Untitled

ಎತ್ತಿನಹೊಳೆ ಕುರಿತ ಬೆಂಗಳೂರು ಸಭೆ: 
ಪಶ್ಚಿಮಘಟ್ಟ ಇನ್ನೂ ಅಪಾಯದತ್ತ?
ಮೊನ್ನೆ ಶನಿವಾರ (ತಾ. 19-02-2016) ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಸಭೆ ಬೆಂಗಳೂರಿನಲ್ಲಿ ನಡೆಯಿತು. ಹಿಂದಿನ ದಿನ ಈ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ್ದೆ. ಭಾಗವಹಿಸುವ ತಜ್ಞರ ಹೆಸರುಗಳನ್ನು ಕಂಡು, ಅವರೆಲ್ಲ ಏನು ಹೇಳುತ್ತಾರೆನ್ನುವುದನ್ನು ಕೇಳಲೇಬೇಕು ಅನ್ನಿಸಿದ್ದರಿಂದ ಸಭೆಗೆ ನಾನೂ ಹೋದೆ.
ಡಾ. ಮಧುಸೀತಪ್ಪನವರ ಹೆಸರು ಬಯಲುಸೀಮೆಯ “ಶಾಶ್ವತ ನೀರಾವರಿ ಹೋರಾಟ”ಕ್ಕೆ ಬಲವಾಗಿ ತಳುಕು ಹಾಕಿಕೊಂಡಿದೆ. ದ.ಕ.ದ ಭಾಗದಲ್ಲೂ ಎತ್ತಿನಹೊಳೆ ಯೋಜನೆಯ ಕುರಿತ ಹೋರಾಟ, ಅಧ್ಯಯನಗಳಲ್ಲಿ ತೊಡಗಿಕೊಂಡವರಿಗೆ ಅವರ ಹೆಸರು ಪರಿಚಿತವಾದದ್ದು. (ಎತ್ತಿನಹೊಳೆ ಯೋಜನೆಯ ಕುರಿತಂತೆ ಅವರು “ಮತ್ತೆ ಬರ ಬೇಡ” ಹಾಗೂ “ಮತ್ತೆ ದೋಖಾ ಬೇಡ” ಎಂಬ ಎರಡು ಸಿಡಿಗಳನ್ನು ಹೊರತಂದಿದ್ದಾರೆ. ಇವು ಯೋಜನೆಯಲ್ಲಿ ಆಸಕ್ತಿ ಇರುವವರು ಅಗತ್ಯ ನೋಡಬೇಕಾದವು. ಯು ಟ್ಯೂಬಿನಲ್ಲಿ ಲಭ್ಯ). ಈ ಸಭೆ ನಡೆದದ್ದು ಅವರ ಆಸಕ್ತಿಯಿಂದಾಗಿ. ಎತ್ತಿನಹೊಳೆ ಯೋಜನೆಯ ವಿಷಯದಲ್ಲಿ “ಕರ್ನಾಟಕ ನೀರಾವರಿ ವೇದಿಕೆ”  ಹೈಕೋರ್ಟಿಗೆ ಹೋಗಿದೆ. ಅಲ್ಲಿ ಅದರ ಬೇಡಿಕೆಯ ಸಾರಾಂಶ ಇಷ್ಟು: “ಸರಕಾರವು ಬಯಲುಸೀಮೆಯ ಜನರಿಗೆ ಕುಡಿಯುವ ನೀರು ಒದಗಿಸಲೆಂದು ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಯೋಜನೆಯಲ್ಲಿ ಇಪ್ಪತ್ನಾಲ್ಕು ಟಿ ಎಂ ಸಿ ನೀರನ್ನು ಬಯಲುಸೀಮೆಗೆ ಒದಗಿಸುವ ಉದ್ದೇಶವಿದೆ. ಆದರೆ ಅನೇಕ ತಜ್ಞರು ಈ ಯೋಜನೆಯಿಂದ ಇಷ್ಟು ನೀರು ಸಿಗುವುದು ಸಾಧ್ಯವೇ ಇಲ್ಲ; ಹೆಚ್ಚೆಂದರೆ ಎಂಟರಿಂದ ಹತ್ತು ಟಿಎಂಸಿ ನೀರು ಸಿಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡರೆ ಮಾತ್ರ ಇಪ್ಪತ್ತನಾಲ್ಕು ಟಿ ಎಂ ಸಿ ನೀರನ್ನು ಬಯಲುಸೀಮೆಗೆ ಒದಗಿಸಲು ಸಾಧ್ಯ. ಯಾವ ರೀತಿಯ ಬದಲಾವಣೆಗಳು ಆಗಬೇಕಾಗಿವೆ ಎಂಬುದನ್ನು ನಮ್ಮ ಸಮಿತಿಯು ಅಧ್ಯಯನ ಮಾಡಿ ವರದಿ ತಯಾರಿಸಿದೆ. ನ್ಯಾಯಾಲಯವು ನಾವು ಹೇಳಿರುವ ಬದಲಾವಣೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಲುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕು”.
ಅಂದಿನ ಸಭೆಯಲ್ಲಿ ಮುಖ್ಯವಾಗಿ ಈ ಅಂಶದ ಬಗ್ಗೆ ಚರ್ಚೆ ನಡೆದು, ತಮಗೆ ಅನುಕೂಲವಾದ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳುವುದು ಬಹುಶಃ ಡಾ. ಮಧುಸೀತಪ್ಪನವರ ಉದ್ದೇಶವಾಗಿತ್ತು. ಆದರೆ ಅವರ ಉದ್ದೇಶ ಭಾಗಶಃ ಸಫಲವಾಯಿತು ಮಾತ್ರ. ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆದದ್ದು ಎತ್ತಿನಹೊಳೆ ಯೋಜನೆಯಿಂದ ಸಿಗುವ ನೀರಿನ ಪ್ರಮಾಣದ ಬಗ್ಗೆ ಮತ್ತು ಆ ನೀರನ್ನು ಎತ್ತುವುದರಲ್ಲಿ ಇರುವ ತಾಂತ್ರಿಕ ಸಮಸ್ಯೆಯ ಕುರಿತು. ಈ ಚರ್ಚೆಯಲ್ಲಿ ಹೆಚ್ಚು ಕಡಿಮೆ ಎಲ್ಲ ತಜ್ಞರೂ ಸಕ್ರಿಯವಾಗಿ ಪಾಲುಗೊಂಡರು. ಆದರೆ ಚರ್ಚೆ ಇನ್ನೊಂದಿಷ್ಟು ಗೊಂದಲಗಳನ್ನು ಹುಟ್ಟಿಹಾಕಿತು. ಲಭ್ಯನೀರಿನ ಪ್ರಮಾಣವನ್ನು ನಿರ್ಧರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಚರ್ಚೆಯನ್ನು ಆಸಕ್ತಿಯಿಂದ ಕೇಳುತ್ತ ಕುಳಿತ ನನ್ನಂಥ ಕುತೂಹಲಿಗೆ ಅನ್ನಿಸಿದ್ದಿಷ್ಟು: ಜಲವಿಜ್ಞಾನವೆಂದರೆ ಗಿಳಿಶಾಸ್ತ್ರದಷ್ಟೇ ನಿಖರವಾದ ಒಂದು ಜ್ಞಾನಶಾಖೆ!

ವಿಜೃಂಭಿಸಿದ ಚರ್ಚೆ: ಬಾರದ ಫಲಿತಾಂಶ

ಈ ಯೋಜನೆಯಲ್ಲಿ ಮಳೆಗಾಲದಲ್ಲಿ ಎತ್ತಿನಹೊಳೆ ಪ್ರದೇಶದ ಹಲವು ತೊರೆಗಳಲ್ಲಿ ಬರುವ ಪ್ರವಾಹದ ನೀರನ್ನು  ಬಯಲುಸೀಮೆಗೆ ಸಾಗಿಸುವ ಉದ್ದೇಶವಿದೆ. ಈ ಪ್ರವಾಹದ ನೀರನ್ನು ಹಿಡಿಯಲು ಈಗ ಮಾಡಿರುವ ವ್ಯವಸ್ಥೆ ತಜ್ಞರ ನಡುವೆ ಚರ್ಚೆಗೆ ಬಂತು. ಸರಳವಾಗಿ ಹೇಳಬೇಕೆಂದರೆ, ಮಳೆಗಾಲದಲ್ಲಿ ಈ ಭಾಗದ ಬೆಟ್ಟ ಗುಡ್ಡಗಳಲ್ಲಿ ಬಿದ್ದ ಮಳೆನೀರು ನದಿಗೆ ಹೇಗೆ ಸೇರುತ್ತದೆ ಎಂಬ ಪ್ರಶ್ನೆಗೆ  ಉತ್ತರ ಕಂಡುಕೊಳ್ಳಬೇಕಾಯಿತು. ಚರ್ಚೆ ಶುರುವಾಯಿತು:


ಒಂದನೇ ತಜ್ಞ: ಬೆಟ್ಟಪ್ರದೇಶದಲ್ಲಿ ಮಳೆ ಬಿದ್ದ ಕೂಡಲೇ ತೊರೆಗಳಲ್ಲಿ ನೀರು ಏರುತ್ತದೆ. ಮಳೆ ಇಂತಿಷ್ಟೇ ಹೊತ್ತಿಗೆ ಬರುತ್ತದೆ ಎಂದು ನಿಖರವಾಗಿ ಹೇಳುವಂತಿಲ್ಲ. ಹಾಗಾಗಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಬೇಕೇಬೇಕು.
ಎರಡನೇ ತಜ್ಞ(ಇವರು ಯೋಜನೆ ರೂಪಿಸಿದವರು): ಇಲ್ಲ ಇಲ್ಲ. ಹಾಗೇನಿಲ್ಲ. ಪಶ್ಚಿಮಘಟ್ಟದ ಬೆಟ್ಟಗಳಲ್ಲಿ  ಹುಳಗಳು ಕೊರೆದ ಚಿಕ್ಕ ಚಿಕ್ಕ ರಂಧ್ರಗಳೂ, ಮರಗಳು ಬಿದ್ದುಹೋಗಿ ಅವುಗಳ ಬೇರುಗಳು ಕುಂಬಾಗಿ ಉಂಟಾದ ದೋರುಗಳೂ (ಬಿಲಗಳು) ಇರುತ್ತವೆ. ಹಾಗಾಗಿ ಅಲ್ಲಿ ಬಿದ್ದ ಮಳೆ ನೀರು ನಿಧಾನವಾಗಿ ಮೊದಲು ಭೂಮಿಯೊಳಗೆ ಇಂಗುತ್ತದೆ. ಇಂಥ ಭೂಮಿಯ ಪದರದ ದಪ್ಪ ಕೆಲವು ಕಡೆ,(ಮೂರನೆಯ ತಜ್ಞರ ಕಡೆ ತಿರುಗಿ)  ಎಷ್ಟು, ಎಷ್ಟು, ನೀವು ಅಧ್ಯಯನ ಮಾಡಿದವರಲ್ಲವೆ, ಎಷ್ಟಿರಬಹುದು?
ಮೂರನೆಯ ತಜ್ಞ: ಕೆಲವು ಕಡೆ  ಎಪ್ಪತ್ತು ಅಡಿಗಳಷ್ಟು ದಪ್ಪದ ಪದರ  ಇರಬಹುದು. ನಾನು ಇದನ್ನು ಪಶ್ಚಿಮಘಟ್ಟಗಳಲ್ಲಿಯೇ ಇದ್ದು, ಎಷ್ಟೋ ಸಲ ಮಳೆಯಲ್ಲಿ ನೆನೆದುಕೊಂಡೇ,  ಅಧ್ಯಯನ ಮಾಡಿದ್ದೇನೆ
ಒಂದನೆಯ ತಜ್ಞ: ನೀವು ಕೆಲವು ದಿವಸ ಮಳೆಯಲ್ಲಿ ನೆಂದಿರಬಹುದು. ನಾನು ಕೆಪಿಸಿ ಎಂಜಿನಿಯರ್ ಆಗಿ ಗುಂಡ್ಯಪ್ರದೇಶದಲ್ಲಿಯೇ  ಕೆಲಸ ಮಾಡಿದವನು. ಪ್ರತಿದಿನವೂ ಮಳೆಯಲ್ಲಿ ನೆನೆದವನು. ನಾನು ಕಣ್ಣಾರೆ ಕಂಡು ಹೇಳುತ್ತಿದ್ದೇನೆ. ಬೆಟ್ಟದಲ್ಲಿ ಮಳೆ ಬಂದ ಕೂಡಲೇ ತೊರೆಯಲ್ಲಿ ನೆರೆ ಏರುತ್ತದೆ.
ನಾಲ್ಕನೆಯ ತಜ್ಞ: ನಾನು ಅರಣ್ಯಾಧಿಕಾರಿಯಾಗಿ ಪಶ್ಚಿಮಘಟ್ಟಗಳಲ್ಲಿ ಪ್ರತಿದಿನವೂ ಹೊಕ್ಕು ಹೊರಟವನು. ಅಲ್ಲಿನ ಮಣ್ಣಿನ ಸ್ವರೂಪವನ್ನು ಪರೀಕ್ಷೆ ಮಾಡಿಸಿದ್ದೇನೆ. ಅಲ್ಲಿ ಪ್ರತಿ ಅರ್ಧ ಕಿಲೋಮೀಟರಿಗೊಮ್ಮೆ ಮಣ್ಣಿನ ಸ್ವರೂಪ ಬದಲಾಗುತ್ತದೆ. ಇಡೀ ಪಶ್ಚಿಮ ಘಟ್ಟದ ಎಲ್ಲ ಕಡೆಯೂ ಮಣ್ಣಿನ ಸ್ವರೂಪ ಒಂದೇ ರೀತಿ ಇರುತ್ತದೆ, ಎಲ್ಲ ಕಡೆಯಲ್ಲೂ ಮಣ್ಣು ನೀರನ್ನು ಹಿಡಿದಿಡುತ್ತದೆ ಎಂದರೆ ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಮಳೆಯ ವಿಷಯ. ನನ್ನ ಆನೆಗಳಿಗೆ ನಮಗಿಂತ ಈ ವಿಷಯ ಚೆನ್ನಾಗಿ ಗೊತ್ತಿದೆ.
ಎರಡನೇ ತಜ್ಞ (ಕೂಡಲೇ): ಹಾಗಿದ್ದರೆ ಮುಂದಿನ ಸಲ ಆನೆಯನ್ನು ಕೇಳಿ ಯೋಜನೆ ರೂಪಿಸೋಣ!
ನಾಲ್ಕನೆಯ ತಜ್ಞ: (ಗಂಭೀರವಾಗಿ) ಆಗಲಿ ಹಾಗೆಯೇ ಮಾಡೋಣ
(ಎಲ್ಲರೂ ನಕ್ಕರೆಂದು ನೀವು ಭಾವಿಸಬಹುದು. ಹಾಗಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅರಣ್ಯ ತಜ್ಞರು ಸಭೆಯಿಂದ  ಎದ್ದು ಹೋದರು.)
ಚರ್ಚೆ ಮುಂದುವರಿಯಿತು. ಆದರೆ ತೀರ್ಮಾನ ಬರಲಿಲ್ಲ. ಮುಂದೆ? ಮುಂದೇನಿಲ್ಲ! ಲೆಟ್ ಅಸ್ ಅಗ್ರೀ ಟು ಡಿಸ್ ಅಗ್ರೀ! ಒಪ್ಪದಿರಲು ಒಪ್ಪುತ್ತಾರಂತೆ ತಜ್ಞರು! ಹಾಗಿದ್ದರೆ, ಗಿಳಿಶಾಸ್ತ್ರಕ್ಕೂ ಜಲವಿಜ್ಞಾನಕ್ಕೂ ಏನು ವ್ಯತ್ಯಾಸ?
ನಮ್ಮ ತಜ್ಞರು ಮಳೆಗಾಲದಲ್ಲಿ ಯೋಜನಾಸ್ಥಳಕ್ಕೆ ಹೋಗಿ ನಿಂತರೆ, ಸಮಸ್ಯೆ ಪರಿಹಾರವಾಗುತ್ತಿತ್ತೋ ಏನೋ. ಆದರೆ ಅದೆಲ್ಲ ಯಾರಿಗೆ ಬೇಕು? ಪ್ಲಾನು ರೆಡಿ ಆಗಿಬಿಟ್ಟಿದೆ! ಯೋಜನಾ ಸ್ಥಳದಲ್ಲಿ ಪೈಪುಗಳನ್ನು ಹುಗಿದಾಗಿದೆ. ಒಂದೆರಡು ಡ್ಯಾಮು ಕಟ್ಟಿಯೂ ಆಗಿದೆ! ಇನ್ನು ಹಿಂದೆ ಹೋಗುವುದೆಲ್ಲಿಗೆ? ಗಿಳಿಶಾಸ್ತ್ರದ ಲೆಕ್ಕ ಆಧರಿಸಿ, ಕಣ್ಣು ಮುಚ್ಚಿ ಮುಂದುವರಿಯುವುದೇ ಸರಿ. ನೀರು ಬರದಿದ್ದರೆ? ಬರದಿದ್ದರೆ ಅದು ಜನರ ಸಮಸ್ಯೆ, ನಮ್ಮದಲ್ಲ. ನಮ್ಮ ದುಡ್ಡು ಹೇಗೂ ನಮಗೆ ಬಂದಾಗಿದೆ! (ಇಂಥ ಹಲವು ಲೆಕ್ಕಾಚಾರಗಳನ್ನು ಮಾಡಿಕೊಟ್ಟಿರುವುದಕ್ಕೆ, ಅದಕ್ಕೆ ಇದಕ್ಕೆ ಅಂತ ಇ ಐ ಟೆಕ್ನಾಲಜೀಸ್ ಸಂಸ್ಥೆಗೆ ಈವರೆಗೆ ಹತ್ತಿರ ಹತ್ತಿರ ಮೂರೂವರೆ ಕೋಟಿ ರೂ.ಗಳನ್ನು ಕನೀನಿನಿ  ಪಾವತಿಸಿ ಆಗಿದೆ.)

ಲಭ್ಯನೀರಿನ ಪ್ರಮಾಣ: ಲೆಕ್ಕಾಚಾರ ಗೊಂದಲದ ಗೂಡು

ಎತ್ತಿನಹೊಳೆ ಯೋಜನೆಯ ಲಭ್ಯ ನೀರಿನ ಲೆಕ್ಕಾಚಾರ ಮಾಡಿದವರು ಪ್ರೊ. ರಾಮಪ್ರಸಾದ್ ಎಂಬ ಹಿರಿಯರು. ಅವರು ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಜ್ಞರಾದ ಪ್ರೊ. ಎಸ್. ಜಿ. ಮಯ್ಯ ಮತ್ತು ಪ್ರೊ. ಯದುಪತಿ ಪುಟ್ಟಿ ಇಬ್ಬರಿಗೂ ಪಿ.ಎಚ್ಡಿಗೆ ಮಾರ್ಗದರ್ಶಕರಾಗಿದ್ದರಂತೆ. ಈ ಗುರು-ಶಿಷ್ಯ ಸಂಬಂಧ ಏನಿದ್ದರೂ, ಇಬ್ಬರು ಶಿಷ್ಯರೂ ಗುರುಗಳು ಮಾಡಿದ ಲೆಕ್ಕಾಚಾರ ತಪ್ಪಾಗಿದೆ ಎಂದು ಹೇಳಲು ಹಿಂಜರಿಯಲಿಲ್ಲ. ಉಳಿದ ಮೂರು ನಾಲ್ಕು ತಜ್ಞರೂ ಪ್ರೊ. ರಾಮಪ್ರಸಾದರ ಲೆಕ್ಕಾಚಾರದ ಬಗ್ಗೆ ಅನುಮಾನವನ್ನೇ ವ್ಯಕ್ತಪಡಿಸಿದರು. ಕೊನೆಯಲ್ಲಿ ಎಲ್ಲರ ಸಂದೇಹಗಳಿಗೆ ಉತ್ತರಿಸಲು ನಿಂತ ಪ್ರೊ. ರಾಮಪ್ರಸಾದರು “ನೀವೆಲ್ಲರೂ ನನ್ನ ಲೆಕ್ಕಾಚಾರದಲ್ಲಿ ತಪ್ಪಿದೆ ಎನ್ನುತ್ತಿದ್ದೀರಿ. ಇದು ನನಗೆ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಸಿಕ್ಕ ಮೊದಲ ಅವಕಾಶ. ಯೋಜನೆಯಿಂದ ಇಪ್ಪತ್ನಾಲ್ಕು ಟಿಎಂಸಿ ನೀರು ಸಿಗುತ್ತದೆ ಎಂದು ಬರೆದರೆ ಯಾವ ಪತ್ರಿಕೆಯವರೂ ಪ್ರಕಟಿಸುವುದಿಲ್ಲ. ಎಂಟು ಟಿಎಂಸಿ ಸಿಗುತ್ತದೆ ಎಂದು ಬರೆದರೆ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುತ್ತವೆ” ಎಂದು ತಮ್ಮ ಅಸಮಾಧಾನ  ತೋಡಿಕೊಂಡರು.
“ನೀವು ಪತ್ರಿಕೆಗಳಿಗೆ ಕಾದಿದ್ದೇಕೆ? ನಿಮ್ಮದೇ ಬ್ಲಾಗಿನಲ್ಲಿ ಲೇಖನಗಳನ್ನು ಬರೆದು ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳಬಹುದಿತ್ತಲ್ಲ?” ಎಂದು ನಾನು ಆಕ್ಷೇಪಿಸಿದೆ. ಆದರೆ ಹಿರಿಯರ ಹತ್ತಿರ ಹಾಗೆಲ್ಲ ಮಾತಾಡುವುದು ಮಹಾಪ್ರಮಾದ ಎಂಬಂತೆ ಉಳಿದ ತಜ್ಞರು ಪ್ರೊಫೆಸರರ ರಕ್ಷಣೆಗೆ ನಿಂತರು. ನಾನು ಸುಮ್ಮನಾದೆ.
ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ ನೀರಿನ ಪ್ರಮಾಣದ ಕುರಿತಂತೆ,ಇನ್ನಿತರ ಹಲವು ಅಂಶಗಳಿಗೆ ಸಂಬಂಧಿಸಿದಂತೆ ಅನೇಕ ತಜ್ಞರು ವ್ಯಕ್ತಪಡಿಸಿದ ಅನುಮಾನಗಳಿಗೆ ಆಗಿಂದಾಗ ಉತ್ತರ ಕೊಡಬೇಕಾದ ನೇರ ಜವಾಬ್ದಾರಿ ಇರುವ  ಪ್ರೊ. ರಾಮಪ್ರಸಾದರು ಈವರೆಗೂ ಸಾರ್ವಜನಿಕವಾಗಿ ತುಟಿ ಪಿಟಕ್ ಅಂದದ್ದು ನಾನು ಕಂಡಿಲ್ಲ. ನಿಜವಾಗಿ, ಇ ಐ ಟೆಕ್ನಾಲಜೀಸ್ ಪರವಾಗಿ ಈ ಲೆಕ್ಕಾಚಾರವನ್ನು ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಲು ಸಹ ನಾನು ಬಹಳ ಪ್ರಯತ್ನ ಮಾಡಬೇಕಾಯಿತು. ಡಾ. ಮಧು ಸೀತಪ್ಪನವರಲ್ಲದಿದ್ದರೆ, ಪ್ರೊ. ರಾಮಪ್ರಸಾದರು ಈಗಲಾದರೂ ಸಾರ್ವಜನಿಕ ವೇದಿಕೆಗೆ ಬರುತ್ತಿದ್ದರೇ ಎಂಬ ಅನುಮಾನ ನನಗೆ ಈಗಲೂ ಇದೆ. (ಈ ಸಭೆಗೂ ಇ ಐ ಟೆಕ್ನಾಲಜೀಸ್ ಸಂಸ್ಥೆಯಿಂದ ಅಧಿಕೃತವಾಗಿ ಯಾವ ಪ್ರತಿನಿಧಿಯೂ ಬಂದದ್ದು ನನ್ನ ಗಮನಕ್ಕೆ ಬರಲಿಲ್ಲ. ಆ ಕಂಪೆನಿ ಬಹು ಬುದ್ಧಿವಂತಿಕೆಯಿಂದ ತೆರೆಯ ಹಿಂದೆಯೇ ಉಳಿದುಕೊಳ್ಳುವಲ್ಲಿ ಈವರೆಗೂ ಯಶಸ್ವಿಯಾಗಿದೆ).
ಪ್ರೊ. ರಾಮಪ್ರಸಾದರು ತಮ್ಮ ಲೆಕ್ಕಾಚಾರಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ ತಜ್ಞರಿಂದ ಮತ್ತೆ ಮತ್ತೆ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ತೀರ ಇಕ್ಕಟ್ಟಿಗೆ ಸಿಕ್ಕಿದಾಗ ಅವರು “ಅದು ನನ್ನ ಅಭಿಪ್ರಾಯ, ನಿಮ್ಮ ಅಭಿಪ್ರಾಯ ಬೇರೆ ಇರಬಹುದು” ಎಂಬ ಉತ್ತರ ನೀಡಿ ಜಾರಿಕೊಂಡರು. ಹಾಗಾದರೆ ಇದೇನು ವೈಜ್ಞಾನಿಕ ಲೆಕ್ಕಾಚಾರದ ಫಲಿತಾಂಶಗಳನ್ನು ಆಧರಿಸಿದ ಯೋಜನೆಯೆ  ಅಥವ ಆಚಾರ್ಯರ ಮಾಯಾವಾದವೆ ಎಂಬ ಪ್ರಶ್ನೆ ನನ್ನ ಮನಸ್ಸಿಗೆ ಬಂತು!

ಕೇಂದ್ರೀಯ ಜಲ ಆಯೋಗದ ನೀರಿನ ಅಳತೆಯ ಅಂಕಿಸಂಖ್ಯೆ: ಸಂಶಯಗಳು


ಪ್ರೊ. ರಾಮಪ್ರಸಾದರು ಲಭ್ಯನೀರಿನ ಪ್ರಮಾಣವನ್ನು ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಆಧರಿಸಿ ಲೆಕ್ಕ ಮಾಡಿದ್ದೇನೆ ಎಂದರು. (ಹೀಗೆ ಲೆಕ್ಕಾಚಾರ ಮಾಡಿರುವುದು ಸರಿಯಲ್ಲ ಎಂದ ಕೇಂದ್ರೀಯ ಜಲ ಆಯೋಗ ಹೇಳಿದೆಯಂತೆ.) ಬೆಟ್ಟದ ಮೇಲೆ ಬೀಳುವ ಮಳೆ ತೊರೆಗಳಲ್ಲಿ  ಪ್ರವಾಹವಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನೇ ಸರಿಯಾಗಿ ವಿವರಿಸಲು ಬಾರದವರು, ಹತ್ತಿರ ಹತ್ತಿರ ನೂರು ಕಿ.ಮೀ. ದೂರದಲ್ಲಿರುವ ಬಂಟ್ವಾಳದ ನೇತ್ರಾವತಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಆಧರಿಸಿ ಎತ್ತಿನಹೊಳೆಯ ಎಂಟು ಅಣೆಕಟ್ಟುಗಳಲ್ಲಿ ದೊರೆಯುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕುತ್ತಾರೆಂದರೆ ಆ ಲೆಕ್ಕಾಚಾರವನ್ನು ಯಾರಾದರೂ ನಂಬಲು ಸಾಧ್ಯವೆ?
ಇತ್ತ, ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ಸಹ ಅನೇಕ ವಿಧಾನಗಳೂ, ಸೂತ್ರಗಳೂ ಇರುವುದು ಸಾಧ್ಯ. ಮುಖ್ಯವಾಗಿ ಅಳೆಯುವ ಸಾಧನಗಳಲ್ಲಿ ಕಾಲಕ್ಕನುಗುಣವಾಗಿ ಗಣನೀಯ ಬದಲಾವಣೆಯಾಗಿರುವುದು ಖಚಿತ. ಈಗ ನೀರಳೆಯಲು ಡಿಜಿಟಲ್ ಮೀಟರುಗಳೂ, ವಿಧಾನಗಳೂ ಬಂದಿರಬಹುದು. ಬಂಟ್ವಾಳದಲ್ಲಿ ನೀರಳೆಯಲು ಇರುವುದು ಸರಕಾರಿ ವ್ಯವಸ್ಥೆ.  ಅಲ್ಲಿ ಯಾವ ಓಬೀರಾಯನ ಕಾಲದ ವಿಧಾನವನ್ನೂ, ಸಾಧನವನ್ನೂ ಬಳಸುತ್ತಿದ್ದಾರೋ ಯಾರಿಗೆ ಗೊತ್ತು? ಅದರ ನಿಖರತೆಯೇ ಪ್ರಶ್ನಾರ್ಹವಲ್ಲವೆ? ನಾನು ಅನಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಇಲ್ಲಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ನಿಖರವಾಗಿ  ಲೆಕ್ಕ ಮಾಡಲು ಕನಿಷ್ಠ ಇಪ್ಪತ್ತೈದರಿಂದ ಮೂವತ್ತು ಜನ ಸಿಬ್ಬಂದಿ ಬೇಕಾಗುತ್ತದಂತೆ. ಈಗ ಅಲ್ಲಿ ಹೆಚ್ಚೆಂದರೆ ಐದು ಜನ ಇರಬಹುದು.
ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಎತ್ತಿನಹೊಳೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ನದಿ ಮಾಪನ ಮಾಡುತ್ತಿದೆಯಂತೆ. ಈ ಮಾಪನದ ಅಂಕಿಸಂಖ್ಯೆಗಳು ಸರಿ ಇಲ್ಲದಿರುವುದರಿಂದ  ಅದನ್ನು ಲೆಕ್ಕಾಚಾರಕ್ಕೆ ಪರಿಗಣಿಸಲಾಗಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆಯ ಹೇಳಿಕೆ. ಈ ಅಂಕಿಸಂಖ್ಯೆಗಳು ಯಾಕೆ ಸರಿ ಇಲ್ಲ? ಮಾಪಕ ಯಂತ್ರದ ಸಮಸ್ಯೆಯೆ? ಮಾಪನ ಮಾಡುವವರ ಸಮಸ್ಯೆಯೆ? ಅಥವಾ ಆ ಅಂಕಿಸಂಖ್ಯೆಗಳು ತಮಗೆ ಬೇಕಾದ ಹಾಗಿಲ್ಲ ಎಂಬ ಸಮಸ್ಯೆಯೆ?
ಪ್ರೊ. ರಾಮಪ್ರಸಾದ್ ಅವರು ತಮ್ಮ  ಈ ಅಂಕಿ ಸಂಖ್ಯೆಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಬಂಟ್ವಾಳದಲ್ಲಿರುವ ಕೇಂದ್ರೀಯ ಜಲ ಆಯೋಗದ ಕಛೇರಿಗೆ ಭೇಟಿ ಕೊಟ್ಟಿದ್ದರೆ ಅಥವಾ ಅಂತರ್ಜಾಲದಲ್ಲೋ ಇನ್ನೆಲ್ಲೋ ಸಿಕ್ಕ ಆಯೋಗದ ಮಾಹಿತಿಗಳನ್ನು ನೇರವಾಗಿ ಬಳಸಿಕೊಂಡರೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಏಕೆಂದರೆ, ತಾನು ಮಾಡುವ ಕೆಲಸದ ಬಗ್ಗೆ ನಿಜವಾದ ಕಾಳಜಿ ಇರುವ ಯಾರೇ ಆದರೂ, ಅಂಕಿ ಸಂಖ್ಯೆಗಳನ್ನು ಬಳಸಿಕೊಳ್ಳುವ ಮೊದಲು  ನೀರನ್ನು ಅಳೆಯುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ, ವ್ಯವಸ್ಥೆ ಹೇಗಿದೆ, ಮಾಪಕ ಯಂತ್ರಗಳ ಸ್ಥಿತಿ ಹೇಗಿದೆ  ಎಂಬುದನ್ನು ಪರಿಶೀಲಿಸಿಯೇ ಮುಂದುವರಿಯಬೇಕಾಗುತ್ತದೆ.

ಪ್ರೊ. ಟಿ ವಿ ರಾಮಚಂದ್ರರಿಗೆ ಅನುಭವ ಕಡಿಮೆ!

ಪ್ರೊ. ಟಿ ವಿ. ರಾಮಚಂದ್ರರ ಲೆಕ್ಕಾಚಾರದ ಕುರಿತೂ ಸಭೆಯಲ್ಲಿ ಪ್ರಸ್ತಾವ ಬಂತು. ಆಗ ಪ್ರೊ. ರಾಮಪ್ರಸಾದರು “ಈ ಸಭೆಯಲ್ಲಿ ಪ್ರೊ. ಟಿ. ವಿ. ರಾಮಚಂದ್ರ ಅವರೂ ಭಾಗವಹಿಸಿದ್ದರೆ ಚೆನ್ನಾಗಿತ್ತು. ಅವರಿಲ್ಲದಿರುವಾಗ ನಾನು ಅವರ ಲೆಕ್ಕಾಚಾರವನ್ನು ಟೀಕಿಸುವುದು ಸರಿಯಲ್ಲ. ಆದರೂ ನಾನು ಹೇಳದೆ ಇರುವಂತಿಲ್ಲ. ಪ್ರೊ. ರಾಮಚಂದ್ರರಿಗೆ ಜಲವಿಜ್ಞಾನದ ವಿಷಯದಲ್ಲಿ ಅನುಭವ ಕಡಿಮೆ” ಎಂದು ಹೇಳಿ ಪ್ರೊ. ರಾಮಚಂದ್ರರ ಲೆಕ್ಕಾಚಾರದ ದಾಖಲೆಗಳಿಂದ ಯಾವುದೋ ಒಂದು ನಿರ್ದಿಷ್ಟ ಕಾಲಮ್ಮನ್ನು ಪವರ್ ಪಾಯಿಂಟಿನಲ್ಲಿ ತೋರಿಸಿ, ಈ ಸಂಖ್ಯೆಗಳನ್ನು ನೋಡಿ, ಇದು ಹೀಗೆ ಎಲ್ಲಾದರು ಇರುವುದು ಸಾಧ್ಯವೇ? ಎಂದು ಹೇಳಿ ಜೋರಾಗಿಯೇ ನಕ್ಕರು. ಈ ಅಂಕಿಸಂಖ್ಯೆಗಳು ನನಗೆ ಅರ್ಥವಾಗುವಂತಿರಲಿಲ್ಲ. ಆದರೆ ಅವು ನೀರಿನ ಆವಿಯಾಗುವ ಪ್ರಮಾಣಕ್ಕೆ ಸಂಬಂಧಿಸಿದವು ಎಂದು ಊಹಿಸುತ್ತೇನೆ. (ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ ವಿ  ರಾಮಚಂದ್ರ ಅವರು ಈ ಯೋಜನೆಯನ್ನು ಕಟುವಾಗಿ ಟೀಕಿಸಿದ್ದರು. ಹಾಗಾಗಿ ಕನೀನಿನಿ ಲಕ್ಷಾಂತರ ರೂಪಾಯಿಗಳನ್ನು ಪತ್ರಿಕೆಗಳಲ್ಲಿ ಅದರ ವಿರುದ್ಧದ ಜಾಹೀರಾತು ಕೊಡಲು ಖರ್ಚು ಮಾಡಬೇಕಾಯಿತು.)

ಎತ್ತಿನಹೊಳೆ: ಪ್ರೊ. ರಾಮಪ್ರಸಾದರ ಮಮಕಾರ

ಈ ಯೋಜನೆ ಯಾವ ಕಾರಣಕ್ಕೂ ನಿಲ್ಲಕೂಡದು ಎಂಬ ಬಗ್ಗೆ ಪ್ರೊ. ರಾಮಪ್ರಸಾದರಿಗೆ  ತೀವ್ರವಾದ ಕಾಳಜಿ ಇತ್ತೆಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿತ್ತು.  ಚರ್ಚೆಯ ನಡುವೆ ಅವರು “ದಿ ಪ್ರಾಜೆಕ್ಟ್ ಶುಡ್ ನಾಟ್ ಸ್ಟಾಲ್” ಎಂದು ತಮ್ಮ ಕಾಳಜಿಯನ್ನು ತೋರಿಸಿಕೊಂಡರು. ಶ್ರೀ ಎಸ್. ಜಿ. ಮಯ್ಯರು ನೇತ್ರಾವತಿ ನದಿ ಪ್ರಾಧಿಕಾರದ ಪ್ರಸ್ತಾವನೆ ಮುಂದಿಟ್ಟಾಗ, “ಅದಕ್ಕೆ ನನ್ನ ಆಕ್ಷೇಪಣೆ ಏನೂ ಇಲ್ಲ. ಆದರೆ, ಎತ್ತಿನಹೊಳೆ ಯೋಜನೆ ಆ ಪ್ರಾಧಿಕಾರದ ವ್ಯಾಪ್ತಿಗೆ ಬರಬಾರದು” ಎಂದರು. ನೇತ್ರಾವತಿ ನದಿ ಪ್ರಾಧಿಕಾರದ ವ್ಯಾಪ್ತಿಗೆ ಅದರ ಉಪನದಿಗಳೇ ಬರಬಾರದೆಂಬ ಅವರ ಕಾಳಜಿಯ ಹಿನ್ನೆಲೆ ಏನು?

ಶಶಿಧರ ಶೆಟ್ಟರ ಪ್ರಶ್ನೆ: ಉತ್ತರಿಸುವ ಜವಾಬ್ದಾರಿ ಯಾರಿಗೂ ಬೇಡ!

ಇಲ್ಲಿಯೇ ನಮ್ಮ ಶಶಿಧರ ಶೆಟ್ಟರ ಪ್ರಶ್ನೆಯ ಮಹತ್ವ ಇರುವುದು. ಅವರ ಪ್ರಶ್ನೆ ಇದು: “ಒಂದುವೇಳೆ ಈ ಯೋಜನೆ ವಿಫಲವಾದರೆ, ಅದಕ್ಕೆ ಖರ್ಚಾದ ಹಣವನ್ನು ಹಿಂದೆ ಕೊಡುತ್ತೇವೆ ಎಂದು ಒಂದು ಸಾವಿರ ರೂ. ಸ್ಟಾಂಪ್ ಪೇಪರ್ ಮೇಲೆ ಬರೆದುಕೊಡಲು ನೀವು ಯಾರಾದರೂ ಸಿದ್ಧರಿದ್ದೀರಾ?” ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ, ಯಾವುದೇ ಪೂರ್ವತಯಾರಿಯೂ ಇಲ್ಲದೆ,  ತುಂಬಾ ಗಡಿಬಿಡಿಯಲ್ಲಿ ನಡೆದ ಸಭೆಯಲ್ಲೂ ಅವರು ಈ ಪ್ರಶ್ನೆ ಕೇಳಿದ್ದರು. ಅಲ್ಲಿ ಅವರ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿರಲಿಲ್ಲ. ಇಲ್ಲಿಯೂ ಯಾರೂ ಉತ್ತರಿಸಲಿಲ್ಲ. ಕನೀನಿನಿಯ ಮುಖ್ಯ ಎಂಜಿನಿಯರ್ “ನಮ್ಮ ಯೋಜನೆಗಳು ವಿಫಲವಾದ ಉದಾಹರಣೆ ಇಲ್ಲ” ಎಂದರು. ಕೂಡಲೇ ಕೆ. ಎನ್. ಸೋಮಶೇಖರ್ ಕೈಯಲ್ಲಿದ್ದ ದಾಖಲೆಗಳನ್ನು ತೋರಿಸುತ್ತಾ “ನಿಮ್ಮ ಜಲಸಂಪನ್ಮೂಲ ಇಲಾಖೆಯ ವಾರ್ಷಿಕ ವರದಿಯಲ್ಲೇ ನೀವು ಕೈಗೊಂಡಿರುವ 175 ಯೋಜನೆಗಳು ವಿಫಲಗೊಂಡಿರುವುದಕ್ಕೆ ಆಧಾರವಿದೆಯಲ್ಲ?” ಎಂದು ಎದ್ದು ನಿಂತರು. ಮುಖ್ಯ ಎಂಜಿನಿಯರ್ ನಿರುತ್ತರರಾದರು.

ಉಪ್ಪಿನಂಗಡಿಯಲ್ಲಿ ಹೊಸತೊಂದು ಅಣೆಕಟ್ಟು ಕಟ್ಟಿ ಅದರಿಂದ ಅಥವಾ ತುಂಬೆ ಅಣೆಕಟ್ಟಿನಿಂದ ನೀರು ತೆಗೆದುಕೊಂಡು ಹೋಗಲು ತಮ್ಮದೇನೂ ಅಡ್ಡಿ ಇಲ್ಲವೆಂದು ದ.ಕ.ದವರ ಒಟ್ಟಭಿಪ್ರಾಯ ಬಂತು. ಆದರೆ ಈ ವಿಷಯದಲ್ಲಿ ನನಗೆ ಸಹಮತವಿಲ್ಲ. ಅಲ್ಲಲ್ಲಿನ ನೀರಿನ ಸಮಸ್ಯೆ ಅಲ್ಲಲ್ಲಿಯೇ ಪರಿಹಾರವಾಗಬೇಕು ಎಂಬುದು ನನ್ನ ಖಚಿತ ಅಭಿಪ್ರಾಯ.

ಸಭೆಯ ಕೊನೆಯಲ್ಲಿ ಡಾ. ಮಧು ಸೀತಪ್ಪನವರು ತಮ್ಮ ಯೋಜನೆಯನ್ನು ವಿವರಿಸಿ ಅದಕ್ಕೆ ತಜ್ಞರ ಅಭಿಪ್ರಾಯವನ್ನು ಕೋರಿದರು. ಎಸ್. ಜಿ. ಮಯ್ಯರು ಸ್ಪಷ್ಟವಾಗಿ “ನಾವು ಎತ್ತಿನಹೊಳೆ ಯೋಜನೆಯನ್ನೇ ವಿರೋಧಿಸುವವರು. ಇನ್ನು ಅದನ್ನು ವಿಸ್ತರಿಸುವ ಯೋಜನೆಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ” ಎಂದರು. ದ.ಕ.ದಿಂದ ಹೋದ ಎಲ್ಲರೂ ಅವರನ್ನು
 ಬೆಂಬಲಿಸಿದರು. ಉಳಿದ ತಜ್ಞರಲ್ಲಿ ಕೆಲವರು ಮಧು ಸೀತಪ್ಪನವರ ಹೊಸ ಯೋಜನೆಯನ್ನು ಬೆಂಬಲಿಸಿದರು. ಇಲ್ಲಿ ಏನು ನಡೆಯಿತೆಂಬುದರ ಪ್ರಾಮಾಣಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಡಾ. ಮಧು ಸೀತಪ್ಪನವರು ಸೇರಿದ ಎಲ್ಲರಿಗೂ ಮಾತು ಕೊಟ್ಟರು.
(ಈ ಇಡೀ ಕಾರ್ಯಕ್ರಮ ವೀಡಿಯೋ ಚಿತ್ರೀಕರಣವಾಗಿದೆ.)

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

3 comments

  • ತೊಡಗಿಸುವ ಹಣ ಖಚಿತವಿದೆ, ನೆಲ ಖಚಿತವಿದೆ, ಯೋಜನೆಯೇ ಠುಸ್ 🙁 ಹೊಳೆಯ ಆಳ ನೋಡಲು ಅವರಿವರ ಮಗುವನ್ನು ಇಳಿಸುವ ಜಾಣರಂತೆ ಸಾರ್ವಜನಿಕ ಹಣಕ್ಕೆ ಯಾವುದೇ ವೈಯಕ್ತಿಕ ಜವಾಬ್ದಾರಿ ಹೊರಲು ಸಿದ್ಧವಿಲ್ಲದೇ ವಿಲೇವಾರಿ ನಿರ್ಧರಿಸ ಹೊರಟ ಈ ಪರಿಣತರನ್ನು ಹೊಳೆಯ ಆಳ ನೋಡಲು ಅವರಿವರ ಮಗುವನ್ನು ನೂಕುವ ಅಯೋಗ್ಯರೆಂದೇ ಹೇಳಬೇಕಾಗುತ್ತದೆ. ಎತ್ತಿನಹೊಳೆಯೇನು ಒಟ್ಟಾರೆ ನೇತ್ರಾವತಿಯನ್ನೇ (ಇನ್ನೂ ಮುಂದುವರಿದು ಎಲ್ಲಾ ಪಶ್ಚಿಮವಾಹಿನಿಗಳನ್ನೂ) ತಿರುಗಿಸುವ ಯೋಜನೆ ಹೊಸೆದವರು ಕೇವಲ ಸಿವಿಲ್ ಇಂಜಿನಿಯರ್. ಅದೂ ಹೊಟ್ಟೆಪಾಡಿನ ವೃತ್ತಿಯಾಗಿ ಸರಕಾರೀ ಉದ್ಯೋಗಿಯಾಗಿ ಯಾವುದೇ ವಿಶೇಷ ಸಾಧನೆಗಳಿಲ್ಲದೆ ವರ್ಷಗಳನ್ನು ಸವೆಸಿ ನಿವೃತ್ತರಾದವರು. ಇನ್ನೂ ಮುಖ್ಯವಾಗಿ ಗಮನಿಸಬೇಕಾದ ಅಂಶ ಅವರು ಭೂವಿಜ್ಞಾನಿ ಅಲ್ಲ, ಜಲತಜ್ಞ ಅಲ್ಲ, ಜೀವವಿಜ್ಞಾನಿ ಅಲ್ಲ, ಪರಿಸರಶಾಸ್ತ್ರದ ಓನಾಮವೂ ತಿಳಿದವರಲ್ಲ, ಅಲ್ಲ, ಅಲ್ಲ – ಕೇವಲ ನಿವೃತ್ತ ಸಿವಿಲ್ ಇಂಜಿನಿಯರ್! ಆದರೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪಕ್ಷರಾಜಕಾರಣಿಗಳು ಮತ್ತು ಮತಗಟ್ಟೆ ರಾಜಕಾರಣಿಗಳು ಇವರನ್ನು ಮೇಲೆತ್ತಿ ಇಟ್ಟ ಅನಿವಾರ್ಯತೆಗೆ ಪ್ರತ್ಯಕ್ಷ ಪ್ರಶ್ನೋತ್ತರಗಳಿಗೆ ಮಂಗಳೂರಿಗೆ ಕರೆಸಿಕೊಂಡಾಗಲೇ ಲೋಕಕ್ಕೆ ತಿಳಿದಿತ್ತು ಇವರಿಗೇನೂ ತಿಳಿದಿಲ್ಲ. `ನದಿ ತಿರುವಿನ ಪಿತಾಮಹ'ನೇ ಖಚಿತ ಅಂಕಿ ಸಂಕಿಗಳ ಲೆಕ್ಕವಿಟ್ಟು ತನ್ನ ವಾದ ಸಮರ್ಥಿಸಿಕೊಳ್ಳುವ ಬದಲು "ಮುದುಕನನ್ನು ಕರೆಸಿ ಅವಮಾನ ಮಾಡಿದಿರಿ" ಎಂದು ಅತ್ತುಕೊಂಡು ಹೋದಾಗ ಉತ್ತರಾಧಿಕಾರಿಗಳಾದ ಪ್ರವೀಣರಾದ ರಾಮಪ್ರಸಾದರೋ ಇನ್ನೊಬ್ಬರೋ ಮಾಹಿತಿಯ ಬಲ ಬಿಟ್ಟು, ಹುಸಿಪ್ರಭಾವಳಿಯ ರಕ್ಷಣೆಗೆ ಶಿಷ್ಯರನ್ನು ಕಟ್ಟಿಕೊಂಡು ಕಣಕ್ಕೆ ಇಳಿದದ್ದು ನೋಡಿದರೆ ಆಶ್ಚರ್ಯವೇನೂ ಆಗುವುದಿಲ್ಲ. ಇಂಥ ಪಿಷ್ಟಪೇಷಣದ ನೂರು ಸಭೆಗಳಿಗಿಂತ ಪಶ್ಚಿಮಘಟ್ಟದ ಪರಿಸರ ನಾಶದ ನಂತರ ಏನೆಂದು ಒಂದು ಘನ ಸಭೆ ಕರೆಯುವುದುತ್ತಮ.

Leave a Comment

Leave a Reply

Your email address will not be published. Required fields are marked *