Untitledಪಂಪಭಾರತ ಆಶ್ವಾಸ ೨ ಪದ್ಯಗಳು ೪೧ರಿಂದ ೫೪

ವ|| ಅಂತು ನಕುಲ ಸಹದೇವರ್ ಸಹಿತಮಯ್ವರುಂ ನವಯೌವನದ ಪರಮಸುಖಮನೆಯ್ದಿ ಸಂತೋಷದಿನಿರ್ದರಿತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ– 
(ಅಂತು ನಕುಲ ಸಹದೇವರ್ ಸಹಿತಂ ಅಯ್ವರುಂ ನವಯೌವನದ ಪರಮಸುಖಮನ್ ಎಯ್ದಿ ಸಂತೋಷದಿನ್ ಇರ್ದರ್. ಇತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-)
ಹೀಗೆ ನಕುಲ, ಸಹದೇವರ ಸಹಿತ ಐವರೂ ಹೊಸ ಯೌವನದ ಪರಮ ಸುಖವನ್ನು ಹೊಂದಿ ಸಂತೋಷದಿಂದ ಇದ್ದರು. ಇತ್ತ ಗಂಗಾದ್ವಾರದಲ್ಲಿ ಭರದ್ವಾಜನೆಂಬ ಬ್ರಹ್ಮ ಋಷಿಯು-
ಕಂ|| ಸ್ನಾನಾರ್ಥಮೊಂದು ಕಳಶಮ
     ನಾ ನಿಯಮ ನಿಧಾನನೆೞಲೆ ಪಿಡಿದಮಳಿನ ಗಂ|
     ಗಾನದಿಗೆ ವಂದು ಸುರತ ನಿ
     ಧಾನಿಯನಮರೇಂದ್ರ ಗಣಿಕೆಯಂ ಮುನಿ ಕಂಡಂ||೪೧||
(ಸ್ನಾನಾರ್ಥಂ ಒಂದು ಕಳಶಮನ್ ನಿಯಮ ನಿಧಾನನ್ ಎೞಲೆ ಪಿಡಿದು ಅಮಳಿನ ಗಂಗಾನದಿಗೆ ವಂದು ಸುರತ ನಿಧಾನಿಯನ್ ಅಮರೇಂದ್ರ ಗಣಿಕೆಯಂ ಮುನಿ ಕಂಡಂ)
ನಿಯಮನಿಷ್ಠನಾದ ಆ ಋಷಿಯು ಕೈಯಲ್ಲಿ ಕಳಶವನ್ನು ಹಿಡಿದು ಜೋತಾಡಿಸುತ್ತ ಸ್ನಾನ ಮಾಡಲೆಂದು ಗಂಗಾನದಿಗೆ ಬಂದು, ಅಲ್ಲಿ ರತಿಸುಖದ ನಿಧಿಯಂತಿದ್ದ ಇಂದ್ರನ ಆಸ್ಥಾನದ ಗಣಿಕೆಯೊಬ್ಬಳನ್ನು ಕಂಡನು.
ವ|| ಅಂತು ಕಾಣ್ಬುದುಮಮೃತಾಬ್ಧಿಯೆಂಬಚ್ಚರಸೆಯ ಕನಕ ಕಾಂಚೀಕಳಾಪದೊಳ್ ತೊಡರ್ದ ದೇವಾಂಗ ವಸ್ತ್ರದುಳ್ಳುಡೆಯೊಳುಲಿವ ಸೂಸಕದ ನೂಲ ತೊಂಗಲ್ವೆರಸೆೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ
(ಅಂತು ಕಾಣ್ಬುದುಂ ಅಮೃತಾಬ್ಧಿಯೆಂಬ ಅಚ್ಚರಸೆಯ ಕನಕ ಕಾಂಚೀಕಳಾಪದೊಳ್ ತೊಡರ್ದ ದೇವಾಂಗ ವಸ್ತ್ರದ ಉಳ್ಳುಡೆಯೊಳ್ ಉಲಿವ ಸೂಸಕದ ನೂಲ ತೊಂಗಲ್ವೆರಸು ಎೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ)
ಹಾಗೆ ಕಂಡಾಗ ಅಮೃತಾಬ್ಧಿ ಎಂಬ ಆ ಅಪ್ಸರೆಯ ಚಿನ್ನದ ಒಡ್ಯಾಣಕ್ಕೆ ಸಿಕ್ಕಿಸಿದ ರೇಷ್ಮೆಯ ವಸ್ತ್ರದ ಒಳ ಉಡುಪಿನಲ್ಲಿ ಉಲಿಯುವ ಗೆಜ್ಜೆಗಳ ಗುಂಪಿನೊಂದಿಗೆ ನೂಲಿನ ಗೊಂಚಲುಗಳಿಂದ ಕೂಡಿ, ಇಳಿಬಿದ್ದ ನಿರಿಗೆಯ ಪಟ್ಟೆಯು ಮಳೆಗಾಲದ ನವಿಲಿನಂತೆ ಸುಂದರವಾಗಿ ಶೋಭಿಸಿತು.
ಕಂ|| ಆದೆಲರ ಸೋಂಕಿನೊಳ್ ತೆಱ
     ಪಾದೊಡೆ ಬೆಳ್ಪೆಸೆಯೆ ಮಸೆದ ಮದನನ ಬಾಳಂ|
     ತಾದುವು ಪೊಳೆವೊಳ್ದೊಡೆ ತೆಱ
     ಪಾದೆರ್ದೆಯಂ ನಟ್ಟುವಂದು ತನ್ಮುನಿಪತಿಯಾ||೪೨|| 
(ಆದ ಎಲರ ಸೋಂಕಿನೊಳ್ ತೆಱಪಾದೊಡೆ ಬೆಳ್ಪೆಸೆಯೆ ಮಸೆದ ಮದನನ ಬಾಳಂತೆ ಆದುವು ಪೊಳೆವ ಒಳ್ದೊಡೆ ತೆಱಪಾದ ಎರ್ದೆಯಂ ನಟ್ಟುವು ಅಂದು ತನ್ಮುನಿಪತಿಯಾ)
ಬೀಸಿದ ಗಾಳಿಯಿಂದಾಗಿ ಆ ಇಳಿಬಿದ್ದ ನಿರಿಗೆಯ ಪಟ್ಟೆ ಸರಿದು ಅವಳ ಹೊಳೆಹೊಳೆಯುವ ಬಿಳಿಯ ತೊಡೆಗಳು ಮದನನ ಕತ್ತಿಯಂತೆ, ಮುನಿಯ ತೆರವಾಗಿದ್ದ ಎದೆಯನ್ನು ಚುಚ್ಚಿದವು.
ವ|| ಅಂತು ಕಂತುಶರಪರವಶನಾಗಿ ಧೈರ್ಯಕ್ಷರಣೆಯುಮಿಂದ್ರಿಯಕ್ಷರಣೆಯುಮೊಡನೊಡನಾಗೆ– 
(ಅಂತು ಕಂತುಶರಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನೆ ಆಗೆ)
ಹಾಗೆ ಮನ್ಮಥನ ಬಾಣಕ್ಕೆ ವಶನಾದ ಮುನಿಯ ಧೈರ್ಯವೂ, ವೀರ್ಯವೂ ಒಟ್ಟೊಟ್ಟಿಗೆ ಜಾರಿ ಹೋಗಲು
ಕಂ|| ಮಾಣದೆ ಸೋರ್ವಿಂದ್ರಿಯಮಂ
     ದ್ರೋಣದೊಳಾಂತಲ್ಲಿಯೊಗೆದ ಶಿಶುವಂ ಕಂಡೀ|
     ದ್ರೋಣದೊಳೆ ಪುಟ್ಟಿದೀತಂ
     ದ್ರೋಣನೆ ಪೋಗೆಂದು ಪೆಸರನಿಟ್ಟಂ ಮುನಿಪಂ ||೪೩||
(ಮಾಣದೆ ಸೋರ್ವ ಇಂದ್ರಿಯಮಂ ದ್ರೋಣದೊಳ್ ಆಂತು, ಅಲ್ಲಿ ಒಗೆದ ಶಿಶುವಂ ಕಂಡು, ಈ ದ್ರೋಣದೊಳೆ ಪುಟ್ಟಿದ ಈತಂ ದ್ರೋಣನೆ ಪೋಗೆಂದು ಪೆಸರನಿಟ್ಟಂ ಮುನಿಪಂ.)
ಮುನಿಯು ಸುಮ್ಮನುಳಿಯದೆ, ಸೋರಿದ ಇಂದ್ರಿಯವನ್ನು ಒಂದು ದೊನ್ನೆಯಲ್ಲಿ ಹಿಡಿದಿಟ್ಟನು. ಆಗ ಅದರಿಂದ ಒಂದು ಶಿಶುವು ಹುಟ್ಟಿತು. ದೊನ್ನೆಯಲ್ಲಿ ಹುಟ್ಟಿದ ಮಗುವಾದ್ದರಿಂದ ಮುನಿಯು ಅದಕ್ಕೆ ದ್ರೋಣನೆಂದು ಹೆಸರಿಟ್ಟನು.
ವ|| ಅಂತು ಭರದ್ವಾಜನಾತ್ಮತನೂಜಂಗೆ ಪೆಸರನಿಟ್ಟು ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮನೊಡಗೂಡಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದೊಳ್ ಬಿಲ್ವಿದ್ದೆಯಂ ಕಲಲ್ವೇೞ್ದೊಡೆ ದ್ರೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡಾತಂಗಮಾಕೆಗಂ ತ್ರಿಣೇತ್ರನಂಶದೊಳೊರ್ವ ಮಗಂ ಪುಟ್ಟಿ– 
(ಅಂತು ಭರದ್ವಾಜನ್ ಆತ್ಮತನೂಜಂಗೆ ಪೆಸರನಿಟ್ಟು, ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನ್ ಆತನ ಮಗಂ ದ್ರುಪದನುಮಂ ದ್ರೋಣನುಮನ್ ಒಡಗೂಡಿ, ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದೊಳ್ ಬಿಲ್ವಿದ್ದೆಯಂ ಕಲಲ್ ಪೇೞ್ದೊಡೆ, ದ್ರೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ, ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡೆ ಆತಂಗಂ ಆಕೆಗಂ ತ್ರಿಣೇತ್ರನ ಅಂಶದೊಳ್ ಒರ್ವ ಮಗಂ ಪುಟ್ಟಿ– )
ಹಾಗೆ ಭರದ್ವಾಜನು ತನ್ನ ಮಗನಿಗೆ ದ್ರೋಣನೆಂದು ಹೆಸರಿಟ್ಟು, ತನ್ನ ಗೆಳೆಯನಾದ ಪಾಂಚಾಲ ದೇಶದ ಪೃಷತ ಎಂಬುವನ ಮಗನನ್ನೂ, ದ್ರೋಣನನ್ನೂ ಒಡಗೂಡಿ ಯಜ್ಞಸೇನನೆಂಬ ಋಷಿಯ ಕೈಕೆಳಗೆ ಬಿಲ್ವಿದ್ಯೆಯನ್ನು ಕಲಿಯಲು ನಿಯಮಿಸಿದನು. ಅವರಿಬ್ಬರೂ ಬಿಲ್ವಿದ್ಯೆಯನ್ನು ಕಲಿತನಂತರ, ಭರದ್ವಾಜನು ದ್ರೋಣನಿಗೆ ಕೃಪನ ತಂಗಿಯಾದ ಶಾರದ್ವತೆಯನ್ನು ತಂದು ಮದುವೆ ಮಾಡಿದನು. ಆ ದಂಪತಿಗಳಿಗೆ ಶಿವನ ಅಂಶದಿಂದ ಒಬ್ಬ ಮಗನು ಹುಟ್ಟಿ –
ಕಂ|| ದಿವಿಜಾಶ್ವತ್ಥಾಮದೊಳೀ
     ಭುವನಂಗಳ್ ನಡುಗೆ ಶಿಶು ಸರಂಗೆಯ್ದೊಡೆ ನ|
     ಕ್ಕವಯವದೆ ಕುಂಭಸಂಭವ
     ನಿವನಶ್ವತ್ಥಾಮನೆಂದು ಪೆಸರಿಡೆ ನೆಗೞ್ದಂ ||೪೪|| 
(ದಿವಿಜಾಶ್ವತ್ಥಾಮದೊಳ್ ಈ ಭುವನಂಗಳ್ ನಡುಗೆ ಶಿಶು ಸರಂಗೆಯ್ದೊಡೆ ನಕ್ಕು ಅವಯವದೆ, ಕುಂಭಸಂಭವನ್ ‘ಇವನ್ ಅಶ್ವತ್ಥಾಮನ್’ ಎಂದು ಪೆಸರಿಡೆ ನೆಗೞ್ದಂ.)
ಹುಟ್ಟಿದ ಶಿಶುವು  ದೇವಲೋಕದ ಉಚ್ಚೈಶ್ರವ ಎಂಬ ಕುದುರೆಯ ಹಾಗೆ, ಲೋಕವೆಲ್ಲ ನಡುಗುವಂತೆ, ಶಬ್ದ ಮಾಡಿತು. ಅದನ್ನು ಕೇಳಿ ದ್ರೋಣನು ನಿರಾಯಾಸವಾಗಿ ನಕ್ಕು, ಮಗುವಿಗೆ ಅಶ್ವತ್ಥಾಮನೆಂದು ಹೆಸರಿಟ್ಟನು.
ವ|| ಅಂತು ನೆಗೞ್ದು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧರಾಗ್ರಗಣ್ಯನುಮಾಗಿ ಸಂದ[ಂ] ದ್ರುಪದನುಂ ತನ್ನ ರಾಜ್ಯದೊಳ್ ನಿಂದ[ಂ] ದ್ರೋಣನುಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡು ನಾಡಂ ತೊೞಲ್ದು ಪರಶುರಾಮನಲ್ಲಿಗೆ ವಂದಂ– 
(ಅಂತು ನೆಗೞ್ದು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧರಾಗ್ರಗಣ್ಯನುಮಾಗಿ ಸಂದಂ. ದ್ರುಪದನುಂ ತನ್ನ ರಾಜ್ಯದೊಳ್ ನಿಂದಂ. ದ್ರೋಣನುಂ ತನಗೆ ಬಡತನಂ ಅಡಸೆ ಅಶ್ವತ್ಥಾಮನನ್ ಒಡಗೊಂಡು, ನಾಡು ನಾಡಂ ತೊೞಲ್ದು ಪರಶುರಾಮನಲ್ಲಿಗೆ ವಂದಂ)
ಹಾಗೆ ಪ್ರಸಿದ್ಧನಾದ ಅಶ್ವತ್ಥಾಮನು ತನ್ನ ತಂದೆಯಿಂದ ಬಿಲ್ವಿದ್ಯೆಯ ಉಪದೇಶ ಪಡೆದು ದೊಡ್ಡ ಬಿಲ್ಗಾರನಾದನು. ಇತ್ತ ದ್ರುಪದನು ತನ್ನ ರಾಜ್ಯಕ್ಕೆ ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತಿದ್ದನು. ದ್ರೋಣನು ತನಗೆ ಬಡತನ ಬಂದುದರಿಂದ, ಊರೂರು ಅಲೆದು ಪರಶುರಾಮನಿದ್ದಲ್ಲಿಗೆ ಬಂದು-
ಚಂ|| ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಮೇಕವಿಂ
     ಶತಿ ಪರಿಸಂಖ್ಯೆಯಿಂ ತವಿಸಿ ಸರ್ವನಿವೇದಕಮೆಂಬ ಯಜ್ಞ[ದೊಳ್]|
     ಕ್ಷಿತಿ ಪೊಗೞ್ವನ್ನಮಿತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾ
     ಪತಿಗೆ ಸಮುದ್ರಮುದ್ರಿತಧರಿತ್ರಿಯನೊಂದೞಿಯೂರನೀವವೊಲ್ ||೪೫||
 (ಕ್ಷಿತಿಯೊಳಗೆ ಉಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಂ ಏಕವಿಂಶತಿ ಪರಿಸಂಖ್ಯೆಯಿಂ ತವಿಸಿ, ಸರ್ವನಿವೇದಕಂ ಎಂಬ ಯಜ್ಞದೊಳ್ ಕ್ಷಿತಿ ಪೊಗೞ್ವನ್ನಂ ಇತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾಪತಿಗೆ ಸಮುದ್ರಮುದ್ರಿತಧರಿತ್ರಿಯನ್ ಒಂದು ಅೞಿಯೂರನ್ ಈವವೊಲ್)
ಇಪ್ಪತ್ತೊಂದು ಸಲ ಭೂಮಂಡಲವನ್ನು ಸುತ್ತಿ, ಕ್ಷತ್ರಿಯ ರಾಜರೆಲ್ಲರನ್ನೂ ಬುಡಸಮೇತ ನಾಶ ಮಾಡಿದವನು ಪರಶುರಾಮ. ಲೋಕವೇ ಹೊಗಳುವಂತೆ ಅವನು ಸರ್ವನಿವೇದಕವೆಂಬ ಯಾಗ ಮಾಡಿ, ಸಮುದ್ರವೇ ಗಡಿಯಾದ ಭೂಪ್ರದೇಶವನ್ನು, ಒಂದು ಹಾಳೂರನ್ನು ಕೊಡುವಷ್ಟೇ ಸುಲಭವಾಗಿ, ತನ್ನ ಗುರುವಾದ ಕಶ್ಯಪ ಪ್ರಜಾಪತಿಗೆ ದಾನ ಮಾಡಿದನು.
ವ|| ಅಂತು ವಲ್ಕಲಾವೃತ ಕಟಿತಟನುಮಾಗಿರ್ದು ಜಟಾಕಲಾಪನುಮಾಗಿ ತಪೋವನಕ್ಕೆ ಪೋಪ ಭಾರ್ಗವಂ ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು ಕನಕ ಪಾತ್ರಕ್ಕುಪಾಯಮಿಲ್ಲಪ್ಪುದಱಿಂ ಮೃತ್ಪಾತ್ರದೊಳರ್ಘ್ಯಮೆತ್ತಿ ಪೂಜಿಸಿ
(ಅಂತು ವಲ್ಕಲಾವೃತ ಕಟಿತಟನುಂ ಆಗಿರ್ದು, ಜಟಾಕಲಾಪನುಂ ಆಗಿ ತಪೋವನಕ್ಕೆ ಪೋಪ ಭಾರ್ಗವಂ, ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು, ಕನಕ ಪಾತ್ರಕ್ಕೆ ಉಪಾಯಂ ಇಲ್ಲಪ್ಪುದಱಿಂ ಮೃತ್ಪಾತ್ರದೊಳ್ ಅರ್ಘ್ಯಮೆತ್ತಿ ಪೂಜಿಸಿ)
ಹಾಗೆ, ಸೊಂಟಕ್ಕೆ ನಾರುಮಡಿಯನ್ನು ಸುತ್ತಿಕೊಂಡು, ಜಟೆ ಕಟ್ಟಿಕೊಂಡು ತಪೋವನಕ್ಕೆ ಹೊರಟುನಿಂತ ಪರಶುರಾಮನು, ದ್ರವ್ಯವನ್ನು ಬೇಡಿ ಬಂದ ದ್ರೋಣನನ್ನು ಕಂಡು, ಚಿನ್ನದ ಪಾತ್ರೆಗೆ ಉಪಾಯವಿಲ್ಲದ್ದರಿಂದ ಮಣ್ಣಿನ ಪಾತ್ರೆಯಲ್ಲೇ ಅರ್ಘ್ಯ ಕೊಟ್ಟು, ಪೂಜಿಸಿ 
ಚಂ|| ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ
     ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ|
     ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
     ಲ್ಲೊಡಮೆ ಸಮಂತು ಪೇೞಿವಱೊಳಾವುದನೀವುದೊ ಕುಂಭಸಂಭವಾ|| ೪೬ || 
(ಒಡವೆಯನ್ ಅರ್ಥಿಗೆ ಇತ್ತೆನ್, ಅವನೀತಳಮಂ ಗುರುಗೆ ಇತ್ತೆನ್,  ಈಗಳ್ ಒಂದಡಕೆಯುಂ ಇಲ್ಲ ಕೈಯೊಳ್, ಎರೆದಂ ಶ್ರುತಪಾರಗನ್,  ಎಂತು ಸಂತಸಂಬಡಿಸುವೆನ್? ಇನ್ನು ಇದೊಂದು ಧನುವಿರ್ದುದು, ದಿವ್ಯಶರಾಳಿಯಿರ್ದುದು,  ಇಲ್ಲ ಒಡಮೆ, ಸಮಂತು ಪೇೞ್, ಇವಱೊಳ್ ಆವುದನ್ ಈವುದೊ? ಕುಂಭಸಂಭವಾ!)
ಕೇಳಿದವರಿಗೆ ಒಡವೆಗಳನ್ನು ಕೊಟ್ಟೆ, ಗೆದ್ದ ಭೂಮಂಡಲವನ್ನು ಗುರುವಿಗೆ ಕೊಟ್ಟೆ, ಈಗ ಒಂದು ಅಡಕೆಯೂ ಇಲ್ಲದಂತೆ ಕೈ ಖಾಲಿಯಾಗಿದೆ. ಎದುರಿಗೆ ನಿಂತು ದ್ರವ್ಯ ಸಹಾಯ ಕೇಳುತ್ತಿರುವವನು ವೇದಪಾರಂಗತ, ಈಗೇನು ಮಾಡಲಿ? ಹೇಗೆ ಇವನನ್ನು ಸಂತಸ ಪಡಿಸಲಿ?’ ಎಂದು ಆಲೋಚಿಸುತ್ತ ಪರಶುರಾಮನು (ಥಟ್ಟನೆ ಉತ್ತರ ಕಂಡುಕೊಂಡವನಂತೆ) ದ್ರೋಣನಿಗೆ ‘ಈಗ ನನ್ನಲ್ಲಿ ಯಾವ ಒಡವೆಯೂ ಇಲ್ಲ. ಉಳಿದಿರುವುದು ಇದೊಂದು ಬಿಲ್ಲು ಮತ್ತು ಈ ದಿವ್ಯಾಸ್ತ್ರಗಳು ಮಾತ್ರ. ಚೆನ್ನಾಗಿ ಆಲೋಚಿಸಿ ಹೇಳು: ಇವುಗಳಲ್ಲಿ ಯಾವುದನ್ನು ನಿನಗೆ ಕೊಡಲಿ?’ ಎಂದು ಕೇಳಿದನು.
ವ|| ಎಂಬುದುಂ ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಱಿಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದೆನೆ ವಾರಣ ವಾಯವ್ಯಾಗ್ನೇಯ ಪೌರಂದರಾದಿ ಪ್ರಧಾನಾಸ್ತ್ರಂಗಳಂ ಕುಡೆ ಕೊಂಡು ಪರಶುರಾಮನಂ ಬೀೞ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸುಗೆಯ್ದಪನೆಂದು ಕೇಳ್ದಾ ಪೊೞಲ್ಗೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯಱನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗಱಿಯೆ ಪೇೞೆಂಬುದುಮಾತನಾ ಮಾೞ್ಕೆಯೊಳೆ ಬಂದಱಿಪುವುದುಂ ದ್ರುಪದಂ ರಾಜ್ಯಮದಿರಾ ಮದೋನ್ಮತ್ತನುಂ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ– 
(ಎಂಬುದುಂ ದ್ರೋಣನ್ ‘ಎನಗೆ ವಿದ್ಯಾಧನಮೆ ಧನಂ ಅಪ್ಪುದಱಿಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದು’ ಎನೆ ವಾರಣ, ವಾಯವ್ಯ, ಆಗ್ನೇಯ, ಪೌರಂದರಾದಿ ಪ್ರಧಾನಾಸ್ತ್ರಂಗಳಂ ಕುಡೆ,  ಕೊಂಡು, ಪರಶುರಾಮನಂ ಬೀೞ್ಕೊಂಡು ತನ್ನ ಒಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳ್ ಅರಸುಗೆಯ್ದಪನ್ ಎಂದು ಕೇಳ್ದು, ಆ ಪೊೞಲ್ಗೆವಂದು ದ್ರುಪದನ ಅರಮನೆಯ ಬಾಗಿಲೊಳ್ ನಿಂದು, ಪಡಿಯಱನಂ ಕರೆದುನಿಮ್ಮೊಡನಾಡಿದ (ನಿಮ್ಮ ಒಡನಾಡಿದ; ನಿಮ್ಮೊಡನೆ ಆಡಿದ) ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗೆ ಅಱಿಯೆ ಪೇೞ್’ ಎಂಬುದುಂ, ಆತನ್ ಆ ಮಾೞ್ಕೆಯೊಳೆ ಬಂದು ಅಱಿಪುವುದುಂ, ದ್ರುಪದಂ ರಾಜ್ಯಮದಿರಾ ಮದೋನ್ಮತ್ತನುಂ ಗರ್ವಗ್ರಹ ವ್ಯಗ್ರಚಿತ್ತನುಂ ಆಗಿ ಮೇಗಿಲ್ಲದೆ)
ಎನ್ನಲು, ದ್ರೋಣನು ‘ನನಗೆ ವಿದ್ಯಾಧನವೇ ಧನ. ಹಾಗಾಗಿ ದಿವ್ಯಾಸ್ತ್ರಗಳನ್ನು ಕರುಣಿಸಿ’ ಎಂದು ಕೇಳಿಕೊಂಡನು. ಪರಶುರಾಮನು ಅವನಿಗೆ ವಾರಣ, ವಾಯವ್ಯ, ಆಗ್ನೇಯ, ಪೌರಂದರವೇ ಮೊದಲಾದ ಅಸ್ತ್ರಗಳನ್ನು ಕೊಟ್ಟನು. ದ್ರೋಣನು ಅವುಗಳನ್ನು ಪಡೆದುಕೊಂಡು, ಪರಶುರಾಮನನ್ನು ಬೀಳ್ಕೊಟ್ಟು, ತನ್ನ ಒಡನಾಡಿಯಾದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ, ಆ ಊರಿಗೆ ಬಂದು ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತು, ಬಾಗಿಲು ಕಾಯುವವನನ್ನು ಕರೆದು ‘ನಿಮ್ಮ ಜೊತೆಯವನಾದ ಗೆಳೆಯ ದ್ರೋಣ ಎಂಬ ಬ್ರಾಹ್ಮಣನು ಬಂದಿದ್ದಾನೆ ಎಂದು ನಿಮ್ಮ ಅರಸನಿಗೆ ಹೇಳು’ ಎಂದನು. ಅವನು ಹೋಗಿ ದ್ರೋಣನ ಮಾತನ್ನು ಅದೇ ರೀತಿಯಲ್ಲಿ ದ್ರುಪದನಿಗೆ ಹೇಳಿದನು. ಆದರೆ ರಾಜ್ಯವೆಂಬ ಮದಿರೆಯ ಮತ್ತು ತಲೆಗೇರಿದ್ದ ದ್ರುಪದನು, ಸಿಟ್ಟಿನಿಂದ, ದೊಡ್ಡವರಿಗೆ ತಕ್ಕುದಲ್ಲದ ಹಾಗೆ –
ಕಂ|| ಅಂತೆಂಬನಾರ್ಗೆ ಪಿರಿದುಂ
     ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ|
     ೞೆಂತೆನಗೆ ಕೆಳೆಯನೇ ನೂಂ
     ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ || ೪೭||
(ಅಂತೆಂಬನ್ ಆರ್ಗೆ? ಪಿರಿದುಂ ಭ್ರಾಂತು ದಲ್ ಏಂ? ದ್ರೋಣನೆಂಬನ್ ಏಂ ಪಾರ್ವನೆ? ಪೇೞ್ ಎಂತೆನಗೆ ಕೆಳೆಯನೇ? ನೂಂಕು! ಅಂತಪ್ಪನನ್ ಅಱಿಯೆನ್! ಎಂದು ಸಭೆಯೊಳ್ ನುಡಿದಂ) 
ಹಾಗೆಂದರೆ ಯಾರಂತೆ? ಏನವನಿಗೆ ಹುಚ್ಚು ಗಿಚ್ಚೇ? ದ್ರೋಣನೆಂಬ ಹಾರುವನೆ? ನನಗೆ ಸ್ನೇಹಿತನೆ? ದೂಡು ಅವನನ್ನು! ಅವನು ಯಾರೆಂದು ನನಗೆ ತಿಳಿದೇ ಇಲ್ಲ!’ ಎಂದು ತುಂಬಿದ ಸಭೆಯಲ್ಲಿ ನುಡಿದನು.
ವ|| ಅಂತು ನುಡಿದುದಂ ಪಡಿಯಱಂ ಬಂದಾ ಮಾೞ್ಕೆಯೊಳಱಿಪೆ ದ್ರೋಣನೊತ್ತಂಬದಿಂದೊಳಗಂ ಪೊಕ್ಕು ದ್ರುಪದನಂ ಕಂಡು 
(ಅಂತು ನುಡಿದುದಂ ಪಡಿಯಱಂ ಬಂದು ಆ ಮಾೞ್ಕೆಯೊಳ್ ಅಱಿಪೆ ದ್ರೋಣನ್ ಒತ್ತಂಬದಿಂದ ಒಳಗಂ ಪೊಕ್ಕು ದ್ರುಪದನಂ ಕಂಡು)
ಬಾಗಿಲು ಕಾಯುವವನು ಬಂದು  ಅರಸನು ನುಡಿದುದನ್ನು ಅದೇ ರೀತಿಯಲ್ಲಿ ದ್ರೋಣನಿಗೆ ತಿಳಿಸಿದಾಗ, ದ್ರೋಣನು ಒತ್ತಾಯದಿಂದ ಅರಮನೆಯ ಒಳಗೆ ಹೊಕ್ಕು ದ್ರುಪದನನ್ನು ಕಂಡು)
ಚಂ|| ಅಱಿಯಿರೆ ನೀಮುಮಾಮುಮೊಡನೋದಿದೆವೆಂಬುದನಣ್ಣ ನಿನ್ನನಾ
     ನಱಿಯೆನದೆಲ್ಲಿ ಕಂಡೆಯೊ ಮಹೀಪತಿಗಂ ದ್ವಿಜವಂಶಜಂಗಮೇ|
     ತಱ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ್
     ನೆಱಗೊಳೆ ಕುಂಭಸಂಭವನನಾ ದ್ರುಪದಂ ಕಡು ಸಿಗ್ಗು ಮಾಡಿದಂ || ೪೮ ||
(‘ಅಱಿಯಿರೆ ನೀಮುಂ ಆಮುಂ ಒಡನೆ ಓದಿದೆವು ಎಂಬುದನ್ ಅಣ್ಣ?’  ‘ನಿನ್ನನ್ ಆನ್ ಅಱಿಯೆನ್! ಅದೆಲ್ಲಿ ಕಂಡೆಯೊ? ಮಹೀಪತಿಗಂ ದ್ವಿಜವಂಶಜಂಗಂ ಏತಱ ಕೆಳೆ? ಇಂತು ನಾಣಿಲಿಗರ್ ಅಪ್ಪರೆ ಮಾನಸರ್?’ ಎಂಬ ಮಾತುಗಳ್ ನೆಱಗೊಳೆ, ಕುಂಭಸಂಭವನನ್ ಆ ದ್ರುಪದಂ ಕಡು ಸಿಗ್ಗು ಮಾಡಿದಂ)
‘ನಾವಿಬ್ಬರೂ ಒಟ್ಟಿಗೆ ಓದಿದವರಲ್ಲವೆ?’ ಎಂದು ದ್ರುಪದನನ್ನು ದ್ರೋಣನು ಕೇಳಿದಾಗ ದ್ರುಪದನು ‘ನೀನು ಯಾರೋ ನನಗೆ ಗೊತ್ತಿಲ್ಲ! ನನ್ನನ್ನು  ನೀನು ಎಲ್ಲಿ ಕಂಡೆ? ಅರಸನಿಗೂ ಹಾರುವನಿಗೂ ಎಲ್ಲಿಯ ಸ್ನೇಹ? ಮನುಷ್ಯರು ಇಷ್ಟು ನಾಚಿಕೆಗೆಡುತ್ತಾರೆಯೆ?’ ಎಂದು ಮುಂತಾಗಿ ಮರ್ಮಕ್ಕೆ ತಾಗುವ ಮಾತುಗಳನ್ನಾಡಿ ದ್ರೋಣನನ್ನು ಚೆನ್ನಾಗಿ ಅವಮಾನಿಸಿಬಿಟ್ಟನು.
ವ|| ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನನೆೞೆದು ಕಳೆಯಿಮೆಂಬುದುಂ ದ್ರೋಣನಿಂತೆಂದಂ– 
(
ಅಂತು ಮಾಡಿದುದುಂ ಅಲ್ಲದೆ ‘ಈ ನಾಣಿಲಿ ಪಾರ್ವನನ್ ಎೞೆದು ಕಳೆಯಿಂ’ ಎಂಬುದುಂ ದ್ರೋಣನ್ ಇಂತೆಂದಂ)
ಹಾಗೆ ಮಾಡಿದ್ದೂ ಅಲ್ಲದೆ ‘ಈ ನಾಚಿಕೆಗೇಡಿ ಹಾರುವನನ್ನು ಹೊರಗೆ ದಬ್ಬಿ’ ಎನ್ನಲು, ದ್ರೋಣನು ಹೀಗೆಂದನು:

ಚಂ|| ನುಡಿ ತಡವಪ್ಪುದೊಂದು ಮೊಗದೊಳ್ ಮಱುಕಂ ದೊರೆಕೊಳ್ವುದೊಂದು ನಾ
     ಣ್ಗೆಡೆಗುಡದಿರ್ಪುದೊಂದು ನುಡಿಗಳ್ ಮೊಱೆಯಂ ಮಱೆಯಿಪ್ಪುದೊಂದು ಕ|
     ಳ್ಗುಡಿದವರಂದಮಿಂತು ಸಿರಿ ಸಾರ್ತರೆ ಸಾರ್ವುದದರ್ಕೆ ಸಂದೆಯಂ
     ಬಡದೆ ಜಲಕ್ಕನೀಗಳಱಿದೆಂ ಸಿರಿ ಕಳ್ಳೊಡವುಟ್ಟಿತೆಂಬುದಂ || ೪೯ || 
(ನುಡಿ ತಡವಪ್ಪುದೊಂದು, ಮೊಗದೊಳ್ ಮಱುಕಂ ದೊರೆಕೊಳ್ವುದೊಂದು, ನಾಣ್ಗೆ ಎಡೆಗುಡದೆ ಇರ್ಪುದೊಂದು, ನುಡಿಗಳ್ ಮೊಱೆಯಂ ಮಱೆಯಿಪ್ಪುದೊಂದು, ಕಳ್ಗುಡಿದವರ ಅಂದಂ ಇಂತು, ಸಿರಿ ಸಾರ್ತರೆ ಸಾರ್ವುದು ಅದರ್ಕೆ ಸಂದೆಯಂಬಡದೆ ಜಲಕ್ಕನೆ ಈಗಳ್ ಅಱಿದೆಂ ಸಿರಿ ಕಳ್ಳೊಡವುಟ್ಟಿತು ಎಂಬುದಂ)
ಮಾತು ತೊದಲುವುದು, ಮುಖ ಸೊಟ್ಟವಾಗುವುದು, ನಾಚಿಕೆ ಇಲ್ಲದಿರುವುದು, ಎದುರಿರುವವರ ಸಂಬಂಧವನ್ನು ಮರೆತು ಮಾತಾಡುವುದು ಇವೆಲ್ಲ ಕಳ್ಳು ಕುಡಿದವರ ಲಕ್ಷಣಗಳು. ಮನುಷ್ಯ ಸಿರಿವಂತನಾದರೂ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಸಿರಿಯು ಕಳ್ಳಿನ ಒಡಹುಟ್ಟು ಎಂಬ  ವಿಷಯ ಇಂದು ನನಗೆ ಅನುಮಾನಕ್ಕೆ ಎಡೆ ಇಲ್ಲದಂತೆ ಸ್ಪಷ್ಟವಾಯಿತು.
ವ|| ಎಂದು ಸೈರಿಸದೆ– 
ಚಂ|| ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
     ದಳವೊಡನೋದಿದೊಂದು ಬೆರಗಿಂಗೆ ಕೊಲಲ್ಕೆನಗಾಗದೀ ಸಭಾ|
     ವಳಯದೊಳೆನ್ನನೇೞಿಸಿದ ನಿನ್ನನನಾಕುಳಮೆನ್ನ ಚಟ್ಟರಿಂ
     ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ|| ೫೦ ||
(ಖಳ!ನೊಳವಿಂಗೆ ಕುಪ್ಪೆ ವರಂ’ ಎಂಬವೊಲ್ ಆಂಬರಂ ಉಂಟೆ ನಿನ್ನದೊಂದು ಅಳವು? ಒಡನೆ ಓದಿದ ಒಂದು ಬೆರಗಿಂಗೆ ಕೊಲಲ್ಕೆ ಎನಗೆ ಆಗದು ಈ ಸಭಾವಳಯದೊಳ್ ಎನ್ನನ್ ಏೞಿಸಿದ ನಿನ್ನನ್ ಅನಾಕುಳಂ ಎನ್ನ ಚಟ್ಟರಿಂ ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ?) 
ದುಷ್ಟ! ನೊಣಕ್ಕೆ ತಿಪ್ಪೆಯೇ ಶ್ರೇಷ್ಠ – ಎಂಬಂತಿದೆ ನಿನ್ನ ಮಾತು! ನನ್ನವರೆಗೂ ಉಂಟೆ ನಿನ್ನ ಪ್ರತಾಪ? ಜೊತೆಯಲ್ಲಿ ಓದಿದವರೆಂಬ ಒಂದೇ  ಕಾರಣಕ್ಕೆ ಇಲ್ಲೇ, ಈ ಸಭೆಯಲ್ಲೇ ನಿನ್ನನ್ನು ಕೊಲ್ಲದೆ ಬಿಟ್ಟಿದ್ದೇನೆ! ನನ್ನನ್ನು ಅವಮಾನಿಸಿದ ನಿನ್ನನ್ನು ನನ್ನ ಶಿಷ್ಯರ ಕೈಯಿಂದ ಸುಲಭವಾಗಿ ಹೆಡೆಮುರಿ ಕಟ್ಟಿಸದಿದ್ದರೆ, ನಾನು ಮೀಸೆ ಹೊತ್ತು ಏನು ಪ್ರಯೋಜನ?
ವ||  ಎಂದಾರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವಂ ಕೃಪನ ಮನೆಯೊಳಪಗತಪರಿಶ್ರಮನಾಗಿರ್ದೊಂದು ದಿವಸಂ ಪಾಂಡವರುಂ ಕೌರವರುಂ ಪೊಱವೊೞಲೊಳ್– 
(ಎಂದು ಆರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವಂ ಕೃಪನ ಮನೆಯೊಳ್ ಅಪಗತಪರಿಶ್ರಮನ್ ಆಗಿರ್ದು ಒಂದು ದಿವಸಂ ಪಾಂಡವರುಂ ಕೌರವರುಂ ಪೊಱವೊೞಲೊಳ್)
ಎಂದು ಪ್ರತಿಜ್ಞೆ ಮಾಡಿ, ಹಸ್ತಿನಾವತಿಗೆ ಬಂದು ತನ್ನ ಭಾವನಾದ ಕೃಪನ ಮನೆಯಲ್ಲಿ ವಿರಮಿಸಿದ್ದನು. ಒಂದು ದಿನ ಪಾಂಡವರೂ, ಕೌರವರೂ ಊರ ಹೊರಗೆ
ಕಂ|| ನೆರೆದಿಸುತಿರೆ ತೋಲ್ವುಲ್ಲೆಯ
     ನಿರದದು ಬಿೞ್ದೊಡೆ ಪುರಾಣ ಕೂಪದೊಳದನಿ|
     ನ್ನರಿದು ತೆಗೆವಂದಮೆಂದವ
     ರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ || ೫೧ ||
(ನೆರೆದು ಇಸುತಿರೆ ತೋಲ್ವುಲ್ಲೆಯನ್, ಇರದೆ ಅದು ಬಿೞ್ದೊಡೆ ಪುರಾಣ ಕೂಪದೊಳ್, ಅದನ್ ಇನ್ನು ಅರಿದು ತೆಗೆವ ಅಂದಂ ಎಂದು ಅವರ್ ಇರೆ, ಬಳಸಿಯುಂ ಅಲ್ಲಿ ಕಂಡು ನಕ್ಕಂ ದ್ರೋಣಂ)
ಒಟ್ಟಾಗಿ ಸೇರಿ ಚರ್ಮದ ಜಿಂಕೆಗೆ ಬಾಣ ಬಿಡುತ್ತಿದ್ದರು. ಆಗ ಆ ಚರ್ಮದ ಜಿಂಕೆಯು ಒಂದು ಪಾಳುಬಾವಿಗೆ ಹೋಗಿ ಬಿತ್ತು. ಅದನ್ನು ತೆಗೆಯಲಾರದೆ ಅವರೆಲ್ಲ ಅಲ್ಲಿ ಗುಂಪು ಸೇರಿದ್ದಾಗ, ಅಲ್ಲಿಯೇ ತಿರುಗಾಡುತ್ತಿದ್ದ ದ್ರೋಣನು ಅವರನ್ನು ಕಂಡು ನಕ್ಕನು.
     ಭರತಕುಳತಿಳಕರಿರ್ ವರ
     ಶರಾಸನ ವ್ಯಗ್ರಹಸ್ತರಿರ್ ಬಳಯುತರಿರ್|
     ನೆರೆದಿನಿಬರುಮೀ ಲಕ್ಷ್ಯಮ
     ನಿರದಕ್ಕಟ ಸರದೆ ತೆಗೆಯಲಾರ್ತಿರುಮಿಲ್ಲಾ || ೫೨ ||
(ಭರತಕುಳತಿಳಕರಿರ್, ವರಶರಾಸನ ವ್ಯಗ್ರಹಸ್ತರಿರ್, ಬಳಯುತರಿರ್,  ನೆರೆದ ಇನಿಬರುಂ ಈ ಲಕ್ಷ್ಯಮನ್ ಇರದೆ ಅಕ್ಕಟ! ಸರದೆ ತೆಗೆಯಲ್ ಆರ್ತಿರುಂ ಇಲ್ಲಾ?)
ಓಹೋ! ನೀವೆಲ್ಲಾ ಭರತಕುಲ ತಿಲಕರು! ಶ್ರೇಷ್ಠವಾದ ಬಿಲ್ವಿದ್ಯೆಯನ್ನು ಕಲಿಯುತ್ತಿರುವವರು! ಬಲಶಾಲಿಗಳು! ಇಷ್ಟು ಜನ ಒಟ್ಟಾಗಿ ಸೇರಿದರೂ, ಈ ಚಕ್ಕಳದ ಜಿಂಕೆಯನ್ನು ಬಾಣ ಬಿಟ್ಟು ಬಾವಿಯಿಂದ ಹೊರಗೆ ತೆಗೆಯಲಾರದೆ ಹೋದಿರೇ?
 ವ||ಎಂದು ತನ್ನ ಮಗನಪ್ಪಶ್ವತ್ಥಾಮನಂ ಕರೆದೀ ಲಕ್ಷ್ಯಮಂ ತೆಗೆಯೆಂಬುದುಮಾತನಂತೆ ಗೆಯ್ವೆನೆಂದು ನೈಷ್ಠಿಕಮೆಂಬ ಮುಷ್ಟಿಯೊಳಂ ಪುಂಖಾನುಪುಂಖಮೆಂಬ ಶರಸಂಧಾನದೊಳವಯವದೊಳೆ ತೆಗೆದೊಡನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಱಿಪಿದೊಡೆ ನದೀತನೂಜಂ ಭಾರದ್ವಾಜಂಗೆ ಬೞಿಯನ್ ಅಟ್ಟಿ ಬರಿಸಿ ಪೂರ್ವ ಸಂಭಾಷಣಾ ಅರ್ಘ್ಯಮೆತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಾದಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು– 
(ಎಂದು ತನ್ನ ಮಗನ್ ಅಪ್ಪ ಅಶ್ವತ್ಥಾಮನಂ ಕರೆದು ‘ಈ ಲಕ್ಷ್ಯಮಂ ತೆಗೆ’ ಎಂಬುದುಂ ಆತನ್ ಅಂತೆ ಗೆಯ್ವೆನ್ ಎಂದು ನೈಷ್ಠಿಕಮೆಂಬ ಮುಷ್ಟಿಯೊಳಂ ಪುಂಖಾನುಪುಂಖಮೆಂಬ ಶರಸಂಧಾನದೊಳ್ ಅವಯವದೊಳೆ ತೆಗೆದೊಡೆ ಅನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗೆ ಅಱಿಪಿದೊಡೆ ನದೀತನೂಜಂ ಭಾರದ್ವಾಜಂಗೆ ಬೞಿಯನ್ ಅಟ್ಟಿ ಬರಿಸಿ ಪೂರ್ವ ಸಂಭಾಷಣಾ ಅರ್ಘ್ಯಮೆತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಾದಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು)
ಎಂದು ತನ್ನ ಮಗನಾದ ಅಶ್ವತ್ಥಾಮನನ್ನು ಕರೆದು ‘ಈ ಲಕ್ಷ್ಯವನ್ನು ತೆಗೆ’ ಎಂದನು. ಅಶ್ವತ್ಥಾಮನು ಹಾಗೆಯೇ ಮಾಡುತ್ತೇನೆಂದು ಹೇಳಿ, ತನ್ನ ಬಿಲ್ಲಿನಿಂದ ಒಂದರ ಹಿಂದೆ ಒಂದರಂತೆ ಬಾಣಗಳನ್ನು ಬಿಟ್ಟು ಏನೂ ಶ್ರಮವಿಲ್ಲದೆ ಆ ಜಿಂಕೆಯನ್ನು ಬಾವಿಯಿಂದ ಮೇಲೆತ್ತಿದನು. ಆಗ ಅಲ್ಲಿ ಸೇರಿದ್ದ ಎಲ್ಲರಿಗೂ ತುಂಬಾ ಆಶ್ಚರ್ಯವಾಯಿತು. ಅವರೆಲ್ಲರೂ ಹೋಗಿ ಈ ವಿಷಯವನ್ನು ಗಾಂಗೇಯ, ಧೃತರಾಷ್ಟ್ರರಿಗೆ ತಿಳಿಸಿದರು. ಆಗ ಗಾಂಗೇಯನು ದ್ರೋಣನಿಗೆ ಹೇಳಿ ಕಳಿಸಿ, ಕರೆಸಿಕೊಂಡು, ಮಾತಿಗೆ ಮೊದಲೇ ಅರ್ಘ್ಯ ಕೊಟ್ಟು, ಮಧುಪರ್ಕ, ಚಾಪೆ, ತಾಂಬೂಲಾದಿಗಳಿಂದ ಅವನನ್ನು ಸತ್ಕರಿಸಿ, ಅವನ ಕುಲ, ವಿದ್ಯೆ, ವೃತ್ತಿಗಳನ್ನು ಕೇಳಿ ತಿಳಿದು-

ಮ|| ಮದಮಂ ಮುಕ್ಕುಳಿಸಿರ್ದಿಭಂಗಳನುದಗ್ರಾಶ್ವಂಗಳಂ ತಕ್ಕಿನ
     ಗ್ಗದ ಬಾಡಂಗಳನಾಯ್ದು ಕೊಟ್ಟು ತಣಿದೆಂ ಪೋ ಸಾಲ್ಗುಮೆಂಬನ್ನಮಂ|
     ದಿದಿರೊಳ್ ನೂಱಱುವರ್ ಕುಮಾರರುಮನಿಟ್ಟೀ ಕೂಸುಗಳ್ ಯೋಗ್ಯರ
     ಪ್ಪುದನಿನ್ನೊಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ || ೫೩ || 
(
ಮದಮಂ ಮುಕ್ಕುಳಿಸಿರ್ದ ಇಭಂಗಳನ್, ಉದಗ್ರ ಅಶ್ವಂಗಳಂ, ತಕ್ಕಿನ ಅಗ್ಗದ ಬಾಡಂಗಳನ್ ಆಯ್ದು ಕೊಟ್ಟುತಣಿದೆಂ, ಪೋ ಸಾಲ್ಗುಂ’ ಎಂಬನ್ನಂ, ಅಂದು ಇದಿರೊಳ್ ನೂಱಱುವರ್ ಕುಮಾರರುಮನ್ ಇಟ್ಟು ‘ಈ  ಕೂಸುಗಳ್ ಯೋಗ್ಯರಪ್ಪುದನ್ ಇನ್ ಒಲ್ವೊಡೆ ಶಸ್ತ್ರವಿದ್ಯೆಗೆ ಒವಜಂ ನೀನಾಗು ಕುಂಭೋದ್ಭವಾ’)
(ಭೀಷ್ಮನು) ಮದೋದಕವನ್ನು ಸುರಿಸುತ್ತಿರುವ ಆನೆಗಳನ್ನು, ಉತ್ತಮ ತರದ ಕುದುರೆಗಳನ್ನು, ಶ್ರೇಷ್ಠವಾದ ಹಳ್ಳಿಗಳನ್ನು ಆರಿಸಿ, ದ್ರೋಣನು ‘ಓಹೋ! ಸಾಕು, ಸಾಕು!’ ಎನ್ನುವವರೆಗೂ ಕೊಟ್ಟು, ಆತನ ಎದುರಿನಲ್ಲಿ ಎಲ್ಲ ನೂರ ಆರು ಮಂದಿ ಕುಮಾರರನ್ನೂ ನಿಲ್ಲಿಸಿ, ‘ಈ ಮಕ್ಕಳೆಲ್ಲ ಯೋಗ್ಯರಾಗಬೇಕೆಂದು ಬಯಸುವುದೇ ಆದರೆ, ಇವರೆಲ್ಲರಿಗೂ ನೀನು ಶಸ್ತ್ರವಿದ್ಯೆಗೆ ಗುರುವಾಗಬೇಕು’ ಎಂದು ಕೇಳಿಕೊಂಡನು.
ವ|| ಎಂಬುದುಮಂತೆಗೆಯ್ವೆನೆಂದು ಕಲಶಜನನಿಬರ ಮೊಗಮಂ ನೋಡಿ– 
(ಎಂಬುದುಂ ಅಂತೆಗೆಯ್ವೆನ್ ಎಂದು ಕಲಶಜನ್ ಅನಿಬರ ಮೊಗಮಂ ನೋಡಿ)
ಎಂದಾಗ ‘ಹಾಗೆಯೇ ಮಾಡುತ್ತೇನೆ’ ಎಂದು ದ್ರೋಣನು ಎಲ್ಲರ ಮುಖವನ್ನೂ ನೋಡಿ
ಕಂ|| ನೆರೆದಿನಿಬರುಮೆಂದುದ
     ನೇನೀವಿರೆ ಪೇೞಿಮೆಂದೊಡನಿಬರುಮಿರ್ದರ್|
     ಮೌನವ್ರತದೆ ಗುಣಾರ್ಣವ
     ನಾನೀವೆಂ ನಿಮ್ಮ ಬಯಸಿ ಬೇೞ್ಪುದನೆಂದಂ || ೫೪ || 
(‘ ನೆರೆದ ಇನಿಬರುಂ ಎಂದುದನ್ ಏನ್ ಈವಿರೆ ಪೇೞಿಂ’ ಎಂದೊಡೆ ಅನಿಬರುಂ ಇರ್ದರ್ ಮೌನವ್ರತದೆ,  ಗುಣಾರ್ಣವನ್ ‘ಆನ್ ಈವೆಂ ನಿಮ್ಮ ಬಯಸಿ ಬೇೞ್ಪುದನ್’ ಎಂದಂ)

(ದ್ರೋಣನು) ‘ಇಲ್ಲಿ ಸೇರಿದ ನೀವೆಲ್ಲರೂ ನಾನು ಕೇಳಿದ್ದನ್ನು ಕೊಡಬಲ್ಲಿರಾ?’ ಎಂದು ಪ್ರಶ್ನಿಸಿದನು. ಆಗ ಎಲ್ಲರೂ ಮಾತನಾಡದೆ ಮೌನವಾಗಿದ್ದರು. ಅರ್ಜುನನೊಬ್ಬನು ಮಾತ್ರ ‘ನೀವು ಬೇಡಿದ್ದನ್ನು ನಾನು ಕೊಡುತ್ತೇನೆ’ ಎಂದು ಹೇಳಿದನು.

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *