ನೇತ್ರಾವತಿಯ ಬಾಯಿಗೆ ಮಣ್ಣು ಹಾಕಿದ ರೈಲ್ವೆ ಇಲಾಖೆ!

ಧಿಡೀರ್ ಮಣ್ಣಿನ ಸೇತುವೆ!


ಕಳೆದ ತಿಂಗಳಿನಲ್ಲಿ  ಬೆಂಗಳೂರಿಗೆ ಹೋಗಿದ್ದ ನಾನು ನನ್ನ ಪತ್ನಿ ಒಂದು ಶುಕ್ರವಾರದ ಹಗಲು ರೈಲಿನಲ್ಲಿ ಬಿ.ಸಿ.ರೋಡಿಗೆ ಹಿಂದೆ ಬಂದೆವು. ಮುಸ್ಸಂಜೆಯ ಹೊತ್ತಿಗೆ ರೈಲು ಬಂಟ್ವಾಳ ಮುಟ್ಟುವ ಹೊತ್ತಿಗೆ ಬಂಟ್ವಾಳ ಸ್ಟೇಷನ್ನಿನ ಸಮೀಪದ ಸೇತುವೆಯಿಂದ  ಕಾಣುವ ಸುಮನೋಹರ ದೃಶ್ಯಕ್ಕಾಗಿ ಕಾಯುತ್ತಿದ್ದ ನನಗೆ ಸೇತುವೆಯ ಕೆಳಗೆ ನದಿಯ ಉದ್ದಕ್ಕೂ  ಮಣ್ಣು ತುಂಬಿಸಿರುವುದು ಕಾಣಿಸಿತು. ಇದ್ಯಾವ ಬುದ್ಧಿವಂತರಪ್ಪ ನಮ್ಮೂರಿನ ನದಿಗೆ ಮಣ್ಣು ತುಂಬಿಸಿದವರು ಅಂತ ಹೊಟ್ಟೆ ತೊಳಸಿತು.
ಮರುದಿನ ಕುತೂಹಲಕ್ಕಾಗಿ ಕ್ಯಾಮರಾ ಹಿಡಿದುಕೊಂಡು ಹಳಿಯ ಮೇಲೆ ನಡೆಯುತ್ತ ನದಿಯ ಹತ್ತಿರ ಹೋದೆ. ಎದುರಿನಿಂದ ಯಾರೋ ಒಬ್ಬ ಯುವಕ  ಖಾಕಿ ಡ್ರೆಸ್ಸು ಹಾಕಿಕೊಂಡು ಸಬ್ಬಲ್ಲಿನ ಥರದ ಕಬ್ಬಿಣದ ಏನನ್ನೂ ಒಂದನ್ನು ಹೆಗಲಮೇಲೆ ಹೇರಿಕೊಂಡು, ಬಿಸಿಲಲ್ಲಿ ಮುಖ ಒಣಗಿಸಿಕೊಂಡು ನಡೆದು ಬರುತ್ತಿದ್ದ. “ನೀವು ರೈಲ್ವೆಯವರಾ?” ಎಂದೆ. ಹೌದೆಂಬಂತೆ ಆಸಾಮಿ ತಲೆಯಾಡಿಸಿದ. “ಅಲ್ಲಿ ನದಿಗೆ ಮಣ್ಣು ಹಾಕಿ ಸೇತುವೆ ಮಾಡಿದ್ದು ಯಾರು?” ಎಂದು ಹಾಕಿದ್ದ ಮಣ್ಣು ತೋರಿಸಿ ಕೇಳಿದೆ. . “ಹಿಂದಿ, ಹಿಂದಿ” ಎಂದ. ಮಣ್ಣಿಗೆ ಹಿಂದಿಯಲ್ಲಿ ಏನು ಹೇಳುವುದಪ್ಪ ಎಂದು ಒಂದು ನಿಮಿಷ ನೆನಪು ಮಾಡಿಕೊಂಡು “ಓ ಮಿಟ್ಟಿ ಡಾಲಾ ಹೈ ನ” ಎಂದು ಅಸಂಬದ್ಧ ಹಿಂದಿಯಲ್ಲಿ ಏನೇನೋ ಹೇಳಿದೆ. ನಾನು ಏನು ಕೇಳುತ್ತಿದ್ದೇನೆಂದು ಅವನಿಗೆ ಅರ್ಥವಾಗಿರಬೇಕು.  ಅದೆಲ್ಲ ರೈಲ್ವೆಯವರೇ ಮಾಡಿದ್ದೆಂದು ಅವನು ಹಿಂದಿಯಲ್ಲಿ  ಹೇಳಿದ್ದರ ಮೇಲೆ ಅಂದಾಜು ಮಾಡಿದೆ.

ಬಿ.ಸಿ.ರೋಡಿನಲ್ಲೊಂದು ಹರಪ್ಪ ಮೊಹೆಂಜೋದಾರೋ

ನದಿಯ ಬದಿಯಲ್ಲಿಯೇ ಸ್ಮಶಾನ ಉಂಟು ತಾನೆ. ಅದರ ಈಚೆಗೆ ಒಂದು ಖಾಲಿ ಕಟ್ಟಡ ಇದೆ. ಹಿಂದೆ ಈ ಕಟ್ಟಡದಲ್ಲಿ ಕ್ರಿಶ್ಚಿಯನ್ ಧರ್ಮದ ಯಾವುದೇ ಶಾಖೆಯೊಂದರ ಸದಸ್ಯರು ಸೇರಿಕೊಂಡು ಭಜನೆ  ಮಾಡುತ್ತಿದ್ದುದನ್ನು ಕೇಳಿದ್ದೆ. ಅದಕ್ಕೊಂದು ಬೋರ್ಡೂ ಇತ್ತು. ಅದರ ಹೆಸರು ನನಗೀಗ  ನೆನಪಿಲ್ಲ. ಈಗ ಅದು ಖಾಲಿ ಬಿದ್ದ ಹಾಗೆ ಕಂಡಿತು.
ಅದರಿಂದೀಚೆಗೆ ವಿಶಾಲವಾದ ಜಾಗದಲ್ಲಿ ಜೆಸಿಬಿ ಬಳಸಿ ಮಣ್ಣು ತೆಗೆದಿದ್ದರು. ಯಾವುದೇ ಕ್ರಮ ಇಲ್ಲದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಮಣ್ಣು ತೆಗೆದದ್ದರಿಂದ  ಇಡೀ ಜಾಗ  ಹರಪ್ಪ ಮೊಹೆಂಜೋದಾರೋ ಹಾಗೆ ಕಾಣುತ್ತಿತ್ತು. ಸ್ವಲ್ಪ ಆಚೆಗೆ ಯಾರೋ ಉದ್ದೇಶಪೂರ್ವಕವಾಗಿ ನೆಟ್ಟ ಗಿಡಗಳು ಅನಾಥವಾಗಿ ನಿಂತಿದ್ದವು. ಅರೆ, ಇವು ಅರಣ್ಯ ಇಲಾಖೆಯವರು ನೆಟ್ಟ ಗಿಡಗಳಂತಿವೆಯಲ್ಲ ಹಾಗಾದರೆ ಮಣ್ಣು ತೆಗೆದ ಜಾಗದಲ್ಲೂ ಗಿಡಗಳು ಇದ್ದಿರಬೇಕಲ್ಲ  ಎಂಬ ಪ್ರಶ್ನೆ ಮನಸಿಗೆ ಬಂತು.
ರೈಲ್ವೆ ಹಳಿಯ ಬದಿಯ ಮೆಟ್ಟಿಲು ಇಳಿದು ನದಿಯ ಬುಡಕ್ಕೆ ಹೋದೆ. ಸುಮಾರು ಹತ್ತು ಹನ್ನೆರಡು ಅಡಿ ಅಗಲದ ಮಣ್ಣಿನ ಸೇತುವೆ ಈಚೆ ದಡದಿಂದ ಆಚೆ ದಡದವರೆಗೂ ಇತ್ತು. ನನ್ನ ಅಂದಾಜಿನಲ್ಲಿ ಕಡಿಮೆ ಎಂದರೂ ಮುನ್ನೂರಾ ಐವತ್ತು ಮೀಟರ್. ಅಂದರೆ ಈ ಸೇತುವೆ ಮಾಡಲು ಸಾವಿರಗಟ್ಟಲೆ ಲೋಡು ಲಾರಿ ಮಣ್ಣು ತುಂಬಿಸಿರಬೇಕು. ನದಿಯ ಸೆಳವು ಜಾಸ್ತಿ ಇರುವಲ್ಲಿ ಒಂದು ಲೋಡು ತುಂಬಿಸಿ ಹಿಂದೆ ಹೋಗಿ ಮತ್ತೊಂದನ್ನು ತರುವುದರೊಳಗೆ ಮೊದಲು ಹಾಕಿದ್ದು ತೊಳೆದು ಹೋಗುವ ಸಾಧ್ಯತೆ ಜಾಸ್ತಿಯಷ್ಟೆ. ಹಿಂದೆ ಮುಂದೆ ಮೇಲೆ ಕೆಳಗೆ ಅತ್ತ ಇತ್ತ ಹೇಗೆ ನೋಡಿದರೂ ಸೇತುವೆ ಯಾಕೆ ಮಾಡಿರಬಹುದು ಎಂಬುದರ  ತಲೆಬುಡ ಆಗಲಿಲ್ಲ. ಯಾತಕ್ಕೂ ಇರಲಿ ಅಂತ ಒಂದಿಷ್ಟು ಫೋಟೋ ತೆಗೆದೆ. ಇತ್ತ ನಮ್ಮ ಹರಪ್ಪಾ ಮೊಹೆಂಜೋದಾರೋದ್ದೂ ಒಂದೆರಡು ಫೋಟೋ ತೆಗೆದೆ. ಈ ಗಲಾಟೆಯಲ್ಲಿ ಆ ಜಾಗದ ಉದ್ದಗಲಕ್ಕೂ ನಡೆಯುವಾಗ ಅಲ್ಲೆಲ್ಲ ಹೊಸಮಣ್ಣಿನ ಧೂಳು ತುಂಬಿಕೊಂಡಿರುವುದು ತಲೆಗೇ ಹೋಗಲಿಲ್ಲ. ಆದರೆ ಮೂಗು ಖಾಲಿ ಇತ್ತಲ್ಲ!  ಅದು ಡಾ. ಪಿ.ಜಿ.ಭಟ್ಟರ ಮಾತ್ರೆ ತಿನ್ನಿಸಿಯೇ ಬಿಟ್ಟಿತು!

ತುಂಬಿಸುವುದೋ ಖಾಲಿ ಮಾಡುವುದೋ – ಕಾಮಗಾರಿ ಮುಖ್ಯ!

ವಿಚಾರಿಸಿದಾಗ ಆ ಸೇತುವೆ ಮಾಡಿದವರು ರೈಲ್ವೆಯವರೇ ಎಂದೂ ಕಳೆದ ವರ್ಷವೂ ಇಂಥದೇ ಒಂದು ಸೇತುವೆಯನ್ನು ಮಾಡಿದ್ದರೆಂದೂ ತಿಳಿಯಿತು. ಎಷ್ಟೋ ವರ್ಷಕ್ಕೊಮ್ಮೆ ಅವರ ಸೇತುವೆಯ ಕಂಬಗಳನ್ನು ರಿಪೇರಿ ಮಾಡಲಿಕ್ಕುಂಟಂತೆ. ರಿಪೇರಿಗೆ ಬೇಕಾದ ಸಾಮಾನು ವಾಹನದಲ್ಲಿ ಸಾಗಿಸಲು ಈ ತಾತ್ಕಾಲಿಕ ಮಣ್ಣಿನ ಸೇತುವೆ! ರಿಪೇರಿ ಕೆಲಸ ಮುಗಿದ ಮೇಲೆ ಈ ತಾತ್ಕಾಲಿಕ ಸೇತುವೆಯ ಗತಿ? ತೊಳೆದುಕೊಂಡು ಮುಂದೆ ಹೋಗಬೇಕು. ಮುಂದೆ ಧಾರಾಳ ಜಾಗ ಇದೆ. ಮಂಗಳೂರು ಮಹಾನಗರ ಪಾಲಿಕೆಯವರು ನೀರು ಸಂಗ್ರಹಿಸಲೆಂದು ಅಣೆಕಟ್ಟು ಕಟ್ಟಿದ್ದಾರೆ. ಆ ಅಣೆಕಟ್ಟಿನೊಳಗೆ ಸೇರಿಕೊಂಡರಾಯಿತು. ಹೇಗೂ ಮೇಲೆ ಕಾಣುವುದು ನೀರು! ಬುಡದಲ್ಲಿ ಕೂತ ಮಣ್ಣು ಯಾರಿಗೆ ಕಾಣುತ್ತದೆ?
ರೈಲ್ವೆಯವರ ಹತ್ತಿರ ಮಣ್ಣು ತುಂಬಿಸಲು ದುಡ್ಡಿದೆ. ನಗರಪಾಲಿಕೆಯವರ ಹೂಳು ಖಾಲಿ ಮಾಡಿಸಲು ದುಡ್ಡಿದೆ. ಬೋಳಿಸಿಕೊಳ್ಳಲು ಹೇಗೂ ನಾವು ನೀವು ಇದ್ದೇವೆ!

ನೇತ್ರಾವತಿಯ ಉಸ್ತುವಾರಿಗೆ ಹಾಸನದಲ್ಲಿ ಆಫೀಸು!

ನಮ್ಮ ನೇತ್ರಾವತಿಯ ಉಸ್ತುವಾರಿಗೆ ಜನ ಇರುವುದು ಹಾಸನದಲ್ಲಿ ಅಂತ ನನಗೆ ಗೊತ್ತಿತ್ತು. ಅದು ಯಾವ ಕರ್ಮಕ್ಕೆ ಅಂತ ದ.ಕ.ದ ಊರುಗಳಲ್ಲಿ ಹರಿಯುವ ನೇತ್ರಾವತಿಯ ಉಸ್ತುವಾರಿಗೆ ಹಾಸನದಲ್ಲಿ ಜನ ಇಟ್ಟಿದೆಯೋ ನಮ್ಮ ಸರಕಾರ? ನಮ್ಮ ಜನಪ್ರತಿನಿಧಿಗಳಿಗೆ ಇದನ್ನು ಕೇಳಲು ಪುರುಸೊತ್ತಿಲ್ಲ. ಇರುವ ಪುರುಸೊತ್ತು ಅಂಗಡಿ ಪಂಗಡಿ ಟೇಪು ಕತ್ತರಿಸುವುದು, ಕಂಬಳಕ್ಕೆ  ಹೋಗುವುದು ಇದಕ್ಕೇ ಸಾಲುವುದಿಲ್ಲ.
ಏನಾದರಾಗಲಿ ಮಣ್ಣಿನ ಸೇತುವೆಯ ಕತೆ ಏನು ಅಂತ ಕೇಳಿ ಮಾಹಿತಿ ಹಕ್ಕಿನಲ್ಲಿ ನಾನು ಒಂದು ಅರ್ಜಿ ಹಾಕಿದೆ. ಮಾಹಿತಿ ಬಂತು. ಮುಂದೆ ಕೊಟ್ಟಿದ್ದೇನೆ::

ನಾನು ಕೇಳಿದ್ದು ಮಣ್ಣಿನ ಸೇತುವೆ ನಿರ್ಮಿಸಲು ನಿಮ್ಮ ಅನುಮತಿ ಬೇಕೇ ಅಂತ. ಎಂಜಿನಿಯರ್ ಹೇಳುತ್ತಾರೆ: “ರೈಲ್ವೆ ಸೇತುವೆ ನಿರ್ಮಿಸಲು ಅನುಮತಿ ಪಡೆದಿರುತ್ತಾರೆ” ಅಂತ! ಇದರ ಮೇಲೆ ರೈಲ್ವೆ ಪರ ವಕಾಲತ್ತು ಬೇರೆ: “ಅದರ ನಿರ್ವಹಣೆಯ ಸಲುವಾಗಿ” ಅಂತ. ನಿರ್ವಹಣೆಯೋ ಮತ್ತೊಂದೋ, ಮಣ್ಣಿನ ಸೇತುವೆ ನಿರ್ಮಿಸಲು ಅನುಮತಿ ಬೇಕೇ ಎನ್ನುವ ಮಾಹಿತಿ ಮಾತ್ರ ಇಲ್ಲ! ಇಂಥ ಜಾಣ ಉತ್ತರಗಳನ್ನು ಕೊಡಲು ನಮ್ಮ ಸರಕಾರಿ ಅಧಿಕಾರಿಗಳ ಹತ್ತಿರ ಕಲಿಯಬೇಕು!
ಎರಡನೆಯ ಮಾಹಿತಿಯಂತೂ ಇನ್ನೂ ಹಾಸ್ಯಾಸ್ಪದ. “ಮಣ್ಣಿನ ಏರಿಗೆ ಬಳಸಿರುವ ಸಾಮಗ್ರಿಯನ್ನು ನದಿ ಪಾತ್ರದಿಂದ ಹೊರಹಾಕುವಂತೆ ಸೂಚನೆ ನೀಡಲಾಗಿದೆ”ಯಂತೆ. ಅಂದರೆ  ನದಿಗೆ ಹಾಕಿದ ಮಣ್ಣನ್ನು ಅಲ್ಲಿಂದ ತೆಗೆಯಬೇಕು! ಆದರೆ ವಾಸ್ತವ ಏನು?
ಇದರ ಬಗ್ಗೆ ನಿಮಗೆ ಏನಾದರೂ ಗೊತ್ತೆ ಅಂತ ನಾನು ಗೆಳೆಯರೊಬ್ಬರಿಗೆ ಫೋನು ಮಾಡಿದ್ದೆ. ಅವರ ಮನೆ ಇರುವುದು ಅಲ್ಲೇ ನದಿಯ ಪಕ್ಕದಲ್ಲಿ. ಅವರೆಂದರು:
“ಕಳೆದ ಸಲವೂ ಇಂಥದೇ ಒಂದು ಸೇತುವೆ ಮಾಡಿದ್ದರು”
“ಕಡೆಗೆ ಆ ಸೇತುವೆ ಏನಾಯಿತು”?
“ಆಗುವುದೇನು? ಮಳೆಗಾಲದಲ್ಲಿ ಕೊಚ್ಚಿಕೊಂಡು ತುಂಬೆ ಅಣೆಕಟ್ಟಿಗೆ ಹೋಯಿತು”
*********************
ನದಿಗಳ ಕುರಿತಂತೆ ಒಂದು ವಿಚಾರ ಸಂಕಿರಣದ ವೀಡಿಯೋ ಯು ಟ್ಯೂಬಿನಲ್ಲಿದೆ.
ಅಲ್ಲಿದ್ದ ತಜ್ಞರೊಬ್ಬರ ಹತ್ತಿರ ಯಾರೋ ಒಂದು ಪ್ರಶ್ನೆ ಕೇಳುತ್ತಾರೆ:
“ನದಿಯ ಮುಖ್ಯ ಲಕ್ಷಣ ಏನು?”
ತಜ್ಞರ ಉತ್ತರ:
“ಹರಿಯುವುದು”!

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *