Untitled

ಎತ್ತಿನಹೊಳೆ: ಕನೀನಿನಿ ಉತ್ತರಿಸಬೇಕಾದ ಹಲವು ಸಂದೇಹಗಳು

ಸಹ್ಯಾದ್ರಿ ಸಂಚಯ ಮತ್ತಿತರ ಹಲವು ಸಂಘಟನೆಗಳು ಹಟ ಕಟ್ಟಿ ಎತ್ತಿನಹೊಳೆ ಯೋಜನೆಯ ವಿರುದ್ಧ ದೊಡ್ಡ ಹೋರಾಟವನ್ನು ಸಂಘಟಿಸಿದ್ದು ಎಲ್ಲರಿಗೂ ತಿಳಿದ ಸಂಗತಿ. ಸಹ್ಯಾದ್ರಿ ಸಂಚಯವು ಹತ್ತು ಪ್ರಶ್ನೆಗಳನ್ನು ರಾಜಕಾರಣಿಗಳಿಗೂ, ತಜ್ಞರಿಗೂ ಕೇಳಿತ್ತು. ಈ ಪ್ರಶ್ನೆಗಳಿಗೆ ಅವರು ಸೆಪ್ಟೆಂಬರ್ 19 ರ ಸಂಜೆ ನಾಲ್ಕಕ್ಕೆ ಮಂಗಳೂರಿನ ರೋಶನಿ ನಿಲಯದಲ್ಲಿ ನಡೆಯುವ ಸಭೆಯಲ್ಲಿ ಉತ್ತರಿಸಬೇಕಾಗಿತ್ತು. ಯು.ಟಿ. ಖಾದರ್ ಅವರು ಕರ್ನಾಟಕ ನೀರಾವರಿ ನಿಗಮ ನಿಯಮಿತದವರಿಂದ ಈ ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ಪಡೆದು ಅಂದಿನ ಸಭೆಯಲ್ಲಿ ಅದನ್ನು ಸಂಘಟಕರಿಗೆ ಕೊಟ್ಟರು. ಈ ಉತ್ತರದ ಹಲವು ಅಂಶಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
1
ಪ್ರೊ. ಟಿ ವಿ ರಾಮಚಂದ್ರ ಅವರ ವರದಿಯು ಅವರ ವೈಯಕ್ತಿಕ ವರದಿ ಎಂದೂ ಅದು ತನ್ನ ವರದಿ ಅಲ್ಲವೆಂದೂ ಭಾರತೀಯ ವಿಜ್ಞಾನಸಂಸ್ಥೆ ಸ್ಪಷ್ಟೀಕರಣ ನೀಡಿದೆ ಎನ್ನುತ್ತದೆ ಕನೀನಿನಿ.  ಪ್ರೊ. ರಾಮಚಂದ್ರರ ವರದಿ ವೈಜ್ಞಾನಿಕವೆ ಅಲ್ಲವೆ, ಅಧ್ಯಯನ ವೈಜ್ಞಾನಿಕ ಶಿಸ್ತಿಗೆ ಒಳಪಟ್ಟಿದೆಯೆ ಇಲ್ಲವೆ, ಅಂಕಿಸಂಖ್ಯೆಗಳು ಸಾಧಾರವೆ ಅಲ್ಲವೆ, ಲೆಕ್ಕಾಚಾರ ಕರಾರುವಾಕ್ಕಾಗಿದೆಯೆ ಇಲ್ಲವೆ ಈ ಮುಂತಾದ ಅಂಶಗಳನ್ನು ಪರಿಗಣಿಸಿ  ವರದಿಯನ್ನು ಎದುರಿಸುವುದು ಬಿಟ್ಟು ವರದಿ ಮಾಡಿದವರ ಅರ್ಹತೆಯನ್ನೇ ಕನೀನಿನಿ ಪ್ರಶ್ನಿಸುತ್ತಿರುವುದು ಕೇವಲ ಉತ್ತರಿಸುವ ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ. ಪ್ರೊ. ರಾಮಚಂದ್ರರ ವರದಿಯನ್ನು ಎದುರಿಗಿಟ್ಟುಕೊಂಡು ಅದನ್ನು ಛೇದಿಸಿ ತಪ್ಪೆಲ್ಲಿದೆ ಎಂದು ತೋರಿಸುವುದು ಕನೀನಿನಿಯ ಮುಂದಿರುವ ಸವಾಲು. ಆ ಸವಾಲನ್ನು ಅವರು ಎದುರಿಸಿ ಸರಿಯಾದ ಉತ್ತರ ಕೊಡಲಿ.
2
ಕೇಂದ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯವರು ಲೆಕ್ಕ ಹಾಕಿರುವ ನೀರಿನ ಪ್ರಮಾಣಕ್ಕೂ ತಾನು  ಲೆಕ್ಕ ಹಾಕಿರುವ ನೀರಿನ ಪ್ರಮಾಣಕ್ಕೂ ಬಹುತೇಕ ಸಾಮ್ಯತೆ ಇದೆ ಎಂದು ಕನೀನಿನಿಯ ಹೇಳಿಕೆ. ಈ ಎರಡೂ ವರದಿಗಳ ದೃಢೀಕೃತ ಪ್ರತಿಗಳನ್ನು ಕನೀನಿನಿ ತನ್ನ ಉತ್ತರದ ಜೊತೆ ಸಹ್ಯಾದ್ರಿ ಸಂಚಯಕ್ಕೆ ಯಾಕೆ ನೀಡಿಲ್ಲ? ತನ್ನ ಜಾಲತಾಣದಲ್ಲಿ ಅವುಗಳನ್ನು ಯಾಕೆ ಪ್ರಕಟಿಸಿಲ್ಲ?  (ಮೊದಲು ಖಾದರ್ ಅವರು ತಂದುಕೊಟ್ಟಿದ್ದ ಈ ಉತ್ತರದ ಪ್ರತಿಯಲ್ಲಿ ಉತ್ತರಿಸಿದವರ ಹೆಸರು, ವಿಳಾಸ, ಸಹಿ ಇವು ಕೂಡ ಇರಲಿಲ್ಲ. ಕಾರ್ಯಕ್ರಮ ನಿರ್ವಾಹಕ ಗಿರಿಧರ ಕಾಮತರು ಚಾರ್ಟರ್ಡ್ ಎಕೌಂಟೆಂಟ್. ಅವರೂ ಕೂಡಲೇ ಈ ಲೋಪವನ್ನು ಎತ್ತಿ ತೋರಿಸಿದರು. ಸಭೆ ಮುಗಿದ ಮೇಲೆ ಖಾದರ್ ಹೊರಗೆ ಹೋಗಿ ಅದಕ್ಕೆ ಸಹಿ ಹಾಕಿಸಿ ತಂದುಕೊಟ್ಟರು.) ಆ ವರದಿಗಳನ್ನು ನೀಡಿದರೆ ಮಾತ್ರ ಮುಂದೆ ವಿಶ್ಲೇಷಿಸಬಹುದು. ಕನೀನಿನಿಗೆ ಸುಳ್ಳು ಹೇಳುವ ಅಭ್ಯಾಸವೂ ಇದೆ ಎನ್ನುವುದಕ್ಕೆ ನನ್ನಲ್ಲಿ ದಾಖಲೆಗಳಿವೆಯಾದ್ದರಿಂದ ಈ ಮಾತು ಹೇಳುತ್ತಿದ್ದೇನೆ.
ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯವರ ವರದಿಯನ್ನು ನಾನು ಮಾಹಿತಿ ಹಕ್ಕಿನಲ್ಲಿ  ಕೇಳಿದ್ದೆ. 23-05-2014 ರಲ್ಲಿ ಅವರು ನನಗೆ ಬರೆದ ಪತ್ರದಲ್ಲಿ “In this context this is to inform you that the objective of the project was to estimate the DEPENDABLE YIELD of Yettinahole Project ………. As per the objective of the project, we have estimated the dependable yield from these catchments as 23.41 TMC. However, the estimation of divertible yield is out of the scope of the present project” ಎಂದು ಹೇಳಿದ್ದರು. ಮೊನ್ನೆಯ ಸಭೆಯಲ್ಲಿ ಮಾತಾಡುವಾಗಲೂ ಮುಖ್ಯ ಎಂಜಿನಿಯರ್ “ಶೇ. 50 ಡಿಪೆಂಡಬಲ್ ಈಲ್ಡ್” ಆಧರಿಸಿ ಎಂದೇ ಹೇಳಿದ್ದಾರೆ.   “ಶೇ. 50 ಡಿಪೆಂಡಬಲ್ ಈಲ್ಡ್” ಎನ್ನುವುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಇದರ ಅರ್ಥ ಹತ್ತು ವರ್ಷಗಳ  ಅವಧಿಯಲ್ಲಿ 5 ವರ್ಷಗಳಲ್ಲಿ ಮಾತ್ರ 23.41 ಟಿಎಂಸಿ ನೀರು ಹರಿಯುತ್ತದೆ, ಉಳಿದ ವರ್ಷಗಳ ಬಗ್ಗೆ ಗ್ಯಾರಂಟಿ ಇಲ್ಲ ಎಂದು. ಇನ್ನು ಡಿಪೆಂಡಬಲ್ ಈಲ್ಡ್ ಮತ್ತು ಡೈವರ್ಟಿಬಲ್ ಈಲ್ಡ್ ಗಳು ಬೇರೆ ಬೇರೆ. ಡಿಪೆಂಡಬಲ್ ಈಲ್ಡ್ ಎಂದರೆ ಸಿಗುವ ಒಟ್ಟು ನೀರಿನ ಪ್ರಮಾಣವಾದರೆ ಡೈವರ್ಟಿಬಲ್ ಈಲ್ಡ್ ಎಂದರೆ ಸಿಗುವ ನೀರಿನಲ್ಲಿ ಎಷ್ಟು ನೀರನ್ನು ತಿರುಗಿಸಬಹುದೋ ಅಥವಾ ಸಾಗಿಸಬಹುದೋ ಆ ನೀರಿನ ಪ್ರಮಾಣ. ಸಹಜವಾಗಿ, ಸಿಗುವ ನೀರಿನ ಪ್ರಮಾಣಕ್ಕಿಂತ ಸಾಗಿಸಬಹುದಾದ ನೀರಿನ ಪ್ರಮಾಣ ಕಡಿಮೆ ಇರುತ್ತದೆ.
ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಕುಡಿಯುವ ನೀರಿನ ಯೋಜನೆಗಳಲ್ಲಿ ಶೇ.90 ಡಿಪೆಂಡಬಲ್ ಈಲ್ಡ್ ಇರಬೇಕು ಎಂಬುದು ಸಾಮಾನ್ಯವಾಗಿ ಒಪ್ಪಿತವಾಗಿರುವ ನಿಯಮ. ಆರ್ಥಿಕ ಇಲಾಖೆಯು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡುವಾಗ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದೆ:
(iv) Scope of the project should be re-visited, as drinking water projects require 90% dependability where as this project is premised on only 50% dependability. Both Urban Development Department and Rural Development Department should be consulted and their views should be incorporated in the project design.
ಹೀಗೆ ಈ ಯೋಜನೆಯಲ್ಲಿ “ಶೇ. 50 ಡಿಪೆಂಡಬಲ್ ಈಲ್ಡ್”  ಅನ್ನು ಆಧರಿಸಿ, ಕನೀನಿನಿ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೂ,  ಪರಂಪರೆಯಿಂದ ಒಪ್ಪಿತವಾದ ಒಂದು ನಿಯಮವನ್ನೂ ಗಾಳಿಗೆ ತೂರಿದೆ. ಆದ್ದರಿಂದ ಇದನ್ನು ಒಪ್ಪಲು ಸಾಧ್ಯವಿಲ್ಲ.
3
ಮಳೆಗಾಲದಲ್ಲಿ ಮಾತ್ರ ನೀರನ್ನು ತಿರುಗಿಸಲಾಗುವುದು ಎಂದು ಕನೀನಿನಿಯ ಹೇಳಿಕೆ. ಮಳೆಗಾಲ ಎಂದರೆ ಎಲ್ಲಿಂದ ಪ್ರಾರಂಭಿಸಿ ಎಲ್ಲಿಯವರೆಗೆ? ಡಿ ಪಿ ಆರ್ ಪ್ರಕಾರ ಅದು ಜೂನಿನಿಂದ ನವೆಂಬರ್ ವರೆಗೆ. ಈ ಯೋಜನೆಯ ಹೆಸರೇ Scheme for diversion of flood water from Sakaleshpura(west) to Kolar/Chikkaballapur Districts(East)  ಎಂದು. ಒಟ್ಟು ಅರ್ಥ ಜೂನಿನಿಂದ ನವೆಂಬರ್ ವರೆಗೆ ಪ್ರವಾಹದ ನೀರನ್ನು ತಿರುಗಿಸುವ ಯೋಜನೆ ಎಂದಾಯಿತು. ಜೂನಿನಿಂದ ನವೆಂಬರ್ ವರೆಗೆ  ಮಳೆಗಾಲ ಎಂಬ ಕನೀನಿನಿಯ ನಿರ್ಣಯಕ್ಕೆ ಡಿ ಪಿ ಆರ್ ನಲ್ಲಿ ಆಧಾರವೇನೂ ಇಲ್ಲ. ಜೊತೆಗೆ ಯಾವುದು ಪ್ರವಾಹದ ನೀರು, ಯಾವುದು ಸಹಜ ಹರಿವಿನ ನೀರು, ಅವೆರಡನ್ನೂ ಪ್ರತ್ಯೇಕಿಸಿ ಕೇವಲ ಪ್ರವಾಹದ ನೀರನ್ನು ಒಯ್ಯುವುದು ಹೇಗೆ ಎಂಬ ಗೊಂದಲವೂ ಇದೆ. ಅದಿರಲಿ. ಕನೀನಿನಿಯ ಈ “ಪ್ರವಾಹದ ನೀರಿ”ನ ಕತೆಯನ್ನು ಕೊಂಚ ಪರಿಶೀಲಿಸಿ ನೋಡೋಣ.
ಈ ಯೋಜನೆ ಕಾರ್ಯಗತವಾಗುವುದು ಮಾರೇನ ಹಳ್ಳಿಯ ಸುತ್ತಮುತ್ತ.  ಹಾಗಾಗಿ ಮಾರೇನಹಳ್ಳಿಯಲ್ಲಿ ಬೀಳುವ ಮಳೆಯ ಪ್ರಮಾಣವನ್ನು ವಿಶ್ಲೇಷಿಸಿದರೆ ಯಾವ ತಿಂಗಳಿನಲ್ಲಿ ಈ ಹೊಳೆಗಳಲ್ಲಿ ಪ್ರವಾಹ ಇರುವುದು ಸಾಧ್ಯ ಎಂಬುದು ಅರ್ಥವಾಗುತ್ತದೆ. ಮಾರೇನಹಳ್ಳಿಯಲ್ಲಿ 1991 ರಿಂದ 2012 ರವರೆಗಿನ 22 ವರ್ಷಗಳ ಅವಧಿಯಲ್ಲಿ ಪ್ರತಿತಿಂಗಳೂ ಬಿದ್ದ ಮಳೆಯ ದಾಖಲೆಯನ್ನು (ಕರ್ನಾಟಕ ಸರಕಾರದ ಅಧಿಕೃತ ದಾಖಲೆ) ಆಧರಿಸಿ ನಾವಿದನ್ನು ವಿಶ್ಲೇಷಿಸಬಹುದು. ಈ 22 ವರ್ಷಗಳ ತಿಂಗಳುವಾರು ಮಳೆಯ ಸರಾಸರಿ ಪ್ರಮಾಣ ಮಿ.ಮೀ.ಗಳಲ್ಲಿ ಹೀಗಿದೆ: ಜನವರಿ: 0  ಫೆಬ್ರವರಿ:0.66 ಮಾರ್ಚ್:21.9 ಏಪ್ರಿಲ್:77.18 ಮೇ: 142.9 ಜೂನ್:580.9 ಜುಲೈ:1751.1 ಆಗಸ್ಟ್:1214.8 ಸೆಪ್ಟೆಂಬರ್: 497.4  ಅಕ್ಟೋಬರ್:216.6 ನವೆಂಬರ್:80 ಡಿಸೆಂಬರ್: 8.5  ಈ ಅಂಕಿ ಅಂಶಗಳು ಈ ಹೊಳೆಗಳಲ್ಲಿ “ಪ್ರವಾಹ” ಇರುವ ಸಾಧ್ಯತೆ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮಾತ್ರ ಎಂಬುದನ್ನು ನಿರ್ವಿವಾದವಾಗಿ ದೃಢಪಡಿಸುತ್ತವೆ ಮತ್ತು “ಜೂನಿನಿಂದ ನವೆಂಬರ್ ವರೆಗೆ ಮಳೆಗಾಲ” ಎಂಬ ಕನೀನಿನಿಯ ಗ್ರಹಿಕೆಯನ್ನು ಛಿದ್ರಗೊಳಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿ ಮಾತ್ರ ನೀರನ್ನು ಸಾಗಿಸುವ ಕನೀನಿನಿಯ ಯೋಜನೆಯು ಕೇವಲ ಅರ್ಥಹೀನ. ಅದನ್ನು ಒಪ್ಪುವುದು ಸಾಧ್ಯವೇ ಇಲ್ಲ.
4
“ಮೊದಲನೆ ಹಂತದ ಕಾಮಗಾರಿಗೆ …. ಕೇವಲ 13.93 ಹೆ. ಅರಣ್ಯ ಅವಶ್ಯಕತೆ ಇದ್ದು….” ಎನ್ನುತ್ತದೆ ಕನೀನಿನಿಯ ಉತ್ತರ. “ಮೊದಲನೆ ಹಂತ” ಮಾತ್ರ ಯಾಕೆ? ಇಡೀ ಯೋಜನೆಗೆ ಎಷ್ಟು ಅರಣ್ಯ ಬೇಕು ಎಂಬುದನ್ನು ಯಾಕೆ ಹೇಳುವುದಿಲ್ಲ? ಯೋಜನೆಗೆ ಅನುಮತಿ ನೀಡಿರುವ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ತನ್ನ ಅನುಮತಿಯಲ್ಲಿ “Total land requirement is approximately 1200 ha. Out of which 50% of the land is forest land and the rest is agricultural land.” ಎಂದು ಹೇಳಿರುವುದನ್ನು ಕನೀನಿನಿ ಮುಚ್ಚಿಡುತ್ತಿರುವುದು  ಜನತೆಗೆ ಮಾಡುತ್ತಿರುವ ದ್ರೋಹವಲ್ಲವೆ? ಪಶ್ಚಿಮಘಟ್ಟದ ಕಾಡುಗಳಿಗೆ ಒಂದು ವಿಶೇಷ ಸ್ಥಾನಮಾನ ಇರುವುದು ನಿಜ. ಆದರೆ ಕಾಡನ್ನು ಎಲ್ಲಿ ಕಡಿದರೂ ಅದು ಪರಿಸರ ನಾಶವೇ. ಕೃಷಿಯ ನಾಶವೂ ಹಸಿರಿನ ನಾಶವೇ.
ಇನ್ನು “ಯೋಜನೆಗೆ ಅನುಮತಿ ಪಡೆದು ಮೇಲೆ ತಿಳಿಸಿದ 13.93 ಹೆ.ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು” ಎಂದರೇನು ಅರ್ಥ? ಅರಣ್ಯ ಮತ್ತು ಪರಿಸರ ಇಲಾಖೆ ತಾನು ನೀಡಿದ ಅನುಮತಿಯ ಜೊತೆಗೆ ವಿಧಿಸಿರುವ ಮೊದಲನೇ ಷರತ್ತೇ ಹೀಗಿದೆ:   i. Necessary permission /clearance for diversion of forest land for the project shall be obtained from the designated authority before commencement of project
ಕನೀನಿನಿ ಯಾವುದೇ ಹೆದರಿಕೆ ಇಲ್ಲದೆ ಈ ಷರತ್ತನ್ನು ಉಲ್ಲಂಘಿಸಿ, ಯೋಜನಾ ಕಾಮಗಾರಿಯನ್ನು ಪ್ರಾರಂಭಿಸಿದೆ. “ಯೋಜನೆಗೆ ಅನುಮತಿ ಪಡೆದು ಮೇಲೆ ತಿಳಿಸಿದ 13.93 ಹೆ.ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು” ಎಂಬ ಅದರ ಮಾತು ಕೇಂದ್ರ ಮತ್ತು ಪರಿಸರ ಇಲಾಖೆಯ ಷರತ್ತಿನ ಕುರಿತು ಅದಕ್ಕಿರುವ ತಿರಸ್ಕಾರದ ಸ್ಪಷ್ಟ ದ್ಯೋತಕ.
ರಾಷ್ಟ್ರೀಯ ಹಸಿರು ಪೀಠವು ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿರುವುದೂ ಬಹುಶಃ ಇದೇ ಆಧಾರದ ಮೇಲೆ. ಯೋಜನೆಯ ಕಾಮಗಾರಿಯನ್ನು ಸದ್ಯಕ್ಕೆ ನಿಲ್ಲಿಸಬೇಕಾಗಿ ಬಂದುದರಿಂದ ಆದ ನಷ್ಟಕ್ಕೆ ಜವಾಬ್ದಾರಿಯನ್ನು ಕನೀನಿನಿ ಹೊರುತ್ತದೆಯೆ?
5
“ಈ ಯೋಜನೆಯು ಕುಡಿಯುವ ನೀರು ಒದಗಿಸುವ ಯೋಜನೆಯಾಗಿರುವುದರಿಂದ…” –  ಇದೊಂದು ಕುಡಿಯುವ ನೀರಿನ ಯೋಜನೆ ಎಂದೇ ಕನೀನಿನಿ ಮೊದಲಿಂದಲೂ ಬಿಂಬಿಸಿಕೊಂಡು ಬಂದಿದೆ. ಕನೀನಿನಿ ಎಂಬುದರ ಪೂರ್ಣ ರೂಪ ಕರ್ನಾಟಕ ನೀರಾವರಿ ನಿಗಮ ನಿಯಮಿತ ಎಂದು. ಕುಡಿಯುವ ನೀರಿಗೂ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೂ ಅದು ಹೇಗೆ ಸಂಬಂಧ? ಇದೊಂದು ಕುಡಿಯುವ ನೀರಿನ ಯೋಜನೆಯೇ ಆಗಿದ್ದರೆ ಇದನ್ನು  ಕಾರ್ಯಗತಗೊಳಿಸಬೇಕಾದ್ದು ಕರ್ನಾಟಕ  ನಗರ ನೀರು ಸರಬರಾಜು ಮತ್ತು ಒಳಚರಂಡಿ  ಮಂಡಳಿಯಲ್ಲವೆ? ಕನೀನಿನಿಗೆ ಯೋಜನೆಯ ಅನುಷ್ಠಾನವನ್ನು  ಸರಕಾರ ವಹಿಸಿದೆ ಎಂಬುದೇ ಅದರಲ್ಲಿ ನೀರಾವರಿಯ ಭಾಗ ಇದೆ ಎಂಬುದರ ಸಾಕ್ಷಿ.
ಕನೀನಿನಿ 18-10-12 ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಏಳು ಪುಟಗಳ  ಒಂದು ಪತ್ರ ಬರೆದಿದೆ. ಆ ಪತ್ರದಲ್ಲಿ ಈ ಯೋಜನೆಯ ನೀರಿನ ಹಂಚಿಕೆಯನ್ನು ಹೀಗೆ ಹೇಳಿದೆ:
Drinking water needs of Kolar and Chikkaballapura Districts: 169.8 M.Cum (6 TMC)
Filling up of existing MI/ZP tanks in Kolar and Chikkaballapura districts – 113.2 M.Cum(4.00 TMC)
ಕುಡಿಯುವ ನೀರಿಗೆ 6 ಟಿಎಂಸಿ ಎಂದು ಹೇಳಿ ಮತ್ತೆ ಸಣ್ಣ ನೀರಾವರಿ/ಜಿಲ್ಲಾ ಪಂಚಾಯತ್ ಕೆರೆಗಳನ್ನು ತುಂಬಿಸಲು 4 ಟಿಎಂಸಿ  ಎಂದು ಹೇಳಿರುವುದರ ಅರ್ಥವೇನು? ಕುಡಿಯುವ ನೀರಿನ ಹೆಸರಿನ ಈ ಯೋಜನೆಯ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತದೆ. ನೀರಾವರಿಗಾಗಿ ಇರುವ ಕೆರೆಗಳಿಗೆ ನೀರು ತುಂಬಿಸಿದರೆ ಅದು ಕುಡಿಯಲು ಉಪಯೋಗವಾಗುವುದು ಹೇಗೆ?  ಬದಲಿಗೆ ಆ ಕೆರೆಗಳ ಸುತ್ತಮುತ್ತ ಸಹಜವಾಗಿ ಅಂತರ್ಜಲ ಹೆಚ್ಚುತ್ತದೆ. ಬೋರ್ ವೆಲ್ಲುಗಳಲ್ಲಿ ನೀರು ಸಿಗಲು ಪ್ರಾರಂಭವಾಗುತ್ತದೆ. ಈ ಬೋರ್ ವೆಲ್ಲುಗಳ ನೀರು ಕೃಷಿ, ಕೈಗಾರಿಕೆ, ಮಾರಾಟ ಹೀಗೆ ಯಾವುದಕ್ಕೆ ಬೇಕಾದರೂ ಉಪಯೋಗವಾಗಬಹುದಲ್ಲವೆ? ನೀರು ಎಷ್ಟೇ ಬಂದರೂ ಆದಕ್ಕೆ ನಗರಗಳಲ್ಲಿ ಬೇಡಿಕೆ ಇರುವಾಗ ಈ ಕೆರೆಗಳ ನೀರು ಬೆಂಗಳೂರಿನಲ್ಲಿ, ಕೋಲಾರದಲ್ಲಿ, ಚಿಕ್ಕಬಳ್ಳಾಪುರದಲ್ಲಿ ಟ್ಯಾಂಕರುಗಳ ಮೂಲಕ ಮಾರಾಟವಾಗುವುದಿಲ್ಲ ಎಂದು ಹೇಗೆ ನಂಬುವುದು?
6
“ಈ ಯೋಜನೆಯಲ್ಲಿ ಯಾವುದೇ ಅಂತಾರಾಜ್ಯ ಜಲವಿವಾದಗಳಿಗೆ ಆಸ್ಪದ ಇರುವುದಿಲ್ಲ” ಎಂಬುದು ಕನೀನಿನಿಯ ಸಿದ್ಧಾಂತ. ಸಾಮಾನ್ಯವಾಗಿ ಇಷ್ಟು ದೊಡ್ಡ ಯೋಜನೆಗಳನ್ನು ಕಾರ್ಯಗತ ಮಾಡುವಾಗ ಯೋಜನೆಯ ವಿವರಗಳನ್ನು ನೀಡಿ ಕಾನೂನಿನ ಅಭಿಪ್ರಾಯ ಪಡೆಯುವುದು ಕ್ರಮ. ಈ ಯೋಜನೆಯಲ್ಲಿ ಕನೀನಿನಿ ಆ ಕೆಲಸ ಮಾಡಿದಂತಿಲ್ಲ. ಆದರೆ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯ ಕುರಿತು, ಕಾವೇರಿ ವಿವಾದಗಳ  ಕುರಿತಂತೆ ಕರ್ನಾಟಕ ಸರಕಾರಕ್ಕೆ ತಾಂತ್ರಿಕ ಸಲಹೆಗಾರರಾದ ಆರ್. ಮನು ಎಂಬುವವರ ಅಭಿಪ್ರಾಯವನ್ನು ಕೇಳಿ ಪಡೆದಿದೆ.  ಅದರಲ್ಲಿ ಅವರು ಹೀಗೆ ಹೇಳಿದ್ದಾರೆ:
3. From the Report of the Chief Engineer, UBP, it emerges that:
……
…….
c. These Reservoirs are proposed to be constructed in Palar, North Pennar & South Pennar basins, all of which attract the terms of 1892 Agreement.
……….
……….
f. It is therefore advised that as far as possible to locate the proposed reservoir at places that do not attract the provisions of 1892 agreement. Otherwise, the protracted court proceedings may delay the execution of the proposed scheme.
ಈ ತಾಂತ್ರಿಕ ಅಭಿಪ್ರಾಯವನ್ನು ಕನೀನಿನಿ ಪರಿಗಣಿಸಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಪರಿಗಣಿಸಿದ್ದರೆ, ಆ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ?
ಈ ವಿಷಯಕ್ಕೆ ಸಂಬಂಧಿಸಿ  ಇನ್ನೊಂದು ಸಂದೇಹವೂ ಇದೆ. ಯೋಜನೆಯ ಪೈಪುಗಳು ಸಕಲೇಶಪುರದ ಹತ್ತಿರ ಎರಡು ಕಡೆ ಹೇಮಾವತಿ ನದಿಯನ್ನು ದಾಟಿ ಹೋಗಬೇಕು. ಹೇಮಾವತಿಯು ಕಾವೇರಿಯ ಉಪನದಿ. ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು ಅಭಿಪ್ರಾಯ ಕೇಳಿ ತನಗೆ ನೀಡಿದ ದಾಖಲೆಗಳಲ್ಲಿ “The enclosure does not contain even a basic schematic map of the scheme”   ಎಂದು ತಾಂತ್ರಿಕ ಸಲಹೆಗಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಯೋಜನೆಯ ಪೈಪುಗಳನ್ನು ನದಿ ದಾಟಿಸಬೇಕಾಗಿರುವ ಅಂಶ ತಾಂತ್ರಿಕ ಸಲಹೆಗಾರರ ಗಮನಕ್ಕೆ ಬಂದಿಲ್ಲ. ಹೇಮಾವತಿ ನದಿಯ  ಕೆಳಗಿಂದ ಅಥವಾ ಮೇಲಿನಿಂದ ಪೈಪುಗಳನ್ನು ದಾಟಿಸಲು ಅಂತಿಮವಾಗಿ ತಮಿಳುನಾಡಿನ ಸಹಮತ ಬೇಕಾಗುವುದಿಲ್ಲವೇ? ಬೇಕಾಗಿದ್ದರೆ, ಅದನ್ನು ಪಡೆಯುವುದು ಅಷ್ಟು ಸುಲಭವೇ?  ಈ ಬಗ್ಗೆ ಕನೀನಿನಿಯೇ ಸ್ಪಷ್ಟೀಕರಣ ಕೊಡಬೇಕು.
************
ಕನೀನಿನಿಗೆ ಸುಳ್ಳು ಹೇಳುವ ಅಭ್ಯಾಸವಿದೆ ಎಂದು ನಾನು ಮೇಲೆ ಒಂದು ಕಡೆ ಹೇಳಿದ್ದೇನಷ್ಟೆ. ಈ ಕೆಳಗಿನ ಎರಡು ಪ್ರಕರಣಗಳನ್ನು ನೋಡಿ:
1.
2013ರಲ್ಲಿ ಅದು ಪ್ರಕಟಿಸಿರುವ ಸಮಗ್ರ ಯೋಜನಾ ವರದಿಯ 21 ನೇ ಅಧ್ಯಾಯದಲ್ಲಿ  “The resources for executing the above project in stages will be shared  by the State and the Central Governments ” ಎಂಬ ಮಾತಿತ್ತು. ನಾನು ಮಾಹಿತಿ ಹಕ್ಕಿನಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಕಡತದ ಎಲ್ಲಾ ದಾಖಲೆಗಳನ್ನೂ ನೀಡುವಂತೆ ಕೇಳಿದೆ. ಹೀಗೆ ಉತ್ತರ ಬಂತು: “ಈ ಕುರಿತಾಗಿ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆಯುವ ಸಲುವಾಗಿ ಪ್ರಸ್ತಾವನೆ ಇರುವುದಿಲ್ಲ”!
2.
ಯೋಜನಾವರದಿಯ 34 ನೇ ಪುಟದಲ್ಲಿ ಹೀಗಿತ್ತು: “…….. Many public meetings have been held by the Govt. to make the people aware of the importance of the scheme both in the initial reaches and the end reaches of the project.” ನಾನು ಎತ್ತಿನಹೊಳೆ ಯೋಜನೆ ಬಗ್ಗೆ ನಡೆಸಿದ ಸಾರ್ವಜನಿಕ ಸಭೆಗಳ ಕುರಿತಂತೆ ಎಲ್ಲ ದಾಖಲೆಗಳನ್ನು ಕೇಳಿದೆ. ಕನೀನಿನಿಯ ಉತ್ತರದಲ್ಲಿ ಮೂರು ಸಭೆಗಳ ವಿವರ ಇತ್ತು.
1.ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ 9/5/12 ರಲ್ಲಿ ನಡೆದ ಸಭೆ.
2. ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 24/11/12 ರಲ್ಲಿ  ನಡೆದ ಸಭೆ  .
3.  4/12/12ರಂದು “ಕೃಷ್ಣಾ”ದಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮಾನ್ಯ ಸಚಿವರು, ಶಾಸಕರು, ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ.
ಈ ಮೂರರ ಪೈಕಿ ಯಾವುದು ಸಾರ್ವಜನಿಕ ಸಭೆ? ಇಂಥ ಸುಳ್ಳುಗಳನ್ನು ಹೇಳಲು ಧೈರ್ಯವಾದರೂ ಹೇಗೆ ಬರುತ್ತದೆ ಇವರಿಗೆ?

Facebook Comments Box

Related posts

ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

 

 

ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ–

ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.

ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ

ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|

ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ

ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ ||

(ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ;

ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ;

ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್

ಅವ್ವಳಿಸಿರೆ,

ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ)

 

ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು.

ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ–

(ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ)

ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು–

ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ

ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|

ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ

ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪||

(ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ)

ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ  ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು!

ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ–

(ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ  ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ)

ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು–

ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ

ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|

ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್

ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫||

(ʼಅಲರಂಬು...

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ...

ಪಂಪಭಾರತ ಆಶ್ವಾಸ ೪ ೪೩-೫೨)

 

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ...

Latest posts

ಪಂಪಭಾರತ ಆಶ್ವಾಸ ೪ ಪದ್ಯಗಳು ೯೨ರಿಂದ ೯೮

 

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ...

ಪಂಪಭಾರತ ಆಶ್ವಾಸ ೪ (೮೭-೯೧)

 

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ...

ಪಂಪಭಾರತ ಆಶ್ವಾಸ ೪ ೪೩-೫೨)

 

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌

ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|

ಕೀಲಿಸೆ...

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ

ಪಾರಾವಾರದೊಳುದಗ್ರ ಭುಜ ವಿಜಯ ಮಹಾ|

ಮೇರುವಿನೆ ಕಡೆದು ಪಡೆದಳ

ವಾರುಮನಿೞಿಸಿದುದುದಾತ್ತನಾರಾಯಣನಾ ||೧||

(ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ...

1 comment

Leave a Comment

Leave a Reply

Your email address will not be published. Required fields are marked *