Untitled

ಬಿ.ಸಿ.ರೋಡಿಗೊಂದು ಸಭಾಭವನ:

ಇದ್ದಿದ್ದೂ ಹೋಯ್ತು ಮದ್ದಿನ ಗುಣದಿಂದ!

ಅಡುಗೆ ಅನಿಲದ ಸಭೆಯ ಕುರಿತಾಗಿ ಬರೆಯುವಾಗ ನಮ್ಮೂರಿಗೊಂದು ಸಭಾಭವನ ಇಲ್ಲದಿರುವುದನ್ನೂ ಪ್ರಸ್ತಾವಿಸಿದ್ದೆ. ಈಗ ಇದ್ದಿದ್ದನ್ನೂ ಕಳಕೊಂಡು ಪೆದ್ದಂಬಟ್ಟಗಳಾದ ನಮ್ಮ ಕತೆಯನ್ನು ವ್ಯಥೆಯಿಂದಲೇ ಹೇಳಬೇಕಾಗಿದೆ.

ಹಿಂದಿನ ಒಂದು ಪ್ರಸಂಗ

ಚತುಷ್ಪಥ ರಸ್ತೆ ಆಗುವ ಮೊದಲು ಬಿ.ಸಿ.ರೋಡು ಕೈಕಂಬದಲ್ಲಿ ಮಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಒಂದು ಬಸ್ ತಂಗುದಾಣವಿತ್ತು. ರಸ್ತೆಯ ಕೆಲಸ ಪ್ರಾರಂಭವಾಗುವ ಎರಡು ವರ್ಷಗಳ ಮೊದಲೇ ಈ ಬಸ್ ತಂಗುದಾಣವನ್ನು ಅವಸರವಸರವಾಗಿ  ಕೆಡವಿ ಹಾಕಿದರು. ರಸ್ತೆಯ ಕೆಲಸ ಮುಗಿದು ನಾಲ್ಕೈದು ವರ್ಷಗಳೇ ಆದವು. ಕೆಡವಿ ಹಾಕಿದ ಬಸ್ ತಂಗುದಾಣವನ್ನು  ಮತ್ತೆ ನಿರ್ಮಿಸಲು ಯಾರಿಗೂ ಅವಸರವಿಲ್ಲ.
ನಾನು ಬಂಟ್ವಾಳ ಪುರಸಭೆಗೆ ಒಂದೆರಡು ಪತ್ರ ಬರೆದೆ. “ಅಲ್ಲಿ ತಂಗುದಾಣ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿಯವರು ಜಾಗ ತೋರಿಸಬೇಕು, ಅನುಮತಿ ಕೊಡಬೇಕು” ಇತ್ಯಾದಿ ಸಬೂಬು ಹೇಳಿದರೇ ಶಿವಾಯಿ ಕೆಲಸ ಮಾಡುವ ಆಸಕ್ತಿ ತೋರಿಸಲಿಲ್ಲ. ಈಗಲೂ ನಾನು ನಮ್ಮ ಪುರಸಭಾ ಪ್ರತಿನಿಧಿ ಸದಾಶಿವ ಬಂಗೇರರಿಗೆ ಹೇಳುತ್ತಲೇ ಇದ್ದೇನೆ. ಅವರು “ಖಂಡಿತಾ ಮಾಡುತ್ತೇವೆ” ಅನ್ನುತ್ತಿದ್ದಾರೆ. ಪ್ರಯಾಣಿಕರು ಮಾತ್ರ ಮಳೆ, ಬಿಸಿಲೆನ್ನದೇ ರಸ್ತೆಯುದ್ದದ ಖಾಲಿ ಜಾಗದಲ್ಲಿ ನಿಂತು ಬಸ್ ಕಾಯುತ್ತಾರೆ…. ಬಸ್ಸಿನ ಡ್ರೈವರುಗಳು ನಿಲ್ಲಿಸಲು ನಿರ್ದಿಷ್ಟ ಜಾಗ ಇಲ್ಲದೆ, ಜಾಗ ಇದ್ದಲ್ಲಿ ಬಸ್ ನಿಲ್ಲಿಸುತ್ತಿದ್ದಾರೆ. ಜನ ಬಸ್ ಇದ್ದಲ್ಲಿಗೆ ಓಡಿ ಹೋಗಿ ಬಸ್ ಹತ್ತುತ್ತಾರೆ. ಮಕ್ಕಳನ್ನೂ ಜೊತೆಗೆ ಕರೆದೊಯ್ಯಬೇಕಾದ ತಾಯಂದಿರು, ಓಡಲಾಗದ ಹಳೆಯ ಮುದುಕರು-ತದುಕರು,  ಕುಂಟರು, ಕುರುಡರು ಇಂಥವರ ಕತೆ ಹೇಳಿ ಪ್ರಯೋಜನವಿಲ್ಲ.

ಪ್ರಸಂಗ  2: ಇದ್ದೊಂದು ಸಭಾ ಮಂಟಪವನ್ನೂ ತಿಂದು ಹಾಕಿದ  “ಮಿನಿ ವಿಧಾನಸೌಧ”ದ ಗೌಜಿ: 

ಬಿ.ಸಿ.ರೋಡಿನಲ್ಲಿ ಒಂದು ಮಿನಿ ವಿಧಾನಸೌಧ ಆಗಲಿದೆಯಂತೆ. ಅದು ಆಗುವುದು ಈಗ ತಾಲೂಕು ಆಫೀಸು ಇರುವ ಜಾಗದಲ್ಲೇ. ಹೊಸ ಕಟ್ಟಡ ಆಗಬೇಕೆಂದರೆ ಇರುವ ಕಟ್ಟಡವನ್ನು ಕೆಡವಬೇಕು. ಕೆಡವಿದರೆ ಅಲ್ಲಿ ಹಾಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಬೇಕು. ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆಗಾಗಿ ಅಲ್ಲಿ ಇಲ್ಲಿ ಕಟ್ಟಡಗಳನ್ನು ಹುಡುಕಿರಬೇಕು. ಯೋಗ್ಯವಾದ್ದು ಯಾವುದೂ ಸಿಕ್ಕದೆ, ತತ್ಕಾಲಕ್ಕೆ ಹನ್ನೊಂದು ಲಕ್ಷ ಖರ್ಚಿನಲ್ಲಿ ಒಂದು ಸಾಮಾನ್ಯ ಹೊಸ ಕಟ್ಟಡ ಕಟ್ಟಿ, ಅಲ್ಲಿ ತಾಲೂಕು ಆಫೀಸ್ ನಡೆಸುವುದೆಂದು ತೀರ್ಮಾನಿಸಲಾಗಿದೆ. ಸ್ಥಳಾಂತರದ ತಯಾರಿಗಳು ಭರದಿಂದ ನಡೆಯುತ್ತಿವೆ. ಈ ಗಡಿಬಿಡಿಗೆ ಬಲಿಯಾದದ್ದು ಈಗ ಹೇಳಲಿರುವ ಕಥೆಯ ನಾಯಕನಾದ ಸಭಾ ಮಂಟಪ.
************
ತಾಲೂಕು ಆಫೀಸಿನ ಎದುರಿಗೇ, ಅದರ ಆವರಣ ಗೋಡೆಯ ಹೊರಗೆ, ಅದರದ್ದೇ ಒಂದು ಭಾಗವೇನೋ ಎನ್ನುವಂತೆ ಇತ್ತು/ಇದೆ ಈ ಸಭಾಮಂಟಪ. ಈ ಹಿಂದೆ ಬಂಟ್ವಾಳದ ತಹಶೀಲ್ದಾರರಾಗಿದ್ದ ರಾಜು ಎಂಬುವರ ಕಾಲದಲ್ಲಿ ಅವರದೇ ಆಸಕ್ತಿಯಿಂದ ನಿರ್ಮಾಣಗೊಂಡದ್ದಂತೆ ಇದು. ಆಗಿನ ಕಾಲಕ್ಕೆ ಯಾವ ರಾಜಕೀಯ ಸೋಂಕೂ ಇಲ್ಲದೆ ಪೂರ್ತಿಯಾಗಿ ಅವರದೇ ಜವಾಬ್ದಾರಿಯಲ್ಲಿ ಇದು ನಿರ್ಮಾಣಗೊಂಡಿತಂತೆ. (ಎಷ್ಟು ಹಣ ಸಂಗ್ರಹವಾಗಿತ್ತು, ಎಷ್ಟು ಖರ್ಚಾಗಿತ್ತು ಎಂಬೆಲ್ಲ ಲೆಕ್ಕ ಕೇಳಬೇಡಿ! ಅದೆಲ್ಲ ಹಳೆ ಕಥೆ. ಈಗ ಮಾತಾಡಿ ಸುಖ ಇಲ್ಲ).

ಬಿ.ಸಿ.ರೋಡಿನ ಅತ್ಯಂತ ಮುಖ್ಯ ಸಾರ್ವಜನಿಕ ಸಭೆಗಳೆಲ್ಲ ನಡೆಯುವುದು ಬಾಗಿಲಿಲ್ಲದ  ಈ ಮಂಟಪದಲ್ಲೇ. ಇದರ ಎದುರಿಗೇ ಶಾಮಿಯಾನ ಹಾಕಿ, ಕುರ್ಚಿ ಗಿರ್ಚಿ ಭರ್ಜರಿಯಾಗಿ ಹಾಕಿ, ಸುತ್ತ ಆಫೀಸುಗಳು, ಕೋರ್ಟುಗಳು, ಪೋಲಿಸ್ ಸ್ಟೇಷನ್ ಇತ್ಯಾದಿ ಯಾವುದನ್ನೂ ಲೆಕ್ಕಿಸದೆ  ಮೈಕಿನ ಮೂಲಕ ಆರ್ಭಟಿಸುವುದು ಇಲ್ಲಿ ಸಾಮಾನ್ಯ ದೃಶ್ಯ. ರಸ್ತೆ, ಸಭೆಯ ಪ್ರೇಕ್ಷಕರ ಸ್ಥಳ, ವಾಹನಗಳು ನಿಲ್ಲುವ ಸ್ಥಳ  ಇವುಗಳನ್ನು ಬೇರ್ಪಡಿಸಲು ಯಾವುದೇ ಗುರುತು ಇಲ್ಲದ್ದರಿಂದ ಸಭೆ ನಡೆಸುವವರಿಗೆ ಒಂದು ದೊಡ್ಡ ಅನುಕೂಲವುಂಟು. ಸಭೆಗೆ ಯಾರೂ ಜನ ಬರದಿದ್ದರೂ ಯಾವ್ಯಾವುದೋ ಕಾರಣಕ್ಕೆ ಬಂದವರು ಇದ್ದೇ ಇರುತ್ತಾರೆ!  ಸಾಮಾನ್ಯ ದಿನಗಳಲ್ಲಿ ಕೆಲವು ಅರ್ಜಿ ಬರೆಯುವವರೂ ಬರೆಸುವವರೂ ಈ ಮಂಟಪವನ್ನು  ಬಳಸಿದ್ದು ಕಂಡಿದ್ದೇನೆ. ಇನ್ನು ರಾತ್ರಿ ಹೊತ್ತು ಆ ಕಡೆ ಹೋಗುವ ಸಂದರ್ಭ ನನಗೆ ಬಂದಿಲ್ಲ!
ಅಧಿಕೃತ ಸರಕಾರಿ ಕಾರ್ಯಕ್ರಮಗಳು ನಡೆಯುವಾಗ, ಅದರಲ್ಲಿ ಭಾಗವಹಿಸಲೇ ಬೇಕಾದ ಶಾಲಾಮಕ್ಕಳು ಈ ಮಂಟಪದಲ್ಲಿ ಪಡುವ ಫಜೀತಿಯನ್ನು ಎಷ್ಟೋ ಸಲ ಗೆಳೆಯ, ಅಧ್ಯಾಪಕ ಮಹಾಬಲೇಶ್ವರ ಹೆಬ್ಬಾರರು ಖೇದದಿಂದ ವರ್ಣಿಸುತ್ತಾರೆ. ನೃತ್ಯಕ್ಕೋ  ನಾಟಕಕ್ಕೋ ಮೇಕಪ್ ಮಾಡಿಕೊಂಡು, ಕಾರ್ಯಕ್ರಮದ ಮೊದಲು ಉಂಟಾಗುವ  ಆತಂಕಕ್ಕೆ ಉಚ್ಚೆ ಹೊಯ್ಯಬೇಕಾಗಿ ಬರುವ ಮಕ್ಕಳ ಪಾಡು ಕಂಡವರಿಗೇ ಗೊತ್ತು. ಮಂಟಪ ಕಟ್ಟಿಸಿದ ಪುಣ್ಯಾತ್ಮರಿಗೆ ಅದಕ್ಕೆ ಲಗತ್ತಾಗಿ ಒಂದು ಟಾಯ್ಲೆಟ್ ಕಟ್ಟಿಸಬೇಕೆನ್ನುವುದು ಹೊಳೆಯಲಿಲ್ಲವೋ, ಅದಕ್ಕೆ ಬೇಕಾದ ಅನುಕೂಲ ಇರಲಿಲ್ಲವೋ ಗೊತ್ತಿಲ್ಲ, ಅಂತೂ ಅಲ್ಲಿ ಟಾಯ್ಲೆಟ್ ಇಲ್ಲ.
“ಈ ಮಂಟಪದ ಸ್ವರೂಪವಂತೂ, ಇದರ ಬುಡಕ್ಕೆ ಯಾರನ್ನೋ ಹೂತಿದ್ದಾರೇನೋ ಎಂಬ ಅನುಮಾನ ಹುಟ್ಟಿಸುತ್ತದೆ” ಎನ್ನುವುದೂ ಹೆಬ್ಬಾರರ ತಾರೀಫೇ.
************
ಸಾರ್ವಜನಿಕ ಸಭೆಗಳನ್ನು ನಡೆಸಲು ಇಂಥ ಅಮೋಘ ಏರ್ಪಾಟು ಮಾಡಿಕೊಂಡಿರುವ ನಮ್ಮೂರಿಗೆ ಈಗ ಅದಕ್ಕೂ ಕುತ್ತು ಬಂದಿದೆ ಎಂದರೆ ಏನೆನ್ನೋಣ?
ಮೊನ್ನೆಯೊಂದು ದಿನ ಯಾತಕ್ಕೋ ತಾಲೂಕು ಆಫೀಸಿನ ಕಡೆ ಹೋಗಿದ್ದೆ. ನೋಡಿದರೆ ಈ ಮಂಟಪದ ಎದುರು ಭಾಗಕ್ಕೆ ಗೋಡೆ ಕಟ್ಟುತ್ತಿದ್ದಾರೆ! ಓಹೋ! ಇದು ಮಿನಿ ವಿಧಾನಸೌಧದ್ದೇ ಕಿತಾಪತಿ ಅಂತ ಅರ್ಥವಾಯಿತು. ಇರಲಿ ಅಂತ ಅಲ್ಲಿ ಇಲ್ಲಿ ವಿಚಾರಿಸಿದೆ. ನನ್ನ ಊಹೆ ನಿಜವಾಗಿತ್ತು. ಈಗ ತಾಲೂಕು ಆಫೀಸಿಗೆ ಲಗತ್ತಾಗಿರುವ “ಪಡಸಾಲೆ” ಇಲ್ಲಿಗೆ ವರ್ಗವಾಗುತ್ತದಂತೆ.
“ಆದರೆ ಈ ಮಂಟಪ ಪುರಸಭೆಯ ಒಡೆತನದ್ದಲ್ಲವೆ?” ಎಂದೆ.
“ಹೌದು. ಅವರ ಹತ್ತಿರ ಮಾತಾಡಿ ಆಗಿದೆ” ಎಂಬರ್ಥದ ಉತ್ತರ ಬಂತು.
***********
ನಿನ್ನೆಯಷ್ಟೇ ಪತ್ರಿಕೆಗಳಲ್ಲಿ ಪುತ್ತೂರಿನಲ್ಲಿ ಮಿನಿವಿಧಾನಸೌಧ ಉದ್ಘಾಟನೆಯಾದ ಸುದ್ದಿ ಬಂದಿತ್ತು. ಡಾ. ನಿತ್ಯಾನಂದ ಪೈಗಳಿಗೆ ಫೋನ್ ಮಾಡಿದೆ:
 “ಸರ್, ನಿಮ್ಮೂರಿನ ವಿಧಾನಸೌಧ ಕಟ್ಟಲಿಕ್ಕೆ ಶುರು ಮಾಡಿದ್ದು ಯಾವಾಗ?”
“ಓ ಅದಾ? ಶಕುಂತಳಾ ಶೆಟ್ಟಿ ಬಿಜೆಪಿಯಿಂದ ಗೆದ್ದಾಗ ಅದಕ್ಕೆ ಕಲ್ಲು ಹಾಕಿದ್ದರು. ಅವರು ಕಾಂಗ್ರೆಸ್ಸಿಂದ ಗೆದ್ದು ಒಂದು ಟರ್ಮ್ ಮುಗಿಸಿ ಎರಡನೇ ಟರ್ಮು ಎರಡು ವರ್ಷ ಆಯಿತು. ಅಂದರೆ ಎಷ್ಟು? ಕಡಿಮೆಯಲ್ಲಿ ಏಳು ವರ್ಷ ಆಂತೂ ಆಯಿತು. ಯಾಕೆ ಹೇಳಿ?”
“ಯಾಕಿಲ್ಲ, ನಮ್ಮೂರಲ್ಲೂ ಒಂದು ವಿಧಾನಸೌಧ ಕಟ್ಟುತ್ತಾರಂತೆ. ಎಷ್ಟು ವರ್ಷ ಬೇಕಾದೀತು ಅಂತ ಒಂದು ಅಂದಾಜಿಗೆ ಅಷ್ಟೆ”
*********
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಪ್ರಾರಂಭವಾದದ್ದು ನಮ್ಮ ಉಸ್ತುವಾರಿ ಮಂತ್ರಿಗಳ ಉಮೇದಿನಿಂದ ಅಂತ ಕೇಳಿದ್ದೇನೆ. ಅದು ಶುರುವಾದ್ದು 2002ರಲ್ಲಿ. 2012ರಲ್ಲಿ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ “ಶೇ. 85  ಕಾಮಗಾರಿ ಪೂರ್ಣಗೊಂಡಿದೆ” ಎಂದು ತಿಳಿಸಿದ್ದ ನೆನಪು. ಮೊನ್ನೆ ಮೊನ್ನೆ ಇದೇ ಯೋಜನೆಗೆ ನಲವತ್ತೋ ಐವತ್ತೋ ಕೋಟಿ ಬಿಡುಗಡೆ ಆಗಿದೆ. ಯಾವಾಗ ಮುಗಿಯತ್ತೋ ಯಾರಿಗೆ ಗೊತ್ತು?
ಮುಂದಿನ ಸ್ವಾತಂತ್ರ್ಯೋತ್ಸವದ ಆಚರಣೆಗೆ ಹೊಸ ಸ್ಥಳದ ಏರ್ಪಾಟು ಆಗಬೇಕು. ಈಗಲೇ ಯಾಕೆ ತಲೆಬಿಸಿ? ಇನ್ನೂ ಐದು ತಿಂಗಳಿದೆ, ಅಲ್ಲವೆ?

Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *