ಪಂಪಭಾರತ ಆಶ್ವಾಸ ೧ ಪದ್ಯಗಳು ೭೫-೮೫
ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ |
ದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋ ||
ತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತಮೀಗಳಬ್ಬೆಯೆಂ |
ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೋ ಪಂಕಜಾನನೇ ||೭೫||
(ಅತ್ತ ಸುರೇಶ್ವರಾವಸಥಂ, ಇತ್ತ ಮಹೀತಳಂ, ಉತ್ತ ಪನ್ನಗೋದಾತ್ತ ಸಮಸ್ತ ಲೋಕಂ ಅಱಿದಂತಿರೆ ಪೂಣ್ದ ಎನಗೆ, ಆಗದು ಅಂಗಜ ಉತ್ಪತ್ತಿ ಸುಖಕ್ಕೆ ಸೋಲಲ್ ಅೞಿಗುಂ ಪುರುಷವ್ರತಂ ಈಗಳ್ ಅಬ್ಬೆಯೆಂದು ಅತ್ತಿಗೆಯೆಂಬ ಮಾತನ್ ಎನಗೇನ್ ಎನಲ್ ಅಕ್ಕುಮೋ ಪಂಕಜಾನನೇ?)
ಅತ್ತ ಇಂದ್ರನ ನೆಲೆಯಾದ ಸ್ವರ್ಗಲೋಕ, ಇತ್ತ ಭೂಲೋಕ, ಇನ್ನೊಂದು ಕಡೆ ಪಾತಾಳವೇ ಮುಂತಾದ ಇತರ ಲೋಕಗಳು – ಇವೆಲ್ಲಕ್ಕೂ ಗೊತ್ತಿರುವ ಹಾಗೆ ನಾನು ಪ್ರತಿಜ್ಞೆ ಮಾಡಿದ್ದೇನೆ. ಕಾಮಸುಖಕ್ಕೆ ಸೋಲುವುದು ನನ್ನಿಂದ ಸಾಧ್ಯವಿಲ್ಲ. ಹಾಗೆ ಮಾಡಿದರೆ ನನ್ನ ಪುರುಷವ್ರತವು ಅಳಿದುಹೋಗುತ್ತದೆ. ಯಾವ ಬಾಯಲ್ಲಿ ನಿನ್ನನ್ನು ಅಮ್ಮಾ ಎಂದು ಕರೆದೆನೋ ಅದೇ ಬಾಯಲ್ಲಿ ನಲ್ಲೆ ಎಂದು ಕರೆಯುವುದು ನನಗೆ ಎಂದಾದರೂ ಸಾಧ್ಯವೆ? (ಎಂದು ಹೇಳಿ ಭೀಷ್ಮನು ಅಂಬೆಯನ್ನು ಕೈಹಿಡಿಯಲು ನಿರಾಕರಿಸಿದನು.)
ವ|| ಎಂದು ನುಡಿದ ಗಾಂಗೇಯನ ನುಡಿಯೊಳವಸರಮಂ ಪಸರಮಂ ಪಡೆಯದೆ ತನಗೆ ಕಿಱಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಮೆಂದೊಡಾತ-ನಿಂತೆಂದಂ-
(ಎಂದು ನುಡಿದ ಗಾಂಗೇಯನ ನುಡಿಯೊಳ್ ಅವಸರಮಂ ಪಸರಮಂ ಪಡೆಯದೆ, ತನಗೆ ಕಿಱಿಯಂದು ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಪೋಗಿ, “ನೀನ್ ಎನ್ನಂ ಕೈಕೊಳವೇೞ್ಕುಂ” ಎಂದೊಡೆ ಆತನ್ ಇಂತೆಂದಂ)
ಭೀಷ್ಮನು ಹೀಗೆ ಹೇಳಿದ್ದರಿಂದ ಅಂಬೆಗೆ ಆತನಲ್ಲಿ ಮಾತನಾಡಲು, ವಾದ ಮಾಡಲು ಯಾವ ಅವಕಾಶವೂ ಸಿಗಲಿಲ್ಲ. ಅವಳು ತಾನಿನ್ನೂ ಸಣ್ಣವಳಿದ್ದಾಗ ತನಗೆ ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಹೋಗಿ ‘ನೀನು ನನ್ನ ಕೈಹಿಡಿ’ ಎಂದು ಕೇಳಿದಳು. ಆಗ ಸಾಲ್ವನು ಹೀಗೆಂದನು:
ಕಂ|| ಬಂಡಣದೊಳೆನ್ನನೋಡಿಸಿ |
ಕೊಂಡುಯ್ದಂ ನಿನ್ನನಾ ಸರಿತ್ಸುತನಾನುಂ ||
ಪೆಂಡತಿಯೆನಾದೆನದಱಿಂ |
ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ ||೭೬||
(“ಬಂಡಣದೊಳ್ ಎನ್ನನ್ ಓಡಿಸಿ, ಕೊಂಡುಯ್ದಂ ನಿನ್ನನ್ ಆ ಸರಿತ್ಸುತನ್, ಆನುಂ ಪೆಂಡತಿಯೆನ್ ಆದೆನ್, ಅದಱಿಂ, ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರ್ ಅಬಲೇ”?)
ಸ್ವಯಂವರದ ದಿನ ನಡೆದ ಯುದ್ಧದಲ್ಲಿ ಭೀಷ್ಮನು ನನ್ನನ್ನು ಸೋಲಿಸಿ ನಿನ್ನನ್ನು ಅಪಹರಿಸಿದನು. ಅವನಿಗೆ ಸೋತದ್ದರಿಂದ ನಾನು ಅವನ ಹೆಂಡತಿಯಾದಂತೆಯೇ ಆಯಿತು. ಹೆಣ್ಣಾದ ನಾನು ಹೆಣ್ಣಾದ ನಿನ್ನೊಂದಿಗೆ ಸೇರುವುದು ಹೇಗೆ ತಾನೇ ಸಾಧ್ಯ?
ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗಂ ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾರದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನೆನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೋಡಿಸಿ ಕೊಂಡು ಬಂದೆನ್ನ[೦] ಮದುವೆಯಂ ನಿಲಲೊಲ್ಲ[ದ]ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನೆನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದಂಬೆ ಕಣ್ಣ ನೀರಂ ತುಂಬೆ-
(ಎಂದು ಸಾಲ್ವಲಂ ತನ್ನ ಪರಿಭವದೊಳ್ ಆದ ಸಿಗ್ಗಂ ಸಾಲ್ವಿನಂ ಉಂಟುಮಾಡಿದೊಡೆ, ಆತನ ಮನಮನ್ ಒಡಂಬಡಿಸಲಾರದೆ, ಪರಶುರಾಮನಲ್ಲಿಗೆ ಪೋಗಿ, “ಭೀಷ್ಮನ್ ಎನ್ನ ಸ್ವಯಂವರದೊಳ್ ನೆರೆದ ಅರಸುಮಕ್ಕಳ್ ಎಲ್ಲರುಮನ್ ಓಡಿಸಿ, ಕೊಂಡುಬಂದು ಎನ್ನ೦ ಮದುವೆಯಂ ನಿಲಲ್ ಒಲ್ಲದೆ ಅಟ್ಟಿ ಕಳೆದೊಡೆ, ಎನ್ನ ದೆವಸಮುಂ ಜವ್ವನಮುಂ ಅಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದೆ, ಆತನ್ ಎನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು, ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದು” ಎಂದು ಅಂಬೆ ಕಣ್ಣ ನೀರಂ ತುಂಬೆ)
ಎಂದು ಸಾಲ್ವಲನು ತಾನು ಭೀಷ್ಮನಿಗೆ ಸೋತದ್ದರ ಅವಮಾನವನ್ನು ಅಂಬೆಯ ಮೇಲೆ ತೀರಿಸಿದನು! ಅಂಬೆಯು ಸಾಲ್ವಲನ ಮನಸ್ಸನ್ನು ಒಲಿಸಲಾರದೆ, ಪರಶುರಾಮನಲ್ಲಿಗೆ ಹೋಗಿ ‘ಭೀಷ್ಮನು ನನ್ನ ಸ್ವಯಂವರದ ದಿನ ಅಲ್ಲಿಗೆ ಬಂದು, ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ, ನನ್ನನ್ನು ಕರೆದುಕೊಂಡು ಹೋದನು. ಆದರೆ ನಂತರ ನನ್ನನ್ನು ಮದುವೆಯಾಗಲು ಒಪ್ಪದೆ ಕೈಬಿಟ್ಟನು. ನನ್ನ ಆಯಸ್ಸೂ, ಯೌವನವೂ ಕಾಡು ಹೂವಿನಂತೆ ಹಾಳಾಗಿ ಹೋಗುತ್ತಿದೆ. ನೀನು ಅದಕ್ಕೆ ಅವಕಾಶ ಕೊಡದೆ ಭೀಷ್ಮನು ನನ್ನನ್ನು ಮದುವೆಯಾಗುವಂತೆ ಮಾಡು. ಅದು ಸಾಧ್ಯವಿಲ್ಲ ಎನ್ನುವುದಾದರೆ ನನಗೆ ಒಂದಿಷ್ಟು ಬೆಂಕಿಯನ್ನು ದಯಪಾಲಿಸು’ ಎಂದು ಕಣ್ಣೀರು ತುಂಬಿಕೊಂಡು ಹೇಳಿದಾಗ-
ಮ|| ನಯಮಂ ನಂಬುವೊಡೆನ್ನ ಪೇೞ್ವ ಸತಿಯಂ ಕೈಕೊಂಡನಂತಲ್ಲ ದು |
ರ್ಣಯಮಂ ನಚ್ಚುವೊಡೆನ್ನನುಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನಾ ||
ಱಯೆ ಕಜ್ಜಂ ಪೆಱತಿಲ್ಲ ಶಂತನುಸುತಂಗೆನ್ನಂ ಕರಂ ನಂಬಿದಂ |
ಬೆಯೊಳೆನ್ನಂಬೆ[ವ]ಲಂ ವಿವಾಹವಿಧಿಯಂ ಮಾೞ್ಪೆಂ ಪೆಱರ್ ಮಾೞ್ಪರೇ ||೭೭||
(“ನಯಮಂ ನಂಬುವೊಡೆ ಎನ್ನ ಪೇೞ್ವ ಸತಿಯಂ ಕೈಕೊಂಡನ್, ಅಂತಲ್ಲ ದುರ್ಣಯಮಂ ನಚ್ಚುವೊಡೆ ಎನ್ನನ್ ಉಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನ್, ಆಱಯೆ ಕಜ್ಜಂ ಪೆಱತಿಲ್ಲ ಶಂತನುಸುತಂಗೆ, ಎನ್ನಂ ಕರಂ ನಂಬಿದ ಅಂಬೆಯೊಳ್ ಎನ್ನಂಬೆವಲಂ ವಿವಾಹವಿಧಿಯಂ ಮಾೞ್ಪೆಂ, ಪೆಱರ್ ಮಾೞ್ಪರೇ”?)
ಭೀಷ್ಮನು ನೀತಿವಂತನೇ ಹೌದಾದರೆ ನನ್ನ ಮಾತಿಗೆ ಒಪ್ಪಿ ಅಂಬೆಯ ಕೈಹಿಡಿಯುತ್ತಾನೆ. ಅನೀತಿಯನ್ನು ನೆಚ್ಚುವವನಾದರೆ ಯುದ್ಧದಲ್ಲಿ ನನ್ನನ್ನು ಎದುರಿಸಬೇಕಾಗುತ್ತದೆ. ವಿಚಾರಿಸಿ ನೋಡಿದರೆ ಭೀಷ್ಮನಿಗೆ ಬೇರೆ ದಾರಿ ಇಲ್ಲ. ನಾನಂತೂ ನನ್ನನ್ನು ನಂಬಿದ ಅಂಬೆಗೆ ನನ್ನ ಬಾಣದ ಸಾಕ್ಷಿಯಾಗಿ ವಿವಾಹವನ್ನು ಮಾಡುತ್ತೇನೆ. ಬೇರೆಯವರು ಮಾಡುತ್ತಾರೆಯೇ?
(ತಾ. ೨೯-೯-೨೦೧೯ರಂದು ತಿದ್ದಿ ಬರೆದುದು:
“ನಾನಂತೂ ನನ್ನನ್ನು ನಂಬಿದ ಅಂಬೆಗೆ ನನ್ನ ಬಾಣದ ಸಾಕ್ಷಿಯಾಗಿ ವಿವಾಹವನ್ನು ಮಾಡುತ್ತೇನೆ.” ಎಂಬ ವಾಕ್ಯವನ್ನು ಮೇಲೆ ಬರೆದಿದ್ದೇನೆ. ಇದು ‘ಎನ್ನಂ ಕರಂ ನಂಬಿದಂಬೆಯೊಳೆನ್ನಂಬೆ[ವ]ಲಂ ವಿವಾಹವಿಧಿಯಂ ಮಾೞ್ಪೆಂ’ ಎಂಬ ವಾಕ್ಯದ ಅರ್ಥ. ಇದೇ ವಾಕ್ಯಕ್ಕೆ ಡಿ. ಎಲ್. ಎನ್. ಅವರು “ಎನ್ನ ಅಂಬೆ ವಲಂ – ನನ್ನ ಬಾಣವೇ ನಿಶ್ಚಯವಾಗಿಯೂ” ಎಂದೂ, “ಅಂಬೆಗೆ ಮದುವೆ ಮಾಡಿಸುವ ವಿಷಯಕ್ಕೆ ನನ್ನ ಬಾಣವೇ ಸಾಕು, ಬೇರೇನೂ ಬೇಡ ಎಂದು ತಾತ್ಪರ್ಯ” ಎಂದೂ ಅರ್ಥ ಬರೆದಿದ್ದಾರೆ. ಎನ್. ಅನಂತರಂಗಾಚಾರ್ ಹಾಗೂ ಎಲ್. ಬಸವರಾಜು ಇಬ್ಬರೂ ಸುಮಾರಿಗೆ ಇದೇ ಅರ್ಥವನ್ನು ಅನುಮೋದಿಸುತ್ತಾರೆ.
೧. ಇಲ್ಲಿ “ಎನ್ನಂಬೆ[ವ]ಲಂ” ಎಂಬುದಕ್ಕೆ “ಎನ್ನಂಬೆವೊಲಂ” ಎಂಬ ಪಾಠಾಂತರ ಇದೆ.
೨. ‘ಅಂಬೆ’ ಶಬ್ದಕ್ಕೆ ಕ.ಸಾ.ಪ. ನಿಘಂಟಿನಲ್ಲಿ –ಬೇರೆ ಅರ್ಥಗಳ ಜೊತೆಗೆ- ‘ಕರು’ ಎಂಬ ಅರ್ಥವನ್ನೂ ಕೊಟ್ಟಿದೆ. (ದನದ)ಕರು ಎಂಬರ್ಥದಲ್ಲಿ ಅಂಬೆ ಶಬ್ದವು ಈಗಲೂ ಅನೇಕ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. (ಕೆಲವು ಕಡೆ ‘ಅಂಬೆ ಬೂಚಿ’ ಎಂಬ ಶಬ್ದವಿದೆ). ಈ ಹಿನ್ನೆಲೆಯಲ್ಲಿ ಪರಶುರಾಮನ ಮಾತನ್ನು “ಎನ್ನಂ ಕರಂ ನಂಬಿದಂಬೆಯೊಳನ್ನಂಬೆವೊಲಂ ವಿವಾಹ ವಿಧಿಯಂ ಮಾೞ್ಪೆಂ” ಎಂದು ಓದಿ, “ನನ್ನನ್ನೇ ನಂಬಿದ ಅಂಬೆಗೆ, ನನ್ನ ಮಗುವಿನ (ಇಲ್ಲಿ ಕರು ಎಂದರೆ ಮಗು) ಹಾಗೆ ವಿವಾಹವಿಧಿಯನ್ನು ಮಾಡುತ್ತೇನೆ” ಎಂದು ಅರ್ಥ ಮಾಡುವುದೇ ಸರಿಯಾಗುತ್ತದೆ. ‘ವಿವಾಹವಿಧಿ’ ಎಂಬ ಶಬ್ದವನ್ನೂ ಗಮನಿಸಬೇಕು. ತಾನು ಅಂಬೆಯ ತಂದೆಯ ಸ್ಥಾನದಲ್ಲಿ ನಿಂತು ವಿವಾಹದ ‘ವಿಧಿ’ಗಳನ್ನೂ ನಡೆಸಿಕೊಡುತ್ತೇನೆ ಎಂದು ಅವನ ಹೇಳಿಕೆ.
ವ|| ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವಂ ಗಾಂಗೇಯಂ ಕೇಳ್ದಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಘ್ಯಮಂ ಕೊಟ್ಟು ಪೊಡಮಟ್ಟು-
(ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವಂ ಗಾಂಗೇಯಂ ಕೇಳ್ದು, ಇದಿರ್ವಂದು, ಕನಕ ರಜತ ಪಾತ್ರಂಗಳೊಳ್ ಅರ್ಘ್ಯಮಂ ಕೊಟ್ಟು, ಪೊಡಮಟ್ಟು)
ಎಂದು ಹಸ್ತಿನಾಪುರದತ್ತ ಬರುತ್ತಿದ್ದ ಪರಶುರಾಮನ ಬರವನ್ನು ಭೀಷ್ಮನು ಕೇಳಿ ತಿಳಿದು, ಆತನನ್ನು ಎದುರ್ಗೊಂಡು, ಚಿನ್ನ-ಬೆಳ್ಳಿಯ ಪಾತ್ರೆಗಳಲ್ಲಿ ಅರ್ಘ್ಯವನ್ನು ಕೊಟ್ಟು, ಅಡ್ಡಬಿದ್ದು-
ಮ|| ಬೆಸನೇನೆಂದೊಡೆ ಪೇೞ್ವೆನೆನ್ನ ಬೆಸನಂ ಕೈಕೊಳ್ವುದೀ ಕನ್ನೆಯಂ |
ಪಸುರ್ವಂದರ್ ಪಸೆಯಿಂಬಿವಂ ಸಮೆದು ನೀಂ ಕೈಕೊಳ್ ಕೊಳಲ್ಕಾಗದೆಂ ||
ಬೆಸೆಕಂ ಚಿತ್ತದೊಳುಳ್ಳೊಡೀಗಳಿವರೆಮ್ಮಾಚಾರ್ಯರೆಂದೋವದೇ |
ರ್ವೆಸನಂ ಮಾಣದೆ ಕೈದುಗೊಳ್ಳೆರಡರೊಳ್ ಮೆಚ್ಚಿತ್ತೆನೇನೆಂದಪಯ್ ||೭೮||
(“ಬೆಸನೇನ್”? ಎಂದೊಡೆ “ಪೇೞ್ವೆನ್ ಎನ್ನ ಬೆಸನಂ, ಕೈಕೊಳ್ವುದೀ ಕನ್ನೆಯಂ, ಪಸುರ್ವಂದರ್ ಪಸೆ ಎಂಬಿವಂ ಸಮೆದು ನೀಂ ಕೈಕೊಳ್, ಕೊಳಲ್ಕಾಗದು ಎಂಬ ಎಸೆಕಂ ಚಿತ್ತದೊಳ್ ಉಳ್ಳೊಡೆ, ಈಗಳ್ ಇವರ್ ಎಮ್ಮ ಆಚಾರ್ಯರ್ ಎಂದು ಓವದೆ, ಏರ್ವೆಸನಂ ಮಾಣದೆ, ಕೈದುಗೊಳ್, ಎರಡರೊಳ್ ಮೆಚ್ಚಿತ್ತೆನ್ ಏನೆಂದಪಯ್”?)
‘ಏನಪ್ಪಣೆ?’ ಎಂದು ಕೇಳಿದಾಗ ‘ನನ್ನ ಅಪ್ಪಣೆ ಏನೆನ್ನುತ್ತೀಯೋ? ಹೇಳುತ್ತೇನೆ ಕೇಳು: ಹಸಿರು ಚಪ್ಪರ ಹಾಕಿಸಿ, ಹಸೆಮಣೆಯನ್ನಿಟ್ಟು ಈ ಕನ್ಯೆಯನ್ನು ನೀನು ಕೈಹಿಡಿಯತಕ್ಕದ್ದು. ಅದು ಸಾಧ್ಯವಿಲ್ಲ ಎಂಬುದು ನಿನ್ನ ನಿಶ್ಚಯವಾದರೆ ‘ಇವರು ನಮ್ಮ ಗುರುಗಳು’ ಎಂದು ಮುಲಾಜು ಮಾಡದೆ, ಕಾದುವ ಸ್ವಭಾವವನ್ನು ಬಿಡದೆ ಖಡ್ಗವನ್ನು ಹಿಡಿ. ಎರಡು ಆಯ್ಕೆಗಳನ್ನು ಕೊಟ್ಟಿದ್ದೇನೆ. ಏನೆನ್ನುತ್ತೀಯ?’
ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದೆನಗೆ ವೀರಶ್ರೀಯುಂ ಕೀರ್ತಿಶ್ರೀಯುಮಲ್ಲದುೞಿದ ಪೆಂಡಿರ್ ಮೊರೆಯಲ್ಲ ನೀವಿದನೇಕಾಗ್ರಹಂಗೆಯ್ವಿರೆಂದೊಡೆಂತುಮೆಮ್ಮೊಳ್ ಕಾದಲ್ವೇೞ್ವುದೆಂದು-
(ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದು, ಎನಗೆ ವೀರಶ್ರೀಯುಂ ಕೀರ್ತಿಶ್ರೀಯುಂ ಅಲ್ಲದೆ ಉೞಿದ ಪೆಂಡಿರ್ ಮೊರೆಯಲ್ಲ, ನೀವ್ ಇದನ್ ಏಕೆ ಆಗ್ರಹಂಗೆಯ್ವಿರಿ? ಎಂದೊಡೆ, ಎಂತುಂ ಎಮ್ಮೊಳ್ ಕಾದಲ್ವೇೞ್ವುದು ಎಂದು)
ಎಂದು ಹೇಳಿದ ಪರಶುರಾಮನ ಮಾತನ್ನು ಕೇಳಿ ಭೀಷ್ಮನು ‘ನನಗೆ ವೀರಶ್ರೀ, ಕೀರ್ತಿಶ್ರೀಗಳಲ್ಲದೆ ಬಾಕಿ ಹೆಣ್ಣುಗಳ ಸಂಬಂಧವಿಲ್ಲ. (ಇದು ತಿಳಿದೂ) ನೀವೇಕೆ ಇದನ್ನು ಒತ್ತಾಯ ಮಾಡುತ್ತಿದ್ದೀರಿ?’ ಎಂದನು. ಆಗ ಪರಶುರಾಮನು ‘ಅದೇನಿದ್ದರೂ ನನ್ನ ಜೊತೆ ಯುದ್ಧಕ್ಕೆ ತಯಾರಾಗು’ ಎಂದು ಹಟ ಹಿಡಿದನು.
ಮ|| ಕೆಳರ್ದಂದುಗ್ರ ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ |
ಕಳವೇೞ್ದಿರ್ವರುಮೈಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂ ||
ಕುಳದಿಂದೊರ್ವರನೊರ್ವರೆಚ್ಚು ನಿಜ ಪೀಠಾಂಭೋಜದಿಂ ಬ್ರಹ್ಮನು |
ಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್ ||೭೯||
(ಕೆಳರ್ದು ಅಂದು ಉಗ್ರ ರಣಾಗ್ರಹ ಪ್ರಣಯದಿಂ, ಆಗಳ್ ಕುರುಕ್ಷೇತ್ರಮಂ ಕಳವೇೞ್ದು, ಇರ್ವರುಂ ಐಂದ್ರ ವಾರುಣದೆ, ವಾಯವ್ಯಾದಿ ದಿವ್ಯಾಸ್ತ್ರ ಸಂಕುಳದಿಂದೆ, ಒರ್ವರನ್ ಒರ್ವರ್ ಎಚ್ಚು, ನಿಜ ಪೀಠಾಂಭೋಜದಿಂ ಬ್ರಹ್ಮನ್ ಉಚ್ಚಳಿಪನ್ನಂ, ಪಿರಿದೊಂದು ಸಂಕಟಮನ್ ಈ ತ್ರೈಲೋಕ್ಯದೊಳ್ ಮಾಡಿದರ್)
ಹೀಗೆ ಇಬ್ಬರೂ ಕೆರಳಿ ನಿಂತು, ರಣಪ್ರಣಯಿಗಳಾಗಿ, ಕುರುಕ್ಷೇತ್ರವನ್ನು ಯುದ್ಧಕಣವನ್ನಾಗಿಸಿಕೊಂಡು, ಕಾದಾಡತೊಡಗಿದರು. ಇಂದ್ರಾಸ್ತ್ರ, ವರುಣಾಸ್ತ್ರ, ವಾಯವ್ಯಾಸ್ತ್ರ ಮುಂತಾದ ದಿವ್ಯಬಾಣಗಳ ರಾಶಿಯನ್ನು ಒಬ್ಬರ ಮೇಲೊಬ್ಬರು ಪ್ರಯೋಗಿಸಿದರು. ಅವರ ಘೋರಯುದ್ಧದ ಪರಿಣಾಮವಾಗಿ ಬ್ರಹ್ಮನೇ ತನ್ನ ಪೀಠದಿಂದ ಹಾರಿಬೀಳುವಂತಾಯಿತು. ಮೂರು ಲೋಕದಲ್ಲಿಯೂ ಸಂಕಟ ತಲೆದೋರಿತು.
ಶಿಖರಿಣಿ|| ಅತರ್ಕ್ಯಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂ |
ಪ್ರತಾಪಂ ಪೋಗೀತಂಗೆಣೆಯೆ ದಿವಿಜರ್ ವಾಯುಪಥದೊಳ್ ||
ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಸುಗಿದಂ ಭಾರ್ಗವನಿದೇಂ |
ಪ್ರತಿಜ್ಞಾಗಾಂಗೇಯಂಗದಿರದಿದಿರ್ನಿಲ್ವನ್ನರೊಳರೇ ||೮೦||
(ಅತರ್ಕ್ಯಂ ವಿಕ್ರಾಂತಂ, ಭುಜಬಲಂ ಅಸಾಮಾನ್ಯಂ, ಅಧಿಕಂ ಪ್ರತಾಪಂ, ಪೋಗು! ಈತಂಗೆ ಎಣೆಯೆ ದಿವಿಜರ್? ವಾಯುಪಥದೊಳ್ ಶಿತಾಸ್ತ್ರಂಗಳ್ ಪೊಂಕಂಗಿಡಿಸೆ, ಸುಗಿದಂ ಭಾರ್ಗವನ್, ಇದೇಂ ಪ್ರತಿಜ್ಞಾಗಾಂಗೇಯಂಗೆ ಅದಿರದೆ ಇದಿರ್ ನಿಲ್ವನ್ನರ್ ಒಳರೇ?)
ಪರಾಕ್ರಮದ ಬಗ್ಗೆ ಮಾತೇ ಇಲ್ಲ! ತೋಳುಗಳ ಶಕ್ತಿ ಅಸಾಧಾರಣವಾದದ್ದು. ಪ್ರತಾಪವು ವಿಶೇಷವಾದದ್ದು. ಹೋಗು ಹೋಗು! ಈ ಭೀಷ್ಮನಿಗೆ ದೇವತೆಗಳು ಸಮಾನರೆ? ಅವನು ಬಿಟ್ಟ ಹರಿತವಾದ ಅಸ್ತ್ರಗಳು ಆಕಾಶದಲ್ಲಿ ತುಂಬಿಹೋದದ್ದನ್ನು ಕಂಡು ಪರಶುರಾಮನು ಅಂಜಿದನು. ಏನಿದು? ಪ್ರತಿಜ್ಞಾಗಾಂಗೇಯನಿಗೆ ಹೆದರದೆ ಎದುರು ನಿಲ್ಲುವವರು ಯಾರಾದರೂ ಇದ್ದಾರೆಯೆ?
ವ|| ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞಿದುಸಿರಲಪ್ಪೊಡಮಾಱದೆ ಮೂರ್ಛೆವೋಗಿರ್ದನಂ ಕಂಡಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನುಮವಾರ್ಯವೀರ್ಯನುಮಾಗಿ ಕೆಲವು ಕಾಲಂ ರಾಜ್ಯ ಲಕ್ಷ್ಮಿಯಂ ತಾಳ್ದಿ ರಾ[ಜಯಕ್ಷ್ಮ] ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ[ಜ]ಮಾದುದರ್ಕೆ ಮಮ್ಮಲ ಮಱುಗಿ ಯೋಜನಗಂಧಿ ಸಿಂಧುಪುತ್ರನನಿಂತೆಂದಳ್-
(ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ, ಬಸವೞಿದು, ಉಸಿರಲ್ ಅಪ್ಪೊಡಂ ಆಱದೆ ಮೂರ್ಛೆವೋಗಿರ್ದನಂ ಕಂಡು, ಅಂಬೆಯೆಂಬ ದಂಡುರುಂಬೆ, “ನಿನಗೆ ವಧಾರ್ಥಮಾಗಿ ಪುಟ್ಟುವೆನ್ ಅಕ್ಕೆ” ಎಂದು, ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ, ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ, ಕಾರಣಾಂತರದೊಳ್ ಶಿಖಂಡಿಯಾಗಿರ್ದಳ್. ಇತ್ತ ಭೀಷ್ಮರ ಬೆಂಬಲದೊಳ್, ವಿಚಿತ್ರವೀರ್ಯನುಂ ಅವಾರ್ಯವೀರ್ಯನುಂ ಆಗಿ, ಕೆಲವು ಕಾಲಂ ರಾಜ್ಯ ಲಕ್ಷ್ಮಿಯಂ ತಾಳ್ದಿ, ರಾಜಯಕ್ಷ್ಮ ತಪ್ತಶರೀರನ್ ಆತ್ಮಜ ವಿಗತಜೀವಿಯಾಗಿ, ಪರಲೋಕಪ್ರಾಪ್ತನ್ ಆದೊಡೆ, ಗಾಂಗೇಯನುಂ ಸತ್ಯವತಿಯುಂ ಅತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳ್ ಆಗಿ, ಆತಂಗೆ ಪರಲೋಕಕ್ರಿಯೆಗಳಂ ಮಾಡಿ, ರಾಜ್ಯಂ ನಷ್ಟರಾಜಂ ಆದುದರ್ಕೆ ಮಮ್ಮಲ ಮಱುಗಿ, ಯೋಜನಗಂಧಿ ಸಿಂಧುಪುತ್ರನನ್ ಇಂತೆಂದಳ್)
ಹೀಗೆ ಭೀಷ್ಮನೊಂದಿಗೆ ಕಾದಾಡಿ ಪರಶುರಾಮನಿಗೆ ಆಯಾಸದಿಂದ ಉಸಿರು ತೆಗೆಯಲೂ ಕೂಡಲಿಲ್ಲ. ಇದನ್ನು ಕಂಡ ಅಂಬೆಯು ಕೋಪದಿಂದ ಭೀಷ್ಮನನ್ನು ಉದ್ದೇಶಿಸಿ, “ನಿನ್ನನ್ನು ಕೊಲ್ಲಲು ಮತ್ತೆ ಹುಟ್ಟಿ ಬರುತ್ತೇನೆ” ಎಂದು ಹೇಳಿ ತನ್ನ ಶರೀರವನ್ನು ಬೆಂಕಿಗೆ ಅರ್ಪಿಸಿ, ದ್ರುಪದನ ರಾಣಿಗೆ ಮಗನಾಗಿ ಹುಟ್ಟಿ, ಯಾವುದೋ ಕಾರಣದಿಂದ ಶಿಖಂಡಿಯಾಗಿದ್ದಳು. ಇತ್ತ ವಿಚಿತ್ರವೀರ್ಯನು ಭೀಷ್ಮರ ಬೆಂಬಲದಿಂದ ಕೆಲವು ಕಾಲ ರಾಜ್ಯಭಾರ ಮಾಡಿ, ಕ್ಷಯರೋಗ ಬಂದು ಮಕ್ಕಳಿಲ್ಲದೆ ತೀರಿಹೋದನು. ಭೀಷ್ಮ, ಸತ್ಯವತಿಯರಿಬ್ಬರೂ ಆತನ ಸಾವಿನ ದುಃಖದಲ್ಲಿ ಬೆಂದು, ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ಮುಗಿಸಿದರು. ವಿಚಿತ್ರವೀರ್ಯನ ಸಾವಿನಿಂದ ಹಸ್ತಿನಾಪುರಕ್ಕೆ ಮುಂದೆ ರಾಜರೇ ಇಲ್ಲದಂಥ ಸ್ಥಿತಿ ಬಂದೊದಗಿತು. ಸತ್ಯವತಿಗೆ ಈ ಸಂಕಟವನ್ನು ತಡೆದುಕೊಳ್ಳಲಾಗಲಿಲ್ಲ. ಅವಳು ಭೀಷ್ಮನನ್ನು ಕುರಿತು-
ಮ|| ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನ |
ನ್ನಿಗೆ ಬನ್ನಂ ಬರಲೀಯದಾರ್ತೆಸಗಿದೀ ವಿಖ್ಯಾತಿಯುಂ ಕೀರ್ತಿಯುಂ ||
ಮುಗಿಲಂ ಮುಟ್ಟಿದುದಲ್ತೆ ನಮ್ಮ ಕುಲದೊಳ್ ಮಕ್ಕಳ್ಪೆಱರ್ ನೀನೆ ಜ |
ಟ್ಟಿಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ ||೮೧||
(“ಮಗನ್ ಎಂಬಂತು ಧರಿತ್ರಿ, ನಿನ್ನ ಅನುಜರಂ ಕೈಕೊಂಡು, ಮುಂ ಪೂಣ್ದ ನನ್ನಿಗೆ ಬನ್ನಂ ಬರಲ್ ಈಯದೆ, ಆರ್ತು ಎಸಗಿದೀ ವಿಖ್ಯಾತಿಯುಂ, ಕೀರ್ತಿಯುಂ, ಮುಗಿಲಂ ಮುಟ್ಟಿದುದಲ್ತೆ? ನಮ್ಮ ಕುಲದೊಳ್ ಮಕ್ಕಳ್ ಪೆಱರ್? ನೀನೆ ಜಟ್ಟಿಗನೈ, ಮುನ್ನಿನ ಒರಂಟುವೇಡ ಮಗನೇ, ಕೈಕೊಳ್ ಧರಾಭಾರಮಂ”)
‘ಮಗನೆಂದರೆ ಹೀಗಿರಬೇಕು ಎಂದು ಲೋಕವೆಲ್ಲ ನಿನ್ನನ್ನು ಹೊಗಳುತ್ತಿದೆ. ನಿನ್ನ ತಮ್ಮಂದಿರನ್ನು ಕೈಹಿಡಿದು ನಡೆಸಿದವನು ನೀನು. ಮಾಡಿದ ಸತ್ಯಪ್ರತಿಜ್ಞೆಗೆ ಭಂಗಬಾರದ ಹಾಗೆ ನಡೆದುಕೊಂಡು, ಮುಗಿಲೆತ್ತರದ ಕೀರ್ತಿ, ಪ್ರಸಿದ್ಧಿಗಳಿಗೆ ಪಾತ್ರನಾಗಿದ್ದೀಯೆ. ಆದರೆ ಈಗ, ನಮ್ಮ ಕುಲದಲ್ಲಿ ಮಕ್ಕಳು ಬೇರೆ ಯಾರು ತಾನೇ ಇದ್ದಾರೆ? ಇರುವವನು ವೀರನಾದ ನೀನೊಬ್ಬನೇ. ಮೊದಲಿನ ಒರಟುಹಟವನ್ನು ಕೈಬಿಡು. ರಾಜ್ಯಭಾರವನ್ನು ನಡೆಸಿಕೊಂಡು ಹೋಗು’
ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದೆನೆಂದ ಸತ್ಯವತಿಗಮರಾಪಗಾನಂದನನಿಂತೆಂದಂ-
(ಎಂದು “ನಿನ್ನನ್ ಆನ್ ಇನಿತಂ ಕೈಯೊಡ್ಡಿ ಬೇಡಿದೆನ್” ಎಂದ ಸತ್ಯವತಿಗೆ ಅಮರಾಪಗಾನಂದನನ್ ಇಂತೆಂದಂ)
ಎಂದು ಇಷ್ಟನ್ನು ಮಾತ್ರ ನಿನ್ನನ್ನು ನಾನು ಕೈಯೊಡ್ಡಿ ಬೇಡುತ್ತೇನೆ ಎಂದ ಸತ್ಯವತಿಗೆ ಭೀಷ್ಮನು ಹೀಗೆ ಹೇಳಿದನು:
ಕಂ|| ಕಿಡುಗುಮೆ ರಾಜ್ಯಂ ರಾಜ್ಯದ |
ತೊಡರ್ಪದೇವಾೞ್ತೆ ನನ್ನಿಯ ನುಡಿಯಂ ||
ಕಿಡೆ ನೆಗೞೆ ನಾನುಮೆರಡಂ |
ನುಡಿದೊಡೆ ಹರಿ ಹರ ಹಿರಣ್ಯಗರ್ಭರ್ ನಗರೇ ||೮೨||
(“ಕಿಡುಗುಮೆ ರಾಜ್ಯಂ! ರಾಜ್ಯದ ತೊಡರ್ಪದೇವಾೞ್ತೆ? ನನ್ನಿಯ ನುಡಿಯಂ ಕಿಡೆ ನೆಗೞೆ, ನಾನುಂ ಎರಡಂ ನುಡಿದೊಡೆ, ಹರಿ ಹರ ಹಿರಣ್ಯಗರ್ಭರ್ ನಗರೇ”?)
ರಾಜ್ಯವು ಕೆಡುವಂಥದ್ದೇ! ಅದಕ್ಕೆತೊಡಕು ಬಂದರೆ ನನಗೇನು? ನಾನು ಆಡಿದ ಮಾತಿಗೆ ತಪ್ಪಿ ನಡೆದರೆ, ಸುಳ್ಳಾಡಿದರೆ, ಆ ಹರಿಹರಬ್ರಹ್ಮರು (ನನ್ನನ್ನು ಕಂಡು) ನಗುವುದಿಲ್ಲವೇ?
ಚಂ|| ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಣದೀಧಿತಿ |
ಕ್ರಮಮನಗಾಧ ವಾರಿಧಿ[ಯೆ] ಗುಣ್ಪನಿಳಾವಧು ತನ್ನ ತಿಣ್ಪನು ||
ತ್ತಮ ಕುಲಶೈಲಮುನ್ನತಿಯನೇಳಿದವಾಗೆ ಬಿಸುೞ್ಪೊಡಂ ಬಿಸು |
[ೞ್ಕೆಮ] ಬಿಸುಡೆಂ ಮದೀಯ ಪುರುಷ ವ್ರತಮೊಂದುಮನೀಗಳಂಬಿಕೇ ||೮೩||
(“ಹಿಮಕರನ್ ಆತ್ಮಶೀತರುಚಿಯಂ, ದಿನನಾಯಕನ್ ಉಷ್ಣದೀಧಿತಿಕ್ರಮಮನ್, ಅಗಾಧ ವಾರಿಧಿಯೆ ಗುಣ್ಪನ್, ಇಳಾವಧು ತನ್ನ ತಿಣ್ಪನ್, ಉತ್ತಮ ಕುಲಶೈಲಂ ಉನ್ನತಿಯನ್ ಏಳಿದವಾಗೆ ಬಿಸುೞ್ಪೊಡಂ ಬಿಸುೞ್ಕೆಮ! ಬಿಸುಡೆಂ ಮದೀಯ ಪುರುಷ ವ್ರತಂ ಒಂದುಮನ್ ಈಗಳ್ ಅಂಬಿಕೇ”)
ಅಮ್ಮಾ! ಚಂದ್ರನು ತನ್ನ ತಂಪಾದ ಕಾಂತಿಯನ್ನು, ಸೂರ್ಯನು ತನ್ನ ಬಿಸಿಕಿರಣಗಳ ಶಕ್ತಿಯನ್ನು, ವಿಶಾಲ ಕಡಲು ತನ್ನ ಆಳವನ್ನು, ಭೂಮಿ ತನ್ನ ಭಾರವನ್ನು, ಕುಲಪರ್ವತಗಳು ತಮ್ಮ ಎತ್ತರವನ್ನು ಬೇಡವೆಂದು ಬಿಸಾಡುವುದಾದರೆ ಬಿಸಾಡಲಿ! ನಾನು ಮಾತ್ರ ಮಾಡಿದ ಯಾವ ಪ್ರತಿಜ್ಞೆಯನ್ನೂ ಮುರಿಯುವುದಿಲ್ಲ.
ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯ್ದುಂ ತಪ್ಪಿದನಿಲ್ಲ-
(ಎಂದು ತನ್ನ ನುಡಿದ ಪ್ರತಿಜ್ಞೆಯನ್ ಏಗೆಯ್ದುಂ ತಪ್ಪಿದನ್ ಇಲ್ಲ)
ಎಂದು ತನ್ನ ಪ್ರತಿಜ್ಞೆಯನ್ನು ಏನು ಮಾಡಿದರೂ ತಪ್ಪಲಿಲ್ಲ.
ಕಂ|| ರಂಗತ್ತರಂಗ ವಾರ್ಧಿಚ |
ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ||
ಗಾಂಗೇಯನುಂ ಪ್ರತಿಜ್ಞಾ |
ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ ||೮೪||
(ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ, ಗಾಂಗೇಯನುಂ, ಪ್ರತಿಜ್ಞಾ ಗಾಂಗೇಯನುಂ, ಒರ್ಮೆ ನುಡಿದುದಂ ತಪ್ಪುವರೇ?)
ಸದಾ ತೊಯ್ದಾಡುವ ಕಡಲಿನ ಅಲೆಗಳು ತಮ್ಮ ಗಡಿಯನ್ನು ದಾಟಿದರೂ ಸಹ (ಪ್ರಳಯವೇ ಆದರೂ ಸಹ) ಗಾಂಗೇಯನಾಗಲಿ, ಪ್ರತಿಜ್ಞಾಗಾಂಗೇಯನೆಂಬ ಬಿರುದು ಪಡೆದ ಅರಿಕೇಸರಿಯಾಗಲಿ ತಾವು ಒಮ್ಮೆ ಆಡಿದ ಮಾತನ್ನು ತಪ್ಪುತ್ತಾರೆಯೇ?
ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯ್ದುಮೊಡಂಬಡಿಸಲಾಱದೆ ಸತ್ಯವತಿ ತಾನುಮಾತನುಮಾಳೋಚಿಸಿ ನಿಶ್ಚಿತ ಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದ ಸೋಮವಂಶಮೀಗಳೆಮ್ಮ ಕುಲಸಂತತಿಗಾರುಮಿಲ್ಲದೆಡೆವಱಿದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು-
(ಅಂತು ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನ್ ಏಗೆಯ್ದುಂ ಒಡಂಬಡಿಸಲಾಱದೆ, ಸತ್ಯವತಿ ತಾನುಂ ಆತನುಂ ಆಳೋಚಿಸಿ, ನಿಶ್ಚಿತ ಮಂತ್ರರಾಗಿ, ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ, ವ್ಯಾಸಮುನೀಂದ್ರನ್ “ಏಗೆಯ್ವುದು? ಏನಂ ತೀರ್ಚುವುದು?” ಎಂದೊಡೆ ಸತ್ಯವತಿ ಇಂತೆಂದಳ್: “ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶಂ ಈಗಳ್ ಎಮ್ಮ ಕುಲಸಂತತಿಗೆ ಆರುಂ ಇಲ್ಲದೆ ಎಡೆವಱಿದು ಕಿಡುವಂತೆ ಆಗಿರ್ದುದು. ಅದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳ್, ಅಂಬಿಕೆಗಂ ಅಂಬಾಲೆಗಂ ಪುತ್ರರ್ ಅಪ್ಪಂತು ವರಪ್ರಸಾದಮಂ ದಯೆಗೆಯ್ವುದು” ಎನೆ ಅಂತೆಗೆಯ್ವೆನ್ ಎಂದು)
ಹೀಗೆ ಯಾವುದಕ್ಕೂ ಜಗ್ಗದೆ ತನ್ನ ಪ್ರತಿಜ್ಞೆಗೆ ಕಟ್ಟುಬಿದ್ದ ಭೀಷ್ಮನನ್ನು ಒಪ್ಪಿಸಲು ಏನು ಮಾಡಿದರೂ ಸತ್ಯವತಿಗೆ ಸಾಧ್ಯವಾಗಲಿಲ್ಲ. ಮುಂದೆ ಅವಳೂ ಭೀಷ್ಮನೂ ಸೇರಿ ಆಲೋಚಿಸಿ, ಮಂತ್ರದ ಮೂಲಕ ಕೃಷ್ಣ ದ್ವೈಪಾಯನರನ್ನು ನೆನೆದು ಬರಿಸಿದರು. ಹಾಗೆ ಬಂದ ವ್ಯಾಸ ಮುನಿಯು ‘ಏನಾಗಬೇಕು? ಯಾವ ಆಸೆಯನ್ನು ಪೂರೈಸಬೇಕು?’ ಎಂದು ಕೇಳಿದನು. ಸತ್ಯವತಿಯು ‘ಹಿರಣ್ಯಗರ್ಭ ಬ್ರಹ್ಮರಿಂದ ಎಳೆ ಕಡಿಯದೆ ಬಂದ ನಮ್ಮ ಚಂದ್ರವಂಶವು ಈಗ ಸಂತತಿಯನ್ನು ಮುಂದುವರಿಸುವವರಿಲ್ಲದೆ, ಇಲ್ಲಿಗೇ ತುಂಡಾಗಿ ಹೋಗುವಂತಾಗಿದೆ. ಆ ಕಾರಣದಿಂದ ನಿಮ್ಮ ತಮ್ಮ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ, ಅಂಬಾಲೆಯರಿಗೆ ಗಂಡು ಮಕ್ಕಳಾಗುವಂತೆ ವರವನ್ನು ಕರುಣಿಸಬೇಕು’ ಎಂದಳು. ಮುನಿಯು ‘ಹಾಗೆಯೇ ಮಾಡುತ್ತೇನೆ’ ಎಂದು –
ಚಂ|| ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ ಯೋ |
ಗದ ಬಲಮುಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ ||
ಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯ ದೃಷ್ಟಿ ಮಂ |
ತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವ ಗರ್ಭ ವಿಭ್ರಮಂ ||೮೫||
(ತ್ರಿದಶ, ನರ, ಅಸುರ, ಉರಗ ಗಣ ಪ್ರಭು, ನಿಶ್ಚಿತ ತತ್ತ್ವಯೋಗಿ, ಯೋಗದ ಬಲಂ ಉಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯ ದೃಷ್ಟಿ ಮಂತ್ರದೊಳೆ ಪೊದೞ್ದುದು ಆ ಸತಿಯರ್ ಇರ್ವರೊಳಂ ನವ ಗರ್ಭ ವಿಭ್ರಮಂ.)
ವ್ಯಾಸ ಮುನಿಯು ದೇವತೆಗಳು, ರಕ್ಕಸರು, ನರರು, ಹಾವುಗಳು ಇವುಗಳ ಗುಂಪಿಗೆ ಒಡೆಯ. ತತ್ವಗಳನ್ನು ಖಚಿತವಾಗಿ ತಿಳಿದವನು. ಅಂಥ ಮುನಿಯು ಸ್ಥಿರವಾಗಿ ನಿಂತುಕೊಂಡಾಗ ಅವನಲ್ಲಿ ಯೋಗಶಕ್ತಿ ಹುಟ್ಟಿ ಬೆಳೆಯಿತು. ಗಂಡುಮಕ್ಕಳನ್ನು ಪಡೆಯಲೆಂದು ಅಂಬಿಕೆ, ಅಂಬಾಲೆಯರಿಬ್ಬರೂ ಆ ಮುನಿಯ ಹತ್ತಿರದಲ್ಲಿ, ಅವನ ಎದುರಿಗೆ ನಿಂತರು. ಹಾಗೆ ನಿಂತ ಇಬ್ಬರನ್ನೂ ಮುನಿಯು ನಯವಾಗಿ ನೋಡಿದನು. ಆಗ ಅವನ ದೃಷ್ಟಿ ಮಂತ್ರದ ಮೂಲಕವೇ ಅವರಿಬ್ಬರಲ್ಲಿಯೂ ಹೊಸ ಬಸಿರಿನ ಪುಳಕ ಕಾಣಿಸಿಕೊಂಡಿತು.