ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ ಒಬ್ಬನು (ತನ್ನನ್ನು) ಹೀಯಾಳಿಸಿದ ನಲ್ಲೆಯನ್ನು ಬಿಟ್ಟು ಬರಲಾರದೆ ಅಲ್ಲಿಯೇ ಸುಳಿಯುತ್ತಿರಲು, ಆತನ ಗೆಳೆಯನು ಸಿಟ್ಟುಗೊಂಡು ಹೀಗೆಂದನು:

‌ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ

ಪುಸಿದೊಡಮಾಸೆದೋಱೆ ಬಗೆದೋಱದೊಡಂ ನೆರೆದಿರ್ದೊಡಂ ಸಗಾ|

ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ

ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತಮೀವುದೇ|| ೯೨ ||

 

ʼಇಂತು ಇದನ್‌ ಈವೆನ್‌ʼ ಎಂದನಂ ಬಸನದ ಒಡಂಬಡಿಂಗೆ ಅಲಸಿ ಮಾಣ್ದೊಡಂ,

ಪುಸಿದೊಡಂ ಆಸೆದೋಱೆ ಬಗೆದೋಱದೊಡಂ,

ನೆರೆದಿರ್ದೊಡಂ ಸಗಾಟಿಸದೊಡಂ

ಆಯಮುಂ ಚಲಮುಂ ಉಳ್ಳೊಡೆ ಪೇಸದೆ ಅವಳ್ಗೆ ಮತ್ತಂ ಆಟಿಸುವುದೆ? ಮತ್ತಂ ಅಂಜುವುದೆ? ಮತ್ತಂ ಅೞಲ್ವುದೆ? ಮತ್ತಂ ಈವುದೇ?

ಇದು ಸೂಳೆಗೇರಿಯಲ್ಲಿ ಒಬ್ಬ ವಿಟ ಒಲಿಯದ ಸೂಳೆಯೊಬ್ಬಳ ಹಿಂದೆ ಬಿದ್ದ ತನ್ನ  ಗೆಳೆಯನೊಬ್ಬನಿಗೆ ಬುದ್ಧಿವಾದ ಹೇಳುತ್ತಿರುವ ದೃಶ್ಯ ಎಂದು ಕಲ್ಪಿಸಿಕೊಳ್ಳಬಹುದು.

ʼಇಕೋ ನಿನಗೆ ಇಂಥದ್ದನ್ನು ಕೊಡುತ್ತೇನೆʼ ಎಂದಾಗಲೂ ನಿನ್ನ ಚಟಕ್ಕೆ ಅವಳು ಸೊಪ್ಪು ಹಾಕಲಿಲ್ಲ (ಎಂದರೆ ನಿನ್ನ ಮಾತನ್ನು ಅವಳು ನಂಬಲಿಲ್ಲ); ನೀನು ತೋರಿಸಿದ (ಸುಳ್ಳು) ಆಸೆಗಳಿಗೂ ಅವಳು ಮನಸೋಲಲಿಲ್ಲ; (ಅಂತೂ ಇಂತೂ) ಕೂಡಿದರೂ, ಅದರಲ್ಲಿ ಪ್ರೀತಿಯೇ ಇರಲಿಲ್ಲ! ನಿನಗೆ ಸ್ವಲ್ಪವಾದರೂ ಸ್ವಾಭಿಮಾನ, ತಾಕತ್ತು ಇದ್ದರೆ, ಇಂಥವಳನ್ನು ಕಂಡು ಹೇಸಿಗೆ ಹುಟ್ಟಬೇಕಾಗಿತ್ತು! ಅದು ಬಿಟ್ಟು ಇನ್ನೂ ನೀನು ಅವಳಿಗಾಗಿ ಆಸೆಪಡುತ್ತಿದ್ದೀಯ! ಹೆದರುತ್ತಿದ್ದೀಯ! ಅಳುತ್ತಿದ್ದೀಯ! ಅವಳಿಗೆ ಹಣ ಕೊಡಲು ಹೊರಟಿದ್ದೀಯ! (ಎಂಥ ದಡ್ಡ ನೀನು!)

ಟಿಪ್ಪಣಿ: ಯುವಕನೊಬ್ಬ ಸೂಳೆಗೇರಿಯ ಹೆಣ್ಣೊಬ್ಬಳ ಹಿಂದೆ ಬಿದ್ದಿದ್ದಾನೆ. ಆದರೆ ಅವಳಿಗೆ ಕೊಡಲು ಅವನ ಕೈಯಲ್ಲಿ ಕಾಸಿಲ್ಲ ಅಥವಾ ಇದ್ದರೂ ಅವನು ಕೊಡಲು ತಯಾರಿಲ್ಲ. ʼಇಕೋ ಇಂಥದ್ದನ್ನು (ಸರವೋ, ಬಳೆಯೋ, ಉಂಗುರವೋ) ಕೊಡುತ್ತೇನೆʼ ಎಂದು ಅವನು ಬಾಯಲ್ಲಿ ಹೇಳುತ್ತಾನೆ. ಅವಳ ಪಾಲಿಗೆ ಮಾತ್ರ ಅದೊಂದು ಭರವಸೆಯೇ ಹೊರತು ಬೇರೇನಲ್ಲ.   ಹಾಗಾಗಿ ಅವನ ಸುಳ್ಳು ಭರವಸೆಗಳಿಗೆ ಬೆಲೆ ಕೊಡದ ಅವಳು ಅವನನ್ನು ಹೀಯಾಳಿಸುತ್ತಾಳೆ (ಈ ಮೊದಲೇ ಅವಳು ಅವನ ಇಂಥ ಭರವಸೆಗಳನ್ನು ನಂಬಿ ಮೋಸ ಹೋಗಿರುವ ಸಾಧ್ಯತೆಯೂ ಇದೆ!). ಇಲ್ಲಿ ಪಂಪ ಸೂಳೆಗೇರಿಗೆ ಬರುವ ಮೋಸಗಾರ ವಿಟರ ಬಗ್ಗೆಯೂ, ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ವ್ಯವಹಾರವನ್ನು ನಿಭಾಯಿಸುವ ಹೆಣ್ಣುಗಳ ವ್ಯವಹಾರ ಕುಶಲತೆಯ ಬಗ್ಗೆಯೂ ಸೂಚ್ಯವಾಗಿ ಹೇಳುತ್ತಿರುವಂತೆ ಕಾಣುತ್ತದೆ.

ವ|| ಎಂದು ನುಡಿದು ಬಿಸುಡಿಸಿದಂ ಮತ್ತೊರ್ವಂ ತನಗೆರಡಱಿಯದೊಲ್ದ ನಲ್ಲಳನೇತರೊಳಪ್ಪೊಡಮೇವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಣ್ಗೆ ಕಾಪನಿಟ್ಟಿಂತೆಂದಂ-

ಎಂದು ನುಡಿದು ಬಿಸುಡಿಸಿದಂ. ಮತ್ತೊರ್ವಂ ತನಗೆ ಎರಡಱಿಯದೆ ಒಲ್ದ ನಲ್ಲಳನ್‌ ಏತರೊಳ್‌ ಅಪ್ಪೊಡಂ ಏವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು. ಮುಂತಣ್ಗೆ ಕಾಪನಿಟ್ಟು ಇಂತೆಂದಂ‌

ಎಂದು ಹೇಳಿ ಅವಳಿಂದ ಅವನನ್ನು ಬಿಡಿಸಿ ದೂರ ಮಾಡಿದನು. ಮತ್ತೊಬ್ಬನು ಕಪಟವಿಲ್ಲದೆ ಒಲಿದ ನಲ್ಲೆಯು ಯಾವುದೇ ಕಿರಿಕಿರಿ ಇಲ್ಲದೆ ತನಗೆ ಸುಖ ನೀಡುವುದಕ್ಕೆ ಸಂತೋಷಪಟ್ಟು, ಅವಳ ಹಣೆಗೆ (ಅವಳು ತನ್ನ ಪ್ರಿಯೆಯಾದ್ದರಿಂದ ಅವಳನ್ನು ಎಲ್ಲ ಬಗೆಯ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು) ಕಪ್ಪು ಬೊಟ್ಟಿಟ್ಟು  ಹೀಗೆಂದನು:

ಮ|| ಇನಿಯ[ಳ್] ನೊಯ್ಗುಮೆಡಂಬಡಂ ನುಡಿದೊಡೆಂದೆಂದಪ್ಪೊಡಂ ನಿನ್ನೊಳೆ

ಳ್ಳನಿತುಂ ದೋಷಮನುಂಟುಮಾಡದಿರೆಯುಂ ಕಣ್ಪಿಂತೆ ಸಂದಪ್ಪುದೊಂ|

ದನೆ ಕೇಳೋಪಳೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ

ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ|| ೯೩ ||

ಇನಿಯ[ಳ್] ನೊಯ್ಗುಂ ಎಡಂಬಡಂ ನುಡಿದೊಡೆ ಎಂದು, ಎಂದಪ್ಪೊಡಂ (ಎಂದು ಅಪ್ಪೊಡಂ) ನಿನ್ನೊಳ್‌ ಎಳ್ಳನಿತುಂ ದೋಷಮನ್‌ ಉಂಟುಮಾಡದೆ ಇರೆಯುಂ, ಕಣ್‌ ಪಿಂತೆ ಸಂದಪ್ಪುದು; ಒಂದನೆ ಕೇಳ್‌ ಓಪಳೆ, ಕೂರ್ಮೆಗೆಟ್ಟು ಎನಗೆ ನೀನ್ ಏನಾನುಂ ಒಂದು ಏವಮಂ ಮನದೊಳ್ ಮಾಡಿದೊಡೆ ಅಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ?

ಏನಾದರೂ ಎಡವಟ್ಟು ಮಾತಾಡಿದರೆ ಇನಿಯಳಿಗೆ (ನಿನಗೆ) ನೋವಾಗುತ್ತದೆ ಎಂದು, ನಾನು  ಎಂದೂ ನಿನ್ನಲ್ಲಿ ಎಳ್ಳಿನಷ್ಟು ಸಹ ದೋಷವನ್ನು ಕಾಣಲಿಲ್ಲ. ಆದರೆ ಈಗೀಗ ಯಾಕೋ ನೀನು ನನ್ನ ಕಡೆ ಸರಿಯಾಗಿ ನೋಡುತ್ತಲೂ ಇಲ್ಲ. ಪ್ರಿಯೆ, ಇಕೋ ಒಂದು ಹೇಳುತ್ತೇನೆ, ಸರಿಯಾಗಿ ಕೇಳು: ನನ್ನಲ್ಲಿ ಒಲವುಗೆಟ್ಟು ನೀನು ಏನಾದರೊಂದು ವ್ಯಥೆಯನ್ನು ಮನಸ್ಸಿನಲ್ಲಾದರೂ ನನಗೆ ಉಂಟು ಮಾಡಿದ್ದಾದರೆ, ನಾನು ಅಂದೇ ನಿನಗೆ ದೀವಳಿಗೆ, ಮಹಾನವಮಿ ಹಬ್ಬಗಳನ್ನು ಮಾಡದೆ ಬಿಡುವುದಿಲ್ಲ!

(ಟಿಪ್ಪಣಿ: ಇಲ್ಲಿ ಮೊದಲನೆಯ ಸಾಲಿನಲ್ಲಿ ʼಇನಿಯಂʼ ಎಂದಿರುವುದಕ್ಕೆ ʼಇನಿಯಳ್ʼ ಎಂಬ ಪಾಠವನ್ನು ಇಟ್ಟುಕೊಂಡಿದೆ. ಪದ್ಯದ ಮೊದಲಿನ ವಚನವನ್ನು ಗಮನಿಸಿದರೆ ಅದರಲ್ಲಿ ಮಾತಾಡುತ್ತಿರುವುದು ʼಇನಿಯʼನೇ ಹೊರತು ಇನಿಯಳಲ್ಲ ಎಂಬುದು ಸೂಚಿತವಾಗುತ್ತದೆ. ಪದ್ಯದ ಮೊದಲ ವಾಕ್ಯದ ವಿಷಯವೂ ʼಇನಿಯʼನ ಬಾಯಿಗೆ ಹೊಂದುತ್ತದೆಯೇ ಹೊರತು ʼಇನಿಯಳʼ ಬಾಯಿಗೆ ಅಲ್ಲ. ಆದ್ದರಿಂದ ಈ ಪಾಠಾಂತರ).

ವ|| ಎಂದು ನುಡಿದಂ ಮತ್ತಮೊಂದು ಎಡೆಯೊಳೊರ್ವನೊರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕೆಳೆಯಂಗೆ ತೋಱಿ-

ಎಂದು ನುಡಿದಂ ಮತ್ತಂ ಒಂದು ಎಡೆಯೊಳ್‌ ಒರ್ವನ್‌ ಒರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕೆಳೆಯಂಗೆ ತೋಱಿ

ಎಂದು ಹೇಳಿದನು. ಮತ್ತೊಂದು ಕಡೆ ಒಬ್ಬನು ಒಬ್ಬಳ ನಡೆ, ನುಡಿ, ಮುಡಿಗಳ ಹಳ್ಳಿಚೆಲುವಿಗೆ ಮುಗುಳ್ನಗೆ ನಕ್ಕು,(ಅವಳನ್ನು) ತನ್ನ ಗೆಳೆಯನಿಗೆ ತೋರಿಸಿ-

ಚಂ|| ನಯದೊಳೆ ನೋಡಿ ನೋಟದೊಳೆ ಮೇಳಿಸಿ ಮೇಳದೊಳಪ್ಪುಕೆಯ್ದು ಗೊ

ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವ ಸೂ|

ಳೆಯರ ತುಱುಂಬು ಸೂಳೆಯರ ಮೆಲ್ನುಡಿ ಸೂಳೆಯರಿರ್ಪ ಪಾಂಗು ಸೂ

ಳೆಯರ ನೆಗೞ್ತೆ ನಾಡೆ ತನಗೞ್ತಿ ದಲಕ್ಕನೆ ಸೂಳೆಯಾಗಳೇ|| ೯೪||

ನಯದೊಳೆ ನೋಡಿ, ನೋಟದೊಳೆ ಮೇಳಿಸಿ, ಮೇಳದೊಳ್‌ ಅಪ್ಪುಕೆಯ್ದು, ಗೊಟ್ಟಿಯೊಳ್‌ ಒಳಪೊಯ್ದು ಪತ್ತಿಸುವ ಸೂಳೆಯರ ಅಂದಮನ್‌ ಎಯ್ದೆ ಪೋಲ್ವ ಸೂಳೆಯರ ತುಱುಂಬು, ಸೂಳೆಯರ ಮೆಲ್ನುಡಿ, ಸೂಳೆಯರ್‌ ಇರ್ಪ ಪಾಂಗು, ಸೂಳೆಯರ ನೆಗೞ್ತೆ ನಾಡೆ ತನಗೆ ಅೞ್ತಿ ದಲ್‌, ಅಕ್ಕನೆ ಸೂಳೆಯಾಗಳೇ?

ನಯವಾಗಿ ನೋಡುತ್ತಾರೆ; ನೋಟದಲ್ಲಿಯೇ (ಕಣ್ಣಿಗೆ ಕಣ್ಣು) ಸೇರಿಸುತ್ತಾರೆ; ಜನಜಂಗುಳಿಯ ನಡುವೆ ಆರಿಸಿಕೊಳ್ಳುತ್ತಾರೆ; ಗೋಷ್ಠಿಗಳಲ್ಲಿ ವಶಮಾಡಿಕೊಂಡು, ಅಂಟಿಕೊಳ್ಳುತ್ತಾರೆ; ಇಂಥ ಸೂಳೆಯರನ್ನೇ ಹೋಲುವ ಇವಳ ತುರುಬು, ಮೆಲುಮಾತು, ಇರುವ ರೀತಿ, ನಡವಳಿಕೆ ಇವೆಲ್ಲ ನನಗೆ ತುಂಬ ಇಷ್ಟವಾಗುತ್ತಿದೆ! ಅಂದಹಾಗೆ ಇವಳೇ (ಎಂದರೆ ಈ ಅಕ್ಕನೇ, ಈ ದೂತಿಯೇ, ಈ ದಾಸಿಯೇ) ಸೂಳೆಯೂ ಆಗಿರಬಹುದಲ್ಲವೆ?

ಟಿಪ್ಪಣಿ: ಇಲ್ಲಿ ಬರುವ ʼಅಕ್ಕʼ ಪದದ ಅರ್ಥ ದೂತಿ ಎಂದು ಮುಳಿಯ ತಿಮ್ಮಪ್ಪಯ್ಯನವರು ಸಾಧಾರವಾಗಿ ಹೇಳಿದ್ದಾರೆ.

ವ|| ಎನೆ ಕೇಳ್ದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕೆಗೆ ಮುಯ್ವಾಂತುಮಾವ ಕಾಳೆಗದೊಳಂ ತಾನೆ ಓಡಿ[ಯವ]ರೋಡಿದರೆಂಬಂತೆ ಬೀರಕ್ಕೆ ಮುಯ್ವಾಂತುಮೊಂದು ವೀಸನಪ್ಪೊಡಮಾರ್ಗಮಿತ್ತಱಿಯದೆ ಚಾಗಕ್ಕೆ ಮುಯ್ವಾಂತುಂ ತಮ್ಮಂ ನಗುವರನಱಿಯದೆಣ್ಬರೇಱಿದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು

ಎನೆ ಕೇಳ್ದು, ಮುಗುಳ್ನಗೆ ನಗುತ್ತುಂ ಬರ್ಪನ್‌ ಒಂದು ಎಡೆಯೊಳ್‌ ಒಂದು ಕಂದದ ಮೊದಲುಮಂ ವೃತ್ತದ ತುದಿಯುಮನ್‌ ಒಂದುಮಾಡಿ, ಪದಮಿಕ್ಕಿ ಓದಿ ಪಂಡಿತಿಕ್ಕೆಗೆ ಮುಯ್ವಾಂತುಂ,

ಆವ ಕಾಳೆಗದೊಳಂ ತಾನೆ ಓಡಿ, ‌ʼಅವರ್ ಓಡಿದರ್ʼಎಂಬಂತೆ ಬೀರಕ್ಕೆ ಮುಯ್ವಾಂತುಂ,

ಒಂದು ವೀಸಮನ್‌ ಅಪ್ಪೊಡಂ ಆರ್ಗಂ ಇತ್ತು ಅಱಿಯದೆ ಚಾಗಕ್ಕೆ ಮುಯ್ವಾಂತುಂ,

ತಮ್ಮಂ ನಗುವರನ್‌ ಅಱಿಯದೆ ಎಣ್ಬರ್‌ ಏಱಿದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿ ಎಗ್ಗರುಮಂ ಕಂಡು

ಎನ್ನುವುದನ್ನು ಕೇಳಿ ಮುಗಳ್ನಗೆ ನಗುತ್ತಾ ಬರುತ್ತಿದ್ದವನು ಒಂದೆಡೆಯಲ್ಲಿ ಒಬ್ಬನು ಒಂದು ಕಂದದ ಮೊದಲನ್ನೂ ವೃತ್ತದ ತುದಿಯನ್ನೂ ಸೇರಿಸಿ ಪದ್ಯದ ಸಾಲನ್ನು ರಚಿಸಿ  (ಎಂದರೆ ನಿಜವಾಗಿ ಕಂದವೆಂದರೇನು, ವೃತ್ತವೆಂದರೇನು ಎಂಬುದನ್ನಾಗಲಿ, ಅವುಗಳ ನಡುವಿನ ವ್ಯತ್ಯಾಸವನ್ನಾಗಲಿ ತಿಳಿಯದವನು) ತಾನೇ ದೊಡ್ಡ ಪಂಡಿತ ಎಂದು ತನ್ನ ಹೆಗಲನ್ನು ತಾನೇ ತಟ್ಟಿಕೊಳ್ಳುತ್ತಾನೆ;

ಇನ್ನೊಬ್ಬ ಯುದ್ಧಕ್ಕೆ ಹೋಗಿ ಅಲ್ಲಿಂದ ನಿಜವಾಗಿ ತಾನೇ ಹೆದರಿ ಓಡಿಬಂದಿದ್ದರೂ, ʼಅವರೆಲ್ಲ (ಎಂದರೆ ಶತ್ರುಗಳೆಲ್ಲ) ಓಡಿಹೋದರು(ಓಡಿಸಿಬಿಟ್ಟೆ)ʼ ಎಂದು ತನ್ನ ಶೌರ್ಯವನ್ನು ತಾನೇ ಕೊಚ್ಚಿಕೊಳ್ಳುತ್ತಾನೆ; ಒಂದೇ ಒಂದು ವೀಸದಷ್ಟಾಗಲಿ ದಾನ ಕೊಟ್ಟು ಗೊತ್ತಿಲ್ಲದ ಮತ್ತೊಬ್ಬನು ತಾನೊಬ್ಬ ದೊಡ್ಡ ತ್ಯಾಗಿ (ದಾನಿ) ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ. ಹೀಗೆ  ತಮ್ಮನ್ನು ಕಂಡು ಜನ ನಗುತ್ತಿದ್ದಾರೆಂಬುದನ್ನೂ ತಿಳಿಯದೆ (ಯಾರೋ ಉಬ್ಬಿಸಿದ್ದಕ್ಕೆ) ಕತ್ತೆಯ ಬೆನ್ನೇರಿದ ಎಂಟು ಜನ ದಡ್ಡರಂತೆ, ಅಲ್ಲಿ ಹೆಜ್ಜೆಹೆಜ್ಜೆಗೂ ತುಂಬಿಕೊಂಡಿದ್ದ ಹಸಿಹಸಿ ದಡ್ಡರನ್ನು ಕಂಡು-

ಟಿಪ್ಪಣಿ: ಇಲ್ಲಿ ʼತಾನೆ ಓಡಿ ಯಾರೋಡಿದರೆಂಬಂತೆʼ ಎನ್ನುವಲ್ಲಿ ʼತಾನೆ ಓಡಿ[ಯವ]ರೋಡಿದರ್‌ʼ ಎಂಬ ಪಾಠವನ್ನು ಇಟ್ಟುಕೊಂಡಿದೆ. ಬಿ.ಎಲ್‌. ರೈಸ್‌ ಅವರ ಮುದ್ರಣದಲ್ಲಿ ʼತಾನೆವೊಡೆಯರೋಡಿದರೆಂಬಂತೆʼ ಎಂದು ಇದೆ. ಬೆಳ್ಳಾವೆ ವೆಂಕಟನಾರಣಪ್ಪನವರ ಮತ್ತು ಟಿ ವಿ ವೆಂಕಟಾಚಲ ಶಾಸ್ತ್ರಿಯವರ (ಹಂಪಿ ಕನ್ನಡ ವಿವಿ) ಮುದ್ರಣಗಳಲ್ಲಿ  ʼತಾನೆ ಓಡಿ ಯಾರೋಡಿದರೆಂಬಂತೆʼ ಎಂದು ಇದೆ. ಡಿ. ಎಲ್‌. ನರಸಿಂಹಾಚಾರ್‌ ಅವರು ಈ ಅಂಶವನ್ನು ಪ್ರಸ್ತಾವಿಸಿಲ್ಲ.

ಚಂ|| ಇಱಿಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ

ದಱಿಯದ ವಿದ್ದೆ ಸಲ್ಲದ ಚದುರ್ ನೆರೆ ಕಲ್ಲದ ಕಲ್ಪಿ ಕೇಳ ಮಾ||

ತಱಿಯದ ಮಾತು ತಮ್ಮ ಬಱುವಾತುಗಳೊಳ್ ಪುದಿದೆಗ್ಗರೆಯ್ದೆ ಕ

ಣ್ದೆರೆವಿನಮಾರ್ ಕೆಲರ್ ಪೞಿಯದೇನೆಳೆಯಂ ಕಿಡಿಸಲ್ಕೆ ಬಲ್ಲರೋ|| ೯೫||

ಇಱಿಯದ ಬೀರಂ, ಇಲ್ಲದ ಕುಲಂ, ತಮಗಲ್ಲದ ಚಾಗಂ, ಓದದ ಓದು, ಅಱಿಯದ ವಿದ್ದೆ, ಸಲ್ಲದ ಚದುರ್, ನೆರೆ ಕಲ್ಲದ ಕಲ್ಪಿ, ಕೇಳ! ಮಾತಱಿಯದ ಮಾತು, ತಮ್ಮ ಬಱುವಾತುಗಳೊಳ್ ಪುದಿದ ಎಗ್ಗರ್‌ ಎಯ್ದೆ ಕಣ್ದೆರೆವಿನಂ ಆರ್ ಕೆಲರ್ ಪೞಿಯದೆ ಏನ್‌ ಎಳೆಯಂ ಕಿಡಿಸಲ್ಕೆ ಬಲ್ಲರೋ?

(ಶತ್ರುಗಳನ್ನು) ಕೊಲ್ಲದ ಶೌರ್ಯ, ಇಲ್ಲದ ಕುಲ, ತನ್ನ ಗುಣವಲ್ಲದ ದಾನ, (ಏನು ಓದಿದ್ದೆಂದು) ತಿಳಿಯದ ಓದು, ಅರ್ಥ ಮಾಡಿಕೊಳ್ಳದೆ (ಕಲಿತ) ವಿದ್ಯೆ, ಸಂದರ್ಭಕ್ಕೆ ಹೊಂದದ ಚುರುಕುತನ, ಕಲಿಯದ ವಿದ್ಯೆ, ಹೇಗೆ ಮಾತಾಡಬೇಕೆಂದು ತಿಳಿಯದೆ ಆಡುವ ಮಾತು ಹೀಗೆ ಕೇವಲ ಮಾತುಗಳನ್ನೇ ತಮ್ಮೊಳಗೆ ತುಂಬಿಸಿಕೊಂಡಿರುವ ದಡ್ಡರು (ಈ ಲೋಕದಲ್ಲಿ) ತುಂಬಿಹೋಗಿದ್ದಾರೆ. ಅಂಥ ದಡ್ಡರು ಚೆನ್ನಾಗಿ ಕಣ್ಣು ತೆರೆಯುವಂತೆ (ತಿಳಿದ) ಕೆಲವರಾದರೂ ಅವರನ್ನು ಹಳಿಯುತ್ತಾರೆ; ಆದರೆ ಅಂಥ ತಿಳಿದ ಕೆಲವೇ ವ್ಯಕ್ತಿಗಳು  ಲೋಕದಲ್ಲಿ ತುಂಬಿ ಹೋಗಿರುವ ದಡ್ಡರನ್ನು ಹೇಗೆ ತಾನೇ ತಡೆದಾರು?

ಟಿಪ್ಪಣಿ: ಈ ಪದ್ಯದ ಕೊನೆಯ ಸಾಲಿನಲ್ಲಿ ʼಣ್ದೆರೆವಿನಮಾರ್ ಕೆಲರ್ʼ ಎಂದಿರುವಲ್ಲಿ ʼಕೆಲರ್‌ʼ ಪದವು ಬಿ.ಎಲ್.‌ ರೈಸರ ಪ್ರಕಟಣೆಯಲ್ಲಿ ಇದೆ; ಡಿ.ಎಲ್.‌ ನರಸಿಂಹಾಚಾರ್‌ ಅವರ ವ್ಯಾಖ್ಯಾನದಲ್ಲಿಯೂ ಇದೆ. ಆದರೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಯಲ್ಲೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಯಲ್ಲೂ ಬಿಟ್ಟು ಹೋಗಿದೆ. ಈ ಕಾರಣದಿಂದ ಪದ್ಯವನ್ನು ಅರ್ಥ ಮಾಡುವಲ್ಲಿ ಕೊಂಚ ಗೊಂದಲವಾಗಿದೆ. ಮುಂದಿನ ವಚನವು ʼಎನೆ ನಗುತ್ತಂ ಬರೆʼ ಎಂದು ಮುಂದುವರಿದಿರುವುದರಿಂದ ಪದ್ಯದ ಮಾತುಗಳಲ್ಲಿ – ವಿಷಾದಪೂರ್ಣವೇ ಆದರೂ- ಹಾಸ್ಯವಿದೆ ಎಂಬುದು ಸ್ಪಷ್ಟ.

ʼಕಿಡಿಸುʼ ಶಬ್ದಕ್ಕೆ ʼಅಲರ್‌ʼ ಶಬ್ದಕೋಶದಲ್ಲಿ ʼ to avoid (something) from happening’ ಎಂಬ ಅರ್ಥವನ್ನೂ ಕೊಡಲಾಗಿದೆ. ಇಲ್ಲಿ ಅದೇ ಅರ್ಥವನ್ನು ಇಟ್ಟುಕೊಂಡಿದೆ.

ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ವರ್ ಗಾೞ್ದೊೞ್ತಿರಿರ್ದಲ್ಲಿಗೊರ್ವನೆಗ್ಗಂ ಗೊಟ್ಟಿಗೆ ವಂದು ಕಣ್ಣಱಿಯದೆ ಸೋಂಕೆಯುಂ ಮನಮಱಿಯದೆ ನುಡಿಯೆಯುಮಾತನನಾಕೆಗಳ್ ಬಾಸೆಯೊಳಿಂತೆಂದರ್-‌

ಎನೆ ನಗುತ್ತುಂ ಬರೆ, ಒಂದೆಡೆಯೊಳ್ ನಾಲ್ವರಯ್ವರ್ ಗಾೞ್ದೊೞ್ತಿರ್‌ ಇರ್ದಲ್ಲಿಗೆ ಒರ್ವನ್‌ ಎಗ್ಗಂ ಗೊಟ್ಟಿಗೆ ವಂದು, ಕಣ್ಣಱಿಯದೆ ಸೋಂಕೆಯುಂ, ಮನಮಱಿಯದೆ ನುಡಿಯೆಯುಂ, ಆತನನ್‌  ಆಕೆಗಳ್ ಬಾಸೆಯೊಳ್‌ ಇಂತೆಂದರ್-

ಎಂದು ನಗುತ್ತಾ ಬರುತ್ತಿರಲು, ಒಂದೆಡೆಯಲ್ಲಿ ನಾಲ್ಕೈದು ಮಂದಿ ತುಂಟದಾಸಿಯರಿದ್ದಲ್ಲಿಗೆ ಒಬ್ಬ ದಡ್ಡನು ಗೊಟ್ಟಿಗೆ ಬಂದು (ಅಲ್ಲಿರುವವರನ್ನು) ಒಟ್ಟಾರೆ ಮುಟ್ಟಿ, ಅವರ ಮನಸ್ಸನ್ನು ತಿಳಿದುಕೊಳ್ಳದೆ ಏನಾದರೊಂದು ಮಾತಾಡಲು ತೊಡಗಿದನು. ಆಗ (ಮೊದಲೇ ತುಂಟದಾಸಿಯರಾದ) ಅವರುಗಳೆಲ್ಲ, ಅವರದೇ ಭಾಷೆಯಲ್ಲಿ ಹೀಗೆಂದರು-

ಉ|| ಭಾವಕನೆಂದೊಡಂ ಚದುರನೆಂದೊಡಮಾರ್ ಪೆಱರಾರೊ ನೀನೆ ನಿ

ನ್ನಾವ ಗುಣಂಗಳಂ ಪೊಗೞ್ವೊಡೆಲ್ಲವಱಿಂ ನೆರೆದೆಮ್ಮೊಳಿಂತು ಸ|

ದ್ಭಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ

ದೇವರ ಮುಂದಣಾತನೆನಲಲ್ಲದೆ ಪೇೞ್ ಪೆಱತೇನನೆಂಬುದೋ|| ೯೬||

ಭಾವಕನೆಂದೊಡಂ ಚದುರನೆಂದೊಡಂ ಆರ್?

ಪೆಱರಾರೊ? ನೀನೆ!

ನಿನ್ನಾವ ಗುಣಂಗಳಂ ಪೊಗೞ್ವೊಡೆ!

ಎಲ್ಲವಱಿಂ ನೆರೆದು ಎಮ್ಮೊಳ್‌ ಇಂತು ಸದ್ಭಾವದೆ ಗೊಟ್ಟಿರಲ್ ಬಯಸಿ ಬಂದೆ!

ಅದು ಈಗಳ್‌ ಇದು ಒಳ್ಳಿತಾಯ್ತು!

ಮಾದೇವರ ಮುಂದಣಾತನ್‌ ಎನಲ್‌ ಅಲ್ಲದೆ ಪೇೞ್ ಪೆಱತೇನನ್‌ ಎಂಬುದೋ?

(ಅಲ್ಲಿದ್ದ ನಾಲ್ಕೈದು ತುಂಟದಾಸಿಯರ ಪೈಕಿ ಒಬ್ಬೊಬ್ಬರೂ ಒಂದೊಂದು ಮಾತನ್ನು ಹೇಳುತ್ತಿದ್ದಾರೆ ಎಂದು ಕಲ್ಪಿಸಿಕೊಳ್ಳಬಹುದು)

ರಸಿಕನೆಂದರೆ ಯಾರು? ಜಾಣನೆಂದರೆ ಯಾರು?

ಬೇರೆ ಯಾರಿದ್ದಾರೆ? ನೀನೇ!

ನಿನ್ನ ಯಾವ ಗುಣಗಳನ್ನು ಸಹ ಮೆಚ್ಚಲೇಬೇಕು!

ಎಲ್ಲಾ ಗುಣಗಳಿಂದ ಕೂಡಿ, ಒಳ್ಳೆಯ ಮನಸ್ಸಿನಿಂದ ನಮ್ಮೊಂದಿಗೆ ಗೊಟ್ಟಿಯಲ್ಲಿರಲು ಬಂದಿದ್ದೀಯೆ!

ಇದು ತುಂಬಾ ಒಳ್ಳೆಯದಾಯಿತು!

(ನಿನ್ನನ್ನು) ಆ ಮಹಾದೇವನ ಎದುರಿಗೆ ಇರುವವನು ಎನ್ನದೆ ಬೇರೆ ಏನೆಂದು ಕರೆಯಲು ಸಾಧ್ಯ?

ಟಿಪ್ಪಣಿ: ಕವಿ ಇಲ್ಲಿ ʼಬಾಸೆʼ ಎಂಬ ಪದವನ್ನು ಬಳಸಿದ್ದಾನೆ. ಇಲ್ಲಿನ ಒಂದೊಂದು ವಾಕ್ಯವೂ ವಿರುದ್ಧಾರ್ಥವನ್ನು ಉದ್ದೇಶಿಸುತ್ತದೆ. ಉದಾಹರಣೆಗೆ ʼರಸಿಕನೆಂದರೆ ಯಾರು? ಜಾಣನೆಂದರೆ ಯಾರು? ಬೇರೆ ಯಾರಿದ್ದಾರೆ? ನೀನೇ!ʼ ಎನ್ನುವುದರ ನಿಜವಾದ ಅರ್ಥ ʼನೀನು ರಸಿಕನೂ ಅಲ್ಲ, ಜಾಣನೂ ಅಲ್ಲʼ ಎಂದು! ʼನಿನ್ನ ಯಾವ ಗುಣಗಳನ್ನು ಸಹ ಮೆಚ್ಚಲೇಬೇಕುʼ ಎಂದರೆ ʼನಿನ್ನ ಯಾವ ಗುಣಗಳೂ ಮೆಚ್ಚುವಂತಿಲ್ಲ!ʼ ಎಂದು. ಇಲ್ಲೆಲ್ಲ ಒಂದು ವ್ಯಂಗ್ಯ ಎದ್ದು ಕಾಣುತ್ತದೆ. ಅವರ ಮಾತುಗಳು ಹೀಗೆಯೇ ಮುಂದುವರಿಯುತ್ತವೆ. ಕವಿ ʼಬಾಸೆʼ ಎಂದಿರುವುದು ಈ ವೈಶಿಷ್ಟ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದಲೇ ಇರಬಹುದು.

ಸಾಮಾನ್ಯವಾಗಿ ಶಿವನ ದೇವಸ್ಥಾನಗಳಲ್ಲಿ ದೇವರ ಮೂರ್ತಿಯ ಎದುರಿಗೆ ಒಂದು ಬಸವನ ಮೂರ್ತಿಯನ್ನು ಸ್ಥಾಪಿಸಿರುತ್ತಾರೆ. ಇಲ್ಲಿ ಕವಿ ಅದನ್ನೇ ಹಾಸ್ಯಕ್ಕೆ ಬಳಸಿಕೊಂಡಿದ್ದಾನೆ.

ವ|| ಎಂದಾತನನಾಕೆಗಳ್ ಕಾಡಿ ಕೊಱಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ್ ತನ್ನನುೞಿದ ಪೊಸ ಬೇಟದಾಣ್ಮನನೇಗೆಯ್ದುಂ ಪೋಗಲೀಯದೆ ತನ್ನಳಿಪನೆ ತೋಱಿ-

ಎಂದು ಆತನನ್‌ ಆಕೆಗಳ್ ಕಾಡಿ, ಕೊಱಚಾಡಿ ಕಳೆದರ್. ಮತ್ತಮ್‌ ಒಂದೆಡೆಯೊಳ್‌ ಒರ್ವಳ್ ತನ್ನನ್‌ ಉೞಿದ ಪೊಸ ಬೇಟದ ಆಣ್ಮನನ್‌ ಏಗೆಯ್ದುಂ ಪೋಗಲೀಯದೆ ತನ್ನ ಅಳಿಪನೆ ತೋಱಿ-

ಎಂದು ಆ ದಾಸಿಯರು ತಮ್ಮದೇ ದೇಸೀಮಾತಿ(?)ನಲ್ಲಿ ಅವನನ್ನು ಅಪಹಾಸ್ಯ ಮಾಡಿ, ಕಡೆಗಣಿಸಿ ಕಳಿಸಿದರು. ಬೇರೊಂದು ಸ್ಥಳದಲ್ಲಿ ಒಬ್ಬಳು, ತನ್ನನ್ನು ಅಗಲಿ ಹೊರಟು ನಿಂತ ತನ್ನ ಹೊಸ ಗೆಳೆಯನನ್ನು, ಏನು ಮಾಡಿದರೂ ಹೋಗಲು ಬಿಡದೆ ತನ್ನ ಪ್ರೀತಿಯನ್ನು ತೋರಿಸಿ

ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ

ತ್ತನಿವನಿದೆನ್ನನೇನುೞಿಯಲೀಗುಮೆ ನೀನುೞಿದಾಗಳೆಂದು ಪೋ|

ಪನನಿರದೋಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕ

ಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್|| ೯೭||

ಮನೆಯನ್‌ ಇವಂ, ಮನೋಭವನ್‌ ಇವಂ, ಪೊಸ ಸುಗ್ಗಿಯೊಳಾದ ಅದೊಂದು ಕಿತ್ತನ್ ಇವನ್‌‌, ಇದು ಎನ್ನನೇನ್‌ ಉೞಿಯಲ್‌ ಈಗುಮೆ ನೀನ್‌ ಉೞಿದಾಗಳ್‌? ಎಂದು ಪೋಪನನ್‌ ಇರದೆ ಓಪನಂ (ಪೋಪನಂ ಇರದೆ, ಓಪನಂ; ಓಪನಂ, ಇರದೆ ಪೋಪನಂ; ಇರದೆ ಪೋಪನಂ, ಓಪನಂ) ಮಿಡುಕಲ್‌ ಈಯದೆ ಕಾಲ್ವಿಡಿದು, ಅೞ್ತು, ತೋರ ಕಣ್ಬನಿಗಳನ್‌ ಇಕ್ಕಿದಳ್ ತರಳಲೋಚನೆ ಸಂಕಲೆ ಇಕ್ಕಿದಂತೆವೋಲ್!

ಇವನು ನನ್ನ ಮನೆಯವ! (ಈಗಲೂ ಆಡುಮಾತಿನಲ್ಲಿ ʼಮನೆಯವರು/ಳುʼ ಎಂದರೆ ಗಂಡ ಅಥವಾ ಹೆಂಡತಿ ಎಂಬ ಅರ್ಥ ಇದೆಯಷ್ಟೆ?) ಮದನನಂಥ ಚೆಲುವ! ಈ ವಸಂತದಲ್ಲಿ ಸಿಕ್ಕಿದ ಹುಡುಗ! ಇವನೀಗ ಹೋಗಿಬಿಟ್ಟರೆ ಇಲ್ಲಿ ನಾನು (ಬದುಕಿ) ಉಳಿದಿರುತ್ತೇನೆಯೇ? ಎಂದು ತನ್ನನ್ನು ಬಿಟ್ಟು ಹೊರಟ ನಲ್ಲನ ಕಾಲುಗಳನ್ನು ಅಲುಗಾಡದಂತೆ ಬಿಗಿಯಾಗಿ ಹಿಡಿದು ತನ್ನ ಕಣ್ಣೀರ ತೋರ ಹನಿಗಳ ಸರಪಳಿಯನ್ನು(ಆ ಕಾಲುಗಳಿಗೆ) ತೊಡಿಸಿದಳು.

ಟಿಪ್ಪಣಿ: ಕವಿ ಇಲ್ಲಿ ಸೂಳೆಗೇರಿಯನ್ನು ವರ್ಣಿಸುತ್ತಿದ್ದಾನೆ. ಆದರೆ ಕವಿ ಕಾಣುವ  ಸೂಳೆಗೇರಿಯ ಹೆಣ್ಣು ಗಂಡುಗಳು ಪರಸ್ಪರ ಪ್ರೀತಿ, ದೀರ್ಘಕಾಲದ ಒಡನಾಟಗಳನ್ನು ಬಯಸುತ್ತಾರೆ!  ೯೩ನೇ ಪದ್ಯದಲ್ಲಿ ಬರುವ ಯುವಕ ತನ್ನ ಜೊತೆಗಾತಿ ತನಗೆ ತಪ್ಪಿ ನಡೆದರೆ ಅವಳ ಹಬ್ಬ ಹರಡಿಸಿಬಿಡುವುದಾಗಿ ಧಮಕಿ ಹಾಕುತ್ತಾನೆ. ಈ ಪದ್ಯದಲ್ಲಿ ಹೆಣ್ಣು ತನ್ನ ಹೊಸ ಪ್ರೇಮಿ ತನ್ನೊಂದಿಗೆ ಉಳಿಯದಿದ್ದರೆ ತಾನು ಬದುಕಿ ಉಳಿಯುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಾಳೆ!

ʼತೋರ ಕಣ್ಬನಿಗಳನ್‌ ಇಕ್ಕಿದಳ್ ತರಳಲೋಚನೆ ಸಂಕಲೆ ಇಕ್ಕಿದಂತೆವೋಲ್!ʼ ಎಂಬಲ್ಲಿ ʼಸಂಕಲೆʼ ಪದವು ಎರಡು ಅರ್ಥಗಳಲ್ಲಿ ಸಾರ್ಥಕವಾಗುತ್ತದೆ. ʼಆ ಹೆಣ್ಣು ತನ್ನ ಕಣ್ಣಿನಿಂದ ದಪ್ಪದ ಕಂಬನಿಗಳನ್ನು ಉದುರಿಸಿದಳು. ಒಂದರ ಹಿಂದೆ ಒಂದು ಬೀಳುತ್ತಿದ್ದ ಹನಿಗಳು ನೋಡುವವರಿಗೆ ಒಂದು ಸರಪಳಿಯಂತೆ ಕಾಣುತ್ತಿದ್ದವುʼ ಎಂಬುದು ಒಂದು ಅರ್ಥವಾದರೆ ʼಅವಳ ಕಣ್ಣಿನಿಂದ ಉದುರುವ ದಪ್ಪದ ಕಣ್ಣೀರ ಹನಿಗಳಿಂದಾದ ಸರಪಳಿಯು ಅವನನ್ನು ಕಟ್ಟಿಹಾಕಿತುʼ ಎಂಬುದು ಇನ್ನೊಂದು ಅರ್ಥ.

ವ|| ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸಱಂ ತನ್ನ ಕೆಳೆಯಂಗಿಂತೆಂದಂ-

ಮತ್ತೊರ್ವಂ ತನ್ನ ಸೂಳೆಯೊಳ್‌ ಅದ ಬೇಸಱಂ ತನ್ನ ಕೆಳೆಯಂಗೆ ಇಂತೆಂದಂ-

ಮತ್ತೊಬ್ಬನು ತನ್ನ ಸೂಳೆಯಿಂದ ಆದ ಬೇಸರವನ್ನು ತನ್ನ ಗೆಳೆಯನಿಗೆ ಹೀಗೆ ಹೇಳಿದನು.

ಚಂ|| ಮುಳಿಸಱಿದಂಜಿ ಬಾೞ್ತೆಯಱಿದಿತ್ತು ಮನಂಗೊಳೆಯುಂ ಕನಲ್ವುದ

ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ|

ನ್ನಳೆ ಮನೆದೊೞ್ತು ಸೀರ್ಕರಡಿಯನ್ನಳೆ ನಾದುನಿಯೊಲ್ದುಮೊಲ್ಲದ

ನ್ನಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಱನೆಂತು ನೀಗುವೆಂ ||೯೮||

ಮುಳಿಸಱಿದು ಅಂಜಿ, ಬಾೞ್ತೆಯಱಿದು ಇತ್ತು ಮನಂಗೊಳೆಯುಂ,  ಕನಲ್ವುದರ್ಕೆ ಅಳವಿಯುಂ ಅಂತುಂ ಇಲ್ಲ! ಸನಿಯನ್ನಳೆ ಕುಂಟಣಿ! ಪೋದ ಮಾರಿಯನ್ನಳೆ ಮನೆದೊೞ್ತು! ಸೀರ್ಕರಡಿಯನ್ನಳೆ ನಾದುನಿ! ಒಲ್ದುಂ ಒಲ್ಲದನ್ನಳೆ ಗಡ ಸೂಳೆ ಎಂದೊಡೆ ಇನಿತಂ ತಲೆವೇಸಱನ್‌ ಎಂತು ನೀಗುವೆಂ?

(ಅವಳ) ಸಿಟ್ಟಗೆ ಅಂಜಿದ್ದೇನೆ! ಪ್ರಯೋಜನವನ್ನು ತಿಳಿದು (ಅದಕ್ಕೆ ತಕ್ಕನಾಗಿ) ಕೊಟ್ಟಿದ್ದೇನೆ! ಆದರೂ ಸಿಟ್ಟು ಮಾಡಲು ಲೆಕ್ಕ ಇಲ್ಲ! ಕೊನೆ ಇಲ್ಲ! ಆ ಕುಂಟಣಿಯೋ, ಅವಳೊಂದು ಶನಿ! ಮನೆಗೆಲಸದವಳೋ ದೊಡ್ಡ ಮಾರಿ! ನಾದಿನಿಯೋ ಜಗಳಗಂಟ ಕರಡಿ! ಸೂಳೆಯೋ ಒಲಿದೂ ಒಲಿಯದವಳು! (೯೨ನೇ ಪದ್ಯದ ʼನೆರೆದಿರ್ದೊಡಂ ಸಗಾಟಿಸದೊಡಂʼ ಎಂಬ ಮಾತನ್ನು ನೆನಪು ಮಾಡಿಕೊಳ್ಳಬಹುದು). ಎಂದಮೇಲೆ ಇಷ್ಟೆಲ್ಲ ತಲೆಬೇನೆಗಳನ್ನು ಹೇಗಾದರೂ ನೀಗಲಿ ನಾನು?

ವ|| ಎಂದು ನುಡಿದು ಗೆಂಟಾದಂ..

ಎಂದು ತನ್ನ ಗೋಳನ್ನೆಲ್ಲ ಹೇಳಿಕೊಂಡು ಅಲ್ಲಿಂದ ಹೊರಟು ಹೋದನು..