುಂಡುಗಳು. ಕವಿಯ ಕಾಲದಿಂದ ಸಾವಿರ ವರ್ಷಗಳಿಗಿಂತ ಹೆಚ್ಚು ಮುಂದೆ ಬಂದಿರುವ ನಾವು, ಊಹೆಯ ಮೂಲಕ ಕವಿ ಬಳಸಿರುವ ಶಬ್ದಗಳಿಗೆ, ಚಿತ್ರಿಸಿರುವ ದೃಶ್ಯಗಳಿಗೆ ಅರ್ಥ ಮಾಡುವುದು ಅನಿವಾರ್ಯ. ಹೀಗೆ ಅರ್ಥ ಮಾಡುವಾಗ, ಕವಿಯು ʼಅರಿಕೇಸರಿಯು ಊರಬೊಜಂಗರ ಖರ್ಚು ಮಾಡುವ ತಾಖತ್ತನ್ನು ಮೆಚ್ಚುತ್ತಾ ಬರುತ್ತಿರಲುʼ ಎಂದು ಹೇಳಿರುವುದನ್ನು ಪರಿಗಣಿಸಬೇಕು. ಈ ಮುಂದಿನವು ಕವಿ ನೀಡಿರುವ ವಿವರಣೆಗಳನ್ನು ಆಧರಿಸಿದ ಅಂತಹ ಊಹೆಗಳೇ.

ಕಿಱುಕುಳ ಬೊಜಂಗ: ಇವನು ʼಕೋಟಿ ಪೊಂಗೆ  ಘಂಟೆಯಲುಗುವವನುʼ ( ಎಂದರೆ ಸೂಳೆಯ ಮನೆಯ ಒಳಹೋಗಲು ಅಷ್ಟು ಹಣವನ್ನು ಕೊಡಲು ತಯಾರಿರುವವನು). ಈ ಮೊತ್ತ ಅಂದಿಗಿರಲಿ ಇಂದಿಗೂ ಬಹು ದೊಡ್ಡದೇ. ಕವಿಯ ಮಾತಿನಲ್ಲಿ ಉತ್ಪ್ರೇಕ್ಷೆ ಇದ್ದರೂ ಇರಬಹುದು. ಅಥವಾ ಪಂಪನು ಅಂಥ ಶ್ರೀಮಂತಿಕೆಯನ್ನು ಕಂಡಿರಲೂಬಹುದು.

ಚಿಕ್ಕ ಪೋರ್ಕುಳಿ ಬೊಜಂಗ: ʼ ಸುಣ್ಣದೆಲೆಯನ್‌ ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನ್‌ ಒತ್ತೆವಿಡಿಸಲ್‌ ಅಟ್ಟುವವನುʼ. – ಈ ಮಾತು ಪಂಪನ ದಿನಗಳಲ್ಲಿ ಆಡುಭಾಷೆಯಲ್ಲಿ ಬಳಕೆಯಲ್ಲಿದ್ದ ಮಾತಾಗಿರಬಹುದು. ʼಸಣ್ಣ ವ್ಯವಹಾರಕ್ಕೆ ದೊಡ್ಡ ಖರ್ಚು ಮಾಡಿ, ಜನ ಹುಬ್ಬೇರಿಸುವಂತೆ ಮಾಡುವವನುʼ ಎಂದು ಇದರ ಸಾರಾಂಶವಾಗಿರಬಹುದು. ಈಗ ಅದರ ವಾಚ್ಯಾರ್ಥ ಆ ಅರ್ಥವನ್ನು ಸೂಚಿಸುವಂತೆ ಕಾಣುವುದಿಲ್ಲ.

ಕತ್ತುರಿ ಬೊಜಂಗ: ಇವನು ಕತ್ತುರಿ ಬಿಯಮಂ ಮೆರೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತೆ ಇರುವವನು. ಎಂದರೆ ಒಂದು ಬಗೆಯ ಖಯಾಲಿ ಆಸಾಮಿ. ತುಂಬ ದುಬಾರಿಯಾದ ಕಸ್ತೂರಿಯನ್ನು ಧಾರಾಳವಾಗಿ ಕೊಂಡು ತಂದು ಅದನ್ನು ಮೈಗೆಲ್ಲ ಬಳಿದುಕೊಂಡು, ಎಲ್ಲರ ಮೂಗಿಗೂ ಪರಿಮಳ ಪಸರಿಸುವವನು! ಜೊತೆಗೆ ಕಸ್ತೂರಿ ಮೃಗದಂತೆ ಸಾಧು, ನಿರುಪದ್ರವಿ. ಕೊಂಚ ಹಾಸ್ಯಾಸ್ಪದ ವ್ಯಕ್ತಿಯೂ ಆಗಿರಬಹುದು!

ಇಂದಿನ ದಿನಗಳಲ್ಲಿ ನಡೆಯುವ ರಾತ್ರಿ ಕ್ರಿಕೆಟ್‌ ಪಂದ್ಯಗಳಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹಲವು ಬಗೆಯ ಮಂಗಾಟಗಳನ್ನು ನಡೆಸಿ ಜನರ, ಕ್ಯಾಮರಾದ ಗಮನ ಸೆಳೆಯಲು ಯತ್ನಿಸುವವರನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇಂತಹ ವ್ಯಕ್ತಿಗಳೇ ವೇಶ್ಯಾವಾಟಿಕೆಯ ರಾತ್ರಿಬದುಕನ್ನು ವರ್ಣರಂಜಿತವಾಗಿಸುವವರು ತಾನೆ?]

ಮ|| ಮಧು ಸೀಧುಂ ಕಟು ಸೀಧು ಪೋ ಪುಳಿತ ಕಳ್ಳಲ್ತುಂ ಕರಂ ಕಯ್ತು ಬ

ರ್ಪುದು ಮಾರೀಚಿ ತೊಡರ್ಪುಳಿಂದೆ ಸರದಂ ಕಂಪಿಲ್ಲ ಸೊರ್ಕಿಪ್ಪಲಾ |

ಱದು ಚಿಂತಾಮಣಿಗೇವುದಕ್ಕ ದಳಮಿಲ್ಲೀ ಕಕ್ಕರಕ್ಕಿಂತುಟ

ಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್‌ ಕಾಮಾಂಗಮಂ ಕಾಂತೆಯರ್‌ ||೮೮||

ಮಧು, ಸೀಧುಂ, ಕಟು ಸೀಧು, ಪೋ ಪುಳಿತ ಕಳ್‌ ಅಲ್ತುಂ, ಕರಂ ಕಯ್ತು ಬರ್ಪುದು ಮಾರೀಚಿ ತೊಡರ್ಪುಳಿಂದೆ, ಸರದಂ ಕಂಪಿಲ್ಲ, ಸೊರ್ಕಿಪ್ಪಲಾಱದು, ಚಿಂತಾಮಣಿಗೇವುದಕ್ಕ, ದಳಮಿಲ್ಲೀ ಕಕ್ಕರಕ್ಕೆ ಇಂತುಟು ಅಪ್ಪುದು ಕಳ್‌ ಅಪ್ಪುದು ತಪ್ಪದೆಂದು ಕುಡಿದರ್‌ ಕಾಮಾಂಗಮಂ ಕಾಂತೆಯರ್‌

(ಆ ಹೆಣ್ಣುಗಳು ಕಳ್ಳುಗಳ ಪೈಕಿ ಯಾವುದು ಆಗಬಹುದೆಂದು ನೋಡಿ ನೋಡಿ ಆರಿಸುತ್ತಿದ್ದಾರೆ)  ಮಧು, ಸೀಧು, ಕಟುಸೀಧು – ಹೋಗಾಚೆ, ಒಂದೂ ಹುಳಿ ಬಂದಿಲ್ಲ! ಮಾರೀಚಿಯು ತೊಡರ್ಪುಳಕ್ಕಿಂತ ಆಗಬಹುದು! ಸರದಕ್ಕೆ ಪರಿಮಳವಿಲ್ಲ, (ಕುಡಿದರೆ) ಏರುವುದೂ ಇಲ್ಲ! ಇದು ಚಿಂತಾಮಣಿ, ಇದರಿಂದ ಏನಾದೀತು? ಇದು ಕಕ್ಕರ, ಹಾಂ! ಇದು ಆಗಬಹುದು! ಇದಕ್ಕೆ ಅಡಿಕೆ ಬೇಡ, ಕಳ್ಳೆಂದರೆ ಹೀಗಿರಬೇಕು, ಇದು ನಿಜವಾದ ಕಳ್ಳು! ಎನ್ನುತ್ತ ಆ ಹೆಣ್ಣುಗಳೆಲ್ಲ ಕಳ್ಳನ್ನು ಕುಡಿದರು.

(ಟಿಪ್ಪಣಿ: ೧. ʼತೊಡಪ್ಪುಳʼ ಎನ್ನುವುದು ಈಗಿನ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಒಂದು ತಾಲೂಕು ಕೇಂದ್ರದ ಹೆಸರೂ ಹೌದು. ಇದು ಪ್ರವಾಸಿಗಳಿಗೆ ಬಹು ಪರಿಚಿತವಾದ ಊರೆಂದೂ, ಇಲ್ಲಿಂದ, ಸಮೀಪದ  ಹಲವು ಪ್ರವಾಸಿ ಕೇಂದ್ರಗಳಿಗೆ ಉತ್ತಮ ಸಂಪರ್ಕವಿದೆಯೆಂದೂ ಗೂಗಲ್ಲಿನಲ್ಲಿ ವಿವರಗಳಿವೆ. ಪಂಪನ ಈ ʼತೊಡಪ್ಪುಳʼ ಹೆಸರಿನ ಕಳ್ಳೂ ಅದೇ ತೊಡಪ್ಪುಳದಿಂದ ಆಮದಾದ‌ದ್ದಿರಬಹುದೆ? ಪಂಪ ತನ್ನ ಬಗ್ಗೆ ಹೇಳಿಕೊಳ್ಳುವಾಗ ʼಕೇರಳ ವಿಟೀ ಕಟೀ ಸೂತ್ರಾರುಣ ಮಣಿʼ ಎಂದಿರುವುದು, ದ್ರೌಪದಿಯ ಸ್ವಯಂವರಕ್ಕೆ ಬಂದವರಲ್ಲಿ ʼಚೇರಮ್ಮʼನೂ ಇದ್ದನೆನ್ನುವುದು ಇವೆಲ್ಲ ಅವನಿಗೆ ಕೇರಳದ ಪರಿಚಯ ಇದ್ದಿದ್ದನ್ನು ಸೂಚಿಸುತ್ತವೆಯಷ್ಟೆ.

೨. ಅಂದಿನ ಕಾಲದಲ್ಲಿ ಕಳ್ಳಿಗೆ -ಅಮಲು ಹೆಚ್ಚಿಸುವುದಕ್ಕಾಗಿ- ಅಡಿಕೆಯನ್ನು ಸೇರಿಸುತ್ತಿದ್ದರೆ?)

ವ| ಅಂತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಳ್ವೆರಸು ನುಡಿವ ನುಡಿಗಳುಂ ಪೊಡರ್ವ ನಿಡಿಯ ಪುರ್ವುಗಳುಂ ನಿಡಿಯಲರ್ಗಣ್ಗಳೊಳ್ ವಿಕಾರಂ ಬೆರಸು ನೆಗೞ್ದಭಿನಯಂಗಳುಂ ಮಳಮಳಿಪ ರೂಪು ಕಣ್ಗಳೊಳ್ ಬೆಳ್ಪನೞಿಯೆ ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ ತನಿಗೆತ್ತುವೆರಸು ಬತ್ತಿ ಸೊಗಯಿಸುವ ಬೆಳರ್ವಾಯ್ಗಳೊಳಿಂಪಂ ತಾಳ್ದಿ ಪೊಱಮಡುವ ತಣ್ಗಂಪುಗಳುಮಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಮಳವಲ್ಲದೊಪ್ಪೆ ಪಲರುಮೊಳ್ವೆಂಡಿರೊಂದೆಡೆಯೊಳಿರ್ದಲ್ಲಿಯೊರ್ವಳ್-

ಅಂತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಳ್ವೆರಸು ನುಡಿವ ನುಡಿಗಳುಂ, ಪೊಡರ್ವ ನಿಡಿಯ ಪುರ್ವುಗಳುಂ, ನಿಡಿಯಲರ್ಗಣ್ಗಳೊಳ್ (ನಿಡಿದು+ಅಲರ್+ಕಣ್ಗಳೊಳ್) ವಿಕಾರಂ ಬೆರಸು ನೆಗೞ್ದ ಅಭಿನಯಂಗಳುಂ, ಮಳಮಳಿಪ ರೂಪು, ಕಣ್ಗಳೊಳ್ ಬೆಳ್ಪನ್‌ ಅೞಿಯೆ ಸೋಂಕುವ ಕೆಂಪುಗಳುಂ, ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ ತನಿಗೆತ್ತುವೆರಸು, ಬತ್ತಿ ಸೊಗಯಿಸುವ ಬೆಳರ್ವಾಯ್ಗಳೊಳ್‌ ಇಂಪಂ ತಾಳ್ದಿ ಪೊಱಮಡುವ ತಣ್ಗಂಪುಗಳುಂ, ಅಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಂ ಅಳವಲ್ಲದೆ ಒಪ್ಪೆ, ಪಲರುಂ ಒಳ್ವೆಂಡಿರ್‌ ಒಂದೆಡೆಯೊಳ್‌ ಇರ್ದು ಅಲ್ಲಿ ಓರ್ವಳ್

ಹಾಗೆ ಕುಡಿದದ್ದು ಏರಿದ ಹೊಡೆತಕ್ಕೆ ಅಲ್ಲಿ ಸೇರಿದ್ದ ಆ ಹೆಣ್ಣುಗಳ ಮಾತು ತುದಿ ನಾಲಿಗೆಯಲ್ಲಿ ತೊದಲತೊಡಗಿತು; ಅವರ ಉದ್ದದ ಹುಬ್ಬುಗಳು ಹಾರತೊಡಗಿದವು; ಉದ್ದವಾದ ಹೂಗಣ್ಣುಗಳಲ್ಲಿ ವಿಕಾರ ಬೆರೆತ ಅಭಿನಯಗಳು ಕಾಣಿಸಿಕೊಂಡವು; ಮುಖ ಕೆಂಪಾಯಿತು; ಕಣ್ಣುಗಳ ಬಿಳಿಭಾಗವನ್ನು ಅಳಿಸಿ ಕಾಣಿಸುವ ಕೆಂಬಣ್ಣವು, ತುಟಿಗಳು ತಮ್ಮ ಕೆಂಪನ್ನು ಕಣ್ಣುಗಳಿಗೆ ಕೊಟ್ಟು ಕಣ್ಣುಗಳ ಬಿಳಿಯನ್ನು ತಾವು ತೆಗೆದುಕೊಂಡಂತೆ ಕಾಣಿಸಿತು; ನಡುಗುತ್ತಿದ್ದ ಅವರ ಒಣ ತುಟಿಗಳು ಸಿಹಿಯಾದ (ಕಳ್ಳಿನ!) ಸುವಾಸನೆಯನ್ನು ಸೂಸಿದವು; ಅವರ ಮೈಮೇಲಿನ ಬೆವರ ಹನಿಗಳು ಅಮೃತದ ಹನಿಗಳಂತಿದ್ದವು. ಹೀಗೆ ಈ ನೋಟವು ತುಂಬ ಚೆಲುವಾಗಿ ಕಾಣಿಸುತ್ತಿರಲು, ಹಲವು ಸುಂದರ ಹೆಣ್ಣುಗಳು ಒಂದೆಡೆಯಲ್ಲಿದ್ದು, ಅದರಲ್ಲೊಬ್ಬಳು-

ಪೃಥ್ವಿ|| ಬೆಳರ್ತ ಬೆಳರ್ವಾಯ್ ಕರಂ ಪೊಳೆವಪಾಂಗೆ ಕಣ್ಣಿಂದಳು

ರ್ತುಳುಂಕೆ ನಿಡುವುರ್ವುಗಳ್ ಪೊಡರೆ ಬಾಯ ಕಂಪಿಂಗೆ ಸಾ|

ರ್ವಳಿಪ್ರಕರಮಂದು ಸೀಗುರಿವೊಲಾಗೆ ನಾಣ್ಗೆಟ್ಟು ಮೊ

ಕ್ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋೞ್ಪರಂ|| ೮೯||

ಬೆಳರ್ತ ಬೆಳರ್ವಾಯ್, ಕರಂ ಪೊಳೆವ ಅಪಾಂಗೆ, ಕಣ್ಣಿಂದೆ ಅಳುರ್‌ ತುಳುಂಕೆ, ನಿಡು ಪುರ್ವುಗಳ್ ಪೊಡರೆ, ಬಾಯ ಕಂಪಿಂಗೆ ಸಾರ್ವ ಅಳಿಪ್ರಕರಂ ಅಂದು ಸೀಗುರಿವೊಲ್‌ ಆಗೆ, ನಾಣ್ಗೆಟ್ಟು ಮೊಕ್ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋೞ್ಪರಂ

ಬಿಳುಚಿ ಒಣಗಿದ ತುಟಿಗಳು, ಹೊಳೆಹೊಳೆಯುವ ಕಡೆಗಣ್ಣ ನೋಟ, (ಸುತ್ತಲೂ ಇರುವವರನ್ನೆಲ್ಲ ತನ್ನೆಡೆಗೆ) ಸೆಳೆಯಲು ಯತ್ನಿಸುವ ಕಣ್ಣ ನೋಟ, ಉದ್ದವಾದ ಹುಬ್ಬುಗಳ ಅಲುಗಾಟ, (ತಲೆಯ ಸುತ್ತ) ಕೊಡೆ ಹಿಡಿದಂತೆ ಕಾಣುವ,   ಬಾಯಿಯ ಪರಿಮಳಕ್ಕೆ ಮುತ್ತುತ್ತಿರುವ ಜೇನು ಹುಳುಗಳು – ಹೀಗಿರುವ ಹೆಣ್ಣೊಬ್ಬಳು ನಾಚಿಕೆ ಬಿಟ್ಟು – ಆದರೆ ತಾಳ ತಪ್ಪದೆ – ಹೆಜ್ಜೆ ಹಾಕುತ್ತ, (ತನ್ನನ್ನೇ ಖುಷಿಯಿಂದ ನೋಡುವ ಸುತ್ತ ಸೇರಿದ ಜನರನ್ನು) ಮೆಟ್ಟುವಂತೆ ಕುಣಿದಳು.

(ಟಿಪ್ಪಣಿ: ಅರ್ಜುನ ರಾತ್ರಿ ನಿದ್ರೆ ಬಾರದ ಕಾರಣಕ್ಕೆ ಊರು ತಿರುಗಲು ಹೊರಟು ಸೂಳೆಗೇರಿಗೆ ಬಂದಿರುವವನು. ಆ ರಾತ್ರಿಯಲ್ಲಿ ಅಲ್ಲಿ ಕುಣಿಯುತ್ತಿರುವ ಹೆಣ್ಣಿನ ಮುಖಕ್ಕೆ ಜೇನು ಹುಳುಗಳು ಮುತ್ತಿದ್ದವು ಎಂದು ಕವಿ ವರ್ಣಿಸುತ್ತಿದ್ದಾನೆ. ಆಕೆಯನ್ನು ಮುತ್ತಿದ್ದು ಅಲ್ಲಿ ಬೆಳಕಿಗಾಗಿ ಹಚ್ಚಿಟ್ಟ ದೀಪದ ಬೆಳಕಿಗೆ ಬಂದ ಹಾತೆಗಳಿರಬಹುದು ಹೊರತು ಜೇನುಹುಳುಗಳಾಗಿರುವುದು ಸಾಧ್ಯವಿಲ್ಲ! ಏಕೆಂದರೆ ಜೇನುಹುಳುಗಳು ರಾತ್ರಿಯ ಹೊತ್ತು ಗೂಡು ಬಿಟ್ಟು ಹೊರಬರುವುದಿಲ್ಲ. ಹಾಗಾಗಿ ಪಂಪನು ʼಅಳಿಪ್ರಕರʼ ಎಂಬುದನ್ನು ʼಹಾತೆಗಳ ಗುಂಪುʼ ಎಂಬ ಅರ್ಥದಲ್ಲಿಯೇ ಬಳಸಿರಬಹುದು.)

ವ|| ಮತ್ತಮೊರ್ವಳೂರ್ವಶಿಯನೆ ಪೋಲ್ವಾಕೆ ತನ್ನ ಗಂಭೀರನವಯೌವನ ಮದದೊಳಂ ಮದಿರಾಮದದೊಳಮಳವಿಗೞಿಯೆ ಸೊರ್ಕಿ

ಮತ್ತಂ ಒರ್ವಳ್‌ ಊರ್ವಶಿಯನೆ ಪೋಲ್ವಾಕೆ, ತನ್ನ ಗಂಭೀರನವಯೌವನ ಮದದೊಳಂ, ಮದಿರಾಮದದೊಳಂ ಅಳವಿಗೞಿಯೆ ಸೊರ್ಕಿ

ಮತ್ತೂ ಒಬ್ಬಳು, ಊರ್ವಶಿಯನ್ನು ಹೋಲುವ ಚೆಲುವೆ, ತನ್ನ ಗಂಭೀರವಾದ ಹೊಸ ಹರಯದ ಕೊಬ್ಬಿನಲ್ಲೂ, ಕುಡಿದ ಕಳ್ಳಿನ ಮತ್ತಿನಲ್ಲೂ, ಮಿತಿಮೀರಿ ಸೊಕ್ಕುತ್ತ –

ಚಂ|| ಮುಡಿ ಮಕರಧ್ವಜಂಬೊಲೆೞಲುತ್ತಿರೆ ಬೆಂಬಿಡಿದೊಯ್ಯನೊಯ್ಯನು

ಳ್ಳುಡೆ ಕಟಿಸೂತ್ರದೊತ್ತಿನೊಳೆ ಜೋಲ್ದಿರೆ ನಾಣ್ ತಲೆದೋರೆ ಕೂಡೆ ಕೂ|

ಕಿಡುವ ಕುಕಿಲ್ವ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯ್ದೆ ನೂ

ರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳೞ್ಕಜವಾಗೆಯಾಡಿದಳ್|| ೯೦||

ಮುಡಿ ಮಕರಧ್ವಜಂಬೊಲ್‌ ಎೞಲುತ್ತಿರೆ ಬೆಂಬಿಡಿದು, ಒಯ್ಯನೊಯ್ಯನೆ ಉಳ್ಳುಡೆ ಕಟಿಸೂತ್ರದ ಒತ್ತಿನೊಳೆ ಜೋಲ್ದಿರೆ, ನಾಣ್ ತಲೆದೋರೆ, ಕೂಡೆ ಕೂಕಿಡುವ ಕುಕಿಲ್ವ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯ್ದೆ ನೂರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳ್‌ ಅೞ್ಕಜವಾಗೆಯಾಡಿದಳ್

ತಲೆಯ ಹೆರಳು ಮದನನ ಬಾವುಟದಂತೆ (ಬಿಚ್ಚಿ ಹೋಗಿ) ಬೆನ್ನ ಮೇಲೆಲ್ಲ ಹರಡಿಕೊಂಡಿದೆ; ಉಡುದಾರಕ್ಕೆ ಸಿಕ್ಕಿಸಿದ ಒಳ ಉಡುಪು ಮೆಲ್ಲಮೆಲ್ಲನೆ ಬದಿಗೆ ಸರಿದು ನೇತಾಡುತ್ತಿದೆ; ಗುಹ್ಯಾಂಗ ಕಾಣಿಸುತ್ತಿದೆ; ಅಂಥ ಸ್ಥಿತಿಯಲ್ಲಿ ಆಕೆ ಕೂಕಿಡುವ, ಕುಕಿಲುವ, ಬಿಕ್ಕಳಿಸುವ, ತೇಗುವ ಚಿತ್ರವಿಚಿತ್ರ ಶಬ್ದಗಳನ್ನು(ಭಾವಗಳನ್ನು?) ಹೊರಡಿಸುತ್ತಿದ್ದಾಳೆ; ಸುತ್ತಲಿನವರ ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ ಅವಳ ಕುಣಿತ, ಕೂಗಾಟಗಳಿಗಿಂತ ನೂರು ಪಟ್ಟು ಹೆಚ್ಚಿನ ಗೊಂದಲಗಳು ಅವಳ ಮನಸ್ಸಿನಲ್ಲಿ ತಾಕಲಾಡುತ್ತಿವೆ. ಆದರೂ ಆಕೆ (ಅಲ್ಲಿ ಕೇಳಿಬರುತ್ತಿದ್ದ) ಡಕ್ಕೆಯ ಪೆಟ್ಟಿಗೆ ಸರಿಯಾಗಿ, ಸುಲಭವಾಗಿ ಕುಣಿಯುತ್ತಿದ್ದಾಳೆ!

[ಟಿಪ್ಪಣಿ: ಪಂಪ ಕಂಡ ಕನ್ನಡ ನಾಡಿನ ಹಲವು ನಗರಗಳಲ್ಲಿ ಅವನ ಕಾಲದಲ್ಲಿಯೇ ಸಾರ್ವಜನಿಕ ಬತ್ತಲೆ ಕುಣಿತಗಳು ಪ್ರಚಲಿತವಾಗಿದ್ದವು ಎಂಬ ವಾಸ್ತವಕ್ಕೆ ಸಾಕ್ಷಿಯಂತಿದೆ ಪಂಪನ ಈ ವರ್ಣನೆ. ಈ ಮೊದಲೇ ಪಂಪ ಹೇಳಿರುವಂತೆ, ಹೀಗೆ ಕುಣಿಯುವ ಈ ಹೆಣ್ಣುಗಳು ಬೇರೆ ಯಾರದೋ ಹಿಡಿತದಲ್ಲಿರುವ, ಅವರು ಹೇಳಿದಂತೆ ಮಾಡಲೇಬೇಕಾದ ಅಸಹಾಯಕ ಸ್ಥಿತಿಯಲ್ಲಿರುವವರು. (ಇದೇ ಆಶ್ವಾಸದ ೮೪ನೇ ಪದ್ಯದ ನಂತರದ ಗದ್ಯದಲ್ಲಿ ʼಮನೋಜನೆಂಬ ದೀವಗಾಱನ ಪುಲ್ಲೆಗಳಂತೆʼ ಎಂದು ʼಪೆಂಡವಾಸದ ಒಳ್ವೆಂಡಿರʼನ್ನು ಕವಿ ವರ್ಣಿಸಿದ್ದಾನೆ). ಪಂಪನು ಚಿತ್ರಿಸಿರುವ ಈ ದೃಶ್ಯವು ಸೂಳೆಗಾರಿಕೆ ಎಂಬ ಧಂಧೆಯ ಅಂದಿನ ಯುಗದ ಜಾಹೀರಾತಿನಂತೆ ಕಾಣುತ್ತದೆ].

ವ|| ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು ಬಿಲ್ವಿಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂ-

ಅಂತು ಆಕೆಗಳ ತೂಗಿ ತೊನೆವ ತೊನೆಪಂಗಳುಮಂ, ಮರಸರಿಗೆವಿಡಿದು ಬಿಲ್ವಿಡಿದು ಆಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನ್‌ ಇಂತೆಂದಂ

ಹೀಗೆ ತೂಗಿ ಓಲಾಡುತ್ತಿರುವ ಅವರ ಓಲಾಟಗಳನ್ನೂ, ಮರಸರಿಗೆ, ಬಿಲ್ಲುಗಳನ್ನು ಹಿಡಿದು ಆಡುವ ಬೂತಾಟಗಳನ್ನೂ ನೋಡಿ ಅರ್ಜುನನು ಹೀಗೆಂದನು:

[ಟಿಪ್ಪಣಿ: ಇಲ್ಲಿ  ʼಮರಸರಿಗೆವಿಡಿದು ಬಿಲ್ವಿಡಿದು ಆಡುವ ಬೂತಾಟʼ ಎಂಬುದಕ್ಕೆ ಮುಳಿಯ ತಿಮ್ಮಪ್ಪಯ್ಯನವರ ವಿವರಣೆ ಹೀಗಿದೆ: “….ನಮ್ಮಿತ್ತಣ ದೇಸಿಯೊಳಗೆ, ಬೂತಾಟ(ಬೂತದ ಕೋಲ)ದಲ್ಲಿ ಆ ಭೂತವು ಧರಿಸುವ ಧನುಸ್ಸು – ಖಡ್ಗಗಳನ್ನು ʼಬಿಲ್ಲುಸರಿಗೆʼ ಎನ್ನುವುದೀಗಲೂ ರೂಢವಾಗಿದೆ. ಉಚ್ಚಾರಣಾ ಭೇದದಿಂದಾಗಿ ʼಸರಿಗೆʼ ಎಂದು ನಾಡವರ ಬಾಯಿಂದ ಕೇಳಿಬರುವ ಈ ಪದವು ʼಸುರಿಗೆʼ (ಛುರಿಕ)ಯೇ ಸರಿ. ಇದು ಕಾರಣಾಂತರದ ಒಂದು ಬೂತಾಟವೇ ಆದುದರಿಂದ, ಇಲ್ಲಿ ಮರದ ಸುರಿಗೆ(ಸರಿಗೆ)ಯನ್ನು ಹಿಡಿದಾಡುತ್ತಿದ್ದುದೆಂದು ಭಾವಿಸಬೇಕು. ಆ ಕೋಲದಲ್ಲಿ ತೋರುವ ಭೂತದ ಪಾತ್ರಿಯ ಮೈನಡುಕದೊಡನೆ ಇವರ ʼತೂಗಿ ತೊನೆವ ತೊನೆಪʼವನ್ನು ಹೋಲಿಸಿದ್ದಾನೆ. ಇದನ್ನೆಣಿಸಿದರೆ ನಮ್ಮಿತ್ತಣ ʼರಕ್ತೇಶ್ವರಿʼ,  ʼಕಲ್ಲುರುಟಿʼಗಳೆಂಬ ಹೆಣ್ಣುಬೂತಗಳ ಕೋಲಗಳನ್ನೇ ಕಂಡಂತಾಗುತ್ತಿದೆ”].

ಚಂ|| ನುಡಿವರೆ ನೋಡ ಕಳ್ಗುಡಿವರೆಂಬುದಿದಾಗದ ಸೂರುಳಂತದಂ

ಕುಡಿವರುಮಂತೆ ಕಳ್ಗುಡಿವರೆಂದೊಡೆ ನಾಣ್ಚುವರಂತುಟಪ್ಪುದಂ|

ಕುಡಿದುಮಿವಂದಿರಾರೆರ್ದೆಯುಮಂ ಸೆರೆಗೆಯ್ದಪರೆಯ್ದೆ ದೋಷದೊಳ್

ತೊಡರ್ವುದುಮೊಂದುಪಾಶ್ರಯವಿಶೇಷದೊಳೊಳ್ಪನೆ ತಳ್ವುದಾಗದೇ|| ೯೧||

ನುಡಿವರೆ ನೋಡ ಕಳ್ಗುಡಿವರ್‌ ಎಂಬುದು ಇದಾಗದ ಸೂರುಳ್; ಅಂತದಂ ಕುಡಿವರುಂ ಅಂತೆ ಕಳ್ಗುಡಿವರ್‌ ಎಂದೊಡೆ ನಾಣ್ಚುವರ್‌; ಅಂತುಟಪ್ಪುದಂ ಕುಡಿದುಂ ಇವಂದಿರ್‌ ಆರ ಎರ್ದೆಯುಮಂ ಸೆರೆಗೆಯ್ದಪರ್‌; ಎಯ್ದೆ ದೋಷದೊಳ್‌ ತೊಡರ್ವುದುಂ ಒಂದು ಉಪಾಶ್ರಯವಿಶೇಷದೊಳ್‌ ಒಳ್ಪನೆ ತಳ್ವುದಾಗದೇ?

ʼಇವರೆಲ್ಲ ಕುಡುಕರುʼ ಎಂದು ಇವರನ್ನು ಶಪಥ ಮಾಡಿ ದೂಷಿಸುಂತಿಲ್ಲ (ದೂಷಿಸಬಾರದು). ಏಕೆಂದರೆ ಕಳ್ಳು ಕುಡಿಯುವವರೂ ಸಹ ಹಾಗೆ ಕರೆಸಿಕೊಳ್ಳಲು ನಾಚುತ್ತಾರೆ! ಕುಡಿಯಬಾರದ ಅಂಥ ಕಳ್ಳನ್ನು ಕುಡಿದೂ ಸಹ ಇವರೆಲ್ಲ ಎಂಥವರ ಮನಸ್ಸನ್ನೂ ತಮ್ಮೆಡೆಗೆ ಸೆಳೆಯಬಲ್ಲರು; ದೋಷವೂ ಸಹ, ಸಂದರ್ಭ ಕೂಡಿ ಬಂದಾಗ, ಒಳಿತನ್ನು ಮಾಡುವುದು ಉಂಟಲ್ಲವೆ?

(ಟಿಪ್ಪಣಿ: ಪಂಪ ಅಂದಿನ ಕಾಲದ ಆಡಳಿತದ ಭಾಗವಾಗಿದ್ದವನು. ಹಾಗಾಗಿ ಕಾನೂನಿನ ಪರವಾಗಿ ನಿಲ್ಲಲೇಬೇಕಾದ ಅನಿವಾರ್ಯತೆ ಅವನಿಗೆ ಇದೆ. ಅವನು ಈ ಮಾತನ್ನು ಆಡಿಸುತ್ತಿರುವುದು ಸಹ ಅರ್ಜುನ ಅರ್ಥಾತ್‌ ಸಾಮಂತ ರಾಜನಾದ ಅರಿಕೇಸರಿಯ ಬಾಯಲ್ಲಿ. ಜೊತೆಗೆ, ಒಬ್ಬ ರಸಿಕನಾಗಿ ʼಇಂಥವೆಲ್ಲ ಸಮಾಜದಲ್ಲಿ ಇರುತ್ತವೆ, ಇರಬೇಕಾದವು. ಇದಕ್ಕೆಲ್ಲ ಪರಿಹಾರವಿಲ್ಲʼ ಎಂಬ ಅಭಿಪ್ರಾಯವೂ ಈ ಮಾತಿನಲ್ಲಿ ಕಾಣುತ್ತದೆ. ಹೀಗಾಗಿ ಕವಿಯ ನಾಯಕನಾದ ಅರ್ಜುನ, ದೇವರ ಪ್ರಸಾದವನ್ನೂ ಕದ್ದರೊಟ್ಟಿಯನ್ನೂ ಒಟ್ಟೊಟ್ಟಿಗೆ ಮೆಲ್ಲುವ, ಎಲ್ಲ ಕಾಲದ ರಾಜಕಾರಣಕ್ಕೂ ಸಲ್ಲುವ, ಜಾಣತನವೆಂದು ಕರೆಸಿಕೊಳ್ಳುವ ಕುಟಿಲ ಧೋರಣೆಯನ್ನು ಇಲ್ಲಿ ಅನುಸರಿಸುತ್ತಿದ್ದಾನೆ!).