Untitled

ನೇತ್ರಾವತಿಯ ಮಡಿಲಲ್ಲಿ ಬಂಟ್ವಾಳದ ಜನತೆ
ಕುಡಿಯುವ ನೀರಿಗೆ ಯಾಕೀ ಕೊರತೆ?

ರಸ್ತೆಯಂಚಿನಲ್ಲೊಂದು ಕೊಳವೆ ಬಾವಿ

ಮೊಡಂಕಾಪಿನಲ್ಲಿರುವ ನಮ್ಮ ಮನೆಗೆ ಹೋಗಲು ಬಿ.ಸಿ.ರೋಡು ಪೊಳಲಿ ದ್ವಾರದ ಮೂಲಕ ಹೋಗಬೇಕು. ಇದು ನಾನು ನಿತ್ಯ ತಿರುಗಾಡುವ ದಾರಿ. 2014ರ ಡಿಸೆಂಬರ್ ಮಧ್ಯದ ಒಂದು ದಿನ ಇದ್ದಕ್ಕಿದ್ದಂತೆ ಕಾರ್ಮೆಲ್ ಕಾನ್ವೆಂಟ್ ಹತ್ತಿರ ರಸ್ತೆಯ ಬದಿಯಲ್ಲಿ ಒಂದು ಕೊಳವೆ ಬಾವಿ  ಕಾಣಿಸಿಕೊಂಡಿತು. ಬಾವಿ ತೀರ ರಸ್ತೆಯ ಅಂಚಿನಲ್ಲೇ ಇತ್ತಾದ್ದರಿಂದ ಇದು ಯಾರಪ್ಪ ರಸ್ತೆಗೆ ಇಷ್ಟು ಹತ್ತಿರ ಈ ಕೆಲಸ ಮಾಡಿದವರು ಎಂಬ ಪ್ರಶ್ನೆ ಮನಸ್ಸಿಗೆ ಬಂತು. ವಿಚಾರಿಸಿದೆ. ಅದು ಬಂಟ್ವಾಳ ಪುರಸಭೆಯ ಕಾರುಭಾರು ಎಂದು ತಿಳಿಯಿತು. ನಮ್ಮ ಕೌನ್ಸಿಲರ್ ಶ್ರೀ ಸದಾಶಿವ ಬಂಗೇರರು. ಅವರಿಗೆ ಫೋನ್ ಮಾಡಿದೆ. “ರಾಜುಪಲ್ಕೆ, ದುಗ್ಗನಕೋಡಿ ಮುಂತಾದ ಕಡೆಗೆ ನೀರು ಸರಿಯಾಗಿ ಹೋಗುತ್ತಿಲ್ಲ. ಅದಕ್ಕೇ ಅಲ್ಲಿಗೇ ಬೇರೆ ಬೋರ್ ಮಾಡಿಸಿ ನೀರು ಕೊಡುತ್ತಿದ್ದೇವೆ. ಅದಕ್ಕೇ ಬೇರೆ ಪೈಪ್ ಲೈನ್ ಹಾಕುತ್ತೇವೆ. ಸದ್ಯಕ್ಕೆ ಆ ಪೈಪ್ ಲೈನಿಗೆ  ಇರುವ ಬೋರ್ ವೆಲ್ಲಿನಿಂದಲೇ ನೀರು ಕೊಡುತ್ತೇವೆ. ಒಂದು ಟ್ರಾನ್ಸ್ ಫಾರ್ಮರ್ ಹಾಕಬೇಕು. ಅದಕ್ಕೆ ನಾಲ್ಕು ಲಕ್ಷ ಕಟ್ಟಲಿಕ್ಕಿದೆ. ಅದಾದ ಮೇಲೆ ಹೊಸ ಬೋರ್ ವೆಲ್ಲಿನಿಂದಲೇ ನೀರು ಕೊಡುತ್ತೇವೆ” ಎಂದರು. ಈ ವಿವರಣೆ ಓದುಗರಿಗೆ ಅರ್ಥವಾಗುವುದು ಕಷ್ಟವಾದರೆ,  ಲೋಕೋಪಯೋಗಿ ಇಲಾಖೆಯ ರಸ್ತೆಯ ಅಂಚಿನಲ್ಲೇ ಎಂದರೆ ಸುಮಾರು ನಾಲ್ಕೈದು ಅಡಿ ದೂರದಲ್ಲೇ ಬಂಟ್ವಾಳ ಪುರಸಭೆ ಒಂದು ಹೊಸ ಕೊಳವೆ ಬಾವಿ ತೆಗೆದಿತ್ತು ಎಂದು ತಿಳಿದರೆ ಸಾಕು.

ಉಭಯ ಸಂಕಟ

“ಕುಡಿಯುವ ನೀರು” ಎಂದ ಕೂಡಲೇ ಯಾವ ಕಾನೂನನ್ನು ಬೇಕಾದರೂ ಮುರಿಯಬಹುದು ಎಂಬುದು ಸರಕಾರದಲ್ಲಿ ಪ್ರಚಲಿತ ಪದ್ಧತಿ. “ಎತ್ತಿನ ಹೊಳೆ ಯೋಜನೆ”ಗೂ ಇದೇ ಕಾರಣ ತೋರಿಸಿ ರಾಜ್ಯ ಸರಕಾರವು ಕಾನೂನಿನ ಎಲ್ಲ ಸುರಕ್ಷತಾ ಕ್ರಮಗಳನ್ನೂ ಒಂದೇ ಪೆಟ್ಟಿಗೆ ಲಂಘಿಸಿಬಿಟ್ಟಿದೆ. ಇಲ್ಲೂ ಅಷ್ಟೆ. ಕುಡಿಯುವ ನೀರು ಎಂಬ ಕಾರಣಕ್ಕೆ ಕೊಳವೆ ಬಾವಿ ಎಲ್ಲಿ ಬೇಕಾದರೂ ಕೊರೆಯಬಹುದು ಎಂಬ ಧೋರಣೆ.  ಆದರೆ ಈ ರಸ್ತೆಗೆ ಬೇರೆ ಒಂದು ಸಮಸ್ಯೆ ಇದೆ. ಇನ್ಫೆಂಟ್ ಜೀಸೆಸ್ ಕನ್ನಡ ಮಾಧ್ಯಮ ಶಾಲೆ, ಅವರದೇ ಇಂಗ್ಲಿಷ್ ಮಾಧ್ಯಮ ಶಾಲೆ, ದೀಪಿಕಾ ಪ್ರೌಢಶಾಲೆ, ಕಾರ್ಮೆಲ್ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು, ಕಾರ್ಮೆಲ್ ಪದವಿ ಕಾಲೇಜು,  ಒಂದು ಅಂಗನವಾಡಿ ಹೀಗೆ ಹಲವು ವಿದ್ಯಾಸಂಸ್ಥೆಗಳು ಇಲ್ಲಿ ಹತ್ತಿರ ಹತ್ತಿರ ಬೀಡುಬಿಟ್ಟಿವೆ. ಜೊತೆಗೆ ಒಂದು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವೂ ಇದೆ. ಪರಿಣಾಮ ಈ ರಸ್ತೆಯಲ್ಲಿ ಶಾಲೆಯ ಮಕ್ಕಳ ತಿರುಗಾಟ ಜಾಸ್ತಿ. ಈಗ ಇರುವ ರಸ್ತೆ ಕಿರಿದಾಗಿದೆ, ಕೆಲವು ಕಡೆಗಳಲ್ಲಂತೂ ಒಂದು ಬಸ್ ಬಂದರೆ ಪಾದಚಾರಿಗಳು ಚರಂಡಿಗಿಳಿಯಬೇಕು ಹಾಗಿದೆ. ರಸ್ತೆ ಯಾವಾಗ ಅಗಲವಾಗುತ್ತದೋ, ಯಾವಾಗ ಈ ನರಕ ಕೊನೆಗೊಳ್ಳುತ್ತದೋ ಎಂದು ನಾವೆಲ್ಲ ಕಾಯುತ್ತಲೇ ಇದ್ದೇವೆ.

ಹೀಗಿರುವಾಗ ರಸ್ತೆಯ ಬದಿಯಲ್ಲೇ ಒಂದು ಬೋರ್ ವೆಲ್ ತೆಗೆದರೆ, ನಾಳೆ ರಸ್ತೆ ಅಗಲ ಮಾಡುವುದು ಹೇಗೆ?  ಹಾಗೆಂದು ಬೋರ್ ವೆಲ್ ತೆಗೆಯದಿದ್ದರೆ ಜನರಿಗೆ ನೀರು ಕೊಡುವುದು ಹೇಗೆ? ಹಾಗೂ ಕಷ್ಟ – ಹೀಗೂ ಕಷ್ಟ ಎಂಬ ಉಭಯಸಂಕಟದ ಪ್ರಶ್ನೆ ಹುಟ್ಟಿಕೊಂಡಿತು. ಆದರೆ, ಪುರಸಭೆಯಂಥ ಒಂದು ಸರ್ಕಾರಿ ಸಂಸ್ಥೆಯೇ ಕಾನೂನು ಮೀರಿ ರಸ್ತೆ ಬದಿಯನ್ನು ಆಕ್ರಮಿಸಿದರೆ, ಖಾಸಗಿಯವರಿಗೆ ರಸ್ತೆಯನ್ನು ಆಕ್ರಮಿಸಿಕೊಳ್ಳಲು, ತಮ್ಮ ಸ್ವಂತ ಆಸ್ತಿ ಎಂಬಂತೆ ಬಳಸಿಕೊಳ್ಳಲು ದಾರಿ ತೋರಿಸಿದಂತಾಗಲಿಲ್ಲವೆ  ಎಂಬ ಮರುಸವಾಲೂ ಬಂತು.

ಒಬ್ಬರಿಗಿಂತ ಇಬ್ಬರು ಲೇಸು!

ಯಾವುದಕ್ಕೂ ಒಬ್ಬನೇ ಬೇಡ, ಇಬ್ಬರಿದ್ದರೆ ಒಳ್ಳೆಯದು ಎಂದುಕೊಂಡೆ. ಇಂಥ ಕೆಲಸಕ್ಕೆಲ್ಲ ನನಗೆ ಜತೆಯಾಗುವವರು ಬಿ.ಸಿ.ರೋಡಿನ ವಕೀಲ ಮಿತ್ರ ದೈಪಲ ಶ್ರೀನಿವಾಸರು. ಕಾನೂನು ಇರುವುದು ಪಾಲಿಸುವುದಕ್ಕೆ ಎನ್ನುವುದು ಅವರ ನಿರಂತರ ಕಾಳಜಿ. ಅವರ ಹತ್ತಿರ ಚರ್ಚಿಸಿ ಇಬ್ಬರದೂ ಹೆಸರಿನಲ್ಲಿ ಪುರಸಭೆಗೂ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದೆವು. ನಮ್ಮ ಪ್ರಶ್ನೆ ಎರಡು:
1. ಈ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಒಪ್ಪಿಗೆ ಬೇಕೇ ಬೇಡವೇ?
2. ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನತೆಗೆ ಬೇಕಾದ ಎಲ್ಲಾ ನೀರನ್ನೂ ನೇತ್ರಾವತಿ ನದಿಯಿಂದಲೇ ಸರಬರಾಜು ಮಾಡುವುದು ಸಾಧ್ಯವಿಲ್ಲವೆ?
ಪತ್ರ ಬರೆದು ಅದಕ್ಕೊಂದು ನೆನಪೋಲೆ ಬರೆದ ಮೇಲೆ ಒಂದೂವರೆ ತಿಂಗಳ ನಂತರ ಪುರಸಭೆಯಿಂದ ಉತ್ತರ ಬಂತು:
“….ಬಿ.ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ರಾಜುಪಲ್ಕೆ ಪ್ರದೇಶಕ್ಕೆ ನೀರು ಸರಬರಾಜು ಮಾಡಲು 2013-14ನೇ ಸಾಲಿನ ಬರ ಪರಿಹಾರ ಮತ್ತು ಹಣಕಾಸು ಯೋಜನೆಯಡಿ ಕೊಳವೆ ಬಾವಿ ಕೊರೆದು ಪಂಪು ಅಳವಡಿಸಿ ರೈಸಿಂಗ್ ಮೈನ್ ರಚಿಸಲು ಕೆಲಸ ಕೈಗೊಳ್ಳಲಾಗಿದೆ. ರಾಜುಪಲ್ಕೆ ಪ್ರದೇಶಕ್ಕೆ ಪ್ರಸ್ತುತ ಬಂಟುಗುರಿ ಕಿ.ನೀ.ಸ. ಯೋಜನೆಯಿಂದ ನೀರು ಸರಬರಾಜು ಆಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಿದ್ಯುತ್ ಅಭಾವದಿಂದ ನೀರು ಪೂರೈಸಲು ಕಷ್ಟಕರವಾಗುತ್ತದೆ. ನೀರು ಸರಬರಾಜು ಯೋಜನೆ ಬಗ್ಗೆ ಜಲಮೂಲವನ್ನು ಭೂ ವಿಜ್ಞಾನಿಯವರು ಸರ್ವೆ ಕಾರ್ಯ ನಡೆಸಿ ಗುರುತಿಸಿರುತ್ತಾರೆ. ಕೊಳವೆ ಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಅನುಮತಿ ಅಗತ್ಯವಿಲ್ಲ. ಪ್ರಸ್ತುತ ಬೃಹತ್ ನೀರು ಸರಬರಾಜು ಯೋಜನೆಯ ನೀರು ಪುರಸಭೆಯ ಎಲ್ಲಾ ವಾರ್ಡುಗಳಿಗೆ ಸರಬರಾಜು ಮಾಡಲು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. 2ನೇ ಹಂತದ ಸಮಗ್ರ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಲ್ಲಿ ಪುರಸಭೆಯ ಎಲ್ಲಾ ವಾರ್ಡುಗಳಿಗೆ ನದಿ ನೀರು ಸರಬರಾಜು ಮಾಡಬಹುದು.”

ತನ್ನ ನಿರ್ಣಯ ತಾನೇ ಮರೆತ ಬಂಟ್ವಾಳ ಪುರಸಭೆ

ಪುರಸಭೆಯ ಈ ಪತ್ರವನ್ನು ಕೊಂಚ ಪರಿಶೀಲಿಸೋಣ. “ರಾಜುಪಲ್ಕೆ ಪ್ರದೇಶಕ್ಕೆ ಪ್ರಸ್ತುತ ಬಂಟುಗುರಿ ಕಿ.ನೀ.ಸ. ಯೋಜನೆಯಿಂದ ನೀರು ಸರಬರಾಜು ಆಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಿದ್ಯುತ್ ಅಭಾವದಿಂದ ನೀರು ಪೂರೈಸಲು ಕಷ್ಟಕರವಾಗುತ್ತದೆ” ಎಂದು ಅದರಲ್ಲಿ ಹೇಳಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾದರೆ ಪರಿಹಾರ ಏನು? ಪುರಸಭೆಯ ಉತ್ತರ ನೇರ ಮತ್ತು ಸರಳ: “ಬೋರ್ ವೆಲ್ ತೆಗೆಯುವುದು”. ಏಕೆಂದರೆ ಕುಡಿಯುವ ನೀರಿನ ವ್ಯವಸ್ಥೆಗೆ ಯಾವಾಗಲೂ ಹಣದ ಕೊರತೆ ಇಲ್ಲ! ಆದರೆ ಹೀಗೆ ಮಾಡುವಾಗ ಬಂಟ್ವಾಳ  ಪುರಸಭೆ ತಾನೇ ಈ ಹಿಂದೆ ಮಾಡಿದ ಒಂದು ನಿರ್ಣಯವನ್ನು ಪೂರ್ಣವಾಗಿ ಮರೆತುಬಿಟ್ಟಿದೆ. ಆ ನಿರ್ಣಯ ಆಗಿರುವುದು 22-02-2012ರಲ್ಲಿ. (ಆಗ ಅಧ್ಯಕ್ಷರಾಗಿದ್ದವರು ಶ್ರೀ ಬಿ. ದಿನೇಶ್ ಭಂಡಾರಿ) ಅದೇನು ಹೇಳುತ್ತದೆ ಗೊತ್ತೆ?
“ನಿರ್ಣಯ ನಂಬ್ರ: 425(1): ……… ಎಸ್. ಇ. ಝೆಡ್ ಲಿ.ನವರು ನೇತ್ರಾವತಿ ನದಿ ನೀರನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಗೆ ಬಳಸಲು ಈಗಾಗಲೇ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪೈಪ್ ಲೈನನ್ನು ಅಳವಡಿಸಲು ಅನುಮತಿ ನೀಡಲಾಗಿದೆ. ಬಂಟ್ವಾಳ ಪುರಸಭೆಯು ಮೂರು ಗ್ರಾಮಗಳನ್ನು ಹೊಂದಿದ್ದು, ಈ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೇತ್ರಾವತಿ ನದಿಯಿಂದ ಪೂರೈಸಲಾಗುತ್ತಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ನೀರಿನ ಅಭಾವ ಉಂಟಾದಲ್ಲಿ ಸದ್ರಿ ಎಸ್. ಇ. ಝೆಡ್ ನವರುನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು” (ಅಕ್ಷರ ಒತ್ತು ನನ್ನದು)
ಮೂರು ವರ್ಷದ ಹಿಂದೆಯೇ ಹೀಗೊಂದು ನಿರ್ಣಯ ಮಾಡಿದ್ದರೂ, ಬಂಟ್ವಾಳ ಪುರಸಭೆ ಯಾವ ಕಾರಣಕ್ಕಾಗಿ ಸಾರ್ವಜನಿಕ ಹಣ ಖರ್ಚು ಮಾಡಿ ಬೋರ್ ವೆಲ್ಲುಗಳನ್ನು ತೆಗೆಯುತ್ತಿದೆ? ಯಾಕಾಗಿ ಎಸ್. ಇ. ಝೆಡ್ ಕಂಪೆನಿಯಿಂದ ಷರತ್ತಿನಂತೆ ಬರಬೇಕಾದ ನೀರನ್ನು ಪಡೆದುಕೊಳ್ಳುತ್ತಿಲ್ಲ? ಸಮಸ್ಯೆ ಆಗುತ್ತಿರುವುದು ಪುರಸಭೆಯ ಆಡಳಿತ ವ್ಯವಸ್ಥೆಯ ಲೋಪದಿಂದಲೋ ಅಥವಾ ನೀರು ಮತ್ತು ವಿದ್ಯುತ್ತಿನ ಆಲಭ್ಯತೆಯಿಂದಲೋ?

“ಕಂಡರೂ ಕಾಣಧಂಗೆ” ಕೂತು ನೋಡುತ್ತಿರುವ ಲೋಕೋಪಯೋಗಿ ಇಲಾಖೆ?

ಪುರಸಭೆಗೆ ಒಂದು ನೆನಪೋಲೆ ಸಾಕಾದರೆ, ಸಾಮಾನ್ಯವಾಗಿ ಪತ್ರಗಳಿಗೆ ಕೂಡಲೇ ಉತ್ತರಿಸುವ ಲೋಕೋಪಯೋಗಿ ಇಲಾಖೆಗೆ ಈ ಪತ್ರಕ್ಕೆ ಉತ್ತರಿಸಲು ಎರಡು ನೆನಪೋಲೆ ಬೇಕಾಯಿತು. ಅಂತೂ ಅಲ್ಲಿಂದಲೂ – ಐವತ್ತು ದಿನಗಳ ನಂತರ – ಉತ್ತರ ಬಂತು:
“…ಮೊಡಂಕಾಪುವಿನಲ್ಲಿ ಹೊಸತಾಗಿ ತೆಗೆದಿರುವ ಕೊಳವೆ ಬಾವಿಗೆ ಲೋಕೋಪಯೋಗಿ ಇಲಾಖೆಯ ಅನುಮತಿಯ ಅಗತ್ಯವಿದೆಯೆ ಎಂಬ ಬಗ್ಗೆ ಕೇಳಿರುತ್ತೀರಿ.
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಯಾವುದೇ ಜಿಲ್ಲಾ ಮುಖ್ಯ ರಸ್ತೆ ಅಥವಾ ರಾಜ್ಯ ಹೆದ್ದಾರಿಯ ಬದಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾದಲ್ಲಿ ಸಾಮಾನ್ಯವಾಗಿ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿರುತ್ತದೆ ಎಂದು ಈ ಮೂಲಕ ತಿಳಿಸಬಯಸಿದೆ.”
ಪುರಸಭೆಯ ಕಛೇರಿ ಇರುವುದು ಬಂಟ್ವಾಳದಲ್ಲಿ. ಲೋಕೋಪಯೋಗಿ ಇಲಾಖೆಯ ಕಛೇರಿ ಇರುವುದೂ ಅಲ್ಲೇ ಹತ್ತಿರದಲ್ಲಿ. ಅದೂ ಹೋಗಲಿ ಎಂದರೆ ಇದು ಮೊಬೈಲ್ ಯುಗ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರಿಗೆ ಪುರಸಭೆಯ ಮುಖ್ಯಾಧಿಕಾರಿಯವರ  ಹತ್ತಿರ ಸರಕಾರದ ಖರ್ಚಿನಲ್ಲಿ ಮಾತಾಡಿ ಸಮಸ್ಯೆಯನ್ನು ಪರಿಹರಿಸುವುದು ಅಷ್ಟು ಕಷ್ಟವೆ? ಅಥವಾ ಈ ಎರಡೂ ಕಚೇರಿಗಳು ಪರಸ್ಪರ ಮಾತು ಬಿಟ್ಟಿವೆಯೆ? “ಸಾಮಾನ್ಯವಾಗಿ” ಅನುಮತಿ ಬೇಕೆನ್ನುವ ಲೋಕೋಪಯೋಗಿ ಇಲಾಖೆ ತಾನಾಗಿಯೇ ಈ ವಿಷಯವನ್ನು ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಅದಿಲ್ಲವಾದರೆ ಸಾರ್ವಜನಿಕರಿಂದ ಪತ್ರ ಬಂದು, ವಿಷಯ ಗಮನಕ್ಕೆ ಬಂದ ಮೇಲೂ, ಏಳಲು ಕೂಡದವರ ಹಾಗೆ, ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ, ಆರಾಮವಾಗಿ  ಕೂತಲ್ಲೇ ಕೂತುಕೊಂಡು ನಿರ್ಲಿಪ್ತವಾಗಿರುವುದರ ರಹಸ್ಯವೇನು?
“ಕೊಳವೆಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಅನುಮತಿ ಅಗತ್ಯವಿಲ್ಲ” ಎಂದು ಮುಖ್ಯಾಧಿಕಾರಿಯವರು ಹೇಳುವುದಾದರೆ ಅದಕ್ಕೆ ಆಧಾರವಾದ ದಾಖಲೆಯನ್ನು ಅವರು ಸಾರ್ವಜನಿಕರ ಮುಂದಿಡಬೇಕು. “ಸಾಮಾನ್ಯವಾಗಿ” ಎಂಬ ಪದ ಇಟ್ಟು, ಜಾರಿಕೊಳ್ಳಲು ಪ್ರಯತ್ನಿಸುತ್ತಿರುವ ಲೋಕೋಪಯೋಗಿ ಇಲಾಖೆ, ಕೊಳವೆ ಬಾವಿ ತೆಗೆಯಲು ಅನುಮತಿ ಬೇಕೇ ಬೇಡವೇ ಎಂಬುದನ್ನು ಖಚಿತವಾಗಿ ಹೇಳಬೇಕು.

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *