ಮ|| ಮೃಗಭೂಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊ[ಕ್ಕು] ಮ
ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ|
ದುಗಳೊಳ್ ನಾಂದು ಕುರುಳ್ಗಳೊಳ್ ಸುೞಿದು ಮುಂದೊಂದಿರ್ದ ಸೌಭಾಗ್ಯ ಘಂ
ಟೆಗಳೊಂದಿಂಚರದೊಳ್ ಪಳಂಚಿ ಸುೞಿದತ್ತಂದೊಂದು ಮಂದಾನಿಳಂ|| ೮೦ ||
ಮೃಗಭೂ ಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊಕ್ಕು, ಮಲ್ಲಿಗೆಯೊಳ್ ಭಾವಿಸಿ, ಧೂಪದೊಳ್ ಪೊರೆದು, ತತ್ಕಾಂತಾ ರತಿ ಸ್ವೇದ ಬಿಂದುಗಳೊಳ್ ನಾಂದು, ಕುರುಳ್ಗಳೊಳ್ ಸುೞಿದು, ಮುಂದೆ ಒಂದಿರ್ದ ಸೌಭಾಗ್ಯ ಘಂಟೆಗಳ ಒಂದು ಇಂಚರದೊಳ್ ಪಳಂಚಿ ಸುೞಿದತ್ತು ಅಂದು ಒಂದು ಮಂದಾನಿಳಂ
ಕಸ್ತೂರಿಯನ್ನು ಪೂಸಿದ ಚೆಲುವೆಯರ ತುರುಬಿನ ಗಂಟುಗಳ ಒಳಹೊಕ್ಕು, (ಅವರು ಮುಡಿದ) ಮಲ್ಲಿಗೆಯ ಹೂಗಳನ್ನು ಮುದ್ದಿಸಿ, ಧೂಪದ ಹೊಗೆಯಲ್ಲಿ ಒಣಗಿಸಿದ ಅವರ ತಲೆಗೂದಲುಗಳ ಸಂದಿಗಳಲ್ಲಿ ಹೊಕ್ಕು ಹೊರಟು, ಆ ಹೆಣ್ಣುಗಳ (ಹಣೆಯಲ್ಲಿ ಮೂಡಿದ) ರತಿಯ ಬೆವರ ಹನಿಗಳಲ್ಲಿ ತೊಯ್ದು, ಅವರ ಮುಂಗುರುಳುಗಳಲ್ಲಿ ಸುಳಿದು, (ಅವರ ಮನೆಗಳ) ಮುಂದೆ ಕಟ್ಟಿದ ಗಂಟೆಗಳ ಇಂಚರಕ್ಕೆ ತಾಗಿ. ಮೆಲುಗಾಳಿಯೊಂದು ಅಂದು ಬಂದು ಅರಿಕೇಸರಿಯನ್ನು ಸೋಂಕಿತು.
(ಟಿಪ್ಪಣಿ: ಇಲ್ಲಿ “ಬಂಧಂಗಳಂ ಎಂಬುದು ಗಂಧಂಗಳಂ ಎಂದಿರಬಹುದು” ಎಂದು ಡಿ ಎಲ್ ನರಸಿಂಹಾಚಾರ್ ಅವರು ಹೇಳಿದ್ದಾರೆ. ನಾನು ʼಬಂಧಂಗಳಂʼ ಎಂಬುದನ್ನು ಹಾಗೆಯೇ ಉಳಿಸಿಕೊಂಡು ʼಪೊತ್ತುʼ ಎಂಬುದರ ಬದಲಿಗೆ ʼಪೊಕ್ಕುʼ ಎಂಬ ಪಾಠವನ್ನು ಇಟ್ಟುಕೊಂಡಿದ್ದೇನೆ.
ಪದ್ಯದಲ್ಲಿ ಕವಿ ಮಂದಾನಿಲವು ಬೀಸಿ ಬಂದ ಪರಿಯನ್ನು ಹೇಳುತ್ತಾ, ಹೇಗೆ ಅದು ತನ್ನ ದಾರಿಯಲ್ಲಿ ಬರುವಾಗ ತನ್ನೊಂದಿಗೆ ಒಂದೊಂದೇ ಪರಿಮಳವನ್ನು ಸೇರಿಸಿಕೊಳ್ಳುತ್ತ ಬಂತು ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾನೆ. ಅದು ಚೆಲುವೆಯರ ತಲೆಯ ಹಿಂಭಾಗದ ತುರುಬಿನಿಂದ ಶುರುಮಾಡಿ, ಅಲ್ಲಿ ಅವರು ಮುಡಿದ ಮಲ್ಲಿಗೆಯ ಪರಿಮಳವನ್ನು ಹೀರಿಕೊಳ್ಳುತ್ತದೆ. ನಂತರ ಅವರ ತಲೆಗೂದಲುಗಳನ್ನು ದಾಟುವಾಗ ಅದರ ಧೂಪದ ಪರಿಮಳವನ್ನು ಸೆಳೆದುಕೊಳ್ಳುತ್ತದೆ, ಅಲ್ಲಿಂದ ದಾಟಿ ರತಿಯಿಂದಾಗಿ ಅವರ ಹಣೆಯಲ್ಲಿ ಮೂಡಿದ ಬೆವರಿನಲ್ಲಿ ನೆನೆದು ಆ ಬೆವರಿನ ವಾಸನೆಯನ್ನು ಅಂಟಿಸಿಕೊಳ್ಳುತ್ತದೆ. ಅಲ್ಲಿಂದ ಅವರ ಹಣೆಯ ಮೇಲ್ಭಾಗದ ಗುಂಗುರುಕೂದಲುಗಳಲ್ಲಿ ಸುಳಿದು, ಮನೆಯ ಮುಂದೆ ಕಟ್ಟಿದ ಗಂಟೆಗಳ ಮಧುರನಾದಕ್ಕೆ ಡಿಕ್ಕಿ ಹೊಡೆದು ಬಂದು ಅರಿಕೇಸರಿಯನ್ನು ಸೋಂಕುತ್ತದೆ!)
ವ|| ಆಗಳಾಱುಂ ಋತುಗಳ ಪೂಗಳನೊಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜನ ಸಾಲೆಯಿರ್ಪಂತಿರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ-
ಆಗಳ್ ಆಱುಂ ಋತುಗಳ ಪೂಗಳನ್ ಒಂದುಮಾಡಿ, ಪೂವಿನ ಅಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆ ಇರ್ಪಂತೆ ಇರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ-
ಆಗ ಆರೂ ಋತುಗಳ ಹೂಗಳನ್ನು ಒಟ್ಟುಗೂಡಿಸಿ ತನ್ನ ಹೂಬಾಣಗಳನ್ನು ತಯಾರಿಸಲೆಂದು ಕಾಮದೇವನು ಮಾಡಿಕೊಂಡ ಕಸುಬಿನ ಕೊಟ್ಟಿಗೆಯಂತಿದ್ದ ಆ ಹೂವಿನ ಸಂತೆಯಲ್ಲಿ ವಸಂತ ಋತುವಿನ ಅಧಿ ದೇವತೆಯರಂತೆ-
(ಟಿಪ್ಪಣಿ: ಅರ್ಜುನ ಹೊರಟದ್ದು ʼಪೊೞಲಂ ತೊೞಲ್ದುʼ ನೋಡುವುದಕ್ಕೆ; ಮೊದಲು ಅವನು ಹೋಗುವುದು ಸೂಳೆಗೇರಿಗೆ. ಆದರೆ ಕವಿ ಓದುಗನನ್ನು ಕರೆದೊಯ್ಯುವುದು ʼಪೂವಿನ ಸಂತೆʼಗೆ! ಸೂಳೆಗೇರಿ ಹಾಗೂ ಹೂವಿನ ಸಂತೆಗಳು ಒಂದೇ ಎಂಬಂತೆ ಕವಿ ಇಲ್ಲಿ ವರ್ಣಿಸುತ್ತಿದ್ದಾನೆ. ಅವನ ವರ್ಣನೆಯಲ್ಲಿ ಹೂ ಮಾರುವವರು ಸೂಳೆಯರಾಗಿಬಿಟ್ಟಿದ್ದಾರೆ! ಕವಿ ಬರೆಯುತ್ತಿರುವುದು ಮಹಾಭಾರತದ ಕಥೆಯನ್ನಾದರೂ, ಇಲ್ಲಿ ವರ್ಣಿಸುತ್ತಿರುವುದು ತಾನು ತನ್ನ ಜೀವಿತಕಾಲದಲ್ಲಿ, ಕಂಡಿದ್ದ ನಗರಗಳ ಸೂಳೆಗೇರಿಗಳನ್ನು ಎಂಬುದು ಸ್ಪಷ್ಟ. ಹಾಗಿದ್ದರೆ, ಪಂಪನ ಕಾಲದಲ್ಲಿ ವೇಶ್ಯಾವೃತ್ತಿಯವರೇ ಹೂ ಮಾರುವ ವೃತ್ತಿಯನ್ನೂ ಮಾಡುತ್ತಿದ್ದರೇ?)
ಉ|| ಎತ್ತಿದ ತೋಳ ಮೊತ್ತಮೊದಲಂಗಜನಂ ಪಟ ವಿದ್ದೆಗೆತ್ತಿದಂ
ತೆತ್ತಮಪೂರ್ವಮಾಗೆ ಪೊಸವಾಸಿಗಮಂಗಜ ಚಕ್ರವರ್ತಿಗೆಂ|
ದೆತ್ತಿದ ಮೀನಕೇತನಮನೊತ್ತರಿಸುತ್ತಿರೆ ಚಲ್ಲವಾಡಿ ಪೂ
ವೆತ್ತುವ ಮಾಲೆಗಾರ್ತಿಯರನಂದರಿಕೇಸರಿ ನಿಂದು ನೋಡಿದಂ|| ೮೧||
ಎತ್ತಿದ ತೋಳ ಮೊತ್ತಮೊದಲ್ ಅಂಗಜನಂ ಪಟ ವಿದ್ದೆಗೆತ್ತಿದಂತೆ ಎತ್ತಂ ಅಪೂರ್ವಮಾಗೆ, ಪೊಸವಾಸಿಗಂ ಅಂಗಜ ಚಕ್ರವರ್ತಿಗೆಂದು ಎತ್ತಿದ ಮೀನಕೇತನಮನ್ ಒತ್ತರಿಸುತ್ತಿರೆ, ಚಲ್ಲವಾಡಿ ಪೂವೆತ್ತುವ ಮಾಲೆಗಾರ್ತಿಯರನ್ ಅಂದು ಅರಿಕೇಸರಿ ನಿಂದು ನೋಡಿದಂ
(ಮಾಲೆಗಾರ್ತಿಯೊಬ್ಬಳು ತಾನು ಕಟ್ಟಿದ ಹೂಮಾಲೆಯನ್ನು ಮಾರಲೆಂದು ಎತ್ತಿ ಹಿಡಿದು ತೋರಿಸುತ್ತಿರುವಾಗ) ಅವಳ ಕಂಕುಳು ಮನ್ಮಥನನ್ನು ಗಾಳಿಪಟದಂತೆ ಕುಣಿಸುವ ಹಾಗೆ ಸುಂದರವಾಗಿ ಕಾಣಿಸುತ್ತಿತ್ತು; ಮತ್ತೊಬ್ಬಳು ತನ್ನ ಕೈಯಲ್ಲಿ ಹಿಡಿದ ಹೊಸ ಹೂಮಾಲೆಯು ಮನ್ಮಥನ ಮೀನಬಾವುಟವನ್ನೂ ಮೀರಿಸುವಂತೆ ಕುಣಿಯುತ್ತಿತ್ತು. ಹೀಗೆ ಚೆಲ್ಲು ಚೆಲ್ಲು ಆಟಗಳನ್ನಾಡುತ್ತ ಹೂ ಮಾರುತ್ತಿದ್ದ ಮಾಲೆಗಾರ್ತಿಯರನ್ನು ಅಂದು ಅರಿಕೇಸರಿ ನಿಂತು ನೋಡಿದನು.
(ಟಿಪ್ಪಣಿ: ಇಲ್ಲಿ, ಎದುರಿಗೆ ಮಾಲೆಗಾರ್ತಿಯರು ಹೂ ಮಾರುವವರಂತೆ ಕಂಡರೂ, ಅವರ ಚರ್ಯೆಗಳು ಅದಕ್ಕಿಂತ ಭಿನ್ನವಾದ ಬೇರೇನನ್ನೋ ಸೂಚಿಸುತ್ತಿದ್ದವು ಎಂಬ ಅರ್ಥವೂ ಇದೆ.
ʼಮಾಲೆಗಾರ್ತಿʼ ಶಬ್ದವು ʼಮಾಲೆಯನ್ನು ಕಟ್ಟುವವಳು/ಮಾಡುವವಳುʼ ಎಂಬ ಅರ್ಥದ ಜೊತೆಗೇ ʼಮಾಲೆಯನ್ನು ಹಾಕುವವಳುʼ ಎಂಬ ಅರ್ಥವನ್ನೂ ಧ್ವನಿಸುತ್ತದೆ. )
ವ|| ನೋಡಿ ನಾಡಾಡಿಯಲ್ಲದಾಕೆಗಳ ಜೋಡೆಗೆಯ್ತಂಗಳಂ ಕಂಡಿದು ಮನೆಯಾಣ್ಮನಂ ಮಾರುವಂದಮಲ್ಲದೆ ಪೂ ಮಾರುವಂದಮಲ್ತೆಂದು ಮುಗುಳ್ನಗೆ ನಗುತುಂ ಬರ್ಪನೊಂದೆಡೆಯೊಳ್ ಮನೆಯಾಣ್ಮನ ಕಣ್ಣೆಮೆಯೆ ಕಾಂಡಪಟಮಾಗೆಯುಂ ಬಗೆಯಾಣ್ಮನ ಕಣ್ಣೆಮೆಯೆ ದೂದವಿಯಾಗೆಯುಂ ಬಗೆದೆಡೆಯನೆಯ್ದಿ ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು ವಿಕ್ರಮಾರ್ಜುನನಿಂತೆಂದಂ-
ನೋಡಿ, ನಾಡಾಡಿಯಲ್ಲದ ಆಕೆಗಳ ಜೋಡೆಗೆಯ್ತಂಗಳಂ ಕಂಡು ʼಇದು ಮನೆಯಾಣ್ಮನಂ ಮಾರುವಂದಂ ಅಲ್ಲದೆ ಪೂ ಮಾರುವಂದಂ ಅಲ್ತು!ʼ ಎಂದು ಮುಗುಳ್ನಗೆ ನಗುತುಂ ಬರ್ಪನ್ ಒಂದೆಡೆಯೊಳ್ ಮನೆಯ ಆಣ್ಮನ ಕಣ್ಣ ಎಮೆಯೆ ಕಾಂಡಪಟಂ ಆಗೆಯುಂ, ಬಗೆಯ ಆಣ್ಮನ ಕಣ್ಣ ಎಮೆಯೆ ದೂದವಿ ಆಗೆಯುಂ, ಬಗೆದ ಎಡೆಯನ್ ಎಯ್ದಿ, ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು, ವಿಕ್ರಮಾರ್ಜುನನ್ ಇಂತೆಂದಂ
ನೋಡಿ, ಅಸಾಮಾನ್ಯವಾದ ಅವರುಗಳ ಸೂಳೆಯಾಟಗಳನ್ನು ಕಂಡು, ʼಇದು ಗಂಡನನ್ನು ಮಾರುವ ಬಗೆಯೇ ಹೊರತು, ಹೂ ಮಾರುವ ಬಗೆಯಂತೂ ಅಲ್ಲ!ʼ ಎಂದು ಮುಗುಳ್ನಗುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ ಮನೆಯ ಗಂಡನ ಕಣ್ಣೆವೆಗಳೇ ಪರದೆಯಾಗಿ, ಮನದ ಗಂಡನ ಕಣ್ಣೆವೆಗಳು ದೂತಿಯಾಗಿ, ಇಷ್ಟಪಟ್ಟ ಜಾಗಕ್ಕೆ ಹೋಗಿ, ಮನದ ಆಸೆಯನ್ನು ಇಷ್ಟಪಟ್ಟಂತೆ ತೀರಿಸಿ ಹೋಗುವ ಸೂಳೆಯರನ್ನು ಕಂಡು ವಿಕ್ರಮಾರ್ಜುನನು ಹೀಗೆಂದನು-
(ಟಿಪ್ಪಣಿ: ʼಮನೆಯಾಣ್ಮನ ಕಣ್ಣೆಮೆಯೆ ಕಾಂಡಪಟಮಾಗಿʼ – ʼಸೂಳೆಯು ತನ್ನ ಕೆಲಸವನ್ನು ಗಂಡನ ಸಹಕಾರ, ಬೆಂಬಲಗಳಿಂದಲೇ ಮಾಡುತ್ತಿದ್ದಳು; ಅವಳ ಕೆಲಸಕ್ಕೆ ಅವನು ರಕ್ಷಣೆಯಾಗಿ ನಿಲ್ಲುತ್ತಿದ್ದನುʼ ಎಂದು ಕವಿ ಇಲ್ಲಿ ಸೂಚಿಸುತ್ತಿದ್ದಾನೆ. ʼಕಾಂಡಪಟʼ ಶಬ್ದವು ಪರದೆ ಮತ್ತು ರಕ್ಷಣೆ ಎಂಬ ಎರಡು ಅರ್ಥಗಳಲ್ಲಿ ಬಳಕೆಯಾಗಿದೆ.
ಈ ಮಾತುಗಳ ಮೂಲಕ ಪಂಪ ಇಂಥ ದಂಪತಿಗಳ ಬದುಕಿನ ದೈನೇಸಿ ಸ್ಥಿತಿಯನ್ನು ಅಥವಾ ಜಾತಿಪದ್ಧತಿಯ ಕಾರಣದಿಂದಾಗಿ ನಿರ್ದಿಷ್ಟ ವೃತ್ತಿಯನ್ನು ಮಾಡಲೇಬೇಕಾಗಿ ಬಂದವರ ಪಾಡನ್ನು ಹೇಳುತ್ತಿರಬಹುದೆ? )
ಮ|| ಕುಱುಪಂ ಪುರ್ವಿನ ಜರ್ವೆ ತೋರೆ ಬಗೆಯಂ ಕಣ್ಸನ್ನೆಗಳ್ ಪೇೞೆ ತ
ನ್ನೆಱಕಂ ತನ್ನ ಮನಕ್ಕೆ ಕೂಡೆ ಕೆಲಕಂ ಗಂಡಂಗಮೊಳ್ಪಂ ಕರಂ|
ಮೆರೆವಾ ಪ್ರೌಢೆಯೆ ಜೋಡೆಯಕ್ಕುಮೆಡೆಯೊಳ್ ದೂಂಟಿಂದೆ ದೂಂಟಿಂಗೆ ಪೆ
ರ್ವಱೆಯಂ ಪೊಯ್ಸಿ ಕೆಲಕ್ಕೆ ನಾಣ್ಚಿ ತಲೆಗುತ್ತಿರ್ಪಾಕೆಯೇಂ ಜೋಡೆಯೇ|| ೮೨ ||
ಕುಱುಪಂ ಪುರ್ವಿನ ಜರ್ವೆ ತೋರೆ, ಬಗೆಯಂ ಕಣ್ಸನ್ನೆಗಳ್ ಪೇೞೆ, ತನ್ನ ಎಱಕಂ ತನ್ನ ಮನಕ್ಕೆ ಕೂಡೆ, ಕೆಲಕಂ ಗಂಡಂಗಂ ಒಳ್ಪಂ ಕರಂ ಮೆರೆವ ಆ ಪ್ರೌಢೆಯೆ ಜೋಡೆಯಕ್ಕುಂ; ಎಡೆಯೊಳ್ ದೂಂಟಿಂದೆ ದೂಂಟಿಂಗೆ ಪೆರ್ವಱೆಯಂ ಪೊಯ್ಸಿ, ಕೆಲಕ್ಕೆ ನಾಣ್ಚಿ ತಲೆಗುತ್ತಿರ್ಪಾಕೆ ಏಂ ಜೋಡೆಯೇ?
ತನ್ನ ಹುಬ್ಬುಗಳ ಚಲನೆಯ ಮೂಲಕವೇ ಸಂಕೇತಸ್ಥಾನವನ್ನು ತೋರಿಸಬಲ್ಲವಳು, ಕಣ್ಸನ್ನೆಯ ಮೂಲಕವೇ ಮನಸ್ಸಿನಲ್ಲಿರುವುದನ್ನು ಹೇಳಬಲ್ಲವಳು, ತನ್ನ ಲೈಂಗಿಕ ಆಕರ್ಷಣೆಯಲ್ಲಿ ವಿಶ್ವಾಸವಿರುವವಳು –ಇಂಥ ಜಾಣೆಯೇ ನಿಜವಾದ ಸೂಳೆ; ಇವಳೇ ತನ್ನ ಆಚೀಚೆ ಇರುವವರಿಗೂ, ತನ್ನ ಗಂಡನಿಗೂ ಒಳಿತು ಮಾಡುವವಳು. ಹಾಗಲ್ಲದೆ, ಎಲ್ಲರ ನಡುವೆ ಹೆಜ್ಜೆ ಹೆಜ್ಜೆಗೂ ಡಂಗುರ ಸಾರಿಸಿಕೊಂಡು ಬಂದು, ನಂತರ ಆಚೀಚೆಯವರನ್ನು ಕಂಡು ನಾಚಿ ತಲೆತಗ್ಗಿಸುವವಳು ಸೂಳೆಯೇನು?
(ಟಿಪ್ಪಣಿ: ʼಎಱಕʼ ಎಂಬ ಶಬ್ದಕ್ಕೆ ಹಲವು ಅರ್ಥಗಳಿವೆ. ಡಿ.ಎಲ್. ನರಸಿಂಹಾಚಾರ್ ಅವರು ʼಪ್ರೀತಿʼ ಎಂಬ ಅರ್ಥವನ್ನು ಹೇಳಿದ್ದಾರೆ. ಆದರೆ ಇಲ್ಲಿನ ಸಂದರ್ಭಕ್ಕೆ ಅದು ಒಪ್ಪುವುದಿಲ್ಲ. Alar.ink ನಲ್ಲಿ ಈ ಪದಕ್ಕೆ ‘attraction based on sexual desire’ (ಲೈಂಗಿಕ ಬಯಕೆಯನ್ನು ಆಧರಿಸಿದ ಆಕರ್ಷಣೆ) ಎಂಬ ಅರ್ಥವನ್ನೂ ಕೊಟ್ಟಿದ್ದಾರೆ.
ಇನ್ನು ʼಕೆಲಕಂ ಗಂಡಂಗಮೊಳ್ಪಂ ಕರಂ ಮೆರೆವʼ ಎಂದರೇನು? ಮೇಲ್ನೋಟಕ್ಕೆ ʼಅಕ್ಕಪಕ್ಕದಲ್ಲಿದ್ದವರಿಗೂ, ಗಂಡನಿಗೂ ಒಳಿತನ್ನು ವಿಶೇಷವಾಗಿ ಉಂಟುಮಾಡುವʼ ಎನ್ನುವುದು ಅದರ ಅರ್ಥ. ಅಕ್ಕಪಕ್ಕದ ವಿಟರಿಗೆ ಆಕೆಯ ಚರ್ಯೆಗಳು, ಚೆಲುವು, ಚೆಲ್ಲಾಟ ಇವೆಲ್ಲ ಬಿಟ್ಟಿ ಮನರಂಜನೆಯನ್ನು ಒದಗಿಸುತ್ತಿದ್ದುದರಿಂದ ಅವೇ ಅವರ ಪಾಲಿನ ʼಒಳ್ಪುʼ ಎಂದು ಭಾವಿಸಬಹುದು. ಆದರೆ ಅವಳ ಗಂಡನ ಪಾಲಿಗೆ? ಅವಳ ಸಂಪಾದನೆಯೇ ಅವನ ಪಾಲಿನ ʼಒಳ್ಪುʼತಾನೆ? ಈ ಮಾತಿನ ಮೂಲಕ ಪಂಪ ಅಂಥ ಗಂಡಂದಿರ ಕರುಣಾಜನಕ ಸ್ಥಿತಿಯನ್ನು ಸೂಚಿಸುತ್ತಿದ್ದಾನೆಯೆ?)
ಉ|| ಕೂರಿದುವಪ್ಪ ಕಣ್ಮಲರ್ಗಳಳ್ಳೆರ್ದೆಯೊಳ್ ತಡಮಾಡೆ ತಾಮೆ ಕಣ್
ಪೇರಿಸೆ ಪುರ್ವು ನಾಲಗೆವೊಲಾಗೆ ಮನಂಬುಗಿಸಲ್ಕೆ ಬಲ್ಲೊಡಾ|
ಜಾರೆಯೆ ಜಾರೆ ಪಾರೆನೆ ಕರಂ ಪಿರಿದುಂ ಗೞಪುತ್ತುಮಿರ್ಪಳಂ
ಸಾರಿಕೆಯೆಂಬರಲ್ಲದಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್|| ೮೩ ||
ಕೂರಿದುವಪ್ಪ ಕಣ್ಮಲರ್ಗಳ್ ಅಳ್ಳೆರ್ದೆಯೊಳ್ ತಡಮಾಡೆ, ತಾಮೆ ಕಣ್ ಪೇರಿಸೆ, ಪುರ್ವು ನಾಲಗೆವೊಲಾಗೆ ಮನಂಬುಗಿಸಲ್ಕೆ ಬಲ್ಲೊಡೆ ಆ ಜಾರೆಯೆ ಜಾರೆ; ಪಾರೆನೆ ಕರಂ ಪಿರಿದುಂ ಗೞಪುತ್ತುಂ ಇರ್ಪಳಂ ಸಾರಿಕೆಯೆಂಬರಲ್ಲದೆ ಅಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್?
ತೀಕ್ಷ್ಣವಾದ ಹೂವಿನಂಥ ಕಣ್ಣುಗಳನ್ನು (ತನ್ನ) ಮೃದುವಾದ ಎದೆಯ ಮೇಲೆ ಮೆಲ್ಲನೆ ಓಡಾಡಿಸಲು, ಕಣ್ಣುಗಳನ್ನು ತಾನಾಗಿಯೇ ಆಚೀಚೆ ಚಲಿಸಲು, ಹುಬ್ಬನ್ನೇ ನಾಲಗೆಯಾಗಿಸಿ (ಎಂದರೆ ಮನಸ್ಸಿನಲ್ಲಿರುವುದನ್ನು ಮಾತು ಹೇಗೆ ಸ್ಪಷ್ಟವಾಗಿ ಹೇಳುತ್ತದೆಯೋ ಅಷ್ಟೇ ಸ್ಪಷ್ಟವಾಗಿ ಹುಬ್ಬಿನ ಚಲನೆಯ ಮೂಲಕ ಸೂಚಿಸಿ) ಮನದಿಂಗಿತವನ್ನು ದಾಟಿಸಲು- ಬಲ್ಲವಳೇ ನಿಜವಾದ ಜಾರೆ; ಹಾದರವೆಂದು ಸುಮ್ಮನೆ (ಅಶ್ಲೀಲ?)ಮಾತುಗಳನ್ನು ಒದರುವವಳನ್ನು ʼಗಿಣಿʼ ಎನ್ನುತ್ತಾರಲ್ಲದೆ, ʼಜಾರೆʼ ಎಂದು ಬುದ್ಧಿವಂತರು ಯಾರಾದರೂ ಹೇಳುತ್ತಾರೆಯೆ?
ವ|| ಎಂದು ಪಾಣ್ಬರಂಕುಸನಾ ಪಾಣ್ಬೆಯರ ಗೆಯ್ವ ಗೆಯ್ತಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ ಕಂಡು ಚೋದ್ಯಂಬಟ್ಟು-
ಎಂದು ಪಾಣ್ಬರಂಕುಸನ್ ಆ ಪಾಣ್ಬೆಯರ ಗೆಯ್ವ ಗೆಯ್ತಂಗಳುಮಂ, ತೋರ್ಪ ಸನ್ನೆಗಳುಮಂ, ಆಡುವ ಮಿೞ್ತುಗೊಡ್ಡಂಗಳುಮಂ ಕಂಡು ಚೋದ್ಯಂಬಟ್ಟು
ಎಂದು ಹಾದರಿಗರಿಗೆ ಅಂಕುಶದಂತಿದ್ದ ಅರಿಕೇಸರಿಯು ಆ ವೇಶ್ಯೆಯರು ಮಾಡುವ ಮಾಟಗಳನ್ನೂ, ತೋರಿಸುವ ಸನ್ನೆಗಳನ್ನು ನೋಡಿ, ಆಡುತ್ತಿದ್ದ ಕೊಲ್ಲುವಂಥ ಆಟಗಳನ್ನು ಕಂಡು ಆಶ್ಚರ್ಯಪಟ್ಟು-
(ಟಿಪ್ಪಣಿ: ಇಲ್ಲಿ ʼಆಡುವ ಮಿೞ್ತುಗೊಡ್ಡಂಗಳುಮಂʼ ಎಂದರೇನು? ʼಮಿೞ್ತುʼ ಎಂದರೆ ಮೃತ್ಯು; ʼಗೊಡ್ಡʼ ಎಂದರೆ ಚೇಷ್ಟೆ. ಒಟ್ಟಾಗಿಸಿದರೆ ʼಮೃತ್ಯುಚೇಷ್ಟೆʼ ಆಯಿತು. ಆದರೆ ವೇಶ್ಯೆಯು ಏಕೆ ಮೃತ್ಯುವಿನಂಥ ಚೇಷ್ಟೆ ಮಾಡಬೇಕು? ಡಿ. ಎಲ್. ನರಸಿಂಹಾಚಾರ್ ಅವರು ಇದನ್ನು ʼಸಾಯೆ ಸರಸಂ ನುಡಿದುʼ ಎಂಬುದರ ಜೊತೆಗೆ ಹೋಲಿಸಿ ನೋಡಲು ಹೇಳಿದ್ದಾರೆ. ʼಸಾಯೆ ಸರಸಂ ನುಡಿದುʼ ಎಂಬ ಮಾತು ಬರುವುದು ದ್ರೋಣ-ದ್ರುಪದರ ಪ್ರಕರಣದಲ್ಲಿ. ಅಲ್ಲಿ ದ್ರೋಣನು ದ್ರುಪದನನ್ನು ಹಂಗಿಸಿ ಮಾತಾಡಿದ ಪರಿಯನ್ನು ವರ್ಣಿಸಲು ಕವಿ ಈ ಮಾತನ್ನು ಬಳಸಿದ್ದಾನೆ. (“….ಎಮ್ಮಂ ಬಡಪಾರ್ವರನರಸರೆ ನೀಮೀಗಳಱಿವಿರಱಿಯಿರೊ ಪೇೞಿಂ” -ನಮ್ಮನ್ನು, ಬಡಬ್ರಾಹ್ಮಣರನ್ನು- ನೀವು ಈಗ ಅರಿತಿರಿ; ಅಲ್ಲವೆ? ಹೇಳಿ!) ಅದನ್ನು ಇಲ್ಲಿನ ಸಂದರ್ಭಕ್ಕೆ ಹೇಗೆ ಹೋಲಿಸುವುದು?
ಇಲ್ಲಿ ಬರುವ ʼಆಡುವʼ ಎಂಬ ಮಾತಿನ ಅರ್ಥವೇನು? ʼಆಟ ಆಡುವುದುʼ, ʼಮಾತು ಆಡುವುದುʼ ಈ ಎರಡು ಅರ್ಥಗಳಲ್ಲೂ ʼಆಡುವುದುʼ ಪದ ಬಳಕೆಯಲ್ಲಿದೆ. ʼಗೊಡ್ಡʼ ಹಾಗೂ ʼಖೆಡ್ಡಾʼಗಳ ನಡುವೆ ಏನಾದರೂ ಸಂಬಂಧವಿರಬಹುದೆ? ಒಟ್ಟಿನಲ್ಲಿ ಈ ಪದದ ಅರ್ಥ ಸದ್ಯಕ್ಕೆ ತಿಳಿಯುವಂತಿಲ್ಲ.)
ಮ|| ಅಲರ್ಗಣ್ಣೊಳ್ ಸ್ಮರನಿರ್ದನಕ್ಕುಮೆಡೆವೋಪಾ ಜೋಡೆ ಕಾಮಂಗೆ ಕಾ
ದಲೆಯಕ್ಕುಂ ಪೆಱತೇನೊ ಪಾರದರದೊಳ್ ಸಂಸಾರ ಸರ್ವಸ್ವಮಂ|
ಗೆಲೆವಂದಿಂಪಿನಲಂಪನಾಳ್ದ ಸವಿಯುಂಟಕ್ಕುಂ ಸಮಂತಾವಗಂ
ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ|| ೮೪ ||
ಅಲರ್ಗಣ್ಣೊಳ್ ಸ್ಮರನ್ ಇರ್ದನಕ್ಕುಂ, ಎಡೆವೋಪ ಆ ಜೋಡೆ ಕಾಮಂಗೆ ಕಾದಲೆಯಕ್ಕುಂ, ಪೆಱತೇನೊ? ಪಾರದರದೊಳ್ ಸಂಸಾರ ಸರ್ವಸ್ವಮಂ ಗೆಲೆವಂದ ಇಂಪಿನ ಅಲಂಪನ್ ಆಳ್ದ ಸವಿಯುಂಟಕ್ಕುಂ, ಸಮಂತು ಆವಗಂ ತಲೆಯಂ ಮೂಗುಮನ್ ಒತ್ತೆಯಿಟ್ಟು ನೆರೆವಂತು ಉಂತೇನವರ್ ಗಾಂಪರೇ?
(ಸೂಳೆಯರ)ಹೂವಿನಂಥ ಕಣ್ಣುಗಳಲ್ಲಿ ಮನ್ಮಥನೇ ಇದ್ದಾನಾಗಿರಬೇಕು; ಸಂಕೇತಸ್ಥಾನಕ್ಕೆ ಹೋಗುವ ಸೂಳೆ ಮನ್ಮಥನ ಪ್ರೇಯಸಿಯಾಗಿರಬೇಕು(ಎಂದರೆ ಅಷ್ಟು ಚೆಲುವೆಯಾಗಿರಬೇಕು); ಹೆಚ್ಚೇನೋ? ಹಾದರದಲ್ಲಿ ಸಂಸಾರದ ಎಲ್ಲ ಸುಖಗಳನ್ನೂ ಮೀರಿಸಬಲ್ಲ ಸುಖ-ಸಂತೋಷಗಳ ರುಚಿ ಇದ್ದಿರಬೇಕು. (ಹಾಗಲ್ಲದಿದ್ದರೆ) ತಲೆಯನ್ನೂ, ಮೂಗನ್ನೂ ಕಳೆದುಕೊಳ್ಳುವ ಭಯಕ್ಕೂ ಬಗ್ಗದೆ ಸೂಳೆಗೇರಿಗಳಲ್ಲಿ ಸೇರುವಷ್ಟು ಅವರೇನು ದಡ್ಡರೇ?
(ಟಿಪ್ಪಣಿ: ತಲೆಯಂ ಮೂಗುಮನೊತ್ತೆಯಿಟ್ಟು – “ಹಾದರಿಕೆಗೆ ಹಿಂದಿನ ಕಾಲದಲ್ಲಿ ವಿಧಿಸುತ್ತಿದ್ದ ಶಿಕ್ಷೆ ಗಂಡಸಿಗೆ ತಲೆ ಕತ್ತರಿಸುವುದು, ಹೆಂಗಸಿಗೆ ಮೂಗು ಕತ್ತರಿಸುವುದು” – ಡಿ. ಎಲ್. ನರಸಿಂಹಾಚಾರ್)
ವ|| ಎನುತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಱನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗೞಿದ ವಿಳಾಸಂಗಳೊಳಂ ತಂಡತಂಡದೆ ನೆರೆದಿರ್ದ ಪೆಂಡವಾಸದೊಳ್ವೆಂಡಿರಂ ಕಂಡು-
ಎನುತ್ತುಂ ಬರ್ಪನ್ ಒಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ, ಮನೋಜನ ಕಾಪಿನ ಕಲ್ಪಲತೆಗಳಂತೆ, ಮನೋಜನೆಂಬ ದೀವಗಾಱನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ, ಮಣಿಮಯ ಮತ್ತವಾರಣಂಗಳೊಳಂ, ಅಳವಿಗೞಿದ ವಿಳಾಸಂಗಳೊಳಂ, ತಂಡತಂಡದೆ ನೆರೆದಿರ್ದ ಪೆಂಡವಾಸದ ಒಳ್ವೆಂಡಿರಂ ಕಂಡು
ಎನ್ನುತ್ತಾ ಬರುತ್ತಿದ್ದವನು, ಒಂದು ಕಡೆಯಲ್ಲಿ ಮನ್ಮಥನು ಸಾಕಿದ ಚಲಿಸುವ ಬಳ್ಳಿಗಳಂತೆ, ಮನ್ಮಥನ ಕಾವಲಿನಲ್ಲಿರುವ ಕೇಳಿದ್ದು ಕೊಡುವ ಬಳ್ಳಿಗಳಂತೆ, ಮನ್ಮಥನೆಂಬ ಬೇಟೆಗಾರನು ಕಟ್ಟಿದ ಬಲಿಗಳಂತೆ ತಮ್ಮ ತಮ್ಮ ಮನೆಯ ಪಚ್ಚೆಯ ಜಗಲಿಗಳಲ್ಲಿಯೂ, ಮಣಿಮಯವಾದ ಕೈಸಾಲೆಗಳಲ್ಲಿಯೂ ಅತ್ಯಂತ ಆಕರ್ಷಕವಾಗಿ ಗುಂಪು ಗುಂಪಾಗಿದ್ದ ಸುಂದರ ಹೆಣ್ಣುಗಳನ್ನು ಕಂಡು
(ಟಿಪ್ಪಣಿ: ಇಲ್ಲಿ ಬರುವ ʼಸಾಕಿದ ಬಳ್ಳಿಗಳುʼ, ʼಕಾವಲಿನ ಬಳ್ಳಿಗಳುʼ, ʼಬಲಿಯಾಗಲೆಂದು ಕಟ್ಟಿಹಾಕಿದ ಪ್ರಾಣಿಗಳುʼ ಎಂಬ ಪದಗುಂಪುಗಳು ಈ ವೇಶ್ಯಾವಾಟಿಕೆಗಳನ್ನು ಬೇರೆ ಯಾರೋ ನಡೆಸುತ್ತಿದ್ದರು ಎಂಬ ಸೂಚನೆಯನ್ನು ಕೊಡುತ್ತವೆ.)
ಚಂ|| ಮನಸಿಜನೀಕೆಗಂಡು ರತಿಯಂ ಬಿಸುಟಂ ಹರನೀಕೆಗಂಡು ನೂ
ತನ ಗಿರಿಜಾತೆಯಂ ತೊಱೆದನಾ ನರಕಾಂತಕನೀಕೆಗಂಡು ತೊ|
ಟ್ಟನೆ ನಿಜಲಕ್ಷ್ಮಿಯಂ ಮಱೆದನೆಂಬ ನೆಗೞ್ತೆಯನಪ್ಪುಕೆಯ್ದ ಜ
ವ್ವನದ ವಿಳಾಸದಂದದ ಬೆಡಂಗಿನ ಪೆಂಡಿರೆ ಪೆಂಡಿರಲ್ಲಿಯಾ|| ೮೫||
ಮನಸಿಜನ್ ಈಕೆಗಂಡು ರತಿಯಂ ಬಿಸುಟಂ, ಹರನ್ ಈಕೆಗಂಡು ನೂತನ ಗಿರಿಜಾತೆಯಂ ತೊರೆದನ್, ಆ ನರಕಾಂತಕನ್ ಈಕೆಗಂಡು ತೊಟ್ಟನೆ ನಿಜಲಕ್ಷ್ಮಿಯಂ ಮರೆದನ್ ಎಂಬ ನೆಗೞ್ತೆಯನ್ ಅಪ್ಪುಕೆಯ್ದು ಜವ್ವನದ, ವಿಳಾಸದ, ಅಂದದ, ಬೆಡಂಗಿನ ಪೆಂಡಿರೆ ಪೆಂಡಿರ್ ಅಲ್ಲಿಯಾ
ಮನ್ಮಥನು ಇವಳನ್ನು ಕಂಡು ರತಿಯನ್ನೇ ತೆಗೆದೊಗೆದ, ಹರನು ಇವಳನ್ನು ಕಂಡು ಹೊಸ (ಹೊಸತಾಗಿ ಮದುವೆಯಾದ?) ಗಿರಿಜೆಯನ್ನೇ ಬಿಟ್ಟುಬಿಟ್ಟ, ಆ ವಿಷ್ಣುವು ಇವಳನ್ನು ಕಂಡ ಕೂಡಲೇ ತನ್ನ ಲಕ್ಷ್ಮಿಯನ್ನೇ ಮರೆತುಬಿಟ್ಟ ಎಂಬ ಖ್ಯಾತಿಯನ್ನು ಹೌದೆನ್ನಿಸಿದ ಯೌವನದ, ಲಾವಣ್ಯದ, ಚೆಂದದ, ವೈಯಾರದ ಹೆಣ್ಣುಗಳೆ ಅಲ್ಲಿ ಕಾಣಿಸುತ್ತಿದ್ದರು.
(ಟಿಪ್ಪಣಿ: ಇಲ್ಲಿ ʼಅಪ್ಪುಕೆಯ್ದುʼ ಎಂಬುದು ʼಅಪ್ಪುಕೆಯ್ದʼ ಎಂದಾಗಬೇಕು.)
ಚಂ||ತಿಸರಮಿದಾವುದಕ್ಕ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕ
ಣ್ಗೆಸೆವುದಿದಾವುದೊಲ್ಲದುೞಿದಟ್ಟಿದೊಡಂದು ಕುಬೇರನಿತ್ತುದೆ|
ಕ್ಕಸರಮಿದಾವುದಾಂ ಮುಳಿಯೆ ಕಾಲ್ವಿಡಿದಿಂದ್ರನ ಕೊಟ್ಟುದಲ್ತೆ ಪೋ
ಪುಸಿಯದಿರೆಂಬ ಸೂಳೆಯರೆ ಸೂಳೆಯರಲ್ಲಿಯ ಪೆಂಡವಾಸದಾ|| ೮೬ ||
ತಿಸರಂ ಇದು ಆವುದು ಅಕ್ಕ?
ಧರಣೀಂದ್ರನ ಕೊಟ್ಟುದು!
ವಜ್ರದಾಳಿ ಕಣ್ಗೆಸೆವುದು ಇದು ಆವುದು?
ಒಲ್ಲದೆ ಉೞಿದು ಅಟ್ಟಿದೊಡೆ ಅಂದು ಕುಬೇರನಿತ್ತುದು!
ಎಕ್ಕಸರಂ ಇದು ಆವುದು?
ಆಂ ಮುಳಿಯೆ ಕಾಲ್ವಿಡಿದು ಇಂದ್ರನ ಕೊಟ್ಟುದಲ್ತೆ?
ಪೋ! ಪುಸಿಯದಿರ್! ಎಂಬ ಸೂಳೆಯರೆ ಸೂಳೆಯರ್ ಅಲ್ಲಿಯ ಪೆಂಡವಾಸದಾ
ಇದು ಯಾವುದೆ ಮೂರೆಳೆಯ ಸರ?
ಧರಣೀಂದ್ರ ಕೊಟ್ಟಿದ್ದು!
ವಜ್ರದಾಳಿ ಹೊಳೆಯುತ್ತಿದೆ! ಇದು ಯಾವುದು?
ಬೇಡ ಎಂದು ಓಡಿಸಿದಾಗ ಕುಬೇರ ಕೊಟ್ಟಿದ್ದು!
ಮತ್ತೆ ಈ ಒಂದೆಳೆಯ ಹಾರ?
ನಾನು ಸಿಟ್ಟು ಮಾಡಿದಾಗ ಇಂದ್ರ ಕೊಟ್ಟಿದ್ದಲ್ಲವೆ?
ಹೋಗಾಚೆ! ಸುಳ್ಳು ಬಿಡಬೇಡ!
ಎಂದೆಲ್ಲ ಮಾತಾಡುವ ಸೂಳೆಯರೇ ಅಲ್ಲಿರುವ ʼಪೆಂಡವಾಸʼದಲ್ಲಿ ತುಂಬಿಕೊಂಡಿದ್ದರು.
(ಟಿಪ್ಪಣಿ: ಇದು ಸೂಳೆಗೇರಿಯ ಇಬ್ಬರು ಗೆಳತಿಯರ ನಡುವಿನ ಮಾತುಕತೆ ಎಂದು ಕಲ್ಪಿಸಿಕೊಳ್ಳಬಹುದು. ಇವರು ಗೆಳತಿಯರಾದರೂ ಒಂದೇ ವೃತ್ತಿ ಮಾಡುವವರಾದ್ದರಿಂದ ಒಳಗೊಳಗೇ ಸ್ಪರ್ಧಿಗಳೂ ಹೌದು. ಒಬ್ಬಳಿಗೆ ತನ್ನ ಗೆಳತಿಯ ಹತ್ತಿರ ಇರುವ ಆಭರಣಗಳ ಬಗ್ಗೆ ಕೆಟ್ಟ ಕುತೂಹಲ, ಅಸೂಯೆ! ಈ ಭಾವನೆಗಳನ್ನು ಹೊಟ್ಟೆಯಲ್ಲಿಟ್ಟುಕೊಂಡೇ ಅವಳ ಪ್ರಶ್ನೆಗಳು ಹೊರಡುತ್ತವೆ. ಆದರೆ ಉತ್ತರ ಕೊಡುವವಳೂ ಜಾಣೆಯೇ! ಅವಳಿಗೆ ತನ್ನ ಗೆಳತಿಯ ಇರಾದೆ ಚೆನ್ನಾಗಿ ಅರ್ಥವಾಗಿದೆ! ಹಾಗಾಗಿ ಅವಳು ಕೊಡುವ ಉತ್ತರಗಳೂ ಅದಕ್ಕೆ ತಕ್ಕನಾಗಿವೆ. ಮೊದಲ ಉತ್ತರವೇ ಪ್ರಶ್ನೆ ಕೇಳಿದ ಗೆಳತಿಗೆ ಅನುಮಾನ ಹುಟ್ಟಿಸಿರಬಹುದು, ಮೂರು ಪ್ರಶ್ನೆಗಳಿಗೂ ಒಂದೇ ತೆರನ ಉತ್ತರ ಬಂದಾಗ ಅವಳಿಗೆ ತನ್ನನ್ನು ಗೆಳತಿ ಮಂಗ ಮಾಡುತ್ತಿರುವುದು ಅರ್ಥವಾಗುತ್ತದೆ! ಹಾಗಾಗಿ ಅವಳ ಪ್ರತಿಕ್ರಿಯೆ: ʼಹೋಗಾಚೆ, ಸುಳ್ಳು ಬಿಡಬೇಡʼ. ಇಷ್ಟು ಮಾತುಕತೆಯ ನಂತರ ಇಬ್ಬರೂ ಗೆಳತಿಯರು ಮನಸಾರೆ ನಕ್ಕಿರಬಹುದೆಂದು ಓದುಗರು ಊಹಿಸಿಕೊಳ್ಳಬಹುದು!).