“ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ” ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟಿಗೆ ಹೋಗಿದೆಯಷ್ಟೆ? ಇದರ ಒಳಗುಟ್ಟೇನು?
ಕೆಲವು ಸಮಯದಿಂದಲೂ ವಿದ್ಯಾ ಮೇಡಂ (ವಿದ್ಯಾ ದಿನಕರ್) “ಏನೋ ಗುಟ್ಟು ಇರಬೇಕು” ಎಂದು ಅನುಮಾನಿಸುತ್ತಲೇ ಇದ್ದರು. ಕಂಪೆನಿ ಹೈಕೋರ್ಟಿಗೆ ಹೋದರೂ ಹೋಗಬಹುದು ಎಂಬ ಅನುಮಾನ, ಆಯೋಗ ನಿರ್ದೇಶಿಸಿದ ಅವಧಿದೊಳಗೆ ಮಾಹಿತಿ ಸಿಗದಿದ್ದಾಗ, ನನಗೂ ಬಂದಿತ್ತು.
ನಾನು ಕೇಳಿದ ಮಾಹಿತಿ ನೀರಿಗೆ ಸಂಬಂಧಿಸಿದ್ದು. ಬಂಟ್ವಾಳ ತಾ. ಶಂಬೂರಿನಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಎ ಎಂ ಆರ್ ಕಂಪೆನಿ ಜಲವಿದ್ಯುತ್ತನ್ನು ತಯಾರಿಸುತ್ತಿದೆ. ಇದೇ ಆಣೆಕಟ್ಟಿನಿಂದ ನೀರನ್ನು ಸಾಗಿಸಲು ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ ಇ ಜಡ್ ಕಂಪೆನಿ ನನಗೆ ತಿಳಿಸಿತ್ತು. ಆ ಒಪ್ಪಂದದ ಪ್ರತಿಯನ್ನು ಕೊಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದೆ. ಕಂಪೆನಿ ನನಗೆ ಒಪ್ಪಂದದ ಪ್ರತಿ ಕೊಡಲಿಲ್ಲ. ಈಗ ಹೈಕೋರ್ಟ್ ಎದುರಿಗೆ ಇರುವುದು ಇದೇ ವಿವಾದ.
ನೋಡೋಣ ಎಂದು ಮೊನ್ನೆ ನಾನು ಮತ್ತೊಂದು ಕಡೆಯಿಂದ ಒಂದು ಪ್ರಯತ್ನ ಮಾಡಿದೆ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ರವರ ಕಛೇರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ, ಮೂರು ಮಾಹಿತಿಗಳನ್ನು ಕೇಳಿದೆ:
೧. ಎಸ್ ಇ ಜಡ್ ಕಂಪೆನಿಗೆ ತನ್ನ ಆಣೆಕಟ್ಟಿನಿಂದ ನೀರು ಒದಗಿಸಲು ಎ ಎಂ ಆರ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೨. ಎ ಎಂ ಆರ್ ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆಯಲು ಎಸ್ ಇ ಜಡ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೩. ಒಂದು ವೇಳೆ ಅನುಮತಿ ನೀಡಿದ್ದರೆ, ಆ ಎರಡೂ ಕಂಪೆನಿಗಳ ನಡುವೆ ಈ ಬಗ್ಗೆ ಆಗಿರುವ ಒಪ್ಪಂದವನ್ನು ನೀವು ಅಂಗೀಕರಿಸಿದ್ದೀರಾ? ಆ ಒಪ್ಪಂದದ ಪ್ರತಿ.
25-02-2011ರಂದು ಅವರಿಂದ ಹೀಗೆ ಉತ್ತರ ಬಂದಿದೆ:
“….. ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಎ.ಎಂ.ಆರ್. ಕಂಪೆನಿಗೆ ಅದರ ಆಣೆಕಟ್ಟಿನಿಂದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು ಸರಬರಾಜು ಮಾಡಲು ಮತ್ತು ವಿಶೇಷ ಆರ್ಥಿಕ ವಲಯಕ್ಕೆ ಎ. ಎಂ. ಆರ್. ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆದುಕೊಳ್ಳಲು ಈ ವಿಭಾಗದಿಂದ ಅನುಮತಿ ನೀಡಿರುವುದಿಲ್ಲ. ಹಾಗೂ ಈ ಕುರಿತು ಯಾವುದೇ ಒಪ್ಪಂದವನ್ನು ಈ ವಿಭಾಗದಿಂದ ಮಾಡಿರುವುದಿಲ್ಲ”
ಎಂದರೆ ಎಸ್ ಇ ಜಡ್ ಕಂಪೆನಿ ನನಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಒಪ್ಪಂದವು ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲವೆ? ( ಈ ನಡುವೆ ಎ. ಎಂ. ಆರ್. ಕಂಪೆನಿಯನ್ನು ಜರ್ಮನ್ ಮೂಲದ ಗ್ರೀನ್ ಕೇರ್ ಕಂಪೆನಿಗೆ ಮಾರಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಆ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ.) ಒಪ್ಪಂದವೇ ಇಲ್ಲದಿದ್ದರೆ ಯಾವ ಕೋರ್ಟು ಹೇಳಿದರೆ ತಾನೆ ಕಂಪೆನಿ ಅದನ್ನು ನನಗೆ ಕೊಡಲು ಸಾಧ್ಯ? ಮುಖ್ಯವಾಗಿ ಈ ಕಾರಣಕ್ಕಾಗಿಯೇ ಕಂಪೆನಿ ಕೋರ್ಟು ವ್ಯವಹಾರದಲ್ಲಿ ತೊಡಗಿರಬಹುದೆ? “ಹೇಗಾದರೂ ಒಮ್ಮೆ ಕೋರ್ಟಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರೆ ಮತ್ತೆ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಬಹುದು, ಮುಂದೊಂದು ದಿನ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಬಹುದು” ಎಂಬ ಕುರುಡು ಧೈರ್ಯದಿಂದ ಕಂಪೆನಿ ಹೀಗೆ ಮಾಡಿರಬಹುದೆ? ಜೊತೆಗೆ, ಕೋರ್ಟಿನಲ್ಲಿ ತಾನೇ ಗೆದ್ದರೆ, ಆಗ ಡಬಲ್ ಲಾಭ ಸಿಕ್ಕಿದಂತಾಯಿತಲ್ಲ. ಮತ್ತು ಅಲ್ಲಿಯವರೆಗೆ, ಮಾಹಿತಿ ಕೇಳುವವರಿಗೆಲ್ಲ ಇದೇ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಬಹುದಲ್ಲ? ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಪ್ರಕರಣವನ್ನು ಕಂಪೆನಿ ಸುಪ್ರೀಂ ಕೋರ್ಟಿಗೆ ಕೊಂಡು ಹೋಗಲು ಯತ್ನಿಸಿದರೂ ಆಶ್ಚರ್ಯವಿಲ್ಲ ಎಂದು ನನಗೆ ಕಾಣುತ್ತದೆ.
ಒಪ್ಪಂದ ಇದೆಯೋ ಇಲ್ಲವೋ?
ನೇತ್ರಾವತಿ ನದಿಯ ನೀರು ಸಾರ್ವಜನಿಕ ಸಂಪತ್ತು. ಅದರ ಮೇಲೆ ಅಧಿಕಾರ ಇರುವುದು ಸರಕಾರಕ್ಕೆ. ಆದ್ದರಿಂದಲೇ, ಸರಕಾರದ ಒಪ್ಪಿಗೆ ಇಲ್ಲದೆ ಎರಡು ಖಾಸಗಿ ಕಂಪೆನಿಗಳು ನದಿಯ ನೀರಿನ ವಿಷಯವಾಗಿ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲು ಬರುವುದಿಲ್ಲ. ಇಲ್ಲಿ ಸರಕಾರದ ಪರವಾಗಿ ಒಪ್ಪಿಗೆ ನೀಡುವ, ಒಪ್ಪಂದವನ್ನು ಅಂಗೀಕರಿಸುವ ಅಧಿಕಾರ ಇರುವುದು, ನನಗೆ ತಿಳಿದ ಮಟ್ಟಿಗೆ, ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ಅವರಿಗೆ. (“ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್”ನೊಂದಿಗೆ ಕರ್ನಾಟಕ ಸರಕಾರದ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಅವರೇ).ಅವರಿಗೇ ಈ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದಾದ ಮೇಲೆ, “ಎ. ಎಂ. ಆರ್. ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ” ಎಂಬ ಎಸ್. ಇ. ಜಡ್. ಕಂಪೆನಿಯ ಮಾತನ್ನು ನಂಬುವುದು ಹೇಗೆ?
ಶಂಬೂರಿನ ಸಮೀಪ ಜಲವಿದ್ಯುತ್ ತಯಾರಿಸಲು ಮೂಲತಃ ಅನುಮತಿ ಮಂಜೂರಾದದ್ದು “ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್” ಎಂಬ ಸಂಸ್ಥೆಗೆ. ೨೦೦೬ರಲ್ಲಿ ಆ ಕಂಪೆನಿಗೆ ಅನುಮತಿ ನೀಡುವಾಗ ಸರಕಾರ ಹಾಕಿರುವ ಷರತ್ತುಗಳಲ್ಲಿ ಒಂದು ಹೀಗಿದೆ:
“2. ನೀರನ್ನು ಬಳಕೆಯೇತರ ಉಪಯೋಗಕ್ಕಾಗಿ (Non-consumptive) ಮಾತ್ರ ಬಳಸತಕ್ಕದ್ದು. ವಿದ್ಯುತ್ ಉತ್ಪಾದನೆಯ ನಂತರ ನೀರಾವರಿ, ನೀರು ಸರಬರಾಜು (consumptive) ಇಂತಹ ಬಳಕೆಯ ಉದ್ದೇಶಗಳಿಗೆ ನೀರನ್ನು ಬಳಸಬಾರದು”
ವಸ್ತುಸ್ಥಿತಿ ಹೀಗಿದ್ದರೂ, ಎಸ್ ಇ ಜಡ್ ಕಂಪೆನಿ ಈಗ್ಗೆ ಏಳು ತಿಂಗಳುಗಳ ಕೆಳಗೆ, ನೇತ್ರಾವತಿ ನದಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಅಳವಡಿಸುವ ಕೆಲಸಕ್ಕೆ ದೇಶೀ/ವಿದೇಶೀ ಕಂಪೆನಿಗಳಿಂದ ಟೆಂಡರ್ ಕರೆದಿದೆ! ಈ ಜಾಹೀರಾತಿನಲ್ಲಿ ನೇತ್ರಾವತಿಯ ಯಾವ ಭಾಗದಿಂದ ಪೈಪುಗಳನ್ನು ಅಳವಡಿಸಬೇಕಾಗುತ್ತದೆ ಎಂಬುದನ್ನೇನೂ ಸೂಚಿಸಿಲ್ಲ. “ನೇತ್ರಾವತಿ ನದಿಯಿಂದ” ಎಂದು ಮಾತ್ರ ಹೇಳಲಾಗಿದೆ. (ನೇತ್ರಾವತಿ ನದಿಗೆ ಈಗ ಬಂಟ್ವಾಳ ತಾಲೂಕಿನಲ್ಲಿ 3 ದೊಡ್ಡ ಅಣೆಕಟ್ಟುಗಳಿವೆ. 1. ಎಂ ಆರ್ ಪಿ ಎಲ್ ಕಂಪೆನಿಯದು, 2. ಎ.ಎಂ.ಆರ್. ಕಂಪೆನಿಯದು 3. ಮಂಗಳೂರು ಮಹಾನಗರ ಪಾಲಿಕೆಯದು).
ಉದಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನ ಪ್ರತಿಯನ್ನಿಟ್ಟು ನಾನು ಅರಣ್ಯ ಇಲಾಖೆಗೆ ಪತ್ರ ಬರೆದು, ಈ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದೆಯೇ ಎಂದು ಕೇಳಿದ್ದೆ. ತಾ. 4-10-2010ರಲ್ಲಿ ಇಲಾಖೆ ನನಗೆ ಹೀಗೆ ಉತ್ತರಿಸಿತ್ತು:
“ಎಮ್ ಎಸ್ ಇ ಝಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ…”. ಇದರ ಅರ್ಥ ಪತ್ರಿಕೆಗಳಲ್ಲಿ ಪೈಪ್ ಅಳವಡಿಸುವ ಕೆಲಸಕ್ಕೆ ಟೆಂಡರ್ ಕರೆಯುವಾಗ ಕಂಪೆನಿ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದಿರಲಿಲ್ಲ! ಈ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ತಿಳಿಯಲು ಇನ್ನು ಪತ್ರ ಬರೆಯಬೇಕು.
ಅರಣ್ಯ ಇಲಾಖೆಗೆ ಬರೆದಂತೆಯೇ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದಿದ್ದೆ. ಆ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ, “ನೀರಿನ ಪೈಪುಗಳನ್ನು ಅಳವಡಿಸಲು ರಸ್ತೆ ಅಗೆತದ ಬಗ್ಗೆ” ದಿನಾಂಕ 22-5-10 ರಂದು ಕೆಳಕಂಡಂತೆ ಅನುಮತಿ ನೀಡಿದೆ:
೧. ಮಣಿಹಳ್ಳದಿಂದ ಬಂಟ್ವಾಳದವರೆಗೆ – 3.ಕಿ.ಮೀ.
೨. ಬಂಟ್ವಾಳದಿಂದ ಸೊರ್ನಾಡ್ ವರೆಗೆ – 5.7 ಕಿ.ಮೀ.
೩. ಸೊರ್ನಾಡಿನಿಂದ ಮೂಲರಪಟ್ನವರೆಗೆ – 5.8 ಕಿ.ಮೀ.
ಈ ಮಾಹಿತಿಯಿಂದಲೂ, ಎಸ್. ಇ. ಜಡ್. ಕಂಪೆನಿ ನೇತ್ರಾವತಿಯ ಯಾವ ಭಾಗದಿಂದ ನೀರೆತ್ತಲು ಹೊರಟಿದೆ ಎಂಬುದು ತಿಳಿಯುವುದಿಲ್ಲ. ಮಣಿಹಳ್ಳದಿಂದ ನೇತ್ರಾವತಿಯ ಕಡೆಗೆ ಹೋಗುವ ರಸ್ತೆ ಬಹುಶಃ ಜಿಲ್ಲಾ ಪಂಚಾಯತಿಗೆ ಸೇರಿದ್ದು. ಇನ್ನು ಅವರಿಂದ ಮಾಹಿತಿ ಪಡೆಯಬೇಕು. ನೋಡೋಣ.
ಹೈಕೋರ್ಟು ಮಾಹಿತಿ ಆಯೋಗದ ತೀರ್ಪಿಗೆ ಆರು ವಾರಗಳ ಅವಧಿಯ ಮಧ್ಯಂತರ ತಡೆಯಾಜ್ಞೆ ಕೊಟ್ಟಿತ್ತು. ಈ ಆರು ವಾರ ಮುಗಿದ ಮೇಲೆ ಕಂಪೆನಿಯ ಪರವಾಗಿ ಅದರ ಮುಖ್ಯಸ್ಥರು ಮಾಹಿತಿ ಆಯೋಗದೆದುರು ಹಾಜರಾಗಿ, ಹೈಕೋರ್ಟು ತಡೆಯಾಜ್ಞೆಯನ್ನು ಮತ್ತೂ ಎರಡು ವಾರಗಳಿಗೆ ವಿಸ್ತರಿಸಿರುವುದನ್ನು ತಿಳಿಸಿದ್ದರು. ಈಗ ಆ ಅವಧಿಯೂ ಮುಗಿದಿದೆ. ಇಂದು (25-02-2011) ಮಾಹಿತಿ ಆಯೋಗ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ನಾನು ಹೋಗಿರಲಿಲ್ಲ. ಹಾಗಾಗಿ ಫಲಿತಾಂಶ ಇನ್ನು ನನಗೆ ಗೊತ್ತಾಗಬೇಕಷ್ಟೆ.