ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ ಕುಂಟೆ
ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ
ಕೇಸು ಕೋರ್ಟಿಗೆ ಒಯ್ದರು
ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ ಎ ಎಂ ಆರ್ ಎಂಬ ಕಿರು ಜಲವಿದ್ಯುತ್ ತಯಾರಿಸುವ ಕಂಪೆನಿ ನೇತ್ರಾವತಿಗೆ ಒಂದು ಕಟ್ಟ ಹಾಕಿದೆ. ಎಸ್ ಇ ಜಡ್ ಕಂಪೆನಿ ಬಜ್ಪೆ ಸಮೀಪದ ತನ್ನ ಕೈಗಾರಿಕಾ ನೆಲೆಗೆ ಈ ಕಟ್ಟದಿಂದಲೇ ನೀರು ಕೊಂಡೊಯ್ಯುತ್ತದೆ ಎಂದು ನನಗೆ ಗೊತ್ತಾಗಿತ್ತು. ಹಾಗಿದ್ದರೆ ಈ ಎರಡು ಕಂಪೆನಿಗಳ ನಡುವೆ ಏನು ಒಪ್ಪಂದ ಆಗಿದೆ ಎಂದು ತಿಳಿದುಕೊಳ್ಳಬೇಕು ತಾನೆ? (ಯಾಕೆ? ಯಾಕೆ ತಿಳಿದುಕೊಳ್ಳಬೇಕು? ನಿಮಗೆ ಏನು ಸಂಬಂಧ? ಎಂದೆಲ್ಲ ಕಂಪೆನಿ ಕೇಳಿತು. ಆದರೆ ನದಿ ನೀರಿಗೆ ದೊಣೆನಾಯಕನ ಅಪ್ಪಣೆಯೆ?) ಅದಕ್ಕೇ ಮಾಹಿತಿ ಹಕ್ಕಿನ ಅನ್ವಯ ಅರ್ಜಿ ಹಾಕಿದೆ. ಇದಕ್ಕಿಂತ ಮುಂಚೆ ಕೇಳಿದ ಮಾಹಿತಿಯನ್ನು ಕೊಡುತ್ತಿದ್ದ ಕಂಪೆನಿ ಈಗ ಯಾಕೋ ವರಸೆ ಬದಲಿಸಿತು.ಮಾಹಿತಿ ಕೊಡಲಿಲ್ಲ. ಉಲ್ಟಾ ಮಾತಾಡಿತು. ನಾನೂ ಬಿಡಲಿಲ್ಲ, ಮಾಹಿತಿ ಆಯೋಗಕ್ಕೆ ದೂರು ಕೊಟ್ಟೆ. ವಿಚಾರಣೆ ನಡೆಯಿತು. ಮಾಹಿತಿ ಆಯೋಗ ನಾನು ಕೇಳಿದ ಮಾಹಿತಿ ಕೊಡುವಂತೆ ಕಂಪೆನಿಗೆ ನಿರ್ದೇಶನ ಕೊಟ್ಟಿತು. ಆದರೆ ಕಂಪೆನಿ ನನಗೆ ಮಾಹಿತಿ ಕೊಡಲಿಲ್ಲ, ಬದಲಿಗೆ ಹೈಕೋರ್ಟಿನಲ್ಲಿ ಒಂದು ಪಿಟಿಷನ್ ಜಡಿಯಿತು. ಎದುರು ಪಾರ್ಟಿಯಾಗಿ ಒಂದನೇ ಮಾಹಿತಿ ಆಯೋಗ, ಎರಡನೇ ನಾನು! ಹೀಗೆ ನಾನು ಹೋಗದಿದ್ದರೂ, ನನ್ನ ಹೆಸರು ಹೈಕೋರ್ಟಿಗೆ ಹೋದ ಕತೆ.
ದಾಖಲೆ ಓಕೆ ವಕೀಲರು ಯಾಕೆ?
ಆಯಿತು ಕೇಸು ಕೋರ್ಟಿಗೆ ಹೋದಮೇಲೆ ನನ್ನ ಪರವಾಗಿ ವಾದ ಮಾಡಲು ಯಾರಾದರೊಬ್ಬ ವಕೀಲರನ್ನು ನೇಮಿಸಬೇಕಲ್ಲ? ನಾನು ಶಸ್ತ್ರ ಕೆಳಗಿಟ್ಟೆ. ಬೇಕಾದ್ದಾಗಲಿ, ನಾನಂತೂ ವಕೀಲರನ್ನು ಇಡುವುದಿಲ್ಲ. ಎಷ್ಟು ಮಾಡಲು ನನ್ನಿಂದ ಸಾಧ್ಯವೋ ಅಷ್ಟು ಮಾಡಿದ್ದೇನೆ, ಇನ್ನು ಬೇಕಾದ್ದಾಗಲಿ, ಕೇಸು ಗುಣ ಆಗಲಿ, ಪಡ್ಚ ಆಗಲಿ, ವಕೀಲರನ್ನಿಟ್ಟು ಅವರಿಗೆ ದುಡ್ಡು ಸುರಿಯುವುದು, ಅವರು ಕೇಳಿದ ದಾಖಲೆ ಒಟ್ಟು ಮಾಡಲು ಓಡಾಡುವುದು ಇವೆಲ್ಲ ನನ್ನಿಂದ ಸಾಧ್ಯವೇ ಇಲ್ಲ ಅಂತ ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡೆ. ಈ ನಡುವೆ ಒಂದು ದಿನ ವಿದ್ಯಾ ದಿನಕರ್ ನನ್ನ ಹತ್ತಿರ ಜಗಳಕ್ಕೇ ಬಂದರು. ನೀವು ವಕೀಲರನ್ನು ಇಡುವುದಿಲ್ಲ ಎಂದಾದರೆ, ಇಲ್ಲಿಯವರೆಗೆ ತಂದದ್ದು ಯಾಕೆ, ಲಂಗು ಲೊಟ್ಟೆ ಅಂತೆಲ್ಲ ರೋಪು ಹಾಕಿದರು. ನಾನು ಹಂದಾಡಲಿಲ್ಲ ನನ್ನಿಂದ ಕೂಡಿದಷ್ಟು ನಾನು ಮಾಡುವುದು, ಅದರಿಂದ ಹೆಚ್ಚಿಂದು ನಾನು ಮಾಡಲಾರೆ ಅಂತ ಗಟ್ಟಿ ಕೂತುಬಿಟ್ಟೆ. ಕಡೆಗೆ ಅವರೇ ಬೆಂಗಳೂರಿನಲ್ಲಿ ಯಾರನ್ನೋ ಹಿಡಿದು, ಒಬ್ಬ ವಕೀಲಮ್ಮನನ್ನು ಗೊತ್ತು ಮಾಡಿದರು. ಆದರೆ ಅದು ಪ್ರಯೋಜನವಾಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ, ಆ ವಕೀಲಮ್ಮ ಕೇಸಿನಿಂದ ಹಿಂದೆ ಸರಿದರು.
ಹೀಗೆ, ಕೋರ್ಟಿನಲ್ಲಿ ನಮ್ಮ ಪರವಾಗಿ ವಾದ ಮಾಡಲು ಆಯೋಗದ ವಕೀಲರು ಮಾತ್ರ ಉಳಿದರು.
ಕ್ಷುದ್ರವಲ್ಲದ್ದು ಗಣನೀಯ!
ಆದರೆ ನನಗೆ ಒಂದು ಧೈರ್ಯ ಇತ್ತು. ಆಯೋಗ ವಿಚಾರಣೆ ಮಾಡಿದಾಗಲೇ ಬೇಕಾದ ದಾಖಲೆಗಳೆಲ್ಲ ಸಂಗ್ರಹವಾಗಿತ್ತು. ಆಯೋಗದವರೇ ಕಂಪೆನಿಗೆ ನೋಟೀಸು ಕೊಟ್ಟು ಅದರ ಮೂರು ವರ್ಷದ ಬ್ಯಾಲೆನ್ಸ್ ಷೀಟ್ ತರಿಸಿದ್ದರು. ನಾನೂ ಕೆಲವು ದಾಖಲೆಗಳನ್ನು ಒದಗಿಸಿದ್ದೆ. (ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ಮತ್ತೊಂದು ತೀರ್ಪನ್ನು ವಿದ್ಯಾ ಮೇಡಂ ವಕೀಲಮ್ಮನ ಗಮನಕ್ಕೆ ತಂದಿದ್ದರಂತೆ. ಅದು ನನಗೆ ಮೊನ್ನೆಯಷ್ಟೆ ಗೊತ್ತಾಗಿದ್ದು) ಹೀಗೆ ದಾಖಲೆ ಲೆಕ್ಕದಲ್ಲಿ ನಮ್ಮ ಪಕ್ಷ ಬಲವಾಗಿಯೇ ಇತ್ತು. ಮತ್ತು ಇದೇನು ದೊಡ್ಡ ಕುಂಬಳಕಾಯಿ ಕೇಸಲ್ಲ. ಕಂಪೆನಿಯ ವಾದ ಮಾಹಿತಿ ಹಕ್ಕು ೨೦೦೫ ತನಗೆ ಅನ್ವಯವಾಗುವುದಿಲ್ಲ, ಆದ್ದರಿಂದ ತನ್ನನ್ನು ಮಾಹಿತಿಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು. ನಮ್ಮ ವಾದ ಕಂಪೆನಿ ಮಾಹಿತಿಹಕ್ಕಿನ ವ್ಯಾಪ್ತಿಯ ಒಳಗಿದೆ ಎಂದು. ಮಾಹಿತಿ ಹಕ್ಕು ಕಾನೂನಿನ ವಿವರಣೆಯಂತೆ ಯಾವುದಾದರೊಂದು ಸಂಸ್ಥೆ/ಕಂಪೆನಿಯಲ್ಲಿ ಸರಕಾರ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರೆ, ಅಂಥ ಕಂಪೆನಿ/ಸಂಸ್ಥೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಗಾದರೆ ಗಣನೀಯ ಎಂದರೆ ಏನು? ಇಂಗ್ಲಿಷಿನಲ್ಲಿ ಸಬ್ ಸ್ಟ್ಯಾನ್ಷಿಯಲ್ ಎಂಬ ಶಬ್ದ ಹಾಕಿದ್ದಾರೆ. ಸಬ್ ಸ್ಟ್ಯಾನ್ಷಿಯಲ್ ಎಂದರೆ? ಶೇ. ೧೦ ಎಂದೋ, ಶೇ. ೫೦ ಎಂದೋ ಹೇಳಿದರೆ ನಿರ್ದಿಷ್ಟವಾಗಿ ಹೇಳಿದಂತಾಗುತ್ತಿತ್ತು, ಆಗ ಸಮಸ್ಯೆ ಇರಲಿಲ್ಲ. ಇಲ್ಲಿ ಹಾಗಲ್ಲ, ಸಬ್ ಸ್ಟ್ಯಾನ್ಷಿಯಲ್ ಎಂದುಬಿಟ್ಟಿದೆ ಕಾನೂನು! ಅದಕ್ಕೆ ವಿವರಣೆ ಹೀಗಂತೆ: ಯಾವುದು ಕ್ಷುದ್ರವಲ್ಲವೋ ಅದು ಗಣನೀಯ! ಟ್ರಿವಿಯಲ್ ಅಲ್ಲದ್ದು ಸಬ್ ಸ್ಟ್ಯಾನ್ಷಿಯಲ್! ಇದು ತೀರ್ಪಿನಲ್ಲೇ ಇದೆ.
ನಮಗೇ ಗುಣವಾಯಿತು!
ನಮ್ಮ ಈ ಕಂಪೆನಿಯಲ್ಲಿ ಕರ್ನಾಟಕ ಸರಕಾರದ್ದು ಶೇ. 23 ಮತ್ತು ಕೇಂದ್ರದ್ದು ಶೇ. 26 ಬಂಡವಾಳ ಇದೆ ಎನ್ನುವುದಕ್ಕೆ ದಾಖಲೆಗಳಿದ್ದವು. ಹಾಗಾಗಿ ವಕೀಲರುಗಳಿಗೆ ತಲೆ ತಲೆ ಕುಟ್ಟಲು (ತರ್ಕವೆಂಬುದು ತಗರ ಹೋರಟೆ-ಅಲ್ಲಮ ಪ್ರಭು) ಇಲ್ಲಿ ಹೆಚ್ಚು ಅವಕಾಶ ಇರಲಿಲ್ಲ. ಕೇಸು ಖಂಡಿತ ನಮಗೆ ಗುಣವಾಗುತ್ತದೆ ಅಂತ ನನಗೆ ವಿಶ್ವಾಸ ಇತ್ತು. ಆದರೆ ಪ್ರಶ್ನೆ ಇದ್ದದ್ದು ಸಮಯದ್ದು. ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಲು ನಮ್ಮದೇನು ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಪ್ರಕರಣವೆ? ವರ್ಷಗಟ್ಟಲೆ ಕೋರ್ಟಿನಲ್ಲಿ ಧೂಳು ಪೇರಿಸಿಕೊಳ್ಳುತ್ತಾ ಬಿದ್ದು ಬಿಟ್ಟರೆ ಏನು ಗತಿ?
ಹಾಳು ಬಡಿದು ಹೋಗಲಿ ಅಂತ ಅದರ ಆಲೋಚನೆ ಬಿಟ್ಟೆ. ಅಂತರ್ಜಾಲದಲ್ಲಿ ಆಗಾಗ ತೆಗೆದು ನೋಡುವುದು, ನೋಡಿದಾಗೆಲ್ಲ ಕೇಸ್ ಪೆಂಡಿಂಗ್ ಅಂತ ಇರುವುದನ್ನು ಕಂಡು ಸುಮ್ಮನಾಗುವುದು ಹೀಗೇ ನಡೆಯುತ್ತಿತ್ತು ಕಳೆದ ಸುಮಾರು ಒಂದೂವರೆ ವರ್ಷದಿಂದ. ಮೊನ್ನೆ ಒಂದು ದಿನ ನೋಡುತ್ತೇನೆ ಒಂದು ಶಬ್ದ ಬದಲಾಗಿಬಿಟ್ಟಿದೆ: ಕೇಸ್ ಪೆಂಡಿಂಗ್ ಹೋಗಿ ಕೇಸ್ ಡಿಸ್ಪೋಸ್ಡ್ ಆಗಿದೆ! ಶಭಾಷ್! ಮತ್ತೊಂದು ಚೌಕದಲ್ಲಿ ಕೇಸು ಡಿಸ್ಮಿಸ್ ಆಗಿದೆ ಎಂತಲೂ ಇತ್ತು. ಹಾಗಿದ್ದರೆ ನಮಗೇ ಗುಣ ಅಂತ ಗೊತ್ತಾದರೂ ಸಾಯಂಕಾಲದವರೆಗೂ ಕಾದು ಗೆಳೆಯರೂ ವಕೀಲರೂ ಆದ ಕಜೆ ರಾಮಚಂದ್ರ ಭಟ್ಟರಿಗೆ ಫೋನಿಸಿದೆ. ಅವರ ತಮ್ಮ ನರಸಿಂಹ ಭಟ್ಟರು (ಅವರೂ ವಕೀಲರೇ) ಸಿಕ್ಕಿದರು. ಅಪೀಲು ಮಾಡಿದ್ದು ಯಾರು? ಅಂದರು. ಕಂಪೆನಿ. ಹಾಗಿದ್ದರೆ ಅಪೀಲು ವಜಾ ಆಯಿತು, ನೀವೇ ಗೆದ್ದ ಹಾಗೆ ಎಂದರು. ನ್ಯಾಯಾಧೀಶರು ಬೇಲಿ ಹಾರುವ ಹೋರಿಯ ಕುತ್ತಿಗೆಗೆ ಕುಂಟೆ ಕಟ್ಟಿದ್ದರು. ಮಹಾತ್ಮಾ ಗಾಂಧೀಕೀ ಜೈ!
ಇಷ್ಟಾದರೂ ತೀರ್ಪಿನ ಪ್ರತಿ ಇಲ್ಲದೆ ಏನೂ ಮಾಡುವಂತಿಲ್ಲ. ಅಂತರ್ಜಾಲದಲ್ಲಿ ಹುಡುಕಿದೆ. ಎಷ್ಟು ಪರಡಿದರೂ ಪ್ರಯೋಜನ ಆಗಲಿಲ್ಲ. ಬೆಂಗಳೂರಲ್ಲಿ ನನ್ನ ಬಂಧು ಒಬ್ಬರು ಹೈಕೋರ್ಟ್ ವಕೀಲರಿದ್ದಾರೆ. ಅವರಿಗೆ ಫೋನ್ ಮಾಡಿದೆ. ಅವರು ಎಲ್ಲ ವಿವರಿಸಿ ಹೇಳಿದರು. ಕೇಸಿನ ನಂಬರು ತೆಗೆದುಕೊಂಡು ಅವರೇ ನೋಡಿ ಹೇಳಿದರು. “ತೀರ್ಪಿನ ದೃಢೀಕೃತ ಪ್ರತಿಗೆ ಎರಡೂ ಕಡೆಯ ವಕೀಲರು ಅರ್ಜಿ ಹಾಕಿರುತ್ತಾರೆ. ಅವರು ಅಲ್ಲಿ ಪೂರ್ತಿ ದುಡ್ಡು ಕಟ್ಟಿದ ಮೇಲೆ ತೀರ್ಪು ಇಂಟರ್ನೆಟ್ಟಿನಲ್ಲಿ ಬೀಳುತ್ತದೆ. ಮತ್ತೆ ನೀವು ಓದಬಹುದು” ಮತ್ತೆರಡು ದಿನ ಹೋಯಿತು. ವಿಷಯ ತಿಳಿಸಿ ವಿದ್ಯಾ ಮೇಡಂಗೆ ಮೊದಲೇ ಫೋನ್ ಮಾಡಿದ್ದೆ. ಅವರೂ ವಿಚಾರಿಸಿದ್ದರು. ಇಷ್ಟರಲ್ಲಿ ಆಯೋಗದ ಕಡೆಯ ವಕೀಲರು ದುಡ್ಡು ಕಟ್ಟಿ ತೀರ್ಪಿನ ಪ್ರತಿ ಪಡೆದರು. ಹಾಗಾಗಿ ತೀರ್ಪು ಇಂಟರ್ನೆಟ್ಟಿಗೆ ಬಿತ್ತು. ಸಾರ್ವಜನಿಕ ಆಸ್ತಿಯಾಯಿತು. ನಾನೂ ನೋಡಿದೆ. ನನಗೆ ಗೊತ್ತಿದ್ದ ಒಂದೆರಡು ಪತ್ರಿಕೆಗೆ ಕಳಿಸಿದೆ. ವಿದ್ಯಾ ಮೇಡಂ ಎಲ್ಲಾ ಪತ್ರಿಕೆಗಳಿಗೂ ತೀರ್ಪು ಕಳಿಸಿಕೊಟ್ಟರು. ಮತ್ತೆರಡು ದಿನದಲ್ಲಿ ಪತ್ರಿಕೆಗಳಲ್ಲಿ ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಎಂಬ ಸುದ್ದಿ ಪ್ರಕಟವಾಗತೊಡಗಿತು. ಎಲ್ಲಾ ಮುಖ್ಯ ಇಂಗ್ಲಿಷ್ ದೈನಿಕಗಳೂ ಸುದ್ದಿಯನ್ನು ಪ್ರಕಟಿಸಿದವು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮಾತ್ರ ಕಡಿಮೆ. ಪ್ರಜಾವಾಣಿ ವರದಿ ಮಾಡಿತು. ಕರಾವಳಿ ಅಲೆಯಲ್ಲೂ ಪ್ರಕಟವಾಗಿದೆ ಎಂದು ಮಿತ್ರ ವಿಶ್ವನಾಥರು ಹೇಳಿದರು.
ತೀರ್ಪಿನ ಮುಖ್ಯಾಂಶಗಳು
ತೀರ್ಪಿನ ಕೆಲವು ಅಂಶಗಳು ಮಾಹಿತಿ ಹಕ್ಕು ಕಾನೂನಿನ ಕೆಲವು ಅಸ್ಪಷ್ಟ ಅಂಶಗಳನ್ನು ಹೆಚ್ಚು ಸ್ಪಷ್ಟಪಡಿಸಿರುವುದು ಪ್ರಜೆಗಳಿಗೆ ಆಗಿರುವ ದೊಡ್ಡ ಲಾಭ. ಗಣನೀಯ (ಸಬ್ ಸ್ಟ್ಯಾನ್ಷಿಯಲ್) ಎಂಬುದಕ್ಕೆ ನ್ಯಾಯಾಧೀಶರು ಕೊಟ್ಟಿರುವ ವಿವರಣೆಯನ್ನು ಮೇಲೆ ಹೇಳಿದ್ದೇನೆ. ಇದರೊಂದಿಗೆ ಇನ್ನೊಂದು ಅಂಶವೂ ಇದೆ: ಗಣನೀಯ ಎಂದರೇನು ಎಂಬುದನ್ನು ವಿವರಿಸಿದ ಮುಂದಿನ ಸಾಲಿನಲ್ಲಿಯೇ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ: “It need not necessarily be by a cash flow but also by any other kind”. ಎಂದರೆ ಸರಕಾರ ಯಾವುದೇ ಸಂಸ್ಥೆಯಲ್ಲಿ ಹಣದ ರೂಪದಲ್ಲಿಯೇ ತನ್ನನ್ನು ತೊಡಗಿಸಿಕೊಂಡ ಪ್ರಕರಣದಲ್ಲಿ ಮಾತ್ರ ಅಲ್ಲ, ವಸ್ತುವಿನ ರೂಪದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ ಎಂದಾಯಿತು. ಅಂದರೆ ಈಗ ಸಾಮಾನ್ಯವಾಗಿ ಯಾವ ಕಂಪೆನಿಗಳು ಮಾಹಿತಿ ಹಕ್ಕಿನಲ್ಲಿ ಬರುವುದಿಲ್ಲ ಎಂದು ಭಾವಿಸಲಾಗಿದೆಯೋ ಆ ಕಂಪೆನಿಗಳಿಗೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ! ಉದಾಹರಣೆಗೆ ಒಂದು ಕಿರು ಜಲವಿದ್ಯುತ್ ತಯಾರಿಕಾ ಕಂಪೆನಿಯನ್ನು ತೆಗೆದುಕೊಂಡರೆ, ಆ ಕಂಪೆನಿ ಸರಕಾರಕ್ಕೆ ಸೇರಿದ ನದಿಗೆ ಅಣೆಕಟ್ಟು ಹಾಕಿರುತ್ತದೆ. ನದಿ ಮತ್ತು ಅಣೆಕಟ್ಟು ಇರುವ ಸ್ಥಳ ಸರಕಾರದ್ದಾದ್ದರಿಂದ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಥ ಮಾಡುವುದು ಸಾಧ್ಯವಿದೆ. (ಕಿರು ಜಲ ವಿದ್ಯುತ್ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸರಕಾರದ ಸಬ್ಸಿಡಿಯನ್ನು ತೆಗೆದುಕೊಳ್ಳುವುದರಿಂದ, ಆ ಕಾರಣಕ್ಕೂ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುವುದು ಸಾಧ್ಯವಿದೆ). ಸರಕಾರದ ಮೂಲಕ ಭೂಮಿಯನ್ನೂ, ತೆರಿಗೆ ರಿಯಾಯತಿಯನ್ನೂ ಪಡೆದುಕೊಂಡ ಇನ್ಫೋಸಿಸ್ ಮುಂತಾದ ಖಾಸಗಿ ಕಂಪೆನಿಗಳೂ ಇದೇ ಕಾರಣಕ್ಕೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನೂ ಈ ತೀರ್ಪಿನ ಹಿನ್ನೆಲೆಯಲ್ಲಿ ಪರಿಶೀಲಿಸಬಹುದಾಗಿದೆ.