ಶ್ರೀಃ
ಪಂಪಕವಿ ವಿರಚಿತಂ
ವಿಕ್ರಮಾರ್ಜುನ ವಿಜಯಂ
ಪ್ರಥಮಾಶ್ವಾಸಂ
ಉ|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ |
ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ||
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ |
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ ||೧||
(ಶ್ರೀಯನ್ ಅರಾತಿ ಸಾಧನ ಪಯೋನಿಧಿಯೊಳ್ ಪಡೆದುಂ, ಧರಿತ್ರಿಯಂ ಜೀ ಎನೆ ಬೇಡಿ ಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿ ಕೊಂಡುಂ, ಆತ್ಮೀಯ ಸುಪುಷ್ಪಪಟ್ಟಮನ್ ಒಡಂಬಡೆ ತಾಳ್ದಿಯುಂ, ಇಂತು ಉದಾತ್ತ ನಾರಾಯಣನಾದ ದೇವನ್ ಎಮಗೆ ಈಗೆ ಅರಿಕೇಸರಿ ಸೌಖ್ಯಕೋಟಿಯಂ.)
ಲಕ್ಷ್ಮಿಯನ್ನು ವೈರಿ ಸೈನ್ಯವೆಂಬ ಸಮುದ್ರದಲ್ಲಿ ಪಡೆದವನು; ಭೂಮಿಯನ್ನು ದೈನ್ಯದಿಂದ ಬೇಡಿ ಪಡೆಯದೆ ಶತ್ರು ರಾಜರನ್ನು ಸೋಲಿಸಿ ಪಡೆದವನು; ಸುಪುಷ್ಪಪಟ್ಟವೆಂಬ ಕಿರೀಟವನ್ನು ಒಪ್ಪವಾಗಿ ಧರಿಸಿದವನು; ಹೀಗೆ ಉದಾತ್ತ ನಾರಾಯಣನೆಂಬ ಬಿರುದು ಪಡೆದ ಅರಿಕೇಸರಿಯು ನಮಗೆ ಧಾರಾಳ ಸುಖವನ್ನು ಕೊಡಲಿ.
ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತವರಪ್ರಸಾದಮು|
ಜ್ಜಳಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ||
ರ್ಮಳ ಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ|
ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ ||೨||
(ಮುಳಿಸು ಲಲಾಟ ನೇತ್ರ ಶಿಖಿ, ಮೆಚ್ಚೆ ವಿನೂತ ವರಪ್ರಸಾದಂ, ಉಜ್ಜಳ ಜಸಂ ಅಂಗ ಸಂಗತ ಲಸತ್ ಭಸಿತಂ, ಪ್ರಭುಶಕ್ತಿ ಶಕ್ತಿ, ನಿರ್ಮಳ ಮಣಿಭೂಷಣಂ ಫಣಿವಿಭೂಷಣಂ ಆಗೆ, ನೆಗೞ್ತೆಯಂ ಪುದುಂಗೊಳಿಸಿದನ್ ಈಶ್ವರಂ, ನೆಗೞ್ದುದಾರ ಮಹೇಶ್ವರನ್ ಈಗೆ ಭೋಗಮಂ.)
ಇಲ್ಲಿ ಕವಿ ಈಶ್ವರನನ್ನೂ ಅರಿಕೇಸರಿಯನ್ನೂ ಒಟ್ಟಿಗೆ ಸ್ತೋತ್ರ ಮಾಡಿ ಅರಿಕೇಸರಿ ಉದಾರ ಮಹೇಶ್ವರನೆಂಬುದನ್ನು ಪ್ರತಿಪಾದಿಸಿದ್ದಾನೆ.
ಇವನದು ಕೋಪ, ಅವನದು ಹಣೆಗಣ್ಣ ಬೆಂಕಿ; ಇವನದು ಮೆಚ್ಚುಗೆ, ಅವನದು ಪ್ರಸಾದ; ಇವನದು ಶೋಭಿಸುವ ಯಶಸ್ಸು, ಅವನದು ಮೈಗೆಲ್ಲ ಬಳಿದ ವಿಭೂತಿ; ಇವನದು ಪ್ರಭುಶಕ್ತಿ, ಅವನದು ಶಕ್ತಿದೇವತೆ; ಇವನದು ನಿರ್ಮಲ ಮಣಿಗಳ ಅಲಂಕಾರ, ಅವನದು ಸರ್ಪದ ಅಲಂಕಾರ. ಹೀಗೆ, ಹಲವು ಲಕ್ಷಣಗಳಿಂದ ಕೂಡಿ ಖ್ಯಾತನಾದ ಈಶ್ವರನೂ, ಸಮಾಂತರ ಲಕ್ಷಣಗಳನ್ನು ಹೊಂದಿ ಖ್ಯಾತನಾದ ಉದಾರ ಮಹೇಶ್ವರನೆಂಬ ಬಿರುದು ಹೊತ್ತ ಅರಿಕೇಸರಿಯೂ ನಮಗೆ ಭೋಗವನ್ನು ಕೊಡಲಿ.
ಉ|| ಚಂಡವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ |
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ ||
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ |
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ ||೩||
(ಚಂಡ ವಿರೋಧಿ ಸಾಧನ ತಮಸ್ತಮಂ ಓಡೆ, ವಿಶಿಷ್ಟ ಪದ್ಮಿನೀ ಷಂಡಂ ಅರಲ್ದು ರಾಗದಿನ್ ಒಱಲ್ದು ಇರೆ, ಯಾಚಕ ಭೃಂಗಕೋಟಿ ಕೈಕೊಂಡು ನಿರಂತರಂ ತಗುಳ್ದು ಕೀರ್ತಿಸೆ, ಮಿಕ್ಕು ಎಸೆವ ಪ್ರಚಂಡ ಮಾರ್ತಾಂಡನ್ ಅಲರ್ಚುಗೆ ಎನ್ನ ಹೃದಯ ಅಂಬುಜಮಂ ನಿಜ ವಾಕ್ ಮರೀಚಿಯಿಂ.)
ಈ ಪದ್ಯವನ್ನು ಸೂರ್ಯ ಹಾಗೂ ಅರಿಕೇಸರಿ ಇಬ್ಬರಿಗೂ ಅನ್ವಯವಾಗುವಂತೆ ಕವಿ ರಚಿಸಿದ್ದಾನೆ.
ಸೂರ್ಯನ ಪರವಾಗಿ:
ಸೂರ್ಯೋದಯವಾದಾಗ ಕತ್ತಲೆಯು ಓಡಿಹೋಯಿತು. ಕೊಳದಲ್ಲಿ ತುಂಬಿದ ಕಮಲಗಳು ಅರಳಿ ಪ್ರೀತಿಯಿಂದ ನೋಡಿದವು. ದುಂಬಿಗಳು ಅವಿರತ ಝೇಂಕಾರ ಎಲ್ಲೆಡೆಯೂ ಕೇಳಿಸಿತು. ಇಂತಹ ಸೂರ್ಯನು ತನ್ನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.
ಅರಿಕೇಸರಿಯ ಪರವಾಗಿ:
ಶತ್ರುಗಳು ಓಡಿಹೋದರು. ಪದ್ಮಿನೀ ಸ್ತ್ರೀಯರು ಮುಖವರಳಿಸಿ ಪ್ರೀತಿಯಿಂದ ನೋಡಿದರು. ಭಿಕ್ಷುಕರು ನಿರಂತರವಾಗಿ, ಬೆಂಬಿಡದೆ ಹೊಗಳಿದರು. ಇಂತಹ ‘ಪ್ರಚಂಡ ಮಾರ್ತಾಂಡ’ನಾದ ಅರಿಕೇಸರಿಯು ತನ್ನ ಮಾತಿನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.
ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು ಸ |
ನ್ನಹಿತವೆನಿಪ್ಪಪೂರ್ವ ಶುಭ ಲಕ್ಷಣ ದೇಹದೊಳೊಳ್ಪನಾಳ್ದು ಸಂ ||
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ |
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ ||೪||
(ಸಹಜದ ಚೆಲ್ವಿನೊಳ್, ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು, ಸನ್ನಹಿತ ಎನಿಪ್ಪ ಅಪೂರ್ವ ಶುಭ ಲಕ್ಷಣ ದೇಹದೊಳ್ ಒಳ್ಪನ್ ಆಳ್ದು, ಸಂದ ಅಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನ್, ಆಗಳುಂ ಸಹಜ ಮನೋಜನ ಓಜನ್ ಎಮಗೀಗೆ ವಿಚಿತ್ರ ರತೋತ್ಸವಂಗಳಂ.)
ಅರಿಕೇಸರಿಯನ್ನೂ ಮನ್ಮಥನನ್ನೂ ಒಟ್ಟಿಗೆ ಹೊಗಳಿ ಅರಿಕೇಸರಿ ಕಾಮನನ್ನು ಮೀರಿಸಿದವನೆಂದು ಈ ಪದ್ಯದಲ್ಲಿ ವರ್ಣಿಸಲಾಗಿದೆ.
ಅರಿಕೇಸರಿಗೆ ಹುಟ್ಟಿನಿಂದಲೇ ಬಂದ ಸಹಜವಾದ ಚೆಲುವು ಇದೆ. ಮನ್ಮಥನು ಹುಟ್ಟಿನಿಂದಲೇ ಚೆಲುವನಾಗಿದ್ದಿರಬಹುದು, ಆದರೆ ನಂತರ ಅವನು ದೇಹವನ್ನು ಕಳೆದುಕೊಂಡಿದ್ದಾನೆ. ಅರಿಕೇಸರಿಯು ರತಿಕೇಳಿಯಲ್ಲಿ ಸೋಲುವವನಲ್ಲ. ಆದರೆ ಮನ್ಮಥನು ಹಾಗಲ್ಲ. ಏಕೆಂದರೆ ರತಿಯು ಅವನ ಹತ್ತಿರ ‘ಸೋಲ’ವನ್ನು ಕೇಳುತ್ತಾಳೆ. ಅರಿಕೇಸರಿಯು ತನ್ನ ಲಕ್ಷಣವಾದ ದೇಹವನ್ನು ಅಲಂಕರಿಸಿಕೊಂಡು ಸುಂದರವಾಗಿ ಕಾಣುತ್ತಾನೆ. ಮನ್ಮಥನಿಗೆ ದೇಹವಿಲ್ಲವಾದ್ದರಿಂದ ಅಲಂಕರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅರಿಕೇಸರಿಯು ಶಿವನ ಕರುಣೆಯನ್ನು ಪಡೆದಿದ್ದಾನೆ; ಮನ್ಮಥನು ಶಿವನ ಶಾಪಕ್ಕೆ ಪಾತ್ರನಾಗಿದ್ದಾನೆ. ಹೀಗೆ ಹಲವು ದೃಷ್ಟಿಗಳಿಂದ ಅರಿಕೇಸರಿಯು ಮನ್ಮಥನಿಗಿಂತಲೂ ಮಿಗಿಲಾದವನು, ಮನ್ಮಥನನ್ನು ಗೆದ್ದವನು. ಇಂಥ ‘ಸಹಜ ಮನೋಜ’ನೂ, (ಮನ್ಮಥನ) ಗುರುವೂ ಆದ ಅರಿಕೇಸರಿಯು ನಮಗೆ ವಿಚಿತ್ರವಾದ ರತೋತ್ಸವಗಳನ್ನು ಕೊಡಲಿ.
ಚಂ|| ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವನಾವನುಮಿಲ್ಲೆನಲ್ ತದ |
ಕ್ಷಯನಿಧಿ ತಾನೆ ತನ್ನನೊಸೆದೊಲಗಿಪಂಗರಿದಿಲ್ಲೆನಿಪ್ಪ ವಾ ||
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ |
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧಬುದ್ಧಿಯಂ || ೫ ||
(ಕ್ಷಯಮ್ ಅಣಮ್ ಇಲ್ಲ, ಕೇಳ್ದು ಕಡೆಗಂಡವನ್ ಆವನುಂ ಇಲ್ಲ ಎನಲ್, ತದಕ್ಷಯ ನಿಧಿ ತಾನೆ? ತನ್ನನ್ ಒಸೆದು ಓಲಗಿಪಂಗೆ ಅರಿದಿಲ್ಲ ಎನಿಪ್ಪ ವಾಙ್ಮಯಮ್ ಅನಿತರ್ಕಂ ಅಂಬಿಕೆ ಸರಸ್ವತಿ, ಮನ್ಮುಖ ಪದ್ಮರಂಗದ ಏೞ್ಗೆಯನ್ ಎಡೆಗೊಂಡು, ಕೊಂಡು ಕೊನೆದು, ಈಗೆ ಅರಿಗಂಗೆ ವಿಶುದ್ಧ ಬುದ್ಧಿಯಂ.)
ವಿದ್ಯೆಗೆ ನಾಶವಿಲ್ಲ; ಅದನ್ನು ಕೇಳಿ ಮುಗಿಸಿದವನು ಯಾರೂ ಇಲ್ಲ. ಹಾಗಾಗಿಯೇ ಅದು ‘ಅಕ್ಷಯ ನಿಧಿ’ ಎಂದು ಕರೆಸಿಕೊಂಡಿರುವುದು ತಾನೆ? ಯಾರು ಪ್ರೀತಿಯಿಂದ ಆ ವಿದ್ಯೆಯ ಸೇವೆ ಮಾಡುತ್ತಾರೋ ಅಂಥವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅಂಥ ವಿದ್ಯೆಗೆ ತಾಯಿಯಾದ ಸರಸ್ವತಿ ನನ್ನ ಮುಖದಲ್ಲಿ ನೆಲೆಸಿ, ಸಂತೋಷದಿಂದ ಅರಿಕೇಸರಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ.
(ಪದ್ಯದ ಮೊದಲ ಸಾಲಿನಲ್ಲಿ ‘ಕೇಳ್ದು ಕಡೆಗಂಡವನ್’ ಎಂಬ ಮಾತಿದೆ. ಬರೆಯುವ ಪದ್ಧತಿ ಜಾರಿಗೆ ಬರುವ ಮೊದಲು ಒಬ್ಬರಿಂದೊಬ್ಬರು ಕೇಳಿ ಕಲಿಯುವ ಪದ್ಧತಿ ಇತ್ತು. ಪಂಪನ ಕಾಲಕ್ಕಾಗಲೇ ಬರವಣಿಗೆ ಚಾಲ್ತಿಗೆ ಬಂದಿತ್ತಾದರೂ, ಕೇಳಿ ಕಲಿಯುವ ಪದ್ಧತಿ ಸಂಪೂರ್ಣ ನಾಶವಾಗಿದ್ದಿರಲಾರದು. ‘ಬಹುಶ್ರುತ’ ಎಂದರೆ ‘ತುಂಬಾ ಕೇಳಿದವನು’ – ದೊಡ್ಡ ವಿದ್ವಾಂಸ. ಆದ್ದರಿಂದ ಇಲ್ಲಿ ‘ಕೇಳಿ’ ಎಂದರೆ ‘ಓದಿ’ ಎಂದೇ ಅರ್ಥ.)
ಚಂ|| ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು |
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ ಮೃಣಾಳಮಾಗೆ ಮಿ ||
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಿಸುತಿಂತೆ ತನ್ನ ಕೂ |
ರಸಿಯೊಳಡುರ್ತು ಕೊಂದಸಿಯಳಿರ್ಕಸಿಯೊಳ್ ಪಡೆ ಮೆಚ್ಚೆ ಗಂಡನಾ || ೬ ||
(ತಿಸುಳದೊಳ್ ಉಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ, ಕಣ್ಗೆ ಅಗುರ್ವಿಸುವಿನಂ ಒಕ್ಕು ನೇಲ್ವ ಕರುಳ ಓಳಿಯೆ ಬಾಳ ಮೃಣಾಳಮಾಗೆ, ಮಿಕ್ಕ ಅಸುರರ ಮೆಯ್ಯೊಳ್ ಆದ ವಿರಹಾಗ್ನಿಯನ್ ಆರಿಸುತೆ ಇಂತೆ, ತನ್ನ ಕೂರಸಿಯೊಳ್ ಅಡುರ್ತು ಕೊಂದ ಅಸಿಯಳ್, ಇರ್ಕೆ ಅಸಿಯೊಳ್ ಪಡೆ ಮೆಚ್ಚೆ ಗಂಡನಾ.)
ಈ ಪದ್ಯದಲ್ಲಿ ಕವಿ ದುರ್ಗಾದೇವಿಯನ್ನು ಪ್ರಾರ್ಥಿಸಿದ್ದಾನೆ. ಆಕೆಯ ತ್ರಿಶೂಲದಿಂದ ಚಿಮ್ಮುವ ರಾಕ್ಷಸರ ತಾಜಾ ರಕ್ತವೇ ಕೆಂಬಣ್ಣದ ಚಿಗುರಾಯಿತು. ಭೀಕರವಾಗಿ ಕಾಣುವ ಅವರ ಕರುಳ ಮಾಲೆಯೇ ಎಳೆಯ ತಾವರೆಯ ದಂಟಾಯಿತು. ಹೀಗೆ ತನ್ನ ಹರಿತವಾದ ಕತ್ತಿಯನ್ನು ಹಿಡಿದು ಮುನ್ನುಗ್ಗಿ ದುರ್ಗೆಯು ರಾಕ್ಷಸರನ್ನು ಕೊಂದು, ಹೆಚ್ಚಿಕೊಂಡ ಅವರ ವಿರಹಾಗ್ನಿಯನ್ನು ತಣಿಸಿದಳು. ಅಂಥ ದುರ್ಗೆಯು ‘ಪಡೆ ಮೆಚ್ಚೆ ಗಂಡ’ನಾದ ಅರಿಕೇಸರಿಯ ಕತ್ತಿಯಲ್ಲಿ ನೆಲೆಸಿರಲಿ.
(“ಕಾಮಸಂತಾಪವನ್ನು ಶಮನಗೊಳಿಸುವುದಕ್ಕಾಗಿ ಚಿಗುರನ್ನೂ ತಾವರೆಯ ದಂಟನ್ನೂ ವಿರಹಿಗಳು ಉಪಯೋಗಿಸುವುದು ಪದ್ಧತಿ. ಇಲ್ಲಿ ಆದಿಶಕ್ತಿ ಸ್ವರೂಪಳಾದ ಕಾಳಿಯನ್ನು, ತ್ರಿಪುರಸುಂದರಿಯನ್ನು ಮೋಹಿಸಿ ಬಂದ ಶುಂಭ ನಿಶುಂಭಾದಿ ಉದ್ಧತ ರಾಕ್ಷಸರ ವಿರಹಾಗ್ನಿಯನ್ನು ಆರಿಸಲು ಅವರ ಬಿಸಿನೆತ್ತರನ್ನೂ ಕರುಳಮಾಲೆಯನ್ನೂ ಬಳಸಿತೆಂದು ಹೇಳಿದೆ” – ಡಿ.ಎಲ್.ಎನ್.)
ಮಲ್ಲಿಕಾಮಾಲೆ|| ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ |
ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ ||
ನ್ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ |
ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ || ೭ ||
(ಎನ್ನ ದಾನಂ ಇದು ಆಗಳುಂ ಮಧುಪಾಶ್ರಯಂ, ಧರೆಗೆ ಅವ್ಯವಚ್ಛಿನ್ನ ದಾನಂ ಇದು ಆಗಳುಂ ವಿಬುಧ ಆಶ್ರಯಂ ಗೆಲೆವಂದನ್ ಎನ್ನನ್ ನಿಜ ಉನ್ನತಿಯಿಂದಂ ಈ ಪತಿ ಎಂದು ಮೆಚ್ಚಿ ವಿನಾಯಕಂ ತಾನ್ ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ.)
‘ದಾನ’ ಶಬ್ದವನ್ನು ಕವಿ ಇಲ್ಲಿ ಎರಡು ಅರ್ಥಗಳಲ್ಲಿ ಬಳಸಿದ್ದಾನೆ. ದಾನ ಎಂದರೆ ಪ್ರಸಿದ್ಧ ಅರ್ಥ ‘ದಾನ’. ಅಷ್ಟೇನೂ ಪ್ರಸಿದ್ಧವಲ್ಲದ ಮತ್ತೊಂದು ಅರ್ಥ ‘ಆನೆಯ ಮದದ ನೀರು’.
“ನನ್ನ ಮದದ ನೀರು ಬರಿಯ ದುಂಬಿಗಳಿಗೆ ಆಶ್ರಯ ಕೊಟ್ಟರೆ, ಅರಿಕೇಸರಿಯು ನೀಡುವ ದಾನ ಪಂಡಿತರಿಗೆ ಆಶ್ರಯ ಕೊಡುತ್ತದೆ. ಎಂದಮೇಲೆ ಈ ಅರಿಕೇಸರಿಯು ನಿಜವಾದ ಯೋಗ್ಯತೆಯ ಮೂಲಕವೇ ನನ್ನನ್ನು ಮೀರಿಸುತ್ತಾನೆ” ಎಂದು ಮೆಚ್ಚಿ ವಿನಾಯಕನು ಅರಿಕೇಸರಿ ರಾಜನ ಕುರಿತಾದ ಈ ಕಾವ್ಯವನ್ನು ಪ್ರೀತಿಯಿಂದ ವಿಸ್ತರಿಸಲಿ.
ಚಂ|| ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್ |
ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ ||
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬೞಲ್ದು ತುಂ |
ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್ ||೮||
(ಬಗೆ ಪೊಸತು ಅಪ್ಪುದು, ಆಗಿ ಮೃದುಬಂಧದೊಳ್ ಒಂದುವುದು, ಒಂದಿ ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯಬಂಧಂ ಒಪ್ಪುಗುಂ ಎಳಮಾವು ಕೆಂದಳಿರ, ಪೂವಿನ, ಬಿಣ್ಪೊಱೆಯಿಂ ಬೞಲ್ದು, ತುಂಬಿಗಳಿನೆ ತುಂಬಿ, ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆವೋಲ್)
ಕಾವ್ಯಬಂಧವು ಹೇಗಿರಬೇಕೆಂಬುದನ್ನು ಕವಿ ಇಲ್ಲಿ ಹೇಳುತ್ತಾನೆ.
ಆಲೋಚನೆ ಅಥವಾ ಕಲ್ಪನೆ ಹೊಸತಾಗಿರಬೇಕು. ಅದನ್ನು ಮೃದುವಾದ (ಯೋಗ್ಯವಾದ) ಶಬ್ದಗಳಲ್ಲಿ ಜೋಡಿಸಬೇಕು. ಹಾಗೆ ಜೋಡಿಸಿ ದೇಸಿಯಲ್ಲಿ ಹೊಗಿಸಬೇಕು. ನಂತರ ಅದನ್ನು ಮಾರ್ಗದಲ್ಲಿ ಸೇರಿಸಬೇಕು. ಹೀಗೆ ಸೇರಿಸಿದರೆ ಕಾವ್ಯಬಂಧವು ಸುಗ್ಗಿಯ ಕಾಲದಲ್ಲಿ ಎಳಮಾವು, ಕೆಂಪು ಚಿಗುರುಗಳ ಹಾಗೂ ಹೂವುಗಳ ಭಾರಕ್ಕೆ ಬಳಲಿ, ದುಂಬಿಗಳಿಂದ ತುಂಬಿ, ಹಾಡುವ ಕೋಗಿಲೆಗಳಿಗೆ ಆಶ್ರಯವಾಗಿ ಮನೋಹರವಾಗಿ ಒಪ್ಪುವಂತೆ, ಶೋಭಿಸುತ್ತದೆ.
ಉ|| ಆ ಸಕಳಾರ್ಥಸಂಯುತಮಳಂಕೃತಿಯುಕ್ತಮುದಾತ್ತ [ವೃತ್ತಿ] ವಿ |
ನ್ಯಾಸಮನೇಕ ಲಕ್ಷಣ ಗುಣ ಪ್ರಭವಂ ಮೃದುಪಾದಮಾದ ವಾ ||
ಕ್ಶ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ |
ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ ||೯||
(ಆ ಸಕಳ ಅರ್ಥ ಸಂಯುತಂ, ಅಳಂಕೃತಿ ಯುಕ್ತಂ, ಉದಾತ್ತ ವೃತ್ತಿ ವಿನ್ಯಾಸಂ, ಅನೇಕ ಲಕ್ಷಣ ಗುಣ ಪ್ರಭವಂ, ಮೃದುಪಾದಂ ಆದ, ವಾಕ್ ಶ್ರೀ ಸುಭಗಂ ಕಳಾಕಳಿತಂ ಎಂಬ ನೆಗೞ್ತೆಯನ್ ಆಳ್ದ, ಕಬ್ಬಮಂ ಕೂಸುಮನ್ ಈವುದು, ಈವುದು ಅರಿಕೇಸರಿಗೆ ಅಲ್ಲದೆ ಅವಸ್ತುಗೆ ಈವುದೇ?)
೩ನೆಯ ಪದ್ಯದಂತೆ ಇಲ್ಲಿಯೂ ಕವಿ ಎರಡರ್ಥ ಬರುವಂತೆ ಪದಪುಂಜಗಳನ್ನು ಬಳಸಿದ್ದಾನೆ. ಕಾವ್ಯ ಹಾಗೂ ಕನ್ನಿಕೆಯ ವರ್ಣನೆಗಳು ಇಲ್ಲಿ ಇವೆ.
ಕಾವ್ಯದ ಪರವಾಗಿ:
ಎಲ್ಲ ಅರ್ಥಗಳನ್ನೂ ಒಳಗೊಂಡದ್ದು, ಕಾವ್ಯಾಲಂಕಾರಗಳಿಂದ ಕೂಡಿರುವುದು, ಉದಾತ್ತ ವೃತ್ತಿಗಳನ್ನು ಒಳಗೊಂಡದ್ದು, ಕಾವ್ಯ ಲಕ್ಷಣಗಳಿಗೆ ಜನ್ಮಸ್ಥಾನವಾದದ್ದು, ಮೃದುವಾದ ಪದ್ಯಪಾದಗಳಿರುವಂಥದು, ಮಾತಿನ ಸಿರಿಯಿಂದ ಸುಂದರವಾದದ್ದು, ಕಲೆಗಳಿಂದ ಕೂಡಿರುವುದು – ಎಂಬ ಖ್ಯಾತಿಯು ಕಾವ್ಯಕ್ಕಿದೆ. ಅಂತಹ ಕಾವ್ಯವನ್ನು ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
ಕನ್ನಿಕೆಯ ಪರವಾಗಿ:
ಎಲ್ಲ ಸಂಪತ್ತುಗಳನ್ನೂ ಹೊಂದಿದವಳು, ಸುಂದರವಾಗಿ ಅಲಂಕರಿಸಿಕೊಂಡವಳು, ಉತ್ತಮ ನಡವಳಿಕೆಯುಳ್ಳವಳು, ಅನೇಕ ಲಕ್ಷಣಗಳನ್ನೂ ಗುಣಗಳನ್ನೂ ಹೊಂದಿದವಳು, ಕಲೆಗಳನ್ನು ಬಲ್ಲವಳು ಎಂದು ಖ್ಯಾತಳಾದ ಕನ್ನಿಕೆಯನ್ನು ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
(ಕಾವ್ಯವನ್ನು ರಾಜನಿಗೆ ಅರ್ಪಿಸಬೇಕೆನ್ನುವುದು ಅರ್ಥವಾಗುವ ಮಾತು. ಕನ್ನಿಕೆಯನ್ನು ಅರ್ಪಿಸುವುದೆಂದರೆ? ಅಂಥದೊಂದು ಪದ್ಧತಿ ಪಂಪನ ಕಾಲದಲ್ಲಿ ಇದ್ದಿರಬಹುದೆ?)
ಚಂ|| ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ |
ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ ||
ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ |
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ ಗುಣಾರ್ಣವಂ ||೧೦||
(ಕವಿಗಳ, ನಾಮಧಾರಕ ನರಾಧಿಪರ ಓಳಿಯೊಳ್, ಈತನ್ ಒಳ್ಳಿದಂ ಕವಿ, ನೃಪನೀತನ್ ಒಳ್ಳಿದನ್, ಎನಲ್ ದೊರೆಯಲ್ತು, ನೆಗೞ್ತೆವೆತ್ತ ಸತ್ಕವಿಗಳ, ಷೋಡಶ ಅವನಿಪರ ಓಳಿಯೊಳಂ, ಕವಿತಾ ಗುಣಾರ್ಣವಂ ಕವಿತೆಯೊಳ್ ಅಗ್ಗಳಂ, ಗುಣದೊಳ್ ಅಗ್ಗಳಂ ಎಲ್ಲಿಯುಂ ಈ ಗುಣಾರ್ಣವಂ.)
ಈ ಪದ್ಯದಲ್ಲಿ ಕವಿ ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ, ತನ್ನ ಆಶ್ರಯದಾತನಾದ ಅರಿಕೇಸರಿಯನ್ನೂ ಹೊಗಳುತ್ತಾನೆ.
ಕೇವಲ ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ಕವಿ’ ಎನಿಸಿಕೊಳ್ಳುವುದರಲ್ಲಿ ಆಗಲಿ, ಹೆಸರಿಗೆ ಮಾತ್ರ ರಾಜರೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ರಾಜ’ ಎನಿಸಿಕೊಳ್ಳುವುದರಲ್ಲಿ ಆಗಲಿ ಹೆಚ್ಚುಗಾರಿಕೆ ಏನಿದೆ? ಪ್ರಖ್ಯಾತವಾದ ಉತ್ತಮ ಕವಿಗಳ ಸಾಲಿನಲ್ಲಿ ಈ ‘ಕವಿತಾಗುಣಾರ್ಣವ’ನು ಶ್ರೇಷ್ಠ ಕವಿ; ಹಾಗೆಯೇ ಪ್ರಸಿದ್ಧರಾದ ಹದಿನಾರು ರಾಜರುಗಳ ಸಾಲಿನಲ್ಲಿ ‘ಗುಣಾರ್ಣವ’ ನೆಂಬ ಬಿರುದು ಪಡೆದ ಅರಿಕೇಸರಿಯು ಶ್ರೇಷ್ಠ ರಾಜ.
ಚಂ|| ಕತೆ ಪಿರಿದಾದೊದಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ |
ರತಮನಪೂರ್ವಮಾಗೆ ಸಲೆ ಪೇೞ್ದ [ಕವೀಶ್ವರರಿ]ಲ್ಲ ವರ್ಣಕಂ ||
ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ |
ಡಿತರೆ ತಗುಳ್ದು ಬಿಚ್ಚೞಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ ||೧೧||
(ಕತೆ ಪಿರಿದು ಆದೊಡಂ, ಕತೆಯ ಮೆಯ್ ಕಿಡಲ್ ಈಯದೆ, ಮುಂ ಸಮಸ್ತ ಭಾರತಮನ್ ಅಪೂರ್ವಂ ಆಗೆ ಸಲೆ ಪೇೞ್ದ ಕವೀಶ್ವರರ್ ಇಲ್ಲ, ವರ್ಣಕಂ ಕತೆಯೊಳ್ ಒಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಂ ಎಂದು ಪಂಡಿತರೆ ತಗುಳ್ದು ಬಿಚ್ಚೞಿಸೆ, ಪೇೞಲ್ ಒಡರ್ಚಿದೆನ್ ಈ ಪ್ರಬಂಧಮಂ.)
“ಮಹಾಭಾರತದ ಕತೆಯು ವಿಸ್ತಾರವಾದುದು. ಈ ಮೊದಲು ಆ ಕತೆಯನ್ನು ‘ಇಂಥದ್ದು ಹಿಂದೆಂದೂ ಇರಲಿಲ್ಲ’ ಎನ್ನುವ ಹಾಗೆ ಹೇಳಿದ ಕವಿಗಳು ಯಾರೂ ಇಲ್ಲ. ಕತೆಯ ವಿವರಗಳಲ್ಲಿ ವರ್ಣನೆಗಳನ್ನು ಒಪ್ಪುವಂತೆ ಸೇರಿಸಿ ಹೇಳುವ ಶಕ್ತಿ ಇರುವುದು ಪಂಪನಿಗೇ ಸರಿ” ಎಂದು ಪಂಡಿತರುಗಳೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹಾಗಾಗಿ ನಾನು ಈ ‘ಸಮಸ್ತ ಭಾರತ’ವನ್ನು ಹೇಳಲು ತೊಡಗಿದ್ದೇನೆ.
ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ |
ಳ್ಗಳ ಕೃತಿಬಂಧಮುಂ ಬರೆ[ಪ]ಕಾಱರ ಕೈಗಳ ಕೇಡು ನುಣ್ಣನ ||
ಪ್ಪಳಕದ ಕೇಡು ಪೇೞಿಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ |
ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ ||೧೨||
(ಲಲಿತಪದಂ ಪ್ರಸನ್ನ ಕವಿತಾ ಗುಣಂ ಇಲ್ಲದೆ, ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱರ ಕೈಗಳ ಕೇಡು, ನುಣ್ಣನ ಅಪ್ಪಳಕದ ಕೇಡು, ಪೇೞಿಸಿದೊಡರ್ಥದ ಕೇಡು ಎನೆ, ಪೇೞ್ದು, ಬೀಗಿ, ಪೊಟ್ಟಳಿಸಿ, ನೆಗೞ್ತೆಗೆ ಆಟಿಸುವ ದುಷ್ಕವಿಯುಂ ಕವಿ ಎಂಬ ಲೆಕ್ಕಮೇ?)
ಈ ಪದ್ಯದಲ್ಲಿ ಕವಿಯು ಸಂಪ್ರದಾಯದಂತೆ ಕೆಟ್ಟ ಕವಿಗಳನ್ನು ನಿಂದಿಸಿದ್ದಾನೆ.
ಕೆಲವು ದಡ್ಡರು ಸುಂದರವಾದ ಶಬ್ದಗಳಿಲ್ಲದ, ಮನಸ್ಸಿಗೆ ಮುದ ನೀಡುವ ಕಾವ್ಯಗುಣಗಳಿಲ್ಲದ ಕೃತಿಗಳನ್ನು ರಚಿಸುತ್ತಾರೆ. ಅಂತಹ ಕಾವ್ಯಗಳನ್ನು ಪ್ರತಿ ಮಾಡಿಸಿದರೆ ಅದು ಪ್ರತಿಕಾರರ ಶ್ರಮವನ್ನು ದಂಡ ಮಾಡಿದಂತೆ; ಬರೆಯಲು ಬಳಸುವ ನುಣ್ಣನೆಯ ಓಲೆಗಳನ್ನು ಹಾಳು ಮಾಡಿದಂತೆ; ತುಂಬಿದ ಸಭೆಯಲ್ಲಿ ಓದಿಸಿದರೆ ಕಾವ್ಯದ ಅರ್ಥವನ್ನೂ, ಓದಿಸಿದವರ ಹಣವನ್ನೂ ವ್ಯರ್ಥ ಮಾಡಿದಂತೆ. ಹೀಗಿದ್ದರೂ ಸಹ ಕೆಲವರು ಕಾವ್ಯವನ್ನು ರಚಿಸುತ್ತಾರೆ; ತಾನೇ ದೊಡ್ಡ ಕವಿ ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ; ತನಗೇ ಕೀರ್ತಿ ಸಿಗಬೇಕೆಂದು ಆಸೆಪಡುತ್ತಾರೆ! ಅಂಥ ಕೆಟ್ಟ ಕವಿಗಳನ್ನೂ ಕವಿಗಳ ಲೆಕ್ಕಕ್ಕೆ ಸೇರಿಸಲು ಸಾಧ್ಯವೆ?
ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ |
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ ||
ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮ[ೞ್ತಿ]ಗಂ
ದೋಷಮೆ ಕಾಣೆನೆನ್ನಱಿವ ಮಾೞ್ಕೆಯೆ ಪೇೞ್ವೆನಿದಾವ ದೋಷಮೋ ||೧೩||
(ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ ಈಸುವೆಂ, ಕವಿ ವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ, ಗುಣಾರ್ಣವನ ಒಳ್ಪು ಮನ್ಮನೋವಾಸಮನ್ ಎಯ್ದೆ ಪೇೞ್ದಪೆನ್, ಅದಲ್ಲದೆ ಗರ್ವಮೆ ದೋಷಂ, ಅೞ್ತಿಗಂ ದೋಷಮೆ? ಕಾಣೆನ್, ಎನ್ನ ಅಱಿವ ಮಾೞ್ಕೆಯೆ ಪೇೞ್ವೆನ್ ಇದಾವ ದೋಷಮೋ?)
‘ವ್ಯಾಸ ಮುನಿಯಿಂದ ರಚಿತವಾದ ಮಹಾಭಾರತವು ಮಾತಿನಮೃತದ ಒಂದು ಕಡಲು. ನಾನು ಆ ಕಡಲಿನಲ್ಲಿ ಈಜುತ್ತೇನೆ. ಆದರೆ ‘ನಾನೇ ವ್ಯಾಸ’ ಎಂಬ ಅಹಂಕಾರ ನನಗಿಲ್ಲ. ರಾಜನಾದ ಅರಿಕೇಸರಿಯ ಒಳ್ಳೆಯ ಗುಣಗಳನ್ನು ಕಂಡು ಮನಸೋತ ನಾನು ಈ ಕಾವ್ಯವನ್ನು ಹೇಳುತ್ತಿದ್ದೇನೆ. ಅದೂ ಅಲ್ಲದೆ ಅಹಂಕಾರವಾದರೆ ದೋಷ, ಪ್ರೀತಿಗೆ ದೋಷವುಂಟೆ? ಕಾಣೆನಲ್ಲ! ಹಾಗಾಗಿ, ನನಗೆ ತಿಳಿದ ಹಾಗೆ ಈ ಕಾವ್ಯವನ್ನು ಹೇಳುತ್ತೇನೆ.
ಚಂ|| ವಿಪುಳ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ|
ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ ||
ಮಿಪರುಮನೊಳ್ಪಿನೊಳ್ ತಗುಳೆವಂದೊಡೆಯೀ ಕಥೆಯೊಳ್ ತಗುಳ್ಚಿ ಪೋ |
ಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ||೧೪||
(ವಿಪುಳ ಯಶೋವಿತಾನ ಗುಣಂ ಇಲ್ಲದನಂ ಪ್ರಭು ಮಾಡಿ, ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ, ಈತನ್ ಉದಾತ್ತ ಪೂರ್ವ ಭೂಮಿಪರುಮನ್ ಒಳ್ಪಿನೊಳ್ ತಗುಳೆ ವಂದೊಡೆ, ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆ ಎನಗೆ ಅೞ್ತಿಯಾದುದು, ಗುಣಾರ್ಣವ ಭೂಭುಜನಂ ಕಿರೀಟಿಯೊಳ್.)
ಯಾವುದೇ ಗುಣವಾಗಲಿ, ಕೀರ್ತಿಯಾಗಲಿ ಇಲ್ಲದವರನ್ನು ಸಹ ಕೆಲವರು ಹಿಂದೆ ಆಗಿಹೋದ ಮಹಾರಾಜರುಗಳಿಗೆ ಹೋಲಿಸಿಬಿಡುತ್ತಾರೆ! ಆದರೆ ಅರಿಕೇಸರಿಯು ಅಂಥವನಲ್ಲ. ಅವನು ಹಿಂದಿನ ಮಹಾರಾಜರುಗಳನ್ನು ಸಹ ಮೀರಿಸುವಷ್ಟು ಒಳ್ಳೆಯವನು, ಕೀರ್ತಿವಂತ. ಆದ್ದರಿಂದಲೇ ಈ ಕಥೆಯಲ್ಲಿ ಅವನನ್ನು ಅರ್ಜುನನೊಂದಿಗೆ ಹೋಲಿಸಲು ನನಗೆ ಇಷ್ಟವಾಯಿತು.