Untitled

ಪಂಪಭಾರತಂ ಎಂಬ ವಿಕ್ರಮಾರ್ಜುನವಿಜಯಂ

ಆಶ್ವಾಸ ೧ ಪದ್ಯಗಳು ೪೪ರಿಂದ ೫೮ಕಂ|| ರುಂದ್ರಾಂಬೋಧಿಪರೀತ ಮ |
     ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ ||
     ದಿಂದ್ರಂ ತಾನೆನೆ ಸಲೆ ನೆಗ |
     ೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ ||೪೪||
(ರುಂದ್ರ ಅಂಬೋಧಿಪರೀತ ಮಹೀಂದ್ರರ್ ಅದಾರ್ ಇನ್ನರ್? ಈ ನರೇಂದ್ರಂ ಸಾಕ್ಷಾತ್ ಇಂದ್ರಂ ತಾನ್ ಎನೆ ಸಲೆ ನೆಗೞ್ದು, ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ.)
ಕಡಲಿನವರೆಗೂ ವ್ಯಾಪಿಸಿರುವ ಈ ಭೂಮಿಯಲ್ಲಿ ಅರಿಕೇಸರಿಯಂಥ ರಾಜರು ಬೇರೆ ಯಾರು ತಾನೇ ಇದ್ದಾರೆ? ಅರಿಕೇಸರಿಯು ಸಾಕ್ಷಾತ್ ಇಂದ್ರನೇ ಸರಿ. ಏಕೆಂದರೆ ಅವನು ಪ್ರಖ್ಯಾತನಾದ ಇಂದ್ರರಾಜನ ತೋಳತೊಟ್ಟಿಲಿನಲ್ಲಿ ಬೆಳೆದವನು.
ಇಂದ್ರರಾಜನ ಬಗ್ಗೆ ಡಿ ಎಲ್ ಎನ್ ಅವರ ವಿವರಣೆ ಇದು: ರಾಷ್ಟ್ರಕೂಟ ರಾಜರಲ್ಲಿ ಇಂದ್ರರಾಜನೆಂಬುವನೊಬ್ಬನು; ಅವನ ಆಳಿಕೆಯ ಕಾಲ ಕ್ರಿ.ಶ. ೯೧೨-೯೧೭. ಇವನನ್ನು ಇಮ್ಮಡಿ ಇಂದ್ರ ಎಂದು ಕರೆಯುತ್ತಾರೆ.
ಕಂ|| ಅಮಿತಮತಿ ಗುಣದಿನತಿ ವಿ |
     ಕ್ರಮಗುಣದಿಂ ಶಾಸ್ತ್ರಪಾರಮುಂ ರಿಪುಬಳ [ಪಾ] ||
     ರಮುಮೊಡನೆ ಸಂದುವೆನಿಸಿದ |
     ನಮೇಯ ಬಲಶಾಲಿ ಮನುಜಮಾರ್ತಾಂಡ ನೃಪಂ ||೪೫||
(ಅಮಿತ ಮತಿ ಗುಣದಿನ್, ಅತಿ ವಿಕ್ರಮಗುಣದಿಂ, ಶಾಸ್ತ್ರಪಾರಮುಂ ರಿಪುಬಳಪಾರಮುಂ ಒಡನೆ ಸಂದುವು ಎನಿಸಿದನ್, ಅಮೇಯ ಬಲಶಾಲಿ ಮನುಜಮಾರ್ತಾಂಡ ನೃಪಂ.)
ಅರಿಕೇಸರಿಯು ಅಪಾರ ಬಲವಂತ; ಮನುಜ ಮಾರ್ತಾಂಡ. ಅವನು ತನ್ನ ತೀಕ್ಷ್ಣವಾದ ಬುದ್ಧಿಶಕ್ತಿಯಿಂದ ಶಾಸ್ತ್ರಗಳನ್ನೂ, ಭುಜಬಲದಿಂದ ವೈರಿಬಲವನ್ನೂ ಏಕಕಾಲದಲ್ಲಿ ಗೆದ್ದುಕೊಂಡನು.
ಕಂ|| ಉಡೆವಣಿ [ಪ]ಱಿಯದ ಮುನ್ನಮೆ |
     ತೊಡಗಿ ಚಲಂ ನೆಗೞೆ ರಿಪು ಬಲಂಗಳನೆ ಪಡ ||
     ಲ್ವಡಿಸಿ ಪರಬಲದ ನೆತ್ತರ |
     ಕಡಲೊಳಗಣ ಜಿಗುಣೆ ಬಳೆವ ತೆಱದೊಳೆ ಬಳೆದಂ ||೪೬||
(ಉಡೆವಣಿ ಪಱಿಯದ ಮುನ್ನಮೆ ತೊಡಗಿ, ಚಲಂ ನೆಗೞೆ, ರಿಪು ಬಲಂಗಳನೆ ಪಡಲ್ವಡಿಸಿ, ಪರಬಲದ ನೆತ್ತರ ಕಡಲೊಳಗಣ ಜಿಗುಣೆ ಬಳೆವ ತೆಱದೊಳೆ ಬಳೆದಂ.)
ಅರಿಕೇಸರಿಯು ಇನ್ನೂ ಚಿಕ್ಕ ಹುಡುಗನಾಗಿದ್ದಾಗಲೇ ಛಲದಿಂದ ವೈರಿಗಳೊಂದಿಗೆ ಹೋರಾಡಿ ಅವರನ್ನು ದಿಕ್ಕಾಪಾಲು ಮಾಡಿದವನು. ಅವನು ಬೆಳೆದದ್ದೇ ಶತ್ರುಗಳ ನೆತ್ತರ ಕಡಲೊಳಗಿನ ಜಿಗಣೆಯ ಹಾಗೆ!
ಉಡೆವಣಿ=ಸೊಂಟಕ್ಕೆ ಕಟ್ಟಿರುವ ಅರಳೆಲೆ ಮುಂತಾದ ಒಡವೆ – ಡಿ. ಎಲ್. ಎನ್.
ಕಂ|| ಮೇಲೆೞ್ದ ಬಲಂ ಕೋಟಿಗೆ |
     ಮೇಲಪ್ಪೊಡಮನ್ಯ ವನಿತೆ ನೆಗೞ್ದೂರ್ವಶಿಗಂ ||
     ಮೇಲಪ್ಪೊಡಮಕ್ಕೆಂದುಂ |
     ಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ ||೪೭||
(ಮೇಲೆೞ್ದ ಬಲಂ ಕೋಟಿಗೆ ಮೇಲ್ ಅಪ್ಪೊಡಂ, ಅನ್ಯ ವನಿತೆ ನೆಗೞ್ದ ಊರ್ವಶಿಗಂ ಮೇಲ್ ಅಪ್ಪೊಡಂ ಅಕ್ಕೆ, ಎಂದುಂ ಸೋಲವು ಕಣ್ ಪರಬಲ ಅಬ್ಧಿಗಂ ಪರವಧುಗಂ.)
ತನ್ನ ಮೇಲೆ ಕೋಟಿಗೂ ಮೀರಿದ ಸೈನ್ಯ ಧಾಳಿ ಮಾಡಲಿ, ಚೆಲುವಿನಲ್ಲಿ ಊರ್ವಶಿಯನ್ನೂ ಮೀರಿದ ಪರವಧು ಕಣ್ಣಿಗೆ ಬೀಳಲಿ, ಅರಿಕೇಸರಿಯ ಕಣ್ಣು ಆ ಸೈನ್ಯಕ್ಕಾಗಲಿ, ಪರವಧುಗಾಗಲಿ ಸೋಲುವುದಿಲ್ಲ.
ಕಂ|| ಧುರದೊಳ್ ಮೂಱುಂ ಲೋಕಂ |
     ನೆರೆದಿರೆಯುಂ ಕುಡುವ ಪೊ[ೞ್ತ]ಱೊಳ್ ಮೇರುವೆ ಮುಂ ||
     ದಿರೆಯುಂ ಬೀರದ ಬಿಯದಂ |
     ತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ ||೪೮||
(ಧುರದೊಳ್ ಮೂಱುಂ ಲೋಕಂ ನೆರೆದು ಇರೆಯುಂ, ಕುಡುವ ಪೊ[ೞ್ತ]ಱೊಳ್ ಮೇರುವೆ ಮುಂದೆ ಇರೆಯುಂ, ಬೀರದ ಬಿಯದ ಅಂತರಕ್ಕೆ ಕಿಱಿದು ಎಂದು ಚಿಂತಿಪಂ ಪ್ರಿಯಗಳ್ಳಂ.)
‘ಪ್ರಿಯಗಳ್ಳ’ನೆಂಬ ಬಿರುದು ಪಡೆದ ಅರಿಕೇಸರಿಯು ಯುದ್ಧದಲ್ಲಿ ಮೂರುಲೋಕವೇ ಎದುರಾದರೂ ‘ನನ್ನ ಸಾಮರ್ಥ್ಯಕ್ಕೆ ಈ ಸೈನ್ಯವೊಂದು ಲೆಕ್ಕವೆ?’ ಎಂದುಕೊಳ್ಳುತ್ತಾನೆ. ದಾನ ಕೊಡಲು ನಿಂತಾಗ ಮೇರು ಪರ್ವತದಷ್ಟು ಬಂಗಾರವಿದ್ದರೂ ‘ಇದೇನು ಇಷ್ಟು ಕಡಿಮೆ ದಾನ ಮಾಡುವುದೆ?’ ಎಂದುಕೊಳ್ಳುತ್ತಾನೆ.
ಕಂ|| ಸಮನೆನಿಸುವ[ರ್] ಪ್ರಶಸ್ತಿ |
     ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ[ಮಹಾ] ಶ |
     ಬ್ದ ಮಹಾಸಾಮಂತರೆನಲ್ |
     ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್ ||೪೯||
(ಸಮನೆನಿಸುವ[ರ್] ಪ್ರಶಸ್ತಿ ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ[ಮಹಾ] ಶಬ್ದ ಮಹಾಸಾಮಂತರ್  ಎನಲ್, ಸಮನೆನಿಪರೆ ಗುಣದೊಳ್  ಅರಿಗನೊಳ್ ಸಾಮಂತರ್?)
ಬಿರುದಾವಳಿಗಳನ್ನು ಹೇಳುವ ಕ್ರಮದಲ್ಲಿ, ಶಿಷ್ಟಾಚಾರದ ಪ್ರಕಾರ ಕೊಡುವ ಮರ್ಯಾದೆಯ ವಿಷಯದಲ್ಲಿ ಅರಿಕೇಸರಿಗೆ ಸಮಾನರಾದ ಎಷ್ಟೋ ಸಾಮಂತರು ಇರಬಹುದು. ಆದರೆ, ಗುಣದಲ್ಲಿ ಅರಿಕೇಸರಿಗೆ ಸಮಾನರಾದವರು ಯಾರಾದರೂ ಇದ್ದಾರೆಯೆ?
ಉ|| ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋ |
     ಳ್ಪೋಗದ ಮಂಡಲಂಗಳನೆ ಕೊಂಡು ಜಗತ್ರಿತಯಂಗಳೊಳ್ ಜಸ ||
     ಕ್ಕಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್ |
     ಮೇಗು ಪೊದೞ್ದ ಚಾಗದೊಳಮೊಂದಿದ ಬೀರದೊಳಂ ಗುಣಾರ್ಣವಂ ||೫೦||
(ಚಾಗದ ಕಂಬಮಂ ನಿಱಿಸಿ, ಬೀರದ ಶಾಸನಮಂ ನೆಗೞ್ಚಿ, ಕೋಳ್ಪೋಗದ ಮಂಡಲಂಗಳನೆ ಕೊಂಡು, ಜಗತ್ರಿತಯಂಗಳೊಳ್ ಜಸಕ್ಕೆ ಆಗರಮಾದ ಬದ್ದೆಗನಿನ್, ಆ ನರಸಿಂಹನಿನ್ ಅತ್ತ ನಾಲ್ವೆರಲ್ ಮೇಗು, ಪೊದಳ್ದ ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ.)
ಅರಿಕೇಸರಿಯ ಹಿರಿಯರಾದ ಬದ್ದೆಗ ಮತ್ತು ನರಸಿಂಹರು ತಾವು ನೀಡಿದ ದಾನಗಳ ಕುರಿತಾದ ಕಂಬಗಳನ್ನು ಕೆತ್ತಿಸಿ ನೆಡಿಸಿದರು; ತಮ್ಮ ಶೌರ್ಯದ ಕುರಿತಾಗಿ ಶಾಸನಗಳನ್ನು ಮಾಡಿಸಿದರು; ವಶಪಡಿಸಿಕೊಳ್ಳಲು ಅಸಾಧ್ಯ ಎಂಬಂಥ ರಾಜ್ಯಗಳನ್ನು ವಶಪಡಿಸಿಕೊಂಡರು. ಹೀಗೆ ಅವರು ಮೂರುಲೋಕಗಳಲ್ಲಿಯೂ ಕೀರ್ತಿವಂತರಾಗಿದ್ದರು. ಆದರೆ ಗುಣಾರ್ಣವನಾದ ಅರಿಕೇಸರಿಯು ನೀಡಿದ ದಾನಗಳೂ, ತೋರಿಸಿದ ಶೌರ್ಯವೂ ಅವರುಗಳಿಗಿಂತ ನಾಲ್ಕು ಬೆರಳು ಮೇಲೆ ಎನ್ನುವಂತಿತ್ತು.
ಮ||ಸ್ರ|| ಎನೆ ಸಂದುಂ ವೀರ ವೈರಿ ಕ್ಷಿತಿಪ ಗಜ ಘಟಾಟೋಪ ಕುಂಭಸ್ಥಳೀ ಭೇ |
     ದನನುಗ್ರೋ[ದ್ಘಾ]ಸಿ ಭಾಸ್ವದ್ಭುಜ ಪರಿಘನನಾರೂಢ ಸರ್ವಜ್ಞನಂ ವೈ ||
     ರಿ ನರೇಂದ್ರೋದ್ದಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ ಸಂದ|
     ರ್ಜುನನೊಳ್ ಪೋಲ್ವೀ ಕಥಾಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ ||೫೧||
(ಎನೆ ಸಂದುಂ, ವೀರ ವೈರಿ ಕ್ಷಿತಿಪ ಗಜ ಘಟಾಟೋಪ ಕುಂಭಸ್ಥಳೀ ಭೇದನನ್, ಉಗ್ರೋ[ದ್ಘಾ]ಸಿ ಭಾಸ್ವದ್ಭುಜ ಪರಿಘನನ್, ಆರೂಢ ಸರ್ವಜ್ಞನಂ, ವೈರಿ ನರೇಂದ್ರೋದ್ದಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ, ಸಂದ ಅರ್ಜುನನೊಳ್ ಪೋಲ್ವ ಈ ಕಥಾಭಿತ್ತಿಯನ್ ಅನುನಯದಿಂ ಪೇೞಲೆಂದು  ಎತ್ತಿಕೊಂಡೆಂ.)
ಅರಿಕೇಸರಿಯು ಹೀಗೆ ಪ್ರಸಿದ್ಧನಾದವನು. ಜೊತೆಗೇ ಅವನು ಶತ್ರುರಾಜರ ಆನೆಗಳ ಕುಂಭಸ್ಥಳಗಳನ್ನು ಸೀಳಬಲ್ಲವನು. ಕೈಯಲ್ಲಿ ಭಯಂಕರವಾದ ಕತ್ತಿಯನ್ನು ಹಿಡಿದವನು; ಕಬ್ಬಿಣದ ಒನಕೆಯಂಥ ತೋಳುಗಳನ್ನು ಹೊಂದಿದವನು; ಆರೂಢ ಸರ್ವಜ್ಞ ಎಂಬ ಬಿರುದನ್ನು ಪಡೆದವನು; ವೈರಿರಾಜರ ಅತಿಶಯವಾದ ಸೊಕ್ಕನ್ನು ಭೇದಿಸುವವನು. ಅಂಥ ಅರಿಕೇಸರಿಯನ್ನು ಕಥಾನಾಯಕನನ್ನಾಗಿ ಮಾಡಿ, ಪ್ರಖ್ಯಾತನಾದ ಅರ್ಜುನನೊಂದಿಗೆ ಹೋಲಿಸಿ ಈ ಕಥೆಯನ್ನು  ಹೇಳಬೇಕೆಂದು ಎತ್ತಿಕೊಂಡಿದ್ದೇನೆ.
ವ|| ಅದೆಂತೆನೆ ಸ[ಮುನ್ಮಿಷ]ದ್ವಿವಿಧ ರತ್ನಮಾಲಾ ಪ್ರಭಾಭೀಲಾರುಣ ಜಲಪ್ಲ[ವಾ]ವಿಳ  ವಿಳೋಳವೀಚೀ ರಯ ಪ್ರದಾರಿತ ಕುಳಾಚಲೋದಧಿ ಪರೀತಮಾಗಿರ್ದ ಜಂಬೂದ್ವೀಪದೊಳಗುಂಟು ನಾಡು ಕುರುಜಾಂಗಣ ನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್
(ಅದು ಎಂತು ಎನೆ ಸಮುನ್ಮಿಷತ್ ವಿವಿಧ ರತ್ನಮಾಲಾ ಪ್ರಭಾಭಿದ್ ಅರುಣ ಜಲಪ್ಲವ ಆವಿಳ ವಿಳೋಳ ವೀಚೀ ರಯ ಪ್ರದಾರಿತ ಕುಳಾಚಲ ಉದಧಿ ಪರೀತಂ ಆಗಿರ್ದ ಜಂಬೂದ್ವಿಪದ ಒಳಗೆ ಉಂಟು ನಾಡು ಕುರುಜಾಂಗಣ ನಾಮದಿಂ ಅಂತು ಆ ಕುರುಜಾಂಗಣ ವಿಷಯದೊಳ್)
ಅದು ಹೇಗೆಂದರೆ, ಜಂಬೂದ್ವೀಪವನ್ನು ಸುತ್ತುವರಿದ ಕಡಲು ಹೇಗಿದೆ ಗೊತ್ತೆ? ಆ ಕಡಲಿನ ತಳದಲ್ಲಿ ಬಗೆಬಗೆಯಾದ ರತ್ನಗಳು ಹೊಳೆಯುತ್ತಿವೆ. ಅವುಗಳಿಂದ ಹೊಮ್ಮಿದ ಕಾಂತಿ ಕಡಲ ನೀರನ್ನು ಕೆಂಪಾಗಿಸಿದೆ. ಆ ನೀರು ಅಲೆಗಳ ವೇಗಕ್ಕೆ ಸೀಳಿ ಹೋಗಿ ನಿಂತಲ್ಲಿ ನಿಲ್ಲದೆ ಕುಲಪರ್ವತಗಳೊಂದಿಗೆ ಹೊಯ್ದಾಡುತ್ತಿದೆ. ಸುತ್ತಲೂ ಇಂಥ ಕಡಲಿರುವ ಜಂಬೂದ್ವೀಪದಲ್ಲಿ ಕುರುಜಾಂಗಣ ಎಂಬ ನಾಡು ಇದೆ. ಆ ಕುರುಜಾಂಗಣವೆಂಬ ನಾಡಿನಲ್ಲಿ-
ಚಂ|| ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೈ |
     ದಿಲ ಪೊಸವೂ ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತ ಕೆಂ ||
     ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕೆ |
     ಯ್ವೊಲಗಳಿನೊಪ್ಪಿ ತೋ[ಱಿ] ಸಿರಿ ನೋಡುಗುಮಾ ವಿಷಯಾಂತರಾಳದೊಳ್ ||೫೨||
(ಜಲಜಲನೆ ಒೞ್ಕುತಿರ್ಪ ಪರಿಕಾಲ್, ಪರಿಕಾಲೊಳ್ ಅಳುರ್ಕೆಗೊಂಡ ನೈದಿಲ ಪೊಸವೂ, ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತ ಕೆಂಗೊಲೆಯೊಳೆ ಜೋಲ್ವ ಶಾಳಿ, ನವಶಾಳಿಗೆ ಪಾಯ್ವ ಶುಕಾಳಿ ತೋಱೆ, ಕೆಯ್ವೊಲಗಳಿನ್ ಒಪ್ಪಿ ತೋಱಿ ಸಿರಿ ನೋಡುಗುಂ ಆ ವಿಷಯಾಂತರಾಳದೊಳ್.)
ಜುಳು ಜುಳು ಶಬ್ದ ಮಾಡುತ್ತಾ ನೀರು ತುಂಬಿ ಹರಿಯುತ್ತಿರುವ ಕಾಲುವೆಗಳು, ಆ ಕಾಲುವೆಗಳ ತುಂಬ ಹರಡಿಕೊಂಡಿರುವ ಹೊಸ ನೈದಿಲೆಯ ಹೂಗಳು, ಆ ಹೂಗಳ ಕಂಪನ್ನೇ ತಾವೂ ಬೀರುತ್ತಾ ಜೋತಾಡುತ್ತಿರುವ ಬತ್ತದ ಕೆಂಪು ತೆನೆಗಳು, ಆ ಕೆಂಪುತೆನೆಗಳಿಗೆ ಹಾರಿ ಬಂದು ದಾಳಿ ಇಡುವ ಗಿಣಿಗಳ ಗುಂಪು – ಇಂಥ ಫಲಭರಿತ ಗದ್ದೆಗಳಿಂದ ಕೂಡಿ, ಆ ಸಿರಿವಂತ ದೇಶವು ಮನೋಹರವಾಗಿ ಕಾಣುತ್ತದೆ.
ಚಂ|| ಬೆಳೆದೆಱಗಿರ್ದ ಕೆಯ್ವೊಲನೆ ಕೆಯ್ವೊಲನಂ ಬಳಸಿರ್ದ ಪೂತ ಪೂ |
     ಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ ||
     ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ |
     ಗಳೆ ವಿಷಯಾಂಗನಾ ಲುಳಿತ ಕುಂತಳದಂತೆವೊಲೊಪ್ಪಿ ತೋಱುಗುಂ ||೫೩||
(ಬೆಳೆದು ಎಱಗಿರ್ದ ಕೆಯ್ವೊಲನೆ, ಕೆಯ್ವೊಲನಂ ಬಳಸಿರ್ದ ಪೂತ ಪೂಗೊಳಗಳೆ, ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾವಳಿಗಳೆ, ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂಗಳೆ ವಿಷಯಾಂಗನಾ ಲುಳಿತ ಕುಂತಳದಂತೆವೊಲ್ ಒಪ್ಪಿ ತೋಱುಗುಂ.)
ಬೆಳೆದು ಬಾಗಿದ ಭತ್ತದ ಗದ್ದೆಗಳು; ಆ ಗದ್ದೆಗಳನ್ನು ಸುತ್ತುವರಿದ ಹೂ ತುಂಬಿದ ಕೊಳಗಳು; ಆ ಹೂಗೊಳಗಳನ್ನು ಬಳಸಿದ್ದ ಬಗೆಬಗೆಯ ತೋಟಗಳು; ಆ ತೋಟಗಳನ್ನು ಬಳಸಿದ್ದ ದುಂಬಿಗಳ ಸಮೂಹ – ಇವೆಲ್ಲವೂ ಒಟ್ಟಾಗಿ ಆದ ದೃಶ್ಯವು ಆ ದೇಶವೆಂಬ ಹೆಣ್ಣಿನ ಗುಂಗುರುಕೂದಲಿನಂತೆ ತೋರುತ್ತದೆ.
ಚಂ|| ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ |
     ಬೆಳೆವುದು [ದೇ]ವ ಮಾತೃಕಮೆನಿಪ್ಪ ಪೊಲಂ ನವ ಗಂಧಶಾಳಿಯಂ ||
     ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ |
     ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್ ||೫೪||
(ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತ ಅಟವಿ ಸೊರ್ಕಿದ ಆನೆಯಂ ಬೆಳೆವುದು, [ದೇ]ವ ಮಾತೃಕಂ ಎನಿಪ್ಪ ಪೊಲಂ ನವ ಗಂಧಶಾಳಿಯಂ ಬೆಳೆವುದು, ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ      ಬಳೆವುದು, ನಾಡ ಕಾಡ ಬೆಳಸು ಇಂಬೆಳಸು ಆ ವಿಷಯಾಂತರಾಳದೊಳ್.)
ಆ ಕುರುಜಾಂಗಣದಲ್ಲಿರುವ ಸುಂದರವಾದ, ವಿಚಿತ್ರವಾದ, ಎಲೆ, ಹಣ್ಣು, ಹೂವುಗಳಿಂದ ಕೂಡಿದ ಅಡವಿಯು ಸೊಕ್ಕಿದ ಆನೆಯನ್ನು ಬೆಳೆಯುತ್ತದೆ. ಗದ್ದೆಗಳು ಸಹಜವಾಗಿ ಬೀಳುವ ಮಳೆಯಿಂದಲೇ ಪರಿಮಳಭರಿತ ಬತ್ತವನ್ನು ಬೆಳೆಯುತ್ತವೆ. ಸುಂದರವಾದ ಹೂತೋಟಗಳು ವಿರಹಿಗಳಲ್ಲಿ ಪ್ರಣಯದ ಬಯಕೆಯನ್ನು ಬೆಳೆಯುತ್ತವೆ. ಹೀಗೆ ಆ ನಾಡಿನಲ್ಲಿಯೂ, ಕಾಡಿನಲ್ಲಿಯೂ ಬೆಳೆದದ್ದೆಲ್ಲ ಸುಮಧುರವಾಗಿರುತ್ತದೆ.
ದೇವತೆಗಳು ಸುರಿಸುವ ಮಳೆಯಿಂದಲೇ ಬೆಳೆವ ಭೂಮಿ – ದೇವಮಾತೃಕ –ಡಿ ಎಲ್ ಎನ್
ಕಂ|| ಆವಲರುಂ ಪಣ್ಣುಂ ಬೀ |
     ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ||
     ಮ್ಮಾವುಗಳುಮೆಂದೊಡಿಂಪೆಱ |
     ತಾವುದು ಸಂಸಾರ ಸಾರ ಸರ್ವಸ್ವಫಲಂ ||೫೫||
(ಆವ ಅಲರುಂ ಪಣ್ಣುಂ ಬೀತು ಓವವು ಗಡ, ಬೀಯವಲ್ಲಿ ಮಲ್ಲಿಗೆಗಳುಂ ಇಮ್ಮಾವುಗಳುಂ ಎಂದೊಡೆ, ಇನ್ ಪೆಱತು ಆವುದು ಸಂಸಾರ ಸಾರ ಸರ್ವಸ್ವಫಲಂ?)
ಯಾವುದೇ ಹೂವಾಗಲಿ, ಹಣ್ಣಾಗಲಿ, ಅದರದರ ಋತುವಿನಲ್ಲಿ ಮಾತ್ರ ಆಗುವುದು ಪ್ರಕೃತಿ ನಿಯಮ. ಹಾಗಾಗಿ ಅವು ಎಲ್ಲ ಕಾಲದಲ್ಲಿಯೂ ಜನರಿಗೆ ಸಂತೋಷವನ್ನು ಕೊಡಲಾರವು. ಆದರೆ ಕುರುಜಾಂಗಣದಲ್ಲಿ ಮಲ್ಲಿಗೆ ಹೂವೂ, ಮಾವಿನ ಹಣ್ಣೂ ಎಲ್ಲ ಕಾಲದಲ್ಲಿಯೂ ದೊರೆಯುತ್ತದೆ. ಇದಲ್ಲವೆ ಸಂಸಾರ ಸಾರ ಸರ್ವಸ್ವ ಫಲ?
ಕಂ|| ಮಿಡಿದೊಡೆ ತನಿಗ[ರ್ವು] ರಸಂ |
     ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ ||
     ಗಿಡುವುವು ತುಂಬಿಗಳೞ್ಕಮೆ |
     ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್ ||೫೬||
(ಮಿಡಿದೊಡೆ ತನಿಗರ್ವು ರಸಂ ಬಿಡುವುವು, ಬಿರಿದೊಂದು ಮುಗುಳ ಕಂಪಿನೊಳೆ ಮೊಗಂಗಿಡುವುವು ತುಂಬಿಗಳ್, ಅೞ್ಕಮೆವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್.)
ಸುಮ್ಮನೆ ಹಾಗೆ ಮಿಡಿದರೆ ಸಾಕು ಅಲ್ಲಿನ ಕಬ್ಬುಗಳು ರಸವನ್ನು ಸುರಿಸುತ್ತವೆ; ಬಿರಿದ ಒಂದೇ ಒಂದು ಮೊಗ್ಗಿನ ಪರಿಮಳವನ್ನು ಉಂಡು ದುಂಬಿ ತೃಪ್ತಿಯಿಂದ ಮುಖ ತಿರುಗಿಸುತ್ತದೆ; ಒಂದೇ ಒಂದು ಹಣ್ಣಿನ ರಸ ಹೀರುವಷ್ಟರಲ್ಲಿ ಗಿಣಿಗಳಿಗೆ ಅಜೀರ್ಣವಾಗುತ್ತದೆ!
ಕಂ|| ಸುತ್ತಿಱಿದ ರಸದ ತೊಱೆಗಳೆ |
     ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ ||
     ನ್ಮತ್ತ ಮದಕರಿ ವನಂಗ[ಳೆ] |
     ಸುತ್ತಲುಮಾ ನೆಲದ ಸಿರಿಯನೇನಂ ಪೊಗೞ್ವೆಂ ||೫೭||
(ಸುತ್ತಿಱಿದ ರಸದ ತೊಱೆಗಳೆ, ಮುತ್ತಿನ, ಮಾಣಿಕದ ಪಲವುಂ ಆಗರಮೆ, ಮದೋನ್ಮತ್ತ ಮದಕರಿ ವನಂಗಳೆ ಸುತ್ತಲುಂ, ಆ ನೆಲದ ಸಿರಿಯನ್ ಏನಂ ಪೊಗೞ್ವೆಂ?)
(ಆ ನಾಡಿನಲ್ಲಿ) ಎಲ್ಲಿ ಕಂಡರೂ ಸಿದ್ಧರಸದ ತೊರೆಗಳು ಹರಿಯುತ್ತವೆ. ಮುತ್ತುರತ್ನಗಳಿಂದ ಸಿಂಗಾರಗೊಂಡ ಭವನಗಳಿವೆ. ಮದದಾನೆಗಳಿಂದ ತುಂಬಿರುವ ಕಾಡುಗಳಿವೆ. ಇಂಥ ನಾಡಿನ ಸಂಪತ್ತನ್ನು ಏನೆಂದು ತಾನೇ ವರ್ಣಿಸಲಿ?
ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ರಾಜಧಾನಿಯಾಗಿ[ರ್ದು] ಹರ ಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂ[ತೆ] ದಿಕ್ಕರಿಕಟ ತಟಕ್ಕೆ ಮದಲೇಖೆ[ಯಿರ್ಪಂ]ತೆ ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರಮೆಂಬುದು ಪೊೞಲಲ್ಲಿ –
(ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ ರಾಜಧಾನಿಯಾಗಿರ್ದು, ಹರ ಜಟಾಜೂಟಕ್ಕೆ ಚಂದ್ರಲೇಖೆ ಇರ್ಪಂತೆ, ದಿಕ್ಕರಿಕಟ ತಟಕ್ಕೆ ಮದಲೇಖೆ ಇರ್ಪಂತೆ, ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಂ ಇರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರಂ ಎಂಬುದು ಪೊೞಲ್,  ಅಲ್ಲಿ-)
ಹೀಗೆ ಸೊಗಸಾಗಿ ಕಾಣುವ ಕುರುಜಾಂಗಣದ ರಾಜಧಾನಿ ಹಸ್ತಿನಾಪುರ. ಅದು ಶಿವನ ಜಟೆಯಲ್ಲಿ ಹೊಳೆಯುವ ಚಂದ್ರಲೇಖೆಯಂತೆ, ದಿಕ್ಕರಿಯ ಗಂಡಸ್ಥಲದಲ್ಲಿರುವ ಮದಲೇಖೆಯಂತೆ, ವಿಷ್ಣುವಿನ ಎದೆಯ ಮೇಲಿರುವ ಕೌಸ್ತುಭದಂತೆ ಮೆರೆಯುತ್ತಿದೆ. ಆ ಹಸ್ತಿನಾಪುರದಲ್ಲಿ –
ರಗಳೆ|| ಅದಱ ಪೊಱವೊಳಲ ವಿಶಾಳ ಕನಕ ಕೃತಕ ಗಿರಿಗಳಿಂ ಫಳ[ಪ್ರಕೀರ್ಣ] ತರುಗಳಿಂ |
     ನನೆಯ ಕೊನೆಯ ತಳಿರ ಮುಗುಳ ವನಲತಾ ನಿಕುಂಜದಿಂ ಪ್ರಸೂನ ರಜದ ಪುಂಜದಿಂ |
     ಗಗನ ತಳಮೆ ಪಱಿದು ಬಿೞ್ದುದೆನಿಪ ಬಹು ತಟಾಕದಿಂ ಕುಕಿಲ್ವ ನಲಿವ ಕೋಕದಿಂ |
     ಸುರಿವ ಸುರಯಿಯರಲ ಮುಗುಳ್ಗೆ ಮೊಗಸಿದಳಿ ಕುಳಂಗಳಿಂ ತೊದ[ಲ್ವ] ಶಿಶುಶುಕಂಗಳಿಂ |
     ತೆಗೆಯೆ ಬೀರ ರವದೆ ಮೇಲೆ ಪರಿವ ಮದಗಜಂಗಳಿಂ ಚಳತ್ತುರಂಗಮಂಗಳಿಂ |
     ಲವಣ ಜಳಧಿ ಬಳಸಿದಂತೆ ಬಳಸಿದಗೞ ನೀಳದಿಂದುಗ್ರ ಕನಕ ಶಾಳದಿಂ |
     ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗಮಾದ ರಾಗದಿಂ |
     ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿ ಕೇತನಂಗಳಿಂ |
     ಧನದ ಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ ಪೊದೞ್ದ [ಕಾವ]ಣಂಗಳಿಂ |
     ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧ ಹೃದಯಹಾರಿಯಿಂ |
     ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ |
     ಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ |
     ಕನಕಶೈಲಮೆನಿಸಿ ನೆಗೞ್ದ ಭೂಮಿಪಾಲ ಭವನದಿಂ ಸಮಸ್ತ ವಸ್ತು ಭುವನದಿಂ ||೫೮||

(ಅದಱ ಪೊಱವೊಳಲ ವಿಶಾಳ ಕನಕ ಕೃತಕ ಗಿರಿಗಳಿಂ, ಫಳಪ್ರಕೀರ್ಣ ತರುಗಳಿಂ |
     ನನೆಯ ಕೊನೆಯ ತಳಿರ ಮುಗುಳ ವನಲತಾ ನಿಕುಂಜದಿಂ, ಪ್ರಸೂನ ರಜದ ಪುಂಜದಿಂ |
     ಗಗನ ತಳಮೆ ಪಱಿದು ಬಿೞ್ದುದು ಎನಿಪ ಬಹು ತಟಾಕದಿಂ, ಕುಕಿಲ್ವ ನಲಿವ ಕೋಕದಿಂ |
     ಸುರಿವ ಸುರಯಿಯ ಅರಲ ಮುಗುಳ್ಗೆ ಮೊಗಸಿದ ಅಳಿ ಕುಳಂಗಳಿಂ, ತೊದಲ್ವ ಶಿಶು ಶುಕಂಗಳಿಂ |
     ತೆಗೆಯೆ ಬೀರ ರವದೆ ಮೇಲೆ ಪರಿವ ಮದಗಜಂಗಳಿಂ ಚಳತ್ತುರಂಗಮಂಗಳಿಂ |
     ಲವಣ ಜಳಧಿ ಬಳಸಿದಂತೆ ಬಳಸಿದ ಅಗೞ ನೀಳದಿಂ, ಉದಗ್ರ ಕನಕ ಶಾಳದಿಂ |
     ಒಳಗೆ ಕುಲನಗಂಗಳ್ ಎನಿಪ ದೇವಕುಲದ ಭೋಗದಿಂ, ಸರಾಗಮಾದ ರಾಗದಿಂ |
     ದಿವಮನ್ ಏಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ, ಸದಾನಿ ಕೇತನಂಗಳಿಂ |
     ಧನದ ಭವನಂ ಎನಿಪ ಸಿರಿಯ ಬಚ್ಚರ ಆಪಣಂಗಳಿಂ, ಪೊದೞ್ದ ಕಾವಣಂಗಳಿಂ |
     ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ, ವಿದಗ್ಧ ಹೃದಯಹಾರಿಯಿಂ |
     ಕನಕ ಗೋಪುರಂಗಳ ಒಳಗಣ ಎರಡು ದೆಸೆಯ ಗುಣಣೆಯಿಂ, ವಿಳಾಸಿನಿಯರ ಗಡಣೆಯಿಂ |
     ಸುರತಸುಖದ ಬಳ್ಳವಳ್ಳಿ ಎನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ |

     ಕನಕಶೈಲಂ ಎನಿಸಿ ನೆಗೞ್ದ ಭೂಮಿಪಾಲ ಭವನದಿಂ ಸಮಸ್ತ ವಸ್ತು ಭುವನದಿಂ)
ಹೊರಸುತ್ತಿನಲ್ಲಿ ವಿಶಾಲವಾದ ಕೃತಕ ಬಂಗಾರದ ಬೆಟ್ಟಗಳು; ಹಣ್ಣು ತುಂಬಿದ ಮರಗಳು; ಮೊಗ್ಗು, ಹೂವು, ಚಿಗುರುಗಳಿರುವ ಕಾಡುಬಳ್ಳಿ ಹಬ್ಬಿಸಿದ ಬಳ್ಳಿಮಾಡಗಳು; ಹೂವಿನ ಪರಾಗದ ರಾಶಿ; ಆಕಾಶವೇ ಹರಿದು ಬಿದ್ದಂತೆ ಕಾಣುವ ಹಲವಾರು ಕೊಳಗಳು; ಹಾಡುವ, ಕುಣಿಯುವ ಚಕ್ರವಾಕಗಳು. ರಾಶಿ ರಾಶಿ ಸುರಿದಿರುವ ಸುರಗಿಯ ಮೊಗ್ಗಿಗೆ ಮುತ್ತಿಕೊಂಡ ಜೇನ್ನೊಣಗಳು; ತೊದಲುಲಿಯುವ ಮರಿಗಿಳಿಗಳು; ಕಟ್ಟು ಬಿಚ್ಚಿದರೆ ಜೋರಾಗಿ ಘೀಳಿಡುತ್ತಾ ಮೇಲೇರಿ ಹೋಗುವ ಆನೆಗಳು; ಪುಟಿಯುವ ಕುದುರೆಗಳು; ಕಡಲೇ ಬಳಸಿದೆಯೋ ಎಂಬಂತೆ ವಿಶಾಲವಾದ ಕಂದಕಗಳಿಂದ ಸುತ್ತುವರಿದ ಎತ್ತರವಾದ ಬಂಗಾರದ ಕೋಟೆಗೋಡೆಗಳು; ಅದರೊಳಗೆ ಕುಲಪರ್ವತಗಳಂತಿರುವ ದೇಗುಲಗಳು; ಅಲ್ಲಿಂದ ಕೇಳಿಬರುವ ರಾಗವಾದ ಸಂಗೀತ; ಆಕಾಶವನ್ನು ಅಣಕಿಸುವಂತೆ ಅಲುಗಾಡುವ ಬಗೆಬಗೆಯ ಬಾವುಟಗಳು; ದಾನ ಕೊಡುವವರ ಮನೆಗಳು; ಸಂಪತ್ತು ಮೈವೆತ್ತಂತಿರುವ ಶ್ರೀಮಂತ ವ್ಯಾಪಾರಿಗಳ ಅಂಗಡಿಗಳು; ವಿಶಾಲವಾದ ಚಪ್ಪರಗಳು; ವಿಟಜನರ ಕಾಲಿಗೆ ತೊಡರುವ ಸರಪಳಿಗಳಂತಿರುವ, ಜಾಣರನ್ನೂ ಸೆಳೆಯುವ ಸೂಳೆಗೇರಿಗಳು; ಕನಕಗೋಪುರಗಳ ಒಳಗೆ ಎರಡು ಪಕ್ಕಗಳಲ್ಲಿಯೂ ಇರುವ ನರ್ತನಶಾಲೆಗಳು; ವಿಲಾಸಿ ಸ್ತ್ರೀಯರ ಗುಂಪುಗಳು; ಸಂಭೋಗಸುಖವು ತುಂಬಿ ಹರಿಯುವ ಬಳ್ಳಿಮಾಡಗಳು; ಭಾರೀ ಭೋಗದ ಗೂಡುಗಳು; ಬಂಗಾರದ ಬೆಟ್ಟದಂಥ ಅರಮನೆ; ಲೋಕದ ಎಲ್ಲ ವಸ್ತುಗಳ ಭಂಡಾರ.
ವ|| ಅಂತು ಮೂಱು ಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳ್ಚಿದಂತೆ ಸಮಸ್ತ ವಸ್ತು ವಿಸ್ತಾರ ಹಾರಮಾಗಿರ್ದ ಹಸ್ತಿನಪುರವೆ ನಿಜ ವಂಶಾವಳಂಬಮಾಗೆ ನೆಗೞ್ದ ಭರತ ಕುಲ ತಿಲಕರ ವಂಶಾವತಾರಮೆಂತಾದುದೆಂದೊಡೆ-
(ಅಂತು ಮೂಱು ಲೋಕದ ಚೆಲ್ವೆಲ್ಲಮಂ ವಿಧಾತ್ರನ್ ಒಂದೆಡೆಗೆ ತೆರಳ್ಚಿದಂತೆ, ಸಮಸ್ತ ವಸ್ತು ವಿಸ್ತಾರ ಹಾರಮಾಗಿರ್ದ ಹಸ್ತಿನಪುರವೆ ನಿಜ ವಂಶಾವಳಂಬಂ ಆಗೆ, ನೆಗೞ್ದ ಭರತ ಕುಲ ತಿಲಕರ ವಂಶಾವತಾರಂ ಎಂತಾದುದು ಎಂದೊಡೆ)
ಹೀಗೆ ಮೂರು ಲೋಕದ ಎಲ್ಲ ಚೆಲುವನ್ನೂ ಬ್ರಹ್ಮನು ಒಂದು ಕಡೆ ರಾಶಿ ಹಾಕಿದ್ದಾನೋ ಎಂಬಂತೆ, ಸಮಸ್ತ ವಸ್ತುಗಳಿಂದ ಸುಂದರವಾಗಿ ಕಾಣುತ್ತಿತ್ತು ಹಸ್ತಿನಾಪುರ. ಆ ಹಸ್ತಿನಾಪುರವು ಭರತ ಕುಲ ತಿಲಕರಿಗೆ ಆಶ್ರಯಸ್ಥಾನ. ಆ ಪ್ರಸಿದ್ಧವಾದ ಭರತ ಕುಲವು ಹೇಗೆ ಇಳಿದು ಬಂತೆಂದರೆ:

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *